ಅ. ಕಾರ್ಯ
4 ಇವರಿಬ್ಬರೂ ಜನರೊಂದಿಗೆ ಮಾತಾಡುತ್ತಿದ್ದಾಗ, ಮುಖ್ಯ ಯಾಜಕರೂ ದೇವಾಲಯದ ಮುಖ್ಯಸ್ಥನೂ ಸದ್ದುಕಾಯರೂ ಅವರ ಮೇಲೆರಗಿ ಬಂದು, 2 ಅವರು ಜನರಿಗೆ ಬೋಧಿಸುತ್ತಿದ್ದುದರಿಂದಲೂ ಯೇಸು ಸತ್ತವರಿಂದ ಪುನರುತ್ಥಾನಗೊಂಡದ್ದರ ಕುರಿತು ಸ್ಪಷ್ಟವಾಗಿ ತಿಳಿಸುತ್ತಿದ್ದುದರಿಂದಲೂ ಅವರ ಮೇಲೆ ಕೋಪಗೊಂಡು 3 ಅವರನ್ನು ಹಿಡಿದರು ಮತ್ತು ಆಗಲೇ ಸಂಜೆಯಾಗಿದ್ದ ಕಾರಣ ಮರುದಿನದ ವರೆಗೆ ಅವರನ್ನು ಬಂಧನದಲ್ಲಿಟ್ಟರು. 4 ಆದರೂ ಅವರ ಬೋಧನೆಗೆ ಕಿವಿಗೊಟ್ಟಿದ್ದವರಲ್ಲಿ ಅನೇಕರು ನಂಬಿದರು; ಹೀಗೆ ಗಂಡಸರ ಸಂಖ್ಯೆಯು ಸುಮಾರು ಐದು ಸಾವಿರಕ್ಕೇರಿತು.
5 ಮರುದಿನ ಅವರ ಅಧಿಪತಿಗಳೂ ಹಿರೀಪುರುಷರೂ ಶಾಸ್ತ್ರಿಗಳೂ ಯೆರೂಸಲೇಮಿನಲ್ಲಿ ಕೂಡಿಬಂದರು, 6 (ಮಾತ್ರವಲ್ಲದೆ ಮುಖ್ಯ ಯಾಜಕನಾದ ಅನ್ನನೂ ಕಾಯಫನೂ ಯೋಹಾನನೂ ಅಲೆಕ್ಸಾಂದ್ರನೂ ಮುಖ್ಯ ಯಾಜಕನ ಸಂಬಂಧಿಕರಲ್ಲಿ ಅನೇಕರೂ ಆ ಸಭೆಯಲ್ಲಿದ್ದರು) 7 ಮತ್ತು ಅವರು ಪೇತ್ರ ಯೋಹಾನರನ್ನು ತಮ್ಮ ನಡುವೆ ನಿಲ್ಲಿಸಿ, “ಯಾವ ಶಕ್ತಿಯಿಂದ ಅಥವಾ ಯಾರ ಹೆಸರಿನಲ್ಲಿ ನೀವಿದನ್ನು ಮಾಡಿದಿರಿ?” ಎಂದು ವಿಚಾರಣೆಮಾಡಲಾರಂಭಿಸಿದರು. 8 ಆಗ ಪೇತ್ರನು ಪವಿತ್ರಾತ್ಮಭರಿತನಾಗಿ ಅವರಿಗೆ ಹೇಳಿದ್ದು:
“ಜನರ ಅಧಿಪತಿಗಳೇ, ಹಿರೀಪುರುಷರೇ, 9 ಒಬ್ಬ ಅಂಗಹೀನನಿಗೆ ಆದ ಒಳ್ಳೇ ಕಾರ್ಯದ ವಿಷಯದಲ್ಲಿ, ಅವನು ಯಾರಿಂದ ಸ್ವಸ್ಥಮಾಡಲ್ಪಟ್ಟಿದ್ದಾನೆ ಎಂಬದಾಗಿ ನಮ್ಮನ್ನು ಈ ದಿನ ವಿಚಾರಣೆಮಾಡುತ್ತಿರುವುದಾದರೆ, 10 ಇದು ನಿಮಗೆಲ್ಲರಿಗೂ ಇಸ್ರಾಯೇಲ್ ಜನರೆಲ್ಲರಿಗೂ ತಿಳಿದಿರಲಿ: ನೀವು ಶೂಲಕ್ಕೇರಿಸಿದ, ಆದರೆ ದೇವರು ಸತ್ತವರೊಳಗಿಂದ ಎಬ್ಬಿಸಿದ ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದಲೇ ಈ ಮನುಷ್ಯನು ನಿಮ್ಮ ಮುಂದೆ ಸ್ವಸ್ಥನಾಗಿ ನಿಂತಿದ್ದಾನೆ. 11 ‘ಮನೆಕಟ್ಟುವವರಾದ ನೀವು ತಿರಸ್ಕರಿಸಿದ [ಈ] ಕಲ್ಲು ಮುಖ್ಯವಾದ ಮೂಲೆಗಲ್ಲಾಯಿತು.’ 12 ಇದಲ್ಲದೆ, ಬೇರೆ ಯಾರಿಂದಲೂ ರಕ್ಷಣೆಯು ದೊರಕುವುದಿಲ್ಲ; ಆ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಾವು ರಕ್ಷಣೆಯನ್ನು ಹೊಂದಸಾಧ್ಯವಿಲ್ಲ.”
