ನ್ಯಾಯಸ್ಥಾಪಕರು
19 ಆ ಕಾಲದಲ್ಲಿ ಇಸ್ರಾಯೇಲಲ್ಲಿ ರಾಜ ಇರಲಿಲ್ಲ.+ ಎಫ್ರಾಯೀಮ್ ಬೆಟ್ಟ ಪ್ರದೇಶದ+ ಮೂಲೆಯಲ್ಲಿ ಒಬ್ಬ ಲೇವಿ ಇದ್ದ. ಅವನು ಯೆಹೂದದ ಬೆತ್ಲೆಹೇಮಿನ+ ಒಂದು ಹುಡುಗಿನ ಮದುವೆ ಆಗಿ ಅವಳನ್ನ ಉಪಪತ್ನಿ ಮಾಡ್ಕೊಂಡ. 2 ಆದ್ರೆ ಅವಳು ಮೋಸಮಾಡಿ ಅವನನ್ನ ಬಿಟ್ಟು ಯೆಹೂದದ ಬೆತ್ಲೆಹೇಮಲ್ಲಿರೋ ಅಪ್ಪನ ಮನೆಗೆ ಹೋದಳು. ಅಲ್ಲಿ ನಾಲ್ಕು ತಿಂಗಳು ಇದ್ದಳು. 3 ಆಮೇಲೆ ಗಂಡ ಅವಳನ್ನ ಒಪ್ಪಿಸಿ ಕರ್ಕೊಂಡು ಹೋಗೋಕೆ ಬಂದ. ಅವನ ಜೊತೆ ಒಬ್ಬ ಸೇವಕನಿದ್ದ, ಎರಡು ಕತ್ತೆ ಇತ್ತು. ಅವಳು ಅವನನ್ನ ಅಪ್ಪನ ಮನೆಗೆ ಕರ್ಕೊಂಡು ಬಂದಾಗ ಅಪ್ಪ ಅವನನ್ನ ನೋಡಿ ತುಂಬ ಖುಷಿಪಟ್ಟ. 4 ಮೂರು ದಿನ ಅಲ್ಲೇ ಇರೋಕೆ ಒಪ್ಪಿಸಿದ. ಅವನ ಮಾವನ ಜೊತೆ ತಿಂತಾ ಕುಡಿತಾ ಇದ್ದ.
5 ನಾಲ್ಕನೇ ದಿನ ಅವರು ಬೆಳಿಗ್ಗೆ ಬೇಗ ಎದ್ದು ಹೋಗೋಕೆ ತಯಾರಾದಾಗ ಅಪ್ಪ ಅಳಿಯನಿಗೆ “ಏನಾದ್ರೂ ತಿಂದು ಹೋಗು. ಇಲ್ಲಾಂದ್ರೆ ಸುಸ್ತಾಗುತ್ತೆ” ಅಂದ. 6 ಹಾಗಾಗಿ ಅವರಿಬ್ರೂ ಕೂತು ತಿಂದ್ರು, ಕುಡಿದ್ರು. ಆಮೇಲೆ ಅಪ್ಪ ಅವನಿಗೆ “ದಯವಿಟ್ಟು, ಇವತ್ತು ರಾತ್ರಿನೂ ಇಲ್ಲೇ ಇದ್ದು ಮಜಾ ಮಾಡು” ಅಂದ. 7 ಆದ್ರೆ ಅವನು ಎದ್ದು ಹೊರಟಾಗ ಅವನ ಮಾವ ಅವನನ್ನ ಬೇಡ್ಕೊಳ್ತಾನೇ ಇದ್ದ. ಹಾಗಾಗಿ ಆ ರಾತ್ರಿನೂ ಅಲ್ಲೇ ಉಳ್ಕೊಂಡ.
