ಅ. ಕಾರ್ಯ
17 ಬಳಿಕ ಅವರು ಅಂಫಿಪೊಲಿ ಮತ್ತು ಅಪೊಲೋನ್ಯದ ಮಾರ್ಗವಾಗಿ ಥೆಸಲೊನೀಕಕ್ಕೆ ಬಂದರು. ಅಲ್ಲಿ ಯೆಹೂದ್ಯರ ಒಂದು ಸಭಾಮಂದಿರವಿತ್ತು. 2 ಪೌಲನ ವಾಡಿಕೆಗನುಸಾರ ಅವನು ಅಲ್ಲಿದ್ದ ಜನರ ಬಳಿಗೆ ಹೋಗಿ ಮೂರು ಸಬ್ಬತ್ ದಿನಗಳ ತನಕ ಅವರೊಂದಿಗೆ ಶಾಸ್ತ್ರಗ್ರಂಥದಿಂದ ತರ್ಕಿಸಿ, 3 ಕ್ರಿಸ್ತನು ಬಾಧೆಯನ್ನು ಅನುಭವಿಸಿ ಸತ್ತವರೊಳಗಿಂದ ಎಬ್ಬಿಸಲ್ಪಡುವುದು ಅಗತ್ಯವಾಗಿತ್ತು ಎಂಬುದನ್ನು ವಿವರಿಸುತ್ತಾ, “ನಾನು ನಿಮಗೆ ಪ್ರಕಟಪಡಿಸುತ್ತಿರುವ ಯೇಸುವೇ ಈ ಕ್ರಿಸ್ತನು” ಎಂದು ಆಧಾರಗಳಿಂದ ರುಜುಪಡಿಸಿದನು. 4 ಇದರ ಪರಿಣಾಮವಾಗಿ ಅವರಲ್ಲಿ ಕೆಲವರು ವಿಶ್ವಾಸಿಗಳಾದರು ಮತ್ತು ಪೌಲ ಸೀಲರೊಂದಿಗೆ ಸೇರಿಕೊಂಡರು; ಇದಲ್ಲದೆ ದೇವರನ್ನು ಆರಾಧಿಸುತ್ತಿದ್ದ ಬಹುಮಂದಿ ಗ್ರೀಕರೂ ಪ್ರಮುಖರಾಗಿದ್ದ ಸ್ತ್ರೀಯರಲ್ಲಿ ಅನೇಕರೂ ಅವರೊಂದಿಗೆ ಸೇರಿಕೊಂಡರು.
5 ಆದರೆ ಯೆಹೂದ್ಯರು ಹೊಟ್ಟೆಕಿಚ್ಚುಪಟ್ಟು, ಕೆಲಸವಿಲ್ಲದೆ ಪೇಟೆಯಲ್ಲಿ ಅಲೆದಾಡುತ್ತಿದ್ದ ಕೆಲವು ದುಷ್ಟರನ್ನು ತಮ್ಮೊಂದಿಗೆ ಕರೆದುಕೊಂಡು ಬಂದು ಗುಂಪುಗೂಡಿಸಿ ಪಟ್ಟಣದಲ್ಲಿ ಗಲಭೆಯನ್ನು ಎಬ್ಬಿಸಿದರು. ಈ ದೊಂಬಿಯ ಮುಂದೆ ಪೌಲ ಸೀಲರನ್ನು ತರಲಿಕ್ಕಾಗಿ ಅವರನ್ನು ಹುಡುಕುತ್ತಾ ಯಾಸೋನನ ಮನೆಗೆ ಮುತ್ತಿಗೆಹಾಕಿದರು. 6 ಆದರೆ ಅವರು ಅಲ್ಲಿ ಸಿಗದೇ ಹೋದಾಗ ಆ ಜನರು ಯಾಸೋನನನ್ನೂ ಕೆಲವು ಸಹೋದರರನ್ನೂ ಪಟ್ಟಣದ ಅಧಿಕಾರಿಗಳ ಬಳಿಗೆ ಎಳೆದುಕೊಂಡು ಬಂದು, “ನಿವಾಸಿತ ಭೂಮಿಯನ್ನು ಬುಡಮೇಲು ಮಾಡಿರುವ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ; 7 ಯಾಸೋನನು ಅವರನ್ನು ಆದರದಿಂದ ಸತ್ಕರಿಸಿದ್ದಾನೆ. ಮತ್ತು ಯೇಸು ಎಂಬ ಬೇರೊಬ್ಬ ಅರಸನಿದ್ದಾನೆಂದು ಹೇಳಿ ಈ ಎಲ್ಲ ಮನುಷ್ಯರು ಕೈಸರನ ಆಜ್ಞೆಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ” ಎಂದು ಕೂಗಿದರು. 8 ಈ ಸಂಗತಿಗಳನ್ನು ಕೇಳಿಸಿಕೊಂಡಾಗ ಜನರ ಗುಂಪು ಮತ್ತು ಪಟ್ಟಣದ ಅಧಿಕಾರಿಗಳು ತುಂಬ ಉದ್ರೇಕಿತರಾದರು; 9 ಅವರು ಯಾಸೋನನಿಂದಲೂ ಇತರರಿಂದಲೂ ಸಾಕಷ್ಟು ಜಾಮೀನು ಪಡೆದ ಬಳಿಕ ಅವರನ್ನು ಹೋಗಲು ಬಿಟ್ಟರು.
