ಐಶ್ವರ್ಯವು ಸಂತೋಷವನ್ನು ಖರೀದಿಸಬಲ್ಲದೊ?
ಹೆಚ್ಚು ಹಣವನ್ನು ಹೊಂದಿರುವುದು ಜನರನ್ನು ಹೆಚ್ಚು ಸಂತೋಷಿತರನ್ನಾಗಿ ಮಾಡುವುದಿಲ್ಲ ಎಂಬುದು ಸ್ಪಷ್ಟ. “ಬಡತನದ ಎಲ್ಲೆಯನ್ನು ಒಮ್ಮೆ ಮೀರಿದ ಕೂಡಲೆ, ಆದಾಯದಲ್ಲಿನ ಹೆಚ್ಚಿಕೆಗಳು ಆಶ್ಚರ್ಯಕರವಾಗಿ ವೈಯಕ್ತಿಕ ಸಂತೋಷದೊಂದಿಗೆ ಕಡಿಮೆ ಸಂಬಂಧವನ್ನು ಹೊಂದಿರುತ್ತವೆ” ಎಂದು ಸೈಕಾಲಜಿ ಟುಡೇ ಪತ್ರಿಕೆಯು ಹೇಳುತ್ತದೆ.
“ಯಾರ ಬೃಹತ್ ಐಶ್ವರ್ಯವು ಸಂತೋಷವನ್ನು ಖರೀದಿಸಲಾರದಾಯಿತೊ ಆ ಡಾರಿಸ್ ಡ್ಯೂಕ್ ಎಂಬ 80 ವರ್ಷ ವಯಸ್ಸಿನ ವಾರಸುದಾರಳು ಸತ್ತಿದ್ದಾಳೆ” ಎಂಬ ಶಿರೋನಾಮವನ್ನು ಹೊಂದಿದ್ದ, 1993, ಅಕ್ಟೋಬರ 29ರ ನ್ಯೂ ಯಾರ್ಕ್ ಟೈಮ್ಸ್ ಮೃತಿ ಪ್ರಕಟನೆಯೊಂದರಲ್ಲಿ ಇದು ದೃಢಪಡಿಸಲ್ಪಟ್ಟಿತು. ಆ ಲೇಖನವು ಹೇಳಿದ್ದು: “1945ರಲ್ಲಿ ರೋಮಿನಲ್ಲಿ ಒಂದು ಸಂಜೆ, ಆಗ 33 ವರ್ಷ ಪ್ರಾಯದವಳಾಗಿದ್ದ ಶ್ರೀಮತಿ ಡ್ಯೂಕ್, ತನ್ನ ಅಪಾರವಾದ ಐಶ್ವರ್ಯವು ಕೆಲವು ವಿಧಗಳಲ್ಲಿ ಸಂತೋಷಕ್ಕೆ ಒಂದು ಪ್ರತಿಬಂಧಕವಾಗಿತ್ತು ಎಂದು ಸ್ನೇಹಿತೆಯೊಬ್ಬಳಿಗೆ ಹೇಳಿದಳು.”
“ಆ ಎಲ್ಲ ಹಣವು ಕೆಲವೊಮ್ಮೆ ಒಂದು ಸಮಸ್ಯೆಯಾಗಿದೆ” ಎಂದು ಡ್ಯೂಕ್ ಸ್ನೇಹಿತೆಯೊಬ್ಬಳಿಗೆ ತಿಳಿಸಿದಳು. “ನಾನು ಕೆಲವೊಂದು ಸಮಯಗಳಲ್ಲಿ ಒಬ್ಬ ಪುರುಷನೊಂದಿಗೆ ಹೊರಹೋದಬಳಿಕ, ಅವನು ನನ್ನನ್ನು ಎಷ್ಟು ಪ್ರೀತಿಸುತ್ತಾನೆಂದು ನನಗೆ ಹೇಳಲಾರಂಭಿಸುತ್ತಾನೆ. ಆದರೆ ಅವನು ನಿಜವಾಗಿಯೂ ಅದನ್ನು ಅರ್ಥೈಸುತ್ತಾನೆಂದು ನಾನು ಹೇಗೆ ತಿಳಿಯಬಲ್ಲೆ? ನಾನು ಹೇಗೆ ಖಚಿತವಾಗಿರಬಲ್ಲೆ?” ಟೈಮ್ಸ್ ಟಿಪ್ಪಣಿ ಮಾಡಿದ್ದು: “ಅವಳ ಜೀವಿತವು ಅವಳ ಐಶ್ವರ್ಯದಿಂದ ತೀವ್ರವಾಗಿ ಬಾಧಿಸಲ್ಪಟ್ಟಿತ್ತು ಹಾಗೂ ಗಾಯಗೊಂಡಿತ್ತು ಕೂಡ ಎಂದು ಆ ರಾತ್ರಿಯ ಅವಳ ಮಾತುಗಳು ತೋರಿಸಿದವು.”
