ಯೋಹಾನ
14 “ನಿಮ್ಮ ಹೃದಯಗಳು ಕಳವಳಗೊಳ್ಳುವಂತೆ ಬಿಡಬೇಡಿರಿ. ದೇವರಲ್ಲಿ ನಂಬಿಕೆಯಿಡಿರಿ, ನನ್ನಲ್ಲಿಯೂ ನಂಬಿಕೆಯಿಡಿರಿ. 2 ನನ್ನ ತಂದೆಯ ಮನೆಯಲ್ಲಿ ಅನೇಕ ವಾಸಸ್ಥಳಗಳಿವೆ. ಇಲ್ಲವಾದರೆ ನಾನು ನಿಮಗೆ ಹೇಳುತ್ತಿದ್ದೆ, ಏಕೆಂದರೆ ನಾನು ನಿಮಗೋಸ್ಕರ ಒಂದು ಸ್ಥಳವನ್ನು ಸಿದ್ಧಪಡಿಸಲು ಹೋಗುತ್ತಿದ್ದೇನೆ. 3 ಇದಲ್ಲದೆ ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸುವುದಾದರೆ ಪುನಃ ಬಂದು ನಿಮ್ಮನ್ನು ನನ್ನೊಂದಿಗೆ ಕರೆದುಕೊಂಡು ಹೋಗುವೆನು; ಆಗ ನಾನು ಇರುವಲ್ಲಿಯೇ ನೀವೂ ಇರುವಂತಾಗುವುದು. 4 ನಾನು ಎಲ್ಲಿಗೆ ಹೋಗುತ್ತಿದ್ದೇನೋ ಆ ಮಾರ್ಗವು ನಿಮಗೆ ತಿಳಿದಿದೆ” ಎಂದು ಹೇಳಿದನು.
5 ಅದಕ್ಕೆ ತೋಮನು ಅವನಿಗೆ, “ಕರ್ತನೇ, ನೀನು ಎಲ್ಲಿಗೆ ಹೋಗುತ್ತೀ ಎಂಬುದು ನಮಗೆ ತಿಳಿದಿಲ್ಲ. ಹಾಗಿರುವಾಗ ನಮಗೆ ಮಾರ್ಗವು ತಿಳಿದಿರುವುದು ಹೇಗೆ?” ಎಂದು ಕೇಳಿದನು.
6 ಆಗ ಯೇಸು ಅವನಿಗೆ, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ. 7 ನೀವು ನನ್ನನ್ನು ತಿಳಿದಿರುತ್ತಿದ್ದರೆ ನನ್ನ ತಂದೆಯನ್ನೂ ತಿಳಿದಿರುತ್ತಿದ್ದಿರಿ; ಈ ಕ್ಷಣದಿಂದ ನೀವು ಆತನನ್ನು ತಿಳಿದಿದ್ದೀರಿ ಮತ್ತು ಆತನನ್ನು ನೋಡಿದ್ದೀರಿ” ಎಂದು ಹೇಳಿದನು.
8 ಫಿಲಿಪ್ಪನು ಅವನಿಗೆ, “ಕರ್ತನೇ, ನಮಗೆ ತಂದೆಯನ್ನು ತೋರಿಸು, ಅಷ್ಟೇ ಸಾಕು” ಎಂದನು.
