ತಾಜ್ ಮಹಲ್ ಪ್ರೇಮದ ಸ್ಮಾರಕ
ಇದನ್ನು ಒಂದು ನಾಜೂಕಾದ ಆಭರಣದಂತೆ, ಕಲ್ಲಿನ ಮೇಲಿನ ಒಂದು ಪ್ರೇಮದ ಸಂಗೀತದಂತೆ, ತನ್ನ ಮೃತ ಪತ್ನಿಗಾಗಿ ಪ್ರಲಾಪಿಸುವ ಗಂಡನ ಮನೋಹರ ಸಮಾಧಿಲೇಖವೆಂದು ವಿವರಿಸಲಾಗಿದೆ.
ಉತ್ತರ ಭಾರತದ ದಿಲ್ಲಿಯಿಂದ ಸುಮಾರು ನೂರು ಮೈಲುಗಳಷ್ಟು ಪೂರ್ವದಲ್ಲಿ ಆಗ್ರಾ ಎಂಬ ಪಟ್ಟಣವಿದೆ. ಅಲ್ಲಿ ಮುಸ್ಲಿಮರ ಪಾರಿತೋಷಕ ವಾಸ್ತುಶಿಲ್ಪದ ಕೃತಿ — ತಾಜ್ ಮಹಲ್ ನಿಂತಿದೆ. ಬಿಳಿ ಚಂದ್ರಕಾಂತ ಶಿಲೆಯಿಂದ ಟರ್ಕಿಯ ಶಿಲ್ಪಿಯು ಕಟ್ಟಿದ ಈ ಸುಂದರ ಕಟ್ಟಡವು 1631ರಲ್ಲಿ ಮೃತಳಾದ ತನ್ನ ನೆಚ್ಚಿನ ಪತ್ನಿ, ಮುಮ್ತಾಜ್ ಮಹಲ್‌ಳಿಗಾಗಿ, ಶಾಹ ಜಹಾನ್‌ನ ಪ್ರೀತಿಯ ಸ್ಮಾರಕವಾಗಿ ನಿಂತಿದೆ. ಈ ಸಮಾಧಿಯನ್ನು ಕಟ್ಟಲು ಸುಮಾರು 20 ವರ್ಷಗಳು ತಗಲಿದವು ಮತ್ತು 20,000 ಕೆಲಸದವರು ಒಳಗೂಡಿದ್ದರು.
133 ಅಡಿ ಎತ್ತರಕ್ಕೆ ನಿಂತ ತೆಳ್ಳನೆಯ ಸ್ತಂಭಗೋಪುರದಲ್ಲಿ ಮತ್ತು ಕುರಾನಿನ ವಚನಗಳಿಂದ ಅಲಂಕೃತವಾದ ಹೊರಗೋಡೆಗಳಿಂದ ಮುಸ್ಲಿಮರ ಪ್ರಭಾವವು ಸ್ಪಷ್ಟವಾಗಿ ಎದ್ದುತೋರುತ್ತದೆ. ಪ್ರಶಾಂತ ಕೊಳವು ವಿಶೇಷವಾಗಿ ಹುಣ್ಣಿಮೆಯಲ್ಲಿ ಅಥವಾ ಸೂರ್ಯನ ಉದಯಿಸುವಿಕೆ ಮತ್ತು ಅಸ್ತಮಿಸುವಿಕೆಯಿಂದ ಸಮಾಧಿಗೆ ಆಕರ್ಷಕ ಪ್ರತಿಬಿಂಬವನ್ನು ಪ್ರಕಾಶಿಸುತ್ತದೆ.
ತನ್ನ ಪತ್ನಿಗಾಗಿ ಶಾಹನ ಆಳವಾದ ಪ್ರೀತಿಯು, ಶೂಲೇಮಿನ ಕುರಿಕಾಯುವ ಹುಡುಗಿಯಿಂದ ಪಡೆಯಲು ನಿಷ್ಫಲಗೊಂಡ ರಾಜನಾದ ಸೊಲೊಮೋನನ ಪ್ರೀತಿಯ ಮಾತುಗಳನ್ನು ನೆನಪಿಸುವಂತೆ ಮಾಡುತ್ತದೆ. ಇದನ್ನು ಬೈಬಲಿನ ಪರಮಗೀತದಲ್ಲಿ ಓದುತ್ತೇವೆ. (g89 11/8)