13 ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುತ್ತಿರುವುದನ್ನು ಅವರು ಕಂಡು, ಇವರು ಹೆಚ್ಚು ವಿದ್ಯಾಭ್ಯಾಸವಿಲ್ಲದ ಸಾಧಾರಣ ವ್ಯಕ್ತಿಗಳೆಂದು ತಿಳಿದು ಆಶ್ಚರ್ಯಪಟ್ಟರು. ಮತ್ತು ಇವರು ಯೇಸುವಿನೊಂದಿಗೆ ಇರುತ್ತಿದ್ದರು ಎಂಬುದನ್ನು ಅವರು ಗುರುತಿಸಿದರು; 14 ಸ್ವಸ್ಥನಾಗಿದ್ದ ಮನುಷ್ಯನು ಅವರೊಂದಿಗೆ ನಿಂತಿರುವುದನ್ನು ನೋಡಿ ಅವರಿಗೆ ಪ್ರತಿಯಾಗಿ ಏನೂ ಮಾತಾಡಲು ಸಾಧ್ಯವಾಗಲಿಲ್ಲ. 15 ಆದುದರಿಂದ ಅವರು ಹಿರೀಸಭೆಯಿಂದ * ಹೊರಗೆ ಹೋಗುವಂತೆ ಅವರಿಗೆ ಅಪ್ಪಣೆಕೊಟ್ಟು, 16 “ನಾವು ಈ ಮನುಷ್ಯರನ್ನು ಏನು ಮಾಡೋಣ? ಏಕೆಂದರೆ ಯೆರೂಸಲೇಮಿನ ಎಲ್ಲ ನಿವಾಸಿಗಳಿಗೆ ಗೊತ್ತಾಗಿರುವ ಒಂದು ಗಮನಾರ್ಹ ಸೂಚಕಕಾರ್ಯವು ಇವರಿಂದ ನಡೆಸಲ್ಪಟ್ಟಿದೆ; ನಾವದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. 17 ಆದರೆ ಈ ಸುದ್ದಿಯು ಜನರ ನಡುವೆ ಇನ್ನಷ್ಟು ಹಬ್ಬದಂತೆ, ಇನ್ನೆಂದೂ ಈ ಹೆಸರನ್ನು ಎತ್ತಿ ಯಾರೊಂದಿಗೂ ಮಾತಾಡಬಾರದೆಂದು ನಾವು ಅವರನ್ನು ಬೆದರಿಸೋಣ” ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು.
