ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g93 5/8 ಪು. 3-5
  • ಹಿಂಸಾಚಾರ ಮನೆಗೆ ಹೊಡೆಯುವಾಗ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಿಂಸಾಚಾರ ಮನೆಗೆ ಹೊಡೆಯುವಾಗ
  • ಎಚ್ಚರ!—1993
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯುದ್ಧ ಹೂಡಿರುವ ಕುಟುಂಬಗಳು
  • ಅಪಾಯಕರ ರಣರಂಗ
  • ಗೃಹ ಜೀವನದ ಹಿಂಸಾಚಾರವನ್ನು ಯಾವುದು ಆಗಿಸುತ್ತದೆ?
    ಎಚ್ಚರ!—1993
  • ಪುರುಷರು ಸ್ತ್ರೀಯರನ್ನು ಏಕೆ ಹೊಡೆಯುತ್ತಾರೆ?
    ಎಚ್ಚರ!—2002
  • ಗೃಹ ಜೀವನದ ಹಿಂಸಾಚಾರಕ್ಕೆ ಅಂತ್ಯ
    ಎಚ್ಚರ!—1993
  • ಒಂದು ಕುಟುಂಬವನ್ನು ಭಂಗಗೊಳಿಸುವಂತಹ ಸಮಸ್ಯೆಗಳನ್ನು ನೀವು ಜಯಿಸಬಲ್ಲಿರಿ
    ಕುಟುಂಬ ಸಂತೋಷದ ರಹಸ್ಯ
ಇನ್ನಷ್ಟು
ಎಚ್ಚರ!—1993
g93 5/8 ಪು. 3-5

ಹಿಂಸಾಚಾರ ಮನೆಗೆ ಹೊಡೆಯುವಾಗ

“ಮಾನವ ಹಿಂಸಾಚಾರ—ಅದು ತಪರಾಕು, ನೂಕು, ಚಾಕು, ಯಾ ಗುಂಡಿನೇಟೇ ಆಗಲಿ—ನಮ್ಮ ಸಮಾಜದಲ್ಲಿ ಬೇರೆ ಯಾವ ಸ್ಥಳಕ್ಕಿಂತಲೂ ಹೆಚ್ಚು ಬಾರಿ ಕುಟುಂಬ ವೃತ್ತದಲ್ಲಿ ಸಂಭವಿಸುತ್ತದೆ.”—ಬಿಹೈಂಡ್‌ ಕ್ಲೋಸ್ಡ್‌ ಡೋರ್ಸ್‌.

ಅಮೆರಿಕದ ಯಾವುದೇ ರಸ್ತೆಯಲ್ಲಿ ನಡೆಯಿರಿ. ಪ್ರತಿ ಎರಡನೆಯ ಮನೆಯಲ್ಲಿ ಈ ವರ್ಷ ಕಡಮೆ ಪಕ್ಷ ಒಮ್ಮೆಯಾದರೂ ಒಂದಲ್ಲ ಒಂದು ವಿಧದ ಗೃಹ ಜೀವನದ ಹಿಂಸಾಚಾರ ಸಂಭವಿಸಲಿರುವುದು. ಮತ್ತು ಪ್ರತಿ ನಾಲ್ಕನೆಯ ಮನೆಯಲ್ಲಿ ಇದು ಮರಳಿ ಮರಳಿ ಸಂಭವಿಸುವುದು. ಹಾಸ್ಯವ್ಯಂಗ್ಯವಾಗಿ, ರಾತ್ರಿ ವೇಳೆ ರಸ್ತೆಯಲ್ಲಿ ನಡೆಯಲು ಭಯ ಪಡುವವರು ಮನೆಯಲ್ಲಿ ಅದಕ್ಕೂ ಹೆಚ್ಚಿನ ಅಪಾಯದಲ್ಲಿದ್ದಾರೆ.

