ಯುವ ಜನರು ಪ್ರಶ್ನಿಸುವುದು . . .
ನಾನು ನನ್ನ ಹೆತ್ತವರಿಗೆ ಏಕೆ ವಿಧೇಯಳಾಗಬೇಕು?
ಸ್ಟ್ಯಾನ್ ದೇವ ಭಕ್ತ ಹೆತ್ತವರಿಂದ ಬೆಳೆಸಲ್ಪಟ್ಟಿದ್ದನು. ಆದರೆ 16ನೆಯ ವಯಸ್ಸಿನಲ್ಲಿ ಅವನು ದಂಗೆಯೆದ್ದನು. ಸ್ಟ್ಯಾನ್ ವಿವರಿಸುವುದು: “ಜನರನ್ನು ಭೇಟಿಯಾಗಲು ಮತ್ತು ಅವರಿಂದ ಅಂಗೀಕರಿಸಲ್ಪಡಲು ನಾನು ಬಯಸಿದೆ. ಇತರ ಜನರು ಪಡೆದಿರುವ ಎಲ್ಲ ವಿಷಯಗಳನ್ನು ಪಡೆಯಲು ನಾನು ಬಯಸಿದೆ.” ಇಂಥ ಗುರಿಗಳನ್ನು ಪೂರೈಸುವ ಸ್ಟ್ಯಾನ್ನ ಮನೋಗತವು ಒಬ್ಬ ಅಮಲೌಷಧದ ವಿತರಕನಾಗುವುದೇ ಆಗಿತ್ತು. ಸ್ವಭಾವತಃ, ತನ್ನ ಚಲನವಲನಗಳ ಮತ್ತು ತಾನು ಮನೆಗೆ ತರುತ್ತಿದ್ದ ಎಲ್ಲ ನಗದು ಹಣದ ಕುರಿತು ಅವನು ಸುಳ್ಳು ಹೇಳಬೇಕಾಗಿತ್ತು. ಸ್ಟ್ಯಾನ್ ಜ್ಞಾಪಿಸಿಕೊಳ್ಳುವುದು: “ನನ್ನ ಮನಸ್ಸಾಕ್ಷಿ ಸತ್ತು ಹೋಗಿತ್ತು.”
ಜಾನ್ 11ನೆಯ ವಯಸ್ಸಿನಲ್ಲಿ ಒಬ್ಬ ಕ್ರೈಸ್ತನೋಪಾದಿ ದೀಕ್ಷಾಸ್ನಾನಿನಾದನು. ಅವನು ಒಪ್ಪಿಕೊಳ್ಳುವುದು “ಆದರೆ ಸತ್ಯವು ನಿಜವಾಗಿಯೂ ನನ್ನ ಹೃದಯದಲ್ಲಿರಲಿಲ್ಲ. ನಾನು ದೀಕ್ಷಾಸ್ನಾನವನ್ನು ಪಡೆದೆ ಏಕೆಂದರೆ ಅದನ್ನು ಮಾಡುವಂತೆ ನನ್ನ ಕುಟುಂಬವು ಎದುರುನೋಡಿತು. ನಾನು ಪ್ರೌಢ ಶಾಲೆಯನ್ನು ಪ್ರವೇಶಿಸಿದಾಗ, ಅನಿಯಂತ್ರಿತನಾಗ ತೊಡಗಿದೆ. ರಾಕ್ ಸಂಗೀತ ಸಹ ನನ್ನ ಮೇಲೆ ಒಂದು ಕೆಟ್ಟ ಪ್ರಭಾವ ಬೀರಿತ್ತು. ತೆರೆನೊರೆಗಳ ಸವಾರಿ (ಸರ್ಫಿಂಗ್) ಮಾಡುವುದರಲ್ಲಿ ನಾನು ಮಗ್ನನಾದೆ ಮತ್ತು ಬೈಬಲ್ ತತ್ವಗಳ ಮೂಲಕ ಮಾರ್ಗದರ್ಶಿಸಲ್ಪಡದ ಯುವಕರೊಂದಿಗೆ ಸಮುದ್ರ ತೀರದಲ್ಲಿ ಬಹಳ ಸಮಯವನ್ನು ವ್ಯಯಿಸತೊಡಗಿದೆ. ಅಲ್ಲಿ ಬಹಳ ಅಮಲೌಷಧಗಳಿದ್ದವು.” ಸ್ವಲ್ಪ ಸಮಯದಲ್ಲೇ, ಅವನು ತನ್ನ ಹೆತ್ತವರ ಮನೆಯನ್ನು ಬಿಟ್ಟು ಹೊರಗೆ ಹೋಗಿ, ಕಲಿಸಲ್ಪಟ್ಟ ಪ್ರತಿಯೊಂದರ ವಿರುದ್ಧವಾಗಿರುವ ಒಂದು ಜೀವನ ಶೈಲಿಯನ್ನು ಆಯ್ದುಕೊಂಡನು.
