ಆಫ್ರಿಕದಲ್ಲಿ ಏಯ್ಡ್ಸ್ ಎಷ್ಟರ ಮಟ್ಟಿಗೆ ಕ್ರೈಸ್ತಪ್ರಪಂಚವು ಹೊಣೆಯಾಗಿದೆ?
ಆಫ್ರಿಕದ ಎಚ್ಚರ! ಸುದ್ದಿಗಾರರಿಂದ
ಈ ಲೇಖನದಲ್ಲಿ ಉಪಯೋಗಿಸಲ್ಪಟ್ಟಿರುವಂತೆ, “ಕ್ರೈಸ್ತಪ್ರಪಂಚ” ಎಂಬ ಶಬ್ದವು, ಬೈಬಲಿನ ಕ್ರೈಸ್ತತ್ವದೊಂದಿಗೆ ವ್ಯತಿರಿಕ್ತವಾಗಿರುವ ಕ್ರೈಸ್ತತ್ವವೆಂದು ಹೇಳಿಕೊಳ್ಳುವಂತಹದಕ್ಕೆ ಸೂಚಿಸುತ್ತದೆ.
ಕ್ರೈಸ್ತಪ್ರಪಂಚ
“ಎಲ್ಲಿ ಅಧಿಕಾಂಶ ನಿವಾಸಿಗಳು ಕ್ರೈಸ್ತ ನಂಬಿಕೆಯವರೆಂದು ಹೇಳಿಕೊಳ್ಳುತ್ತಾರೋ, ಲೋಕದ ಆ ಭಾಗಗಳು.”—ವೆಬ್ಸ್ಟರ್ಸ್ ನ್ಯೂ ವರ್ಲ್ಡ್ ಡಿಕ್ಷನರಿ.
ಏಯ್ಡ್ಸ್
“ಒಂದು ಪ್ರತಿವೈರಸ್ (ರೋಗಾಣು)ನಿಂದ ಸೋಂಕು ರಕ್ಷಾ ವ್ಯವಸ್ಥೆಯ ಜೀವಕೋಶಗಳ ಸೋಂಕಿನೊಂದಿಗೆ ಸಂಬಂಧಿಸಿದ, ಅರ್ಜಿತ ಸೋಂಕು ರಕ್ಷಾ ಶಾಸ್ತ್ರದ ನ್ಯೂನತೆಯ ಒಂದು ಸ್ಥಿತಿ.”—ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಯೆಟ್ ಡಿಕ್ಷನರಿ.
ಏಯ್ಡ್ಸ್ ಒಂದು ಭೌಗೋಲಿಕವಾದ ಸಾಂಕ್ರಾಮಿಕ ರೋಗವಾಗಿದೆ. ಏಯ್ಡ್ಸ್ ರೋಗವನ್ನು ಉಂಟುಮಾಡುವ ರೋಗಾಣುವಾದ ಏಚ್ಐವಿಯಿಂದ, ಈಗಾಗಲೇ ಅಂದಾಜುಮಾಡಲ್ಪಟ್ಟ 1.7 ಕೋಟಿ ಜನರು ಸೋಂಕಿತ ರಾಗಿದ್ದಾರೆ. ಮತ್ತು ಅದು ತೀವ್ರಗತಿಯಲ್ಲಿ ಹರಡುತ್ತಿದೆ.
ಈ ಸಾಂಕ್ರಾಮಿಕ ರೋಗದೊಂದಿಗೆ ಸಂಬಂಧಿಸಿದ, ವೈದ್ಯಕೀಯ, ರಾಜಕೀಯ, ಮತ್ತು ಭಾವನಾತ್ಮಕ ವಿವಾದಾಂಶಗಳಿಗೆ ಹೆಚ್ಚಿನ ಗಮನವು ಕೊಡಲ್ಪಟ್ಟಿರುವುದಾದರೂ, ಒಳಗೊಂಡಿರುವ ಧಾರ್ಮಿಕ ವಿವಾದಾಂಶಗಳ ಕುರಿತು ಯಾವುದೇ ವಿಚಾರವು ಹೇಳಲ್ಪಟ್ಟಿಲ್ಲ. ಈಗ ಏಯ್ಡ್ಸ್ ರೋಗದ ಹರಡುವಿಕೆಯೊಂದಿಗೆ ಧರ್ಮವು ಸಂಬಂಧವನ್ನು ಹೊಂದಿರುವಂತಹ ಕಲ್ಪನೆಯು, ಕೆಲವು ಓದುಗರಿಗೆ ಬಹಳ ಅಸುಗಮವಾಗಿ ತೋರಬಹುದು. ಆದರೆ ಆಫ್ರಿಕ ಖಂಡದಲ್ಲಿ ವಿಕಸಿಸಿರುವ ಪರಿಸ್ಥಿತಿಯನ್ನು ನೀವು ಪರಿಗಣಿಸುವಾಗ, ಇದು ಅಸಂಗತವೇನಲ್ಲ.