9 ಅದಕ್ಕೆ ಯೇಸು ಅವನಿಗೆ, “ಫಿಲಿಪ್ಪನೇ ನಾನು ನಿಮ್ಮೊಂದಿಗೆ ಇಷ್ಟು ದಿವಸವಿದ್ದರೂ ನೀನು ನನ್ನನ್ನು ತಿಳಿದುಕೊಂಡಿಲ್ಲವೆ? ನನ್ನನ್ನು ನೋಡಿದವನು ನನ್ನ ತಂದೆಯನ್ನೂ ನೋಡಿದ್ದಾನೆ. ಹೀಗಿರುವಾಗ ‘ನಮಗೆ ತಂದೆಯನ್ನು ತೋರಿಸು’ ಎಂದು ನೀನು ಹೇಳುವುದು ಹೇಗೆ? 10 ನಾನು ತಂದೆಯೊಂದಿಗೆ ಮತ್ತು ತಂದೆಯು ನನ್ನೊಂದಿಗೆ ಐಕ್ಯದಿಂದಿದ್ದೇವೆ ಎಂಬುದನ್ನು ನೀನು ನಂಬುವುದಿಲ್ಲವೆ? ನಾನು ನಿಮಗೆ ಹೇಳುವ ವಿಷಯಗಳನ್ನು ಸ್ವಪ್ರೇರಣೆಯಿಂದ ಮಾತಾಡುವುದಿಲ್ಲ; ನನ್ನೊಂದಿಗೆ ಐಕ್ಯದಿಂದಿರುವ ತಂದೆಯು ತನ್ನ ಕ್ರಿಯೆಗಳನ್ನು ನಡಿಸುತ್ತಿದ್ದಾನೆ. 11 ನಾನು ತಂದೆಯೊಂದಿಗೂ ತಂದೆಯು ನನ್ನೊಂದಿಗೂ ಐಕ್ಯದಿಂದಿದ್ದೇವೆ ಎಂಬ ನನ್ನ ಮಾತನ್ನು ನಂಬಿರಿ; ಇಲ್ಲವಾದರೆ ಆ ಕ್ರಿಯೆಗಳ ನಿಮಿತ್ತವಾಗಿಯೇ ನಂಬಿರಿ. 12 ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನಲ್ಲಿ ನಂಬಿಕೆಯಿಡುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು ಮತ್ತು ಅವುಗಳಿಗಿಂತಲೂ ಮಹತ್ತಾದ ಕ್ರಿಯೆಗಳನ್ನು ನಡಿಸುವನು, ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ. 13 ಇದಲ್ಲದೆ ಮಗನ ಸಂಬಂಧವಾಗಿ ತಂದೆಯು ಮಹಿಮೆಗೊಳಿಸಲ್ಪಡುವಂತೆ ನನ್ನ ಹೆಸರಿನಲ್ಲಿ ನೀವು ಏನನ್ನೇ ಬೇಡಿಕೊಂಡರೂ ಅದನ್ನು ನಾನು ಮಾಡುವೆನು. 14 ನನ್ನ ಹೆಸರಿನಲ್ಲಿ ನೀವು ಏನಾದರೂ ಬೇಡಿಕೊಳ್ಳುವುದಾದರೆ ನಾನು ಅದನ್ನು ಮಾಡುವೆನು.
15 “ನೀವು ನನ್ನನ್ನು ಪ್ರೀತಿಸುವುದಾದರೆ ನನ್ನ ಆಜ್ಞೆಗಳನ್ನು ಕೈಕೊಳ್ಳುವಿರಿ; 16 ಮತ್ತು ನಾನು ತಂದೆಯನ್ನು ಕೇಳಿಕೊಳ್ಳುವೆನು; ಆಗ ಆತನು ನಿಮಗೆ ಬೇರೊಬ್ಬ ಸಹಾಯಕನನ್ನು* ಸದಾಕಾಲ ನಿಮ್ಮೊಂದಿಗೆ ಇರಲಿಕ್ಕಾಗಿ ಕೊಡುವನು. 