ಧಾರ್ಮಿಕ ಸೈರಣೆ 500 ವರ್ಷಗಳಾನಂತರ!
ಐನೂರು ವರ್ಷಗಳ ಹಿಂದೆ, ಕ್ರಿಸ್ಟಫರ್ ಕೊಲಂಬಸ್ ಸ್ಪೆಯ್ನ್ನಿಂದ ಕಡಲಯಾನಕ್ಕೆ ಹೊರಟನು. ಕೊಲಂಬಸನ ನಿರ್ಗಮನಕ್ಕೆ ಒಂದು ದಿನ ಮೊದಲು, ಇನ್ನೊಂದು ಹಡಗುಗಳ ತಂಡವು ಸ್ಪೆಯ್ನನ್ನು ಬಿಟ್ಟು ಇನ್ನೊಂದು ದಿಕ್ಕಿಗೆ ಹೊರಟಿತು. ಕೊಲಂಬಸನೂ ಅವನ ತಂಡದ ಪುರುಷರೂ ಹೊಸ ದೇಶಗಳನ್ನು ಕಂಡುಹಿಡಿದು ಜಯೋತ್ಸವದಿಂದ ಹಿಂದಿರುಗಿ ಬಂದರು. ಆದರೆ ಅದೃಷ್ಟಹೀನರಾದ ಜಲಸಂಚಾರಿಗಳ ಇನ್ನೊಂದು ತಂಡ ತಮ್ಮ ಸ್ವದೇಶವನ್ನು ಎಂದಿಗೂ ಪುನಃ ನೋಡುವಂತಿರಲಿಲ್ಲ.
ಈ ಜನರು ಯಾರು, ಮತ್ತು ಅವರನ್ನು ದೇಶದಿಂದ ಗಡೀಪಾರು ಮಾಡಿದ್ದೇಕೆ? ಅವರು ಸ್ಪ್ಯಾನಿಷ್ ಯೆಹೂದ್ಯರು. ತನ್ನ ಅನ್ವೇಷಣೆಯ ಕಡಲಯಾನಕ್ಕೆ ಕೊಲಂಬಸನು ರಾಜ ಬೆಂಬಲವನ್ನು ಪಡೆಯುವುದಕ್ಕೆ ಎರಡು ವಾರಗಳ ಮೊದಲು, ಸ್ಪೆಯ್ನ್ನ ಕ್ಯಾಥೊಲಿಕ್ ರಾಜದಂಪತಿಗಳಾಗಿದ್ದ ಫರ್ಡಿನ್ಯಾಂಡ್ ಮತ್ತು ಇಸಬೆಲ, ಸ್ಪೆಯ್ನ್ನ ಯೆಹೂದ್ಯರು “ಪುನಃ ಹಿಂದಿರುಗಲೇ ಬಾರದು” ಎಂದು ಹೇಳುವ ಅವರನ್ನು ಹೊರತಳ್ಳುವ ಆಜ್ಞೆಯನ್ನು ಹೊರಡಿಸಿದರು. ಸ್ಪ್ಯಾನಿಷ್ ಯೆಹೂದ್ಯರು ಪವಿತ್ರ ಕ್ಯಾಥೊಲಿಕ್ ವಿಶ್ವಾಸದ ವಿರುದ್ಧ ಪಾತಕಗಳನ್ನು ನಡೆಸುತ್ತಿದ್ದಾರೆಂಬ ಆರೋಪವನ್ನು ಅವರು ಹಾಕಿದರು.