ಏಯ್ಡ್ಸ್ ರೋಗವು, ನಿರ್ದಿಷ್ಟವಾಗಿ ಆಫ್ರಿಕವನ್ನು ಗಂಭೀರವಾಗಿ ಬಾಧಿಸಿದೆ.a ಲೋಕದ 67 ಪ್ರತಿಶತ ಏಯ್ಡ್ಸ್ ರೋಗಿಗಳಿಗೆ ಈ ಖಂಡವು ಮನೆಯಾಗಿದೆ ಎಂದು ಕೆಲವರು ಹೇಳುತ್ತಾರೆ. ಚಾಡ್ನಲ್ಲಿ ಕಳೆದ ಐದು ವರ್ಷಗಳಲ್ಲಿ ವರದಿಮಾಡಲ್ಪಟ್ಟ ರೋಗಿಗಳ ಸಂಖ್ಯೆಯು, 100 ಪಟ್ಟು ಹೆಚ್ಚಾಗಿದೆ. ಆದರೂ, ಎಲ್ಲಾ ರೋಗಿಗಳಲ್ಲಿ ಮೂರನೇ ಒಂದು ಭಾಗದಷ್ಟು ಮಾತ್ರವೇ ವರದಿಮಾಡಲ್ಪಟ್ಟಿವೆಯೆಂದು ಅಂದಾಜುಮಾಡಲ್ಪಟ್ಟಿದೆ. ವಿಶ್ವ ಬ್ಯಾಂಕ್ನಿಂದ ಕೊಡಲ್ಪಟ್ಟ ವರದಿಯೊಂದಕ್ಕನುಸಾರ, ಅನೇಕ ಪೌರ ಆಫ್ರಿಕನ್ ನಗರಗಳಲ್ಲಿನ ವಯಸ್ಕರ ನಡುವಿನ ಮರಣದ ಅತ್ಯಂತ ಸಾಮಾನ್ಯ ಕಾರಣವು ಏಯ್ಡ್ಸ್ ರೋಗವಾಗಿ ಪರಿಣಮಿಸಿದೆ.
ಧರ್ಮ—ಇದು ಒಂದು ಪಾತ್ರವನ್ನು ವಹಿಸಿತೊ?
ನಿಶ್ಚಯವಾಗಿಯೂ, ಯೇಸು ಕ್ರಿಸ್ತನಿಂದ ಕಲಿಸಲ್ಪಟ್ಟ ಧರ್ಮವಾದ ಕ್ರೈಸ್ತತ್ವವು, ಈ ದುರ್ಘಟನೆಗಾಗಿ ಜವಾಬ್ದಾರವಾಗಿರಸಾಧ್ಯವಿಲ್ಲ. ಹಾಗಿದ್ದರೂ, ಕೆಳಗೆ ತೋರಿಸಲ್ಪಟ್ಟಂತೆ, “ಕ್ರೈಸ್ತಪ್ರಪಂಚ” ಎಂಬ ಪದವು, ಎಲ್ಲಿ ಜನರು ಕ್ರೈಸ್ತರೆಂದು ಪ್ರತಿಪಾದಿಸುತ್ತಾರೋ ಆ ದೇಶಗಳನ್ನು ಒಳಗೊಳ್ಳುತ್ತದೆ. ಮತ್ತು ಕ್ರೈಸ್ತಪ್ರಪಂಚವು ಸ್ಪಷ್ಟವಾಗಿಯೇ ದೋಷಾರೋಪಣೆಮಾಡಲ್ಪಟ್ಟಿದೆ. ಚರ್ಚುಗಳು ಏಯ್ಡ್ಸ್ ರೋಗದ ರೋಗಾಣುವನ್ನು ಸೃಷ್ಟಿಸಿದವು ಅಥವಾ ಅದನ್ನು ನೇರವಾಗಿ ಹರಡಿಸಿದವೆಂದಲ್ಲ. ಆದರೆ ಏಯ್ಡ್ಸ್ ರೋಗವು ಪ್ರಾಮುಖ್ಯವಾಗಿ ಭಿನ್ನಲಿಂಗೀಕಾಮದ ಸ್ವೇಚ್ಛಾ ಕ್ರಿಯೆಯಿಂದಾಗಿ ಆಫ್ರಿಕದಲ್ಲಿ ಹಬ್ಬಿದೆ.b ಆದುದರಿಂದ, ಏಯ್ಡ್ಸ್ ರೋಗವನ್ನು ಒಂದು ನೈತಿಕ ಸಮಸ್ಯೆಯೆಂದು