ಅಕ್ಕಿ—ನಿಮಗೆ ಇಷ್ಟವಾಗಿರುವುದು ಕುಚ್ಚಲೊ ಬೆಳತಿಗೆಯೊ?
ಭಾರತದ ಎಚ್ಚರ! ಸುದ್ದಿಗಾರರಿಂದ
‘ನೀವು ಕುಚ್ಚಲಕ್ಕಿ ಉಣ್ಣುತ್ತೀರೊ ಅಥವಾ ಬೆಳತಿಗೆಯನ್ನೊ?’ ಭಾರತದ ಮನೆಯೊಂದರಲ್ಲಿ ಅತಿಥಿಗಳಾಗಿರುವ ನಿಮಗೆ ಕೇಳಬಹುದಾದ ಒಂದು ಪ್ರಶ್ನೆಯು ಇದಾಗಿದೆ. ಭಾರತದಲ್ಲಿ ತಿನ್ನಲ್ಪಡುವ ಸುಮಾರು 60 ಪ್ರತಿಶತ ಅಕ್ಕಿಯು ಅರೆಬೆಂದ (ಕುದಿಸುವ ಮೂಲಕ ಆಂಶಿಕವಾಗಿ ಬೇಯಿಸಿದ) ಕುಚ್ಚಲಕ್ಕಿಯಾಗಿರುತ್ತದೆ. ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಬಹುಮಟ್ಟಿಗೆ ಪ್ರತಿಯೊಬ್ಬರು, ಯಾವುದನ್ನು ಭಾರತೀಯರು ಬೆಳತಿಗೆ (ಹಸಿ) ಅಕ್ಕಿಯೆಂದು ಕರೆಯುತ್ತಾರೊ ಅದನ್ನು ತಿನ್ನುತ್ತಾರೆಂದು ತಿಳಿಯುವುದು ನಿಮ್ಮನ್ನು ಆಶ್ಚರ್ಯಗೊಳಿಸೀತು!
ನಾವು ಮಾತಾಡುತ್ತಿರುವುದು ಊಟಕ್ಕಾಗಿ ಅನ್ನವನ್ನು ಅಣಿಮಾಡುವ ರೀತಿಯ ಕುರಿತಲ್ಲ, ಬದಲಾಗಿ ಅಕ್ಕಿಯ ಧಾನ್ಯವು ಕೊಯ್ಯಲ್ಪಡುವಾಗ ಅದನ್ನು ಸಂಸ್ಕರಿಸುವುದರಲ್ಲಿ ಭಾರತೀಯರು ಉಪಯೋಗಿಸುವ ವಿಧಾನದ ಕುರಿತೆಂದು ನಿಮಗೆ ತಿಳಿಯುವಾಗ ಇವೆಲ್ಲವು ನಿಮಗೆ ಅತಿ ಸೋಜಿಗವಾಗಿ ಕಾಣಲಿಕ್ಕಿಲ್ಲ. ಹೀಗೆ, ಅಂತಹ ಕಾರ್ಯಗತಿಯಲ್ಲಿ ಏನನ್ನು ಮಾಡಲಾಗುತ್ತದೆ, ಮತ್ತು ಏಕೆ? ಅಕ್ಕಿ ಮತ್ತು ಆಹಾರ ಧಾನ್ಯವಾಗಿ ಅದರ ತಯಾರಿಕೆಯ ಕಡೆಗೆ ಒಂದು ನಿಕಟ ನೋಟವು ತಿಳಿವಳಿಕೆ ಕೊಡುವ ಉತ್ತರಗಳನ್ನು ಒದಗಿಸುವುದು.
ಕೋಟ್ಯಂತರ ಜನರ ಮುಖ್ಯ ಆಹಾರ
ಭಾರತದಲ್ಲಿ ಮತ್ತು ಚೀನದಲ್ಲಿ ಸಾ.ಶ.ಪೂ. ಮೂರು ಸಾವಿರ ವರ್ಷಗಳಷ್ಟು ಮುಂಚಿನಿಂದ ಅಕ್ಕಿಯು ಬೆಳೆಸಲ್ಪಡುತ್ತಿದೆ ಎಂದು ಪ್ರಾಚೀನ ಶೋಧನ ಶಾಸ್ತ್ರದ ಕಂಡುಹಿಡಿತಗಳು ಮತ್ತು ಪುರಾತನ ದಾಖಲೆಗಳು ತೋರಿಸುತ್ತವೆ. ಭಾರತದ ಪುರಾತನ ನಿವಾಸಿಗಳು ಅದನ್ನು ಧಾನ್ಯ ಅಥವಾ “ಮಾನವ ಕುಲದ ಪೋಷಕ” ಎಂದು ಕರೆದಿರುತ್ತಾರೆ. ಅದು ಇನ್ನೂ ಒಂದು ತಕ್ಕದಾದ ಹೆಸರು, ಯಾಕಂದರೆ ಬೇರೆ ಯಾವುದೆ ಒಂದು ಬೆಳೆಗಿಂತ ಹೆಚ್ಚು ಜನರು ಅಕ್ಕಿಯಿಂದಲೆ ಜೀವನಮಾಡುತ್ತಾರೆ. ಈ ಜನರಲ್ಲಿ ಹೆಚ್ಚಿನವರು ಏಷ್ಯಾದಲ್ಲಿ ಜೀವಿಸುತ್ತಾರೆ. ಇಲ್ಲಿ ಒಂದು ಮೂಲಕ್ಕನುಸಾರ, 60 ಕೋಟಿಗಿಂತಲೂ ಹೆಚ್ಚು ಜನರು ಅವರ ದೈನಂದಿನ ಆಹಾರ ಕ್ಯಾಲರಿಗಳಲ್ಲಿ ಅರ್ಧವನ್ನು ಅಕ್ಕಿಯಿಂದಲೆ ಪಡೆದುಕೊಳ್ಳುತ್ತಾರೆ, ಮತ್ತು ಲೋಕದ 90 ಪ್ರತಿಶತಕ್ಕಿಂತಲೂ ಹೆಚ್ಚು ಅಕ್ಕಿಯನ್ನು ಇಲ್ಲಿ ಉತ್ಪಾದಿಸಿ, ಸೇವಿಸಲಾಗುತ್ತದೆ.
