ಮೊಸಳೆಯ ಕಡೆಗೆ ಹೆಚ್ಚು ನಿಕಟವಾದ ಒಂದು ನೋಟ
ಕೆನ್ಯದ ಎಚ್ಚರ! ಸುದ್ದಿಗಾರರಿಂದ
ಆ ಅಮೆರಿಕನ್ ಪ್ರವಾಸಿಯು ಮಾರ ನದಿಯ ಬಳಿ ತೀವ್ರಾಪೇಕ್ಷೆಯಿಂದ ನೀರಾನೆಗಳ ಚಿತ್ರ ತೆಗೆಯುತ್ತಿದ್ದಾಗ ಅವನು ಬಂಡೆಗಳ ಮೇಲೆ ಕಾಲುಜಾರಿ ನದಿಯೊಳಗೆ ಬಿದ್ದನು. ಇದು ಆಗ ಸೂರ್ಯಸ್ನಾನ ಮಾಡುತ್ತಿದ್ದ ತೊಗಲಿನ ಪ್ರಾಣಿಯಾದ, ಮೊಸಳೆಯೊಂದರ ಗಮನವನ್ನು ಸೆಳೆಯಿತು. ಈ ಉರಗವು ಸಾಮಾನ್ಯವಾಗಿ ಮೀನು ತಿನ್ನುತ್ತದಾದರೂ, ಈ ರುಚಿಕರವಾದ ತುತ್ತಿನ ನೋಟವು ಅದಕ್ಕೆ ತಡೆಯಲು ಸಾಧ್ಯವಿಲ್ಲದ ಆಕರ್ಷಣೆಯಾಗಿತ್ತು. ಒಡನೆ ಅದು ನೀರಿನೊಳಗೆ ಜಾರಿಕೊಂಡು ತನಿಖೆ ಮಾಡಲು ಹೊರಟಿತು. ಸಂತೋಷಕರವಾಗಿ, ಆ ಪ್ರವಾಸಿಯು ಆ ಮೊಸಳೆ ಬರುವುದನ್ನು ನೋಡಿ ನದಿಯನ್ನು ಎಷ್ಟು ವೇಗವಾಗಿ ಬಿಟ್ಟು ಹೋದನೆಂದರೆ, ಅವನು ನೀರಿನ ಮೇಲೆ ನಡೆಯುತ್ತಾನೊ ಎಂಬಂತೆ ಕಂಡಿತು!
ಆಫ್ರಿಕದ ನದಿ, ಸರೋವರ ಮತ್ತು ಜೌಗು ಸ್ಥಳಗಳಿಗೆ ಭೇಟಿ ಕೊಡುವವರಿಗೆ ಮೊಸಳೆಗಳು ಅನೇಕ ವೇಳೆ ಕಾಣಸಿಗುತ್ತವಾದರೂ ಈ ಮೇಲಿನ ಗಾಬರಿಗೊಂಡ ಪ್ರವಾಸಿಗೆ ಈ ಸಮಾಗಮವು ಪ್ರಾಯಶಃ ಪ್ರಾಣಾಪಾಯದ್ದಾಗಿತ್ತು. ಕೆನ್ಯವು ನೈಲ್ ಮೊಸಳೆಯ ತಾಯಿನಾಡು. ಸ್ಥಳಿಕ ಸಾಹ್ವೀಲಿ ಭಾಷೆಯಲ್ಲಿ, ಅದು ಕೇವಲ ಮಾಂಬ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. 7 ಮೀಟರ್ಗಳ ಉದ್ದವನ್ನು ಮುಟ್ಟುವ ಈ ಮೊಸಳೆಗಳು ಉರಗಗಳು, ನೆಲದಲ್ಲೂ ನೀರಿನಲ್ಲೂ ಚುರುಕಾಗಿರುವವುಗಳು. ನೀರಿನಲ್ಲಿ, ಅವುಗಳ ಚಪ್ಪಟೆಯಾಗಿರುವ, ಹುಟ್ಟುಸದೃಶ ಬಾಲಗಳಿಂದಾಗಿ ಅವು ಹೆಚ್ಚು ವೇಗವನ್ನು ಪಡೆಯಬಲ್ಲವು. ಒಂದು ತಾಸಿಗೆ 40 ಕಿಲೊಮೀಟರ್ಗಳ ವೇಗದಲ್ಲಿ ಅವು ಈಜಬಲ್ಲವು! ಮತ್ತು ಅವು ನೀರಿನಡಿಯಲ್ಲಿ ಎರಡು ತಾಸು, ಮೂರು ತಾಸುಗಳು ಕೂಡ, ಇರುವುದು ಅಸಾಮಾನ್ಯವಲ್ಲ. ನೆಲದ ಮೇಲೆ ಅವು ದೂರಕಿರಿದಾದ ಅತಿ ವೇಗದ ದೌಡಿನಲ್ಲಿ ಓಡಬಲ್ಲವು.
