ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g95 8/8 ಪು. 28-29
  • ಜಗತ್ತನ್ನು ಗಮನಿಸುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜಗತ್ತನ್ನು ಗಮನಿಸುವುದು
  • ಎಚ್ಚರ!—1995
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • “ಭಾವನಾತ್ಮಕ ಪ್ರಥಮ ಚಿಕಿತ್ಸೆ”
  • ಸೋಮವಾರ ಬೆಳಗ್ಗಿನ ರೋಗಾವಸ್ಥೆ
  • “ಜಗತ್ತಿನ ಪ್ರಮುಖ ಜೂಜಾಡುವ ರಾಷ್ಟ್ರ”
  • “ಭಾರತದ ಚಿಕ್ಕ ‘ಹೊರೆಹೊರುವ ಪ್ರಾಣಿಗಳು’”
  • ಆಶ್ರಿತರ ಮಧ್ಯದಲ್ಲಿ ಮಾಟ
  • ರಕ್ತ—ಒಂದು ಅಪಾಯಕರ “ಔಷಧವಸ್ತು”
  • ಪ್ರಯೋಜನಕಾರಿ ಹುಳುಗಳು
  • “ಸರಕಾರದ ಮೂಲಕ ಹೊರಿಸಲ್ಪಟ್ಟ ಮರಣ”
  • ಪಾದ್ರಿಗಳ “ಸಂಪರ್ಕ ಕಡಿಯಲ್ಪಟ್ಟದ್ದು”
  • ಜೂಜಾಡುವುದು ನಿಜವಾಗಿಯೂ ಅಷ್ಟು ಕೆಟ್ಟದ್ದೆ?
    ಎಚ್ಚರ!—1992
  • ರಕ್ತಪೂರಣಗಳು—ಅವೆಷ್ಟು ಅಪಾಯರಹಿತ?
    ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು ಬ್ರೋಷರ್‌
  • ಜೂಜಾಟದ ಹೊಸ ಪ್ರವೇಶಿಗಳು ಯುವಜನರು!
    ಎಚ್ಚರ!—1995
  • ರಕ್ತದಿಂದ ಜೀವವನ್ನು ರಕ್ಷಿಸುವುದು—ಹೇಗೆ?
    ಕಾವಲಿನಬುರುಜು—1992
ಇನ್ನಷ್ಟು
ಎಚ್ಚರ!—1995
g95 8/8 ಪು. 28-29

ಜಗತ್ತನ್ನು ಗಮನಿಸುವುದು

“ಭಾವನಾತ್ಮಕ ಪ್ರಥಮ ಚಿಕಿತ್ಸೆ”

ಒಂದು ಅಪಘಾತದ ದೃಶ್ಯದಲ್ಲಿನ ಪ್ರಥಮ ಚಿಕಿತ್ಸೆಯು, ಶಾರೀರಿಕ ಗಾಯಗಳಿಗೆ ಗಮನ ಕೊಡುವುದಕ್ಕಿಂತಲೂ ಹೆಚ್ಚಿನದನ್ನು ಒಳಗೊಳ್ಳಬೇಕು. ಗಾಯಗೊಂಡ ವ್ಯಕ್ತಿಗಳಿಗೆ ಭಾವನಾತ್ಮಕ ಸಹಾಯದ ಅಗತ್ಯವೂ ಇದೆಯೆಂದು, ಜರ್ಮನ್‌ ವಾರ್ತಾಪತ್ರಿಕೆಯಾದ ಸ್ಯೂಟ್‌ಡೈಚ ಟ್ಸೈಟುಂಗ್‌ ವರದಿಸುತ್ತದೆ. ಯಾವ ರೀತಿಯ ಸಹಾಯ? “ಭಾವನಾತ್ಮಕ ಪ್ರಥಮ ಚಿಕಿತ್ಸೆ”ಯನ್ನು ಮಾಡುವುದಕ್ಕಾಗಿ ನಾಲ್ಕು ಸರಳ ಹೆಜ್ಜೆಗಳನ್ನು, ಜರ್ಮನ್‌ ಮನಶ್ಶಾಸ್ತ್ರಜ್ಞರ ವೃತ್ತಿಪರ ಸಂಘವು ಸೂಚಿಸುತ್ತದೆ. ಆ ಸೂಚನೆಗಳು, ಅಪಘಾತಕ್ಕೆ ಆಹುತಿಯಾದವರು ಮತ್ತು ವೃತ್ತಿಪರರೊಂದಿಗಿನ ಸಂದರ್ಶನಗಳ ಫಲಿತಾಂಶವಾಗಿವೆ. ಶಿಫಾರಸ್ಸುಗಳು ಹೀಗಿವೆ: “ನೀವು ಅಲ್ಲಿದ್ದೀರೆಂದು ಹೇಳಿರಿ. ಗಾಯಗೊಂಡ ವ್ಯಕ್ತಿಗೆ ಅಪಕರ್ಷಣೆಗಳಿಂದ ರಕ್ಷಣೆ ಕೊಡಿರಿ. ಸ್ಪರ್ಶಿಸುವ ಮೂಲಕ ಸಂವಾದಿಸಿರಿ. ಮಾತಾಡಿರಿ ಮತ್ತು ಆಲಿಸಿರಿ.” ವೈದ್ಯರು ಮತ್ತು ಡ್ರೈವಿಂಗ್‌ ಸ್ಕೂಲ್‌ಗಳ ಮೂಲಕ ಪ್ರವರ್ಧಿಸಲ್ಪಟ್ಟ ಹೆಜ್ಜೆಗಳನ್ನು ತೆಗೆದುಕೊಳ್ಳಲು ಮತ್ತು ಪ್ರಥಮ ಚಿಕಿತ್ಸೆಯ ಕೋರ್ಸ್‌ಗಳಲ್ಲಿ ಅದನ್ನು ಒಳಗೂಡಿಸಲು ಪ್ರಯತ್ನಗಳು ಮಾಡಲ್ಪಡುತ್ತಿವೆ.

