ಯೂರೋಪಿನಲ್ಲಿ ಆರ್ಕಿಡ್ಗಳ ಅನ್ವೇಷಣೆಯಲ್ಲಿ
ನೆದರ್ಲೆಂಡ್ಸ್ನ ಎಚ್ಚರ! ಸುದ್ದಿಗಾರರಿಂದ
ಆರ್ಕಿಡ್ (ಸೀತೆಹೂವು)ಗಳು ಜನರನ್ನು ಎಲ್ಲೆಲ್ಲೂ ಮಂತ್ರಮುಗ್ಧಗೊಳಿಸುತ್ತವೆ. ಅಸಾಮಾನ್ಯ ಸೌಂದರ್ಯ ಮತ್ತು ವರ್ಣರಂಜಿತ ಕಾಂತಿಯೊಂದಿಗೆ ಈ ಗಿಡಗಳು ಸಮಾನಾರ್ಥಕವಾಗಿವೆ. ಉಷ್ಣವಲಯದ ಅಭೇದ್ಯ ಅರಣ್ಯಗಳಲ್ಲಿ ಅವುಗಳ ದೊರೆಯುವಿಕೆಯು, ಅವುಗಳನ್ನು ಆವರಿಸುತ್ತಿರುವ ರಹಸ್ಯಮಯ ಪ್ರಭೆಗೆ ಹೆಚ್ಚನ್ನು ಕೂಡಿಸುತ್ತದೆ. ಆರ್ಕಿಡ್ಗಳು ಉಷ್ಣವಲಯ ಕ್ಷೇತ್ರಗಳಿಗೆ ಮಾತ್ರ ನಿರ್ಬಂಧಿತವಲ್ಲವೆಂದೂ, ನಮ್ಮ ಭೂಗ್ರಹದ ಹೆಚ್ಚು ಸಮಶೀತೋಷ್ಣ ಕ್ಷೇತ್ರಗಳಾದ ಯೂರೋಪಿನಂತಹ ದೇಶಗಳಲ್ಲೂ ಅವು ಕಂಡುಬರುತ್ತವೆಂದೂ ತಿಳಿದಿರುವವರು ಕೊಂಚ ಜನ.
ಆರ್ಕಿಡ್ ಜಾತಿಗಳನ್ನು ವಿವಿಧ ವಲಯಗಳಲ್ಲಿ, ಅತ್ಯಂತ ಶೀತದ ಐಸ್ಲ್ಯಾಂಡಿನಿಂದ ಹಿಡಿದು ಸಮಶೀತೋಷ್ಣ ವಲಯದ ಗ್ರೀಸ್ನ ತನಕ ಕಂಡುಕೊಳ್ಳಸಾಧ್ಯವಿದೆ. ಒಟ್ಟಿಗೆ ಸುಮಾರು 250 ಜಾತಿಗಳು ಯೂರೋಪಿನಲ್ಲಿ ಜ್ಞಾತವಾಗಿರುತ್ತವೆ. ಉಷ್ಣ ವಲಯದ ಅನೇಕ ಜಾತಿಗಳಿಗೆ ವ್ಯತಿರಿಕ್ತವಾಗಿ ಯೂರೋಪಿನಲ್ಲಿ ಸಿಕ್ಕುವ ಜಾತಿಗಳು ಭೂವಲಯ ಜಾತಿಗಳಾಗಿದ್ದು ಮಣ್ಣಿನಲ್ಲಿ ಬೇರುಬಿಡುತ್ತವೆ. ಉಷ್ಣವಲಯದ ಆರ್ಕಿಡ್ಗಳು ಮುಖ್ಯವಾಗಿ ಅಪ್ಪುಗಿಡಗಳಾಗಿದ್ದು, ಮರಗಳಲ್ಲಿ ತಮ್ಮ ಬೇರುಗಳನ್ನು ಊರುತ್ತವೆ. ಅನೇಕ ಉಷ್ಣವಲಯದ ಜಾತಿಗಳು ದೊಡ್ಡದಾದ, ಶೋಭಾಯಮಾನ ಹೂವುಗಳನ್ನು ಬಿಡುವಾಗ, ಯೂರೋಪಿನ ಆರ್ಕಿಡ್ ಹೂವುಗಳಾದರೊ ಆಕಾರದಲ್ಲಿ ಬಹಳಷ್ಟು ಚಿಕ್ಕವುಗಳಾಗಿವೆ.