ಆದಕಾರಣ ಬೈಬಲಿನಲ್ಲಿ ಮೊಸಳೆಯನ್ನು ದೇವರ ಭಯಪ್ರೇರಕ ಸೃಷ್ಟಿಯಾದ ಲೆವಾಯತನ್ ಎಂಬುದಾಗಿ ಸೂಚಿಸಿರುವುದು ಆಶ್ಚರ್ಯವಲ್ಲ. ಯೋಬ 41:8, 10 ಹೇಳುವುದು: “ಅದರ [ಲೆವಾಯತನ್] ಮೇಲೆ ಕೈಹಾಕಿ ನೋಡು! ಆ ಜಗಳವನ್ನು ನೆನಸಿಕೊಂಡರೆ ನೀನು ಮತ್ತೆ ಅದನ್ನು ಮುಟ್ಟುವದೇ ಇಲ್ಲ. . . . ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆಯು ಯಾರಲ್ಲಿಯೂ ಇಲ್ಲ.” ಅತಿ ವಿವೇಕದ ಎಚ್ಚರಿಕೆಗಳು! ಮಾರೀಸ್ ರಿಚರ್ಡ್ಸನ್ ಅವರ ದ ಫ್ಯಾಸಿನೇಷನ್ ಆಫ್ ರೆಪ್ಟೈಲ್ಸ್ ಎಂಬ ಪುಸ್ತಕಕ್ಕನುಸಾರ, ಮೊಸಳೆಗಳು ಹೊರಗಡೆ ಎಂಜಿನ್ ಇರುವ ದೋಣಿಗಳ ಮೇಲೆಯೂ ಆಕ್ರಮಣ ನಡೆಸಿರುವುದು ತಿಳಿದುಬಂದಿದೆ! ಯೋಬ 41:25 ಯೋಗ್ಯವಾಗಿಯೆ ಹೇಳುವುದು: “ಅದು ಎದ್ದರೆ ಶೂರರು ಕೂಡ ಅಂಜಿ ಹೊಡೆತಗಳಿಂದ ಭಯಭ್ರಾಂತರಾಗುವರು.”
ಪೊರೆ ಪದರವಿರುವ ಈ ಪ್ರಾಣಿಯನ್ನು ಕಂಡು ಜನರು ಭಯಪಟ್ಟು ಓಡುವುದೇಕೆ? 14ನೆಯ ವಚನ ಒಂದು ಕಾರಣವನ್ನು ವಿವರಿಸುತ್ತದೆ: “ಮುಖದ ಕದಗಳನ್ನು ಯಾರು ತೆರೆದಾರು? ಭಯವು ಅದರ ಹಲ್ಲುಗಳನ್ನು ಆವರಿಸಿಕೊಂಡಿದೆ.” ಮೊಸಳೆಯ ಪ್ರತಿಯೊಂದು ದವಡೆಯಲ್ಲಿ, ಮೇಲೆಯೂ ಕೆಳಗೂ ವಿವಿಧ ಗಾತ್ರಗಳ 24ರಷ್ಟು ಹಲ್ಲುಗಳಿವೆ ಮತ್ತು ಇವೆಲ್ಲವೂ ಅದರ ಜೀವಮಾನದಲ್ಲಿ ಸತತವಾಗಿ ಪುನಃ ಭರ್ತಿಗೊಳ್ಳುತ್ತವೆ. ರಸಕರವಾಗಿ, ಮೊಸಳೆಯ ಕೆಳದವಡೆಯ ನಾಲ್ಕನೆಯ ಹಲ್ಲು ಮೇಲವ್ದಡೆಯ ಹೊರಗಿರುವ ಒಂದು ತೋಡಿನಲ್ಲಿ ಹಿಡಿಸುವುದರಿಂದ ದವಡೆಗಳನ್ನು ಮುಚ್ಚಿದಾಗ ಸುಲಭವಾಗಿ ಅದನ್ನು ಕಾಣಲು ಸಾಧ್ಯವಾಗುತ್ತದೆ. ಇದು ಅದರ ಸೋದರ ಸಂಬಂಧಿಯಾದ ಮಕರ (ಆ್ಯಲಿಗೇಟರ್)ವನ್ನು ಅದರಿಂದ ಪ್ರತ್ಯೇಕಿಸಿ ಗುರುತಿಸಲು ಸಹಾಯ ಮಾಡುತ್ತದೆ. ಸಮಸ್ಯೆಯೇನಂದರೆ, ಈ ದಂತ ಪರೀಕ್ಷೆಯನ್ನು ಮಾಡಲು ನೀವು ತೀರ ಹತ್ತಿರ ಹೋಗುವಲ್ಲಿ, ನೀವು ಒಳಗಿನಿಂದ ಅದರ ಎಲ್ಲ ಹಲ್ಲುಗಳನ್ನು ಪರೀಕ್ಷಿಸುವವರಾಗಿ ಕಂಡುಕೊಳ್ಳುವಿರಿ!