ಆದರೆ ಗೃಹ ಜೀವನದ ಹಿಂಸಾಚಾರ ಕೇವಲ ಅಮೆರಿಕಕ್ಕೆ ಸೀಮಿತವಲ್ಲ. ಇದು ಲೋಕಾದ್ಯಂತ ನಡೆಯುತ್ತದೆ. ದೃಷ್ಟಾಂತಕ್ಕೆ, ಡೆನ್ಮಾರ್ಕ್‌ನಲ್ಲಿ ನಡೆಯುವ ಪ್ರತಿ ಮೂರರಲ್ಲಿ ಎರಡು ಕೊಲೆಗಳು ಕುಟುಂಬದೊಳಗೆ ನಡೆಯುತ್ತವೆ. ಆಫ್ರಿಕದಲ್ಲಿ ಸಂಶೋಧನೆ ತೋರಿಸುವುದೇನಂದರೆ, ದೇಶದ ಮೇಲೆ ಹೊಂದಿಕೊಂಡು, ಎಲ್ಲ ಕೊಲೆಗಳಲ್ಲಿ, 22ರಿಂದ 63 ಪ್ರತಿಶತ ಕೊಲೆಗಳು ಕುಟುಂಬದೊಳಗೆ ನಡೆಯುತ್ತವೆ. ಮತ್ತು ಲ್ಯಾಟಿನ್‌ ಅಮೆರಿಕದಲ್ಲಿ, ಅನೇಕರು, ವಿಶೇಷವಾಗಿ ಸ್ತ್ರೀಯರು, ಪೌರುಷಪ್ರಾಯರಾದ ಗಂಡಸರಿಂದ ಹೀನೈಸಲ್ಪಟ್ಟು, ಹೊಡೆಯಲ್ಪಡುತ್ತಾರೆ ಯಾ ಕೊಲ್ಲಲ್ಪಡುತ್ತಾರೆ.

ಕೆನಡದಲ್ಲಿ, ಪ್ರತಿ ವರ್ಷ ಸುಮಾರು ನೂರು ಸ್ತ್ರೀಯರು ಅವರ ಗಂಡಂದಿರಿಂದ ಯಾ ಸಂಪ್ರದಾಯ ನ್ಯಾಯ ವಿವಾಹದಲ್ಲಿ ಜೀವಿಸುವ ಜೊತೆಗಳಿಂದ ಮರಣಕ್ಕೊಳಗಾಗುತ್ತಾರೆ. ಕೆನಡಕ್ಕಿಂತ ಸುಮಾರು ಹತ್ತು ಪಾಲು ಜಾಸ್ತಿ ಜನಸಂಖ್ಯೆಯಿರುವ ಅಮೆರಿಕದಲ್ಲಿ, ಪ್ರತಿ ವರ್ಷ ಸುಮಾರು 4,000 ಮಂದಿ ಸ್ತ್ರೀಯರು ಅವರನ್ನು ನಿಂದಿಸುವ ಗಂಡಂದಿರಿಂದ ಯಾ ನಲ್ಲರಿಂದ ಕೊಲ್ಲಲ್ಪಡುತ್ತಾರೆ. ಇದಲ್ಲದೆ, ಪ್ರತಿ ವರ್ಷ ಸುಮಾರು 2,000 ಮಕ್ಕಳು ಅವರ ಹೆತ್ತವರಿಂದಲೂ, ಅಷ್ಟೇ ಮಂದಿ ಹೆತ್ತವರು ಅವರ ಮಕ್ಕಳಿಂದಲೂ ಕೊಲೆ ಮಾಡಲ್ಪಡುತ್ತಾರೆ.

ಹೀಗೆ ಲೋಕವ್ಯಾಪಕವಾಗಿ, ಗಂಡಂದಿರು ತಮ್ಮ ಹೆಂಡತಿಯರನ್ನೂ, ಹೆಂಡತಿಯರು ಗಂಡಂದಿರನ್ನೂ, ಹೆತ್ತವರು ಮಕ್ಕಳನ್ನೂ ಹೊಡೆಯುತ್ತಾರೆ, ಮತ್ತು ಮಕ್ಕಳು ಹೆತ್ತವರ ಮೇಲೆ ಆಕ್ರಮಣ ನಡೆಸುವುದಲ್ಲದೆ, ಮಕ್ಕಳು ತಮ್ಮ ಮಧ್ಯೆ ಹಿಂಸಾಚಾರವನ್ನು ನಡೆಸುತ್ತಾರೆ. “ಪ್ರಾಪ್ತ ವಯಸ್ಸಿನವರು ತಮ್ಮ ಜೀವನದಲ್ಲಿ ಅನುಭವಿಸುವ ಅತಿ ಹೆಚ್ಚಿನ ಕೋಪ ಮತ್ತು ಹಿಂಸಾಚಾರವು ತಮ್ಮ ರಕ್ತಸಂಬಂಧಿಯಿಂದ ಯಾ ಅವನ ಕಡೆಗೆ, ಮತ್ತು ಈ ಕೋಪ ಇತರ ಯಾವ ಸಂಬಂಧದಲ್ಲಿ ಅನುಭವಿಸುವ ಕೋಪಕ್ಕಿಂತಲೂ ಹೆಚ್ಚು ತೀವ್ರವಾಗಿದೆ,” ಎನ್ನುತ್ತದೆ, ವೆನ್‌ ಫ್ಯಾಮಿಲೀಸ್‌ ಫೈಟ್‌ ಎಂಬ ಪುಸ್ತಕ.