ಕರೆಯಸಾಧ್ಯವಿದೆ ಮತ್ತು, ಹೀಗಿರುವುದರಿಂದ ಇದು ಕೆಲವು ತೊಂದರೆದಾಯಕವಾದ ಧಾರ್ಮಿಕ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಎಷ್ಟೆಂದರೂ ಆಫ್ರಿಕದ “ಕ್ರೈಸ್ತತ್ವ”ವು, ಪಾಶ್ಚಿಮಾತ್ಯ ದೇಶಗಳ ನೇರವಾದ ಸ್ಥಳಾಂತರಿಸುವಿಕೆಯಾಗಿತ್ತು. ತಮ್ಮ ಒಂದು ನಿರ್ದಿಷ್ಟ ರೀತಿಯ ಧರ್ಮವು, ಸಾಂಪ್ರದಾಯಿಕ ಆಫ್ರಿಕನ್ ಮಾರ್ಗಗಳಿಗಿಂತ ಉತ್ಕೃಷ್ಟವಾದ ಜೀವನ ಮಾರ್ಗವೊಂದನ್ನು ಒದಗಿಸುತ್ತದೆಂಬುದಾಗಿ ಪ್ರತಿಪಾದಿಸುತ್ತಾ, ಆಫ್ರಿಕದ ಜನರನ್ನು ತಮ್ಮ ಧರ್ಮಕ್ಕೆ ಮತಾಂತರಿಸುವ ಕೆಲಸವನ್ನು ಚರ್ಚಿನ ಮುಖಂಡರು ಕೈಕೊಂಡರು. ಕ್ರೈಸ್ತಪ್ರಪಂಚದ ಪ್ರಭಾವವು, ತನ್ನ ಹೊಸ ಅನುಯಾಯಿಗಳ ನೈತಿಕತೆಯನ್ನು ನಿಜವಾಗಿಯೂ ಉತ್ತಮಗೊಳಿಸಿತೊ? ನಿಖರವಾಗಿ ಇದಕ್ಕೆ ವಿರುದ್ಧವಾದದ್ದು ಸಂಭವಿಸಿತೆಂಬುದಾಗಿ ಏಯ್ಡ್ಸ್ ರೋಗದ ವಿಪತ್ತು ಕಣ್ಣಿಗೆಕಟ್ಟುವಂತೆ ಪ್ರದರ್ಶಿಸುತ್ತದೆ.
ಉದಾಹರಣೆಗಾಗಿ, ಚಾಡ್ ರಾಷ್ಟ್ರವನ್ನು ಪರಿಗಣಿಸಿರಿ. ಅದರ ನಾಲ್ಕು ಪ್ರಮುಖ ನಗರಗಳಲ್ಲಿ ಮೂರು ನಗರಗಳು, ದೊಡ್ಡ “ಕ್ರೈಸ್ತ” ಜನಸಂಖ್ಯೆಯನ್ನು ಹೊಂದಿವೆ. ಇನ್ನೊಂದು ನಗರದಲ್ಲಿ ಮುಸ್ಲಿಮ್ ಧರ್ಮವೇ ಮೇಲುಗೈಯಾಗಿದೆ. ಆದರೂ, ಆ ಮೂರು “ಕ್ರೈಸ್ತ” ನಗರಗಳಲ್ಲಿಯೇ ರೋಗಾಣುವು ಈಗ ಪ್ರಬಲವಾಗುತ್ತಿದೆ! ಇದೇ ವಿಧಾನವು ಇಡೀ ಖಂಡದಾದ್ಯಂತ ಪುನರಾವರ್ತಿಸಲ್ಪಟ್ಟಿದೆ. ಅಧಿಕಾಂಶ ಮಂದಿ ಮುಸ್ಲಿಮರಿರುವ ಉತ್ತರ ಆಫ್ರಿಕಕ್ಕಿಂತಲೂ, ನಾಮಮಾತ್ರದ ಕ್ರೈಸ್ತರಾಗಿರುವ ಮಧ್ಯ ಮತ್ತು ದಕ್ಷಿಣ ಆಫ್ರಿಕದಲ್ಲಿ, ಸೋಂಕಿನ ಅತ್ಯಧಿಕ ಪ್ರಮಾಣವು ಇದೆ.