ತೇವವುಳ್ಳ ಉಷ್ಣವಲಯದ ಗಂಗಾ ನದೀಮುಖಜ ಭೂಮಿಯು ಜಗತ್ತಿನ ಮುಖ್ಯ ಅಕ್ಕಿ ಉತ್ಪಾದನಾ ಕ್ಷೇತ್ರಗಳಲ್ಲಿ ಒಂದಾಗಿದೆ. ಧಾರಾಳ ಮಳೆ ಮತ್ತು ಬೆಚ್ಚನೆಯ ಶಾಖಮಟ್ಟಗಳು, ಹಾಗೂ ಕಾರ್ಮಿಕರ ಹೇರಳ ಒದಗಣೆಯು ಈ ಸ್ಥಳವನ್ನು ಅಕ್ಕಿಯ ವ್ಯವಸಾಯಕ್ಕೆ ಯುಕ್ತ ಸ್ಥಳವಾಗಿ ಮಾಡುತ್ತದೆ. ಈ ಪ್ರದೇಶದಲ್ಲಿ ಗ್ರಾಮೀಣ ನಿವಾಸಿಗಳಾದ ನಮ್ಮ ಸ್ನೇಹಿತರ ಆಮಂತ್ರಣವನ್ನು ನಾವು ಸ್ವೀಕರಿಸಿ, ಅಕ್ಕಿಯ ಕೊಯ್ಲು ಮತ್ತು ಕಾರ್ಯಗತಿಯನ್ನು ಸಾಕ್ಷಾತ್ತಾಗಿ ನಾವು ನೋಡೋಣ.
ಬತ್ತದ ಹೊಲಗಳನ್ನು ಕೊಯ್ಯುವುದು
ನಮ್ಮ ಬಸ್ ನಮ್ಮನ್ನು ಪಶ್ಚಿಮ ಬಂಗಾಳದ ಜೈದರ್ಕೋಟ್ಗೆ ಕರೆದೊಯ್ಯುತ್ತದೆ, ಮತ್ತು ನಾವು ನಮ್ಮ ಒಳಪ್ರದೇಶದ ಪ್ರಯಾಣವನ್ನು ಟ್ರೈಸಿಕಲ್ ರಿಕ್ಷದಲ್ಲಿ ಮುಂದುವರಿಸುತ್ತೇವೆ. ಒಡನೆ ನಾವು ಹೊಲಗಳಲ್ಲಿ ಪರಿಶ್ರಮದ ಚಟುವಟಿಕೆಯನ್ನು ಕಾಣುತ್ತೇವೆ. ಕೊಯ್ಲು ಯಂತ್ರಗಳು ಇಲ್ಲಿ ಕಾಣಸಿಗುವುದಿಲ್ಲ! ಬದಲಾಗಿ ತಂದೆಗಳು, ಗಂಡುಮಕ್ಕಳು, ಮಾವಂದಿರು ಮತ್ತು ಸಹೋದರರು ಬತ್ತದ ಹೊಲಗಳಲ್ಲಿ ಕಾರ್ಯಮಗ್ನರಾಗಿದ್ದು, ಚಿಕ್ಕ ಕತ್ತಿಗಳಿಂದ ಒಮ್ಮೆಗೆ ಕೈತುಂಬ ತೆನೆಗಳನ್ನು ಚಳಕದಿಂದ ಸವರುತ್ತಾ ಇದ್ದಾರೆ. ಕೊಯ್ಯುವವರಲ್ಲೊಬ್ಬನು ನಮ್ಮ ಕ್ಯಾಮರವನ್ನು ಗಮನಿಸುತ್ತಾ, ಒಣ ಹುಲ್ಲಿನ ಎಳೆಯಿಂದ ಸಿವುಡು ಕಟ್ಟುವುದನ್ನು ತಟ್ಟನೆ ಮುಗಿಸಿ, ಒಂದು ಗೊತ್ತಾದ ಭಂಗಿಯಲ್ಲಿ ಅದನ್ನು ಮೇಲಕ್ಕೆತ್ತಿ ಹಿಡಿಯುತ್ತಾನೆ. ಗ್ರಾಮೀಣ ಜನರು ಫೋಟೊ ತೆಗೆಸಿಕೊಳ್ಳುವುದಕ್ಕೆ ಎಷ್ಟು ಜಾಗೃತರಾಗಿ ಇದ್ದಾರೆಂಬದಕ್ಕಾಗಿ ನಾವು ನಗುತ್ತೇವೆ.
