10 “ಹಳೆಯ ಒಡಂಬಡಿಕೆ” ಮತ್ತು “ಹೊಸ ಒಡಂಬಡಿಕೆ” ಎಂಬ ಅಭಿವ್ಯಕ್ತಿಗಳು
ಹೀಬ್ರು ಮತ್ತು ಆರಮೇಯಿಕ್ ಭಾಷೆಯಲ್ಲಿ ಬರೆಯಲ್ಪಟ್ಟ ಶಾಸ್ತ್ರಗ್ರಂಥವನ್ನು “ಹಳೆಯ ಒಡಂಬಡಿಕೆ” ಎಂದು ಸಂಬೋಧಿಸುವುದು ಇಂದು ಸರ್ವಸಾಮಾನ್ಯ ರೂಢಿಯಾಗಿದೆ. ಇದು 2 ಕೊರಿಂಥ 3:14 ರಲ್ಲಿರುವ ವಚನದ ಓದುವಿಕೆಯ ಮೇಲೆ ಆಧರಿತವಾಗಿದೆ. ಆ ವಚನವು “ಅವರ ಮಾನಸಿಕ ಶಕ್ತಿಯು ಕುಂದಿಹೋಗಿತ್ತು. ಈ ದಿನದ ವರೆಗೂ ಹಳೆಯ ಒಡಂಬಡಿಕೆಯು ಓದಲ್ಪಡುವಾಗ ಅದೇ ಮುಸುಕು ಎತ್ತಲ್ಪಡದೆ ಇರುತ್ತದೆ, ಏಕೆಂದರೆ ಅದು ಕ್ರಿಸ್ತನ ಮೂಲಕ ತೆಗೆದುಹಾಕಲ್ಪಡುತ್ತದೆ” ಎಂದು ತಿಳಿಸುತ್ತದೆ.
ಆದರೆ ಇಲ್ಲಿ ಅಪೊಸ್ತಲ ಪೌಲನು ಹೀಬ್ರು ಮತ್ತು ಆರಮೇಯಿಕ್ ಭಾಷೆಯಲ್ಲಿ ಬರೆಯಲ್ಪಟ್ಟ ಶಾಸ್ತ್ರಗ್ರಂಥವನ್ನು ಒಟ್ಟಾಗಿ ಸೂಚಿಸಿ ಮಾತಾಡುತ್ತಿಲ್ಲ. ಇಲ್ಲವೆ ಪ್ರೇರಿತ ಕ್ರೈಸ್ತ ಬರಹಗಳು “ಹೊಸ ಒಡಂಬಡಿಕೆ”ಯಾಗಿವೆ ಎಂಬುದೂ ಅವನ ಮಾತುಗಳ ಅರ್ಥವಲ್ಲ. ಅಪೊಸ್ತಲ ಪೌಲನು ಪೆಂಟಟ್ಯೂಕ್ನಲ್ಲಿ ಮೋಶೆಯಿಂದ ದಾಖಲಿಸಲ್ಪಟ್ಟಿದ್ದ ಮತ್ತು ಕ್ರೈಸ್ತಪೂರ್ವ ಶಾಸ್ತ್ರಗ್ರಂಥದ ಒಂದು ಭಾಗ ಮಾತ್ರವೇ ಆಗಿರುವ ಹಳೆಯ ಧರ್ಮಶಾಸ್ತ್ರದ ಒಡಂಬಡಿಕೆಯ ಕುರಿತು ಮಾತಾಡುತ್ತಿದ್ದಾನೆ. ಈ ಕಾರಣದಿಂದಲೇ ಮುಂದಿನ ವಚನದಲ್ಲಿ ಅವನು, “ಮೋಶೆಯ ಗ್ರಂಥವು ಓದಲ್ಪಡುವಾಗಲೆಲ್ಲ” ಎಂದು ತಿಳಿಸುತ್ತಾನೆ.
ಆದುದರಿಂದ, ಹೀಬ್ರು ಮತ್ತು ಆರಮೇಯಿಕ್ ಶಾಸ್ತ್ರಗ್ರಂಥವನ್ನು “ಹಳೆಯ ಒಡಂಬಡಿಕೆ” ಎಂದು ಕರೆಯುವುದಕ್ಕೂ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥವನ್ನು “ಹೊಸ ಒಡಂಬಡಿಕೆ” ಎಂದು ಕರೆಯುವುದಕ್ಕೂ ಸಮಂಜಸವಾದ ಯಾವುದೇ ಆಧಾರವಿಲ್ಲ. ಸ್ವತಃ ಯೇಸು ಕ್ರಿಸ್ತನೇ ಪವಿತ್ರ ಬರಹಗಳ ಸಂಗ್ರಹವನ್ನು “ಶಾಸ್ತ್ರಗ್ರಂಥ” ಎಂದು ಸಂಬೋಧಿಸಿ ಮಾತಾಡಿದನು. (ಮತ್ತಾಯ 21:42; ಮಾರ್ಕ 14:49; ಯೋಹಾನ 5:39) ಅಪೊಸ್ತಲ ಪೌಲನು ಅವುಗಳನ್ನು “ಪವಿತ್ರ ಶಾಸ್ತ್ರಗ್ರಂಥ,” “ಶಾಸ್ತ್ರಗ್ರಂಥ” ಮತ್ತು “ಪವಿತ್ರ ಬರಹಗಳು” ಎಂದು ಸಂಬೋಧಿಸಿ ಮಾತಾಡಿದನು. (ರೋಮನ್ನರಿಗೆ 1:2; 15:4; 2 ತಿಮೊಥೆಯ 3:15) ಆದುದರಿಂದ “ಹೀಬ್ರು ಶಾಸ್ತ್ರಗ್ರಂಥ” ಮತ್ತು “ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥ” ಎಂಬ ಹೆಚ್ಚು ಸೂಕ್ತವಾದ ಪದಗಳನ್ನು ಉಪಯೋಗಿಸಲು ಸಮಂಜಸವಾದ ಕಾರಣಗಳು ಇವೆ.