ಸೋಮವಾರ ಬೆಳಗ್ಗಿನ ರೋಗಾವಸ್ಥೆ

“ಸೋಮವಾರ ಬೆಳಗ್ಗೆಗಳಂದು ಕೆಲಸಕ್ಕೆ ಹಿಂದಿರುಗುವ ಒತ್ತಡವು ಹೃದಯಾಘಾತದ ಗಂಡಾಂತರವನ್ನು 33 ಪ್ರತಿಶತದಷ್ಟು ಹೆಚ್ಚಿಸುತ್ತದೆ,” ಎಂದು ಸಾರ್ನಲ್‌ ಡೊ ಬ್ರಾಸೀಲ್‌ ವರದಿಸುತ್ತದೆ. 2,636 ಉದಾಹರಣೆಗಳ ಒಂದು ಜರ್ಮನ್‌ ಅಧ್ಯಯನವು “ಹೃದಯಾಘಾತವನ್ನು ಅನುಭವಿಸುವ ಗಂಡಾಂತರವು ವಾರದ ದಿನ ಮತ್ತು ತಾಸಿಗನುಸಾರ ಬದಲಾಗುತ್ತದೆ ಎಂದು ಪ್ರಕಟಿಸಿತು.” ಹಾಗಿದ್ದರೂ, ಸೋಮವಾರಗಳು ವಿಶೇಷವಾಗಿ ಅಪಾಯಕರವೆಂದು ಮತ್ತು ಹೃದಯಾಘಾತಗಳು ದಿನದ ಉಳಿದ ಸಮಯಕ್ಕಿಂತ ಬೆಳಗ್ಗೆ ಸಂಭವಿಸುವ ಸಾಧ್ಯತೆಯು ಮೂರು ಪಟ್ಟು ಹೆಚ್ಚಾಗಿದೆಯೆಂದು ಕಂಡುಹಿಡಿಯಲಾಯಿತು. ಉದ್ಯೋಗಸ್ಥರು ಮತ್ತು ಆಫೀಸು ಕೆಲಸಗಾರರಿಗಿಂತ ಕಾರ್ಖಾನೆಯ ಕಾರ್ಮಿಕರು ಸೋಮವಾರ ಬೆಳಗ್ಗಿನ ರೋಗಾವಸ್ಥೆಯಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. “ವಾರಾಂತ್ಯದ ವಿಶ್ರಾಂತಿಯ ಕೂಡಲೆ ಅಧಿಕ ತೀಕ್ಷ್ಣವಾದ ಚಲನೆಗೆ ಮಾಡಲ್ಪಡುವ ಮಾರ್ಪಾಟು [ಹೃದಯ] ಆಘಾತಗಳನ್ನು ಉಂಟುಮಾಡುತ್ತದೆಂದು ನಾವು ಸಂದೇಹ ಪಡುತ್ತೇವೆ,” ಎಂಬುದಾಗಿ ಸಂಶೋಧನೆಯನ್ನು ನಿರ್ದೇಶಿಸಿದ ಪ್ರೊಫೆಸರ್‌ ಶೆಫ್ಟಾನ್‌ ವಿಲೀಕ್‌ ಹೇಳುತ್ತಾರೆ. ಹೃದಯದ ತೊಂದರೆ ಇರುವ ಜನರು ತಮ್ಮ ಕೆಲಸದ ವಾರವನ್ನು ಶಾಂತವಾದ ರೀತಿಯಲ್ಲಿ ಆರಂಭಿಸಬೇಕೆಂದು ಸೂಚಿಸಲಾಯಿತು.

