ನೀವು ಏನಾಗಿದ್ದೀರೊ ಅದನ್ನು ಬದಲಾಯಿಸಬಹುದಾದ ವಿಧ
ಆಗಲೇ ಚರ್ಚಿಸಿರುವ ನಡತೆಯ ಸ್ಥಾಪನೆ ಮತ್ತು ಬದಲಾವಣೆಗಳ ವಿಧಾನಗಳಿಂದ ಯಾವುದು ಕಾಣೆಯಾಗಿದೆ? ಒಬ್ಬ ವ್ಯಕ್ತಿಯ ಸ್ವಂತ ಇಚ್ಫೆ ಮತ್ತು ಮನಶ್ಶಕ್ತಿಯ ಉಪಯೋಗವೇ! ತಿಳಿವಳಿಕೆಯ ವ್ಯಕ್ತಿಪರವಾದ ಆಯ್ಕೆಯಿಂದ ಸ್ವಯಂ ಶಕ್ತಿಯ ಉಪಯೋಗವಾಗಿದೆ. ಚುಟುಕಾಗಿ ಹೇಳುವುದಾದರೆ, ಅವನ ಆತ್ಮ ನಿಯಂತ್ರಣ ಕಾಣೆಯಾಗಿದೆ!
ಚಿಕಿತ್ಸೆ ನೀಡಲ್ಪಡುವವನು ತನ್ನ ಸ್ವಂತ ನಡತೆಯ ಗುರಿಗಳನ್ನು ಇಡುವ ನಿರ್ಣಯವನ್ನು ಮಾಡುವಲ್ಲಿ ಹೆಚ್ಚು ಕಾಲ ಬಾಳಿಕೆಯ ಪರಿಣಾಮವನ್ನು ಪಡೆಯುವ ಹೆಚ್ಚು ಅವಕಾಶವಿದೆಯೆಂದು ನಡತೆ ಚಿಕಿತ್ಸಕರು ಕಂಡುಹಿಡಿದಿದ್ದಾರೆ. ದ ಪೀಪ್ಲ್ ಷೇಪರ್ಸ್ ಎಂಬ ಪುಸ್ತಕದಲ್ಲಿ ವ್ಯಾನ್ಸ್ ಪ್ಯಾಕರ್ಡ್ ಬರೆಯುವುದು: “ಸ್ವಲ್ಪ ಸಲಹೆ ಸಿಗುವಲ್ಲಿ, ಯಾವ ಸಾಧಾರಣ ಜಾಣ ವ್ಯಕ್ತಿಯೂ ಈಗ ತನ್ನ ಸ್ವಂತ ನಡತೆಯನ್ನು ತುಸು ಬದಲಾಯಿಸಬಲ್ಲನೆಂಬುದು ಸ್ಪಷ್ಟ.” ಇದನ್ನು ಆತ್ಮ ನಿರ್ವಹಣೆಯೆಂದು ಕರೆಯಲಾಗುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಸ್ವಲ್ಪ ಆತ್ಮ ನಿಯಂತ್ರಣ ಪ್ರಯೋಗಿಸಲ್ಪಟ್ಟಿರುವಲ್ಲಿ ಎದ್ದು ಕಾಣುವ ಅಭಿವೃದ್ಧಿಯನ್ನು ಗಮನಿಸಲಾಗಿದೆ.
ಆತ್ಮ ನಿಯಂತ್ರಣ ಅವಶ್ಯವಿರುವ ಸಂದರ್ಭಗಳಲ್ಲಿ ಕ್ರೈಸ್ತರು ಅನುಕೂಲ ಸ್ಥಾನದಲ್ಲಿದ್ದಾರೆ. ಏಕೆಂದರೆ ಅವರು ಇದನ್ನು ದೇವರ ಪವಿತ್ರಾತ್ಮದ ಒಂಭತ್ತು ಫಲಗಳಲ್ಲಿ ಒಂದಾಗಿ ಪ್ರಯೋಗಿಸಲು ಕಲಿತಿದ್ದಾರೆ. (ಗಲಾತ್ಯ 5:22, 23.) ಇದರ ಅರ್ಥವು, ಸರ್ವಶಕ್ತನಾದ ದೇವರ ಕ್ರಿಯಾಶೀಲ ಶಕ್ತಿಯನ್ನು ನಿಮ್ಮ ನಡತೆಯ ಬದಲಾವಣೆಗೆ ಪ್ರಯೋಗಿಸಸಾಧ್ಯವಿದೆ ಮತ್ತು ಅದು ನೀವು ಜಯಿಸುವಂತೆ ಸಹಾಯ ಮಾಡಬಲ್ಲದು.
ಹಾಗಾದರೆ, ನಿಮ್ಮ ನಡತೆಯ ಕುರಿತು ನೀವೇನು ಮಾಡಲು ಬಯಸುತ್ತೀರಿ? ನಿಜವಾಗಿಯೂ ಬದಲಾಗುವ ಮನಸ್ಸು ನಿಮಗಿದೆಯೆ? ಇರುವಲ್ಲಿ, ಯಾವುದರಿಂದ? ಯಾವುದಕ್ಕೆ? ಮತ್ತು ಏಕೆ? ನಿಮ್ಮ ಸ್ವಂತ ನಿಯಂತ್ರಣದಲ್ಲಿ ನಿಮಗೆ ಭರವಸವಿದೆಯೆ? ಕೇವಲ ಪ್ರಯೋಜನಗಳನ್ನು ಮಾತ್ರ ಒದಗಿಸುವ ಸಹಾಯವನ್ನು ನೀವೆಲ್ಲಿ ಕಂಡುಕೊಳ್ಳಬಲ್ಲಿರಿ?