ಆರ್ಕಿಡ್ಗಳ ಅನೇಕ ಜಾತಿಗಳು ಶೋಭಾಯಮಾನ ಪರಿಸರಗಳಲ್ಲಿ ಬೆಳೆಯುವುದರಿಂದ, ಅವುಗಳ ಅನ್ವೇಷಣೆಗಾಗಿ ಪ್ರಯಾಣ ಕೈಕೊಳ್ಳುವುದು ಯೂರೋಪಿನಲ್ಲಿ ಒಂದು ಆನಂದದಾಯಕ ಕಾಲಕ್ಷೇಪ. ಆರ್ಕಿಡ್ಗಳು ಅನೇಕವೇಳೆ ದರ್ಶಕಳಾಗಿದ್ದು ನಿರ್ದಿಷ್ಟ ಪರಿಸರೀಯ ಪರಿಸ್ಥಿತಿಗಳ ಅಸ್ತಿತ್ವವನ್ನು ಗುರುತಿಸುತ್ತವೆ. ವಿವಿಧ ಜಾತಿಗಳು ತಾವು ಅಸ್ತಿತ್ವದಲ್ಲಿರುವ ಸುತ್ತಲಿನ ಸಸ್ಯ ಜೀವಶಾಸ್ತ್ರ ಪರಿಸರದ ಕುರಿತು ಅತಿ ಜಾಗರೂಕತೆಯಿಂದಿದ್ದು, ತಮ್ಮೆಲ್ಲ ಅಗತ್ಯಗಳನ್ನು ಪೂರೈಸುವ ಸ್ಥಳಗಳಲ್ಲಿ ಮಾತ್ರ ದೊರಕುತ್ತವೆ. ಉದಾಹರಣೆಗಾಗಿ, ಡಾಕಿಲ್ಟಾರೈಜ ಇನ್ಕರ್ನಾಟದಂತಹ ಜೌಗು ಆರ್ಕಿಡ್ಗಳು ಎಲ್ಲಿ ತಳಮಣ್ಣಿನ ನೀರಲ್ಲಿ ಸಾಕಷ್ಟು ಸುಟ್ಟಸುಣ್ಣವಿದೆಯೊ ಆ ಸ್ಥಳಗಳಲ್ಲಿ ಮಾತ್ರ ಬೆಳೆಯುತ್ತವೆ. ಕೆಲವು ಜಾತಿಗಳು ಬೇರೆಯವುಗಳಿಗಿಂತ ಹೆಚ್ಚು ಅಪೂರ್ವವಾಗಿವೆ ಏಕೆಂದು ಇದು ವಿವರಿಸುತ್ತದೆ. ಬೆಳೆಯಲು ಅತಿ ವಿಶಿಷ್ಟ ಪರಿಸ್ಥಿತಿಗಳ ಆವಶ್ಯಕತೆ ಇರುವ ಆರ್ಕಿಡ್ನ ಒಂದು ಜಾತಿಯು, ಕಡಿಮೆ ನಿರ್ಬಂಧಿತ ಪರಿಸ್ಥಿತಿಗಳಲ್ಲಿ ಬೆಳೆಯಬಲ್ಲ ಆರ್ಕಿಡ್ಗಿಂತ ಬಹು ಕಡಿಮೆ ಕ್ಷೇತ್ರಗಳಲ್ಲಿ ಬೆಳೆಯುತ್ತದೆ.
