ನನ್ನ ಸನ್ನಿಹಿತ ಸಾವಿನಿಂದ ವೈದ್ಯರು ಕಲಿತರು
ಮೇ 1991ರ ನಡುಭಾಗದಲ್ಲಿ, ನಮ್ಮ ನಾಲ್ಕನೆಯ ಮಗುವನ್ನು ನಿರೀಕ್ಷಿಸುತ್ತಿದ್ದೆವೆಂಬುದನ್ನು ನಾವು ಅರಿತೆವು. ನಮ್ಮ ಕಿರಿಯ ಮಗನಾದ ಮೀಕೆಲ್ ಒಂಬತ್ತು ವರ್ಷ ಪ್ರಾಯದವನಾಗಿದ್ದನು ಮತ್ತು ನಮ್ಮ ಅವಳಿ ಪುತ್ರಿಯರಾದ ಮಾರಿಯ ಮತ್ತು ಸಾರ 13 ವರ್ಷ ಪ್ರಾಯದವರಾಗಿದ್ದರು. ಇನ್ನೊಂದು ಮಗುವನ್ನು ಪಡೆಯುವುದು ಅಯೋಜಿತವಾಗಿತ್ತಾದರೂ, ಮತ್ತೊಂದು ಮಗುವನ್ನು ಪಡೆಯುವ ಯೋಚನೆಗೆ ನಾವು ಬೇಗನೆ ಹೊಂದಿಕೊಂಡೆವು.
ಗರ್ಭಾವಸ್ಥೆಯ ಮೂರನೆಯ ತಿಂಗಳಿನ ಒಂದು ಸಂಜೆ, ನನಗೆ ನನ್ನ ಶ್ವಾಸಕೋಶದಲ್ಲಿ ಇದ್ದಕ್ಕಿದ್ದ ಹಾಗೆ ನೋವಿನ ಅನಿಸಿಕೆಯಾಯಿತು. ಮರುದಿನ ನನಗೆ ನಡೆಯುವುದೇ ಅಸಾಧ್ಯವಾಗಿತ್ತು. ವೈದ್ಯರು ನನಗೆ ಶ್ವಾಸಕೋಶದ ಉರಿಯೂತ (ನ್ಯುಮೋನಿಯ)ವಿದೆ ಎಂಬುದಾಗಿ ಹೇಳಿದರು, ಮತ್ತು ಅವರು ನನಗೆ ಪೆನಿಸಿಲಿನ್ ಅನ್ನು ಕೊಟ್ಟರು. ಒಂದೆರಡು ದಿನಗಳ ಅನಂತರ ನನ್ನ ಆರೋಗ್ಯ ಉತ್ತಮಗೊಳ್ಳಲು ಪ್ರಾರಂಭವಾಯಿತು, ಆದರೆ ನಾನು ಬಹಳಷ್ಟು ನಿತ್ರಾಣಳಾಗಿದ್ದೆ. ಅನಂತರ ನನ್ನ ಮತ್ತೊಂದು ಶ್ವಾಸಕೋಶದಲ್ಲಿ ನಾನು ಇದ್ದಕ್ಕಿದ್ದ ಹಾಗೆ ನೋವನ್ನು ಅನುಭವಿಸಿದೆ, ಮತ್ತು ಅದೇ ಕಾರ್ಯವಿಧಾನವು ಪುನರಾವೃತ್ತಿಸಲ್ಪಟ್ಟಿತು.
ಅದನ್ನು ಹಿಂಬಾಲಿಸಿ ಬಂದ ದಿನಗಳಲ್ಲಿ, ಉಸಿರಾಡುವಿಕೆಯಲ್ಲಿನ ಕಷ್ಟದ ಕಾರಣದಿಂದ ನನಗೆ ಮಲಗುವುದು ಅಸಾಧ್ಯವಾಗಿತ್ತು. ನೋವಿನ ಪ್ರಥಮ ಆಕ್ರಮಣದ ಒಂದು ವಾರಕ್ಕಿಂತ ಸ್ವಲ್ಪ ಹೆಚ್ಚು ಸಮಯಾನಂತರ, ನನ್ನ ಕಾಲುಗಳಲ್ಲಿ ಒಂದು ಕಾಲು ನೀಲಿಯಾಗಿ ಊದಿಕೊಂಡಿತು. ಈ ಸಲ ನಾನು ಆಸ್ಪತ್ರೆಗೆ ದಾಖಲಿಸಲ್ಪಟ್ಟೆ. ನನ್ನ ಶ್ವಾಸಕೋಶದಲ್ಲಿನ ನೋವು, ಶ್ವಾಸಕೋಶ ಉರಿಯೂತದಿಂದಲ್ಲ, ರಕ್ತದ ಹೆಪ್ಪುಗಳಿಂದ ಎಂಬುದಾಗಿ ವೈದ್ಯರು ನನಗೆ ತಿಳಿಸಿದರು. ನನ್ನ ತೊಡೆಸಂದಿನಲ್ಲಿ ಒಂದು ರಕ್ತದ ಹೆಪ್ಪು ಇದೆ ಎಂದೂ ಅವರು ಹೇಳಿದರು. ಸ್ವೀಡನ್ನಲ್ಲಿನ ಗರ್ಭವತಿ ಮಹಿಳೆಯರಲ್ಲಿ ಮರಣದ ಅತಿ ಸಾಮಾನ್ಯ ಕಾರಣಗಳಲ್ಲೊಂದು ರಕ್ತದ ಹೆಪ್ಪುಗಳಾಗಿವೆ ಎಂದು ನನಗೆ ತಿಳಿದುಬಂತು. ಕೆಲವು ದಿನಗಳ ಅನಂತರ, ಜಟಿಲಗೊಂಡ ಗರ್ಭಾವಸ್ಥೆಗಳಿಗಾಗಿ ಒಂದು ವಿಶೇಷ ಹೆರಿಗೆ ಚಿಕಿತ್ಸಾಲಯವಿರುವ, ಸ್ಟಾಕ್ಹೋಮ್ನಲ್ಲಿನ ಕಾರೋಲಿನ್ಸ್ಕ ಶ್ಯುಕ್ಸೂಸೆಟ್ ಆಸ್ಪತ್ರೆಗೆ ನಾನು ಸ್ಥಳಾಂತರಿಸಲ್ಪಟ್ಟೆ.