“ಜಗತ್ತಿನ ಪ್ರಮುಖ ಜೂಜಾಡುವ ರಾಷ್ಟ್ರ”

“ಜಪಾನ್‌ ಜಗತ್ತಿನ ಪ್ರಮುಖ ಜೂಜಾಡುವ ರಾಷ್ಟ್ರವಾಗಿದೆ,” ಎಂದು ಆಸಾಹಿ ಈವ್ನಿಂಗ್‌ ನ್ಯೂಸ್‌ ಹೇಳುತ್ತದೆ. ಹೆಚ್ಚಿನ ಹಣವು (65 ಪ್ರತಿಶತ) ಪಿನ್‌ಬಾಲ್‌ ಯಂತ್ರಗಳನ್ನು ಉಪಯೋಗಿಸುತ್ತಾ, ಪಾಚಿನ್ಕೋ ಆಟದ ಮೇಲೆ ಜೂಜಾಡಲ್ಪಡುತ್ತದೆ. ಜಪಾನೀಯರು ಬೇರೆ ಯಾವುದೇ ರಾಷ್ಟ್ರಕ್ಕಿಂತ ಹೆಚ್ಚಾಗಿ ಸ್ಥಳಿಕ ಕುದುರೆಯ ಜೂಜಾಟಕ್ಕೂ ಖರ್ಚುಮಾಡುತ್ತಾರೆ. ಮಾರಾಟವು 1992ರಲ್ಲಿ ಅಮೆರಿಕದಲ್ಲಾದ ಮಾರಾಟಕ್ಕಿಂತ ಇಮ್ಮಡಿಯಾಗಿತ್ತು ಮತ್ತು ಹಾಂಗ್‌ ಕಾಂಗ್‌, ಬ್ರಿಟನ್‌ ಹಾಗೂ ಫ್ರಾನ್ಸ್‌ನಲ್ಲಾದವುಗಳಿಗಿಂತ ನಾಲ್ಕು ಪಟ್ಟಿಗಿಂತಲೂ ಹೆಚ್ಚಾಗಿತ್ತು. ಮಾರಾಟವನ್ನು ಹೆಚ್ಚಿಸಲು ಈಗ ಹರೆಯದ ಸ್ತ್ರೀಯರನ್ನು ಗುರಿಗಳನ್ನಾಗಿ ಮಾಡಲಾಗುತ್ತಿದೆ. ನಗಾಯದ ಒಬ್ಬಾಕೆ ಹೇಳಿದ್ದು: “ನನ್ನ ಹೆತ್ತವರು ಗೊಣಗುತ್ತಾರೆ ಆದರೆ ನಾನು ಅವರಿಗೆ ಯಾವಾಗಲೂ ಹೇಳುವುದು, ‘ರಾಷ್ಟ್ರೀಯ ಮತ್ತು ಸ್ಥಳಿಕ ಸರಕಾರಗಳು ಅವುಗಳನ್ನು ಏರ್ಪಡಿಸುತ್ತಿವೆ. ಅವು ಹೇಗೆ ಕೆಟ್ಟವುಗಳಾಗಿರಬಲ್ಲವು?’” ವಾಸ್ತವವಾಗಿ, ಜಪಾನೀ ನಿಯಮವು ತತ್ವದೃಷ್ಟಿಯಲ್ಲಿ ಜೂಜಾಡುವುದನ್ನು ನಿಷೇಧಿಸುತ್ತದೆ, ಆದರೆ ಸಾರ್ವಜನಿಕ ಜೂಜಾಡುವಿಕೆ “ವಸ್ತುತಃ ಆರ್ಥಿಕ ಆಡಳಿತ”ದಂತೆ ಇದೆಯೆಂದು ಸಂಶೋಧಕರಾದ ಹೀರೋಶೀ ಟಾಕವೂಚಿ ಹೇಳುತ್ತಾರೆ. ಜೂಜಾಡುವಿಕೆಯ ವರಮಾನವು ಒಂದು ರಾಷ್ಟ್ರದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ 4 ಪ್ರತಿಶತಕ್ಕಿಂತ ಅಧಿಕವಾಗುವಲ್ಲಿ ಅದೊಂದು ಸಾಮಾಜಿಕ ಸಮಸ್ಯೆಯಾಗುತ್ತದೆ ಎಂದು ಅವರು ಭಾವಿಸುತ್ತಾರೆ. ಜಪಾನಿನ ಜೂಜಾಡುವಿಕೆಯ ವರಮಾನವು ಈಗ 5.7 ಪ್ರತಿಶತವಾಗಿರುತ್ತದೆ.

“ಭಾರತದ ಚಿಕ್ಕ ‘ಹೊರೆಹೊರುವ ಪ್ರಾಣಿಗಳು’”