8 ಐದನೇ ದಿನ ಅವನು ಬೆಳಿಗ್ಗೆ ಬೇಗ ಎದ್ದು ಹೊರಟಾಗ ಅಪ್ಪ “ಏನಾದ್ರೂ ತಿಂದು ಹೋಗು. ಇಲ್ಲಾಂದ್ರೆ ಸುಸ್ತಾಗುತ್ತೆ” ಅಂದ. ಅವರಿಬ್ರೂ ತಿಂದು ಸಂಜೆ ತನಕ ಅಲ್ಲೇ ಕಾಲಕಳೆದ್ರು. 9 ಆಮೇಲೆ ಅವನು ತನ್ನ ಉಪಪತ್ನಿ, ಸೇವಕನ ಜೊತೆ ಹೋಗೋಕೆ ಎದ್ದಾಗ ಅವನ ಮಾವ ಅವನಿಗೆ “ನೋಡು. ಇನ್ನೇನು ಕತ್ತಲಾಗುತ್ತೆ. ದಯವಿಟ್ಟು ಈ ರಾತ್ರಿ ಇಲ್ಲೇ ಇದ್ದು ಮಜಾ ಮಾಡು. ನಾಳೆ ಬೆಳಿಗ್ಗೆ ಬೇಗ ಎದ್ದು ನಿನ್ನ ಮನೆಗೆ* ಹೋಗಬಹುದು” ಅಂದ. 10 ಆ ಲೇವಿಗೆ ಮತ್ತೊಂದು ರಾತ್ರಿ ಅಲ್ಲೇ ಇರೋಕೆ ಇಷ್ಟ ಇರಲಿಲ್ಲ. ಹಾಗಾಗಿ ಅವನು ಎದ್ದು ಯೆಬೂಸಿನ ತನಕ ಅಂದ್ರೆ ಯೆರೂಸಲೇಮಿನ+ ತನಕ ಪ್ರಯಾಣ ಮಾಡಿದ. ಸವಾರಿ ಮಾಡೋಕೆ ಅವನ ಹತ್ರ ಎರಡು ಕತ್ತೆ ಇತ್ತು. ಅವನ ಜೊತೆ ಅವನ ಉಪಪತ್ನಿ, ಅವನ ಸೇವಕ ಇದ್ದ.
11 ಅವರು ಯೆಬೂಸ್ ಪಟ್ಟಣದ ಹತ್ರ ಬಂದಾಗ ಸಂಜೆ ಆಯ್ತು. ಹಾಗಾಗಿ ಸೇವಕ ಯಜಮಾನನಿಗೆ “ನಾವು ಇಲ್ಲಿಗೇ ಪ್ರಯಾಣ ನಿಲ್ಲಿಸಿ ರಾತ್ರಿ ಇಲ್ಲೇ ಇರೋಣ್ವಾ?” ಅಂತ ಕೇಳಿದ. 12 ಆದ್ರೆ ಅವನ ಯಜಮಾನ “ಇಸ್ರಾಯೇಲ್ಯರಲ್ಲದ ವಿದೇಶಿಯರ ಪಟ್ಟಣದಲ್ಲಿ ನಾವು ಉಳ್ಕೊಬಾರದು. ಗಿಬೆಯಾ+ ತನಕ ಹೋಗೋಣ” ಅಂದ. 13 ಆಮೇಲೆ ಅವನು ಸೇವಕನಿಗೆ “ಬಾ, ನಾವು ಗಿಬೆಯಾಗೋ ರಾಮಕ್ಕೋ+ ಹೋಗೋಣ. ಅಲ್ಲಿ ಯಾವುದಾದ್ರೂ ಒಂದು ಊರಲ್ಲಿ ರಾತ್ರಿ ಕಳಿಯೋಣ” ಅಂದ. 14 ಹಾಗಾಗಿ ಅವರು ಪ್ರಯಾಣ ಮಾಡ್ತಾ ಹೋದ್ರು. ಬೆನ್ಯಾಮೀನ್ಯರಿಗೆ ಸೇರಿದ ಗಿಬೆಯಾ ಹತ್ರ ಅವರು ಬಂದಾಗ ಸೂರ್ಯ ಮುಳುಗ್ತಾ ಇದ್ದ.
15 ಹಾಗಾಗಿ ಅವರು ಅಲ್ಲಿಗೇ ಪ್ರಯಾಣ ನಿಲ್ಲಿಸಿ ಆ ರಾತ್ರಿ ಕಳಿಯೋಕೆ ಗಿಬೆಯಾಗೆ ಹೋದ್ರು. ಅವರು ಪಟ್ಟಣದ ಮುಖ್ಯಸ್ಥಳಕ್ಕೆ* ಬಂದು ಅಲ್ಲಿ ಕೂತ್ಕೊಂಡ್ರು. ಆದ್ರೆ ರಾತ್ರಿ ಕಳಿಯೋಕೆ ಯಾರೂ ಅವ್ರನ್ನ ಮನೆಗೆ ಕರೀಲಿಲ್ಲ.+ 16 ಕತ್ತಲಾಗ್ತಾ ಇದ್ದ ಹಾಗೆ ವಯಸ್ಸಾಗಿದ್ದ ತಾತ ಹೊಲದಲ್ಲಿ ತನ್ನ ಕೆಲಸ ಮುಗಿಸಿ ಮನೆಗೆ ವಾಪಸ್ ಹೋಗ್ತಿದ್ದ. ಅವನು ಎಫ್ರಾಯೀಮಿನ ಬೆಟ್ಟ ಪ್ರದೇಶದವನಾಗಿದ್ದ.