ಅ. ಕಾರ್ಯ
3 ಪೇತ್ರ ಯೋಹಾನರು ಮಧ್ಯಾಹ್ನ ಮೂರು ಗಂಟೆಯ ಪ್ರಾರ್ಥನೆಗಾಗಿ ದೇವಾಲಯಕ್ಕೆ ಹೋಗುತ್ತಿದ್ದಾಗ, 2 ತಾಯಿಯ ಗರ್ಭದಿಂದಲೇ ಕುಂಟನಾಗಿದ್ದ ಒಬ್ಬ ಮನುಷ್ಯನನ್ನು ಕೆಲವರು ಹೊತ್ತುಕೊಂಡು ಬಂದರು. ದೇವಾಲಯವನ್ನು ಪ್ರವೇಶಿಸುತ್ತಿರುವವರಿಂದ ಭಿಕ್ಷೆಬೇಡುವುದಕ್ಕಾಗಿ ಅವರು ಅವನನ್ನು ಪ್ರತಿ ದಿನ ದೇವಾಲಯದ ಸುಂದರ ಎಂದು ಕರೆಯಲ್ಪಡುತ್ತಿದ್ದ ದ್ವಾರದ ಬಳಿ ಕೂರಿಸುತ್ತಿದ್ದರು. 3 ಅವನು ಪೇತ್ರ ಯೋಹಾನರು ದೇವಾಲಯವನ್ನು ಪ್ರವೇಶಿಸುತ್ತಿರುವುದನ್ನು ಕಂಡಾಗ, ಭಿಕ್ಷೆಕೊಡುವಂತೆ ಅವರನ್ನು ಬೇಡಿಕೊಂಡನು. 4 ಆದರೆ ಪೇತ್ರ ಯೋಹಾನರು ಅವನನ್ನು ದಿಟ್ಟಿಸಿ ನೋಡಿದರು. ಪೇತ್ರನು ಅವನಿಗೆ, “ನಮ್ಮನ್ನು ನೋಡು” ಅಂದನು. 5 ಅವರಿಂದ ಏನಾದರೂ ಸಿಗಬಹುದೆಂಬ ನಿರೀಕ್ಷೆಯಲ್ಲಿ ಅವನು ಅವರನ್ನು ಲಕ್ಷ್ಯವಿಟ್ಟು ನೋಡಿದನು. 6 ಆಗ ಪೇತ್ರನು ಅವನಿಗೆ, “ನನ್ನ ಬಳಿ ಬೆಳ್ಳಿಬಂಗಾರಗಳಿಲ್ಲ, ಆದರೆ ನನ್ನಲ್ಲಿ ಏನಿದೆಯೊ ಅದನ್ನು ನಿನಗೆ ಕೊಡುತ್ತೇನೆ: ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದು ನಡೆ!” ಎಂದು ಹೇಳಿ, 7 ಅವನ ಬಲಗೈಯನ್ನು ಹಿಡಿದು ಎತ್ತಿದನು. ಆ ಕೂಡಲೆ ಅವನ ಅಂಗಾಲುಗಳು ಮತ್ತು ಕಣಕಾಲಿನ ಎಲುಬುಗಳು ಸ್ಥಿರಗೊಂಡವು; 8 ಮತ್ತು ಅವನು ಜಿಗಿದು ಎದ್ದುನಿಂತು ನಡೆಯಲಾರಂಭಿಸಿದನು. ಅವನು ನಡೆಯುತ್ತಾ ಜಿಗಿಯುತ್ತಾ ದೇವರನ್ನು ಸ್ತುತಿಸುತ್ತಾ ಅವರೊಂದಿಗೆ ದೇವಾಲಯವನ್ನು ಪ್ರವೇಶಿಸಿದನು. 9 ಹೀಗೆ ಅವನು ನಡೆಯುತ್ತಾ ದೇವರನ್ನು ಸ್ತುತಿಸುತ್ತಾ ಇರುವುದು ಜನರೆಲ್ಲರ ದೃಷ್ಟಿಗೆ ಬಿತ್ತು. 10 ದೇವಾಲಯದ ಸುಂದರದ್ವಾರದ ಬಳಿ ಭಿಕ್ಷೆಗಾಗಿ ಕುಳಿತುಕೊಂಡಿರುತ್ತಿದ್ದ ಮನುಷ್ಯನು ಇವನೇ ಎಂದು ಅವರು ಅವನ ಗುರುತುಹಿಡಿದು, ಅವನಿಗೆ ಸಂಭವಿಸಿದ್ದರ ಬಗ್ಗೆ ಆಶ್ಚರ್ಯದಿಂದ ಆನಂದಪರವಶರಾದರು.