ಭಾರತದ 1.7 ಕೋಟಿಯಿಂದ 4.4 ಕೋಟಿ ಬಾಲ ಕಾರ್ಮಿಕರನ್ನು ಟೈಮ್ಸ್‌ ಆಫ್‌ ಇಂಡಿಯದ ಒಂದು ವರದಿಯು ಹಾಗೆ ಕರೆಯಿತು. ಸುಮಾರು 2.3 ಕೋಟಿಯಷ್ಟು ಗಟ್ಟಿಮುಟ್ಟಾದ ನಿರುದ್ಯೋಗಿ ವಯಸ್ಕರ ಲಭ್ಯತೆಯಿದ್ದಾಗ್ಯೂ, ಕಾರ್ಖಾನೆಯ ಒಡೆಯರು ಅನೇಕವೇಳೆ, ವಯಸ್ಕ ಕೂಲಿಯ ಅರ್ಧದಷ್ಟು ಕೂಲಿಗೆ ಪ್ರತಿಭಟಿಸದೆ ಕೆಲಸ ಮಾಡುವ ಮತ್ತು ತಮ್ಮ ಉದ್ಯೋಗಗಳ ಆರೋಗ್ಯಾಪಾಯಗಳನ್ನು ವಿರಳವಾಗಿ ಪ್ರಶ್ನಿಸುವ ಮಕ್ಕಳನ್ನು ಕೆಲಸಕ್ಕಿಟುಕ್ಟೊಳ್ಳಲು ಆರಿಸಿಕೊಳ್ಳುತ್ತಾರೆ. ಕೆಲವು ಪಾಶ್ಚಾತ್ಯ ರಾಷ್ಟ್ರಗಳು, ಬಾಲ ದುಡಿಮೆಯಿಂದ ಉತ್ಪಾದಿಸಲ್ಪಡುವ ಸರಕನ್ನು ಆಮದು ಮಾಡಿಕೊಳ್ಳಲು ನಿರಾಕರಿಸಿದಾಗ ಮಾತ್ರವೇ, ಕೆಲವು ತಯಾರಕರು ವಯಸ್ಕರಿಂದ ಮಕ್ಕಳ ಸ್ಥಾನಭರ್ತಿಮಾಡಿದರು. ಅಂತಹ ದುರುಪಯೋಗವನ್ನು ತಡೆಗಟ್ಟಲು ಮತ್ತು ತಮ್ಮ ಮಕ್ಕಳಿಗೆ ಮೂಲಭೂತ ಶಿಕ್ಷಣವನ್ನು ಕೊಡುವಂತೆ ಹೆತ್ತವರಿಗೆ ಒತ್ತಾಯಿಸಲು, ಭಾರತದ ಸರಕಾರವು ಹೆಚ್ಚು ಕಟ್ಟುನಿಟ್ಟಿನ ನಿಯಮಗಳನ್ನು ವಾಗ್ದಾನಿಸಿದೆ. ಭಾರತದ ರಾಷ್ಟ್ರಾಧ್ಯಕ್ಷರಾದ ಡಾ. ಶಂಕರ್‌ ದಯಾಳ್‌ ಶರ್ಮ ಹೇಳುವುದು: “ಸಂಪ್ರದಾಯವಾಗಲಿ ಆರ್ಥಿಕ ಆವಶ್ಯಕತೆಯಾಗಲಿ ಬಾಲ ದುಡಿಮೆಯನ್ನು ಸಮರ್ಥಿಸಲಾರದು ಮತ್ತು ಅಂತಹ ದುರ್ಲಭ ಪಡೆಯುವಿಕೆಯನ್ನು ಹೋಗಲಾಡಿಸುವುದು, ಇಂದಿನ ಪ್ರಮುಖ ಪಂಥಾಹ್ವಾನಗಳಲ್ಲಿ ಒಂದಾಗಿದೆ.” ಆದರೂ, ಹೀನದೆಸೆಯ ಬಡತನವು ಒಂದು “ಕಠೋರ ವಾಸ್ತವಿಕತೆ”ಯಾಗಿದೆ ಮತ್ತು ಮಗುವಿನಿಂದ ಸಂಪಾದಿಸಲ್ಪಡುವ ಕೂಲಿಗಳು, ಕುಟುಂಬಕ್ಕೆ ವಿಪರೀತವಾಗಿ ಅಗತ್ಯವಾದ ಬೆಂಬಲವನ್ನು ಕೊಡುತ್ತವೆ ಎಂಬ ಆಧಾರದ ಮೇಲೆ ಅನೇಕರು ಆ ರೂಢಿಯನ್ನು ಸಮರ್ಥಿಸುತ್ತಾರೆ.