ಈ ಆಜ್ಞೆ, ಅದಾಗಲೇ ಸ್ಥಾಪಿಸಲ್ಪಟ್ಟಿದ್ದ ಪಾಷಂಡ ವಿಚಾರಣಾಧಿಕಾರದೊಂದಿಗೆ, ಸ್ಪೆಯ್ನನ್ನು ಪೂರ್ತಿ ಕ್ಯಾಥೊಲಿಕಾಗಿ ಮಾಡುವ ಧರ್ಮಯುದ್ಧದ ಪ್ರಾರಂಭವನ್ನು ಗುರುತಿಸಿತು. ಯೆಹೂದ್ಯರನ್ನು ಹೊರದೂಡಿದ ಒಂದು ದಶಕದ ಬಳಿಕ, ಇಸ್ಲಾಮ್ ನಂಬಿಕೆಯನ್ನು ಆಚರಿಸುತ್ತಿದ್ದ ಯಾವನೇ ಮೋರನನ್ನೂ ಹೊರತಳ್ಳಲಾಯಿತು. ಮತ್ತು ಈ ಪಾಷಂಡ ವಿಚಾರಣಾಧಿಕಾರ ಬೇಗನೆ ಚಿಗುರುತ್ತಿದ್ದ ಪ್ರಾಟೆಸ್ಟಂಟ್ ಗುಂಪುಗಳನ್ನೂ ನಿರ್ಮೂಲಗೊಳಿಸಿತು. ಕೊಲಂಬಸನು ತನ್ನ ರಾಜಪೋಷಕರ ಅಸಹಿಷ್ಣುತೆಯ ಭಾವವನ್ನು ಪ್ರತಿಧ್ವನಿಸುತ್ತಾ, ತಾನು ಕಂಡುಹಿಡಿಯಬಹುದಾದ ಯಾವುದೇ ದೇಶದಿಂದ ಯೆಹೂದ್ಯರನ್ನು ಹೊರಹಾಕುವ ವಿಷಯ ಮಾತಾಡಿದನು.
ಸ್ಪೆಯ್ನ್ನಲ್ಲಿ ಈ ಧಾರ್ಮಿಕ ಅಸಹಿಷ್ಣುತೆಯ ಮನೋಭಾವ ಈ ಶತಮಾನದ ತನಕವೂ ಉಳಿದಿದೆ. ಫ್ರಾನ್ಸಿಸ್ಕೊ ಫ್ರಾಂಕೊ ಸರ್ವಾಧಿಕಾರದ ಕೆಳಗೆ, ಕ್ಯಾಥೊಲಿಕ್ ಧರ್ಮವು ಮಾತ್ರ “ಅಧಿಕೃತ ಸಂರಕ್ಷಣೆಯನ್ನು” ಪಡೆಯಿತು. ಇನ್ನೊಂದು ಧರ್ಮವನ್ನು ಆಚರಿಸಲು ಅಪೇಕ್ಷಿಸಿದವರನ್ನು ಅನಿಯಂತ್ರಿತವಾಗಿ ದಸ್ತಗಿರಿ ಮಾಡಲಾಗುತ್ತಿತ್ತು. ಸ್ಪೆಯ್ನ್ನ ಯೆಹೋವನ ಸಾಕ್ಷಿಗಳನ್ನು ಸ್ಪೆಯ್ನ್ನ ಧಾರ್ಮಿಕ ಐಕ್ಯವನ್ನು ಉಲ್ಲಂಘಿಸುವವರೆಂಬ ಆರೋಪದ ಮೇಲೆ ಬಂಧಿಸಲಾಗುತ್ತಿತ್ತು. ಸರಕಾರದ ಮಂತ್ರಿ ಕಾಮಿಲೊ ಆಲೊಂಸೊ ವೇಗ, 1959ರಲ್ಲಿ, ಸಾಕ್ಷಿಗಳ ಚಟುವಟಿಕೆಗಳನ್ನು “ನಿರ್ಮೂಲ ಮಾಡಲು” ಮುಂದುವರಿಯಬೇಕೆಂದು ಪೊಲೀಸ್ ಪಡೆಗೆ ಆಜ್ಞೆ ಕೊಟ್ಟರು. ಆದರೆ ಸಂತೋಷದ ವಿಷಯವೇನಂದರೆ, ಈಗ ಸಮಯಗಳು ಬದಲಾವಣೆ ಹೊಂದಿವೆ.