ವೈದ್ಯರು ನನ್ನನ್ನು ರಕ್ತ ತೆಳುಮಾಡುವ ಔಷಧಿಯಾದ ಹೆಪರಿನ್ಗೆ ಒಳಪಡಿಸಬೇಕೆಂದು ನಿರ್ಧರಿಸಿದರು. ಶ್ವಾಸಕೋಶಗಳ ಮತ್ತೊಂದು ರಕ್ತದ ಹೆಪ್ಪು ಉಂಟಾಗುವ ಗಂಡಾಂತರಕ್ಕೆ ಹೋಲಿಸುವಾಗ, ಹೆಪರಿನ್ ತೆಗೆದುಕೊಳ್ಳುವುದರಿಂದಾಗಿ ರಕ್ತಸ್ರಾವವಾಗುವ ಅಪಾಯವು ತುಂಬಾ ಚಿಕ್ಕದಾಗಿದೆ ಎಂಬುದಾಗಿ ಅವರು ನನಗೆ ಆಶ್ವಾಸನೆಯನ್ನಿತ್ತರು. ಒಂದೆರಡು ವಾರಗಳ ಅನಂತರ, ಮನೆಗೆ ಹಿಂದಿರುಗಿಹೋಗಲು ಸಾಕಾಗುವಷ್ಟು ನಾನು ಸುಧಾರಿಸಿದ್ದೆ. ನನ್ನೊಳಗೆ ಬೆಳೆಯುತ್ತಿರುವ ಚಟುವಟಿಕೆಯುಳ್ಳ ಪುಟ್ಟ ಮಗುವಿನೊಂದಿಗೆ ಬದುಕಿರುವುದಕ್ಕಾಗಿ ಒಂದು ಹೃದಯೋಲ್ಲಾಸದ, ಅತ್ಯುತ್ಸಾಹದ ಸಂತೋಷವು ನನಗನಿಸಿತು.
ಪ್ರಸವಕ್ಕಾಗಿ ಸಮಯ
ಪ್ರಸವವನ್ನು ಉದ್ರೇಕಿಸಲು ನಿರ್ಧರಿಸಲಾಯಿತು, ಆದರೆ ಕಾರ್ಯವಿಧಾನವನ್ನು ಪ್ರಾರಂಭಿಸಲು ಹೆಜ್ಜೆಗಳನ್ನು ತೆಗೆದುಕೊಳ್ಳುವ ಮುನ್ನ, ನನಗೆ ನನ್ನ ಕಿಬ್ಬೊಟ್ಟೆಯಲ್ಲಿ ವಿಪರೀತವಾದ ನೋವಿನ ಅನುಭವವಾಯಿತು. ಆದುದರಿಂದ ನನ್ನನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡುಹೋಗಲಾಯಿತು. ಹಾಗಿದ್ದರೂ, ವೈದ್ಯರಿಗೆ ಯಾವುದೇ ದೋಷವನ್ನು ಕಂಡುಕೊಳ್ಳಲಾಗಲಿಲ್ಲ.