ನಾವೀಗ ವರ್ತನಾ ನಮೂನೆಗಳನ್ನು ಬದಲಾಯಿಸಲು ಇರುವ ಕೆಲವು ವಿಧಾನಗಳನ್ನೂ ಘಟಕಾಂಶಗಳನ್ನೂ ನೋಡೋಣ.
ಹೆಜ್ಜೆ 1: ನೀವು ವಾಸ್ತವವಾಗಿ ಏನಾಗಿದ್ದೀರೆಂದು ಕಂಡುಹಿಡಿಯಿರಿ
ನೀವು ಏನಾಗಬೇಕೆಂದಿದ್ದೀರೊ ಅದಕ್ಕೆ ನೀವೇ ಕಚ್ಚಾ ಪದಾರ್ಥ. ಹಳೆಯ ನಿಮ್ಮನ್ನು ಹೊಸದಾಗಿರುವ ನೀವಾಗಿ ಕಟ್ಟಬೇಕು. ಆದುದರಿಂದ, ನಿಮಗೆ ನಿಮ್ಮ ನಿಷ್ಕೃಷ್ಟ ಪರಿಚಯವಿರಬೇಕು. ನಿಮ್ಮ ನಡತೆಯ ಯಾವ ಭಾಗ ಬದಲಾಗಬೇಕೆಂದು ನೀವು ನಿರೂಪಿಸಬಹುದೊ?
ನಿಮ್ಮ ಸ್ವಂತ ನಡತೆಯ ಮೌಲ್ಯಮಾಪನ ಕಷ್ಟಕರವಾಗಿರುವುದರಿಂದ, ನಿಮಗೊಂದು ಗೌರವಪೂರ್ಣ ಮತ್ತು ವಿಶ್ವಾಸಯೋಗ್ಯ ಮಟ್ಟವು ಅಗತ್ಯ. ಇದಕ್ಕೆ ಪವಿತ್ರ ಬೈಬಲನ್ನು ಶಿಫಾರಸು ಮಾಡಲಾಗುತ್ತದೆ. ಬೈಬಲನ್ನು ಉಪಯೋಗಿಸುವಲ್ಲಿ, ಹಿಂದೆಂದೂ ನೋಡಿದ್ದಿರದ ನಿಮ್ಮ ಸ್ವಂತ ನೋಟ ನಿಮಗೆ ಕಾಣಸಿಗುವುದು. ನಿಮ್ಮ ಪ್ರತಿಬಿಂಬ ನಿಮಗೆ ಇಷ್ಟವಾಗಿರಲಿಕ್ಕಿಲ್ಲವಾದರೂ ಅದು ನಿಷ್ಕೃಷ್ಟ ಸ್ವರೂಪವೆಂಬುದು ಖಾತ್ರಿ.
ಬೈಬಲನ್ನು ದರ್ಪಣಕ್ಕೆ ಹೋಲಿಸಲಾಗಿದೆ, ಮತ್ತು ಜನರು ಇದರೊಳಗೆ ಇಣಿಕಿ ನೋಡುವಂತೆ ಪ್ರೋತ್ಸಾಹಿಸಲ್ಪಡುತ್ತಾರೆ. “ಯಾವನಾದರೂ ವಾಕ್ಯವನ್ನು ಕೇಳುವವನಾದರೂ ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಹುಟ್ಟುಮುಖವನ್ನು ನೋಡಿದ ಮನುಷ್ಯನಂತಿರುವನು. ಇವನು ತನ್ನನ್ನು ನೋಡಿಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತು ಬಿಡುವನು. ಆದರೆ ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು ವಾಕ್ಯವನ್ನು ಕೇಳಿ ಮರೆತು ಹೋಗುವವನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ನಡತೆಯಿಂದ ಧನ್ಯನಾಗುವನು.” (ಯಾಕೋಬ 1:23-25) ಯೋಗ್ಯವಾಗಿ ತಿಳಿವಳಿಕೆ ಪಡೆದು ಉಪಯೋಗಿಸಲ್ಪಡುವ ಬೈಬಲಿಗೆ ಆಳವಾದ, ಹರಿತ ವಿಶೇಷ್ಲಣ ಶಕ್ತಿಯಿದೆ. ಅದು ವ್ಯಕ್ತಿಯಾಗಿರುವ ನಿಮ್ಮನ್ನು ತೋರಿಸುವುದು ಮಾತ್ರವಲ್ಲ, ನಿಮ್ಮ ಪ್ರೇರಕ ಶಕ್ತಿ ಮತ್ತು ಮನೋಭಾವವನ್ನೂ ಬಯಲುಪಡಿಸುತ್ತದೆ. ಆದುದರಿಂದ ಪೌಲನು ಬರೆದುದು: “ಯಾಕಂದರೆ ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, . . . ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” ದೇವರು ವಾಕ್ಯವು ಇನ್ನೂ ಆಳವಾಗಿ ಹೋಗಿ, ಯಾವುದು ನಿಜವಾಗಿಯೂ ಸರಿ, ಯಾವುದು ನಿಜವಾಗಿಯೂ ತಪ್ಪು ಎಂಬುದಕ್ಕೆ ಮಾರ್ಗದರ್ಶನವನ್ನು ಒದಗಿಸುತ್ತದೆ.—ಇಬ್ರಿಯ 4:12; 5:14.