ಸಿವುಡುಗಳನ್ನು ಬಿಸಿಲಲ್ಲಿ ಒಂದೆರಡು ದಿನ ಒಣಗುವಂತೆ ಬಿಡಲಾಗುತ್ತದೆ. ಬಳಿಕ ಕುಟುಂಬದ ಎಳೆಯ ಸದಸ್ಯರು, ಮರ್ಮರ ಶಬ್ದಮಾಡುವ ಒಣ ಸಿವುಡುಗಳ ಚಿಕ್ಕ ಮೂಟೆಗಳನ್ನು ಕೌಶಲವಾಗಿ ತಲೆಯ ಮೇಲೆ ಸಮತೂಕದಿಂದ ಹೊರುತ್ತಾ ಮನೆಗೆ ಸಾಗಿಸುವುದರಲ್ಲಿ ಸಹಾಯಿಸಬಲ್ಲರು.
ಕೊನೆಗೆ, ನಾವು ಹಳ್ಳಿಗೆ ಆಗಮಿಸುತ್ತೇವೆ. “ಹೇಗಿದ್ದೀರಿ, ದಾದ?” ಎಂಬ ಗೌರವದ ಶಬ್ದವನ್ನು ಉಪಯೋಗಿಸುತ್ತಾ ನಾವು ನಮ್ಮ ಅತಿಥೇಯನನ್ನು ವಂದಿಸುತ್ತೇವೆ. ಎಲ್ಲವು ಚೆನ್ನಾಗಿದೆ ಎಂಬ ಆಶ್ವಾಸನೆಯನ್ನು ಅವನ ನಸುನಗು ನಮಗೆ ಕೊಡುತ್ತದೆ, ಮತ್ತು ಅವನ ಪತ್ನಿ ಚಹ ತಯಾರಿಸಲು ಅವಸರದಿಂದ ಹೋಗುವುದನ್ನು ನಾವು ಗಮನಿಸುತ್ತೇವೆ.
ನಮ್ಮ ಬೆಳಗ್ಗಿನ ಚಹವನ್ನು ಕುಡಿಯುವಾಗ, ಈ ವರ್ಷದ ಬೆಳೆಯು ಹೇಗಿದೆ ಎಂದು ನಾವು ಕೇಳುತ್ತೇವೆ. ಅವನು ಬೇಸಾಯಗಾರನ ಸಾಮಾನ್ಯ ನಿಗ್ರಹದೊಂದಿಗೆ “ಅಷ್ಟೇನೂ ಕೆಟ್ಟದಲ್ಲ” ಎಂದು ಉತ್ತರಿಸುತ್ತಾನೆ, ಆದರೆ ಬಳಿಕ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚು-ಫಲಕೊಡುವ ಬೀಜಗಳ ಉಪಯೋಗದೊಂದಿಗೆ, ನೆಲದ ಮೂಲಸಂಪತ್ತು ಒತ್ತಡಕ್ಕೆ ಒಳಪಟ್ಟಿರುತ್ತದೆ ಎಂದವನು ಪ್ರಲಾಪಿಸುತ್ತಾನೆ. ಮೊದಮೊದಲು ಅವು ಪವಾಡ ಪೈರುಗಳನ್ನು ಉತ್ಪನ್ನ ಮಾಡುವಂತೆ ಕಂಡವು, ಆದರೆ ಈಗ ಅದು ಒಂದು ತೀರ ಬೇರೆಯಾದ ಪರಿಸ್ಥಿತಿ. ಹೆಚ್ಚು-ಫಲಕೊಡುವ ಬೀಜಗಳಿಗೆ ಬೇಕಾದ ರಾಸಾಯನಿಕ ಗೊಬ್ಬರಗಳು ದುಬಾರಿ ಬೆಲೆಯವುಗಳು ಮತ್ತು ಅವನ್ನು ಖರೀದಿಸಲು ಅವನು ಅಸಮರ್ಥನಾಗಿದ್ದಾನೆ.