ಈ ಕಾರಣದಿಂದಲೇ, ನೀವು ಒಂದು ಸುರಕ್ಷಿತ ಸ್ಥಳದಿಂದ ಮೊಸಳೆಯನ್ನು ನಿಕಟವಾಗಿ ಪರೀಕ್ಷಿಸಲು ಇಷ್ಟಪಡಬಹುದು, ಮತ್ತು ಹೀಗೆ ಮಾಡಸಾಧ್ಯವಿರುವ ಅನೇಕ ಸ್ಥಳಗಳು ಕೆನ್ಯದಲ್ಲಿವೆ. ಉದಾಹರಣೆಗೆ, ಮಾಂಬಾಸದ ಮಾಂಬ ಹಳ್ಳಿ, ಮೊಸಳೆಗಳನ್ನು ಬಂಧನದಲ್ಲಿ ಬೆಳೆಸುವ ಒಂದು ಸ್ಥಳ.
‘ಆದರೆ ಪ್ರಥಮವಾಗಿ, ಮೊಸಳೆಗಳನ್ನು ಬೆಳೆಸಲು ಯಾವನಾದರೂ ಏಕೆ ಬಯಸಬೇಕು,’ ಎಂದು ನೀವು ಕೇಳುತ್ತೀರಿ. ಒಂದು ಕಾರಣ, ಅದು ನಿರ್ನಾಮವಾಗುವುದರಿಂದ ಸಂರಕ್ಷಿಸಲಿಕ್ಕಾಗಿ. ವನ್ಯ ಪ್ರದೇಶಗಳಲ್ಲಿ ಮೊಸಳೆಗಳಿಗೆ ಅವುಗಳ ಮೊದಲನೆಯ ವರ್ಷದ ಜೀವಿತದಲ್ಲಿ ಮರ್ತ್ಯತೆಯ ಪ್ರಮಾಣ 99 ಪ್ರತಿಶತ. ಮಾನಿಟರ್ ಓತಿಗಳು, ಮಾರಬೂ ಕೊಕ್ಕರೆಗಳು, ಮತ್ತು ಕೆಲವು ಜನರಿಗೆ ಕೂಡ ಮೊಸಳೆಯ ಮೊಟ್ಟೆಗಳ ಮತ್ತು ಸಣ್ಣ ಮರಿಗಳ ರುಚಿಯಿದೆಯೆಂದು ತೋರುತ್ತದೆ. ಆದರೂ, ಮೊಸಳೆಯ ಸಾಕಣೆಯ ಪ್ರದೇಶದಲ್ಲಿ ಸರಿಯಾಗಿ ಪರಾಮರಿಸಿರುವಲ್ಲಿ ಮೊಸಳೆಯ ಮರ್ತ್ಯತೆಯ ಪ್ರಮಾಣವು 10ಕ್ಕಿಂತ ಕಡಿಮೆ ಪ್ರತಿಶತಕ್ಕೆ ಇಳಿಯುತ್ತದೆ. ಒಂದು ವರ್ಷದೊಳಗೆ, ಮೊಸಳೆಯ ಮರಿಗಳು 1.5 ಮೀಟರ್ಗಳ ಉದ್ದ—ಹೆಚ್ಚಿನ ಅಪಾಯಗಳಿಂದ ತಪ್ಪುವಷ್ಟು ಗಾತ್ರ—ವನ್ನು ತಲಪುತ್ತವೆ. ಮೊಸಳೆಯ ಮರಿಗಳಿಗೆ ಅರಣ್ಯದಲ್ಲಿ ಇದೇ ಉದ್ದವನ್ನು ತಲಪಲು ಮೂರು ವರ್ಷಗಳಷ್ಟು ಸಮಯ ಹಿಡಿಯಸಾಧ್ಯವಿದೆ.