ಅವರು ದಂಗೆಯೇಳುವ ಕಾರಣ
ತಮ್ಮ ಪರಿಮಿತಿಗಳನ್ನು ಪರೀಕ್ಷಿಸಲು ಮತ್ತು ಸ್ವಾತಂತ್ರ್ಯದ ತಕ್ಕ ಮಟ್ಟವೊಂದನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸುವುದು ಯುವಜನರಿಗೆ ಸಹಜವಾಗಿದೆ. ಆದರೆ ದಂಗೆಯೇಳುವ, ಕೋಪಾವೇಶದ, ಮತ್ತು ಆತ್ಮನಾಶಕ ವರ್ತನೆಯು ಸಂಪೂರ್ಣವಾಗಿ ಭಿನ್ನವಾಗಿದೆ. ಇದನ್ನು ಯಾವುದು ಕೆರಳಿಸುತ್ತದೆ? ಕಾರಣಗಳು ಅನೇಕವೂ ವೈವಿಧ್ಯವುಳ್ಳವೂ ಆಗಿವೆ. ಜಾನ್ ವಿವರಿಸುವುದು, “ನೀವು ಯುವಕರಾಗಿರುವಾಗ ವಿನೋದವನ್ನು ಹುಡುಕುತ್ತೀರಿ ಮತ್ತು ಮಜ ಮಾಡುವುದು ನಿಮ್ಮ ಬಯಕೆ.” ಆದರೂ, ಜೀವನದಲ್ಲಿ ಅವರಿಗೆ ಅನುಭವದ ಕೊರತೆಯಿರುವ ಕಾರಣ, ಯುವ ಜನರು ಸದಾ ವಿವೇಕದ ತೀರ್ಮಾನಗಳನ್ನು ಮಾಡುವುದಿಲ್ಲ. (ಇಬ್ರಿಯ 5:14) ಆದುದರಿಂದ ತಿಳಿವಳಿಕೆಯುಳ್ಳ ಹೆತ್ತವರು ನ್ಯಾಯಸಮ್ಮತವಾದ ನಿರ್ಬಂಧಗಳನ್ನು ತಮ್ಮ ಮಕ್ಕಳ ಮೇಲೆ ಹೊರಿಸುತ್ತಾರೆ. ಇದರಿಂದ ಕೆಲವು ಯುವಜನರು ತೀವ್ರ ಅಸಮಾಧಾನಗೊಳ್ಳುತ್ತಾರೆ.
ವಿಷಾದಕರವಾಗಿ, ಕೆಲವು ಯುವಜನರು ದೇವ ಭಕ್ತ ಹೆತ್ತವರಿಂದ ಅವರು ಪಡೆದ ತರಬೇತಿಯನ್ನೂ ತಿರಸ್ಕರಿಸಿದ್ದಾರೆ. (ಎಫೆಸ 6:1-4) ಕ್ರೈಸ್ತತ್ವವು “ಇಕ್ಕಟ್ಟು” ಮತ್ತು “ಬಿಕ್ಕಟ್ಟು” ಆಗಿರುವ ಜೀವಿತದ ದಾರಿಯಾಗಿದೆಯೆಂದು ಯೇಸು ಹೇಳಿದನು. (ಮತ್ತಾಯ 7:13, 14) ಆದುದರಿಂದ ತಮ್ಮ ಶಾಲಾಸಹಪಾಠಿಗಳು ಮಾಡುವಂಥ ವಿಷಯಗಳನ್ನು ಅನೇಕ ವೇಳೆ ಕ್ರೈಸ್ತ ಯುವಜನರು ಮಾಡಲು ಸಾಧ್ಯವಿಲ್ಲ. ಅಧಿಕಾಂಶ ಮಂದಿ ದೇವರ ಆಜ್ಞೆಗಳು ನಿಜವಾಗಿ ಭಾರವಾದವುಗಳಲ್ಲವೆಂಬುದನ್ನು ಗಣ್ಯಮಾಡುತ್ತಾ, ನಿರ್ಬಂಧಗಳನ್ನು ಅಂಗೀಕರಿಸುತ್ತಾರೆ. (1 ಯೋಹಾನ 5:3) ದಿಟವಾಗಿ, ಈ ಆಜ್ಞೆಗಳು ವಿವಾಹಬಂಧದ ಹೊರಗಿನ ಗರ್ಭಧಾರಣೆಗಳು, ಅಮಲೌಷಧದ ದುರುಪಯೋಗ, ಮತ್ತು ರತಿ ರವಾನಿತ ರೋಗಗಳಂಥ ಸಮಸ್ಯೆಗಳಿಂದ ಯುವಜನರನ್ನು ಕಾಪಾಡುತ್ತವೆ. (1 ಕೊರಿಂಥ 6:9, 10) ಆದರೆ ಕೆಲವು ಯುವಜನರು ವಿಷಯಗಳನ್ನು ಆ ರೀತಿಯಲ್ಲಿ ನೋಡಲು ನಿರಾಕರಿಸುತ್ತಾರೆ; ಬೈಬಲ್ ಆಜ್ಞೆಗಳು ತಮ್ಮ ಜೀವನ ಶೈಲಿಯನ್ನು ನಿರ್ಬಂಧಗೊಳಿಸುತ್ತವೆಂದು ಅವರು ನೆನಸುತ್ತಾರೆ.