ಬೈಬಲಿಗೆ ಇದೆಲ್ಲವನ್ನು ನಿಮ್ಮ ಪರವಾಗಿ ಮಾಡಸಾಧ್ಯವಿರುವುದು ಅದು ಗ್ರಹಿಕೆಯ ಸತ್ಯದೇವರಾದ ಯೆಹೋವನ ವಾಕ್ಯವಾಗಿರುವುದರಿಂದಲೆ. ಕೀರ್ತನೆ 139ಕ್ಕನುಸಾರ, ದೇವರು ನಿಮ್ಮನ್ನು ಆದ್ಯಂತವಾಗಿ ಪರೀಕ್ಷಿಸಿ ನೀವೇನಾಗಿದೀರ್ದೆಂಬ ನಿಷ್ಕೃಷ್ಟ ವಿಶೇಷ್ಲಣೆಯನ್ನು ಮಾಡುತ್ತಾನೆ. 1ನೆಯ ವಚನ ತಿಳಿಸುವಂತೆ: “ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ.” ದೇವರು ನಿಮ್ಮನ್ನು ಗರ್ಭಧಾರಣೆಯ ಸಮಯದಿಂದ ಪರೀಕ್ಷಿಸುತ್ತಿದ್ದಾನೆ. ಆತನಿಗೆ ನಿಮ್ಮ ಆದ್ಯಂತ ಪರಿಚಯವಿದೆ. ಆತನು ಬೈಬಲಿನಲ್ಲಿ ಸಾಧ್ಯವಿರುವ ಸಕಲ ಸಂಯೋಜನೆಗಳಲ್ಲಿ ಮಾನವ ಜೀವದ ಕುರಿತು ವ್ಯಾಖ್ಯಾನಗಳನ್ನು ಬರೆಯಿಸಿ ಇಟ್ಟಿದ್ದಾನೆ. ಅದರ ಪುಟಗಳಲ್ಲಿ ನಿಮ್ಮ ಪ್ರತಿಬಿಂಬ—ಸಕಾರಾತ್ಮಕವಾಗಲಿ ನಕಾರಾತ್ಮಕವಾಗಲಿ—ಒಂದಲ್ಲ ಒಂದು ಕಡೆಯಲ್ಲಿದೆ ಎಂದು ನೀವು ಕಂಡುಕೊಳ್ಳುವಿರಿ.
ಹೀಗೆ, ನಿಮಗೆ ಇಷ್ಟವಿರುವಲ್ಲಿ ನೀವು ನಿಜವಾಗಿಯೂ ಯಾರು ಎಂದು ಕಂಡುಕೊಳ್ಳಬಲ್ಲಿರಿ.
ಹೆಜ್ಜೆ 2: ನೀವು ಏನಾಗಬೇಕೆಂದಿದ್ದೀರಿ ಎಂದು ನಿರ್ಣಯಿಸಿರಿ
ನೀವು ಬದಲಾಗುವಲ್ಲಿ, ಆ ಬದಲಾವಣೆ ಸಾರ್ಥಕವೆಂಬ ಖಾತ್ರಿ ನಿಮಗಿರಲಿ. ಅದು ನಿಮ್ಮ ಬಯಕೆ ಮತ್ತು ಈಗ ನಿಮ್ಮಲ್ಲಿರುವುದಕ್ಕಿಂತ ಅದು ಒಳ್ಳೆಯದೆಂಬ ಖಾತ್ರಿಯೂ ನಿಮಗಿರಲಿ. ಯಾವ ಸುಧಾರಿತ ನಡತೆಯ ಗುರಿಗಳನ್ನು ನೀವಿಡಬೇಕು? ಅಪೇಕ್ಷಣೀಯ ಸ್ವಭಾವ ಲಕ್ಷಣಗಳ ಮೇಲೆ ಸಮರ್ಪಕವಾದ ಬುದ್ಧಿವಾದ ನಿಮಗೆ ಎಲ್ಲಿ ದೊರೆಯುವುದು? ಪುನಃ, ಇದಕ್ಕೆ ಬೈಬಲನ್ನು ಶಿಫಾರಸು ಮಾಡಲಾಗುತ್ತದೆ.