ಆಫ್ರಿಕವು “ಕ್ರೈಸ್ತ”ವಾಗಿ ಪರಿಣಮಿಸಿದ ವಿಧ
ಕ್ರಿಸ್ತನ ಹಿಂಬಾಲಕರಾಗಿದ್ದೇವೆಂದು ಪ್ರತಿಪಾದಿಸುವ ಜನರ ನಡುವೆ ಈ ರೋಗಾಣುವು ಇಷ್ಟೊಂದು ತೀವ್ರಗತಿಯಲ್ಲಿ ಏಕೆ ಹಬ್ಬಿದೆ? ವಾಸ್ತವಿಕತೆಯಲ್ಲಿ, ಆಫ್ರಿಕದ ಅನೇಕ ಜನರು ಸ್ವತಃ ತಮ್ಮನ್ನು ಕ್ರೈಸ್ತರೆಂದು ಕರೆದುಕೊಳ್ಳುವುದಾದರೂ, ಬೈಬಲಿನಲ್ಲಿ ಪ್ರಕಟಿಸಲ್ಪಟ್ಟಿರುವ ಕ್ರೈಸ್ತತ್ವದ ನೈತಿಕ ಮಟ್ಟಗಳಿಗನುಸಾರವಾಗಿ ನಿಜವಾಗಿಯೂ ಜೀವಿಸುವವರು, ಸಂಬಂಧಸೂಚಕವಾಗಿ ಕೆಲವೇ ಮಂದಿಯಾಗಿದ್ದಾರೆ. ಇದು ಕ್ರೈಸ್ತಪ್ರಪಂಚದ ಮಿಷನೆರಿಗಳು, ಆಫ್ರಿಕದ ಜನಸಂಖ್ಯೆಯ “ಮತಾಂತರಿಸುವಿಕೆ”ಯನ್ನು ನೆರವೇರಿಸಿದ ವಿಧದ ಒಂದು ನೇರ ಫಲಿತಾಂಶವಾಗಿರುವಂತೆ ತೋರುತ್ತದೆ.
18 ಮತ್ತು 19ನೆಯ ಶತಮಾನಗಳಲ್ಲಿ, ಕ್ರೈಸ್ತಪ್ರಪಂಚದ ಸಾಂಪ್ರದಾಯಿಕ ನಂಬಿಕೆಗಳು ಆಕ್ರಮಣಕ್ಕೆ ಒಳಗಾದವು. ಅನೇಕರ ದೃಷ್ಟಿಯಲ್ಲಿ ಬೈಬಲನ್ನು, ಪುರಾತನ ಸಾಹಿತ್ಯದ ಕೇವಲ ಒಂದು ಭಾಗದೋಪಾದಿ ಕೆಳದರ್ಜೆಗೆ ಇಳಿಸುತ್ತಾ, ಗ್ರಂಥವಿಮರ್ಶೆಯ ಭಾವನೆಯು ಜನಪ್ರಿಯವಾಯಿತು. ವೈದಿಕರ ನಡುವೆ ಸಹ, ವಿಕಾಸ ವಾದವು ಅಂಗೀಕಾರವನ್ನು ಪಡೆಯಲಾರಂಭಿಸಿತು. ಸಂದೇಹದ ಬೀಜಗಳು ಬಿತ್ತಲ್ಪಟ್ಟವು. ಪವಿತ್ರ ಶಾಸ್ತ್ರಗಳಲ್ಲಿನ ನಂಬಿಕೆಯು ಪ್ರಶ್ನೆಗೆ ಒಡ್ಡಲ್ಪಟ್ಟಿತು. ಈ ವಾತಾವರಣದಲ್ಲಿ, ಆಫ್ರಿಕದ ಜನರನ್ನು “ಮತಾಂತರಿಸು”ವ ಕ್ರೈಸ್ತಪ್ರಪಂಚದ ಪ್ರಯತ್ನಗಳು, ಐಹಿಕ ವಿಷಯಗಳ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಿದವೆಂಬುದು ಆಶ್ಚರ್ಯಕರವಾದುದೇನೂ ಆಗಿಲ್ಲ. ಮತಾಂತರ ಹೊಂದಿದವರಿಗೆ ಬೈಬಲಿನ ನೈತಿಕತೆಯ ಮಟ್ಟಗಳೊಂದಿಗೆ ಅನುವರ್ತಿಸುವಂತೆ ಸಹಾಯ ಮಾಡುವುದಕ್ಕೆ ಬದಲಾಗಿ, ಮಾನವ ಹಿತಸಾಧನೆಯ ಕೃತ್ಯಗಳನ್ನು ನಡೆಸುವುದರ ಮೇಲೆ ಇನ್ನೂ ಹೆಚ್ಚಿನ ಒತ್ತನ್ನು ಹಾಕುತ್ತಾ, ಚರ್ಚಿನ ಮಿಷನೆರಿಗಳು ಸಾಮಾಜಿಕ ಸುವಾರ್ತೆಯನ್ನು ಸಾರಿದರು. ಬಹುಶಃ ಉದ್ದೇಶಪೂರ್ವಕವಲ್ಲದೆ, ಮಿಷನೆರಿಗಳು ಅಸ್ತಿತ್ವದಲ್ಲಿರುವ ನೈತಿಕ ರಚನೆಯನ್ನು ಶಿಥಿಲಗೊಳಿಸಲು ವಾಸ್ತವವಾಗಿ ಸಹಾಯ ಮಾಡಿದರು.