ಶಿಸ್ತು, ವಿಹಾರ, ಮತ್ತು ಮನೋರಂಜನೆಯಂಥ ವಿಷಯಗಳಿಗೆ ಬರುವಾಗ, ತನ್ನ ಹೆತ್ತವರು ಬಹಳ ಅನಮ್ಯರೆಂದು ಒಬ್ಬ ಯುವಕನು ನೆನಸಿದರೆ, ತೀವ್ರ ಅಸಮಾಧಾನವು ವಿಶೇಷವಾಗಿ ತೀಕ್ಷೈವಾಗಿರಬಹುದು. ಒಬ್ಬ ಯುವ ಹುಡುಗಿಯು ಪ್ರಲಾಸಿಸಿದ್ದು: “ನನ್ನ ಹೆತ್ತವರು ನಮ್ಮೊಂದಿಗೆ ಅತಿ ಕಟ್ಟುನಿಟ್ಟಾಗಿದ್ದಾರೆಂದು ನಾನು ಭಾವಿಸುತ್ತೇನೆ.” ಇತರ ಕ್ರೈಸ್ತ ಹೆತ್ತವರು ಅನುಮತಿಸುವಂಥ ವಿಷಯಗಳನ್ನು ನೀವು ಮಾಡಲು ಒಪ್ಪಿಗೆ ಕೊಡದಿರುವಾಗ ಆಶಾಭಂಗವಾಗುವ ಸಾಧ್ಯತೆಯಿದೆ ನಿಜ. (ಕೊಲೊಸ್ಸೆ 3:21) ಕೆಲವು ಯುವಜನರು ಅವಿಧೇಯರಾಗುವ ಮೂಲಕ ತಮ್ಮ ಹತಾಶೆಗಳನ್ನು ತೋರಿಸುತ್ತಾರೆ.
ಮತ್ತೊಂದು ಕಡೆ, ತಮ್ಮ ಹೆತ್ತವರು ದಿವ್ಯ ತತ್ವಗಳಿಗೆ ಯಾವುದೇ ಗೌರವವನ್ನು ತೋರಿಸದ ಕಾರಣ ಕೆಲವು ಯುವಕರು ಪಥ ತಪ್ಪುತ್ತಾರೆ. ಜಾನ್ ಜ್ಞಾಪಿಸಿಕೊಳ್ಳುವುದು, “ಅಪ್ಪ ಒಬ್ಬ ಮದ್ಯವ್ಯಸನಿಯಾಗಿದ್ದರು. ಅವರು ಹೆಚ್ಚು ಕುಡಿಯುತ್ತಿದ್ದ ಕಾರಣ ಅವರು ಮತ್ತು ಅಮ್ಮ ವಾದಿಸುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು ನಾವು ಅನೇಕ ವೇಳೆ ಮನೆಯನ್ನು ಬದಲಾಯಿಸಿದೆವು.” ಮದ್ಯವ್ಯಸನಿಗಳು ಮತ್ತು ಇತರ ಪದಾರ್ಥದ ದುರುಪಯೋಗಿಗಳು ತಮ್ಮ ಮಕ್ಕಳ ಆವಶ್ಯಕತೆಗಳಿಗೆ ಸಾಕಷ್ಟು ಲಕ್ಷ್ಯವನ್ನು ನೀಡುವುದು ಅಸಾಧ್ಯವೇ ಸರಿ. ಅಂಥ ಮನೆಗಳಲ್ಲಿ, ಶಾಬ್ದಿಕ ಟೀಕೆ ಮತ್ತು ಅಪಮಾನ ಒಬ್ಬ ಯುವ ವ್ಯಕ್ತಿಯ ದಿನನಿತ್ಯದ ಭಾಗವಾಗಿರಬಹುದು.
