ಯುವ ಜನರು ಪ್ರಶ್ನಿಸುವುದು . . .
ಧೂಮಪಾನ ನಿಜವಾಗಿಯೂ ಅಷ್ಟು ಕೆಟ್ಟದ್ದೆ?
ಆರೆನ್ಗೆ ಚಿಕ್ಕಂದಿನಿಂದಲೂ ಧೂಮಪಾನ ಆಕರ್ಷಕವಾಗಿತ್ತು. ಅವನ ಅತ್ತೆ ಸಿಗರೇಟು ಹಚ್ಚುತ್ತಿದ್ದಾಗ ಬೆಂಕಿಕಡ್ಡಿಯನ್ನು ಅವನೇ ಆರಿಸುವಂತೆ ಆಕೆ ಬಿಡುತ್ತಿದ್ದಳು. ಅವನ 16ನೆಯ ವರ್ಷ ಪ್ರಾಯದಲ್ಲಿ ಸೇದುವುದೆಂದರೇನೆಂದು ನೋಡಲು ನಿಶ್ಚಯಿಸಿದನು. ಅವನು ಒಂದು ವಿನೋದ ಗೋಷ್ಠಿಗೆ ಹೋಗಿ ಅಲ್ಲಿ ಒಬ್ಬ ಹುಡುಗಿಯೊಡನೆ ಒಂದು ಸಿಗರೇಟು ಕೇಳಿದ. ಆದರೆ ಅದನ್ನು ಮುಗಿಸುವ ಮೊದಲೇ ಅಸ್ವಸ್ಥನಾದನು.
ಅವನ ಪುರುಷ ಸ್ವಾಭಿಮಾನಕ್ಕೆ ಪೆಟ್ಟಾದ ಕಾರಣ, ಆರೆನ್ ಸೇದುವುದನ್ನು ಖಾಸಗಿಯಾಗಿ “ಅಭ್ಯಾಸ” ಮಾಡಲು ನಿರ್ಣಯಿಸಿದನು. ಒಂದು ಸಂಜೆ, ಹೊಟ್ಟೆ ತುಂಬ ಊಟವಾದ ಮೇಲೆ ಅವನು ತುಸು ನಡುಕದಿಂದ ಒಂದು ಸಿಗರೇಟನ್ನು ಹಚ್ಚಿ ಒಳಕ್ಕೆ ಸೇದಿದ. ಎಂಥ ಆಶ್ಚರ್ಯ! ಈ ಬಾರಿ ತಲೆ ತಿರುಗುವುದಾಗಲಿ ಪಿತ್ತೋದ್ರೇಕವಾಗಲಿ ಇರಲಿಲ್ಲ. ಆತ್ಮ ಸಂತೋಷದಿಂದ ಅವನು ಮತ್ತೆ ಮತ್ತೆ ಸೇದಿದ. ಆ ಸಿಗರೇಟು ಮುಗಿದೊಡನೆ ಇನ್ನೊಂದು ಬೇಕಾಯಿತು. ಬಳಿಕ ಮತ್ತೊಂದು. ಮುಂದಿನ ಆರು ವರ್ಷಗಳಲ್ಲಿ, ಆರೆನ್ ಅಖಂಡ ಧೂಮಪಾಯಿಯಾದ.
ಧೂಮಪಾನ—ಗತಿ ಬದಲಾಗಿದೆಯೆ?