ನಾವು ಯೂರೋಪಿನ ಆಚೆಕಡೆ, ನೆದರ್ಲೆಂಡ್ಸ್ನಿಂದ ಕೆಳಗೆ ದಕ್ಷಿಣ ಇಟೆಲಿಗೆ ಒಂದು ಕಾಲ್ಪನಿಕ ಸಂಚಾರವನ್ನು ಕೈಕೊಳ್ಳುವಲ್ಲಿ, ನಾವು ಪ್ರಯಾಣಮಾಡುವ ಹೆಚ್ಚಿನ ಪ್ರದೇಶಗಳಲ್ಲಿ ಆರ್ಕಿಡ್ಗಳು ಒಳಗೂಡಿರುತ್ತವೆ. ನಾವು ನೆದರ್ಲೆಂಡ್ಸ್ನಿಂದ ನಮ್ಮ ಕಾಲ್ಪನಿಕ ಸಂಚಾರವನ್ನು ಪ್ರಾರಂಭಿಸೋಣ. ಪಶ್ಚಿಮ ಯೂರೋಪಿನ ಈ ತಗ್ಗು ನಾಡಿನಲ್ಲಿ, ಬಹು ವ್ಯಾಪಕವಾದ ಜೌಗುಗಳನ್ನು, ತೇವಭರಿತ ಮರಳ ದಿನ್ನೆಗಳ ಕುಗ್ಗುಗಳನ್ನು, ಮತ್ತು ಹುಲ್ಲು ಹೊಲಗಳನ್ನು ನಾವಿನ್ನೂ ಕಾಣುತ್ತೇವೆ. ಮೇ ಮತ್ತು ಜೂನ್ ತಿಂಗಳಲ್ಲಿ, ಕೆಲವು ಭೂಪ್ರದೇಶಗಳು ಡಾಕಿಲ್ಟಾರೈಜ ಎಂಬ ವರ್ಗದ ಆರ್ಕಿಡ್ಗಳ ಗುಲಾಬಿ-ನೇರಿಳೆ ಬಣ್ಣಗಳಿಂದ ಬಳಿಯಲ್ಪಟ್ಟಿರುತ್ತವೆ. ಜಾತಿಗಳಲ್ಲಿ ಒಂದು ಸುಂದರವಾದ, ಭವ್ಯ ಜಾತಿಯು ಡಾಕಿಲ್ಟಾರೈಜ ಪ್ರೀಟರ್ಮಿಸ ಆಗಿರುತ್ತದೆ. ಈ ಗಿಡವು ಒಂದು ಮೀಟರ್ ಎತ್ತರಕ್ಕೆ ಬೆಳೆಯಬಲ್ಲದು ಮತ್ತು 60ರಷ್ಟು ಹೆಚ್ಚು ಹೂವುಗಳನ್ನು ಒಳಗೊಂಡಿರಬಲ್ಲದು. ಸಸ್ಯಾಂಗಾರವಿರುವ ಬಂಜರು ಭಾಗಗಳಲ್ಲಿ ಮತ್ತು ಕುರುಚಲು ಗಿಡಗಳ ಹೊಲಗಳಲ್ಲಿ ಸಹ ಆರ್ಕಿಡ್ಗಳು ಬೆಳೆಯುತ್ತವೆ. ಮುಖ್ಯವಾಗಿ ಒದೆಯ್ದಾದ ಕುರುಚಲು ಗಿಡಗಳ ಹೊಲಗಳಲ್ಲಿ ಡಾಕಿಲ್ಟಾರೈಜ ಮ್ಯಾಕುಲಾಟ ಕೆಲವು ಸಾರಿ ಹೆಚ್ಚು ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಸಸ್ಯಾಂಗಾರದ ಬಂಜರು ನೆಲಗಳಲ್ಲಿ ಹ್ಯಾಮರ್ಬ್ಯಾ ಪ್ಯಾಲುಡಾಜದ ಚಿಕ್ಕ ಚಿಕ್ಕ ಹಸುರು ಹೂವುಗಳನ್ನು ಕಂಡುಹಿಡಿಯಲು ಜಾಗರೂಕತೆಯ ಅನ್ವೇಷಣೆಯನ್ನು ನಾವು ಮಾಡಬೇಕಾಗುತ್ತದೆ. ಈ ಚಿಕ್ಕ ಆರ್ಕಿಡ್ ಅತ್ಯಂತ ಅಗಮ್ಯ ಕ್ಷೇತ್ರಗಳಲ್ಲಿ ಬೆಳೆಯುತ್ತದೆ.