17 ಅದು ಸತ್ಯದ ಪವಿತ್ರಾತ್ಮವೇ; ಲೋಕವು ಅದನ್ನು ನೋಡದೆಯೂ ಅದರ ಕುರಿತು ತಿಳಿಯದೆಯೂ ಇರುವುದರಿಂದ ಅದನ್ನು ಹೊಂದಲಾರದು. ಆದರೆ ಅದು ನಿಮ್ಮೊಂದಿಗೆ ಮತ್ತು ನಿಮ್ಮೊಳಗೆ ಇರುವುದರಿಂದ ನೀವು ಅದನ್ನು ತಿಳಿದುಕೊಂಡಿದ್ದೀರಿ. 18 ನಾನು ನಿಮ್ಮನ್ನು ವಿಯೋಗಾವಸ್ಥೆಯಲ್ಲಿ ಬಿಡುವುದಿಲ್ಲ. ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. 19 ಸ್ವಲ್ಪ ಸಮಯದ ಬಳಿಕ ಲೋಕವು ಇನ್ನೆಂದೂ ನನ್ನನ್ನು ನೋಡುವುದಿಲ್ಲ, ಆದರೆ ನೀವು ನನ್ನನ್ನು ನೋಡುವಿರಿ; ಏಕೆಂದರೆ ನಾನು ಜೀವಿಸುವುದರಿಂದ ನೀವೂ ಜೀವಿಸುವಿರಿ. 20 ನಾನು ನನ್ನ ತಂದೆಯೊಂದಿಗೆ ಐಕ್ಯದಿಂದಿದ್ದೇನೆ, ನೀವು ನನ್ನೊಂದಿಗೆ ಐಕ್ಯದಿಂದಿದ್ದೀರಿ ಮತ್ತು ನಾನು ನಿಮ್ಮೊಂದಿಗೆ ಐಕ್ಯದಿಂದಿದ್ದೇನೆ ಎಂದು ಆ ದಿನದಲ್ಲಿ ನಿಮಗೆ ತಿಳಿದುಬರುವುದು. 21 ನನ್ನ ಆಜ್ಞೆಗಳನ್ನು ಹೊಂದಿದ್ದು ಅವುಗಳನ್ನು ಕೈಕೊಳ್ಳುವವನೇ ನನ್ನನ್ನು ಪ್ರೀತಿಸುವವನಾಗಿದ್ದಾನೆ. ನನ್ನನ್ನು ಪ್ರೀತಿಸುವವನು ತಂದೆಯಿಂದ ಪ್ರೀತಿಸಲ್ಪಡುವನು ಮತ್ತು ನಾನೂ ಅವನನ್ನು ಪ್ರೀತಿಸಿ ಅವನಿಗೆ ನನ್ನನ್ನು ಸ್ಪಷ್ಟವಾಗಿ ತೋರಿಸಿಕೊಳ್ಳುವೆನು” ಎಂದು ಹೇಳಿದನು.
22 ಇಸ್ಕರಿಯೋತನಲ್ಲದ ಇನ್ನೊಬ್ಬ ಯೂದನು ಅವನಿಗೆ, “ಕರ್ತನೇ, ನೀನು ನಿನ್ನನ್ನು ಲೋಕಕ್ಕೆ ತೋರಿಸಿಕೊಳ್ಳದೆ ನಮಗೆ ಮಾತ್ರ ಸ್ಪಷ್ಟವಾಗಿ ತೋರಿಸಿಕೊಳ್ಳಲು ಏನು ಸಂಭವಿಸಿದೆ?” ಎಂದು ಕೇಳಿದನು.
23 ಅದಕ್ಕೆ ಯೇಸು ಅವನಿಗೆ ಹೇಳಿದ್ದು: “ಯಾರಾದರೂ ನನ್ನನ್ನು ಪ್ರೀತಿಸುವುದಾದರೆ ಅವನು ನನ್ನ ಮಾತುಗಳನ್ನು ಕೈಕೊಂಡು ನಡೆಯುವನು ಮತ್ತು ನನ್ನ ತಂದೆಯು ಅವನನ್ನು ಪ್ರೀತಿಸುವನು; ನಾವು ಅವನ ಬಳಿಗೆ ಬಂದು ಅವನೊಂದಿಗೆ ವಾಸಿಸುವೆವು. 24 ನನ್ನನ್ನು ಪ್ರೀತಿಸದವನು ನನ್ನ ಮಾತುಗಳನ್ನು ಕೈಕೊಂಡು ನಡೆಯುವುದಿಲ್ಲ; ನೀವು ಕೇಳಿಸಿಕೊಳ್ಳುತ್ತಿರುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ತಂದೆಗೆ ಸೇರಿದ್ದಾಗಿದೆ.