ಉದಾಹರಣೆಗಾಗಿ, ದೀರ್ಘಸಮಯದಿಂದಲೂ ಆಫ್ರಿಕದ ಅನೇಕ ಸಂಸ್ಕೃತಿಗಳಲ್ಲಿ ಬಹುಪತ್ನೀತ್ವವು ರೂಢಿಯಲ್ಲಿತ್ತು. ಆದರೂ, ಅಧಿಕಾಂಶ ಕುಲಗಳಿಗೆ, ವ್ಯಭಿಚಾರಕ್ಕೆ ಸಂಬಂಧಿಸಿದಂತಹ ಗಂಭೀರವಾದ ನಿಯಮಗಳು ಕೊಡಲ್ಪಟ್ಟಿದ್ದುದರಿಂದ, ಲೈಂಗಿಕ ಸ್ವೇಚ್ಛಾಚಾರವು ವಿರಳವಾಗಿತ್ತು. ಚರ್ಚಿನ ಮಿಷನೆರಿಗಳ ಆಗಮನಕ್ಕೆ ಮೊದಲು, “ವ್ಯಭಿಚಾರವು ದುರಾದೃಷ್ಟವನ್ನು ತಂದಿತೆಂದು ಅಭಿಪ್ರಯಿಸಲಾಗಿತ್ತು” ಎಂದು, ಚಾಡ್ನಲ್ಲಿ ಪ್ರಸಿದ್ಧನಾಗಿರುವ, ನಿವೃತ್ತ ಶಾಲಾ ಉಪಾಧ್ಯಾಯನಾದ ಜೋಸೆಫ್ ಡಾರ್ನಾಸ್ ಎಚ್ಚರ!ಕ್ಕೆ ಹೇಳಿದನು. ಫಲಿತಾಂಶವಾಗಿ, “ಸಮುದಾಯವನ್ನು ಅಪಾಯಕ್ಕೊಡ್ಡಿದುದಕ್ಕಾಗಿ, ದೋಷಿಗಳು ಗಂಭೀರವಾಗಿ—ಅನೇಕವೇಳೆ ಅವರು ಮರಣಶಿಕ್ಷೆಯಿಂದಲೂ—ಶಿಕ್ಷಿಸಲ್ಪಟ್ಟರು.” ಮೂಢನಂಬಿಕೆಯೊ? ಹೌದು ಆದರೆ, ಅಂತಹ ನಂಬಿಕೆಗಳು ಸ್ವೇಚ್ಛಾಚಾರವನ್ನು ಮೊಟಕುಗೊಳಿಸಿದವು.
ತದನಂತರ ಕ್ರೈಸ್ತಪ್ರಪಂಚದ ಮಿಷನೆರಿಗಳು ಬಂದರು. ಅವರು ಬಹುಪತ್ನೀತ್ವದ ವಿರುದ್ಧವಾಗಿ ಸಾರಿದರಾದರೂ, ಬೈಬಲಿನ ನೈತಿಕತೆಯ ಮಟ್ಟಗಳನ್ನು ಜಾರಿಗೆ ತರಲು ಕಾರ್ಯನಡಿಸಲಿಲ್ಲ. ಪಶ್ಚಾತ್ತಾಪಪಡದ ಜಾರರು ಮತ್ತು ವ್ಯಭಿಚಾರಿಗಳು, ಕ್ರೈಸ್ತ ಸಭೆಯಿಂದ ಹೊರಹಾಕಲ್ಪಡಬೇಕೆಂದು ಬೈಬಲು ಹೇಳುವುದಾದರೂ, ಕ್ರೈಸ್ತಪ್ರಪಂಚದ ಚರ್ಚುಗಳು ತಪ್ಪಿತಸ್ಥರ ವಿರುದ್ಧವಾಗಿ ಶಿಸ್ತುಪಾಲನಾ ಕ್ರಮಗಳನ್ನು ತೆಗೆದುಕೊಳ್ಳುವುದೇ ಅಪರೂಪ. (1 ಕೊರಿಂಥ 5:11-13) ಇಂದಿನ ತನಕ, ಆಫ್ರಿಕದ ಅನೇಕ ಪ್ರಮುಖ ರಾಜಕಾರಣಿಗಳು ತಮ್ಮ ಅನೈತಿಕ ಕೃತ್ಯಗಳಿಗಾಗಿ ಕುಪ್ರಸಿದ್ಧರಾಗಿದ್ದಾರೆ, ಮತ್ತು ಹೀಗಿರುವುದಾದರೂ ಅವರು ಚರ್ಚ್ ಸದಸ್ಯರೋಪಾದಿ ಒಳ್ಳೆಯ ನಿಲುವಿನಲ್ಲಿ ಉಳಿಯುತ್ತಾರೆ. ಆಫ್ರಿಕದಲ್ಲಿನ ನಾಮಮಾತ್ರದ ಕ್ರೈಸ್ತರ ನಡುವೆ ವೈವಾಹಿಕ ನಿಷ್ಠೆಯು ವಿರಳವಾಗಿದೆ.