ನಾವು ಮುಂದಕ್ಕೆ, ಜರ್ಮನಿಯ ಕೇಂದ್ರ ಪರ್ವತ ಶ್ರೇಣಿಗಳೆಡೆಗೆ ಪ್ರಯಾಣ ಮಾಡುತ್ತೇವೆ. ಇಲ್ಲಿ, ಕಾಲಕಾಲಕ್ಕೆ ಬಿದ್ದುಹೋಗುವ ಅನೇಕ ವಿಧದ ಮರಗಳ ಮಧ್ಯದಲ್ಲಿ, ಎಪಿಪ್ಯಾಕಿಸ್ಟ್ ವರ್ಗದ ಹಲವಾರು ನಮೂನೆಗಳು ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಅರಣ್ಯದಾಳದ ಕಡು ನೆರಳಲ್ಲಿ ಬೆಳೆಯುತ್ತಿರುವಾಗ, ಎಪಿಪ್ಯಾಕಿಸ್ಟ್ ಮ್ಯುಲೆರಿಯಂತಹ ಬೇರೆ ಜಾತಿಗಳು ಅರಣ್ಯದ ಅಂಚಲ್ಲಿ ಬೆಳೆಯಲು ಇಷ್ಟಪಡುತ್ತವೆ. ಬೇಸಗೆ ಮತ್ತು ಶರತ್ಕಾಲದ ಕೊನೆಯಲ್ಲಿ ಎಪಿಪ್ಯಾಕಿಸ್ಟ್ ಜಾತಿಯ ಹೂಬಿಡುವಿಕೆಯು, ಯೂರೋಪಿನಲ್ಲಿ ಆರ್ಕಿಡ್ ಋತುವನ್ನು ಅಂತ್ಯಗೊಳಿಸುತ್ತದೆ. ಹೇರಳ ಸುಣ್ಣವಿರುವ ಗುಡ್ಡಗಳ ಇಳಿಕಲುಗಳ ಮೇಲೆ ಒಂದು ನಿರ್ದಿಷ್ಟ ವಿಧದ ಶುಷ್ಕ ಹುಲ್ಲು ಹೊಲಗಳು, ಸುಣ್ಣವುಳ್ಳ ಹುಲ್ಲುಗಾವಲು ನೆಲೆಸಿದ್ದು, ಅವು ಆರ್ಕಿಡ್ಗಳಿಂದ ತುಂಬಿರುತ್ತವೆ. ಮೇ ಮತ್ತು ಜೂನ್ ತಿಂಗಳುಗಳಲ್ಲಿ ಇಲ್ಲಿ ಹೂವುಗಳ ಅನೇಕ ಜಾತಿಗಳನ್ನು ನಾವು ಕಂಡುಕೊಳ್ಳಬಹುದು. ಅವುಗಳಲ್ಲಿ ಆರ್ಚಿಸ್ ಮಿಲಿಟರಿಸ್ ಮತ್ತು ಆರ್ಚಿಸ್ ಅಸ್ಟ್ಯುಲಾಟ ಸೇರಿರುತ್ತವೆ.
ಜರ್ಮನಿಯ ದಕ್ಷಿಣ ಭಾಗದಲ್ಲಿ, ನಾವು ಆಲ್ಪ್ಸ್ ಪರ್ವತಶ್ರೇಣಿಯನ್ನು ತಲಪುತ್ತೇವೆ. ಆ್ಯಲ್ಪೈನ್ ಹುಲ್ಲುಗಾವಲುಗಳು ಹೂವುಗಳ ಪುಷ್ಕಳತೆಗೆ ಖ್ಯಾತಿಯನ್ನು ಹೊಂದಿರುತ್ತವೆ. ಆರ್ಕಿಡ್ಗಳು ಹೆಚ್ಚಾಗಿ ಈ ಪರಿಸರಕ್ಕೆ ನೆರವಾಗುತ್ತವೆ. ಕೆಲವು ಆ್ಯಲ್ಪೈನ್ ಹುಲ್ಲುಗಾವಲುಗಳು, ಇಟೆಲಿಯ ಡೋಲಮೈಟ್ಸ್ನಲ್ಲಿ ಇರುವಂಥವುಗಳು, ಜುಲೈ ತಿಂಗಳಲ್ಲಿ ಆರ್ಕಿಡ್ನ ನೇರಿಳೆ ಬಣ್ಣದಿಂದ ಸಿಂಗರಿಸಲ್ಪಡುತ್ತವೆ. ನಿಗ್ರಿಟೆಲ ನಿಗ್ರ, ವಿಸ್ತಾರವಾದ ವಿವಿಧ ಬಣ್ಣಗಳಲ್ಲಿ ಇಲ್ಲಿ ಯಥೇಷ್ಟವಾಗಿ ದೊರಕುತ್ತದೆ. ನಿಗ್ರಿಟೆಲ ವನಿಲ ಸಾರದ ಕಡು ಸುವಾಸನೆಯನ್ನು ಹೊರಸೂಸುತ್ತಾ, ವನಿಲ ಸಾರವು ಉಷ್ಣವಲಯದ ಆರ್ಕಿಡ್ನ ಹಣ್ಣಿನಿಂದ ತೆಗೆಯಲ್ಪಟ್ಟಿದೆ ಎಂಬ ಜ್ಞಾಪಕವನ್ನು ನಮಗೆ ಕೊಡುತ್ತದೆ.