ಬೈಬಲು, ನೀವು ಉತ್ತಮಗೊಳ್ಳುವಂತೆ, “ನೂತನ ವ್ಯಕ್ತಿತ್ವ”ವನ್ನು ಧರಿಸುವಂತೆ ಪ್ರೋತ್ಸಾಹ ನೀಡುತ್ತದೆ. ಪೌಲನು ಬುದ್ಧಿಹೇಳಿದ್ದು: “ನೀವು, ಯಾವುದು ನಿಮ್ಮ ಹಿಂದಿನ ವರ್ತನಾ ರೀತಿಯನ್ನು ಹೊಂದಿಕೊಂಡಿದೆಯೊ ಮತ್ತು ಅವನ ವಂಚನೆಯ ಬಯಕೆಗಳಿಗನುಸಾರ ಭ್ರಷ್ಟವಾಗುತ್ತಿದೆಯೊ ಆ ಹಳೆಯ ವ್ಯಕ್ತಿತ್ವವನ್ನು ತೆಗೆದುಬಿಡಬೇಕು; ಆದರೆ . . . ನೀವು ನಿಮ್ಮ ಮನಸ್ಸನ್ನು ಚೋದಿಸುವ ಶಕಿಯ್ತಿಂದ ಹೊಸದಾಗಿ ಮಾಡಲ್ಪಡಬೇಕು, ಮತ್ತು ನಿಜ ನೀತಿ ಮತ್ತು ಕರ್ತವ್ಯ ನಿಷ್ಠೆಯಲ್ಲಿ ಯಾವುದು ದೇವರ ಚಿತ್ತಾನುಸಾರವಾಗಿ ಸೃಷ್ಟಿಸಲ್ಪಟ್ಟಿದೆಯೋ ಆ ನೂತನ ವ್ಯಕ್ತಿತ್ವವನ್ನು ಧರಿಸಬೇಕು.” (ಎಫೆಸ 4:22-24, NW) ಈ ಹೆಚ್ಚು ಉತ್ತಮವಾದ ಸ್ವಭಾವ ಲಕ್ಷಣಗಳು ಯಾವುವೆಂದು ಬೈಬಲು ತೋರಿಸುತ್ತದೆ. ಈ ಮೊದಲು ವರ್ಣಿಸಿರುವ ಪರಿಪೂರ್ಣ ಜಗತ್ತಿನ ಜ್ಞಾಪಕವಿದೆಯೆ? ಆ ಜಗತ್ತಿನ ಭಾಗವಾಗುವ ಮನಸ್ಸು ನಿಮಗೆ ಇರುವಲ್ಲಿ, ಕೊಲೊಸ್ಸೆ 3:12-17ರಲ್ಲಿ ವರ್ಣಿಸಿರುವ, ಕನಿಕರ, ದಯೆ, ದೀನಭಾವ, ಸಾತ್ವಿಕತ್ವ, ತಾಳ್ಮೆ, ಕ್ಷಮಾಭಾವ, ಪ್ರೀತಿ, ಶಾಂತಿ, ಮತ್ತು ಕೃತಜ್ಞತೆಯಂಥ ಗುಣಗಳನ್ನು ಬೆಳೆಸುವ ಅಗತ್ಯವನ್ನು ನೀವು ನೋಡಬೇಕು.
ಆದುದರಿಂದ ನಿಮ್ಮ ಬೈಬಲನ್ನು ವಿಚಾರಿಸಿದ ಬಳಿಕ ನಿಮ್ಮ ಗುರಿಗಳನ್ನು ಸ್ಥಾಪಿಸಿರಿ. ಅವುಗಳನ್ನು ಬರೆದಿಡಿರಿ. ಪ್ರತಿಯೊಂದು ಗುರಿಗೆ ಆದ್ಯತೆಯನ್ನು ಕೊಡಿರಿ. ಬಳಿಕ ಅದನ್ನು ಸಾಧಿಸಲು ಕೆಲಸ ನಡಿಸಿರಿ!
ಹೆಜ್ಜೆ 3: ಯೋಗ್ಯ ಮಾದರಿಗಳನ್ನು ಹುಡುಕಿರಿ
ನಿಮ್ಮ ನಡತೆಯಲ್ಲಿ ಹೆಚ್ಚಿನದ್ದು ನೀವು ನಿಮ್ಮ ಮಿತ್ರರು, ಒಡನಾಡಿಗಳು, ಹೆತ್ತವರು, ಉಪಾಧ್ಯಾಯರು—ಇಂಥವರನ್ನು ಅನುಕರಿಸಿದುದರ ಮೂಲಕ ಸ್ಥಾಪಿಸಲ್ಪಟ್ಟಿತು.
ಹಾಗಾದರೆ, ಅಪೇಕ್ಷಿತ ನಡತೆಯ ಗುರಿಯನ್ನು ನಿರ್ಣಯಿಸಿದ ಬಳಿಕ, ನೀವು ನಕಲು ಮಾಡಲಿಚ್ಫಿಸುವ ಗುಣವಿರುವ ಒಬ್ಬನನ್ನು ಯಾಕೆ ಹುಡುಕಬಾರದು? ಬಳಿಕ ಆ ವ್ಯಕ್ತಿಯ ಸಹಾಯವನ್ನು ಕೇಳಿಕೊಳ್ಳಿರಿ. ಬೈಬಲಿನ ಒಂದು ಜ್ಞಾನೋಕ್ತಿ ವಿವೇಕದಿಂದ ಹೇಳುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು.”—ಜ್ಞಾನೋಕ್ತಿ 13:20.