ಯುದ್ಧ ಹೂಡಿರುವ ಕುಟುಂಬಗಳು

ಪತ್ನಿ ಯಾ ಪತಿಯ ಅಪಪ್ರಯೋಗ: ಹೆಚ್ಚು ಬಾರಿ, ಪತಿಗಳು ತಮ್ಮ ಮದುವೆಯ ಲೈಸನ್ಸನ್ನು ಹೆಂಡತಿಯರನ್ನು ಹೊಡೆಯುವ ಲೈಸನ್ಸಾಗಿ ವೀಕ್ಷಿಸುತ್ತಾರೆ. ಸ್ತ್ರೀಯರು ಪುರುಷರಿಗೆ ಹೊಡೆಯುವುದು ನಿಜವಾದರೂ, ಅದರಿಂದಾಗುವ ಹಾನಿಯು ಸಾಮಾನ್ಯವಾಗಿ, ಪುರುಷರು ತಮ್ಮ ಹೆಂಡತಿಯರಿಗೆ ಹೊಡೆದಾಗ ಆಗುವ ಹಾನಿಯಷ್ಟು ವ್ಯಾಪಕವಾಗಿರುವುದಿಲ್ಲ. ಪೇರೆಂಟ್ಸ್‌ ಪತ್ರಿಕೆ ವರದಿ ಮಾಡುವುದು: “ಪತಿ, ಪತ್ನಿಯರ [ತೀರಾ] ಅಪಪ್ರಯೋಗ ವರದಿಯಾದ ಕೇಸುಗಳಲ್ಲಿ 95ಕ್ಕೂ ಹೆಚ್ಚು ಪ್ರತಿಶತ, ಪುರುಷನು ಸ್ತ್ರೀಯನ್ನು ಹೊಡೆಯುವುದನ್ನು ಒಳಗೊಂಡಿದೆ.”

ನ್ಯೂ ಯಾರ್ಕಿನ ಒಬ್ಬ ಮಹಿಳೆ ಜಿಲ್ಲಾ ವ್ಯವಹಾರ ನ್ಯಾಯವಾದಿ ಹೇಳುವುದು: “ಸ್ತ್ರೀಯರ ವಿರುದ್ಧ ಹಿಂಸಾಚಾರ ಅಮೆರಿಕನ್‌ ಸಮಾಜದಲ್ಲಿ ಸಾಂಕ್ರಾಮಿಕ ವ್ಯಾಧಿಯ ಪ್ರಮಾಣದಲ್ಲಿದೆ. ಪ್ರತಿ ವರ್ಷ, 60 ಲಕ್ಷದಷ್ಟೂ ಸ್ತ್ರೀಯರು . . . ಹೊಡೆಯಲ್ಪಡುತ್ತಾರೆಂದು ಎಫ್‌ಬಿಐ ಅಂದಾಜು ಮಾಡುತ್ತದೆ.” ಈ ಸಂಭವಗಳ ಸಂಖ್ಯೆಯಲ್ಲಿ ದೇಶದಿಂದ ದೇಶಕ್ಕೆ ವ್ಯತ್ಯಾಸವಿದೆಯಾದರೂ, ಪುರುಷರಿಂದ ಸ್ತ್ರೀಯರಿಗೆ ಹೊಡೆತವು ಅಧಿಕಾಂಶ ದೇಶಗಳಲ್ಲಿ ಅಲ್ಲದಿದ್ದರೆ ಅನೇಕ ದೇಶಗಳಲ್ಲಾದರೂ ಸಾಂಕ್ರಾಮಿಕ ರೋಗದಂತಿದೆ.