ತದ್ರೀತಿಯಲ್ಲಿ, ಪ್ರಪಂಚದಲ್ಲೇ ಅತ್ಯಂತ ಐಶ್ವರ್ಯವಂತನಾದ ಮನುಷ್ಯನಾಗಿ ಒಮ್ಮೆ ಹೆಸರು ಪಡೆದಿದ್ದ ಶಾನ್ ಪಾಲ್ ಗೆಟಿ, ಹೇಳಿದ್ದು: “ಹಣವು ಅಗತ್ಯವಾಗಿ ಸಂತೋಷದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ. ಬಹುಶಃ ಅಸಂತೋಷದೊಂದಿಗೆ ಹೊಂದಿದೆ.” ಮತ್ತು 1970ಗಳಲ್ಲಿ ಚಲನ ಚಿತ್ರವೊಂದಕ್ಕೆ ಐದು ಲಕ್ಷ ಡಾಲರುಗಳನ್ನು ತೆಗೆದುಕೊಳ್ಳುತ್ತಿದ್ದ, ಹಾಲಿವುಡ್ನ ಒಬ್ಬ ಪ್ರಸಿದ್ಧ ನಟಿಯಾದ ಜೇನ್ ಫಾಂಡ ಹೇಳಿದ್ದು: “ನಾನು ಐಶ್ವರ್ಯವನ್ನು ಮತ್ತು ಎಲ್ಲ ಪ್ರಾಪಂಚಿಕ ವಸ್ತುಗಳನ್ನು ಸವಿದಾಗಿದೆ. ಅವುಗಳಲ್ಲಿ ಪ್ರಯೋಜನವೇ ಇಲ್ಲ. ವಿವಾಹ ವಿಚ್ಛೇದಗಳು ಮತ್ತು ತಮ್ಮ ಹೆತ್ತವರನ್ನು ದ್ವೇಷಿಸುವ ಮಕ್ಕಳನ್ನು ಹೊರತಾಗಿ ಇಲ್ಲಿ ಪ್ರತಿಯೊಂದು ಈಜು ಕೊಳಕ್ಕೆ ಒಬ್ಬ ಮನೋರೋಗ ಚಿಕಿತ್ಸಕನಿದ್ದಾನೆ.”
ಐಶ್ವರ್ಯವಾಗಲಿ ಅತಿದೀನಾವಸ್ಥೆಯ ಬಡತನವಾಗಲಿ ಎಂದಿಗೂ ಸಂತೋಷವನ್ನು ತರುವುದಿಲ್ಲ. ಹೀಗೆ, ಬಹಳ ದೀರ್ಘ ಸಮಯದ ಹಿಂದೆ ಜ್ಞಾನಿಯಾದ ಮನುಷ್ಯನೊಬ್ಬನು ಹೇಳಿದ್ದು: ‘ನನಗೆ ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡಬೇಡ.’ (ಜ್ಞಾನೋಕ್ತಿ 30:8, 9) ಒಬ್ಬ ವ್ಯಕ್ತಿಯು ಸಂತೋಷದಿಂದ ಇರಲಿಕ್ಕಾಗಿ “ಸಂತುಷ್ಟಿಸಹಿತವಾದ ದೇವ ಭಕ್ತಿಯು ಅಗತ್ಯವಾಗಿದೆ. ಏಕೆಂದರೆ ನಾವು ಲೋಕದೊಳಕ್ಕೆ ಏನನ್ನೂ ತೆಗೆದುಕೊಂಡು ಬರಲಿಲ್ಲ ಮತ್ತು ಅದರೊಳಗಿಂದ ಏನನ್ನೂ ತೆಗೆದುಕೊಂಡು ಹೋಗಲಾರೆವು. ಆದುದರಿಂದ, ಜೀವನಾಧಾರ ಮತ್ತು ವಸ್ತ್ರಗಳಿದ್ದರೆ ಸಾಕು, ಇವುಗಳಿಂದ ನಾವು ತೃಪ್ತರಾಗಿರುವೆವು” ಎಂದು ಇನ್ನೊಬ್ಬ ಬೈಬಲ್ ಬರಹಗಾರನು ಬರೆದನು.—1 ತಿಮೊಥೆಯ 6:6-10, NW.