ಬೈಬಲಿನಲ್ಲಿ ನಮಗೆಲ್ಲರಿಗೂ ಅತ್ಯುತ್ತಮ ಮಾದರಿಯಾದ ಯೇಸು ಕ್ರಿಸ್ತನ ಜೀವನ ವೃತ್ತಾಂತವಿದೆ. ಅವನು ಎಲ್ಲ ಪರಿಸ್ಥಿತಿಗಳಲ್ಲಿ ಹೇಗೆ ವರ್ತಿಸಿದನೆಂದು ಓದಿರಿ. ಅವನ ನೈತಿಕ ನಡತೆ, ಅವನ ಗ್ರಹಿಕೆ ಮತ್ತು ವಿವೇಕ, ಅವನ ಪ್ರತಿಷ್ಠೆ, ಅವನ ಆಲೋಚನಾಶೀಲತೆ, ನೆರೆಯವನ ಕಡೆಗೆ ಅವನು ತೋರಿಸಿದ ಅಸಾಮಾನ್ಯ ದಯೆ ಮತ್ತು ಚಿಂತನೆ— ಇವುಗಳನ್ನು ಓದಿರಿ. “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುವೆನು. ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು” ಎಂದು ಅವನು ಹೇಳುವಾಗ ಅದೆಷ್ಟು ಚೈತನ್ಯದಾಯಕ!—ಮತ್ತಾಯ 11:28-30.
ಎಲ್ಲ ದೇಶಗಳಲ್ಲಿ, ಲಕ್ಷಗಟ್ಟಲೆ ಜನರು ಈಗಾಗಲೇ ಕ್ರಿಸ್ತ ಯೇಸು ತಮ್ಮ ಮಾದರಿಯೆಂದು ಅವನ ಕಡೆಗೆ ತಿರುಗಿ, ಅವನು ತನ್ನ ಸ್ವರ್ಗೀಯ ಪಿತನಾದ ಯೆಹೋವ ದೇವರು ಹೇಳಿದ ಮಾರ್ಗದಲ್ಲಿ ನಡೆದಂತೆಯೇ, ಅವನ ಹೆಜ್ಜೆಜಾಡಿನಲ್ಲಿ ನಡೆಯಲು ಸಾಧ್ಯವಾಗುವಷ್ಟನ್ನು ಮಾಡುತ್ತಾರೆ. ಲೋಕದ ಜನರ ಕೆಟ್ಟ ನಡತೆಯಿಂದ ಭರ್ತಿಯಾಗಿರುವ ಈ ಲಕ್ಷಗಟ್ಟಲೆ ಜನರು, ಸಹಾಯ ಮತ್ತು ಮಾರ್ಗದರ್ಶನೆಗಾಗಿ ಯೆಹೋವನ ಸಾಕ್ಷಿಗಳ ಸ್ಥಳೀಕ ಸಭೆಗಳಿಗೆ ತಿರುಗಿದ್ದಾರೆ, ಮತ್ತು ಅವರು ಆಶಾಭಂಗಗೊಂಡಿರುವುದಿಲ್ಲ. ಅವರ ರಾಜ್ಯ ಸಭಾಗೃಹಗಳಲ್ಲಿ, ಶ್ರೇಷ್ಠ ರೀತಿಯ ಕ್ರಿಸ್ತಸದೃಶ ಮಾದರಿಗಳು ಹೇರಳವಿವೆ, ಮತ್ತು ತಮ್ಮ ವೈಯಕ್ತಿಕ ನಡತೆಯನ್ನು ಉತ್ತಮಗೊಳಿಸಲು ಬಯಸುವವರಿಗೆ ಹೆಚ್ಚು ಸಹಾಯವನ್ನು ಒದಗಿಸಲಾಗಿದೆ. ಸಾಕ್ಷಿಗಳಿಗೆ ಅಪೂರ್ಣ ಮಾನವಜಾತಿಗಿರುವ ಬಲಹೀನತೆಗಳಿವೆಯೆಂಬುದು ನಿಶ್ಚಯ. ಆದರೆ ಅವರ ಮನಸ್ಸನ್ನು ಪ್ರೇರಿಸುವ ಸಕಾರಾತ್ಮಕವಾದ ಆತ್ಮಿಕ ಶಕ್ತಿಯೂ ಅವರಿಗಿದೆ.—ಎಫೆಸ 4:23.
ಹೆಜ್ಜೆ 4: ಜಯಹೊಂದಲು ಬೇಕಾದ ಬಲವನ್ನು ಪಡೆಯಿರಿ
ತಮ್ಮ ಮಾರ್ಗಗಳನ್ನು ಬದಲಾಯಿಸ ಬಯಸುವವರಿಗೆ ಸಹಾಯವು ಲಭ್ಯವೆಂದು ತಿಳಿಯವುದು ದುಃಖಶಾಮಕ. “ನೂತನ ವ್ಯಕ್ತಿತ್ವ”ವನ್ನು “ನಿಜ ನೀತಿ ಮತ್ತು ಕರ್ತವ್ಯ ನಿಷ್ಠೆಯಲ್ಲಿ . . . ದೇವರ ಚಿತ್ತಾನುಸಾರ ಸೃಷ್ಟಿಸಲ್ಪಟ್ಟ” ದ್ದೆಂದು ವರ್ಣಿಸಲಾಗಿದೆ. (ಎಫೆಸ 4:24, NW) ಇದು, ಬಯಸುವವರಿಗೆ ದೇವರಿಂದ ತಾನೇ ಮನುಷ್ಯಾತೀತ ಸಹಾಯ ದೊರೆಯುವದೆಂಬ ಖಾತ್ರಿ ಕೊಡುತ್ತದೆ. ಆದರೆ ಯೆಹೋವ ದೇವರ ಸಹಾಯವನ್ನು ನೀವು ಹೇಗೆ ಪಡೆಯಬಲ್ಲಿರಿ?