ಅಮೆರಿಕದಲ್ಲಿ, “ಹತ್ತು ಮಂದಿ ಸ್ತ್ರೀಯರಲ್ಲಿ ಒಬ್ಬಳು ಆಕೆಯ ವಿವಾಹಾವಧಿಯಲ್ಲಿ ಎಂದಾದರೂ ಆಕೆಯ ಗಂಡನಿಂದ ಗುರುತರವಾಗಿ ಅತಿಕ್ರಮಕ್ಕೆ (ಹೊಡೆಯುವುದು, ಒದೆಯುವುದು, ಕಚ್ಚುವುದು ಯಾ ಅದಕ್ಕಿಂತಲೂ ಕೆಡುಕಾದುದನ್ನು ಮಾಡುವುದು) ಒಳಗಾಗುವಳು.” ಕಡಮೆ ಗುರುತರವಾದ ಸಂಗತಿಗಳನ್ನು ಕೂಡಿಸುವಲ್ಲಿ, ಫ್ಯಾಮಿಲಿ ರಿಲೇಷನ್ಸ್‌ ಪತ್ರಿಕೆ ಹೇಳುವುದು, “ಅಮೆರಿಕದಲ್ಲಿ ಇಬ್ಬರು ಸ್ತ್ರೀಯರಲ್ಲಿ ಒಬ್ಬಳು ಗೃಹ ಜೀವನದ ಹಿಂಸಾಚಾರವನ್ನು ಅನುಭವಿಸುವಳು.”

ವಾಸ್ತವವೇನಂದರೆ, ನ್ಯೂ ಯಾರ್ಕಿನ ಒಬ್ಬ ಮಹಿಳೆ ಜಿಲ್ಲಾ ವ್ಯವಹಾರ ನ್ಯಾಯವಾದಿ, “ಪತ್ನಿಯ ಹೊಡೆತವು ಎಲ್ಲ ಬಲಾತ್ಕಾರ ಸಂಭೋಗ, ಹಿಂದಾಕ್ರಮಣ, ಮತ್ತು ಮೋಟರ್‌ ಅಪಘಾತಗಳನ್ನು ಕೂಡಿಸಿದರೆ ಆಗುವ, ಆಸ್ಪತ್ರೆಗೆ ಸೇರಿಸಲು ಯೋಗ್ಯವಾದ ಹಾನಿಗಳಿಗಿಂತ ಹೆಚ್ಚು ಹಾನಿಗಳನ್ನು ಮಾಡುತ್ತದೆ,” ಎಂದು ನಿರ್ಣಯಿಸಲಾಗಿದೆ ಎಂದು ಹೇಳುತ್ತಾರೆ.

ಡಾ. ಲೋಇಸ್‌ ಜಿ. ಲಿವೀಸೀ ಗಮನಿಸುವುದು: “ಸ್ತ್ರೀಯರ ವಿರುದ್ಧ ಹಿಂಸಾಚಾರ ಮತ್ತು ಕುಟುಂಬಗಳಲ್ಲಿ ಹಿಂಸಾಚಾರ ಸಾಮಾನ್ಯವೆಂಬುದು ಮತ್ತು ಅದನ್ನು ಮಾಡುವವರು . . . ಸಾಮಾನ್ಯ ಜನರೆಂಬುದು ಸ್ಪಷ್ಟ. . . . ಇದು ಜನಸಂಖ್ಯೆಯ ಎಲ್ಲ ವರ್ಗಗಳಲ್ಲಿ ಮತ್ತು ಕುಲಗಳಲ್ಲಿ ಒಂದು ಗುರುತರವಾದ ಸಮಸ್ಯೆಯಾಗಿದೆ. ಪ್ರತಿನಿಧಿರೂಪದ ಅಪಪ್ರಯೋಗಿಸಲ್ಪಟ್ಟ ಹೆಂಗಸು ತನ್ನ ಸ್ವಪ್ರಯೇಜನಕ್ಕಾಗಿ ಯೋಜಿಸಿ, ಕಾರ್ಯನಡೆಸಲು ಹೆದರುತ್ತಾಳೆ.”