ಮರುದಿನ ಸಂಜೆ ನನ್ನ ಹೊಟ್ಟೆಯು ಬಹಳ ಊದಿತ್ತು, ಮತ್ತು ನೋವು ಕಡಿಮೆಯಾಗಿರಲಿಲ್ಲ. ನಡುರಾತ್ರಿಯಲ್ಲಿ ಒಬ್ಬ ವೈದ್ಯರು ನನ್ನನ್ನು ಪರೀಕ್ಷಿಸಿದರು ಮತ್ತು ನಾನು ಪ್ರಸವದ ಬೇನೆಯಲ್ಲಿದ್ದೇನೆಂದು ಕಂಡುಕೊಂಡರು. ಮರುದಿನ ಬೆಳಗ್ಗೆ ನನ್ನ ಹೊಟ್ಟೆಯು ಇನ್ನೂ ಹೆಚ್ಚಾಗಿ ಊದಿತ್ತು, ಮತ್ತು ನೋವು ಸಹಿಸಲಸಾಧ್ಯವಾಗಿತ್ತು. ವೈದ್ಯರು ಚಿಂತಿತರಾಗಿರುವಂತೆ ಕಂಡರು ಮತ್ತು ಮಗುವಿನ ಚಲನೆಗಳನ್ನು ನಾನು ಕಡೆಯದಾಗಿ ಯಾವಾಗ ಗಮನಿಸಿದ್ದೆನೆಂದು ಕೇಳಿದರು. ದೀರ್ಘ ಸಮಯದಿಂದ ನಾನು ಯಾವುದೇ ಚಲನೆಗಳನ್ನು ಗಮನಿಸಿರಲಿಲ್ಲವೆಂಬುದನ್ನು ನಾನು ಹಠಾತ್ತನೆ ಮನಗಂಡೆ.
ತತ್ಕ್ಷಣವೇ ನನ್ನನ್ನು ಹೆರಿಗೆಯ ಕೋಣೆಗೆ ಕರೆದುಕೊಂಡುಹೋಗಲಾಯಿತು. ಸಿಬ್ಬಂದಿ ವರ್ಗದವರು ಮಾತಾಡುತ್ತಿರುವುದನ್ನು ನಾನು ದೂರದಿಂದ ಕೇಳಿಸಿಕೊಳ್ಳಸಾಧ್ಯವಿತ್ತು. “ರಕ್ತಪೂರಣವೊಂದನ್ನು ತೆಗೆದುಕೊಳ್ಳಲು ಆಕೆ ನಿರಾಕರಿಸುತ್ತಾಳೆ” ಎಂದು ಯಾರೋ ಒಬ್ಬರು ಹೇಳಿದರು. ನಂತರ ಒಬ್ಬ ನರ್ಸ್ ನನ್ನ ಮೇಲೆ ಬಾಗಿ ಗಟ್ಟಿಯಾದ ಸ್ವರದಲ್ಲಿ ಹೇಳಿದ್ದು: “ನಿಮ್ಮ ಮಗುವು ಸತ್ತುಹೋಗಿದೆ ಎಂಬುದು ನಿಮಗೆ ಗೊತ್ತಿದೆ ಅಲ್ಲವೇ?” ಯಾರೋ ಒಬ್ಬರು ನನ್ನ ಹೃದಯವನ್ನು ಕತ್ತಿಯೊಂದರಿಂದ ಇರಿದರೋ ಎಂಬಂತೆ ನನಗನಿಸಿತು.—ಜ್ಞಾನೋಕ್ತಿ 12:18.
ರಕ್ತವನ್ನು ಅಂಗೀಕರಿಸಲು ದೃಢವಾದ ನಿರಾಕರಣೆ
ಇದ್ದಕ್ಕಿದ್ದ ಹಾಗೆ ನನ್ನ ವೈದ್ಯರು ಕಾಣಿಸಿಕೊಂಡರು ಮತ್ತು ನನ್ನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಿದರು. ರಕ್ತಪೂರಣವೊಂದನ್ನು ಅಂಗೀಕರಿಸಬಾರದೆಂಬ ನನ್ನ ನಿರ್ಧಾರಕ್ಕೆ ನಾನು ಈಗಲೂ ಅಂಟಿಕೊಂಡಿರಲು ಬಯಸುತ್ತೇನೋ ಎಂಬುದಾಗಿ ಅವರು ಕೇಳಿದರು. ನಾನು ನನ್ನ ನಿರ್ಧಾರಕ್ಕೆ ಅಂಟಿಕೊಂಡಿದ್ದೇನೆಂದು ಸ್ಪಷ್ಟ ರೀತಿಯಲ್ಲಿ ಹೇಳಿದೆ, ಆದರೆ ಅದರ ಅನಂತರ ಏನಾಯಿತೆಂಬುದು ನನಗೆ ನೆನಪಿಲ್ಲ. ಹಾಗಿದ್ದರೂ, ಕ್ರೈಸ್ತರು ರಕ್ತದಿಂದ ದೂರವಿರಬೇಕು ಎಂಬುದಾಗಿ ಆಜ್ಞಾಪಿಸಲ್ಪಟ್ಟಿದ್ದಾರೆಂದೂ ದೇವರ ನಿಯಮಕ್ಕೆ ವಿಧೇಯಳಾಗಿರಲು ನಾನು ಬಯಸುತ್ತೇನೆಂದೂ ನಾನು ನನ್ನ ವೈದ್ಯರಿಗೆ ಸ್ಪಷ್ಟಗೊಳಿಸಿದ್ದೆ.—ಅ. ಕೃತ್ಯಗಳು 15:28, 29; 21:25.