ಆಶ್ರಿತರ ಮಧ್ಯದಲ್ಲಿ ಮಾಟ

ಯುದ್ಧಛಿದ್ರಿತ ರುಆಂಡದ ಆಶ್ರಿತರು, ಉತ್ತರ ಟಾನ್ಸೆನೀಯದ ಗಾರದಲ್ಲಿನ ತಮ್ಮ ಶಿಬಿರಗಳಲ್ಲಿ ಇನ್ನೂ ಒಂದು ಸಮಸ್ಯೆಯಿಂದ ಬಾಧಿಸಲ್ಪಡುತ್ತಿದ್ದಾರೆ: ಮಾಟ. ರಾಯ್‌ಟರ್ಸ್‌ ವಾರ್ತಾ ಇಲಾಖೆಗನುಸಾರ, ಯುಎನ್‌ಏಚ್‌ಸಿಆರ್‌ (ಯುನೈಟೆಡ್‌ ನೇಷನ್ಸ್‌ ಹೈ ಕಮಿಷನರ್‌ ಫಾರ್‌ ರೆಫ್ಯುಜೀಸ್‌), ಶಿಬಿರಗಳಲ್ಲಿ ಒಂದು “ಗಂಭೀರ ಸಮಸ್ಯೆ”ಯೋಪಾದಿ ಮಾಟದ ಕುರಿತು ವಿಶೇಷವಾದ ಗಮನವನ್ನು ತೆಗೆದುಕೊಂಡಿದೆ. ಯುಎನ್‌ಏಚ್‌ಸಿಆರ್‌ನ ಪ್ರತಿನಿಧಿಯಾದ ಕ್ರಿಸ್‌ ಬಾವರ್ಸ್‌ಗನುಸಾರ, ಪ್ರತಿ ರಾತ್ರಿ, ಇಬ್ಬರು ಅಥವಾ ಮೂರು ಜನರು ಮಾಂತ್ರಿಕ ಸಂಸ್ಕಾರಗಳಲ್ಲಿ ಕೊಲ್ಲಲ್ಪಡುತ್ತಾರೆ. ಅವನು ವಿವರಿಸುವುದು: “ನಿರ್ದಿಷ್ಟವಾದ ಒಂದು ರೀತಿಯಲ್ಲಿ ಕತ್ತರಿಸಿಹಾಕಲ್ಪಟ್ಟ ಶವಗಳನ್ನು ನಾವು ಕಂಡುಕೊಳ್ಳುವುದರಿಂದಲೇ, ಮಾಟವು ಒಳಗೂಡಿದೆಯೆಂದು ನಮಗೆ ಗೊತ್ತಿದೆ.” 1994ರ ಅಂತ್ಯಭಾಗದಷ್ಟಕ್ಕೆ, ಪ್ರತಿ ದಿನ 2,000 ಹೊಸ ಆಶ್ರಿತರು ಆಗಮಿಸುತ್ತಿರುವುದರೊಂದಿಗೆ, ಸುಮಾರು 5,80,000 ಜನರು ಗಾರ ಶಿಬಿರಗಳಲ್ಲಿ ಜೀವಿಸುತ್ತಿದ್ದರು. ಒಂದು ಯೂಎನ್‌ ಮೂಲವು ಹೀಗೆ ಹೇಳುವುದನ್ನು ರಾಯ್‌ಟರ್ಸ್‌ ಉದ್ಧರಿಸುತ್ತದೆ: “ಮಾಟದಲ್ಲಿ ವೃದ್ಧಿಯಿದೆ ಮತ್ತು ಅದರೊಂದಿಗೆ ಹೇಗೆ ವ್ಯವಹರಿಸಬೇಕೆಂದು ನಮಗೆ ತಿಳಿದಿಲ್ಲ.”

ರಕ್ತ—ಒಂದು ಅಪಾಯಕರ “ಔಷಧವಸ್ತು”

