ಬದಲಾಯಿಸಿಕೊಳ್ಳಲು ಅತ್ಯುತ್ತಮವಲ್ಲದ ಮಾರ್ಗಗಳು
ನಡತೆಯ ಮಾದರಿಗಳು ಒಮ್ಮೆ ಸ್ಥಾಪಿತವಾಗುವಲ್ಲಿ ಹೇಗೆ ಬದಲಾವಣೆ ಮಾಡಸಾಧ್ಯವಿದೆ? ನೀವು ಯಾರ ಬಳಿಗೆ ತೆರಳಬಹುದು, ಮತ್ತು ಬಾಳಿಕೆ ಬರುವ ಅಭಿವೃದ್ಧಿಯನ್ನು ಹೊಂದಬೇಕಾದರೆ ಯಾವ ವಿಧಾನಗಳನ್ನು ಉಪಯೋಗಿಸಬಹುದು?
ನಾವು ಇಂದು ಉಪಯೋಗಿಸಲ್ಪಡುತ್ತಿರುವ ಕೆಲವು ವಿಪರೀತ ಕ್ರಮಗಳನ್ನು ಪರಿಗಣಿಸೋಣ.
ರಾಜಕೀಯ ಒತ್ತಡ
ಇಂದು ಕೋಟಿಗಟ್ಟಲೆ ಜನರು ವಿಚಾರ ಮತ್ತು ನಡತೆಗಳನ್ನು ನಿಯಂತ್ರಿಸಲು ಪ್ರಯತ್ನಿಸುವ ಸರಕಾರಗಳ ಕೆಳಗೆ ಜೀವಿಸುತ್ತಾರೆ. ಇಂಥ ಸರಕಾರಗಳು ಬದಲಾಯಿಸಲು ತಮ್ಮ ಶಕ್ತಿಯನ್ನು—ಕೆಲವು ಸರಕಾರಗಳು ಜಾಣತನದಿಂದ, ಇನ್ನು ಕೆಲವು ಬಲಾತ್ಕಾರದಿಂದ ಉಪಯೋಗಿಸುತ್ತವೆ. ಕೆಲವು ಸರಕಾರಗಳು ಅನೇಕ ವೇಳೆ ಭಯ, ಸೆರೆಮನೆ, ಮತ್ತು ಯಾತನೆ ಒಳಗೊಂಡಿರುವ ಮಿದುಳು ತೊಳೆಯುವ ವಿಧಾನಗಳನ್ನು ಉಪಯೋಗಿಸುತ್ತವೆ. ವಾರ್ತಾ ಮಾಧ್ಯಮ ಮತ್ತು ಶಿಕ್ಷಣ ಪದ್ದತಿಗಳನ್ನು ನಿಯಂತ್ರಿಸುತ್ತಾ, ಅವು ಮೊದಲು ರೂಢಿಯಲ್ಲಿದ್ದ ಎಲ್ಲ ಭಾವನೆಗಳನ್ನು ಈಗ ಆಳುವ ವರ್ಗದವರು ಅಪೇಕ್ಷಿಸುವ ವಿಷಯಗಳಿಂದ ಭರ್ತಿ ಮಾಡುತ್ತಾರೆ. ಎಲ್ಲ ಭಿನ್ನಾಭಿಪ್ರಾಯಗಳು ಬಲಾತ್ಕಾರದಿಂದ ರದ್ದುಮಾಡಲ್ಪಡುತ್ತವೆ. ಇಂಥ ಪುನರ್ಶಿಕ್ಷಣಕ್ಕೆ ಇಷ್ಟಪಡದಿರುವವನನ್ನು ಅನೇಕ ವೇಳೆ ಅವನ ಹುಮ್ಮಸ್ಸನ್ನು ಮುರಿಯುವ ಭಯಂಕರ ವ್ಯವಹಾರಕ್ಕೆ ಒಳಪಡಿಸಲಾಗುತ್ತದೆ.