ಆರೆನನ ವರ್ತನೆಯನ್ನು ಅನೇಕ ಯುವಜನರು ಇಂದು ತೃಣೀಕರಿಸಬಹುದು. ಅಮೆರಿಕದ ಒಂದು ಸಮೀಕ್ಷೆಗನುಸಾರ, ಅಭಿಪ್ರಾಯ ಕೊಟ್ಟ ಹದಿಹರೆಯದವರಲ್ಲಿ 66 ಪ್ರತಿಶತ, ದಿನಕ್ಕೆ ಒಂದು ಕಟ್ಟು ಯಾ ಹೆಚ್ಚು ಸಿಗರೇಟನ್ನು ಸೇದುವುದು ಒಬ್ಬನನ್ನು “ಮಹಾ ಅಪಾಯ”ಕ್ಕೊಳಪಡಿಸುತ್ತದೆಂದು ಅಭಿಪ್ರಯಿಸಿದರು. ಹಾಸ್ಯವ್ಯಂಗ್ಯವಾಗಿ, ಇದನ್ನು ಅತಿ ಕಟುವಾಗಿ ಖಂಡಿಸಿದವರು ಧೂಮಪಾಯಿಗಳೇ! ಒಬ್ಬ 16 ವರ್ಷ ವಯಸ್ಸಿನ ಸೇದುವವನಂದದ್ದು: “ಅದೊಂದು ಅಸಹ್ಯ ಅಭ್ಯಾಸ.” ಒಂದು ಅಧ್ಯಯನದಲ್ಲಿ, ಹದಿಹರೆಯದ ಸೇದುವವರಲ್ಲಿ 85 ಪ್ರತಿಶತ, ಸೇದುವುದು ಹಾನಿಕರವೆಂದು ಅವರು ಎಣಿಸುತ್ತಾರೆಂದು ಒಪ್ಪಿಕೊಂಡರು. ಸುಮಾರು ಅರ್ಧಾಂಶ ಮಂದಿ, ತಮಗೆ ಬಿಡಲು ಮನಸ್ಸಿದೆ, ಆದರೆ ಮುಂದಿನ ಐದು ವರ್ಷಗಳೊಳಗೆ, ಎಂದು ಹೇಳಿದರು.
ಹಾಗಾದರೆ, ಹೊರತೋರಿಕೆಯಂತೆ, ತಂಬಾಕಿನ ದೀರ್ಘಕಾಲದ ಜನಪ್ರಿಯತೆಯನ್ನು ಅಸಮ್ಮತಿಯೆಂಬ ಭರತದ ಭಾರಿ ಅಲೆ ಈಗ ಕೊಚ್ಚಿಕೊಂಡು ಹೋಗಲಿದೆ. ಅಮೆರಿಕದ ಸರ್ಜನ್ ಜನರಲರ ರಿಡ್ಯೂಸಿಂಗ್ ದ ಹೆಲ್ತ್ ಕಾನ್ಸಿಕ್ವೆನ್ಸೆಸ್ ಆಫ್ ಸ್ಮೋಕಿಂಗ್—25 ಯಿಯರ್ಸ್ ಆಫ್ ಪ್ರೋಗ್ರೆಸ್ ಎಂಬ 1989ರ ವರದಿ ಹೇಳುವುದು: “1940 ಮತ್ತು 1950ಗಳಲ್ಲಿ ಧೂಮಪಾನ ಒಯ್ಯಾರದ್ದಾಗಿತ್ತು. ಆದರೆ ಈಗ, ಅದನ್ನು ಹೆಚ್ಚೆಚ್ಚಾಗಿ ದೂರವಿರಿಸಲಾಗುತ್ತದೆ. ಚಲನ ಚಿತ್ರ ತಾರೆಯರು, ಕ್ರೀಡಾ ಪಟುಗಳು, ಮತ್ತು ಇತರ ಹೆಸರಾದವರು ಸಿಗರೇಟು ಜಾಹಿರಾತಿನಲ್ಲಿ ತೋರಿಬರುತ್ತಿದ್ದರು. ಇಂದು ನಟರು, ಕ್ರೀಡಾ ಪಟುಗಳು, ಗಣ್ಯರು, ಮತ್ತು ರಾಜಕೀಯ ಅಭ್ಯರ್ಥಿಗಳು ಸೇದುವುದನ್ನು ನೋಡಸಿಗುವುದು ವಿರಳ. . . . ಜನರು ಹೆಚ್ಚೆಚ್ಚಾದ ಸಂಖ್ಯೆಯಲ್ಲಿ ಧೂಮಪಾನವನ್ನು ತ್ಯಜಿಸುತ್ತಿದ್ದಾರೆ.”