ತೆನೆಬಡಿಯುವುದು ಮತ್ತು ಅರೆಬೇಯಿಸುವುದು
ನಮ್ಮ ಉಪಾಹಾರವನ್ನು ಮುಗಿಸಿದಂತೆ, ನಾವು ನೋಡಲು ಬಂದಿರುವ ಕೊಯ್ಲಿನ ಕೆಲಸವನ್ನು ಮುಂದುವರಿಸುವಂತೆ ನಾವು ಕುಟುಂಬವನ್ನು ಪ್ರಚೋದಿಸುತ್ತೇವೆ. ಈ ಮನೆಯಲ್ಲಿ ತೆನೆಬಡಿಯುವಿಕೆಯನ್ನು ಈಗಾಗಲೆ ಮಾಡಿಯಾಗಿದೆ. ದಾರಿಯ ತುಸು ಆಚೆಕಡೆ ಇರುವ ನೆರೆಮನೆಯೊಂದರಲ್ಲಿ ಹೆಂಗಸರು ಕಾರ್ಯಮಗ್ನರಾಗಿದ್ದಾರೆ. ಅವರು ಒಂದೊಂದು ಸೂಡುಗಳನ್ನು ಬಿದಿರಿನ ದಿಬ್ಬದ ಮೇಲೆ ಬಡೆದು, ಧಾನ್ಯವು ಅದರ ಬಿರುಕುಗಳಿಂದ ಕೆಳಗೆ ಬೀಳುವಂತೆ ಬಿಡುತ್ತಾರೆ. ಉಳಿದಿರುವ ಹುಲ್ಲನ್ನು ಬಣಬೆಯಾಗಿ ಹೇರಲಾಗುತ್ತದೆ.
ಬತ್ತವೆಂದೂ ಕರೆಯಲ್ಪಡುವ ಗಿರಣಿಗೆ ಹಾಕದ ಅಕ್ಕಿಯು, ಒಂದು ಒರಟಾದ ಹೊರಹೊದಿಕೆಯಿಂದ ಆವರಿಸಲ್ಪಟ್ಟಿದ್ದು, ತೀರ ಅಜೀರ್ಣವಾದದ್ದಾಗಿದೆ. ಆದುದರಿಂದ ಬೆಳತಿಗೆ ಅಕ್ಕಿ ಇಷ್ಟವಿರುವವರಿಗೆ, ಮುಂದಿನ ಒಂದೇ ಹೆಜ್ಜೆಯು ಸಿಪ್ಪೆಸುಲಿಯುವಿಕೆ, ಅಥವಾ ಹೊರಹೊದಿಕೆಯ ಕೀಳಿಹಾಕುವಿಕೆಯಾಗಿದೆ, ಮತ್ತು ಉತ್ಪನ್ನವು ಅತಿ ನಾಜೂಕಿನ ವಿದೇಶೀ ಮಾರ್ಕೆಟಿಗೆ ಹೋಗುತ್ತದಾದರೆ, ತವುಡು ಆವರಣವನ್ನು ತೆಗೆಯಲು ಪ್ರಾಯಶಃ ಸ್ವಲ್ಪ ಉಜ್ಜುಗಾರಿಕೆ ಮತ್ತು ಯಂತ್ರಗಾರಿಕೆ ಬೇಕಾದೀತು.
ಇಲ್ಲಿಯಾದರೊ ಫಸಲು ರಫ್ತಿಗಾಗಿ ಅಲ್ಲ, ಕೃಷಿಮಾಡುವ ಕುಟುಂಬಗಳಿಂದಲೆ ಅದು ತಿನ್ನಲ್ಪಡುವುದು. ಅವರು ಧಾನ್ಯವನ್ನು ಟೀಕ್ರಿ ಅಥವಾ ಕುಟುಂಬ-ಗಾತ್ರದ ಹುಲ್ಲು ಮಾಡಿನ ಹಗೇವಿನಲ್ಲಿ ಸಂಗ್ರಹಿಸಿ ಇಡುತ್ತಾರೆ. ಗಂಗಾ ನದೀಮಖಜ ಭೂಮಿಯ ಜನರು ಸಾಮಾನ್ಯವಾಗಿ ಕುಚ್ಚಲಕ್ಕಿಯನ್ನು ತಿನ್ನುತ್ತಾರೆ, ಆದರೆ ಈ ವರ್ಷ ಬೆಳತಿಗೆ ಅಕ್ಕಿಯನ್ನು ಅವನು ಮಾಡಬೇಕೆಂದು ಸೂಚಿಸುವ ಮೂಲಕ ನಾವು ನಮ್ಮ ಅತಿಥೇಯನಿಗೆ ಮೃದುವಾಗಿ ಕೀಟಲೆ ಮಾಡುತ್ತೇವೆ.
“ಖಂಡಿತ ಮಾಡುವುದಿಲ್ಲ,” ಎಂದವನು ಪ್ರತಿಕ್ರಿಯಿಸುತ್ತಾನೆ. “ಈ ಭಾಗಗಳಲ್ಲಿ ನಮಗೆ ಕುಚ್ಚಲಕ್ಕಿ ರೂಢಿಯಾಗಿ ಹೋಗಿದೆ, ಬೆಳತಿಗೆ ಏಕೊ ಅದೇ ತರ ರುಚಿಸುವುದಿಲ್ಲ.”