ಈ ಮಧ್ಯೆ ಮತ್ತೊಬ್ಬ ವೈದ್ಯರನ್ನು, ನುರಿತ ಸರ್ಜನರಾದ ಬಾರ್ಬ್ರಾ ಲಾರ್ಸನ್ ಅವರನ್ನು ಅವರು ಕರೆದರು. ಅವರು ಬೇಗನೆ ಆಗಮಿಸಿ, ತತ್ಕ್ಷಣವೇ ಶಸ್ತ್ರಚಿಕಿತ್ಸೆಯನ್ನು ಮಾಡಿದರು. ಅವರು ನನ್ನ ಹೊಟ್ಟೆಯನ್ನು ತೆರೆದಾಗ, ಆಂತರಿಕ ರಕ್ತಸ್ರಾವದ ಮುಖಾಂತರ ನಾನು ಮೂರು ಲೀಟರ್ಗಳಷ್ಟು ರಕ್ತವನ್ನು ಕಳೆದುಕೊಂಡಿದ್ದೆನೆಂದು ಅವರು ಕಂಡುಕೊಂಡರು. ಆದರೆ ರಕ್ತಪೂರಣದ ಸಂಬಂಧದಲ್ಲಿನ ನನ್ನ ನಿರ್ಧಾರವನ್ನು ಡಾ. ಲಾರ್ಸನ್ ಗೌರವಿಸಿದರು.
ಅನಂತರ, ಇನ್ನು ಕೆಲವೇ ನಿಮಿಷಗಳಲ್ಲಿ ನಾನು ಖಂಡಿತವಾಗಿ ಸಾಯುತ್ತೇನೆಂದು ಮತ್ತೊಬ್ಬ ವೈದ್ಯರು ಹೇಳಿದರು. “ಈ ಕ್ಷಣದಲ್ಲಿ ಆಕೆ ಜೀವಂತವಾಗಿದ್ದಾಳೋ ಎಂಬುದು ನನಗೆ ಗೊತ್ತಿಲ್ಲ” ಎಂದು ಅವರು ಪದೇ ಪದೇ ಪ್ರತಿಪಾದಿಸಿದರಂತೆ. ರಕ್ತಸ್ರಾವದ ಮೂಲವನ್ನು ಕಂಡುಕೊಳ್ಳುವುದು ವೈದ್ಯರಿಗೆ ಅಸಾಧ್ಯವಾಯಿತು ಎಂಬುದು ನಂತರ ಅರಿವಿಗೆ ಬಂತು, ಆ ಕಾರಣದಿಂದ ನನ್ನ ಹೊಟ್ಟೆಯಲ್ಲಿ ಒಂದು ಒತ್ತುಕಟ್ಟನ್ನು ಅವರು ಇಟ್ಟರು. ಏನೇ ಆದರೂ ನನ್ನ ಬದುಕಿ ಉಳಿಯುವಿಕೆಗೆ ವೈದ್ಯರು ಮತ್ತು ನರ್ಸ್ಗಳು ಯಾವುದೇ ಭರವಸೆಯನ್ನು ನೀಡಲಿಲ್ಲ.
ನನ್ನ ಮಕ್ಕಳು ಆಸ್ಪತ್ರೆಗೆ ಬಂದು ನನ್ನ ಸ್ಥಿತಿಯ ಕುರಿತು ತಿಳಿದಾಗ, ಅರ್ಮಗೆದೋನ್ ಅತಿ ಬೇಗನೆ ಇಲ್ಲಿರುವುದೆಂದೂ ಅದರ ಅನಂತರ ಪುನರುತ್ಥಾನದಲ್ಲಿ ಅವರು ನನ್ನನ್ನು ಪುನಃ ಪಡೆಯುವರೆಂದೂ ಅವರಲ್ಲಿ ಒಬ್ಬರು ಹೇಳಿದರು. ಪುನರುತ್ಥಾನವು ಎಂಥ ಒಂದು ಅದ್ಭುತವೂ ಯುಕ್ತವೂ ಆದ ಏರ್ಪಾಡಾಗಿದೆ!—ಯೋಹಾನ 5:28, 29; 11:17-44; ಅ. ಕೃತ್ಯಗಳು 24:15; ಪ್ರಕಟನೆ 21:3, 4.
ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವ
ನನ್ನ ಹೀಮೊಗ್ಲೋಬಿನ್ ಒಂದು ಡೆಸಿಲೀಟರ್ಗೆ 4 ಗ್ರ್ಯಾಮ್ಗಳಷ್ಟು ಕುಸಿದಿತ್ತು, ಆದರೆ ರಕ್ತಸ್ರಾವವು ನಿಂತಂತೆ ತೋರಿತು. ಈ ಹಿಂದೆ ನಾನು ನನ್ನ ಕೇಸ್ ದಾಖಲೆಯಲ್ಲಿ ನವೆಂಬರ್ 22, 1991ರ ಅವೇಕ್! ಪತ್ರಿಕೆಯ ಒಂದು ಪ್ರತಿಯನ್ನು ಇಟ್ಟಿದ್ದೆ. ಡಾ. ಲಾರ್ಸನ್ ಅದನ್ನು ಕಂಡುಕೊಂಡು “ರಕ್ತ ಪೂರಣವಿಲ್ಲದೆ ರಕ್ತಸ್ರಾವವನ್ನು ತಡೆಯುವುದು ಮತ್ತು ನಿಯಂತ್ರಿಸುವುದು,” ಎಂಬ ಶೀರ್ಷಿಕೆಯನ್ನು ಗಮನಿಸಿದರು. ನನ್ನನ್ನು ಬದುಕಿ ಉಳಿಸಲಿಕ್ಕೆ ಸಹಾಯಕವಾಗಿ ತಾನು ಉಪಯೋಗಿಸಬಹುದಾದ ಯಾವುದಾದರೂ ವಿಷಯವಿದೆಯೋ ಎಂದು ನೋಡಲು ಅವರು ಅತ್ಯುತ್ಸಾಹದಿಂದ ಅದನ್ನು ಪರಿಶೀಲಿಸಿದರು. ಅವರ ಕಣ್ಣು “ಇರಿತ್ರೋಪಾಯಟಿನ್” ಎಂಬ ಪದದ ಮೇಲೆ ಬಿತ್ತು, ಇದು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಂತೆ ದೇಹವನ್ನು ಪ್ರಚೋದಿಸುವ ಒಂದು ಔಷಧಿಯಾಗಿದೆ. ಅವರು ಈಗ ಅದನ್ನು ಕೊಟ್ಟರು. ಆದರೆ ಔಷಧಿಯು ಫಲಿತಾಂಶಗಳನ್ನು ಉತ್ಪಾದಿಸಲು ಸಮಯವನ್ನು ತೆಗೆದುಕೊಳ್ಳುತ್ತದೆ. ಆದುದರಿಂದ ಇರಿತ್ರೋಪಾಯಟಿನ್ ತಕ್ಕಸಮಯದಲ್ಲಿ ಕಾರ್ಯನಡಿಸುತ್ತದೋ ಎಂಬುದು ಪ್ರಶ್ನೆಯಾಗಿತ್ತು.
ಮರುದಿನ ನನ್ನ ಹೀಮೊಗ್ಲೋಬಿನ್ ಮಟ್ಟವು 2.9ಕ್ಕೆ ಇಳಿದಿತ್ತು. ನನಗೆ ಎಚ್ಚರವಾಗಿ, ನನ್ನ ಕುಟುಂಬದವರೆಲ್ಲರನ್ನು ಹಾಸಿಗೆ ಮಗ್ಗುಲಲ್ಲಿ ಕಂಡುಕೊಂಡಾಗ, ಏನು ಸಂಭವಿಸಿತ್ತು ಎಂದು ನಾನು ವಿಸ್ಮಯಗೊಂಡೆ. ಶ್ವಾಸಶೋಧಕದ ಕಾರಣ ನನಗೆ ಮಾತಾಡುವುದು ಅಸಾಧ್ಯವಾಗಿತ್ತು. ಬಹುಮಟ್ಟಿಗೆ ದುಃಖದಿಂದ ಗರ್ಭೋನ್ಮಾದ ಪೀಡಿತಳಾದಂತೆ ನನಗನಿಸಿತು, ಆದರೆ ನನಗೆ ಅಳುವುದಕ್ಕೆ ಕೂಡ ಆಗಲಿಲ್ಲ. ಬದುಕಿ ಉಳಿಯುವ ಸಲುವಾಗಿ ನಾನು ನನ್ನ ಶಕ್ತಿಯನ್ನು ಕಾಪಾಡಿಕೊಳ್ಳಲೇಬೇಕೆಂದು ಪ್ರತಿಯೊಬ್ಬರೂ ನನಗೆ ಹೇಳಿದರು.
ನನ್ನ ಹೊಟ್ಟೆಯಲ್ಲಿ ಬಿಡಲ್ಪಟ್ಟ ಒತ್ತುಕಟ್ಟಿನಿಂದ ಉಂಟಾದ ಉರಿಯೂತದ ಕಾರಣವಾಗಿ ಮರುದಿನ ನನಗೆ ಜ್ವರ ಬಂತು. ನನ್ನ ಹೀಮೊಗ್ಲೋಬಿನ್ 2.7ಕ್ಕೆ ಕುಸಿದಿತ್ತು. ಆ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿಗೆ ಅರಿವಳಿಕೆ ಕೊಡುವುದು ಬಹಳ ಅಪಾಯಕರವಾಗಿದೆಯಾದರೂ, ಗಂಡಾಂತರದ ಹೊರತೂ, ಒತ್ತುಕಟ್ಟನ್ನು ತೆಗೆದುಹಾಕಲು ಪುನಃ ಶಸ್ತ್ರಚಿಕಿತ್ಸೆಯನ್ನು ಮಾಡಲು ತಾವು ಒತ್ತಾಯಿಸಲ್ಪಟ್ಟೆವೆಂದು ಡಾ. ಲಾರ್ಸನ್ ವಿವರಿಸಿದರು.