ಅಮೆರಿಕದ ವಯಸ್ಕರೆಲ್ಲರಲ್ಲಿ, 1965ರಲ್ಲಿ, 40 ಪ್ರತಿಶತ ಸೇದುತ್ತಿದ್ದರು. 20ಕ್ಕೂ ಹೆಚ್ಚು ವರ್ಷಗಳ ನಂತರ, ಸುಮಾರು 29 ಪ್ರತಿಶತ ಮಾತ್ರ ಸೇದಿದರು. ಸರ್ಜನ್ ಜನರಲರ ವರದಿ ಮತ್ತೂ ಹೇಳುವುದೇನಂದರೆ, “ಇದುವರೆಗೆ ಸೇದಿರುವ ಜೀವಿತರಾದ ವಯಸ್ಕರಲ್ಲಿ ಸುಮಾರು ಅರ್ಧಾಂಶ ಈಗ ಸೇದುವುದನ್ನು ಬಿಟ್ಟಿದ್ದಾರೆ.” 1976ರಲ್ಲಿ, ಹೈಸ್ಕೂಲ್ ಉಚ್ಚ ವರ್ಗಗಳ ವಿದ್ಯಾರ್ಥಿಗಳಲ್ಲಿ ಸುಮಾರು 29 ಪ್ರತಿಶತ ಪ್ರತಿದಿನ ಸೇದುತ್ತಿದ್ದರು. ಹತ್ತು ವರ್ಷಗಳ ಬಳಿಕ, ಕೇವಲ 19 ಪ್ರತಿಶತ ಸೇದುತ್ತಿದ್ದರು.
ಹೀಗಿರುವುದರಿಂದ, ಧೂಮಪಾನವೆಂಬ ವಿಷಯದ ಮೇಲೆ ಇನ್ನು ಹೆಚ್ಚು ಮಾತಾಡುವ ಅಗತ್ಯವಿಲ್ಲವೆಂದು ಕಾಣಬಹುದು. ಆದರೆ, ಬಿರುಸಾದ ಧೂಮಪಾನವಿರೋಧ ಚಳವಳಿ ಮತ್ತು ವೈದ್ಯರ ಅಶುಭಸೂಚಕ ಎಚ್ಚರಿಕೆಗಳ ಎದುರಿನಲ್ಲೂ ಲೋಕಾದ್ಯಂತವಾಗಿ ತಂಬಾಕಿನ ಮೊತ್ತದ ಅನುಭೋಗ ಗಮನಾರ್ಹವಾಗಿ ಹೆಚ್ಚಾಗಿದೆ! ಅಮೆರಿಕದಲ್ಲಿ ಸುಮಾರು 5 ಕೋಟಿ ವಯಸ್ಕರು ಇನ್ನೂ ಸೇದುತ್ತಿದ್ದಾರೆ. ಮತ್ತು ಆರೆನ್ಗೆ ಏನು ಸಂಭವಿಸಿತೊ ಅದು ಇತರ ಅನೇಕ ಯುವಜನರಿಗೆ ಸಂಭವಿಸುತ್ತಿದೆ. ಪ್ರತಿದಿನ ಸುಮಾರು 3,000 ಹದಿಪ್ರಾಯದವರು ಅಮೆರಿಕದಲಿಯ್ಲೆ ಪ್ರಥಮ ಬಾರಿ ಸಿಗರೇಟು ಹಚ್ಚುತ್ತಾರೆ. ಇದರ ಮೊತ್ತ, ವರ್ಷಕ್ಕೆ ದಿಗ್ಭಮ್ರೆಗೊಳಿಸುವ 10 ಲಕ್ಷ ಹೊಸ ಧೂಮಪಾಯಿಗಳೆಂದಾಯಿತು! ಆಶ್ಚರ್ಯದ ವಿಷಯವೇನಂದರೆ, ಹೊಸ ನಿಕೊಟೀನ್ ವ್ಯಸನಿಗಳಲ್ಲಿ ಅಧಿಕಾಂಶ ಮಂದಿ ಹದಿಪ್ರಾಯದ ಹುಡುಗಿಯರು.
ಧೂಮಪಾನ ವಿರೋಧ ಚಳವಳಿಗಳು—ಹೊಸದೇನೂ ಅಲ್ಲ!