ಮೊಸಳೆಗಳ ಸಾಕಣೆಸ್ಥಳಗಳು ವ್ಯಾಪಾರದ ಉದ್ದೇಶದಿಂದಲೂ ಈ ಪ್ರಾಣಿಗಳನ್ನು ಬೆಳಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಮೊಸಳೆಯ ಹೊಟ್ಟೆಯ ಮೃದು ಚರ್ಮದಿಂದ ಮಾಡಿದ ಪಾದರಕ್ಷೆಗಳು, ಬೆಲ್ಗ್ಟಳು, ಕೈಚೀಲಗಳು ಮತ್ತು ಇತರ ಫ್ಯಾಷನ್ ಸಾಮಾನುಗಳನ್ನು ನೀವು ಕಂಡುಕೊಳ್ಳುವ ಸಾಧ್ಯತೆಯಿದೆ. ಮಾಂಬ ಹಳ್ಳಿಯಿಂದ ಪ್ರತಿ ವರ್ಷ ಸುಮಾರು 2,000 ಚರ್ಮಗಳನ್ನು ಹದಮಾಡಲಿಕ್ಕಾಗಿ ಇಟೆಲಿ ಮತ್ತು ಫ್ರಾನ್ಸ್ನಂತಹ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಪ್ರಾಣಿಯ ಉಳಿದ ಭಾಗಕ್ಕೆ ಏನಾಗುತ್ತದೆ? ಕೆನ್ಯದಲ್ಲಿ ಮೊಸಳೆ ಮಾಂಸವನ್ನು ಪ್ರವಾಸಿ ಉದ್ಯಮದಲ್ಲಿ ಒಂದು ವಿಲಕ್ಷಣ ರುಚಿಯ ವಸ್ತುವಾಗಿ ಉಪಯೋಗಿಸಲಾಗುತ್ತದೆ.
ಅಕ್ಟೋಬರದಿಂದ ಎಪ್ರಿಲ್ ವರೆಗಿನ ತಿಂಗಳುಗಳು ಮೊಸಳೆಗಳ ಸಂತಾನವೃದ್ಧಿಯ ಕಾಲ. ಅರಣ್ಯ ಪ್ರದೇಶದಲ್ಲಿ ಒಂದು ಹೆಣ್ಣು ಮೊಸಳೆ 20ರಿಂದ 80 ಮೊಟ್ಟೆಗಳನ್ನಿಡುತ್ತದೆ. ಅದೇ ಕಾಲಾವಧಿಯಲ್ಲಿ ಸೆರೆಯಲ್ಲಿರುವ ಹೆಣ್ಣು ಮೊಸಳೆಗಳು ವಿವಿಧ ಹಳ್ಳಗಳ ಸುತ್ತಲಿರುವ ಮೊಟ್ಟೆಯಿಡುವ ಸ್ಥಳಗಳಲ್ಲಿ ಸುಮಾರು 36 ಮೊಟ್ಟೆಗಳನ್ನಿಡುತ್ತವೆ. ಆ ಮೊಟ್ಟೆಗಳನ್ನು ಆಮೇಲೆ ಸಂಗ್ರಹಿಸಿ ಮರಿಮಾಡಲು ಕಾವುಪೆಟ್ಟಿಗೆಗಳಿಗೆ ಸ್ಥಳಾಂತರಿಸಲಾಗುತ್ತದೆ. ಇದಕ್ಕೆ ಸುಮಾರು ಮೂರು ತಿಂಗಳ ಸಮಯ ಹಿಡಿಯುತ್ತದೆ.