ತದನಂತರ, ಸ್ವತಃ ವೈದಿಕರಲ್ಲಿನ ಸದಸ್ಯರಿಂದ ಇಡಲ್ಪಟ್ಟ ನ್ಯೂನ ಮಾದರಿಯಿದೆ. ಈ ಕುಟುಂಬಾಭಿಮುಖವಾದ ಸಂಸ್ಕೃತಿಯಲ್ಲಿ, ವಿವಾಹಿತರಾಗಿರುವುದು ಹಾಗೂ ಅಸಂಖ್ಯಾತ ಮಕ್ಕಳನ್ನು ಪಡೆದಿರುವುದು ಸಾಮಾನ್ಯವಾಗಿದೆ. ಬಹುಶಃ ಈ ಕಾರಣದಿಂದಲೇ ಆಶ್ಚರ್ಯಗೊಳಿಸುವ ಸಂಖ್ಯೆಯ ಕ್ಯಾಥೊಲಿಕ್ ಪಾದ್ರಿಗಳು, ಅವ್ಯಭಿಚಾರತೆ ಮತ್ತು ಅವಿವಾಹಿತ ಸ್ಥಿತಿಯ ಕುರಿತಾದ ತಮ್ಮ ಪ್ರತಿಜ್ಞೆಗಳನ್ನು ಕಡೆಗಣಿಸುವುದರಲ್ಲಿ ಸಮರ್ಥಿಸಲ್ಪಟ್ಟ ಭಾವನೆ ತಾಳುತ್ತಾರೆ. ಮೇ 3, 1980ರ ದ ನ್ಯೂ ಯಾರ್ಕ್ ಟೈಮ್ಸ್ ವರದಿಸಿದ್ದು: “ವನ್ಯಪ್ರದೇಶದ ಅನೇಕ ಭಾಗಗಳಲ್ಲಿ, . . . ಪಾದ್ರಿಗಳು ಹಾಗೂ ಬಿಷಪರು ಬಹುಪತ್ನೀಕರಾಗಿದ್ದಾರೆ.”
ಸ್ವಾಭಾವಿಕವಾಗಿ, ಅಂತಹ ವಿವಾಹಗಳು ನ್ಯಾಯವಿಹಿತಗೊಳಿಸಲ್ಪಟ್ಟಿರುವುದಿಲ್ಲ, ಮತ್ತು ವಾಸ್ತವತೆಯಲ್ಲಿ “ಹೆಂಡತಿಯರು” ಕೇವಲ ಉಪಪತ್ನಿಯರಾಗಿದ್ದಾರೆ. ಅಂತಹ ತಪ್ಪುನಡತೆಯನ್ನು ನಿಕೃಷ್ಟವೆಂದು ಬದಿಗೊತ್ತಸಾಧ್ಯವಿಲ್ಲ. ಟೈಮ್ಸ್ಗನುಸಾರ, “ಒಬ್ಬ ಪ್ರಮುಖ ಕ್ಯಾಥೊಲಿಕ್ ವೈದಿಕನು” ಒಪ್ಪಿಕೊಳ್ಳುವುದೇನಂದರೆ “ಯೇಸು ಕ್ರಿಸ್ತನ ಸೇವಕನಾಗಿರುವುದಕ್ಕೆ ಬದಲಾಗಿ, ಆಫ್ರಿಕದ ಪಾದ್ರಿಯು ಅಧಿಕಾರದ ಸಂಕೇತ, ಶಕ್ತಿಯ ಪ್ರತಿರೂಪವಾಗಿದ್ದಾನೆ.” ಈ “ಅಧಿಕಾರಿ ಪ್ರತಿರೂಪ”ಗಳಿಂದ ಕೊಡಲ್ಪಡುವ ಸಂದೇಶವು, “ನಾನು ಹೇಳುವಂತೆ ಮಾಡಿರಿ, ಆದರೆ ನಾನು ಮಾಡುವಂತೆ ಅಲ್ಲ” ಎಂಬುದಾಗಿರುವಂತೆ ತೋರುತ್ತದೆ.