ಜನರಿಗೆ ಅಪಾಯಗಳ ಅರಿವಿಲ್ಲ ಎಂದಲ್ಲ. ಸೇದುವುದರಿಂದ ದೂರವಿರಲು ವೈಜ್ಞಾನಿಕ ಕಾರಣಗಳನ್ನು ಸಂಶೋಧಕರು ಕಂಡುಹಿಡಿಯುವುದಕ್ಕೆ ಎಷ್ಟೋ ಮುಂಚಿತವಾಗಿ, ಅದು ಅಸಹ್ಯವೆಂದೂ ಅನಪೇಕ್ಷಣೀಯವೆಂದೂ ವ್ಯವಹಾರ ಜ್ಞಾನವೇ ಜನರಿಗೆ ತಿಳಿಸಿತ್ತು. 90ಕ್ಕೂ ಕಮ್ಮಿ ವರ್ಷಗಳ ಹಿಂದೆ, ಅಮೆರಿಕದ ಅನೇಕ ಎಡೆಗಳಲ್ಲಿ ಸಿಗರೇಟುಗಳು ಶಾಸನವಿರುದ್ಧವಾಗಿದ್ದವು. ಕೆಲವು ಕಡೆಗಳಲ್ಲಿ, ಅದು ಒಬ್ಬನೊಂದಿಗೆ ಇರುವುದೇ ದಸ್ತಗಿರಿಗೆ ಕಾರಣವನ್ನು ಒದಗಿಸುತ್ತಿತ್ತು. ಮತ್ತು, ಹಿಂದಿನ ಕಾಲಗಳಲ್ಲಿ, ಸೇದುವುದರ ವಿರುದ್ಧ ಇನ್ನೂ ಕಟುವಾದ ಕ್ರಮಗಳನ್ನು ಕೈಕೊಳ್ಳಲಾಗುತ್ತಿತ್ತು.
ಸ್ಮಿತ್ಸೋನಿಯನ್ ಪತ್ರಿಕೆ 17ನೆಯ ಶತಕದಲ್ಲಿ ತೆಗೆದುಕೊಂಡಿದ್ದ ಕೆಲವು ಕ್ರಮಗಳನ್ನು ವರ್ಣಿಸುತ್ತದೆ: “ಚೈನದಲ್ಲಿ 1638ರ ಒಂದು ರಾಜಾಜ್ಞೆ . . . ತಂಬಾಕಿನ ಉಪಯೋಗವೆಂಬ ಪಾತಕಕ್ಕೆ ಶಿಕ್ಷೆ ಶಿರಶ್ಛೆಧವೆಂದು ಹೇಳಿತು. . . . ರಷ್ಯದಲ್ಲಿ, ಸೇದುವವರಿಗೆ ಚಡಿ ಹೊಡೆಯಲಾಗುತ್ತಿತ್ತು; ಪುನಃ ಸೇದುವ ನಿಯಮಭಂಜಕರ ಮೂಗಿನ ಸೊಳ್ಳೆಗಳನ್ನು ಉದ್ದಕ್ಕೆ ಕತ್ತರಿಸಲಾಗುತ್ತಿತ್ತು; ಪಟ್ಟು ಹಿಡಿದು ನಿಯಮೋಲ್ಲಂಘನೆ ಮಾಡುವವರನ್ನು ಸೈಬೀರಿಯಕ್ಕೆ ಕಳುಹಿಸಲಾಗುತ್ತಿತ್ತು. ಪರ್ಸಿಯದಲ್ಲಿ, ಅವರಿಗೆ ಯಾತನೆ ಕೊಟ್ಟು, ಶೂಲೆಗೆ ಹಾಕಲಾಗುತ್ತಿತ್ತು ಮತ್ತು⁄ಯಾ ಶಿರಶ್ಛೇದವಾಗುತ್ತಿತ್ತು.”
ಇಂಥ ಶಿಕ್ಷೆಗಳು ವಿಪರೀತ ಮತ್ತು ಕ್ರೂರವೆಂದು ಒಪ್ಪಿಕೊಳ್ಳಬೇಕು. ಆದರೆ, ಅವರ ಸ್ವಂತ ವಿಧದಲ್ಲಿ, ಧೂಮಪಾಯಿಗಳು ತಮ್ಮ ಸ್ವಂತ ದೇಹದ ವಿರುದ್ಧ ಕ್ರೂರ ರೀತಿಯಿಂದ ವರ್ತಿಸುತ್ತಾರೆ.
ಧೂಮಪಾನ—ನಿಮ್ಮ ದೇಹಕ್ಕೆ ಅದು ಮಾಡುವ ಪರಿಣಾಮ
ತಂಬಾಕಿಗೆ ಅದರ ಅಮಂಗಲಸೂಚಕ ಆಕರ್ಷಣೆಯನ್ನು ಕೊಡುವ ಘಟಕಾಂಶ ನಿಕೊಟೀನ್. ಆದರೂ, ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಒಂದು ಬೆರಳುಕಾಪಿನಷ್ಟು—ಸುಮಾರು 60 ಮಿಲಿಗ್ರ್ಯಾಮ್—ಒಮ್ಮೆಗೆ ತೆಗೆದುಕೊಳ್ಳುವಲ್ಲಿ ಅದು ಒಬ್ಬ ವಯಸ್ಕನನ್ನು ಕೊಲ್ಲಸಾಧ್ಯವಿದೆ. ಒಂದು ಪ್ರತಿನಿಧಿರೂಪದ ಸಿಗರೇಟಿನಲ್ಲಿ ಒಂದು ಮಿಲಿಗ್ರ್ಯಾಮ್ ನಿಕೊಟೀನ್ ಇದೆ.”