11 ಆ ಮನುಷ್ಯನು ಪೇತ್ರ ಯೋಹಾನರನ್ನು ಹಿಡಿದುಕೊಂಡೇ ಇದ್ದಾಗ ಆಶ್ಚರ್ಯಪಟ್ಟ ಜನರೆಲ್ಲರೂ ಅವರ ಬಳಿಗೆ ಸೊಲೊಮೋನನ ಕಂಬಸಾಲು ಎಂದು ಕರೆಯಲ್ಪಡುತ್ತಿದ್ದ ಸ್ಥಳಕ್ಕೆ ಓಡಿಬಂದರು. 12 ಪೇತ್ರನು ಇದನ್ನು ನೋಡಿ ಜನರಿಗೆ ಹೇಳಿದ್ದು: “ಇಸ್ರಾಯೇಲ್ ಜನರೇ, ಇದನ್ನು ಕಂಡು ನೀವು ಆಶ್ಚರ್ಯಪಡುವುದೇಕೆ? ನಾವು ನಮ್ಮ ಸ್ವಂತ ಶಕ್ತಿಯಿಂದ ಅಥವಾ ದೇವಭಕ್ತಿಯಿಂದ ಇವನನ್ನು ನಡೆಯುವಂತೆ ಮಾಡಿದ್ದೇವೊ ಎಂಬಂತೆ ನೀವು ನಮ್ಮನ್ನು ನೋಡುತ್ತಿರುವುದೇಕೆ? 13 ಅಬ್ರಹಾಮ ಇಸಾಕ ಯಾಕೋಬರ ದೇವರು, ನಮ್ಮ ಪೂರ್ವಜರ ದೇವರು ತನ್ನ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ; ಅವನನ್ನು ಬಿಡಿಸಬೇಕೆಂದು ಪಿಲಾತನು ನಿರ್ಣಯಿಸಿಕೊಂಡಿದ್ದರೂ ನೀವು ಅವನನ್ನು ಕೊಲ್ಲುವುದಕ್ಕೆ ಒಪ್ಪಿಸಿಕೊಟ್ಟು ಪಿಲಾತನ ಮುಂದೆ ಅವನನ್ನು ನಿರಾಕರಿಸಿದಿರಿ. 14 ಹೌದು, ನೀವು ಪವಿತ್ರನೂ ನೀತಿವಂತನೂ ಆದ ಆ ಮನುಷ್ಯನನ್ನು ನಿರಾಕರಿಸಿ ಒಬ್ಬ ಕೊಲೆಗಾರನನ್ನು ನಿಮಗೆ ಬಿಟ್ಟುಕೊಡುವಂತೆ ಕೇಳಿಕೊಂಡಿರಿ. 15 ನೀವು ಜೀವದ ಮುಖ್ಯ ನಿಯೋಗಿಯನ್ನು ಕೊಂದುಹಾಕಿದಿರಿ. ಆದರೆ ದೇವರು ಅವನನ್ನು ಸತ್ತವರೊಳಗಿಂದ ಎಬ್ಬಿಸಿದ ನಿಜತ್ವಕ್ಕೆ ನಾವೇ ಸಾಕ್ಷಿಗಳಾಗಿದ್ದೇವೆ. 16 ಹೀಗಿರುವುದರಿಂದ ಅವನ ಹೆಸರೇ, ಅವನ ಹೆಸರಿನಲ್ಲಿನ ನಮ್ಮ ನಂಬಿಕೆಯೇ ನೀವು ನೋಡುತ್ತಿರುವ ಮತ್ತು ನಿಮಗೆ ತಿಳಿದಿರುವ ಈ ಮನುಷ್ಯನನ್ನು ಬಲಪಡಿಸಿದೆ; ಅವನ ಮೂಲಕ ನಾವು ಹೊಂದಿರುವ ನಂಬಿಕೆಯೇ ಈ ಮನುಷ್ಯನಿಗೆ ನಿಮ್ಮೆಲ್ಲರ ಮುಂದೆ ಈ ಪೂರ್ಣ ಸ್ವಸ್ಥತೆಯನ್ನು ನೀಡಿದೆ. 17 ಆದರೆ ಸಹೋದರರೇ, ನಿಮ್ಮ ಅಧಿಪತಿಗಳು ಮಾಡಿದಂತೆಯೇ ನೀವು ಸಹ ಅಜ್ಞಾನದಿಂದ ಹೀಗೆ ವರ್ತಿಸಿದಿರಿ ಎಂಬುದು ನನಗೆ ತಿಳಿದಿದೆ. 18 ತನ್ನ ಕ್ರಿಸ್ತನು ಬಾಧೆಯನ್ನು ಅನುಭವಿಸುವನು ಎಂದು ಮುಂಚಿತವಾಗಿಯೇ ಎಲ್ಲ ಪ್ರವಾದಿಗಳ ಬಾಯಿಂದ ಪ್ರಕಟಿಸಿದ ವಿಷಯಗಳನ್ನು ದೇವರು ಈ ರೀತಿ ನೆರವೇರಿಸಿದ್ದಾನೆ.