“ರಕ್ತಪೂರಣಗಳನ್ನು ನಿರಾಕರಿಸುವುದರಲ್ಲಿ ಯೆಹೋವನ ಸಾಕ್ಷಿಗಳು ಸರಿಯಾಗಿರಸಾಧ್ಯವೊ?” ಎಂದು ಇಂಗ್ಲೆಂಡಿನ ಸಂಡೆ ಟೆಲಿಗ್ರಾಫ್‌ ಕೇಳುತ್ತದೆ. ಪ್ರಚಲಿತ ಪೂರಣ ಬೆದರಿಕೆಗಳಲ್ಲಿ, ಹೆಪಟೈಟಿಸ್‌ ಸಿ ಮತ್ತು ಏಡ್ಸ್‌ನ ಸಾಂಕ್ರಾಮಿಕ ವಿಷದಿಂದ ಕಲುಷಿತಗೊಂಡ ರಕ್ತವು ಸೇರಿದೆ. “ಆದರೆ ವೃತ್ತಿಪರ ಪತ್ರಿಕೆಗಳಲ್ಲಿ ವರ್ಣಿಸಲ್ಪಟ್ಟಿರುವ ಹಲವಾರು ಅಪಾಯಗಳಲ್ಲಿ, ಸೋಂಕು ಕೇವಲ ಒಂದು ಅಪಾಯವಾಗಿದೆ,” ಎಂದು ಟೆಲಿಗ್ರಾಫ್‌ ಹೇಳುತ್ತದೆ. “ಪೂರಣವೊಂದಕ್ಕೆ ಆಗುವ ಪ್ರತಿಕೂಲ ಪ್ರತಿಕ್ರಿಯೆಯ ಸಾಧ್ಯತೆಗಳು 20 ಪ್ರತಿಶತದಷ್ಟು ಹೆಚ್ಚಾಗಿವೆ ಎಂದು ಅಂದಾಜು ಮಾಡಿದ ಈ ಅಧ್ಯಯನದಂತಹ ಅಧ್ಯಯನಗಳ ಕುರಿತು ಸಾರ್ವಜನಿಕರಿಗೆ ಹೆಚ್ಚೇನೂ ತಿಳಿದಿರುವುದಿಲ್ಲ. ಪೂರಣವೊಂದನ್ನು ಸ್ವೀಕರಿಸುವುದು, ಹೊಟ್ಟೆಯ ಅಥವಾ ದೊಡ್ಡಕರುಳಿನ ಶಸ್ತ್ರಚಿಕಿತ್ಸೆಗಳ ತರುವಾಯ ನ್ಯೂನ ಚೇತರಿಸಿಕೊಳ್ಳುವಿಕೆಯನ್ನು ಮಾಡುವುದರ ಅತ್ಯುತ್ತಮ ಮುನ್‌ಸೂಚಕವಾಗಿದೆ ಎಂದು ಕಂಡುಹಿಡಿದಿರುವ ಅಧ್ಯಯನಗಳು ಸಮಾನವಾಗಿ ಅಪರಿಚಿತವಾಗಿವೆ.” ಹೆಚ್ಚಿನ ಪ್ರತಿಶತದ ರಕ್ತಪೂರಣಗಳು ಅನಾವಶ್ಯಕವಾಗಿ ಕೊಡಲ್ಪಡುತ್ತವೆ ಮತ್ತು ಪೂರಣದ ಪದ್ಧತಿಗಳು ವ್ಯಾಪಕವಾಗಿ ಭಿನ್ನವಾಗಿವೆ ಮತ್ತು ವೈಜ್ಞಾನಿಕ ಮಾಹಿತಿಗಿಂತಲೂ ಹವ್ಯಾಸದ ಮೇಲೆ ಹೆಚ್ಚಾಗಿ ಆಧರಿಸಿವೆ ಎಂದು ಸಹ ಅಧ್ಯಯನಗಳು ತೋರಿಸುತ್ತವೆ. ಯಾವುದರೊಂದಿಗೆ “ಹೆಚ್ಚಿನ ಶಸ್ತ್ರಚಿಕಿತ್ಸಕರು ಅತ್ಯಧಿಕವಾಗಿ ಉದಾಸೀನರಾಗಿದ್ದಾರೊ,” ಆ ರಕ್ತವನ್ನು “ಒಂದು ಶಕ್ತಿಶಾಲಿ ಔಷಧವಸ್ತು” ಎಂದು ಕರೆಯುತ್ತಾ, ರಾಯಲ್‌ ವಿಕ್ಟೋರಿಯ ಇನ್‌ಫರ್ಮರಿಯಲ್ಲಿ ಸಲಹಾ ಶಸ್ತ್ರವೈದ್ಯನಾಗಿರುವ ಟಾಮ್‌ ಲೆನರ್ಡ್‌ ಹೇಳಿಕೆ ನೀಡಿದ್ದು: “ರಕ್ತವು ಒಂದು ಹೊಸ ಔಷಧಾವಾಗಿದ್ದಲ್ಲಿ ಅದಕ್ಕೆ ಉತ್ಪಾದನೆಯ ಪರವಾನೆ ಸಿಗುತ್ತಿರಲಿಲ್ಲ.”

ಪ್ರಯೋಜನಕಾರಿ ಹುಳುಗಳು

“ವ್ಯಾಧಿಯ ಇನ್ನೊಂದು ತಲೆದೋರುವಿಕೆಯನ್ನು ತಡೆಗಟ್ಟುವುದರಲ್ಲಿ, ಭಾರತದ ರಹಸ್ಯವಾದ ಆಯುಧಗಳು ಎರೆಹುಳುಗಳಾಗಿವೆ” ಎಂದು ನ್ಯೂ ಸೈಂಟಿಸ್ಟ್‌ ಪತ್ರಿಕೆಯು ವರದಿಸುತ್ತದೆ. ಕಸವು ಶೇಖರವಾಗುವಾಗ, ಮಾರಕ ರೋಗಗಳಿಗೆ ಆಶ್ರಯಕೊಡುವ ಇಲಿಗಳು ಮತ್ತು ಇತರ ಕೀಟಗಳು ಸಮೃದ್ಧಿಯಾಗುತ್ತವೆ. ಈಗ ನೆಲದಲ್ಲಿ ಆಳಕ್ಕೆ ಬಿಲತೋಡುವ ಒಂದು ಹುಳುವಾದ ಫೆರೆಟಿಮ ಇಲಾಂಗಟವು, ಕಸವನ್ನು ಪ್ರಯೋಜನಕಾರಿ ಕೃತಕ ಗೊಬ್ಬರವಾಗಿ ಮಾರ್ಪಡಿಸಲು ಉಪಯೋಗಿಸಲ್ಪಡುತ್ತದೆ. ಕಸದ ಪಾತ್ರೆಗಳಲ್ಲಿ ಹಾಕಲ್ಪಟ್ಟಾಗ, ಈ ಹುಳುಗಳು ಅದರ ಮೂಲಕ ಒಳಗೆ ಹಾದುಹೋದಂತೆ ಕಸವನ್ನು ತಿನ್ನುತ್ತವೆ ಮತ್ತು ಸುಲಭವಾಗಿ ಶಿಥಿಲವಾಗುವ ಒಂದು ಒಳ್ಳೆಯ ಕೃತಕ ಗೊಬ್ಬರವನ್ನು ಉತ್ಪಾದಿಸುತ್ತವೆ. ಈ ತಾಂತ್ರಿಕತೆಯು, ಈಗಾಗಲೆ ಮುಂಬಯಿಯಲ್ಲಿ ಉಪಯೋಗಿಸಲ್ಪಡುತ್ತಿದ್ದು, ಪ್ರತಿ ದಿನ ಕಸಾಯಿಖಾನೆಯ ನಾಲ್ಕು ಟನ್‌ಗಳಷ್ಟು ಕಸವು ಸಂಸ್ಕರಿಸಲ್ಪಡುತ್ತದೆ. ಪ್ರಸ್ತುತದಲ್ಲಿ ದಹನ ಕುಂಡ ಮತ್ತು ಕಚಡಾಭರ್ತಿ ಪ್ರದೇಶಗಳ ಮೇಲೆ ಅವಲಂಬಿಸಿರುವ ಸ್ಥಳೀಯ ಅಧಿಕಾರಿಗಳು, ಈಗ ಈ ಪ್ರಯೋಜನಕರ ಹುಳುಗಳ ಕಡೆಗೆ ಆಸಕ್ತಿಯಿಂದ ನೋಡುತ್ತಿದ್ದಾರೆ.