ನೆನೆಯ ಹಾಕುವ ಮತ್ತು ಅರೆ ಬೇಯಿಸುವ ಕಾರ್ಯಗತಿಯ ಮೂಲಕ ಕುಚ್ಚಲಕ್ಕಿಯನ್ನು ತಯಾರಿಸಲಾಗುತ್ತದೆಂದು ನಾವು ಕೇಳಿದ್ದೇವೆ, ಆದರೆ ಅದನ್ನು ಹೇಗೆ ಮಾಡುತ್ತಾರೆಂದು ನಮಗೆ ಸರಿ ಗೊತ್ತಿಲ್ಲ. ತನ್ನ ಕುಟುಂಬವು ಬಳಸುವ ಕಾರ್ಯವಿಧಾನವನ್ನು ತೋರಿಸಲು ನಮ್ಮ ಸ್ನೇಹಿತನು ಸಿದ್ಧನಾಗುವುದರಿಂದ ನಮಗೆ ಸಂತೋಷವಾಗುತ್ತದೆ. ಅದಕ್ಕಾಗಿ ವಿಶೇಷ ಉಪಕರಣದ ಅಗತ್ಯವಿಲ್ಲ ಯಾಕಂದರೆ ಕುಟುಂಬದ ಒಂದೆರಡು ವಾರದ ಆವಶ್ಯಕತೆಯನ್ನು ಪೂರೈಸಲು ಒಮ್ಮೆಗೆ ಚಿಕ್ಕ ಮೊತ್ತವನ್ನು ಮಾತ್ರ ಮಾಡಲಾಗುತ್ತದೆ. ಟೀಕ್ರಿಯಲ್ಲಿ ಕೂಡಿಸಿಟ್ಟ ಹೊಟ್ಟು-ಆವರಿತ ಧಾನ್ಯವನ್ನು ಒಂದು ದೊಡ್ಡ ಹಂಡೆ ಅಥವಾ ಬೇಯಿಸುವ ಪಾತ್ರೆಗೆ ಅವರು ತುಂಬಿಸಿ, ಬಳಿಕ ಸುಮಾರು ಕಾಲು ಗ್ಯಾಲನ್ ನೀರನ್ನು ಸೇರಿಸುತ್ತಾರೆ. ಅನಂತರ ಅದನ್ನು ಹುಲ್ಲು-ಬೆಂಕಿಯ ಮಂದ ಜ್ವಾಲೆಯ ಊನೂನ್ ಎಂಬ ಒಲೆಯ ಮೇಲೆ ನೀರು ಆರುವ ತನಕ ಬೇಯಿಸಲಾಗುತ್ತದೆ. ಬಳಿಕ ತಿಳಿಯಾದ ನೀರಿನ ಪೀಪಾಯಿಯಲ್ಲಿ ಅವನ್ನು ರಾತ್ರಿಯಿಡಿ ನೆನೆಯಿಸಿ, ಅನಂತರ ಬಸಿದು, ಪುನಃ ಹಂಡೆಯಲ್ಲಿ ಹಾಕಿ ಅವು ಪುನಃ ಒಮ್ಮೆ ಒಣಗುವ ತನಕ ಬಿಸಿಮಾಡುತ್ತಾರೆ. ಕೊನೆಗೆ, ಒಣಗಿ ಗಟ್ಟಿಯಾಗುವಂತೆ ಧಾನ್ಯವನ್ನು ಬಿಸಿಲಲ್ಲಿ ಹಾಸಿ, ಆಗಿಂದಾಗ್ಗೆ ಕಾಲಿನಿಂದ ತಿರುವಿಹಾಕಲಾಗುತ್ತದೆ.
ಇದು ನಮಗೆ ಬಹಳ ಹೆಚ್ಚು ಕೆಲಸವಾಗಿ ಕಂಡಿತು, ಆದರೆ ಈ ಕಾರ್ಯಗತಿಯು ಕುಟುಂಬದ ಇಷ್ಟಕ್ಕೆ ಒಗ್ಗುತ್ತದಲ್ಲದೆ ಕೆಲವು ಪ್ರಯೋಜನಗಳು ಅದರಲ್ಲಿವೆ. ಅರೆ ಬೇಯಿಸುವಿಕೆಯು ಅಕ್ಕಿ ಕಾಳಿನ ನಿರ್ದಿಷ್ಟ ವಿಟಮಿನ್ ಮತ್ತು ಪೋಷಕ ದ್ರವ್ಯಗಳನ್ನು ಬತ್ತದ ಬೀಜಾಂಶಸಾರ ಅಥವಾ ಆಹಾರ ಭಾಗದೊಳಗೆ ಆಳವಾಗಿ ಹೀರಲ್ಪಡುವಂತೆ ಬಿಡುತ್ತದೆ. ಆಗ ಅವು ತರುವಾಯದ ತೊಳೆಯುವಿಕೆ ಮತ್ತು ಬೇಯಿಸುವಿಕೆಯಿಂದ ಅಷ್ಟು ಸುಲಭವಾಗಿ ತೂರಿಹೋಗುವುದಿಲ್ಲ. ಫಲಿತಾಂಶವಾಗಿ ಊಟ ಹೆಚ್ಚು ಪೋಷಕವಾಗಿರುತ್ತದೆ. ಈ ಹೆಚ್ಚಿನ ಆಹಾರ ಮೌಲ್ಯವು ಯಾರು ಮುಖ್ಯವಾಗಿ ಅಕ್ಕಿ ಊಟದಿಂದಲೆ ಜೀವನಮಾಡುತ್ತಾರೊ ಅವರಿಗೆ ಅಕ್ಷರಶಃ ಜೀವ ಮತ್ತು ಮರಣದ ನಡುವಣ ವ್ಯತ್ಯಾಸದ ಅರ್ಥದಲ್ಲಿರಬಲ್ಲದು.