ಪಾಶ್ಚಾತ್ಯ ಮನೋರಂಜನೆಯ ಆಕ್ರಮಣ
ಇತ್ತೀಚೆಗಿನ ವರ್ಷಗಳಲ್ಲಿ ಆಫ್ರಿಕದೊಳಗೆ ಪ್ರವಹಿಸಿರುವ ಲೈಂಗಿಕ ಅನೈತಿಕ ಮನೋರಂಜನೆಯ ಪ್ರವಾಹವನ್ನೂ ಅಲಕ್ಷಿಸಬಾರದಾಗಿದೆ. ಚಾಡ್ನಲ್ಲಿ ಅಂತಹ ಮನೋರಂಜನೆಯನ್ನು ಒದಗಿಸುವ, ಮೇಲ್ವಿಚಾರಣೆರಹಿತವಾದ ಸಾರ್ವಜನಿಕ ವಿಡಿಯೋ ಪಾರ್ಲರ್ಗಳು, ಎಲ್ಲಾ ಕಡೆಗಳಲ್ಲಿ—ಖಾಸಗಿ ಮನೆಗಳಲ್ಲಿ, ಗ್ಯಾರೆಜ್ಗಳಲ್ಲಿ, ಮತ್ತು ಅನೇಕವೇಳೆ ಕತ್ತಲಾದ ಬಳಿಕ ಒಳಾಂಗಣಗಳಲ್ಲಿ—ಹುಟ್ಟಿಕೊಂಡಿವೆ. ಈ ಪ್ರದರ್ಶನಗಳು ಅಗ್ಗವಾಗಿವೆ; 25 ಫ್ರ್ಯಾಂಕ್ಗಳ (ಅಮೆರಿಕ, 5 ಸೆಂಟ್ಗಳು)ಷ್ಟು ಕಡಿಮೆ ವೆಚ್ಚದವುಗಳಾಗಿರುತ್ತವೆ. ಚಿಕ್ಕ ಮಕ್ಕಳು ಹಾಜರಾಗುತ್ತಾರೆ. ಈ ವಿಷಯವು ಎಲ್ಲಿಂದ ಉತ್ಪನ್ನವಾಗುತ್ತದೆ? ಅದರಲ್ಲಿ ಬಹುಭಾಗವು, ಅಧಿಕಾಂಶ ಕ್ರೈಸ್ತರೆಂದು ಪ್ರತಿಪಾದಿಸುತ್ತಿರುವ ಒಂದು ದೇಶವಾದ ಅಮೆರಿಕದಿಂದ ಉತ್ಪನ್ನವಾಗುತ್ತದೆ!
ಆದರೆ ಪಾಶ್ಚಾತ್ಯ ಸಂಸ್ಕೃತಿಯ ಈ ಆಕ್ರಮಣವು, ವೀಕ್ಷಕರ ಮೇಲೆ ಯಾವುದೇ ರೀತಿಯ ನೈಜ ಪರಿಣಾಮವನ್ನು ಬೀರಿದೆಯೊ? ಮಧ್ಯ ಆಫ್ರಿಕದಲ್ಲಿ ಕಳೆದ 14 ವರ್ಷಗಳ ಅನುಭವವಿರುವ, ಯೆಹೋವನ ಸಾಕ್ಷಿಗಳ ಒಬ್ಬ ಮಿಷನೆರಿಯು ಹೇಳುವುದು: “ಸ್ಥಳಿಕ ಜನರಿಗೆ, ಅನೇಕವೇಳೆ ಅವರು ವಿಡಿಯೋಕ್ಯಾಸೆಟ್ಗಳಲ್ಲಿ ನೋಡುವ ವಿಚಾರಗಳ ಹೊರತಾಗಿ, ಪಾಶ್ಚಾತ್ಯ ಜಗತ್ತಿನೊಂದಿಗೆ ತೀರ ಕಡಿಮೆ ಸಂಪರ್ಕವಿರುತ್ತದೆ. ಈ ಚಲನಚಿತ್ರಗಳಲ್ಲಿ ತಾವು ನೋಡುವ ಪಾಶ್ಚಾತ್ಯರಂತಿರಲು ಅವರು ಬಯಸುತ್ತಾರೆ. ಇದನ್ನು ರುಜುಪಡಿಸಲಿಕ್ಕಾಗಿರುವ ಯಾವುದೇ ವಾಸ್ತವಿಕ ಅಧ್ಯಯನಗಳನ್ನು ನಾನು ಕಂಡುಹಿಡಿದಿಲ್ಲವಾದರೂ, ಅಂತಹ ಮನೋರಂಜನೆಯು ಲೈಂಗಿಕ ಅನೈತಿಕತೆಯನ್ನು ಉತ್ತೇಜಿಸುತ್ತದೆ ಎಂದು ಇಲ್ಲಿನ ಅಧಿಕಾಂಶ ಜನರಿಗೆ ಸ್ಪಷ್ಟವಾಗಿರುವಂತೆ ತೋರುತ್ತದೆ.”