“ಸರಕಾರದ ಮೂಲಕ ಹೊರಿಸಲ್ಪಟ್ಟ ಮರಣ”

ಮೇಲಿನ ವಿಷಯವು, ಹವಾಯಿ ವಿಶ್ವವಿದ್ಯಾನಿಲಯದ ಆರ್‌. ಜೆ. ರಮಲ್‌ರಿಂದ ಬರೆಯಲ್ಪಟ್ಟ ಹೊಸ ಪುಸ್ತಕವೊಂದರ ಶಿರೋನಾಮವಾಗಿದೆ. ಎಂಟು ವರ್ಷಗಳ ಅವಧಿಯಲ್ಲಿ, ಶ್ರೀ ರಮಲ್‌ ಈ ಶತಮಾನದಲ್ಲಿನ ಮಾನವ ಕಗ್ಗೊಲೆಗಳಲ್ಲಿ ಸರಕಾರದ ಪಾತ್ರದ ವಿಷಯದ ಮೇಲೆ “ಸಾವಿರಾರು ಮೂಲ”ಗಳಿಂದ ದತ್ತಾಂಶವನ್ನು ಸಂಗ್ರಹಿಸಿದರು. ದ ಹೊನೊಲುಲು ಅಡ್‌ವರ್ಟೈಸರ್‌ಗನುಸಾರ, ಆ ಪುಸ್ತಕವು ಹೇಳಿಕೆಯನ್ನೀಯುವುದು: “ಬಹುಮಟ್ಟಿಗೆ 17 ಕೋಟಿ ಪುರುಷರು, ಸ್ತ್ರೀಯರು, ಮತ್ತು ಮಕ್ಕಳಿಗೆ, ಗುಂಡುಹಾರಿಸಲಾಗಿದೆ, ಹೊಡೆಯಲಾಗಿದೆ, ಚಿತ್ರಹಿಂಸೆ ಕೊಡಲಾಗಿದೆ, ಇರಿಯಲಾಗಿದೆ, ಸುಡಲಾಗಿದೆ, ಉಪವಾಸ ಕೆಡವಲಾಗಿದೆ, ಹಿಮದಲ್ಲಿ ಘನೀಕರಿಸಲಾಗಿದೆ, ಜಜ್ಜಲಾಗಿದೆ, ಅಥವಾ ಸಾಯುವ ತನಕ ಕೆಲಸಕ್ಕೆ ಒಡ್ಡಲಾಗಿದೆ; ಸಜೀವವಾಗಿ ಹೂಳಲಾಗಿದೆ, ಮುಳುಗಿಸಲಾಗಿದೆ, ತೂಗುಹಾಕಲಾಗಿದೆ, ಬಾಂಬ್‌ ಹಾಕಲಾಗಿದೆ ಅಥವಾ ಇತರ ಯಾವುದೇ ಕೋಟ್ಯನುಕೋಟಿ ವಿಧಗಳಲ್ಲಿ ಕೊಲಲ್ಲಾಗಿದ್ದೂ, ಸರಕಾರಗಳು, ನಿಶಸ್ತ್ರ, ನಿಸ್ಸಹಾಯಕ ನಾಗರಿಕರ ಹಾಗೂ ವಿದೇಶೀಯರ ಮೇಲೆ ಮರಣವನ್ನು ಹೊರಿಸಿವೆ.” ರಮಲ್‌ ಹೇಳುವುದು: “ನಮ್ಮ ಮಾನವ ಜಾತಿಯು, ಆಧುನಿಕ ಉಗ್ರ ವ್ಯಾಧಿಯೊಂದರಿಂದ ಧ್ವಂಸಗೊಳಿಸಲ್ಪಟ್ಟಿದೆಯೋ ಎಂಬಂತಿದೆ.” “ಇತರ ಯಾವುದೇ ಶತಮಾನವು ಇಂತಹ ಪ್ರಮಾಣದ ಕಗ್ಗೊಲೆಯನ್ನು ಕಂಡಿಲ್ಲ” ಎಂದು ರಮಲ್‌ರ ಕಂಡುಹಿಡಿತಗಳ ಸಂಬಂಧವಾಗಿ ವಾರ್ತಾಪತ್ರಿಕೆಯು ವರದಿಸುತ್ತದೆ.