ಮನೋಶಸ್ತ್ರಚಿಕಿತ್ಸೆ ಮತ್ತು ವಿದ್ಯುತ್ ಪ್ರಚೋದನೆ
ನಿರ್ದಿಷ್ಟ ಮನೋವೃತ್ತಿ ಮತ್ತು ವರ್ತನಾರೂಪಗಳ ಮೇಲೆ ಮಿದುಳಿನ ಕೆಲವು ಭಾಗಗಳು ಪರಿಣಾಮ ಬೀರುತ್ತವೆಂದು ಗುರುತಿಸಲಾಗಿದೆ. ಮನೋಶಸ್ತ್ರಚಿಕಿತ್ಸೆಯಲ್ಲಿ, ಮಿದುಳಿನ ಆ ಭಾಗದಿಂದ ಮಿದುಳು ಅಂಗಾಂಶಗಳ ತೆಗೆಯುವಿಕೆ ಯಾ ನಾಶಮಾಡುವಿಕೆಯು ಸೇರಿದೆ. ಇದನ್ನು ತೆಗೆದಾಗ, ಮಿದುಳಿನ ಆ ಭಾಗ ಇನ್ನೆಂದಿಗೂ ಕೆಲಸ ಮಾಡದು, ಮತ್ತು ಅದು ಪ್ರಭಾವಿಸಿದ ವರ್ತನೆ ಆ ಮೇಲೆ ಕಾಣದೆ ಹೋಗುತ್ತದೆ.
ಇಂಥ ಅನೇಕ ಸಹಸ್ರ ಶಸ್ತ್ರ ಚಿಕಿತ್ಸೆಗಳನ್ನು, ವಿಶೇಷವಾಗಿ ವಕ್ರ ಹಾಗೂ ಅಪಾಯಕಾರಿ ಲೈಂಗಿಕ ನಡತೆಯವರ ಮೇಲೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಕೆಲವರಿಗೆ ಅವರ ಮಿದುಳಿನಲ್ಲಿ ಆಳವಾಗಿ ಚಿಕ್ಕ ಇಲೆಕ್ಟ್ರಾಡ್ ವಿದ್ಯುತ್ಧ್ರುವಗಳನ್ನು ತೂರಿಸಲಾಗುತ್ತಿತ್ತು, ಮತ್ತು ಅವುಗಳಿಗೆ ವಿದ್ಯುತ್ತನ್ನು ಹರಿಸಿದಾಗ ಅದು ಆ ಕ್ಷೇತ್ರದ ಮಿದುಳಿನ ಚಟುವಟಿಕೆಯನ್ನು ಉದ್ರೇಕಿಸಿತು ಅಥವಾ ತಡೆಯಿತು. ಇದು, ಮಿದುಳಿನ ಆ ಭಾಗವು ನಿಯಂತ್ರಿಸುವ ವರ್ತನೆಯ ಮೇಲೆ ಪರಿಣಾಮ ಬೀರುವ ಚಾಲಕ ಬಲವನ್ನು ಬದಲಾಯಿಸುತ್ತದೆಂದು ಹೇಳಲಾಗುತ್ತದೆ.
ಔಷಧಗಳು
ಮನೋರೋಗ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುವ ಔಷಧಗಳು ಬಹು ವ್ಯಾಪಕವಾಗಿದ್ದು ಅನೇಕ ವೇಳೆ ಅಗತ್ಯವಾಗಿವೆ. ಶಾಂತಗೊಳಿಸುವ ಔಷಧ, ನಿದ್ದೆ ಬರಿಸುವ ಔಷಧ, ಹುರಿದುಂಬಿಸುವ ಔಷಧ ಮತ್ತು ಮಿದುಳಿನ ರಾಸಾಯನಿಕ ಅಸಮತೆಯನ್ನು ಸರಿಪಡಿಸುವ ಔಷಧಗಳಿವೆ. ಸೆರೆಮನೆಗಳಲ್ಲಿ ಮತ್ತು ಇತರ ಶಿಕ್ಷಾಗೃಹಗಳಲ್ಲಿ ಉಪಯೋಗಿಸಲಾಗಿರುವ ಶಿಕ್ಷಾರೂಪದ ಔಷಧಗಳೂ ಇವೆ. ಆ್ಯಪೊಮಾರ್ಫಿನ್ ಮತ್ತು ಆನೆಕ್ಟೀನ್ ಎಂಬವು ಇವುಗಳಲ್ಲಿ ಎರಡು.