ವ್ಯಕ್ತಿಪರವಾದ ಪ್ರಾರ್ಥನೆಯು ಪ್ರಧಾನ ಸಹಾಯಗಳಲ್ಲಿ ಒಂದು. ಪ್ರಾರ್ಥನೆಯು ನಿಮ್ಮ ಮಾರ್ಗಗಳನ್ನು ಬದಲಾಯಿಸಲು ಅಗತ್ಯವಿರುವ ಶಕ್ತಿಯ ಮೂಲದೊಂದಿಗೆ ಜೀವದಾಯಕವಾದ ಪರಾಮರ್ಶಕ ಸೇವೆಯನ್ನು ಒದಗಿಸುತ್ತದೆ. ಯಾವಾಗ ಬೇಕಾದರೂ, ಸಂಕಟದ ಮಧ್ಯದಲ್ಲಿಯೂ ಸರಳವಾಗಿ ಮತ್ತು ಬಿಚ್ಚಿ ಮಾತಾಡುವಂತೆ ಪ್ರಾರ್ಥನೆಯು ಅನುಮತಿಸುತ್ತದೆ. ವಾಸ್ತವವಾದ ಮತ್ತು ಚಿಂತನೆಯ ದೇವರಿಗಿರುವ ಗಮ್ಯತೆಯು ಯಾವ ಮನುಷ್ಯನ ಗಮ್ಯತೆಗೂ ಮೀರಿದ್ದು ಒಡನೆ ಕಾರ್ಯಸಾಧಕವಾಗಿದೆ. ಆದುದರಿಂದ, ಅಪೊಸ್ತಲ ಯೋಹಾನನು ಹೀಗೆ ಬರೆಯಸಾಧ್ಯವಾಯಿತು: “ಮತ್ತು ನಾವು ದೇವರ ಚಿತ್ತಾನುಸಾರ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಧೈರ್ಯವು ಆತನ ವಿಷಯವಾಗಿ ನಮಗುಂಟು.” (1 ಯೋಹಾನ 5:14) ಮತ್ತು ಪ್ರವಾದಿ ಯೆಶಾಯನ ಮಾತುಗಳು ನಮ್ಮನ್ನು ಪ್ರೋತ್ಸಾಹಿಸುತ್ತವೆ: “ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ. ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹ ಮಾಡಿರಿ. ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವರನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ [“ದೊಡ್ಡ ರೀತಿಯಲ್ಲಿ”, NW] ಕ್ಷಮಿಸುವನು.”—ಯೆಶಾಯ 55:6, 7.
ಬೈಬಲ್ ಅಧ್ಯಯನ ಸಹ ನಿಮಗೆ ಬಲವನ್ನು ಒದಗಿಸುತ್ತದೆ. ಅದು ನಿಮಗೆ ಚೈತನ್ಯ ಕೊಟ್ಟು ನಿಮ್ಮ ಗುರಿಗಳನ್ನು ಪ್ರತಿ ದಿನ ನೀವು ಪುನರ್ಕೇಂದ್ರೀಕರಿಸುವಂತೆ ಸಾಧ್ಯ ಮಾಡುತ್ತದೆ. ನೀವು ಆಯ್ದುಕೊಂಡಿರುವ ನಡತೆಯ ಗುರಿಯ ಕಡೆಗೆ ಹೋಗಲು ನೀವು ಪ್ರಯತ್ನಿಸುತ್ತಿರುವಂತೆ ಬೈಬಲು ಸಕಾರಾತ್ಮಕ ಭದ್ರತೆಯನ್ನು ಒದಗಿಸುತ್ತದೆ. ಇದಲ್ಲದೆ, ನಿಮ್ಮ ಹಿಂದಿನ ಮಾರ್ಗಗಳಿಗೆ ಅದು ಹೇವರಿಕೆಯನ್ನು ಹುಟ್ಟಿಸುತ್ತದೆ. ಬೈಬಲು ಮತ್ತು ಅದರಲ್ಲಿ ಅಡಕವಾಗಿರುವ ವಿಷಯಗಳ ದಿನಂಪ್ರತಿಯ ಜ್ಞಾನವು, ಲೋಕದ ಮಾಧ್ಯಮಗಳಿಂದ ಮತ್ತು ಅದರ ಶಿಕ್ಷಣ ಪದ್ಧತಿಗಳಿಂದ ಬರುವ ತಪ್ಪು ಮಾಹಿತಿಯನ್ನು ಹೊರದೂಡಲು ಸಹಾಯ ಮಾಡುತ್ತದೆ.