ಆರ್ಕಿಡ್ಗಳು ಮೂರು ಸಾವಿರ ಮೀಟರುಗಳಿಗಿಂತಲೂ ಹೆಚ್ಚು ಉನ್ನತ ಪ್ರದೇಶಗಳಲ್ಲಿ ಕಂಡುಬರಬಲ್ಲವು. ಆ ಉನ್ನತಿಯಲ್ಲಿ, ಜಗತ್ತಿನಲ್ಲಿ ಪ್ರಾಯಶಃ ಅತ್ಯಂತ ಚಿಕ್ಕ ಆರ್ಕಿಡ್ ಆಗಿರುವ ಚಾಮೊರ್ರ್ಕಿಸ್ ಅಲ್ಪೈನವನ್ನು ಕಂಡುಕೊಳ್ಳಸಾಧ್ಯವಿದೆ. ಈ ಜಾತಿಗಳ ಹೂವುಗಳು ಅಡವ್ಡಾಗಿ ಐದು ಮಿಲಿಮೀಟರಿಗಿಂತಲೂ ಕಡಿಮೆ ಗಾತ್ರದವುಗಳು. ಈ ಹೂವುಗಳು ಹಸುರು ಬಣ್ಣದವುಗಳಾಗಿರುವುದರಿಂದ ಅವು ಹೆಚ್ಚು ಗಮನವನ್ನು ಆಕರ್ಷಿಸುವುದಿಲ್ಲ. ಆದರೂ ಈ ಜಾತಿಗೆ ಆ್ಯಲ್ಪೈನ್ ಪ್ರದೇಶದ ಸಸ್ಯ ಜೀವಶಾಸ್ತ್ರ ವ್ಯವಸ್ಥೆಯಲ್ಲಿ ಅದರ ಸ್ವಂತ ಕಾರ್ಯಗತಿಯು ಇದೆ.
ಆಲ್ಪ್ಸ್ ಪರ್ವತ ಶ್ರೇಣಿಯ ಆಚೆಕಡೆ ಪ್ರಯಾಣ ಮಾಡಿದ ಮೇಲೆ, ನಾವು ಯೂರೋಪಿನ ಮೆಡಿಟರೇನಿಯನ್ ಪ್ರದೇಶವನ್ನು ತಲಪುತ್ತೇವೆ. ಯೂರೋಪಿನ ಬೇರೆಕಡೆಗಿಂತ ಇಲ್ಲಿ ಆರ್ಕಿಡ್ಗಳ ಹೆಚ್ಚು ಜಾತಿಗಳನ್ನು ನಾವು ಕಂಡುಕೊಳ್ಳುತ್ತೇವೆ, ಮತ್ತು ಅವುಗಳ ವೈವಿಧ್ಯವು ಬೆರಗುಗೊಳಿಸುವಂಥದು. ಇಲ್ಲಿ ಬೆಳೆಯುವ ಈ ಸುಖೋಷ್ಣ-ಪ್ರಿಯ ಜಾತಿಗಳು ವಸಂತಕಾಲದ ಆರಂಭದಲ್ಲಿ ಮಾತ್ರ ಹೂಬಿಡುತ್ತವೆ. ಒಣ ಬೇಸಗೆಯ ಸಮಯದಲ್ಲಿ ಎಲ್ಲ ಸಸ್ಯಗಳು, ಆರ್ಕಿಡನ್ನೂ ಸೇರಿಸಿ, ಒಣಗಿಹೋಗುತ್ತವೆ, ಮತ್ತು ಹೂಬಿಡುವ ಯಾವ ಸಸ್ಯವೂ ಬಹುಮಟ್ಟಿಗೆ ಕಂಡುಬರುವುದಿಲ್ಲ. ಶರತ್ಕಾಲದಾರಂಭದ ಮಳೆಯ ಬಳಿಕ ಮಾತ್ರ ಹೊಚ್ಚ ಹಸಿರು ಸಸ್ಯಗಳು ಪುನಃ ಗೋಚರಿಸುತ್ತವೆ.