ನಿಕೊಟೀನ್ ಬಲಾಢ್ಯವಾದ ಚಟ ಹಿಡಿಸುವ ವಸ್ತುವೂ ಆಗಿದೆ. ಅಮೆರಿಕದ ಸರ್ಜನ್ ಜನರಲರ ಒಂದು ವರದಿ ಹೇಳುವುದು: “ಅಧಿಕಾಂಶ ಧೂಮಪಾಯಿಗಳು ಹದಿಪ್ರಾಯದವರಾಗಿ ಆರಂಭಿಸಿ ಆ ಬಳಿಕ ವ್ಯಸನಿಗಳಾಗುತ್ತಾರೆ. . . . ಇಂದು, ಸೇದುವವರಲ್ಲಿ 80 ಪ್ರತಿಶತ ತಮಗೆ ಅದನ್ನು ಬಿಡಲು ಮನಸ್ಸಿದೆಯೆಂದು ಹೇಳುತ್ತಾರೆ; ಸೇದುವವರಲ್ಲಿ ಮೂರನೆಯ ಎರಡಂಶ, ಬಿಡಲು ಕಡಮೆ ಪಕ್ಷ ಗುರುತರವಾದ ಒಂದು ಪ್ರಯತ್ನವನ್ನಾದರೂ ಮಾಡಿರುತ್ತಾರೆ.” ಇಂಥ ಪ್ರಯತ್ನಗಳನ್ನು ಅನೇಕ ವೇಳೆ ವೇದನೆಯುಳ್ಳ ಅಗಲಿಕೆಯ ರೋಗಸೂಚನೆಗಳು—ಯಾತನೆ ಕೊಡುತ್ತಿರುವ ತಂಬಾಕಿನ ಆಸೆ, ಅವಿಶ್ರಾಂತಿ, ಕೆರಳಿಕೆ, ವ್ಯಾಕುಲ, ತಲೆಶೂಲೆ, ಮಂಪರ, ಹೊಟ್ಟೆ ಕೆಡುವುದು, ಮತ್ತು ಏಕಾಗ್ರತೆಗೆ ಅಸಾಮರ್ಥ್ಯ—ಕೆಡಿಸುತ್ತವೆ.
ಆದರೆ ಸಿಗರೇಟುಗಳು ನಿಕೊಟೀನಿನಿಂದ ಒಬ್ಬನನ್ನು ಮಲಿನಗೊಳಿಸುವುದಷ್ಟೆ ಅಲ್ಲ; ಹಚ್ಚಿರುವ ಸಿಗರೇಟು ವಾಸ್ತವವಾಗಿ ಒಂದು ವಿಷದ ಕಾರ್ಖಾನೆಯಾಗಿದ್ದು, ಸುಮಾರು 4,000 ವಿಭಿನ್ನ ರಾಸಾಯನಿಕ ವಸ್ತುಗಳನ್ನು ಹೊರಚಿಮ್ಮುತ್ತದೆ. ಇವುಗಳಲ್ಲಿ ನಲವತ್ತಮೂರು ರಸಾಯನಗಳು ಕ್ಯಾನ್ಸರ್ ರೋಗೋತ್ಪಾದಕವೆಂದು ಗುರುತಿಸಲ್ಪಟ್ಟಿವೆ. ಇವುಗಳಲ್ಲಿ ಕೆಲವು, ಅಂಟಾದ ಟಾರಿನಂತಿದ್ದು ಶ್ವಾಸಕೋಶಗಳಿಗೂ ಶ್ವಾಸಕೋಶಗಳಿಗೆ ನಡಿಸುವ ವಾಯುಮಾರ್ಗಗಳಿಗೂ ಅಂಟಿಕೊಳ್ಳುತ್ತವೆ. ಇದು ಕೊನೆಗೆ ಶ್ವಾಸಕೋಶಗಳ ಕ್ಯಾನ್ಸರಾಗಿ ಪರಿಣಮಿಸಬಲ್ಲದು. ಧೂಮಪಾನವು, “ಮೂತ್ರಚೀಲ, ಮೇದೋಜೀರಕ ಗ್ರಂಥಿ, ಮತ್ತು ಮೂತ್ರಕೋಶಗಳ ಕ್ಯಾನ್ಸರಿಗೆ ಸಹಾಯಕ ವಿಷಯವೂ, ಹೊಟ್ಟೆಯ ಕ್ಯಾನ್ಸರಿನೊಂದಿಗೆ ಜೊತೆಗೂಡಿರುವಂಥದೂ ಆಗಿದೆ” ಎಂದು ಅಭಿಪ್ರಯಿಸಲಾಗುತ್ತದೆ.—ರಿಡ್ಯೂಸಿಂಗ್ ದ ಹೆಲ್ತ್ ಕಾನ್ಸಿಕ್ವೆನ್ಸೆಸ್ ಆಫ್ ಸ್ಮೋಕಿಂಗ್.