ಶಸ್ತ್ರಚಿಕಿತ್ಸೆಯ ಮುನ್ನ ಮಕ್ಕಳು ಒಳಬಂದು ನನ್ನನ್ನು ನೋಡಲು ಅನುಮತಿಸಲ್ಪಟ್ಟರು. ಅದು ಒಂದು ಬೀಳ್ಕೊಳ್ಳುವಿಕೆಯಾಗಿತ್ತೆಂದು ಪ್ರತಿಯೊಬ್ಬರು ನೆನಸಿದರು. ವೈದ್ಯಕೀಯ ಸಿಬ್ಬಂದಿ ವರ್ಗದ ಹಲವಾರು ಸದಸ್ಯರು ಅಳುತ್ತಿದ್ದರು. ನಾನು ಬದುಕಿ ಉಳಿಯುತ್ತೇನೆಂದು ಅವರು ನಂಬಲಿಲ್ಲ. ನಮ್ಮ ಮಕ್ಕಳು ಬಹಳ ಧೈರ್ಯವಂತರಾಗಿದ್ದರು, ಮತ್ತು ಇದು ನನ್ನನ್ನು ಪ್ರಶಾಂತಗೊಳಿಸಿ, ಗಾಢ ಭರವಸೆಯುಳ್ಳವಳಾಗಿರುವಂತೆ ಮಾಡಿತು.
ನೀಡಲ್ಪಟ್ಟ ಅರಿವಳಿಕೆ ಕನಿಷ್ಠವಾಗಿದ್ದ ಕಾರಣ, ಕೆಲವೊಮ್ಮೆ ಸಿಬ್ಬಂದಿ ವರ್ಗದವರು ಒಬ್ಬರು ಇನ್ನೊಬ್ಬರೊಂದಿಗೆ ಏನನ್ನು ಹೇಳುತ್ತಿದ್ದರೋ ಅದನ್ನು ನಾನು ಕೇಳಿಸಿಕೊಳ್ಳಸಾಧ್ಯವಿತ್ತು. ನಾನು ಈಗಾಗಲೇ ಸತ್ತುಹೋಗಿದ್ದೇನೋ ಎಂಬಂತೆ ಕೆಲವರು ನನ್ನ ಕುರಿತು ಮಾತಾಡುತ್ತಿದ್ದರು. ಅನಂತರ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಾನೇನು ಕೇಳಿಸಿಕೊಂಡಿದ್ದೆನೋ ಅದನ್ನು ನಾನು ವಿವರಿಸಿದಾಗ, ಒಬ್ಬ ನರ್ಸ್ ತಪ್ಪಾಯಿತು, ಕ್ಷಮಿಸಿ ಎಂದು ಹೇಳಿದಳು. ಆದರೆ ನಾನು ಸಾಯಲಿದ್ದೆನೆಂದು ಅವಳಿಗೆ ಖಾತ್ರಿಯಿತ್ತೆಂದೂ ಈಗಲೂ ನಾನು ಹೇಗೆ ಪಾರಾದೆನೆಂದು ತಿಳಿಯಲಿಲ್ಲವೆಂದೂ ಅವಳು ಹೇಳಿದಳು.
ಮುಂದಿನ ದಿನ ನನಗೆ ಸ್ವಲ್ಪ ಆರಾಮವಾದಂತೆ ಅನಿಸಿತು. ನನ್ನ ಹೀಮೊಗ್ಲೋಬಿನ್ 2.9 ಆಗಿತ್ತು, ಮತ್ತು ನನ್ನ ಹೀಮ್ಯಾಟಿಕ್ರಿಟ್ 9. ನನ್ನ ಕುಟುಂಬಕ್ಕಾಗಿ ಆಹಾರ ಮತ್ತು ಕಾಫಿಯನ್ನು ತರುತ್ತಾ, ನನ್ನ ಕ್ರೈಸ್ತ ಸಹೋದರ ಸಹೋದರಿಯರು ಭೇಟಿಯನ್ನಿತ್ತರು. ಅವರ ಪ್ರೀತಿ ಮತ್ತು ವಾತ್ಸಲ್ಯಕ್ಕಾಗಿ ನಾವು ಕೃತಜ್ಞರಾಗಿದ್ದೆವು. ಸಾಯಂಕಾಲದೊಳಗೆ ನನ್ನ ಸ್ಥಿತಿ ಇನ್ನೂ ವಿಷಮಾವಸ್ಥೆಯಲ್ಲಿತ್ತು ಆದರೆ ತಟಸ್ಥವಾಗಿತ್ತು, ಮತ್ತು ನಾನು ಮತ್ತೊಂದು ವಾರ್ಡ್ಗೆ ಸ್ಥಳಾಂತರಿಸಲ್ಪಟ್ಟೆ.