+ ಸ್ವಲ್ಪ ಸಮಯದಿಂದ ಅವನು ಗಿಬೆಯಾದಲ್ಲಿದ್ದ. ಆದ್ರೆ ಆ ಪಟ್ಟಣದಲ್ಲಿ ಬೆನ್ಯಾಮೀನ್+ ಕುಲದವರು ಇದ್ರು. 17 ಪಟ್ಟಣದ ಮುಖ್ಯಸ್ಥಳದಲ್ಲಿ ಈ ಪ್ರಯಾಣಿಕನನ್ನ ನೋಡಿದಾಗ ಆ ತಾತ “ಎಲ್ಲಿಂದ ಬಂದೆ? ಎಲ್ಲಿಗೆ ಹೋಗ್ತಿದ್ದೀಯ?” ಅಂತ ಕೇಳಿದ. 18 ಆಗ ಅವನು “ನಾವು ಯೆಹೂದದ ಬೆತ್ಲೆಹೇಮಿಂದ ಎಫ್ರಾಯೀಮ್ ಬೆಟ್ಟ ಪ್ರದೇಶಕ್ಕೆ ಹೋಗ್ತಾ ಇದ್ದೀವಿ. ನಾನು ಅಲ್ಲೇ ಒಂದು ದೂರದ ಊರಿನವನು. ನಾನು ಯೆಹೂದದ ಬೆತ್ಲೆಹೇಮಿಗೆ+ ಹೋಗಿದ್ದೆ. ಈಗ ನಾನು ಯೆಹೋವನ ಮನೆಗೆ ವಾಪಸ್ ಹೋಗ್ತಾ ಇದ್ದೀನಿ.* ಆದ್ರೆ ಇಲ್ಲಿ ಯಾರೂ ನಮ್ಮನ್ನ ಮನೆ ಒಳಗೆ ಕರ್ಕೊಳ್ತಾ ಇಲ್ಲ. 19 ನಮ್ಮ ಕತ್ತೆಗೆ ಮೇವಿದೆ.+ ನಮಗೂ ಸಾಕಾಗೋ ಅಷ್ಟು ರೊಟ್ಟಿ,+ ದ್ರಾಕ್ಷಾಮದ್ಯ ಇದೆ. ನಮಗೆ ಬೇಕಾದದ್ದೆಲ್ಲ ನಮ್ಮ ಹತ್ರ ಇದೆ” ಅಂದ. 20 ಆಗ ಆ ತಾತ “ನನ್ನ ಮನೆಗೆ ಬನ್ನಿ!* ನಿಮ್ಮನ್ನ ನೋಡ್ಕೊತೀನಿ. ಆದ್ರೆ ಪಟ್ಟಣದ ಮುಖ್ಯಸ್ಥಳದಲ್ಲಿ ರಾತ್ರಿ ಕಳೀಬೇಡಿ” ಅಂದ. 21 ಹಾಗಾಗಿ ಆ ತಾತ ಅವನನ್ನ ತನ್ನ ಮನೆಗೆ ಕರ್ಕೊಂಡು ಬಂದು ಕತ್ತೆಗೆ ಮೇವು* ಕೊಟ್ಟ. ಆಮೇಲೆ ಕಾಲು ತೊಳ್ಕೊಂಡು ಒಳಗೆ ಕೂತು ತಿಂದ್ರು, ಕುಡಿದ್ರು.
22 ಅವರು ನೆಮ್ಮದಿಯಿಂದ ಇರುವಾಗ ಪಟ್ಟಣದ ಕೆಲವು ಅಯೋಗ್ಯರು ಬಂದು ಮನೆ ಸುತ್ತ ನಿಂತು ಬಾಗಿಲನ್ನ ಜೋರಾಗಿ ಬಡೀತಾ ಇದ್ರು. ಆ ಮನೆ ಯಜಮಾನನಾದ ತಾತನಿಗೆ “ನಿನ್ನ ಮನೆಗೆ ಬಂದಿರೋ ಆ ಗಂಡಸ್ರನ್ನ ಹೊರಗೆ ಕರ್ಕೊಂಡು ಬಾ. ಅವನ ಜೊತೆ ಸಂಭೋಗ ಮಾಡಬೇಕು”+ ಅಂತ ಹೇಳ್ತಾ ಇದ್ರು. 23 ಆಗ ಆ ತಾತ ಹೊರಗೆ ಹೋಗಿ “ಬೇಡ ನನ್ನ ಸಹೋದರರೇ, ದಯವಿಟ್ಟು ಇಂಥ ಕೆಟ್ಟ ಕೆಲಸ ಮಾಡಬೇಡಿ. ಈ ಮನುಷ್ಯ ನನ್ನ ಮನೆಗೆ ಬಂದಿರೋ ಅತಿಥಿ. ಇಂಥ ನೀಚ ಕೆಲ್ಸ ಮಾಡಬೇಡಿ. 24 ಕನ್ಯೆಯಾಗಿರೋ ನನ್ನ ಮಗಳು, ಆ ಗಂಡಸಿನ ಉಪಪತ್ನಿ ಇಲ್ಲಿದ್ದಾರೆ. ನಾನು ಅವ್ರನ್ನ ಕರ್ಕೊಂಡು ಬರ್ತಿನಿ. ಬೇಕಾದ್ರೆ ಅವ್ರನ್ನ ಹಾಳುಮಾಡಿ.*+ ಆದ್ರೆ ಈ ಮನುಷ್ಯನಿಗೆ ಇಂಥ ನೀಚ ಕೆಲ್ಸ ಮಾಡಬೇಡಿ” ಅಂದ.