ಆರ್ಕಿಡ್ಗಳು ಈ ಮಳೆಗೆ ಪ್ರತಿಕ್ರಿಯೆ ತೋರಿಸುತ್ತವೆ. ಆ ಸಮಯದಲ್ಲಿ ಅನೇಕ ಜಾತಿಗಳು ಎಲೆಗಳನ್ನು ಬಿಟ್ಟು, ಗುಲಾಬಿ ಗೊಂಚಲಿನಂಥ ಅಂಗಪುಂಜವಾಗಿ ಚಳಿಗಾಲವನ್ನು ಪಾರಾಗುತ್ತವೆ. ತಮ್ಮ ಶೋಭಾಯಮಾನವಾದ ಹೂವುಗಳನ್ನು ಅವು ಪ್ರದರ್ಶಿಸುವುದು ವಸಂತಕಾಲದ ಆರಂಭದ ಬಳಿಕ. ಆಫ್ರಿಸ್ ವರ್ಗದ ಜಾತಿಗಳು ಮೆಡಿಟರೇನಿಯನ್ ಸಸ್ಯದ ಮಾದರಿಯವುಗಳಾಗಿವೆ. ಈ ಜಾತಿಗಳು ಪರಾಗಾಧಾನಕ್ಕಾಗಿ, ಒಂದು ಕೀಟವನ್ನು ಹೋಲುವ ಹೂವನ್ನು, ಅದು ಕೂಡಲಿಚ್ಚಿಸುವ ಹೆಣ್ಣು ಜೊತೆಯೆಂದು ತಪ್ಪು ತಿಳಿಯುವ ಗಂಡು ಕೀಟಗಳ ಮೇಲೆ ಅವಲಂಬಿಸಿರುತ್ತವೆ. ಈ ಜಾತಿಗಳಲ್ಲಿ ಹಲವಾರು ಹೂವುಗಳಿಗೆ ಅವನ್ನು ಹೋಲುವ ಕೀಟಗಳಾದ ಜೇಡ ಆರ್ಕಿಡ್, ನೊಣ ಆರ್ಕಿಡ್, ಹೆಜ್ಜೇನು ಆರ್ಕಿಡ್ (ಆಫ್ರಿಸ್ ಸ್ಪಿಗಾಡೆಸ್, ಇನ್ಸೆಕಿಫ್ಟೆರ, ಮತ್ತು ಹೊಲೊಸೆರಿಕ) ಮುಂತಾದ ಹೆಸರುಗಳನ್ನು ಕೊಡಲಾಗಿದೆ. ಈ ಕೃತಕ ಸಂಭೋಗವನ್ನು ಹಿಂಬಾಲಿಸಿ ಕೀಟವು ಪರಾಗ ರಾಶಿಯನ್ನು ಒಯ್ದು ಅರಿವಿಲ್ಲದೇ ಅದೇ ಜಾತಿಯ ಇನ್ನೊಂದು ಹೂವಿಗೆ ದಾಟಿಸುತ್ತದೆ. ಪರಾಗಾಧಾನವು ಸಂಭವಿಸುತ್ತದೆ, ಮತ್ತು ಬೀಜದ ರಚನೆಯು ಆರಂಭಿಸಬಲ್ಲದು. ಪರಾಗಾಧಾನದ ಈ ವಿಧಾನವು ವಿಸ್ಮಯಕರವಾಗಿ ನಿಷ್ಕೃಷ್ಟವಾಗಿರುತ್ತದೆ.