ಕೆಲವು ವೇಳೆ ಬಲಿಪಶುಗಳು ಅಪಪ್ರಯೋಗಕ್ಕಾಗಿ ತಮ್ಮನ್ನೇ ದೂರಿಕೊಳ್ಳುತ್ತಾರೆ ಮತ್ತು ಇದರಿಂದ ಕೆಳಮಟ್ಟದ ಆತ್ಮಗೌರವ ಫಲಿಸುತ್ತದೆ. ಪೇರೆಂಟ್ಸ್‌ ಪತ್ರಿಕೆ ವಿವರಿಸುವುದು: “ಆತ್ಮವಿಶ್ವಾಸದ ಕೊರತೆ ಇದ್ದು ಆತ್ಮಗೌರವ ಕಮ್ಮಿ ಇರುವ ಸ್ತ್ರೀಯು ತನ್ನನ್ನು ಅಪಪ್ರಯೋಗದ ಗುರಿಹಲಗೆಯಾಗಿ ಮಾಡಿಕೊಳ್ಳುತ್ತಾಳೆ. . . . ಪ್ರತಿನಿಧಿರೂಪದ ಅಪಪ್ರಯೋಗಕ್ಕೊಳಗಾದ ಸ್ತ್ರೀ ಸ್ವತಃ ತನ್ನ ಪರವಾಗಿ ಯೋಜಿಸಿ, ಕಾರ್ಯ ನಡೆಸಲು ಭಯಪಡುತ್ತಾಳೆ.”

ವೈವಾಹಿಕ ಹಿಂಸಾಚಾರ ಮಕ್ಕಳ ಮೇಲೆಯೂ ಹಾನಿಕರವಾದ ಪರಿಣಾಮವನ್ನು ಬೀರುತ್ತದೆ. ಇತರರನ್ನು ನಿರ್ವಹಿಸಲು ಹಿಂಸಾಚಾರವನ್ನು ಉಪಯೋಗಿಸಬಹುದೆಂದು ಅವರು ಕಲಿಯುತ್ತಾರೆ. ಮಕ್ಕಳು ಅವರ ಇಷ್ಟವನ್ನು ನೆರವೇರಿಸಲು ತಾಯಂದಿರಿಗೆ, “ಅಪ್ಪ ನಿನಗೆ ಹೊಡೆಯುವಂತೆ ನಾನು ಮಾಡುತ್ತೇನೆ” ಎಂಬ ಬೆದರಿಕೆಯನ್ನು ಕೊಡುತ್ತಾರೆಂದೂ ಕೆಲವು ತಾಯಂದಿರು ವರದಿ ಮಾಡುತ್ತಾರೆ.

ಮಗುವಿನ ಅಪಪ್ರಯೋಗ: ಪ್ರತಿ ವರ್ಷ ಲಕ್ಷಗಟ್ಟಲೆ ಮಕ್ಕಳು ಅವರಿಗೆ ಗುರುತರವಾದ ಹಾನಿ, ಅಂಗಹೀನತೆ, ಯಾ ಸಾವನ್ನುಂಟುಮಾಡಬಲ್ಲ ವಿಪರೀತ ಶಾರೀರಿಕ ಶಿಕ್ಷೆಯನ್ನು ಎದುರಿಸುತ್ತಾರೆ. ವರದಿಯಾಗುವ ಪ್ರತಿಯೊಂದು ಅಪಪ್ರಯೋಗದ ಕೇಸಿಗೆ 200 ಕೇಸುಗಳು ವರದಿಯಾಗುವುದಿಲ್ಲವೆಂದು ಅಂದಾಜು ಮಾಡಲಾಗುತ್ತದೆ. “ಮಕ್ಕಳಿಗೆ ಅನೇಕ ವೇಳೆ ಮನೆಯು ಅವರಿರಬಹುದಾದ ಅತಿ ಅಪಾಯಕರವಾದ ಸ್ಥಳ” ಎಂದು ಸೋಷಿಯಾಲೊಜಿ ಆಫ್‌ ಮ್ಯಾರೆಜ್‌ ಆ್ಯಂಡ್‌ ದ ಫ್ಯಾಮಿಲಿ ಎಂಬ ಪುಸ್ತಕ ವಾದಿಸುತ್ತದೆ.