ತಮ್ಮ ಹೆತ್ತವರು ಅವರನ್ನು ತೊರೆದು ಬಿಡುವ ಅಥವಾ ಕಡೆಗಣಿಸುವ ಕಾರಣ, ಇತರ ಯುವಜನರು ದಂಗೆಯೇಳುತ್ತಾರೆ. ದಂಗೆಯೇಳುವುದು ತಮ್ಮ ಹೆತ್ತವರ ಗಮನವನ್ನು ಪಡೆಯುವ—ಅಥವಾ ಅವರನ್ನು ನೋಯಿಸುವ ಒಂದು ಮಾರ್ಗವಾಗಿ ತೋರಬಹುದು. ಒಂದು ಐಶ್ವರ್ಯವಂತ ಕುಟುಂಬದಿಂದ ಬಂದ ಟೇಲರ್ ಎಂಬ ಒಬ್ಬ ಯುವ ಹುಡುಗಿ ಹೇಳುವುದು “ನಾನು ಜ್ಞಾಪಿಸಿಕೊಳ್ಳಸಾಧ್ಯವಿರುವಂತೆ, ನನ್ನ ಹೆತ್ತವರು ಎಂದೂ ಹತ್ತಿರವಿರಲಿಲ್ಲ. ನಾನು ಏಕ ಮಾತ್ರ ಮಗುವಾಗಿದ್ದೆ ಮತ್ತು ನನ್ನ ಹೆತ್ತವರು ಅಷ್ಟೊಂದು ನನ್ನ ಹತ್ತಿರವಿಲ್ಲದ್ದಿದ ಕಾರಣ, ಅವರು ಯಾವಾಗಲೂ ನನಗೆ ಬಹಳ ಹಣವನ್ನು ಕೊಡುತ್ತಿದ್ದರು.” ಮೇಲ್ವಿಚಾರಣೆಯ ಕೊರತೆಯಿಂದಾಗಿ, ಟೇಲರ್ ರಾತ್ರಿಕ್ಲಬ್ಗಳಿಗೆ ಹಾಜರಾಗಲು ಮತ್ತು ಕುಡಿಯಲು ಆರಂಭಿಸಿದಳು. ಅವಳು ಕುಡಿದು ಅಮಲೇರಿದ ಸಮಯದಲ್ಲಿ ವಾಹನವನ್ನು ನಡೆಸುತ್ತಿದ್ದುದಕ್ಕಾಗಿ ಬಂಧಿತಳಾಗುವ ತನಕವೂ ಅವಳಿಗೆ ಸಮಸ್ಯೆಯೊಂದಿತ್ತೆಂದು ಅವಳ ಹೆತ್ತವರಿಗೆ ತಿಳಿದಿರಲಿಲ್ಲ.
ಇದಲ್ಲದೆ, ಅಪೊಸ್ತಲ ಪೌಲನು ಕ್ರೈಸ್ತರ ಒಂದು ಗುಂಪನ್ನು ಎತ್ತಿ ತೋರಿಸುತ್ತಾ ಪ್ರಶ್ನಿಸಿದ ಪರಿಸ್ಥಿತಿಯಿದೆ: “ಚೆನ್ನಾಗಿ ಓಡುತ್ತಾ ಇದಿರ್ದಿ; ನೀವು ಸತ್ಯವನ್ನು ಅನುಮತಿಸದಂತೆ ಯಾರು ನಿಮ್ಮನ್ನು ತಡೆದರು?” (ಗಲಾತ್ಯ 5:7) ಅನೇಕ ವೇಳೆ ದುಸ್ಸಹವಾಸವು ಸಮಸ್ಯೆಯಾಗಿರುತ್ತದೆ. (1 ಕೊರಿಂಥ 15:33) ಎಲಿಸಬೆತ್ ಎಂಬ ಒಬ್ಬ ಹದಿವಯಸ್ಕಳು ಹೇಳುವುದು, “ನಾನು ದುಸ್ಸಹವಾಸಿಗಳೊಂದಿಗೆ ಸೇರಿಕೊಂಡೆ.” ಸಮವಯಸ್ಕರ ಒತ್ತಡದ ಫಲಿತಾಂಶವಾಗಿ, ಅವಳು “ಧೂಮಪಾನ ಮಾಡಲು ಮತ್ತು ಅಮಲೌಷಧಗಳನ್ನು ದುರುಪಯೋಗಿಸಲು ಆರಂಭಿಸಿದಳು,” ಎಂದು ಅವಳು ಒಪ್ಪುತ್ತಾಳೆ. ಅವಳು ಕೂಡಿಸುವುದು: “ಹಾದರವು ಪ್ರತಿನಿತ್ಯದ ವಿಷಯವಾಗಿತ್ತು.”
ದಂಗೆಯೇಳುವುದು ಮೂರ್ಖತನವಾಗಿರುವ ಕಾರಣ
ಪ್ರಾಯಶಃ ಹತಾಶವಾದ—ಅಥವಾ ಬಲವಂತದಿಂದ ಅದುಮಲ್ಪಟ್ಟಂತೆ ತೋರುವ ಒಂದು ಪರಿಸ್ಥಿತಿಯಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳುತ್ತೀರಿ. ನಿಮ್ಮ ಹೆತ್ತವರನ್ನು ಉಪೇಕ್ಷಿಸುವುದು ಮತ್ತು ಸುಮ್ಮನೆ ನೀವು ಏನನ್ನು ಮಾಡಲು ಬಯಸುತ್ತೀರೋ ಅದನ್ನು ಮಾಡುವುದು ಆಕರ್ಷಣೀಯವಾಗಿ ತೋರೀತು. ಆದರೆ ನೀತಿವಂತ ಮನುಷ್ಯನಾದ ಯೋಬನು ಎಚ್ಚರಿಸಿದಂತೆ, “ನಿನ್ನ ಸಿಟ್ಟು ನಿನ್ನನ್ನು ಮರುಳುಗೊಳಿಸಿ ಕುಚೋದ್ಯಕ್ಕೆ ನೂಕೀತು, ನೋಡಿಕೋ! ಎಚ್ಚರಿಕೆಯಾಗಿರು, ಅಧರ್ಮದ ಕಡೆಗೆ ಕಾಲಿಕ್ಕಬೇಡ.”—ಯೋಬ 36:18-21.