ಕೆಲವು ಆಫ್ರಿಸ್ ಜಾತಿಗಳಲ್ಲಿ ನಿರ್ದಿಷ್ಟ ಉಪಜಾತಿಗಳು ಜ್ಞಾತವಾಗಿರುತ್ತವೆ. ಪ್ರತಿಯೊಂದು ಜಾತಿ ಒಂದು ವಿಶಿಷ್ಟ ಕೀಟದಿಂದ ಪರಾಗಾಧಾನವನ್ನು ಹೊಂದುತ್ತದೆ. ಪರಾಗಾಧಾನಮಾಡುವ ಒಂದು ಜಾತಿಯ ಕೀಟಗಳು, ಒಂದು ಬೇರೆಯಾದ ಆದರೆ ಅದೇ ವಿಧವಾಗಿ ಕಾಣುವ ಹೂವುಗಳಿಗೆ ಒಡ್ಡಲ್ಪಡುವಾಗ, ಅವುಗಳಿಗೆ ಪರಾಗಾಧಾನಮಾಡಲು ನಿರಾಕರಿಸುತ್ತವೆ. ಕೆಲವು ಸಾರಿ “ದುರಂತಗಳು” ಸಂಭವಿಸುತ್ತವೆ, ಮತ್ತು ಬೇರೊಂದು ಜಾತಿಯು ತಪ್ಪಾಗಿ ಪರಾಗಾಧಾನ ಹೊಂದಿ ಮಿಶ್ರ ಜಾತಿಗಳನ್ನು ಉಂಟುಮಾಡುತ್ತದೆ. ಕೆಲವೊಮ್ಮೆ ಈ ಮಿಶ್ರ ಜಾತಿಗಳು ಫಲೋತ್ಪಾದಕ ಬೀಜಗಳನ್ನು ಫಲಿಸಲು ಶಕವ್ತಾಗಿ ದೊಡ್ಡ ಸಂಖ್ಯೆಯಲ್ಲಿ ಸಂತಾನವನ್ನು ಉತ್ಪಾದಿಸುತ್ತವೆ.
ಇನ್ನೊಂದು ವಿಶಿಷ್ಟಗುಣದ ಮೆಡಿಟರೇನಿಯನ್ ವರ್ಗವು ನಾಲಿಗೆ ಆರ್ಕಿಡ್ (ಸೆರಫಿಯಸ್). ಈ ಜಾತಿಗಳು ಹೂವಿನೊಳಗಿನ ನಾಳಾಕಾರದ ರಂಧ್ರದಲ್ಲಿ ರಾತ್ರಿಯನ್ನು ಕಳೆಯುವ ಕೀಟಗಳಿಂದ ಪರಾಗಾಧಾನವನ್ನು ಹೊಂದುತ್ತವೆ. ಕೀಟವು ಎಚ್ಚರಗೊಳ್ಳುವುದರೊಳಗೆ, ಪರಾಗ ರಾಶಿಯು ಕೀಟದ ದೇಹಕ್ಕೆ ಅಂಟಿಸಿಕೊಂಡಾಗಿರುವುದು, ಹೀಗೆ ಮುಂದಿನ ರಾತ್ರಿ ಇನ್ನೊಂದು ಹೂವು ಪರಾಗಾಧಾನವನ್ನು ಪಡೆದುಕೊಳ್ಳುವಂಥಾಗುವುದು.