25 “ನಿಮ್ಮೊಂದಿಗಿರುವಾಗಲೇ ನಾನು ಈ ಸಂಗತಿಗಳನ್ನು ನಿಮಗೆ ತಿಳಿಸಿದ್ದೇನೆ. 26 ಆದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಸಹಾಯಕ,* ಅಂದರೆ ಆ ಒಬ್ಬನಾದ* ಪವಿತ್ರಾತ್ಮ ನಿಮಗೆ ಎಲ್ಲ ವಿಷಯಗಳನ್ನು ಬೋಧಿಸುವನು ಮತ್ತು ನಾನು ನಿಮಗೆ ಹೇಳಿದ ಎಲ್ಲ ವಿಷಯಗಳನ್ನು ನಿಮ್ಮ ಮನಸ್ಸಿಗೆ ತರುವನು. 27 ನಾನು ನಿಮಗೆ ಶಾಂತಿಯನ್ನು ಬಿಟ್ಟುಹೋಗುತ್ತೇನೆ; ನನ್ನ ಶಾಂತಿಯನ್ನು ನಿಮಗೆ ಕೊಡುತ್ತೇನೆ. ಲೋಕವು ನಿಮಗೆ ಕೊಡುವಂಥ ರೀತಿಯಲ್ಲಿ ನಾನು ಅದನ್ನು ಕೊಡುವುದಿಲ್ಲ. ನಿಮ್ಮ ಹೃದಯಗಳು ಕಳವಳಗೊಳ್ಳುವಂತೆ ಅಥವಾ ಭಯದಿಂದ ಕುಗ್ಗಿಹೋಗುವಂತೆ ಬಿಡಬೇಡಿರಿ. 28 ನಾನು ಹೊರಟುಹೋಗಿ ಪುನಃ ನಿಮ್ಮ ಬಳಿಗೆ ಬರುತ್ತೇನೆ ಎಂದು ನಿಮಗೆ ಹೇಳಿದ್ದನ್ನು ನೀವು ಕೇಳಿಸಿಕೊಂಡಿದ್ದೀರಿ. ನೀವು ನನ್ನನ್ನು ಪ್ರೀತಿಸುವುದಾದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ ಎಂಬುದಕ್ಕೆ ಸಂತೋಷಪಡುವಿರಿ, ಏಕೆಂದರೆ ತಂದೆಯು ನನಗಿಂತಲೂ ದೊಡ್ಡವನು. 29 ಇದೆಲ್ಲ ನಡೆಯುವಾಗ ನೀವು ನಂಬಸಾಧ್ಯವಾಗುವಂತೆ ಇದು ನಡೆಯುವ ಮುಂಚೆಯೇ ಈಗ ನಿಮಗೆ ತಿಳಿಸಿದ್ದೇನೆ. 30 ಇನ್ನು ಮುಂದೆ ನಾನು ನಿಮ್ಮೊಂದಿಗೆ ಹೆಚ್ಚು ಮಾತುಗಳನ್ನು ಆಡುವುದಿಲ್ಲ, ಏಕೆಂದರೆ ಈ ಲೋಕದ ಅಧಿಪತಿಯು ಬರುತ್ತಿದ್ದಾನೆ. ಅವನಿಗೆ ನನ್ನ ಮೇಲೆ ಹಿಡಿತವಿಲ್ಲ; 31 ಆದರೆ ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದನ್ನು ಲೋಕವು ತಿಳಿಯುವಂತೆ, ತಂದೆಯು ನನಗೆ ಮಾಡಲು ಆಜ್ಞಾಪಿಸಿದ್ದನ್ನೇ ನಾನು ಮಾಡುತ್ತೇನೆ. ಏಳಿರಿ, ಇಲ್ಲಿಂದ ಹೋಗೋಣ.