9 “ಗೆಹೆನ್ನ”—ಸಂಪೂರ್ಣ ನಾಶನದ ಸಂಕೇತ
ಗ್ರೀಕ್, γέεννα (ಗಿಎನ್ನ); ಲ್ಯಾಟಿನ್, ಗೆಹೆನ್ನ; ಹೀಬ್ರು, גי הנם (ಗೆಹ್ ಹಿನ್ನೋಮ್, “ಹಿನ್ನೋಮ್ ಕಣಿವೆ”)
“ಗೆಹೆನ್ನ” ಎಂಬುದು ಗೆಹ್ ಹಿನ್ನೋಮ್ ಎಂಬ ಹೀಬ್ರು ಪದದ ಗ್ರೀಕ್ ರೂಪವಾಗಿದ್ದು “ಹಿನ್ನೋಮ್ ಕಣಿವೆ” ಎಂಬ ಅರ್ಥವನ್ನು ಹೊಂದಿದೆ. ಯೆಹೋಶುವ 18:16 ರಲ್ಲಿ “ಹಿನ್ನೋಮ್ ಕಣಿವೆ” ಎಂಬುದಾಗಿ ಕಂಡುಬರುವ ಸ್ಥಳದಲ್ಲಿ LXX ಭಾಷಾಂತರವು ಅದನ್ನು “ಗೆಹೆನ್ನ” ಎಂದು ಭಾಷಾಂತರಿಸಿದೆ. ಇದು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ 12 ಬಾರಿ ಕಂಡುಬರುತ್ತದೆ; ಮೊತ್ತಮೊದಲು ಅದು ಮತ್ತಾಯ 5:22 ರಲ್ಲಿ ಕಂಡುಬರುತ್ತದೆ. ಈ ಎಲ್ಲ ಸ್ಥಳಗಳಲ್ಲಿ ನೂತನ ಲೋಕ ಭಾಷಾಂತರವು ಅದನ್ನು “ಗೆಹೆನ್ನ” ಎಂಬುದಾಗಿ ತರ್ಜುಮೆಮಾಡುತ್ತದೆ. ಆ ಸ್ಥಳಗಳು ಯಾವುವೆಂದರೆ, ಮತ್ತಾಯ 5:22, 29, 30; 10:28; 18:9; 23:15, 33; ಮಾರ್ಕ 9:43, 45, 47; ಲೂಕ 12:5; ಯಾಕೋಬ 3:6.
ಹಿನ್ನೋಮ್ ಕಣಿವೆಯು ಪುರಾತನ ಯೆರೂಸಲೇಮಿನ ಪಶ್ಚಿಮ ಮತ್ತು ದಕ್ಷಿಣಕ್ಕೆ ಅಭಿಮುಖವಾಗಿದೆ. (ಯೆಹೋಶುವ 15:8; 18:16; ಯೆರೆಮೀಯ 19:2, 6) ಯೆಹೂದವನ್ನು ಆಳಿದ ತದನಂತರದ ಅರಸರ ಸಮಯದಲ್ಲಿ ಅದನ್ನು, ಯಾವ ವಿಧರ್ಮಿ ದೇವನಿಗೆ ಬೆಂಕಿಯ ಮೂಲಕ ಮಾನವ ಯಜ್ಞಗಳನ್ನು ಅರ್ಪಿಸಲಾಗುತ್ತಿತ್ತೋ ಆ ಮೋಲೆಕನ ವಿಗ್ರಹಾರಾಧನೆಗಾಗಿ ಉಪಯೋಗಿಸಲಾಗುತ್ತಿತ್ತು. (2 ಪೂರ್ವಕಾಲವೃತ್ತಾಂತ 28:3; 33:6; ಯೆರೆಮೀಯ 7:31, 32; 32:35) ಆ ಕಣಿವೆಯನ್ನು ಅಂಥ ಧಾರ್ಮಿಕ ಉದ್ದೇಶಗಳಿಗಾಗಿ ಪುನಃ ಉಪಯೋಗಿಸುವುದನ್ನು ತಡೆಗಟ್ಟಲಿಕ್ಕಾಗಿ ನಂಬಿಗಸ್ತ ಅರಸನಾದ ಯೋಷೀಯನು ಅದನ್ನು, ಮುಖ್ಯವಾಗಿ ತೋಫೆತ್ ಎಂಬ ಭಾಗವನ್ನು ಹೊಲೆಮಾಡಿದನು.—2 ಅರಸುಗಳು 23:10.