ವೈದ್ಯರು ಕಲಿಯುತ್ತಾರೆ
ನನ್ನ ಕುರಿತಾಗಿ ವೈದ್ಯಕೀಯ ಸಿಬ್ಬಂದಿ ವರ್ಗದ ಅನೇಕ ಸದಸ್ಯರು ಕುತೂಹಲಗೊಂಡಿದ್ದರು, ಮತ್ತು ಅವರಲ್ಲಿ ಅಧಿಕಾಂಶ ಮಂದಿ ಬಹಳ ದಯಾಪರರಾಗಿದ್ದರು. ಒಬ್ಬ ನರ್ಸ್ ಹೇಳಿದ್ದು: “ನಿಮ್ಮ ದೇವರು ನಿಮ್ಮನ್ನು ಕಾಪಾಡಿದ್ದಿರಬೇಕು.” ಮತ್ತೊಂದು ವಾರ್ಡ್ನಿಂದ ಒಬ್ಬ ವೈದ್ಯರು ಬಂದು ಹೇಳಿಕೆಯನ್ನಿತ್ತದ್ದು: “ಅಷ್ಟೊಂದು ಕಡಿಮೆ ಹೀಮೊಗ್ಲೋಬಿನ್ ಮಟ್ಟವನ್ನು ಹೊಂದಿರುವ ವ್ಯಕ್ತಿಯೊಬ್ಬನು ಹೇಗೆ ಕಾಣುತ್ತಾನೆಂದು ನೋಡಲಷ್ಟೆ ನಾನು ಬಯಸುತ್ತೇನೆ. ನೀವು ಹೇಗೆ ಇಷ್ಟೊಂದು ಎಚ್ಚರದ ಸ್ಥಿತಿಯಲ್ಲಿರಸಾಧ್ಯವಿದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಲಾರೆ.”
ಮರುದಿನ, ಅದು ಅವರ ರಜೆಯ ದಿನವಾಗಿದ್ದರೂ, ನನ್ನ ವೈದ್ಯರು ನನ್ನನ್ನು ನೋಡಲು ಬಂದರು. ಏನು ಸಂಭವಿಸಿತೋ ಅದರ ಕಾರಣದಿಂದ ನಮ್ರತೆಯ ಅನಿಸಿಕೆ ತನಗಾಯಿತೆಂದು ಅವರು ಹೇಳಿದರು. ನಾನು ಸಂಪೂರ್ಣವಾಗಿ ಗುಣಹೊಂದುವಲ್ಲಿ, ಅವರು ರೋಗಿಗಳ ಚಿಕಿತ್ಸೆ ನೀಡುವುದರಲ್ಲಿ ರಕ್ತಪೂರಣ ಔಷಧೋಪಚಾರಕ್ಕೆ ಬದಲಿಗಳಾಗಿ ಹೊಸ ಸಂಶೋಧನೆಯನ್ನು ಆರಂಭಿಸಲಿರುವರೆಂದು ಅವರು ಹೇಳಿದರು.
ನನ್ನ ಗುಣಹೊಂದುವಿಕೆಯು ಕೌತುಕದ್ದಾಗಿತ್ತು. ನನ್ನ ದುರಂತಮಯ ಪ್ರಸವದ ಎರಡೂವರೆ ವಾರಗಳ ಅನಂತರ ನನ್ನ ಹೀಮೊಗ್ಲೋಬಿನ್ ಮಟ್ಟವು 8ಕ್ಕಿಂತ ಸ್ವಲ್ಪ ಹೆಚ್ಚು ಏರಿತ್ತು. ಆದುದರಿಂದ ನಾನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲ್ಪಟ್ಟೆ. ಮೂರು ದಿನಗಳ ಬಳಿಕ ನಮಗೆ ನಮ್ಮ ಯೆಹೋವನ ಸಾಕ್ಷಿಗಳ ವಾರ್ಷಿಕ ಸರ್ಕಿಟ್ ಸಮ್ಮೇಳನವಿತ್ತು, ಮತ್ತು ನಾನು ಅಲ್ಲಿದ್ದೆ. ನಮ್ಮ ವಿಷಮ ಪರೀಕ್ಷೆಯ ಅವಧಿಯಲ್ಲಿ ಅಷ್ಟೊಂದು ಆಸರೆಯನ್ನು ನೀಡಿದ್ದ ನಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು ಪುನಃ ನೋಡುವುದು ಎಷ್ಟೊಂದು ಉತ್ತೇಜನದಾಯಕವಾಗಿತ್ತು!—ಜ್ಞಾನೋಕ್ತಿ 17:17.