25 ಆದ್ರೆ ಆ ಗಂಡಸ್ರು ಅವನು ಹೇಳಿದ್ದನ್ನ ಕೇಳಲಿಲ್ಲ. ಹಾಗಾಗಿ ಲೇವಿ ತನ್ನ ಉಪಪತ್ನಿನ+ ಹಿಡ್ಕೊಂಡು ಹೊರಗೆ ಅವ್ರ ಹತ್ರ ಕರ್ಕೊಂಡು ಬಂದ. ಅವರು ಇಡೀ ರಾತ್ರಿ ಅವಳ ಮೇಲೆ ಅತ್ಯಾಚಾರ ಮಾಡ್ತಾ ಬೆಳಗಾಗೋ ತನಕ ಅವಳನ್ನ ಪೀಡಿಸಿದ್ರು. ಬೆಳಿಗ್ಗೆ ಅವಳನ್ನ ಕಳಿಸಿಬಿಟ್ರು. 26 ಬೆಳಗಿನ ಜಾವ ಆ ಹುಡುಗಿ ಅವಳ ಯಜಮಾನನಿದ್ದ ಆ ತಾತನ ಮನೆ ಮುಂದೆ ಬಂದು ಬಿದ್ದಳು. ಬೆಳಗಾಗೋ ತನಕ ಅಲ್ಲೇ ಬಿದ್ದಿದ್ದಳು. 27 ಅವಳ ಯಜಮಾನ ಬೆಳಿಗ್ಗೆ ಎದ್ದು ಹೋಗೋಕೆ ಬಾಗಿಲು ತೆಗೆದಾಗ ಆ ಹುಡುಗಿ ಅಂದ್ರೆ ಅವನ ಉಪಪತ್ನಿ ಬಾಗಿಲಿನ ಮುಂದೆ ಬಿದ್ದಿರೋದನ್ನ, ಅವಳ ಕೈ ಹೊಸ್ತಿಲಿನ ಮೇಲೆ ಇರೋದನ್ನ ನೋಡ್ದ. 28 ಅವಳಿಗೆ “ಎದ್ದೇಳು, ಹೋಗೋಣ” ಅಂದ. ಆದ್ರೆ ಯಾವುದೇ ಉತ್ರ ಬರಲಿಲ್ಲ. ಯಾಕಂದ್ರೆ ಅವಳು ಸತ್ತು ಹೋಗಿದ್ದಳು. ಅವಳನ್ನ ಕತ್ತೆ ಮೇಲೆ ಹಾಕೊಂಡು ಮನೆಗೆ ಹೊರಟ.
29 ಅವನು ಮನೆ ಮುಟ್ಟಿದ ಮೇಲೆ ಕತ್ತಿ ತಗೊಂಡು ತನ್ನ ಉಪಪತ್ನಿಯ ಶವವನ್ನ 12 ತುಂಡು ಮಾಡಿ ಒಂದೊಂದು ತುಂಡನ್ನ ಇಸ್ರಾಯೇಲಿನ ಒಂದೊಂದು ಪ್ರದೇಶಕ್ಕೆ ಕಳಿಸಿದ. 30 ಅದನ್ನ ನೋಡಿದ ಪ್ರತಿಯೊಬ್ರೂ “ಇಸ್ರಾಯೇಲ್ಯರು ಈಜಿಪ್ಟಿಂದ ಬಂದ ದಿನದಿಂದ ಇಲ್ಲಿ ತನಕ ಇಂಥ ವಿಷ್ಯ ಯಾವತ್ತೂ ನಡೆದಿರಲೂ ಇಲ್ಲ, ಯಾರೂ ಅದನ್ನ ನೋಡಿರಲೂ ಇಲ್ಲ. ಇದ್ರ ಬಗ್ಗೆ ಯೋಚಿಸಿ.* ಇದ್ರ ಬಗ್ಗೆ ಚರ್ಚೆಮಾಡಿ,+ ಏನು ಮಾಡಬೇಕಂತ ಹೇಳಿ” ಅಂದ್ರು.