ಕೀರ್ತನೆ 27:13 ರ ಬಗ್ಗೆ ಹೇಳಿಕೆ ನೀಡುತ್ತಾ ಡೇವಿಡ್ ಕಿಮ್ಹೀ (1160?–1235?) ಎಂಬ ಯೆಹೂದಿ ವಿಮರ್ಶಕರು “ಗೆಹಿನ್ನೋಮ್” ಎಂಬ ಸ್ಥಳದ ಕುರಿತು ಈ ಐತಿಹಾಸಿಕ ಮಾಹಿತಿಯನ್ನು ಕೊಡುತ್ತಾರೆ: “ಅದು ಯೆರೂಸಲೇಮಿನ ಪಕ್ಕದಲ್ಲಿದ್ದ ಒಂದು ಸ್ಥಳವಾಗಿದೆ ಮತ್ತು ಹೇವರಿಕೆ ತರುವಂಥ ಸ್ಥಳವಾಗಿದೆ; ಅಲ್ಲಿ ಅವರು ಅಶುದ್ಧ ವಸ್ತುಗಳನ್ನು ಮತ್ತು ಹೆಣಗಳನ್ನು ಎಸೆಯುತ್ತಾರೆ. ಇದಲ್ಲದೆ, ಅಶುದ್ಧ ವಸ್ತುಗಳನ್ನು ಮತ್ತು ಹೆಣಗಳ ಎಲುಬುಗಳನ್ನು ದಹಿಸಲು ಅಲ್ಲಿ ಸತತವಾಗಿ ಬೆಂಕಿ ಉರಿಯುತ್ತಿತ್ತು. ಆದುದರಿಂದಲೇ ದುಷ್ಟ ಜನರ ನ್ಯಾಯತೀರ್ಪನ್ನು ದೃಷ್ಟಾಂತರೂಪವಾಗಿ ಗೆಹಿನ್ನೋಮ್ ಎಂದು ಕರೆಯಲಾಗಿದೆ.”
ಹಿನ್ನೋಮ್ ಕಣಿವೆಯು ಯೆರೂಸಲೇಮಿನ ಕಶ್ಮಲ ವಸ್ತುಗಳನ್ನು ಎಸೆಯುವ ಸ್ಥಳವೂ ದಹನಕುಂಡವೂ ಆಗಿ ಪರಿಣಮಿಸಿತು. ಬೆಂಕಿಯಲ್ಲಿ ದಹಿಸಲ್ಪಡುವಂತೆ ಸತ್ತ ಪ್ರಾಣಿಗಳ ದೇಹಗಳನ್ನು ಅದರೊಳಕ್ಕೆ ಎಸೆಯಲಾಗುತ್ತಿತ್ತು; ಆ ಬೆಂಕಿಯು ಉರಿಯುತ್ತಲೇ ಇರುವಂತೆ ಅದಕ್ಕೆ ಗಂಧಕ ಅಥವಾ ಬೆಂಕಿಯ ಉರುವಲನ್ನು ಸೇರಿಸಲಾಗುತ್ತಿತ್ತು. ಸ್ಮರಣೆಯ ಸಮಾಧಿಯಲ್ಲಿ ಯೋಗ್ಯವಾದ ಶವಸಂಸ್ಕಾರಕ್ಕೆ ಅನರ್ಹರೆಂದು ಪರಿಗಣಿಸಲ್ಪಟ್ಟಿದ್ದ ವಧಿಸಲ್ಪಟ್ಟ ದುಷ್ಕರ್ಮಿಗಳ ದೇಹಗಳನ್ನು ಸಹ ಅದರಲ್ಲಿ ಎಸೆಯಲಾಗುತ್ತಿತ್ತು. ಅಂಥ ಮೃತ ದೇಹಗಳು ಬೆಂಕಿಯಲ್ಲಿ ಬೀಳುತ್ತಿದ್ದಲ್ಲಿ ಅವು ದಹಿಸಿಹೋಗುತ್ತಿದ್ದವು, ಆದರೆ ಅವರ ಹೆಣಗಳು ಆ ಆಳವಾದ ಕಮರಿಯ ಬಂಡೆಚಾಚಿನ ಮೇಲೆ ಬೀಳುತ್ತಿದ್ದಲ್ಲಿ ಆ ಕೊಳೆತು ನಾರುವ ಮಾಂಸಕ್ಕೆ ಹುಳಬೀಳುತ್ತಿತ್ತು ಮತ್ತು ಆ ಹುಳಗಳು ಮಾಂಸಲ ಭಾಗಗಳನ್ನು ತಿಂದುಮುಗಿಸಿ ಬರೀ ಅಸ್ಥಿಪಂಜರವನ್ನು ಉಳಿಸುವ ತನಕ ಸಾಯುತ್ತಿರಲಿಲ್ಲ. ಆದುದರಿಂದ, ಒಬ್ಬನ ಮೃತ ದೇಹವನ್ನು ಗೆಹೆನ್ನಕ್ಕೆ ಎಸೆಯುವುದನ್ನು ಅತಿ ಕೀಳ್ಮಟ್ಟದ ಶಿಕ್ಷೆಯಾಗಿ ಪರಿಗಣಿಸಲಾಗುತ್ತಿತ್ತು. ಅಕ್ಷರಾರ್ಥಕ ಗೆಹೆನ್ನದಿಂದ ಮತ್ತು ಅದರ ಸೂಚಿತಾರ್ಥದಿಂದ ‘ಬೆಂಕಿಗಂಧಕಗಳಿಂದ ಉರಿಯುವ ಕೆರೆ’ ಎಂಬ ಸಾಂಕೇತಿಕ ವಿಚಾರವು ಬಂತು.—ಪ್ರಕಟನೆ 19:20; 20:10, 14, 15; 21:8.