ಆ್ಯಪೊಮಾರ್ಫಿನನ್ನು ಅಸ್ವೀಕಾರಾರ್ಹ ನಡತೆಯವರೆಂದೆಣಿಸಲಾಗಿದ್ದ ಕೈದಿಗಳಿಗೆ ಕೊಡಲಾಗಿದೆ. ಅದು ತೀವ್ರ ಪಿತ್ತೋದ್ರೇಕ ಮತ್ತು ಕಾರುವ ಸ್ಥಿತಿಯನ್ನು ಉಂಟುಮಾಡುತ್ತದೆ. ಇನ್ನೊಮ್ಮೆ ಕೆಟ್ಟ ವರ್ತನೆಯಿರುವಲ್ಲಿ ಪುನಃ ಆ್ಯಪೊಮಾರ್ಫಿನ್ ಕೊಡಲಾಗುವುದೆಂದು ಆ ಕೈದಿಗೆ ಹೇಳಲಾಗುತ್ತದೆ. ಇದಕ್ಕೆ ಹೇವರಿಕೆ ಚಿಕಿತ್ಸೆಯೆಂದೂ ಹೆಸರಿದೆ. ಆ್ಯನೆಕ್ಟಿನ್ ಕೆಟ್ಟ ವರ್ತನೆಯ ಕೈದಿಗೆ ಉಬ್ಬಸ ಮತ್ತು ಉಸಿರುಕಟ್ಟುವ ಅನಿಸಿಕೆಯನ್ನು ಬರಿಸುತ್ತದೆ. ತಾನು ಸಾಯುತ್ತೇನೆಂದು ಅವನು ನೆನಸುತ್ತಾನೆ. ಅವನು ಪುನಃ ಕೆಟ್ಟದಾಗಿ ವರ್ತಿಸುವಲ್ಲಿ ಅವನಿಗೆ ಹೆಚ್ಚು ಆ್ಯನಕ್ಟಿನ್ ಕೊಡಲಾಗುತ್ತದೆ.
ನಿಮ್ಮ ವರ್ತನಾ ನಮೂನೆಯನ್ನು ಬದಲಾಯಿಸಲು ನೀವು ಈ ವಿಧಗಳನ್ನು ಉಪಯೋಗಿಸುವಿರೊ?
ಈ ಮೇಲಿನ ವಿಧಗಳಲ್ಲಿ ಹೆಚ್ಚಿನವು ಇಚ್ಫಾ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತವೆ. ಒಬ್ಬನ ಮೇಲೆ ಅಧಿಕಾರದಲ್ಲಿರುವ ಜನರಿಗೆ, ಸದಾ ಅವನ ಹಿತ ಬಯಸದಿದ್ದರೂ ಇರುವ ಪ್ರಭಾವವೂ ಇದರಲ್ಲಿ ಸೇರಿದೆ. ರಾಜಕೀಯ ಶಕ್ತಿಯು ತನ್ನ ಪ್ರಯೋಜನವನ್ನು ಹುಡುಕುತ್ತದೊ, ಆ ವ್ಯಕ್ತಿಯದ್ದನ್ನೊ? ಮನೋಶಸ್ತ್ರಚಿಕಿತ್ಸೆಯಲ್ಲಿ ವೈದ್ಯಚೂರಿಯನ್ನು ಹಿಡಿಯುವವರು ಯಾರು? ವಿದ್ಯುತ್ ಪ್ರಚೋದನೆಯನ್ನು ಉಪಯೋಗಿಸುವಾಗ ಸ್ವಿಚ್ ಯಾರ ನಿಯಂತ್ರಣದಲ್ಲಿದೆ? ಹೇವರಿಕೆ ಚಿಕಿತ್ಸೆ ಎಷ್ಟು ಕಾಲ ಬಾಳುತ್ತದೆ? ಚಿಕಿತ್ಸಕನು ಭರವಸಯೋಗ್ಯನೆ?
ನಾವೀಗ ಇನ್ನೊಂದು ಹೆಚ್ಚು ಸ್ವೀಕಾರಾರ್ಹ ವಿಧಾನವನ್ನು ಪರಿಗಣಿಸೋಣ. (g91 7/8)