ಹಗೆಯುಳ್ಳ, ಕೋಪಾವೇಶದ ವರ್ತನೆಯು ನಿಮ್ಮ ಹೆತ್ತವರಿಂದ ಪ್ರತಿವರ್ತನೆಯನ್ನು ಪಡೆಯಬಹುದು, ಆದರೆ ಅದು ಹಿತಕರವಾಗಿರದ ಒಂದು ಪ್ರತಿವರ್ತನೆಯಾಗಿರುವುದು ಸಂಭಾವ್ಯ. ಅದರ ಫಲವಾಗಿ, ಅವರು ನಿಮ್ಮನ್ನು ಪ್ರಾಯಶಃ ಹೆಚ್ಚಿನ ನಿರ್ಬಂಧಗಳ ಕೆಳಗೆ ಹಾಕುವರು. ಇನ್ನೂ ಹೆಚ್ಚಾಗಿ, ನೋಯಿಸುವ ವರ್ತನೆಯು ನಿಮ್ಮ ಹೆತ್ತವರನ್ನು ಅಧಿಕವಾಗಿ ನೋಯಿಸುವುದು. (ಜ್ಞಾನೋಕ್ತಿ 10:1) ಅದು ಪ್ರೀತಿಪೂರ್ವಕವಾಗಿದೆಯೋ? ಅದು ನಿಮ್ಮ ಪರಿಸ್ಥಿತಿಯನ್ನು ನಿಜವಾಗಿ ಉತ್ತಮಗೊಳಿಸುವುದೋ? ನ್ಯಾಯಸಮ್ಮತವಾದ ದೂರುಗಳು ನಿಮಗಿವೆಯೆಂದು ನೀವು ನೆನಸುವುದಾದರೆ, ಒಂದು ಅಧಿಕ ತಿಳಿವಳಿಕೆಯುಳ್ಳ ಸಮೀಪಿಸುವಿಕೆಯು, ವಿಷಯಗಳನ್ನು ಅವರೊಂದಿಗೆ ಮಾತಾಡುವುದೇ ಆಗಿದೆ.a ಅವರು ನಿಮ್ಮನ್ನು ಕಾಣುವ ವಿಧದಲ್ಲಿ ಕೆಲವು ಹೊಂದಿಕೆಗಳನ್ನು ಮಾಡಲು ಒಂದು ವೇಳೆ ಇಷ್ಟವುಳ್ಳವರಾಗಿರಬಹುದು.
ಪರಿಗಣಿಸಬೇಕಾದ ಇನ್ನೊಂದು ವಿಷಯವು ದೇವರ ಮೇಲೆ ನಿಮ್ಮ ನಡತೆ ಯಾವ ಪರಿಣಾಮವನ್ನು ತರಬಹುದೆಂಬದಾಗಿದೆ. ‘ದೇವರ ಮೇಲೆಯೋ?’ ಎಂದು ನೀವು ಕೇಳಬಹುದು. ಹೌದು, ನಿಮ್ಮ ಹೆತ್ತವರನ್ನು ಸನ್ಮಾನಿಸಬೇಕೆಂದು ನಿಮಗೆ ಆಜ್ಞೆಯನ್ನು ಕೊಡುವಾತನು ಆತನಾಗಿರುವ ಕಾರಣ, ನಿಮ್ಮ ಹೆತ್ತವರ ವಿರುದ್ಧವಾಗಿ ದಂಗೆಯೇಳುವುದರ ಅರ್ಥವು ದೇವರ ವಿರುದ್ಧ ದಂಗೆಯೇಳುವುದಾಗಿದೆ. (ಎಫೆಸ 6:2) ಅಂಥ ಅವಿಧೇಯತೆಯು ದೇವರಿಗೆ ಯಾವ ಅನಿಸಿಕೆಯನ್ನುಂಟು ಮಾಡುತ್ತದೆ? ಇಸ್ರಾಯೇಲ್ ಜನಾಂಗದ ಸಂಬಂಧವಾಗಿ ಬೈಬಲ್ ಹೇಳುವುದು: “ಅರಣ್ಯದಲ್ಲಿ ಅವರು ಎಷ್ಟೋ ಸಾರಿ ಅವಿಧೇಯರಾದರು.” ಯಾವ ಪರಿಣಾಮದೊಂದಿಗೆ? “ಅವರು [ದೇವರಿಗೆ, NW] ನೋಯುವಂತೆ ಮಾಡಿದರು.” (ಕೀರ್ತನೆ 78:40) ಅವರು ಅತಿ ಕಟ್ಟುನಿಟ್ಟಿನವರೆಂದು ನೆನಸಿ, ನೀವು ನಿಮ್ಮ ಹೆತ್ತವರೊಂದಿಗೆ ಕ್ಷೋಭೆಗೊಂಡಿರಬಹುದು ನಿಜ. ಆದರೆ ನಿಮ್ಮನ್ನು ಪ್ರೀತಿಸುವ ಮತ್ತು ನೀವು ಸದಾಕಾಲ ಜೀವಿಸುವಂತೆ ಬಯಸುವಾತನಾದ—ಯೆಹೋವ ದೇವರ ಹೃದಯಕ್ಕೆ ನೋವನ್ನುಂಟು ಮಾಡಲು ನೀವು ನಿಜವಾಗಿ ಬಯಸುತ್ತೀರೋ?—ಯೋಹಾನ 17:3; 1 ತಿಮೊಥೆಯ 2:4.