ಬೇಸಾಯಗಾರರು ತಾವಾಗಿಯೆ ಸುಲಭವಾಗಿ ಗಣ್ಯಮಾಡುವ ಇನ್ನೊಂದು ಪ್ರಯೋಜನವು ಏನಂದರೆ ಅರೆಬೆಂದ ಧಾನ್ಯವು ಕೆಡದಂತೆ ಉಳಿಸಲು ಹೆಚ್ಚು ಸುಲಭ ಮತ್ತು ಅದರ ಹೊಟ್ಟು ಕೀಳಲು ಸಹ ಹೆಚ್ಚು ಸುಲಭ. ಅದು ಹೆಚ್ಚು ಗಟ್ಟಿಯಾಗಿರುವುದರೊಂದಿಗೆ ಕಡಮೆ ಒಡೆತಕ್ಕೂ ನಡಿಸುತ್ತದೆ.
ಧಾನ್ಯದ ಒಂದು ಸವಿ
“ಈಗ ಇನ್ನು ಸ್ವಲ್ಪ ಚಹ ಮತ್ತು ಉಪಾಹಾರಕ್ಕೆ ಸಮಯ,” ಎನ್ನುತ್ತಾನೆ ನಮ್ಮ ಅತಿಥೇಯ. ಅವನ ಮನೆಗೆ ಪುನಃ ನಾವು ನಡೆದು ಹೋಗುವಾಗ, ದೀದ (ಅಜ್ಜಿ) ಮೂರಿ (ಮುಂಡಕ್ಕಿ) ತಯಾರಿಸುತ್ತಿದ್ದಾಳೆ. ತಾಜಾ ತಯಾರಿಸಿದ ಈ ಮುಂಡಕ್ಕಿ ಎಲ್ಲರಿಗೆ, ವಿಶೇಷವಾಗಿ ಮಕ್ಕಳಿಗೆ ಬಹು ಮೆಚ್ಚಿನದ್ದು. ದೀದ ಊನೂನ್ ಬಳಿ ಚಕ್ಕಂಬಟ್ಟಲು ಕೂತು, ತಾನು ಮುಂಚೆ ತೋಯಿಸಿ ತುಸು ಉಪ್ಪು ಬೆರಸಿಟ್ಟ ಹೊದಿಕೆ-ತೆಗೆದ ಕೆಲವು ಕಪ್ ತುಂಬ ಕುಚ್ಚಲಕ್ಕಿಯನ್ನು ಹುರಿಯುತ್ತಿದ್ದಾಳೆ. ಧಾನ್ಯವು ಈಗ ಒಣಗಿ ಬಿಡಿಬಿಡಿಯಾಗಿದೆಯಾದುದರಿಂದ ಆಕೆ ಒಮ್ಮೆಗೆ ಕೆಲವನ್ನು ಬಿಸಿ ಮರಳಿರುವ ಕಬ್ಬಿಣದ ಬಾಣಲೆಗೆ ಸ್ವಲ್ಪಸ್ವಲ್ಪವಾಗಿ ಹಾಕುತ್ತಾಳೆ. ಆಕೆ ಮರಳನ್ನು ಬಿಸಿಮಾಡಿದಷ್ಟಕ್ಕೆ, ಅಕ್ಕಿಯು ಅದರ ಸಹಜವಾದ ಗಾತ್ರಕ್ಕಿಂತ ಹಲವಾರು ಪಟ್ಟು ಹೆಚ್ಚು ಉಬ್ಬುತ್ತದೆ. ತಯಾರಾದ ಮೂರಿಗೆ ಕರಟಿಹೋಗುವ ಅವಕಾಶ ಸಿಗುವ ಮುಂಚೆ ಅದನ್ನು ಮರಳ ಮೇಲಿಂದ ಕಿರುಗೊಂಬೆಗಳ ಗುಚ್ಛದ ಮೂಲಕ ಸವರಿ ತೆಗೆಯಲಾಗುತ್ತದೆ. ಈ ಕಿರುಗೊಂಬೆಗಳು, ಬಿಸಿ ಬಿಸಿಯಾದ ಮೂರಿಯ ಬುಟ್ಟಿಯೊಳಗೆ ಆತುರದಿಂದ ಅದ್ದುವ ಮಕ್ಕಳ ಚಿಕ್ಕ ಕೈಗಳನ್ನು ಶಿಕ್ಷಿಸಲು ಸಹ ಸಾಧನವಾಗಿರುತ್ತವೆ.