ಡಾ. ಲಾರ್ಸನ್ ವಚನವಿತ್ತಂತೆ, ನನ್ನ ಕೇಸ್ನ ಕುರಿತಾದ ಒಂದು ವರದಿಯು “ರಕ್ತಪೂರಣವನ್ನು ಇರಿತ್ರೋಪಾಯಟಿನ್ ಸ್ಥಾನಪಲ್ಲಟಗೊಳಿಸುತ್ತದೆ,” ಎಂಬುದಾಗಿ ಕರೆಯಲ್ಪಟ್ಟು, ಸ್ವೀಡಿಷ್ ವೈದ್ಯಕೀಯ ಪತ್ರಿಕೆಯಾದ ಲ್ಯಾಕಾರ್ಟಿನಿಂಗನ್ನಲ್ಲಿ ಅನಂತರ ಪ್ರಕಟಿಸಲ್ಪಟ್ಟಿತು. ಅದು ಹೇಳಿದ್ದು: “ಉಲ್ಬಣಗೊಂಡ ಅಧಿಕ ಪ್ರಮಾಣ ಪ್ರಸವ ಸಮಯದ ರಕ್ತಸ್ರಾವವನ್ನು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದ, 35 ವರ್ಷ ಪ್ರಾಯದ ಸ್ತ್ರೀಯೊಬ್ಬಳು ಅನುಭವಿಸಿದಳು. ಅವಳು ರಕ್ತಪೂರಣವನ್ನು ನಿರಾಕರಿಸಿದಳು, ಆದರೆ ಇರಿತ್ರೋಪಾಯಟಿನ್ ಔಷಧೋಪಚಾರವನ್ನು ಅಂಗೀಕರಿಸಿದಳು. ಇರಿತ್ರೋಪಾಯಟಿನ್ನ ಅಧಿಕ ಪ್ರಮಾಣಗಳೊಂದಿಗೆ ಶಸ್ತ್ರಚಿಕಿತ್ಸೆಯ ಅನಂತರ ಮಾಡಿದ ಒಂಬತ್ತು ದಿನಗಳ ಚಿಕಿತ್ಸೆಯ ಬಳಿಕ, ಯಾವುದೇ ಅಡ್ಡಪರಿಣಾಮಗಳಿಲ್ಲದೇ ಹೀಮೊಗ್ಲೋಬಿನ್ 2.9ರಿಂದ 8.2 ಗ್ರ್ಯಾಮ್ಗಳಷ್ಟಕ್ಕೆ ಏರಿತು.”
ಆ ಲೇಖನವು ಸಮಾಪ್ತಿಗೊಳಿಸಿದ್ದು: “ಆರಂಭದಲ್ಲಿ ರೋಗಿಯು ಬಹಳ ನಿರ್ಬಲಳಾಗಿದ್ದಳು, ಆದರೆ ಆಶ್ಚರ್ಯಕರ ವೇಗದಲ್ಲಿ ಅವಳು ಗುಣಹೊಂದಿದಳು. ಅಷ್ಟು ಮಾತ್ರವಲ್ಲದೆ, ಶಸ್ತ್ರಚಿಕಿತ್ಸೆಯ ಅನಂತರದ ಅನುಕ್ರಮವು ಸಂಪೂರ್ಣವಾಗಿ ಜಟಿಲತೆಗಳಿಲ್ಲದ್ದಾಗಿತ್ತು. ಎರಡು ವಾರಗಳ ಅನಂತರ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ಸಾಧ್ಯವಾಯಿತು.”
ಈ ಅನುಭವವು ನಮಗೆ ಒಂದು ಅಪ್ರಿಯವಾದ ವಿಷಮ ಪೆಟ್ಟಾಗಿದ್ದರೂ ಕೂಡ, ಫಲಸ್ವರೂಪವಾಗಿ ರಕ್ತಪೂರಣಕ್ಕೆ ಬದಲಿಗಳಾಗಿ ಉಪಯೋಗಿಸುವ ವಿಷಯದಲ್ಲಿ ಕೆಲವು ವೈದ್ಯರು ಹೆಚ್ಚನ್ನು ಕಲಿತಿರಬಹುದಾದ್ದರಿಂದ ನಾವು ಸಂತೋಷಿತರಾಗಿದ್ದೇವೆ. ಆಶಾಪೂರ್ವಕವಾಗಿ, ಯಶಸ್ವಿಕರವಾಗಿ ಪರಿಣಮಿಸಿರುವ ಚಿಕಿತ್ಸೆಯ ವಿಧಾನಗಳನ್ನು ಕಾರ್ಯರೂಪಕ್ಕೆ ಹಾಕಲು ಅವರು ಸಿದ್ಧರಾಗಿರುವರು.—ಆನ್ ಯಿಪ್ಸ್ಯೋಟಿಸ್ರವರಿಂದ ಹೇಳಲ್ಪಟ್ಟಂತೆ.
[ಪುಟ 35 ರಲ್ಲಿರುವ ಚಿತ್ರ]
ನನ್ನ ಸಹಾಯಮನಸ್ಸಿನ ಸರ್ಜನ್ರೊಂದಿಗೆ