ಒಬ್ಬ ಧೂಮಪಾಯಿಯಲ್ಲಿ ಕ್ಯಾನ್ಸರ್ ಬೆಳೆಯಬೇಕಾದರೆ ಅನೇಕ ವರ್ಷ ಹಿಡಿದೀತು. ಆದರೆ ಕೇವಲ ಒಂದು ಸಿಗರೇಟು ಸಹ ಹಾನಿ ಮಾಡುವ ಸಾಮರ್ಥ್ಯವುಳ್ಳದ್ದಾಗಿದೆ. ನಿಕೊಟೀನ್ ನಿಮ್ಮ ಹೃದಯ ವೇಗವಾಗಿ ಬಡಿಯುವಂತೆ ಮಾಡಿ, ನಿಮ್ಮ ಶರೀರದ ಆಮ್ಲಜನಕ ಆವಶ್ಯಕತೆಯನ್ನು ಹೆಚ್ಚಿಸುತ್ತದೆ. ಅಶುಭಕರವಾಗಿ, ಸಿಗರೇಟ್ ಹೊಗೆಯಲ್ಲಿ ಕಾರ್ಬನ್ ಮಾನೊಕ್ಸೈಡ್—ಮೋಟರ್ ವಾಹನಗಳಿಂದ ಹೊರಬರುವ ವಿಷ ಅನಿಲ—ಕೂಡ ಇದೆ. ಈ ವಿಷ ವಸ್ತು ರಕ್ತಪ್ರವಾಹದ ಕಡೆಗೆ ಹೋಗಿ, ಹೃದಯ ಮತ್ತು ಇತರ ಮುಖ್ಯಾಂಗಗಳಿಗೆ ಆಮ್ಲಜನಕದ ಹರಿಯುವಿಕೆಯನ್ನು ವಾಸ್ತವವಾಗಿ ತಡೆಯುತ್ತದೆ. ಇನ್ನೂ ಕೆಡುಕಾದ ವಿಷಯವೇನಂದರೆ, ನಿಕೊಟೀನ್ ರಕ್ತನಾಳಗಳನ್ನು ಸಂಕುಚಿತಗೊಳಿಸಿ, ಆಮ್ಲಜನಕದ ಹರಿಯುವಿಕೆಯನ್ನು ಇನ್ನೂ ನಿಧಾನಿಸುತ್ತದೆ. ಹೀಗೆ, ಸೇದುವವರಲ್ಲಿ ಅಪಾಯಸೂಚಕವಾಗಿ ಉನ್ನತ ಪ್ರಮಾಣದಲ್ಲಿ ಹೃದ್ರೋಗವಿದೆ.