ಆಗಲೆ ತುಂಡರಿಸಿದ ತೆಂಗಿನ ಕಾಯಿಯ ತುಂಡುಗಳೊಂದಿಗೆ ನಾವು ನಮ್ಮ ಮೂರಿಯನ್ನು ಸವಿಯುತ್ತೇವೆ, ಆದರೆ ಹೆಚ್ಚು ತಿನ್ನದಂತೆ ಜಾಗ್ರತೆವಹಿಸುತ್ತೇವೆ ಯಾಕಂದರೆ ಮಧ್ಯಾಹ್ನದೂಟಕ್ಕೆ ಹೆಚ್ಚು ಹೊತ್ತಿರುವುದಿಲ್ಲ.
ಹೊರಹೊದಿಕೆ ಸುಲಿಯುವುದನ್ನು ನೋಡುವುದು ಕೊನೆಯ ಕಾರ್ಯವಿಧಾನ. ಇತ್ತೀಚೆಗಿನ ತನಕ ಕಾಲಿನಿಂದ ನಡಿಸಲ್ಪಡುವ ಒನಕೆ ಮತ್ತು ಕಲ್ಲಿನ ದೆನ್ಕಿಯಿಂದ ಅದನ್ನು ಮಾಡಲಾಗುತ್ತಿತ್ತು, ಆದರೆ ಈಗ, ಅತಿ ಮೂಲೆಗಾಡಿನ ಸ್ಥಳಗಳಲ್ಲೂ ಸಿಪ್ಪೆಸುಲಿಯುವ ಯಂತ್ರಗಳು ಕೆಲಸವನ್ನು ಹೆಚ್ಚು ವೇಗದಿಂದ ಮಾಡುತ್ತವೆ. ಈ ಬದಲಾವಣೆಗಾಗಿ ಕೆಲವು ಹಳಬರು ಹಲುಬುತ್ತಾರೆ ಯಾಕಂದರೆ ದೆನ್ಕಿಯಿಂದ ಪ್ರತ್ಯೇಕಿಸಲ್ಪಟ್ಟ ಅಕ್ಕಿಯಲ್ಲಿ ಧಾನ್ಯದ ಕೆಂಪು ಒಳ ಚರ್ಮ (ಹೊರ ಪೊರೆ) ಹೆಚ್ಚು ಉಳಿಯುತ್ತದೆ. ಇದು ಅನ್ನಕ್ಕೆ ಒಂದು ವಿಶಿಷ್ಟ ತರದ ರುಚಿಯನ್ನು ಮತ್ತು ಹೆಚ್ಚಿನ ಪೋಷಣಾಂಶಗಳನ್ನು ಕೊಡುತ್ತದೆ. ಯಂತ್ರವಾದರೊ ಎಲ್ಲವನ್ನು—ಹೊರಹೊದಿಕೆ, ತವುಡು, ಮತ್ತು ಅಂಕುರದ ಹೆಚ್ಚಿನಾಂಶವನ್ನು ತೆಗೆದುಹಾಕಿ, ಇಂದು ಬಹಳವಾಗಿ ಬೇಡಿಕೆಯಲ್ಲಿರುವ ಕೇವಲ ಬಿಳಿಯ, ಷ್ಟಿದ ಬೀಜಾಂತಸ್ಸಾರವನ್ನು ಮಾತ್ರ ಉಳಿಸುತ್ತದೆ.
ಈಗ ಹೆಂಗಸರು ತಾವು ತಯಾರಿಸಿದ ಭೋಜನವನ್ನು ನಾವು ಉಣ್ಣುವಂತೆ ಆತುರದಿಂದಿದ್ದಾರೆ. ಕುಚ್ಚಲಕ್ಕಿಯನ್ನು ಕುದಿಸುವ ಮೂಲಕ ಅವರದನ್ನು ಬೇಯಿಸಿದ್ದಾರೆ. ಮತ್ತು ಬಾಳೆ ಎಲೆಯ ಪ್ಲೇಟುಗಳಲ್ಲಿ ಅದು ಈಗ ಬಿಸಿಬಿಸಿಯಾಗಿ ಹೇರಲ್ಪಡುತ್ತದೆ. ಅನಂತರ ಅನ್ನದೊಂದಿಗೆ ತಿನ್ನಲು ಬೇಳೆಗಳು, ಸ್ಥಳಿಕ ಕಾಯಿಪಲ್ಯಗಳು, ಮತ್ತು ಕೊಳದ ಮೀನುಗಳ ತಯಾರಿಕೆಗಳಿವೆ. ಇದು ನಮ್ಮ ಸಂದರ್ಶನದ ಅತ್ಯಂತ ಆನಂದಕರ ಭಾಗಗಳಲ್ಲೊಂದು ಎಂದು ನಾವೆಲ್ಲರೂ ಒಪ್ಪುತ್ತೇವೆ.
ಹೌದು, ಅಕ್ಕಿ ಕುಚ್ಚಲಾಗಿರಲಿ ಯಾ ಬೆಳತಿಗೆಯಾಗಿರಲಿ, ಅದೊಂದು ರುಚಿಕರವಾದ ಒದಗಿಸುವಿಕೆಯಾಗಿದ್ದು, ದೇವರು “ಮಾನವಕುಲದ ಉಪಯೋಗಕ್ಕಾಗಿ” ಹುಟ್ಟುವಂತೆ ಮಾಡಿದ ಹಸುರುಸಸ್ಯಗಳಲ್ಲಿ ಒಂದಾಗಿದೆ.—ಕೀರ್ತನೆ 104:14.