10 ಒಡನೆ, ಅದೇ ರಾತ್ರಿ ಸಹೋದರರು ಪೌಲ ಸೀಲರನ್ನು ಬೆರೋಯಕ್ಕೆ ಕಳುಹಿಸಿದರು. ಇವರು ಅಲ್ಲಿಗೆ ತಲಪಲಾಗಿ ಯೆಹೂದ್ಯರ ಸಭಾಮಂದಿರಕ್ಕೆ ಹೋದರು. 11 ಅಲ್ಲಿನ ಜನರು ಥೆಸಲೊನೀಕದವರಿಗಿಂತ ಹೆಚ್ಚು ಉದಾತ್ತ ಮನಸ್ಸಿನವರಾಗಿದ್ದರು, ಏಕೆಂದರೆ ಅವರು ದೇವರ ವಾಕ್ಯವನ್ನು ಅತಿ ಸಿದ್ಧಮನಸ್ಸಿನಿಂದ ಸ್ವೀಕರಿಸಿ ಈ ವಿಷಯಗಳು ಸರಿಯೋ ಎಂದು ನೋಡಲಿಕ್ಕಾಗಿ ಪ್ರತಿದಿನವೂ ಶಾಸ್ತ್ರಗ್ರಂಥವನ್ನು ಜಾಗರೂಕತೆಯಿಂದ ಪರೀಕ್ಷಿಸುತ್ತಿದ್ದರು. 12 ಆದುದರಿಂದ ಅವರಲ್ಲಿ ಅನೇಕರು ವಿಶ್ವಾಸಿಗಳಾದರು; ಮತ್ತು ವಿಖ್ಯಾತರಾದ ಗ್ರೀಕ್ ಸ್ತ್ರೀಪುರುಷರಲ್ಲಿಯೂ ಅನೇಕರು ವಿಶ್ವಾಸಿಗಳಾದರು. 13 ಆದರೆ ಪೌಲನು ಬೆರೋಯದಲ್ಲಿಯೂ ದೇವರ ವಾಕ್ಯವನ್ನು ಪ್ರಕಟಪಡಿಸುತ್ತಿದ್ದಾನೆ ಎಂಬುದು ಥೆಸಲೊನೀಕದಲ್ಲಿದ್ದ ಯೆಹೂದ್ಯರಿಗೆ ತಿಳಿದುಬಂದಾಗ ಜನರನ್ನು ಕೆರಳಿಸಿ ಗಲಭೆಯನ್ನು ಉಂಟುಮಾಡಲಿಕ್ಕಾಗಿ ಅವರು ಅಲ್ಲಿಗೂ ಬಂದರು. 14 ಸಹೋದರರು ಆ ಕೂಡಲೆ ಪೌಲನನ್ನು ಸಮುದ್ರದ ತನಕ ಕಳುಹಿಸಿಕೊಟ್ಟರು; ಆದರೆ ಸೀಲನೂ ತಿಮೊಥೆಯನೂ ಅಲ್ಲೇ ಉಳಿದರು. 15 ಪೌಲನನ್ನು ಕಳುಹಿಸಿಕೊಡಲು ಹೋದವರು ಅವನನ್ನು ಅಥೆನ್ಸಿನ ವರೆಗೆ ಕರೆದುಕೊಂಡು ಹೋಗಿ, ‘ಸಾಧ್ಯವಾದಷ್ಟು ಬೇಗನೆ ತನ್ನ ಬಳಿಗೆ ಬರುವಂತೆ ಸೀಲ ತಿಮೊಥೆಯರಿಗೆ ತಿಳಿಸಿರಿ’ ಎಂಬ ಅಪ್ಪಣೆಯನ್ನು ಅವನಿಂದ ಪಡೆದುಕೊಂಡ ಬಳಿಕ ಹಿಂದೆ ಬಂದರು.