ಯೂರೋಪಿನಾಚೆ ನಾವು ಪ್ರಯಾಣಿಸಿದಂತೆ ಆರ್ಕಿಡ್ಗಳಿಂದ ತುಂಬಿರುವ ಅನೇಕ ಶೋಭಾಯಮಾನ ನೈಸರ್ಗಿಕ ಕ್ಷೇತ್ರಗಳನ್ನು ನಾವು ಕಂಡೆವು. ಆದರೂ, ಹೆಚ್ಚಿನವು ಅಳಿದು ಹೋಗಿವೆ. ಔದ್ಯೋಗೀಕರಣದ, ಜನನಿಬಿಡವಾದ, ಮತ್ತು ಭೂವ್ಯವಸಾಯದಲ್ಲಿ ಪ್ರಗತಿಯನ್ನು ಪಡೆದಿರುವ ಯೂರೋಪಿನಲ್ಲಿ ಬಹುಮಟ್ಟಿಗೆ ಪ್ರತಿಯೊಂದು ನೈಸರ್ಗಿಕ ಕಾದಿಟ್ಟ ಸ್ಥಳವು ಅನೇಕಾನೇಕ ಹಾನಿಕರ ಪರಿಸ್ಥಿತಿಗಳಿಗೆ ಬಯಲಾಗಿ ನಿಲ್ಲುತ್ತದೆ. ಆಮ್ಲ ಮಳೆ, ಅನಾವೃಷ್ಟಿ, ವ್ಯಾವಸಾಯಿಕ ಭೂಮಿಗಳ ಅಧಿಕತಮ ಕೃಷಿಗಾರಿಕೆ, ದೇಶಾಟನ, ಮತ್ತು ಉಪನಗರೀಕರಣ ಇವೆಲ್ಲವು ಆರ್ಕಿಡ್ನ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರಿವೆ. ಅನೇಕ ಜಾತಿಗಳು ಅತಿ ವಿರಳವಾಗಿ ಪರಿಣಮಿಸಿವೆ. ಹಲವಾರು ದೇಶಗಳಲ್ಲಿ ಕೆಲವು ಜಾತಿಗಳನ್ನು ಶಾಸನಬದ್ಧವಾಗಿ ರಕ್ಷಿಸಲಾಗುತ್ತದೆ.
ಆದರೂ, ಯಾವುದೊ ವಿಷಯವು ಶಾಸನಬದ್ಧವಾಗಿ ನಿಷೇಧಿಸಲ್ಪಟ್ಟಿದೆ ಎಂದು ಕೇವಲ ಘೋಷಿಸುವುದರಿಂದ ಹೆಚ್ಚು ಪ್ರಯೋಜನವಾಗದು. ಮನುಷ್ಯನು ಸೃಷ್ಟಿಯನ್ನು ಗೌರವದಿಂದ ನೋಡಬೇಕು. ನಿರ್ಮಾಣಿಕನಿಗೂ ಆತನ ಸೃಷ್ಟಿಗೂ ಗೌರವವು ಲೋಪವಾಗಿರುವ ಈ ಪ್ರಚಲಿತ ಅಸಂಪೂರ್ಣ ವಿಷಯ ವ್ಯವಸ್ಥೆಯಲ್ಲಿ, ನಿಸರ್ಗವು ಸೊಂಪಾಗಿ ಬೆಳೆಯುವುದೆಂದು ನಾವು ನಿರೀಕ್ಷಿಸುವುದಿಲ್ಲ. ದೇವರ ಹೊಸ ವ್ಯವಸ್ಥೆಯ ಬರುವ ತನಕ ನೀತಿವಂತರಾದ ಜನರಿಗೆ ನಿಸರ್ಗದ ಸಾಮರಸ್ಯದಲ್ಲಿ ಆನಂದಿಸಲು ಸಾಧ್ಯವಾಗದು. (ಯೆಶಾಯ 35:1) ಆವಾಗಲೇ ಅನೇಕ ವಿಧದ ಆರ್ಕಿಡ್ಗಳು, ಅವು ಏನಾಗಿವೆಯೊ ಅದಕ್ಕಾಗಿ ಯೋಗ್ಯವಾಗಿ ಗಣ್ಯಮಾಡಲ್ಪಡುವುವು.
[Pictures on page 8, 9]
ಈ ಎರಡು ಪುಟಗಳಲ್ಲಿರುವ ಆರ್ಕಿಡ್ಗಳು (1) ಇಟೆಲಿ, (2) ನೆದರ್ಲೆಂಡ್ಸ್ (3) ಆ್ಯಲ್ಪೈನ್ ಹುಲ್ಲುಗಾವಲುಗಳು, (4) ಸುಟ್ಟಸುಣ್ಣದ ಹುಲ್ಲು ಹೊಲಗಳು ಮತ್ತು (5) ಕುರುಚಲು ಗಿಡಗಳ ಕ್ಷೇತ್ರಗಳವುಗಳು. (6) ಚಿಟ್ಟೆ ಆರ್ಕಿಡ್.