ಯೆಹೋವನ ಸಾಕ್ಷಿಗಳ ಸ್ಥಳೀಕ ರಾಜ್ಯ ಸಭಾಗೃಹದಲ್ಲಿ ನಡೆಯುವ ಕ್ರೈಸ್ತ ಸಭಾಕೂಟಗಳು ಬೈಬಲಿನ ಮಟ್ಟದ ಕುರಿತ ಶಿಕ್ಷಣವನ್ನು ಒದಗಿಸುವುದು ಮಾತ್ರವಲ್ಲ, ನಡತೆಯ ಅಭಿವೃದ್ಧಿಗೆ ಗುಂಪು ಬೆಂಬಲ ಮತ್ತು ಪರಸ್ಪರ ಪ್ರಚೋದನೆಯನ್ನೂ ಒದಗಿಸುತ್ತವೆ. ಸಭೆಯ ಮೂಲಕ ಒದಗಿಸಲಾಗುವ ಈ ಬೆಂಬಲ ಅನೇಕರು ಸಫಲ ರೀತಿಯಲ್ಲಿ ನಡತೆಯನ್ನು ಬದಲಾಯಿಸುವರೆ ಸಹಾಯ ಮಾಡಿಯದೆ. ನಿಮಗೆ ಈ ಪತ್ರಿಕೆಯನ್ನು ಕೊಟ್ಟ ವ್ಯಕ್ತಿಯೊಂದಿಗೆ ನೀವೇಕೆ ಇಂಥ ಸಹಾಯದ ಕುರಿತು ಚರ್ಚಿಸಬಾರದು?
ಹೆಜ್ಜೆ 5: ಮರುಕೊಳಿಸುವಿಕೆಗಳನ್ನು ನಿಭಾಯಿಸಿರಿ
ಅನೇಕರು ತಮ್ಮ ರೀತಿಗಳನ್ನು ಉತ್ತಮಗೊಳಿಸಲು ಪ್ರಯತ್ನಿಸಿದರೂ, ಅನಿವಾರ್ಯವಾದ ಮರುಕೊಳಿಸುವಿಕೆಗಳಿಂದ ನಿರುತ್ಸಾಹಗೊಂಡಿದ್ದಾರೆ. ಇದರ ಪರಿಣಾಮವಾಗಿ, ಕೆಲವರು ಪ್ರಯತ್ನವನ್ನೇ ಪೂರ್ತಿಯಾಗಿ ತ್ಯಜಿಸಿದ್ದಾರೆ. ಇಂಥವರು ಅನೇಕ ವೇಳೆ, ತಾವು ತಮ್ಮ ಒಂದೇ ನಿರೀಕ್ಷೆಯೆಂದು ಎಣಿಸಿದ್ದ ವಿಷಯವು ಸಹ ವಿಫಲಗೊಂಡದ್ದರಿಂದ ತಮಗೆ ಇನ್ನು ಯಾವ ನಿರೀಕ್ಷೆಯೂ ಇಲ್ಲವೆಂದು ನೆನಸುತ್ತಾರೆ. ಹೀಗೆ ಅವರು ತಮ್ಮನ್ನು ಲೋಕದ ಪ್ರಭಾವಗಳಿಗೆ ಬಲಿ ಬೀಳಿಸುತ್ತಾರೆ. ಮತ್ತು ಅನೇಕ ವೇಳೆ ಅವರು, ಬದಲಾವಣೆಯ ಪ್ರಯತ್ನಕ್ಕೆ ಮೊದಲು ಇದ್ದುದಕ್ಕಿಂತಲೂ ಹೆಚ್ಚು ಕೆಟ್ಟು ಹೋಗುತ್ತಾರೆ.
ಮೊದಲಿದ್ದ ಅನಪೇಕ್ಷಿತ ಮಾರ್ಗಗಳು ಪಲಾಯನಯೋಗ್ಯವಾದುವುಗಳೆಂದು ನಿಮಗೆ ಧೈರ್ಯ ಕೊಡುತ್ತಾ ಹೋಗಿರಿ. ಅಪೊಸ್ತಲ ಪೌಲನು ತನ್ನ ಮೊದಲಿನ ವರ್ತನೆ ಮತ್ತು ಜೀವನ ಶೈಲಿಯನ್ನು ಕಚಡದ ರಾಶಿ ಅಥವಾ ಕಸವೆಂದು ಎಣಿಸಿದನು. (ಫಿಲಿಪ್ಪಿ 3:8) ಆದುದರಿಂದ, ನೀವು ಬದಲಾವಣೆ ಮಾಡುವಾಗ ಒಂದು ತಡೆಯಿಂದ ಯಾ ಮರುಕೊಳಿಸುವಿಕೆಯಿಂದ ಮುಗ್ಗರಿಸಲ್ಪಡುವಲ್ಲಿ, ಪುನಃ ಎದ್ದು, ಮುಂದೆ ಹೆಜ್ಜೆ ಹಾಕಿರಿ. ಮುಂದುವರಿಯಿರಿ! ಹೋರಾಡಿರಿ! ಅದು ಸಾರ್ಥಕವೇ ಸರಿ!