16 ಪೌಲನು ಅವರಿಗಾಗಿ ಅಥೆನ್ಸಿನಲ್ಲಿ ಕಾಯುತ್ತಿದ್ದಾಗ, ಆ ಪಟ್ಟಣವು ವಿಗ್ರಹಗಳಿಂದ ತುಂಬಿರುವುದನ್ನು ನೋಡಿ ಅವನ ಮನಸ್ಸು ಕುದಿಯಿತು. 17 ಆದುದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರೊಂದಿಗೂ ದೇವರನ್ನು ಆರಾಧಿಸುತ್ತಿದ್ದ ಇತರರೊಂದಿಗೂ ಪ್ರತಿದಿನ ಪೇಟೆಯಲ್ಲಿ ಸಿಗುತ್ತಿದ್ದ ಜನರೊಂದಿಗೂ ತರ್ಕಿಸಲಾರಂಭಿಸಿದನು. 18 ಆದರೆ ಎಪಿಕೂರಿಯರ ಮತ್ತು ಸ್ತೋಯಿಕರ ತತ್ತ್ವಜ್ಞಾನಿಗಳಲ್ಲಿ ಕೆಲವರು ಅವನಿಗೆ ಪ್ರತಿಯಾಗಿ ವಾಗ್ವಾದಿಸಿದರು ಹಾಗೂ ಅವರಲ್ಲಿ ಕೆಲವರು, “ಈ ಮಾತಾಳಿಯು ಏನು ಹೇಳಬೇಕೆಂದಿದ್ದಾನೆ?” ಎಂದೂ, ಇನ್ನಿತರರು “ಇವನು ಅನ್ಯದೇವತೆಗಳ ಪ್ರಚಾರಕನಂತೆ ತೋರುತ್ತಾನೆ” ಎಂದೂ ಹೇಳಿದರು. ಏಕೆಂದರೆ ಅವನು ಯೇಸುವಿನ ಮತ್ತು ಪುನರುತ್ಥಾನದ ಕುರಿತಾದ ಸುವಾರ್ತೆಯನ್ನು ಸಾರುತ್ತಿದ್ದನು. 19 ಅವರು ಅವನನ್ನು ಹಿಡಿದು ಅರಿಯೊಪಾಗಕ್ಕೆ ಕರೆದುಕೊಂಡು ಹೋಗಿ, “ನೀನು ತಿಳಿಸುತ್ತಿರುವ ಈ ಹೊಸ ಬೋಧನೆಯ ಕುರಿತು ನಾವು ತಿಳಿಯಬಹುದೆ? 20 ನಮಗೆ ವಿಚಿತ್ರವಾಗಿ ಕೇಳುತ್ತಿರುವ ಕೆಲವು ವಿಷಯಗಳನ್ನು ನೀನು ಪರಿಚಯಿಸುತ್ತಿದ್ದೀ. ಆದುದರಿಂದ ನಾವು ಈ ವಿಷಯಗಳ ಅರ್ಥವೇನು ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇವೆ” ಎಂದರು. 21 ವಾಸ್ತವದಲ್ಲಿ, ಅಥೆನ್ಸಿನ ಜನರೂ ಅಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದ ಪರದೇಶೀಯರೂ ತಮ್ಮ ಬಿಡುವಿನ ಸಮಯವನ್ನು ಹೊಸ ಹೊಸ ವಿಷಯಗಳನ್ನು ಹೇಳುವುದಕ್ಕೂ ಕೇಳುವುದಕ್ಕೂ ಹೊರತು ಬೇರೆ ಯಾವುದಕ್ಕೂ ಉಪಯೋಗಿಸುತ್ತಿರಲಿಲ್ಲ. 22 ಪೌಲನು ಅರಿಯೊಪಾಗದ ಮಧ್ಯದಲ್ಲಿ ನಿಂತು ಹೇಳಿದ್ದು:
“ಅಥೆನ್ಸಿನ ಜನರೇ, ಇತರರಿಗಿಂತಲೂ ನೀವು ಎಲ್ಲ ವಿಷಯಗಳಲ್ಲಿ ದೇವದೇವತೆಗಳಿಗೆ ಹೆಚ್ಚು ಭಯಪಡುವವರಾಗಿದ್ದೀರಿ ಎಂಬುದನ್ನು ನಾನು ಗಮನಿಸುತ್ತೇನೆ. 23 ಉದಾಹರಣೆಗೆ, ನಾನು ನಿಮ್ಮ ಪಟ್ಟಣದಲ್ಲಿ ತಿರುಗಾಡುತ್ತಾ ನಿಮ್ಮ ಆರಾಧನಾ ವಸ್ತುಗಳನ್ನು ಜಾಗರೂಕತೆಯಿಂದ ಗಮನಿಸುತ್ತಿದ್ದಾಗ ಒಂದು ಬಲಿಪೀಠವು ನನಗೆ ಕಂಡಿತು; ಅದರ ಮೇಲೆ, ‘ಅಜ್ಞಾತ ದೇವರಿಗೆ’ ಎಂದು ಬರೆದಿತ್ತು. ಆದುದರಿಂದ ಯಾವುದಕ್ಕೆ ನೀವು ಅಜ್ಞಾತವಾಗಿ ಭಕ್ತಿಯನ್ನು ಸಲ್ಲಿಸುತ್ತಿದ್ದೀರೋ ಅದನ್ನೇ ನಾನು ನಿಮಗೆ ತಿಳಿಯಪಡಿಸುತ್ತಿದ್ದೇನೆ. 24 ಜಗತ್ತನ್ನೂ ಅದರಲ್ಲಿರುವ ಸಕಲ ವಸ್ತುಗಳನ್ನೂ ಉಂಟುಮಾಡಿದ ದೇವರು ಭೂಮ್ಯಾಕಾಶಗಳ ಒಡೆಯನಾಗಿರುವುದರಿಂದ ಆತನು ಕೈಯಿಂದ ಕಟ್ಟಿದ ಗುಡಿಗಳಲ್ಲಿ ವಾಸಮಾಡುವವನಲ್ಲ; 25 ತನಗೆ ಅಗತ್ಯವಿದೆಯೋ ಎಂಬಂತೆ ಆತನು ಮಾನವರ ಕೈಗಳಿಂದ ಸೇವೆಹೊಂದುವವನೂ ಅಲ್ಲ, ಏಕೆಂದರೆ ಆತನೇ ಎಲ್ಲ ಮನುಷ್ಯರಿಗೆ ಜೀವವನ್ನೂ ಶ್ವಾಸವನ್ನೂ ಸರ್ವವನ್ನೂ ಕೊಡುವಾತನಾಗಿದ್ದಾನೆ. 26 ಆತನು ಒಬ್ಬ ಮನುಷ್ಯನಿಂದಲೇ ಪ್ರತಿಯೊಂದು ಮಾನವ ಜನಾಂಗವನ್ನು ನಿರ್ಮಿಸಿ ಅವರು ಭೂಮಿಯಾದ್ಯಂತ ವಾಸಿಸುವಂತೆ ಮಾಡಿದನು. ಆತನು ನಿಯಮಿತ ಕಾಲಗಳನ್ನೂ ಮನುಷ್ಯ ನಿವಾಸದ ಮೇರೆಗಳನ್ನೂ ನಿರ್ಣಯಿಸಿದನು; 27 ಹೀಗೆ ಮಾಡಿದ್ದು, ಅವರು ದೇವರಿಗಾಗಿ ತಡಕಾಡಿ, ನಿಜವಾಗಿಯೂ ಕಂಡುಹಿಡಿಯುವ ಕಾರಣದಿಂದ ಆತನನ್ನು ಹುಡುಕುವಂತೆ ಮಾಡಲಿಕ್ಕಾಗಿಯೇ. ಆದರೂ ವಾಸ್ತವದಲ್ಲಿ ಆತನು ನಮ್ಮಲ್ಲಿ ಪ್ರತಿಯೊಬ್ಬನಿಗೂ ಬಹಳ ದೂರವಾಗಿರುವುದಿಲ್ಲ. 28 ಆತನಲ್ಲಿಯೇ ನಾವು ಜೀವಿಸುತ್ತೇವೆ, ಚಲಿಸುತ್ತೇವೆ ಮತ್ತು ಅಸ್ತಿತ್ವದಲ್ಲಿದ್ದೇವೆ. ನಿಮ್ಮ ಕವಿಗಳಲ್ಲಿಯೂ ಕೆಲವರು, ‘ನಾವು ಸಹ ಆತನ ಸಂತಾನದವರೇ’ ಎಂದು ಹೇಳಿದ್ದಾರೆ.