19 “ಆದುದರಿಂದ ನಿಮ್ಮ ಪಾಪಗಳು ಅಳಿಸಿಬಿಡಲ್ಪಡುವಂತೆ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳಿರಿ; ಆಗ ಯೆಹೋವನ ಸಮ್ಮುಖದಿಂದ ಚೈತನ್ಯದಾಯಕ ಸಮಯಗಳು ಬರುವವು 20 ಮತ್ತು ನಿಮಗಾಗಿ ನೇಮಿಸಲ್ಪಟ್ಟಿರುವ ಕ್ರಿಸ್ತನನ್ನು, ಯೇಸುವನ್ನು ಆತನು ಕಳುಹಿಸಿಕೊಡುವನು. 21 ದೇವರು ಪುರಾತನ ಕಾಲದ ತನ್ನ ಪವಿತ್ರ ಪ್ರವಾದಿಗಳ ಬಾಯಿಂದ ಹೇಳಿಸಿದ ಎಲ್ಲ ವಿಷಯಗಳ ಪುನಸ್ಸ್ಥಾಪನೆಯ ಕಾಲಗಳು ಬರುವ ತನಕ ಸ್ವರ್ಗವು ಕ್ರಿಸ್ತನನ್ನು ತನ್ನಲ್ಲಿ ಇಟ್ಟುಕೊಂಡಿರಲೇಬೇಕು. 22 ವಾಸ್ತವದಲ್ಲಿ ಮೋಶೆಯು, ‘ಯೆಹೋವ ದೇವರು ನಿಮ್ಮ ಸಹೋದರರ ಮಧ್ಯದಿಂದ ನಿಮಗಾಗಿ ನನ್ನಂಥ ಒಬ್ಬ ಪ್ರವಾದಿಯನ್ನು ಎಬ್ಬಿಸುವನು. ಅವನು ನಿಮಗೆ ತಿಳಿಸುವ ಎಲ್ಲ ವಿಷಯಗಳಿಗೆ ನೀವು ಕಿವಿಗೊಡಬೇಕು. 23 ಆ ಪ್ರವಾದಿಗೆ ಕಿವಿಗೊಡದ ಪ್ರತಿಯೊಬ್ಬ ವ್ಯಕ್ತಿಯು ಜನರೊಳಗಿಂದ ಸಂಪೂರ್ಣವಾಗಿ ನಾಶಮಾಡಲ್ಪಡುವನು’ ಎಂದು ಹೇಳಿದ್ದಾನೆ. 24 ಸಮುವೇಲನೂ ಅವನ ಅನಂತರ ಬಂದು ಪ್ರವಾದಿಸಿದ ಪ್ರವಾದಿಗಳೆಲ್ಲರೂ ಈ ದಿನಗಳ ಕುರಿತು ಸ್ಪಷ್ಟವಾಗಿ ತಿಳಿಸಿದ್ದಾರೆ. 25 ನೀವು ಆ ಪ್ರವಾದಿಗಳ ಪುತ್ರರೂ ದೇವರು ನಿಮ್ಮ ಪೂರ್ವಜರೊಂದಿಗೆ ಮಾಡಿಕೊಂಡ ಒಡಂಬಡಿಕೆಗೆ ಬಾಧ್ಯರೂ ಆಗಿದ್ದೀರಿ. ಆತನು ಅಬ್ರಹಾಮನಿಗೆ, ‘ನಿನ್ನ ಸಂತತಿಯ ಮೂಲಕ ಭೂಮಿಯ ಮೇಲಿರುವ ಎಲ್ಲ ಕುಟುಂಬಗಳು ಆಶೀರ್ವದಿಸಲ್ಪಡುವವು’ ಎಂದು ಹೇಳಿದನು. 26 ದೇವರು ತನ್ನ ಸೇವಕನನ್ನು ನೇಮಿಸಿದ ಬಳಿಕ ಅವನು ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ದುಷ್ಕೃತ್ಯಗಳಿಂದ ತಿರುಗಿಸಿ ಆಶೀರ್ವದಿಸಲಿಕ್ಕಾಗಿ ಮೊದಲು ನಿಮ್ಮ ಬಳಿಗೆ ಕಳುಹಿಸಿದನು.”