ನಿಮ್ಮ ಅನೇಕ ಮಾರ್ಗಗಳು ಮತ್ತು ಸ್ವಭಾವ ಲಕ್ಷಣಗಳು ಆಗ ನಿಮ್ಮ ಆಯ್ಕೆ ಯಾ ನಿಯಂತ್ರಣಕ್ಕೆ ಮೀರಿದ ಬಾಹ್ಯ ಶಕಿಗ್ತಳಿಂದ ನಿಮ್ಮ ಮೇಲೆ ಹೇರಿಸಲ್ಪಟ್ಟವು. ಈ ಶಕ್ತಿಗಳು ಇನ್ನೂ ಕೆಲಸ ನಡೆಸುತ್ತವೆ. ಅವುಗಳ ಅಚ್ಚುಪಟ್ಟಿಗೆ ನಿಮ್ಮನ್ನು ತುರುಕುವಂತೆ ನೀವು ಬಿಡುವಿರೊ? ಇಲ್ಲವೊ? ಬಿಡುವುದಿಲ್ಲವಾದರೆ ಈ ಪ್ರಯತ್ನವನ್ನು ತ್ಯಜಿಸಬೇಡಿರಿ!
ವಿವಿಧ ಸಂಸ್ಕೃತಿಗಳ ಲಕ್ಷಾಂತರ ಜನರು—ಪಾತಕಿಗಳು ಮತ್ತು ದುರಾಚಾರಗಳಲ್ಲಿ ಆಳವಾಗಿ ಮುಳುಗಿರುವವರು ಸಹ—ತಮ್ಮ ನಡತೆಯನ್ನು ಫಲಪ್ರದವಾಗಿ ಬದಲಾಯಿಸಿದ್ದಾರೆ. ಅವರು ಇಂದಿನ ತನಕವೂ, ಅನೇಕ ದಶಕಗಳಲ್ಲಿ, ತಮ್ಮ ಉತ್ತಮಗೊಳಿಸಲ್ಪಟ್ಟ ಮಟ್ಟವನ್ನು ಕಾಪಾಡಿಕೊಂಡು, ಪ್ರಶಂಸಾರ್ಹವಾದ ಸ್ವಪ್ರೇರಿತ ಸಮಗ್ರತೆಯಿಂದ ತಮ್ಮ ಉತ್ತಮ ಮಾರ್ಗಗಳಿಗೆ ಅಂಟಿಕೊಂಡಿದ್ದಾರೆ. ಆದರೆ ತಮಗೆ ಇದನ್ನು ಮಾಡಲು ಸಿಕ್ಕಿದ ಬಲ ಮತ್ತು ಪ್ರಚೋದನೆಗಾಗಿ ಅವರು ದೇವರಿಗೆ ಕೃತಜ್ಞತೆ ಹೇಳುತ್ತಾರೆ. ಅಪೊಸ್ತಲ ಪೌಲನು ಹೇಳಿದಂತೆ, “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:13.
ಸಮರ್ಪಕವಾದುದನ್ನು ಮಾಡುವ ಹೋರಾಟದಲ್ಲಿ ಅವರು ಜಯಗಳಿಸುತ್ತಿದ್ದಾರೆ. ನಿಜವಾಗಿ ಮನಸ್ಸಿರುವಲ್ಲಿ ನೀವೂ ಜಯಗಳಿಸಿ, ದೇವರ ನೂತನ ಜಗತ್ತಿನಲ್ಲಿ ಜೀವವನ್ನು ಅನುಭವಿಸಬಲ್ಲಿರಿ.—ಕೀರ್ತನೆ 37:29; 2 ಪೇತ್ರ 3:13. (g91 7/8)
[ಪುಟ 7 ರಲ್ಲಿರುವ ಚಿತ್ರ]
ಹೆಜ್ಜೆ 1: ನೀವು ವಾಸ್ತವವಾಗಿ ಏನಾಗಿದ್ದೀರೆಂದು ಕಂಡುಹಿಡಿಯಿರಿ
[ಪುಟ 8 ರಲ್ಲಿರುವ ಚಿತ್ರ]
ಹೆಜ್ಜೆ 2: ನೀವು ಏನಾಗಬೇಕೆಂದಿದ್ದೀರಿ ಎಂದು ನಿರ್ಣಯಿಸಿರಿ
[ಪುಟ 8 ರಲ್ಲಿರುವ ಚಿತ್ರ]
ಹೆಜ್ಜೆ 3: ಯೋಗ್ಯ ಮಾದರಿಗಳನ್ನು ಹುಡುಕಿರಿ
[ಪುಟ 9 ರಲ್ಲಿರುವ ಚಿತ್ರ]
ಹೆಜ್ಜೆ 4: ಜಯಹೊಂದಲು ಬೇಕಾದ ಬಲವನ್ನು ಪಡೆಯಿರಿ
[ಪುಟ 9 ರಲ್ಲಿರುವ ಚಿತ್ರ]
ಹೆಜ್ಜೆ 5: ಮರುಕೊಳಿಸುವಿಕೆಗಳನ್ನು ನಿಭಾಯಿಸಿರಿ
[ಪುಟ 10 ರಲ್ಲಿರುವ ಚಿತ್ರ]
ಬದಲಾವಣೆ ಹೊಂದುವವರು ಬದಲಾಗಿರುವ ಭೂಮಿಯನ್ನೂ ಹೊಂದುವರು