ಯೂನಿವರ್ಸಿಟಿ ಪ್ರೊಫೆಸರ್‌ ಜಾನ್‌ ಇ. ಬೇಟ್ಸ್‌ ಹೇಳುವುದೇನಂದರೆ, ಅಪಪ್ರಯೋಗವು ಒಂದು ಮಗು ತನ್ನ ಭಾವೀ ಜೀವಿತದಲ್ಲಿ ಹೇಗೆ ನಡೆಯುತ್ತದೆಂಬುದನ್ನು ಪ್ರಭಾವಿಸುವ ಅತಿ ಪ್ರಬಲ ಗೃಹ ಪ್ರಭಾವವಾಗಿದೆ. ಡಾ. ಸೂಸನ್‌ ಫಾರ್ವರ್ಡ್‌ ಹೇಳುವುದು: “ಜನರ ಆತ್ಮಾಭಿಮಾನವನ್ನು ಅಷ್ಟು ಕಲೆಗಟ್ಟಿಸುವ ಅಥವಾ ಪ್ರಾಪ್ತ ವಯಸ್ಸಿನಲ್ಲಿ ಅವರಿಗೆ ದೊಡ್ಡ ಭಾವಾತ್ಮಕ ತೊಂದರೆ ಇರುವ ಪ್ರವೃತ್ತಿಯುಳ್ಳವರಾಗಿ ಮಾಡುವ ಇನ್ನಾವ ಜೀವನ ಸಂಭವವನ್ನೂ ನಾನು ಕಂಡುಹಿಡಿದಿರುವುದಿಲ್ಲ.” ನಾಲ್ಕರಿಂದ ಐದು ವರ್ಷ ಪ್ರಾಯದ ಮಕ್ಕಳಲಿಯ್ಲೂ ಕಷ್ಟ ಪರಿಸ್ಥಿತಿಗಳಲ್ಲಿ ಆಕ್ರಮಣ ಸ್ವಭಾವವನ್ನು ಗಮನಿಸುವುದು ಸಾಧ್ಯ. ಅವರು ಬೆಳೆದಂತೆ, ಇಂಥ ಮಕ್ಕಳಲ್ಲಿ ಮಾದಕೌಷಧದ ದುರುಪಯೋಗ, ಮದ್ಯದ ದುರುಪಯೋಗ, ಪಾತಕ ವರ್ತನೆಗಳು, ಮನೋ ವಿಕಾರದ ಗೊಂದಲಗಳು ಮತ್ತು ವಿಳಂಬಿಸಿದ ಬೆಳವಣಿಗೆಯ ಪ್ರಮಾಣ ಹೆಚ್ಚು ಉನ್ನತವಾಗಿದೆ.

ಗ್ರಾಹ್ಯವಾಗಿ, ಅನೇಕ ಅಪಪ್ರಯೋಗಿಸಲ್ಪಟ್ಟ ಮಕ್ಕಳು ತಮ್ಮನ್ನು ಅಪಪ್ರಯೋಗಿಸಿದ ಹೆತ್ತವರ ಮೇಲೆ ಕೋಪವನ್ನಿಟ್ಟುಕೊಳ್ಳುತ್ತಾರೆ ಮಾತ್ರವಲ್ಲ, ಅಂಥ ಹಿಂಸಾಚಾರ ಮುಂದುವರಿಯುವಂತೆ ಬಿಟ್ಟ ಅಪಪ್ರಯೋಗಿಸದಿದ್ದ ಹೆತ್ತವರ ಮೇಲೆಯೂ ಅನೇಕ ವೇಳೆ ಕೋಪಿಸಿಕೊಳ್ಳುತ್ತಾರೆ. ಮಗುವಿನ ಮನಸ್ಸು, ಮೌನ ಸಾಕ್ಷಿಯನ್ನು ಸಹಾಪರಾಧಿಯಾಗಿ ನೋಡಬಹುದು.

ವೃದ್ಧರ ಅಪಪ್ರಯೋಗ: ಕೆನಡದ ವೃದ್ಧರಲ್ಲಿ ಅಂದಾಜಿನ 15 ಪ್ರತಿಶತ ವೃದ್ಧರು ತಮ್ಮ ಪ್ರಾಪ್ತ ವಯಸ್ಸಿನ ಮಕ್ಕಳಿಂದ ಶಾರೀರಿಕ ಹಾಗೂ ಮನೋವೈಜ್ಞಾನಿಕ ಅಪಪ್ರಯೋಗಕ್ಕೊಳಗಾಗುತ್ತಾರೆ. ಒಬ್ಬ ವೈದ್ಯರು ಮುಂತಿಳಿಸುವುದೇನಂದರೆ, “ಜನಸಂಖ್ಯೆಯಲ್ಲಿ ಹೆಚ್ಚು ಜನರು ವೃದ್ಧರಾಗುವಾಗ ಮತ್ತು ಮಕ್ಕಳ ಮೇಲೆ ಆರ್ಥಿಕ ಮತ್ತು ಭಾವಾತ್ಮಕ ಹೊರೆಗಳು ಹೆಚ್ಚಾಗುವಾಗ ಪರಿಸ್ಥಿತಿ ಇನ್ನೂ ಕೆಡುವುದು ಮಾತ್ರ ಸಾಧ್ಯ.” ಇಂಥ ಭಯಗಳು ಲೋಕವ್ಯಾಪಕವಾಗಿ ಅನುಭವಿಸಲ್ಪಡುತ್ತಿವೆ.