[ಪುಟ 25 ರಲ್ಲಿರುವ ಚೌಕ]
ಜಾಲ್ ಮೂರಿ
ಮುಂಡಕ್ಕಿ ಉಪಹಾರವು ಭಾರತದ ಅನೇಕ ಭಾಗಗಳಲ್ಲಿ ಬಣ್ಣಬಣ್ಣದ ಉಡುಪು ಧರಿಸಿದ ಮಾರಾಟಗಾರರಿಂದ ಬೀದಿಗಳಲ್ಲಿ ಮಾರಲ್ಪಡುತ್ತದೆ. ರುಚಿಕರವಾದ ಮತ್ತು ಪೋಷಕ ಜಾಲ್ ಮೂರಿಯನ್ನು ಸುಲಭವಾಗಿ ತಯಾರಿಸಸಾಧ್ಯವಿದೆ ಮತ್ತು ಸಾಮಾನ್ಯವಾಗಿ ಮುಂಚೆ ಪೊಟ್ಟಣಮಾಡಿಟ್ಟ ತಿನಸುಗಳಿಗಿಂತ ಒಂದು ಉತ್ತಮ ಬದಲಾವಣೆ.
ಒಂದು ಲೋಟೆ ತುಂಬಾ ಗರಿಗರಿಯಾದ, ಸಿಹಿರಹಿತ ಮುಂಡಕ್ಕಿಯಿಂದ ಪ್ರಾರಂಭಿಸಿ, ನಿಮ್ಮ ರುಚಿಗನುಸಾರ ಕೆಳಗಿನದನ್ನು ಸೇರಿಸಿರಿ: ಸಣ್ಣದಾಗಿ ಕೊಯ್ದ ಟೊಮಾಟೊಗಳು, ನೀರುಳ್ಳಿಗಳು, ಸೌತೆಕಾಯಿ, ಹಸಿರು ಮೆಣಸು, ಕೆಲವು ನೆಲಕಡಲೆಗಳು, ಕಡಲೆ (ಐಚ್ಛಿಕ), ಚಾಟ್ ಮಸಾಲ (ಭಾರತದ ಅಂಗಡಿಗಳಲ್ಲಿ ದೊರೆಯುವ ಸಂಬಾರ ಜಿನಸಿನ ಮಿಶ್ರ ಹುಡಿ) ಅಥವಾ ಒಂದು ಚಿವುಟು ಉಪ್ಪು ಮತ್ತು ಕರಿಮೆಣಸಿನ ಹುಡಿ, ಒಂದು ಸಣ್ಣ ಚಮಚದಲ್ಲಿ ಅರ್ಧ ಸಾಸಿವೆ ಎಣ್ಣೆ ಅಥವಾ ಸ್ಯಾಲಡ್ ಎಣ್ಣೆ. ಪದಾರ್ಥಗಳನ್ನು ಒಟ್ಟಿಗೆ ಸರಿಯಾಗಿ ಬೆರಸಿ ಆ ಕೂಡಲೆ ತಿನ್ನಿರಿ.
ರುಚಿಗಳು ಬೇರೆ ಬೇರೆಯಾಗಿರುವುದರಿಂದ, ಮೂರಿ ಮಾರುವವನು ತನ್ನ ಕತ್ತರಿಸಿದ ಕಾಯಿಪಲ್ಯಗಳು ಮತ್ತು ಮಸಾಲೆಗಳ ತರತರದ ವಿನ್ಯಾಸದಿಂದ, ತಿನ್ನುವವನು ತಾನೆ ಏನು ಬೇಕು ಮತ್ತು ಎಷ್ಟು ಬೇಕೆಂದು ಆರಿಸಿಕೊಳ್ಳುವಂತೆ ಬಿಡುತ್ತಾನೆ. ಬೇರೆ ಬೇರೆ ಪದಾರ್ಥಗಳನ್ನು ಪ್ರತ್ಯೇಕವಾಗಿ ಚಿಕ್ಕ ಚಿಕ್ಕ ಪ್ಲೇಟುಗಳಲ್ಲಿ ಹಾಕಿ ನಿಮ್ಮ ಅತಿಥಿಗಳು ತಮ್ಮ ಸ್ವಂತ ಮೂರಿಯನ್ನು ಬೆರಸಿಕೊಳ್ಳುವಂತೆ ಬಿಡುವ ಮೂಲಕವೂ ಉಪಾಹಾರವನ್ನು ನೀವು ಬಡಿಸಬಲ್ಲಿರಿ.
[Pictures on page 12, 13]
(1) ಅಕ್ಕಿಯ ತೆನೆಗಳನ್ನು ಬಡಿಯುವುದು (2) ಜಳ್ಳು ತೂರಿಹಾಕುವುದು (3) ದೀದ “ಮೂರಿ” ತಯಾರಿಸುವುದು (4) “ಮೂರಿ” ಬುಟ್ಟಿ ವಿವಿಧ ಪದಾರ್ಥಗಳೊಂದಿಗೆ