29 “ಆದುದರಿಂದ, ನಾವು ದೇವರ ಸಂತಾನದವರಾಗಿದ್ದ ಮೇಲೆ ದೇವರು ಮನುಷ್ಯನ ಶಿಲ್ಪವಿದ್ಯೆಯಿಂದಲೂ ಕಲ್ಪನೆಯಿಂದಲೂ ಕೆತ್ತಲ್ಪಟ್ಟಿರುವ ಬಂಗಾರ, ಬೆಳ್ಳಿ ಅಥವಾ ಕಲ್ಲಿನಂತಿದ್ದಾನೆಂದು ನಾವು ಕಲ್ಪಿಸಿಕೊಳ್ಳಬಾರದು. 30 ದೇವರು ಅಂಥ ಅಜ್ಞಾನದ ಕಾಲಗಳನ್ನು ಲಕ್ಷ್ಯಕ್ಕೆ ತರಲಿಲ್ಲ ಎಂಬುದು ನಿಜ; ಆದರೆ ಈಗ ಎಲ್ಲ ಕಡೆಗಳಲ್ಲಿರುವ ಮಾನವರು ಪಶ್ಚಾತ್ತಾಪಪಡಬೇಕೆಂದು ಆತನು ಹೇಳುತ್ತಿದ್ದಾನೆ. 31 ಏಕೆಂದರೆ ತಾನು ನೇಮಿಸಿರುವ ಒಬ್ಬ ಮನುಷ್ಯನ ಮೂಲಕ ನಿವಾಸಿತ ಭೂಮಿಗೆ ನೀತಿಗನುಸಾರ ನ್ಯಾಯತೀರಿಸಲಿಕ್ಕಾಗಿ ಆತನು ಒಂದು ದಿನವನ್ನು ಗೊತ್ತುಮಾಡಿದ್ದಾನೆ. ಮತ್ತು ಅವನನ್ನು ಸತ್ತವರೊಳಗಿಂದ ಪುನರುತ್ಥಾನಗೊಳಿಸಿದ್ದರಲ್ಲಿ ಇದನ್ನು ನಂಬುವುದಕ್ಕೆ ಆತನು ಎಲ್ಲರಿಗೂ ಖಾತ್ರಿಯನ್ನು ಒದಗಿಸಿದ್ದಾನೆ.”
32 ಸತ್ತವರ ಪುನರುತ್ಥಾನದ ಕುರಿತು ಕೇಳಿಸಿಕೊಂಡಾಗ ಕೆಲವರು ಗೇಲಿಮಾಡಲಾರಂಭಿಸಿದರು; ಬೇರೆ ಕೆಲವರು, “ಇದರ ಕುರಿತು ನೀನು ಹೇಳುವುದನ್ನು ನಾವು ಇನ್ನೊಂದು ಬಾರಿಯೂ ಕೇಳಿಸಿಕೊಳ್ಳುವೆವು” ಎಂದರು. 33 ಆಗ ಪೌಲನು ಅವರ ಮಧ್ಯದಿಂದ ಹೊರಟುಹೋದನು. 34 ಕೆಲವರು ಅವನೊಂದಿಗೆ ಸೇರಿಕೊಂಡರು ಮತ್ತು ವಿಶ್ವಾಸಿಗಳಾದರು. ಅವರಲ್ಲಿ ಅರಿಯೊಪಾಗದ ನ್ಯಾಯಸಭೆಯ ನ್ಯಾಯಾಧಿಪತಿಯಾದ ದಿಯೊನುಸ್ಯನೂ ದಾಮರಿ ಎಂಬ ಸ್ತ್ರೀಯೂ ಇನ್ನಿತರರೂ ಇದ್ದರು.