ಮಾರ್ಚ್ 31, 1992ರಲ್ಲಿ, ಸ್ಪೆಯ್ನ್ನ ಈಗಿನ ಅರಸರಾದ ವಾನ್ ಕಾರ್ಲೋಸ್, ತನ್ನ ಪೂರ್ವಜರು ಯೆಹೂದ್ಯರನ್ನು ಹೊರತಳ್ಳುವ ಆಜೆಗ್ಞೆ ಹಸ್ತಾಕ್ಷರ ಹಾಕಿ ಸರಿಯಾಗಿ 500 ವರ್ಷಗಳಾನಂತರ, ಸ್ಪ್ಯಾನಿಷ್ ಅರಸನು ಹೊರತಳ್ಳಿದ ಸ್ಪ್ಯಾನಿಷ್ ಯೆಹೂದ್ಯರ ವಂಶಸ್ಥರೊಂದಿಗೆ ಸಾಂಕೇತಿಕ ಭೇಟಿಯಾಗಿ ಮೆಡ್ರೀಡ್ನ ಒಂದು ಸಿನಗಾಗ್ ಸಭಾಮಂದಿರಕ್ಕೆ ಭೇಟಿಕೊಟ್ಟರು.
“ನಾವು ಸ್ಪೆಯ್ನ್ನ ಅಸಹಿಷ್ಣುತೆಯ ಪುಟವನ್ನು ತಿರುವಿ ಹಾಕಿದ್ದೇವೆ” ಎಂದು ಸ್ಪ್ಯಾನಿಷ್ ನ್ಯಾಯಮಂತ್ರಿ ಟೋಮಸ್ ಡೇಲ ಕ್ವಾಡ್ರ-ಸಾಲ್ಸೀನೊ ಪ್ರಕಟಿಸಿದರು. ಈಗ ಯೆಹೂದ್ಯರು, ಮುಸ್ಲಿಮರು, ಮತ್ತು ಪ್ರಾಟೆಸ್ಟಂಟರು ತಡೆಯಿಲ್ಲದೆ ಆರಾಧಿಸುತ್ತಾರೆ. ಮತ್ತು ಯೆಹೋವನ ಸಾಕ್ಷಿಗಳು ಈಗ ನಿಷೇಧಕ್ಕೊಳಗಾಗಿರುವುದಿಲ್ಲ. ಮೆಡ್ರೀಡ್ ಒಂದು ಹೊಸ ಮಸೀದಿ ಮತ್ತು ಸಿನಗಾಗ್ ಹಾಗೂ ಸ್ಪೆಯ್ನ್ನ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಲ್ಲಿ ಹೆಮ್ಮೆ ಪಡುತ್ತದೆ. ಕ್ರಿಯಾಶೀಲರಾದ 90,000ಕ್ಕೂ ಹೆಚ್ಚು ಸದಸ್ಯರಿರುವ ಯೆಹೋವನ ಸಾಕ್ಷಿಗಳನ್ನು ಈಗ ಸ್ಪೆಯ್ನ್ನಲ್ಲಿ ಅತಿ ದೊಡ್ಡ ಕ್ಯಾಥೊಲಿಕೇತರ ಧರ್ಮವಾಗಿ ಪರಿಗಣಿಸಲಾಗುತ್ತದೆ.
ನಿಮಗೆ ಯೆಹೋವನ ಸಾಕ್ಷಿಗಳ ಮತ್ತು ಅವರ ನಂಬಿಕೆಗಳ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿರುವಲ್ಲಿ, Watch Tower, H-58 Old Khandala Road, Lonavla 410 401, Mah., ಅಥವಾ 5ನೆಯ ಪುಟದಲ್ಲಿ ಕೊಟ್ಟಿರುವ ಅತಿ ಹತ್ತಿರದ ವಿಳಾಸಕ್ಕೆ ಬರೆಯಿರಿ. (g93 1/8)
[ಪುಟ 32 ರಲ್ಲಿರುವ ಚಿತ್ರ]
ವಾಚ್ ಟವರ್ ಸೊಸೈಟಿಯ ಸ್ಪೆಯಿನ್ ಬ್ರಾಂಚ್