18 ತದನಂತರ ಅವರನ್ನು ಕರೆದು, ಎಲ್ಲಿಯೂ ಯೇಸುವಿನ ಹೆಸರಿನ ಆಧಾರದ ಮೇಲೆ ಮಾತಾಡಲೂಬಾರದು ಬೋಧಿಸಲೂಬಾರದು ಎಂದು ಖಂಡಿತವಾಗಿ ಆಜ್ಞಾಪಿಸಿದರು. 19 ಇದಕ್ಕೆ ಉತ್ತರವಾಗಿ ಪೇತ್ರ ಯೋಹಾನರು ಅವರಿಗೆ, “ದೇವರಿಗೆ ಬದಲಾಗಿ ನಿಮಗೆ ಕಿವಿಗೊಡುವುದು ದೇವರ ದೃಷ್ಟಿಯಲ್ಲಿ ನ್ಯಾಯವಾಗಿದೆಯೋ ಎಂಬುದನ್ನು ನೀವೇ ತೀರ್ಪುಮಾಡಿಕೊಳ್ಳಿರಿ. 20 ನಾವಾದರೋ ಕಂಡು ಕೇಳಿದ ವಿಷಯಗಳ ಕುರಿತು ಮಾತಾಡದೆ ಇರಲಾರೆವು” ಎಂದು ಹೇಳಿದರು. 21 ಆಗ ಅವರನ್ನು ಶಿಕ್ಷಿಸಲು ಅವರಿಗೆ ಯಾವುದೇ ಆಧಾರ ಸಿಗದಿದ್ದುದರಿಂದ ಮತ್ತು ಏನು ಸಂಭವಿಸಿತೋ ಅದನ್ನು ನೋಡಿ ಜನರೆಲ್ಲರೂ ದೇವರನ್ನು ಮಹಿಮೆಪಡಿಸುತ್ತಿದ್ದುದರಿಂದ ಅವರನ್ನು ಇನ್ನಷ್ಟು ಬೆದರಿಸಿ ಬಿಟ್ಟುಬಿಟ್ಟರು; 22 ಈ ಸೂಚಕಕಾರ್ಯದಿಂದ ಸ್ವಸ್ಥನಾದ ಆ ಮನುಷ್ಯನು ನಲವತ್ತಕ್ಕಿಂತ ಹೆಚ್ಚು ವಯಸ್ಸಿನವನಾಗಿದ್ದನು.
23 ಅವರು ಬಿಡುಗಡೆ ಹೊಂದಿದ ಬಳಿಕ ತಮ್ಮ ಸ್ವಂತ ಜನರ ಬಳಿಗೆ ಹೋಗಿ, ಮುಖ್ಯ ಯಾಜಕರೂ ಹಿರೀಪುರುಷರೂ ತಮಗೆ ಹೇಳಿದ ವಿಷಯಗಳನ್ನು ಅವರಿಗೆ ವರದಿಮಾಡಿದರು. 24 ಇದನ್ನು ಕೇಳಿಸಿಕೊಂಡಾಗ ಅವರೆಲ್ಲರೂ ಏಕಮನಸ್ಸಿನಿಂದ ತಮ್ಮ ಸ್ವರವೆತ್ತಿ ದೇವರಿಗೆ ಪ್ರಾರ್ಥಿಸಿದ್ದು:
“ಪರಮಾಧಿಕಾರಿ ಕರ್ತನೇ, ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದಾತನು ನೀನೇ; 25 ಮತ್ತು ನೀನೇ ಪವಿತ್ರಾತ್ಮದ ಮೂಲಕ ನಿನ್ನ ಸೇವಕನೂ ನಮ್ಮ ಪೂರ್ವಜನೂ ಆದ ದಾವೀದನ ಬಾಯಿಂದ, ‘ಜನಾಂಗಗಳು ಕ್ಷೋಭೆಗೊಂಡಿರುವುದೂ ಜನರು ವ್ಯರ್ಥಕಾರ್ಯಗಳ ಕುರಿತು ಧ್ಯಾನಿಸುವುದೂ ಏಕೆ? 26 ಯೆಹೋವನಿಗೂ ಆತನು ಅಭಿಷೇಕಿಸಿದವನಿಗೂ ವಿರುದ್ಧವಾಗಿ ಭೂರಾಜರು ಎದ್ದುನಿಂತಿದ್ದಾರೆ ಮತ್ತು ಅಧಿಪತಿಗಳು ಒಟ್ಟುಗೂಡಿದ್ದಾರೆ’ ಎಂದು ಹೇಳಿಸಿದ್ದೀ. 27 ಈ ಮಾತಿಗನುಸಾರ, ಈ ಪಟ್ಟಣದಲ್ಲಿ ಹೆರೋದನೂ ಪೊಂತ್ಯ ಪಿಲಾತನೂ ಅನ್ಯಜನಾಂಗಗಳ ಜನರೊಂದಿಗೆ ಮತ್ತು ಇಸ್ರಾಯೇಲ್ ಜನರೊಂದಿಗೆ ಕೂಡಿಕೊಂಡು, ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿನ ವಿರುದ್ಧ ಎದ್ದುನಿಂತು 28 ನಿನ್ನ ಕೈಯೂ ನಿನ್ನ ಸಂಕಲ್ಪವೂ ಸಂಭವಿಸುವಂತೆ ಮುಂದಾಗಿ ನೇಮಿಸಿದ್ದನ್ನೇ ನಡಿಸಿದರು. 29 ಆದುದರಿಂದ ಯೆಹೋವನೇ, ಈಗ ಅವರ ಬೆದರಿಕೆಗಳಿಗೆ ಗಮನಕೊಡು ಮತ್ತು 30 ಸ್ವಸ್ಥಪಡಿಸಲಿಕ್ಕಾಗಿ ನಿನ್ನ ಕೈಯನ್ನು ಚಾಚುವಾಗ ಹಾಗೂ ನಿನ್ನ ಪವಿತ್ರ ಸೇವಕನಾದ ಯೇಸುವಿನ ಹೆಸರಿನಲ್ಲಿ ಸೂಚಕಕಾರ್ಯಗಳೂ ಆಶ್ಚರ್ಯಕಾರ್ಯಗಳೂ ನಡೆಯುವಾಗ, ನಿನ್ನ ವಾಕ್ಯವನ್ನು ಪೂರ್ಣ ಧೈರ್ಯದಿಂದ ಮಾತಾಡುತ್ತಾ ಇರಲು ನಿನ್ನ ಸೇವಕರಿಗೆ ಸಹಾಯಮಾಡು.”