ಜಠರ ಹುಣ್ಣು, ಅಕಾಲ ಪ್ರಸವ, ದುರ್ಬಲ ಮಗು, ಪಾರ್ಶ್ವವಾಯು—ಇವುಗಳು ಧೂಮಪಾಯಿಗಳಿಗೆ ಬರಬಹುದಾದ ಅನೇಕ ಅಪಾಯಗಳಲ್ಲಿ ಕೆಲವು. ಪ್ರತಿ ವರ್ಷ ಲೋಕವ್ಯಾಪಕವಾಗಿ ಹೊಗೆಸೊಪ್ಪಿಗೆ ಸಂಬಂಧಪಟ್ಟ 25 ಲಕ್ಷ ಮರಣಗಳು ಸಂಭವಿಸುತ್ತವೆ. ಇವುಗಳಲ್ಲಿ ನಾಲ್ಕು ಲಕ್ಷ ಅಮೆರಿಕದಲಿಯ್ಲೆ ಸಂಭವಿಸುತ್ತದೆ. ಅಮೆರಿಕದ ಸರ್ಜನ್ ಜನರಲರು ಹೇಳುವುದು: “ಅಮೆರಿಕದ ಆರು ಮರಣಗಳಲ್ಲಿ ಒಂದಕ್ಕೂ ಹೆಚ್ಚು ಮರಣಕ್ಕೆ ಧೂಮಪಾನ ಕಾರಣ. ನಮ್ಮ ಸಮಾಜದಲ್ಲಿ ಮರಣವನ್ನು ತಡೆಯಸಾಧ್ಯವಿರುವ ಅತಿ ಪ್ರಾಮುಖ್ಯವಾದ ಏಕ ಕಾರಣ ಧೂಮಪಾನವೇ ಆಗಿದೆ.” ಕೆಲವು ಆರೋಗ್ಯಾಧಿಕಾರಿಗಳು, ಧೂಮಪಾನ ಅಂತಿಮವಾಗಿ ಈಗ 20ಕ್ಕಿಂತ ಕಡಮೆ ವಯಸ್ಸಿನವರಾದ 20 ಕೋಟಿ ಜನರನ್ನಾದರೂ ಕೊಲ್ಲುವುದು ಎಂದು ಭಯಪಡುತ್ತಾರೆ.
ಆದರೆ ಧೂಮಪಾಯಿಗಳು ತಮಗೆ ಮಾತ್ರ ಹಾನಿ ತರುವುದಲ್ಲ. ತಮ್ಮ ವಿಷದ ಹೊಗೆಯನ್ನು ಇತರರು ಸೇವಿಸುವಂತೆ ಬಲಾತ್ಕರಿಸುವುದರಿಂದ, ಸೇದದವರಿಗೂ ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ಉಸಿರಾಟದ ಕಾಯಿಲೆಗಳು ಬರುವಂತೆ ಮಾಡುತ್ತಾರೆ.
ನಿಮ್ಮ ಸ್ವಂತ ನಿರ್ಣಯವನ್ನು ಮಾಡುವುದು
ಹೀಗಿರುವುದರಿಂದ, ತಂಬಾಕಿನ ಅಪಾಯದ ಕುರಿತು ಜನರನ್ನು ಎಚ್ಚರಿಸಲು ಅಥವಾ ಅದರ ಉಪಯೋಗವನ್ನು ನಿರೋಧಿಸಲು ರಾಷ್ಟ್ರಗಳ ಹಿಂದೆ ರಾಷ್ಟ್ರಗಳು ಕ್ರಮ ಕೈಕೊಂಡಿರುವುದು ಆಶ್ಚರ್ಯವಲ್ಲ. ಆದರೆ ಇದರ ಅಪಾಯಗಳನ್ನು ಎತ್ತಿ ತೋರಿಸಿದುದರಿಂದ ಅನೇಕ ಯುವಜನರ ಮೇಲೆ ಆಗಿರುವ ಪರಿಣಾಮ ಕೊಂಚವೆ. ಹಾಲಿ ಎಂಬ 15 ವಯಸ್ಸಿನ ಹುಡುಗಿ ಹೇಳುವುದು: “ಸಿಗರೇಟು ಹಚ್ಚಿದೆನೆಂದರೆ ಸರಿ, ನನಗೆ ಬಿಡುವಿನ ಅನಿಸಿಕೆಯಾಗುತ್ತದೆ. ಕ್ಯಾನ್ಸರ್ ಬರಬಹುದೆಂದು ನಾನು ನೆನಸುವುದೇ ಇಲ್ಲ.”
ವಿವೇಕದ ನಾಣ್ಣುಡಿಯೊಂದು ಹೇಳುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.” (ಜ್ಞಾನೋಕ್ತಿ 27:12) ತಂಬಾಕು ವ್ಯಸನದ ಅಂತ್ಯಫಲವಾದ ಕ್ಯಾನ್ಸರ್, ಹೃದ್ರೋಗ, ಉಸಿರಾಟದ ರೋಗಗಳು—ಇವುಗಳನ್ನು ಅನುಭವಿಸುವ ಮನಸ್ಸು ನಿಜವಾಗಿಯೂ ನಿಮಗಿದೆಯೆ? ನಿಕೊಟೀನಿನ ಅಮಲು, ಉಸಿರಿನ ವಾಸನೆ, ಒಣ ಕೆಮ್ಮುಲು, ಮತ್ತು ಹಳದಿ ಹಲ್ಲುಗಳನ್ನು ಖರೀದಿಸುವಷ್ಟು ಬೆಲೆಯುಳ್ಳದ್ದೆ?