ಈ ಆಕರ್ಷಕ ಪ್ರಾಣಿಗಳನ್ನು ಸುರಕ್ಷಿತವಾಗಿ ಪ್ರೇಕ್ಷಿಸಲು ಮಾಂಬ ಹಳ್ಳಿ ಒಂದು ಉತ್ಕೃಷ್ಟ ಸಂದರ್ಭವನ್ನು ಒದಗಿಸುತ್ತದೆ. ಅದು ಮೊಸಳೆ ಸಾಕಣೆಯ ಪ್ರದೇಶ, ಸಸ್ಯೋದ್ಯಾನ, ಜಲಜೀವಿಗೃಹ, ಮತ್ತು ಮನೋರಂಜನಾ ಸಂಕೀರ್ಣವಾಗಿ ಪುನರ್ವಿನ್ಯಾಸಿಸಿದ ಒಂದು 20 ಎಕ್ರೆಗಳ ಸ್ಥಳದಲ್ಲಿದೆ. ಇಂತಹ 10,000ಕ್ಕೂ ಹೆಚ್ಚು ಉರಗಗಳು ಇಲ್ಲಿ ಜೀವಿಸುತ್ತವೆ. ನೀವು ಅವೆಲ್ಲವನ್ನೂ ನೋಡಲಾರಿರಿ ನಿಶ್ಚಯ. ಆದರೆ ಎರಡು ಬೆಳವಣಿಗೆಯ ಸ್ಥಳಗಳಲ್ಲಿ, ನೀವು ನೂರಕ್ಕೂ ಹೆಚ್ಚು ವಯಸ್ಕ ಮೊಸಳೆಗಳನ್ನು ನೋಡಬಲ್ಲಿರಿ, ಮತ್ತು ಇತರ ಪ್ರದೇಶಗಳಲ್ಲಿ, ಬೆಳವಣಿಗೆಯ ವಿವಿಧ ಹಂತಗಳಲ್ಲಿರುವ ನೂರಾರು ಎಳೆಯ ಮೊಸಳೆಗಳಿವೆ.
ಆಹಾರ ಕೊಡುವ ಸಮಯದಲ್ಲಿ ಮೊಸಳೆಗಳು ಒಂದು ಪ್ರೇಕ್ಷಣೀಯ ಪ್ರದರ್ಶನವನ್ನು ನೀಡುತ್ತವೆ. ಹಳ್ಳದ ಮೇಲಿನಿಂದ ತೂಗಹಾಕಿದ ಮಾಂಸವನ್ನು ತಿನ್ನಲು ಕೆಲವು ಮೊಸಳೆಗಳು ನೀರಿನಿಂದ ಮೇಲೆ ಹಾರುವುದೂ ಉಂಟು. ಇಲ್ಲಿ ನೀವು ಬಿಗ್ ಡ್ಯಾಡಿ ಎಂಬ ಹೆಸರಿನ ಕುಪ್ರಸಿದ್ಧ ಮೊಸಳೆಯನ್ನು ನೋಡಬಲ್ಲಿರಿ. ಅದು ಟಾನ ನದೀ ಪ್ರದೇಶದಲ್ಲಿ, ಹಿಡಿಯಲ್ಪಡುವ ಮೊದಲು, ಕಡಮೆ ಪಕ್ಷ ಐದು ಜನರನ್ನು ಕೊಂದು ಜನರಲ್ಲಿ ಭಯವನ್ನು ಉತ್ಪಾದಿಸಿತು. ಮೊಸಳೆಗಳನ್ನು ಮುಖಾಮುಖಿ ನೋಡುವುದು ನಿಮ್ಮನ್ನು ಭಯಪಡಿಸುವುದಾದರೆ, ನೀವು ವಿಡಿಯೊ ಗೃಹದಲ್ಲಿ ಅದನ್ನು ನಿಕಟವಾಗಿ ಪರೀಕ್ಷಿಸಬಲ್ಲಿರಿ.
ಮೊಸಳೆಯ ನಿಕಟ ನೋಟವು ನಿಮ್ಮನ್ನು ಸ್ತಂಭಿಸಬಹುದು, ಇಲ್ಲವೆ ಪ್ರಾಯಶಃ ನಿಮ್ಮನ್ನು ಗಾಬರಿಗೊಳಿಸಬಹುದು. ಆದರೆ ಬೈಬಲು ಯೋಬ 41:34ರಲ್ಲಿ ಮೊಸಳೆಯ ಕುರಿತು, “ಸೊಕ್ಕಿದ ಮೃಗಗಳಿಗೆಲ್ಲಾ ರಾಜನಾಗಿರುವದು,” ಎಂದು ಏಕೆ ಹೇಳಿತೆಂಬುದನ್ನು ನೀವು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವಿರಿ.
[ಪುಟ 28 ರಲ್ಲಿರುವ ಚಿತ್ರ]
ಬಲಗಡೆ: ಮಾಂಬ ಹಳ್ಳಿಯ ಒಂದು ಸಮೀಕ್ಷೆ
[ಪುಟ 28 ರಲ್ಲಿರುವ ಚಿತ್ರ]
ತೀರ ಬಲಗಡೆ: ಉಣಿಸುವ ಸಮಯದಲ್ಲಿ ಮಾಂಸವನ್ನು ಪಡೆಯಲು ನೀರಿನಿಂದ ಮೇಲೆ ಹಾರುತ್ತಿರುವ ಒಂದು ಮೊಸಳೆ