31 ಹೀಗೆ ಅವರು ಯಾಚಿಸಿದ ಬಳಿಕ ಅವರು ಕೂಡಿದ್ದ ಸ್ಥಳವು ನಡುಗಿತು ಮತ್ತು ಅವರೆಲ್ಲರೂ ಪವಿತ್ರಾತ್ಮಭರಿತರಾಗಿ ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡುತ್ತಿದ್ದರು.
32 ನಂಬಿದವರೆಲ್ಲರ ಹೃದಯ ಮತ್ತು ಮನಸ್ಸು ಒಂದಾಗಿತ್ತು. ಇದಲ್ಲದೆ ತಾನು ಹೊಂದಿದ ಯಾವುದೇ ವಸ್ತು ತನ್ನ ಸ್ವಂತದ್ದೆಂದು ಒಬ್ಬನೂ ಹೇಳುತ್ತಿರಲಿಲ್ಲ; ಬದಲಾಗಿ ಅವರೆಲ್ಲರೂ ಎಲ್ಲವನ್ನೂ ಸಮಾನವಾಗಿ ಹಂಚಿಕೊಂಡರು. 33 ಮತ್ತು ಕರ್ತನಾದ ಯೇಸುವಿನ ಪುನರುತ್ಥಾನದ ವಿಷಯದಲ್ಲಿ ಅಪೊಸ್ತಲರು ಬಲವಾದ ಸಾಕ್ಷಿಯನ್ನು ಕೊಡುತ್ತಾ ಮುಂದುವರಿದರು; ಅವರೆಲ್ಲರ ಮೇಲೆ ದೇವರ ಅಪಾತ್ರ ದಯೆಯು * ಹೇರಳವಾಗಿತ್ತು. 34 ಅವರ ಮಧ್ಯೆ ಕೊರತೆಯಲ್ಲಿದ್ದವನು ಒಬ್ಬನೂ ಇರಲಿಲ್ಲ; ಏಕೆಂದರೆ ಹೊಲಗಳು ಅಥವಾ ಮನೆಗಳನ್ನು ಹೊಂದಿದ್ದವರೆಲ್ಲರೂ ಅವುಗಳನ್ನು ಮಾರಿ ಸಿಕ್ಕಿದ ಹಣವನ್ನು ತಂದು 35 ಅಪೊಸ್ತಲರ ಪಾದಗಳ ಬಳಿ ಇಡುತ್ತಿದ್ದರು. ಬಳಿಕ ಅದನ್ನು ಪ್ರತಿಯೊಬ್ಬರ ಆವಶ್ಯಕತೆಗನುಸಾರ ಹಂಚಿಕೊಡಲಾಗುತ್ತಿತ್ತು. 36 ಅಪೊಸ್ತಲರಿಂದ ಬಾರ್ನಬ (ಭಾಷಾಂತರಿಸಿದಾಗ ಸಾಂತ್ವನದ ಪುತ್ರನೆಂದು ಅರ್ಥ) ಎಂದು ಕರೆಯಲ್ಪಡುತ್ತಿದ್ದ ಸೈಪ್ರಸ್ನ ನಿವಾಸಿಯಾಗಿದ್ದ ಯೋಸೇಫನೆಂಬ ಲೇವಿಯನು 37 ತನಗಿದ್ದ ಭೂಮಿಯನ್ನು ಮಾರಿ ಬಂದ ಹಣವನ್ನು ತಂದು ಅಪೊಸ್ತಲರ ಪಾದಗಳ ಬಳಿಯಲ್ಲಿ ಇಟ್ಟನು.