ಜೀವದಿಂದಿರುವ ಯಾವುದೇ ಪ್ರಾಣಿಗಳನ್ನು ಅಥವಾ ಮನುಷ್ಯರನ್ನು ಜೀವಂತವಾಗಿ ದಹಿಸಲು ಅಥವಾ ಯಾತನೆಗೊಳಪಡಿಸಲು ಗೆಹೆನ್ನಕ್ಕೆ ಎಸೆಯಲಾಗುತ್ತಿರಲಿಲ್ಲ. ಆದುದರಿಂದ, ಈ ಸ್ಥಳವು ಮಾನವ ಪ್ರಾಣಗಳು ಅಕ್ಷರಾರ್ಥಕ ಬೆಂಕಿಯಲ್ಲಿ ನಿತ್ಯಕ್ಕೂ ಯಾತನೆಯನ್ನು ಅನುಭವಿಸುವ ಅಥವಾ ಸಾಯದಿರುವಂಥ ಹುಳಗಳಿಂದ ಸದಾಸರ್ವದಾ ದಾಳಿಯನ್ನು ಅನುಭವಿಸುವ ಒಂದು ಅದೃಶ್ಯ ಪ್ರದೇಶವನ್ನು ಎಂದಿಗೂ ಸಂಕೇತಿಸಸಾಧ್ಯವಿಲ್ಲ. ಅಲ್ಲಿಗೆ ಎಸೆಯಲಾಗುತ್ತಿದ್ದ ಮೃತ ದುಷ್ಕರ್ಮಿಗಳಿಗೆ ಸ್ಮರಣೆಯ ಸಮಾಧಿಯಲ್ಲಿ—ಪುನರುತ್ಥಾನದ ನಿರೀಕ್ಷೆಯನ್ನು ಸೂಚಿಸುವಂಥ ಸಂಕೇತ—ಯೋಗ್ಯವಾದ ಶವಸಂಸ್ಕಾರವು ನಿರಾಕರಿಸಲ್ಪಟ್ಟಿದ್ದ ಕಾರಣ, ಯೇಸು ಮತ್ತು ಅವನ ಶಿಷ್ಯರಿಂದ ನಿತ್ಯ ನಾಶನವನ್ನಾಗಲಿ ದೇವರ ವಿಶ್ವದಿಂದ ನಿರ್ಮೂಲನವನ್ನಾಗಲಿ ನಿತ್ಯ ಶಿಕ್ಷೆಯಾದ ‘ಎರಡನೆಯ ಮರಣವನ್ನಾಗಲಿ’ ಸಂಕೇತಿಸಲು ಗೆಹೆನ್ನ ಎಂಬ ಪದವು ಉಪಯೋಗಿಸಲ್ಪಟ್ಟಿತು.
ಇದೆಲ್ಲವು ಯೆಹೋವನ ಗುಣಗಳಾದ ನ್ಯಾಯ ಮತ್ತು ಪ್ರೀತಿಯೊಂದಿಗೆ ಸಹಮತದಲ್ಲಿದೆ.—ವಿಮೋಚನಕಾಂಡ 34:6, 7; 1 ಯೋಹಾನ 4:8 ನ್ನು ಹೋಲಿಸಿರಿ.