“ಸ್ವಾತಂತ್ರ್ಯ”ದ ಉನ್ನತ ಬೆಲೆ
ಹಾಗಾದರೆ ಸಕಾರಣದಿಂದ, ನಮ್ಮ ಪ್ರೀತಿಪೂರ್ಣನಾದ ಸ್ವರ್ಗೀಯ ತಂದೆಗೆ ನಾವು ಕಿವಿಗೊಡುವ ಅವಶ್ಯವಿದೆ. “ಸ್ವಾತಂತ್ರ್ಯ”ದ ಸುಳ್ಳು ವಾಗ್ದಾನಗಳ ಮೂಲಕ ಮೋಸಹೋಗಬೇಡಿ. (ಹೋಲಿಸಿ 2 ಪೇತ್ರ 2:19.) ಕೆಲವು ಯುವಜನರು ಅಯೋಗ್ಯ ನಡತೆಗೆ ತಕ್ಕ ಶಿಕ್ಷೆಯಿಲ್ಲದೆ ಪಾರಾಗುತ್ತಾರೆಂದು ತೋರಬಹುದು. ಆದರೆ ಕೀರ್ತನೆಗಾರನು ಎಚ್ಚರಿಸಿದ್ದು: “ಕೆಟ್ಟ ನಡತೆಯುಳ್ಳವರನ್ನು ನೋಡಿ ಉರಿಗೊಳ್ಳಬೇಡ; ದುರಾಚಾರಿಗಳಿಗೋಸ್ಕರ ಹೊಟ್ಟೆಕಿಚ್ಚುಪಡಬೇಡ. ಅವರು ಹುಲ್ಲಿನಂತೆ ಬೇಗ ಒಣಗಿಹೋಗುವರು; ಸೊಪ್ಪಿನ ಪಲ್ಯದಂತೆ ಬಾಡಿಹೋಗುವರು.” (ಕೀರ್ತನೆ 37:1, 2) ಪ್ರತಿಭಟಿಸುವ ಯುವಜನರು ತಮ್ಮ ಸ್ವಾತಂತ್ರ್ಯವೆಂದು ಏನನ್ನು ಕರೆಯುತ್ತಾರೋ ಅದಕ್ಕಾಗಿ ಒಂದು ಉನ್ನತ ಬೆಲೆಯನ್ನು ಆಗಿಂದಾಗ್ಗೆ ತೆರಬೇಕಾಗುವುದು. ಗಲಾತ್ಯ 6:7ರಲ್ಲಿ ಬೈಬಲ್ ಹೇಳುವುದು: “ಮೋಸಹೋಗಬೇಡಿರಿ; ದೇವರು ತಿರಸ್ಕಾರ ಸಹಿಸುವವನಲ್ಲ. ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.”
ಆರಂಭದಲ್ಲಿ ಉಲ್ಲೇಖಿಸಿಲಾದ ಸ್ಟ್ಯಾನ್ನನ್ನು ಪರಿಗಣಿಸಿ. ಅವನು ನಿರೀಕ್ಷಿಸಿದಂತೆಯೇ, ಅಹಿತಕರವಾದ ತನ್ನ ಸ್ನೇಹಿತರೊಂದಿಗೆ ಜನಪ್ರಿಯವಾದನು. ಅವನು ಜ್ಞಾಪಿಸಿಕೊಳ್ಳುವುದು, “ಅಂಗೀಕರಿಸಲ್ಪಟೆನ್ಟೆಂದು ನನಗನಿಸಿತು.” ಹಾಗಿದ್ದರೂ, ಯಾವುದು ಆನಂದದಾಯಕವೆಂದು ತೋರಿತೋ ಅದು ಒಂದು ಕೆಟ್ಟ ಪರಿಸ್ಥಿತಿಯಾಗಿ ಪರಿಣಮಿಸಿತು. ಅವನು ಹೇಳುವುದು: “ನನಗೆ ಗುಂಡು ಹೊಡೆಯಲಾಯಿತು, ಬಂಧಿಸಲ್ಪಟ್ಟೆ, ಮತ್ತು ಈಗ ನಾನು ಸೆರೆವಾಸಿಯಾಗಲು ಹೋಗುತ್ತಿದ್ದೇನೆ. ಮತ್ತು ನಾನು ನನ್ನನ್ನು ಕೇಳಿಕೊಳ್ಳಸಾಧ್ಯವಿರುವುದು, ‘ಅದು ಸಾರ್ಥಕವಾಗಿತ್ತೋ?’”