ಪಾದ್ರಿಗಳ “ಸಂಪರ್ಕ ಕಡಿಯಲ್ಪಟ್ಟದ್ದು”

ಅನುಕೂಲಕರವಾದ ಸಂವಾದದಲ್ಲಿ ಸುಲಭ ಸಾಗಣೆಯ ಟೆಲಿಫೋನ್‌ಗಳು ಅತ್ಯುತ್ತಮವಾದುದನ್ನು ಪ್ರತಿನಿಧಿಸಬಹುದಾದರೂ, ಇದು ತೀರ ಅತಿಯಾಗಿರಸಾಧ್ಯವಿದೆ ಎಂದು ಫಿನ್ಲೆಂಡ್‌ನಲ್ಲಿನ ಒಬ್ಬ ಬಿಷಪನು ನಿರ್ಧರಿಸಿದ್ದಾನೆ. ರಾಯ್‌ಟರ್ಸ್‌ಗನುಸಾರ, “ಸುಲಭ ಸಾಗಣೆಯ ಒಂದು ಫೋನ್‌, ತನ್ನ ಬಳಕೆದಾರನನ್ನು ಅಡಿಯಾಳನ್ನಾಗಿ ಮಾಡುವುದಲ್ಲ, ಬದಲಾಗಿ ಅವನ ಸೇವೆ ಮಾಡಬೇಕು” ಎಂದು ಬಿಷಪನು ದೃಢವಾಗಿ ಹೇಳಿದನು ಮತ್ತು ಆ ಉಪಕರಣಗಳ ಉಪಯೋಗವನ್ನು ಕಡಿಮೆಮಾಡುವಂತೆ ಚರ್ಚ್‌ ಕೆಲಸಗಾರರಿಗೆ ಹಾಗೂ ನಿರ್ವಾಹಕರಿಗೆ ಆಜ್ಞೆಯನ್ನಿತ್ತನು. ಪ್ಯಾರಿಷಿನ್ಷ ನಿವಾಸಿಗಳ ಆಪಾದನೆಗಳು ಬಿಷಪನ ಕಿವಿಗಳಿಗೆ ತಲಪಿದವ್ದಂತೆ—ಚರ್ಚಿನ ಆರಾಧನೆಯ ಸಮಯದಲ್ಲಿ ಪಾದ್ರಿವರ್ಗದ ಕೆಲವು ಸದಸ್ಯರು ಫೋನ್‌ ಕರೆಗಳನ್ನು ಪಡೆದುಕೊಳ್ಳುತ್ತಿದ್ದರು. ವರದಿಗನುಸಾರ, ಒಂದು ಶವಸಂಸ್ಕಾರವು ನಡೆಯುತ್ತಿದ್ದ ಸಮಯದಲ್ಲಿಯೇ ಅಂತಹ ಒಂದು ಕರೆಯು ಬಂತು. ತದ್ರೀತಿಯಲ್ಲಿ, ತಾನು ತನ್ನ ಪಾಪಗಳನ್ನು ನಿವೇದಿಸಿಕೊಳ್ಳುತ್ತಿದ್ದಂತೆ, ಪಾದ್ರಿಯ ಫೋನ್‌ ರಿಂಗ್‌ ಆಗುತಿದ್ತುದನ್ನು ತಾನು ಕೇಳಿಸಿಕೊಳ್ಳಸಾಧ್ಯವಿತ್ತೆಂದು ಒಬ್ಬ ಸ್ತ್ರೀಯು ಆಪಾದಿಸಿದ ಬಳಿಕ, ಪಾಪನಿವೇದನೆಯ ಸ್ಥಳದಲ್ಲಿ ಅವರೊಂದಿಗೆ ತಮ್ಮ ಫೋನ್‌ಗಳನ್ನು ತರಬಾರದೆಂದು, ಇಟಲಿಯಲ್ಲಿನ ಕ್ಯಾತೊಲಿಕ್‌ ಪತ್ರಿಕೆಯೊಂದು ಇತ್ತೀಚೆಗೆ ಪಾದ್ರಿಗಳಿಗೆ ಸಲಹೆ ನೀಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