ಇನ್ನೊಂದು ಪಕ್ಕದಲ್ಲಿ, ಧೂಮಪಾನವನ್ನು ಬಿಟ್ಟು ಬಿಡಲು ಆಳವಾದ ಕಾರಣವಿದೆ. ದೇವರೊಂದಿಗೆ ಮಿತ್ರತ್ವವನ್ನು ಕಾಪಾಡಿಕೊಳ್ಳುವುದೇ ಆ ಕಾರಣ. ನೀವು ಒಬ್ಬನಿಗೆ ತುಂಬ ಬೆಲೆಬಾಳುವ ಕೊಡುಗೆಯನ್ನು ಕೊಟ್ಟಾಗ ಅವನು ಯಾ ಅವಳು ಅದನ್ನು ತೆಗೆದು ಬಿಸಾಡುವಲ್ಲಿ ನಿಮ್ಮ ಮನ ನೋಯದೆ? ಹೌದು, ದೇವರು ನಮಗೆ “ಜೀವಶ್ವಾಸ”ಗಳನ್ನು ಕೊಟ್ಟಿದ್ದಾನೆ. (ಅಪೊಸ್ತಲರ ಕೃತ್ಯಗಳು 17:25) ಈ ಕೊಡುಗೆಯನ್ನು ನೀವು ದುರುಪಯೋಗಿಸುವಲ್ಲಿ ಆತನಿಗೆ ಹೇಗನಿಸಬಹುದೆಂದು ಭಾವಿಸಿರಿ! ಅಪೊಸ್ತಲ ಪೌಲನು ಬರೆದುದು: “ಪ್ರಿಯರೇ, ಈ ವಾಗ್ದಾನಗಳು ನಮಗಿರುವುದರಿಂದ ನಾವು ಶರೀರಾತ್ಮದ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿ ಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತವ್ವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.” (2 ಕೊರಿಂಥ 7:1) ಧೂಮಪಾನ ಶರೀರವನ್ನು, ಕೆಡುಕು ಮಾಡುವ ರಸಾಯನಗಳಿಂದ ಮಲಿನಗೊಳಿಸುವುದಷ್ಟೇಯಲ್ಲ. ಅದು ಒಬ್ಬನ ಆತ್ಮವನ್ನು ಅಥವಾ ಅವನ ಪ್ರಬಲ ಮಾನಸಿಕ ಶಕ್ತಿಯನ್ನೂ ಮಲಿನಗೊಳಿಸುತ್ತದೆ. ಧೂಮಪಾನ ಭ್ರಷ್ಟವೂ ಸ್ವಾರ್ಥಪರವೂ ಅದೈವಿಕವೂ ಆಗಿದೆ.
ಈ ಎಲ್ಲ ಕಾರಣಗಳ ಎದುರಲ್ಲಿಯೂ ಅನೇಕ ಯುವಜನರು ಇನ್ನೂ ಸೇದುವಂತೆ ಪ್ರೇರಿಸಲ್ಪಡುತ್ತಾರೆ. ಇದೇಕೆ ಮತ್ತು ಯುವವ್ಯಕ್ತಿಯು ಇಂಥ ಒತ್ತಡವನ್ನು ಹೇಗೆ ಪ್ರತಿಭಟಿಸಬಲ್ಲನು ಎಂಬುವು ಭಾವೀ ಲೇಖನವೊಂದರ ವಿಷಯವಾಗಿರುವುದು. (g91 8/8)
[ಪುಟ 16 ರಲ್ಲಿರುವ ಚಿತ್ರ]
ನಿಮ್ಮನ್ನು ಸ್ವತಃ ಕೊಂಡಿಯಲ್ಲಿ ಸಿಕ್ಕಿಸಿಕೊಳ್ಳಲು ಬಿಡುವುದರ ಬದಲು, ಅದರ ಪರಿಣಾಮಗಳನ್ನು ಯೋಚಿಸಿರಿ