“ಸ್ವಾತಂತ್ರ್ಯ”ಕ್ಕಾಗಿ ಜಾನ್ನ ಹುಡುಕಾಟದ ಕುರಿತಾಗಿ ಏನು? ಅಮಲೌಷಧವನ್ನು ಪಡೆದಿದ್ದಕ್ಕಾಗಿ ಬಂಧಿಸಲ್ಪಟ್ಟ ಅನಂತರ, ಅವನು ಕ್ರೈಸ್ತ ಸಭೆಯಿಂದ ಹೊರಹಾಕಲ್ಪಟ್ಟನು. ಅಲ್ಲಿಂದ ಅವನು ಇನ್ನೂ ಹೆಚ್ಚು ಅಡಹ್ಡಾದಿಯ ವರ್ತನೆಯೊಳಗೆ ಇಳಿಯುತ್ತಾ ಹೋದನು. ಜಾನ್ ನಿವೇದಿಸುವುದು “ಹಣಕ್ಕಾಗಿ ನಾನು ಕಾರುಗಳನ್ನು ಕದ್ದೆ. ನಾನು ಅತಿ ಹಿಂಸಾತ್ಮಕನಾಗಿದ್ದೆ.” ಜಾನ್ ತನ್ನ ಕ್ರಿಮಿನಲ್ ಕಾರ್ಯಚಟುವಟಿಕೆಗಳಿಂದ ಬಹಳ ಹಣವನ್ನು ಮಾಡಿದನು. ಆದರೆ ಅವನು ಜ್ಞಾಪಿಸಿಕೊಳ್ಳುವುದು: “ಎಲ್ಲ ಹಣವನ್ನು ಒಂದು ವ್ಯರ್ಥವಾದ ವಿಧದಲ್ಲಿ ವ್ಯಯಿಸಿದೆ. ನಾವು ಉಪಯೋಗಿಸಿದ ನಾರ್ಕೋಟಿಕ್ಗಳ ಮೊತ್ತವು ನಂಬಲಸಾಧ್ಯವಾಗಿತ್ತು.” ಮತ್ತು ಜಾನ್ ಹೊಡೆದಾಡದೆ, ಕದಿಯದೆ, ಅಥವಾ ಕುಡಿಯದೆ ಇರುತ್ತಿದ್ದಾಗ, ಅವನು ಪೋಲಿಸರಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದನು. “ನಾನು ಸುಮಾರು 50 ಸಲ ಬಂಧಿಸಲ್ಪಟ್ಟಿದ್ದೇನೆ. ಸಾಮಾನ್ಯವಾಗಿ ಯಾವುದೇ ಅಪವಾದಗಳನ್ನು ಹೊರಿಸಲು ಅವರಿಗೆ ಸಾಧ್ಯವಾಗಲಿಲ್ಲ, ಆದರೆ ಒಂದು ಸಂದರ್ಭದಲ್ಲಿ ನಾನು ಒಂದು ವರ್ಷಕ್ಕಾಗಿ ಸೆರೆಮನೆಗೆ ಹಾಕಲ್ಪಟ್ಟಿದ್ದೆ.” ಹೌದು, ಒಬ್ಬ ಸ್ವತಂತ್ರ ಮನುಷ್ಯನಾಗಿರುವುದರ ಬದಲು, ಜಾನ್ “ಸೈತಾನನ ಅಗಾಧ ಬೋಧನೆ”ಯಲ್ಲಿ ತಾನು ಸಿಕ್ಕಿಕೊಂಡಿರುವುದಾಗಿ ಕಂಡುಕೊಂಡನು.—ಪ್ರಕಟನೆ 2:24.
ಎಲಿಸಬೇತಳಿಗೆ ಸಹ ಇದನ್ನೇ ಹೇಳಸಾಧ್ಯ. ಲೌಕಿಕ ಸ್ನೇಹಿತರೊಂದಿಗಿನ ಅವಳ ಅನಿರ್ಬಂಧಿತ ಒಳಗೂಡುವಿಕೆಯು ಕಟ್ಟಕಡೆಗೆ ಅವಳನ್ನು ಸೆರೆಯಲ್ಲಿರುವಂತೆ ಮಾಡಿತು. ಅವಳು ನಿವೇದಿಸುವುದು: “ನಾನು ಗರ್ಭವತಿ ಕೂಡಾ ಆದೆ—ಮತ್ತು ನನ್ನ ಅಮಲೌಷಧದ ಕಾರಣ ನಾನು ಮಗುವನ್ನು ಕಳೆದುಕೊಂಡೆ. ಅಮಲೌಷಧಗಳು ನನ್ನ ಜೀವಾಳವಾಗಿದ್ದವು—ನನ್ನ ಮುಂದಿನ ಅಮಲೌಷಧ ಚೋದಿಸುವಿಕೆಯ ಕ್ಷೇಮಕ್ಕಾಗಿ ನಾನು ಜೀವಿಸುತ್ತಿದ್ದೆನೆಂದು ನನಗೆ ತೋರಿತು. ಕಟ್ಟಕಡೆಗೆ ನನ್ನ ಮನೆಯನ್ನು ಕಳೆದುಕೊಂಡೆ, ನನ್ನ ಹೆತ್ತವರ ಮನೆಗೆ ಹಿಂದಿರುಗಿ ಹೋಗಲು ನನಗೆ ಸಾಧ್ಯವಾಗಲಿಲ್ಲ, ಮತ್ತು ಸಹಾಯಕ್ಕಾಗಿ ಯೆಹೋವನನ್ನು ಕೇಳಲು ಸಹ ನಾನು ಲಜ್ಜಿತಳಾಗಿದ್ದೆ.”