ಅನೇಕ ವೇಳೆ, ಇಂಥ ಅಪಪ್ರಯೋಗಗಳನ್ನು ವರದಿ ಮಾಡಲು ವೃದ್ಧರಿಗೆ ಮನಸ್ಸಿರುವುದಿಲ್ಲ. ಅವರು ಹಾಗೆ ಅಪಪ್ರಯೋಗಿಸುವವನ ಮೇಲೆ ಹೊಂದಿಕೊಂಡಿರಬಹುದು, ಮತ್ತು ಈ ಕಾರಣದಿಂದ ಇಂಥ ಎದೆಗುಂದಿಸುವ ಪರಿಸ್ಥಿತಿಯಲ್ಲಿ ಜೀವಿಸುತ್ತಾ ಹೋಗಲು ನಿರ್ಣಯಿಸಬಹುದು. ತನ್ನ ಮಗ ಮತ್ತು ಸೊಸೆಯ ವಿಷಯ ಅಧಿಕಾರಿಗಳಿಗೆ ಯಾವಾಗ ತಿಳಿಸುವಿರಿ ಎಂದು ಕೇಳಿದಾಗ ಒಬ್ಬ ವೃದ್ಧೆ ತಪ್ಪದೆ ಕೊಟ್ಟ ಉತ್ತರ “ಮುಂದಿನ ಬಾರಿ” ಎಂದಾಗಿತ್ತು. ಅವರು ಅವಳನ್ನು ಎಷ್ಟು ಕಠಿನವಾಗಿ ಹೊಡೆದಿದ್ದರೆಂದರೆ ಅವಳು ಒಂದು ತಿಂಗಳು ಆಸ್ಪತ್ರೆಯಲ್ಲಿದ್ದಳು.

ಸೋದರ ಸೋದರಿಯರ ಅಪಪ್ರಯೋಗ: ಇದು ಪ್ರಚಲಿತರೂಪದಲ್ಲಿರುವ ಗೃಹ ಜೀವನದ ಹಿಂಸಾಚಾರ. ಕೆಲವರು ಇದನ್ನು, “ಹುಡುಗರು ಹುಡುಗರೇ ಆಗಿರುವರು” ಎಂದು ಹೇಳಿ ಕ್ಷುಲ್ಲಕವೆಂಬಂತೆ ಕಾಣುತ್ತಾರೆ. ಆದರೂ ಒಂದು ಸಮೀಕ್ಷೆಯಲ್ಲಿ ಸೋದರ, ಸೋದರಿಯರಲ್ಲಿ ಅರ್ಧಕ್ಕೂ ಹೆಚ್ಚು ಅಂಶ, ಹೊರಗಿನವರ ವಿರುದ್ಧವಾಗಿ ಅಂಥ ಪಾತಕಗಳನ್ನು ನಡೆಸುತ್ತಿದ್ದಲ್ಲಿ ಪಾತಕದ ದಾವೆ ಹೂಡುವಷ್ಟು ಗುರುತರವಾದ ಕೃತ್ಯಗಳನ್ನು ನಡೆಸಿದ್ದರು.

ಸೋದರ, ಸೋದರಿಯಲ್ಲಿರುವ ಈ ಅಪಪ್ರಯೋಗ, ಪ್ರಾಪ್ತ ವಯಸ್ಸಿನೊಳಗೆ ಒಯ್ಯಲ್ಪಡುವ ಒಂದು ನಮೂನೆಯನ್ನು ಕಲಿಸುತ್ತದೆಂದು ಕೆಲವರ ಅಭಿಪ್ರಾಯ. ಕೆಲವರಲ್ಲಿ ಇದು, ಭಾವೀ ವೈವಾಹಿಕ ಅಪಪ್ರಯೋಗದಲ್ಲಿ, ತಮ್ಮ ಹೆತ್ತವರ ಹಿಂಸಾಚಾರವನ್ನು ಗಮನಿಸಿರುವದಕ್ಕಿಂತಲೂ ಹೆಚ್ಚಾದ ಕಾರಣಭೂತ ಸಂಗತಿಯಾಗಿರಬಹುದು.