ಕೇವಲ ಹೃದಯದ್ರಾವಕ ಪರಿಣಾಮಗಳನ್ನು ಅನುಭವಿಸಲು ದಿವ್ಯ ತತ್ವಗಳನ್ನು ತಿರಸ್ಕರಿಸಿದ ಯುವಕರ ಹಲವು ತದ್ರೀತಿಯ ಉದಾಹರಣೆಗಳನ್ನು ಕೊಡಸಾಧ್ಯವಿದೆ. ಬೈಬಲ್ ಎಚ್ಚರಿಸುವುದು: “ನೀವು ಸರಿಯಾದ ದಾರಿಯೆಂದು ಯಾವುದನ್ನು ನೆನಸುತ್ತೀರೋ ಅದು ಮರಣಕ್ಕೆ ನಡೆಸಬಹುದು.” (ಜ್ಞಾನೋಕ್ತಿ 14:12, ಟುಡೇಸ್ ಇಂಗ್ಲಿಷ್ ವರ್ಷನ್) ಯಾವುದೇ ನಿರ್ಬಂಧಗಳು ತರವಲ್ಲವೆಂದು ನಿಮಗನಿಸುವುದಾದರೆ—ವಿರುದ್ಧವಾಗಿ ದಂಗೆಯೇಳುವುದರ ಬದಲು—ನಿಮ್ಮ ಹೆತ್ತವರೊಂದಿಗೆ ಒಂದು ಒಳ್ಳೆ ಸಂಬಂಧವನ್ನು ಪಡೆಯಲು ಪ್ರಯತ್ನಿಸುವುದು, ಚರ್ಚಿಸುವುದು ಮಾಡಲಿರುವ ಒಂದು ವಿವೇಕವುಳ್ಳ ವಿಷಯವಾಗಿದೆ.
ಹಾಗಿದ್ದರೂ, ಈ ಸಮಾಚಾರ ಅತಿ ತಡವಾಗಿ ಬಂದ, ಈಗಾಗಲೇ ಆಳವಾಗಿ ಕೆಟ್ಟ ವರ್ತನೆಯೊಳಗೆ ತಮ್ಮನ್ನು ಕಂಡುಕೊಂಡಿರುವ ಯುವಜನರ ಕುರಿತಾಗಿ ಏನು? ದೇವರೊಂದಿಗೆ ಮತ್ತು ತಮ್ಮ ಹೆತ್ತವರೊಂದಿಗೆ ವಿಷಯಗಳನ್ನು ಸರಿಪಡಿಸಲಿಕ್ಕೆ ಅವರಿಗೆ ಯಾವುದಾದರೂ ಮಾರ್ಗವಿದೆಯೋ? ನಮ್ಮ ಮುಂದಿನ ಸಂಚಿಕೆಯಲ್ಲಿ ಬರುವ ಲೇಖನವು ಈ ಪ್ರಶ್ನೆಗಳನ್ನು ವಿಶ್ಲೇಷಿಸುವುದು.
[ಅಧ್ಯಯನ ಪ್ರಶ್ನೆಗಳು]
a ಅನೇಕ ಲೇಖನಗಳು ಈ ಸಂಬಂಧದಲ್ಲಿ ಸಹಾಯಪೂರ್ವಕವಾದ ತಿಳಿವನ್ನು ಒದಗಿಸಿವೆ. ಉದಾಹರಣೆಗೆ, ಎಚ್ಚರ!ದ ಜನವರಿ 8, 1985, ಆಗಸ್ಟ್ 8, 1992, ಮತ್ತು ನವಂಬರ 8, 1992ರ ಸಂಚಿಕೆಗಳಲ್ಲಿ “ಯುವ ಜನರು ಪ್ರಶ್ನಿಸುವುದು . . . ” ಎಂಬ ಲೇಖನಗಳನ್ನು ನೋಡಿರಿ.
[ಪುಟ 34 ರಲ್ಲಿರುವ ಚಿತ್ರ]
ನಿಮ್ಮ ಹೆತ್ತವರ ವಿರುದ್ಧ ದಂಗೆಯೇಳುವುದು ನಿಮಗೆ ಅಧಿಕ “ಸ್ವಾತಂತ್ರ್ಯ” ನೀಡಬಹುದು, ಆದರೆ ಪರಿಣಾಮಗಳನ್ನು ನೀವು ಪರಿಗಣಿಸಿದ್ದೀರೋ?