ಅಪಾಯಕರ ರಣರಂಗ

ಪೊಲೀಸರು ಒಟ್ಟುಗೂಡಿಸಿದ ಇತರ ಎಲ್ಲ ಪಾತಕಗಳನ್ನು ತನಿಖೆ ಮಾಡಲು ಕರೆಯಲ್ಪಡುವುದಕ್ಕಿಂತ ಹೆಚ್ಚು ಕುಟುಂಬದ ಹೋರಾಟಗಳನ್ನು ಇತ್ಯರ್ಥ ಮಾಡಲು ಕರೆಯಲ್ಪಡುತ್ತಾರೆಂದು ಒಬ್ಬ ಶಾಸನ ಸಂಶೋಧಕನು ಒಮ್ಮೆ ಅಂದಾಜು ಮಾಡಿದನು. ಇತರ ಯಾವ ರೀತಿಯ ಕರೆಗಿಂತಲೂ ಹೆಚ್ಚಾಗಿ ಕುಟುಂಬ ಕಲಹದ ಕರೆಯನ್ನು ಕೇಳಿ ಬಂದು ಕೊಲ್ಲಲ್ಪಟ್ಟ ಪೊಲೀಸರ ಸಂಖ್ಯೆಯು ಹೆಚ್ಚೆಂದೂ ಅವನು ವಾದಿಸಿದನು. “ಒಂದು ದರೋಡೆಯಾಗುವಲ್ಲಿ ಕಡಮೆ ಪಕ್ಷ ನಾವು ಸಿದ್ಧರಾಗಿಯಾದರೂ ಇದ್ದೇವೆ. ಆದರೆ ಯಾರಾದರೊಬ್ಬನ ಮನೆಗೆ ಹೋಗುವಾಗ . . . ಏನು ಸಂಭವಿಸಲಿಕ್ಕಿದೆಯೆಂಬುದು ನಮಗೆ ತಿಳಿಯದು,” ಎನ್ನುತ್ತಾನೆ ಒಬ್ಬ ಪೊಲೀಸನು.

ಗೃಹ ಜೀವನದ ಹಿಂಸಾಚಾರದ ಬಗೆಗೆ ಒಂದು ಸವಿಸ್ತಾರ ಅಧ್ಯಯನವನ್ನು ಮಾಡಿದ ಬಳಿಕ, ಅಮೆರಿಕದ ಒಂದು ಸಂಶೋಧಕ ತಂಡವು, ಯುದ್ಧ ಸಮಯದಲ್ಲಿ ಮಿಲಿಟರಿಯನ್ನು ಬಿಟ್ಟರೆ, ಕುಟುಂಬವೇ ಅಸ್ತಿತ್ವದಲ್ಲಿರುವ ಅತಿ ಹಿಂಸಾಚಾರದ ಸಮಾಜದ ಏಕಾಂಶವಾಗಿದೆ ಎಂದು ತೀರ್ಮಾನಿಸಿತು.

ಕುಟುಂಬ ಹಿಂಸಾಚಾರವನ್ನು ಯಾವುದು ಆಗಿಸುತ್ತದೆ? ಇದು ಎಂದಾದರೂ ಅಂತ್ಯಗೊಳ್ಳುವುದೊ? ಇದು ಎಂದಾದರೂ ಸಮರ್ಥಿಸಲ್ಪಡುತ್ತದೆಯೆ? ಈ ಪ್ರಶ್ನೆಗಳನ್ನು ಮುಂದಿನ ಲೇಖನವು ಪರೀಕ್ಷಿಸುವುದು.

[ಪುಟ 4 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಸ್ತ್ರೀಯರ ವಿರುದ್ಧ ಹಿಂಸಾಚಾರ ಅಮೆರಿಕನ್‌ ಸಮಾಜದಲ್ಲಿ ಸಾಂಕ್ರಾಮಿಕ ವ್ಯಾಧಿಯ ಪ್ರಮಾಣದಲ್ಲಿದೆ.”—ಒಬ್ಬಾಕೆ ಜಿಲ್ಲಾ ವ್ಯವಹಾರ ನ್ಯಾಯವಾದಿ

[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಮಕ್ಕಳಿಗೆ ಅನೇಕ ವೇಳೆ ಮನೆಯು ಅವರಿರಬಹುದಾದ ಅತಿ ಅಪಾಯಕರವಾದ ಸ್ಥಳ.”—ಸೋಷಿಯಾಲೊಜಿ ಆಫ್‌ ಮ್ಯಾರೆಜ್‌ ಆ್ಯಂಡ್‌ ದ ಫ್ಯಾಮಿಲಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