ಆರೋಗ್ಯಾಧಿಕಾರಿಗಳು, ಒಂದು ಮಾರಕವಾದ ರತಿ ರವಾನಿತ ರೋಗದ ಪ್ರಗತಿಯನ್ನು ನಿಲ್ಲಿಸಲಿಕ್ಕಾಗಿ ಹತಾಶೆಯಿಂದ ಪ್ರಯತ್ನಿಸುತ್ತಿರುವಾಗ, ಕ್ರೈಸ್ತ ರಾಷ್ಟ್ರಗಳೆಂದು ಕರೆಯಲ್ಪಟ್ಟಿರುವ ರಾಷ್ಟ್ರಗಳು, ಅನೈತಿಕವಾದ, ಅತ್ಯಂತ ಅಪಾಯಕರವಾದ ನಡವಳಿಕೆಯನ್ನು ಪ್ರವರ್ಧಿಸುವ ಪ್ರಚಾರಕಾರ್ಯವನ್ನು ಬಿಡುಗಡೆಗೊಳಿಸುವುದು ಎಷ್ಟು ಹಾಸ್ಯವ್ಯಂಗ್ಯವಾಗಿದೆ! ಸ್ವದೇಶದಲ್ಲಾಗಲಿ ವಿದೇಶದಲ್ಲಾಗಲಿ, ಈ ಪ್ರವಾಹವನ್ನು ಪ್ರತಿಬಂಧಿಸಲು ಚರ್ಚುಗಳು ಕಾರ್ಯನಡಿಸಿಲ್ಲವಾದರೂ, ಚಾಡ್ ಮತ್ತು ಕ್ಯಾಮರೂನ್ಗಳಂತಹ ಆಫ್ರಿಕದ ಕೆಲವು ಸರಕಾರಗಳು, ತಮ್ಮ ದೇಶಗಳೊಳಗೆ ಬರುವ ವಿಷಯಲಂಪಟ ವಿಷಯದ ಪ್ರವೇಶವನ್ನು ನಿಷೇಧಿಸಲಿಕ್ಕಾಗಿ ಅಥವಾ ಕಡಿಮೆಪಕ್ಷ ಪರಿಮಿತಗೊಳಿಸಲಿಕ್ಕಾಗಿ ಪ್ರಯತ್ನಿಸಿವೆ. ಆದರೆ ಅವರ ಪ್ರಯತ್ನಗಳು ಅನೇಕಾವರ್ತಿ ವಿಫಲಗೊಂಡವುಗಳಾಗಿ ರುಜುವಾಗಿವೆ.
ಈ ಎಲ್ಲಾ ವಿಷಯದ ಅಂತಿಮ ಫಲಿತಾಂಶವು, ಆಫ್ರಿಕದ “ಕ್ರೈಸ್ತರ” ನಡುವಿನ ವ್ಯಾಪಕವಾದ ನೈತಿಕ ಅವನತಿಯಾಗಿದೆ. ನ್ಯೂನ ಆರ್ಥಿಕ ಪರಿಸ್ಥಿತಿಗಳು ಸಹ ಅಗೋಚರವಾದ ಪರಿಣಾಮವನ್ನು ಹೊಂದಿದ್ದವು. ಉದ್ಯೋಗಗಳು ವಿರಳವಾಗಿರುವ ಕಾರಣದಿಂದ, ಕೆಲಸವನ್ನು ಕಂಡುಕೊಳ್ಳಲಿಕ್ಕಾಗಿ ಪುರುಷರು ಅನೇಕವೇಳೆ ಅನೇಕ ತಿಂಗಳುಗಳ ವರೆಗೆ ತಮ್ಮ ಕುಟುಂಬಗಳನ್ನು ಬಿಡುವಂತೆ ಒತ್ತಾಯಿಸಲ್ಪಡುತ್ತಾರೆ. ಅಂತಹ ಪುರುಷರು ಸ್ಥಳಿಕ ಸೂಳೆಯರಿಗೆ ಸ್ಪಷ್ಟವಾದ ಗುರಿಹಲಗೆಗಳಾಗಿದ್ದಾರೆ. ಈ ಸೂಳೆಯರಾದರೋ ಸಾಮಾನ್ಯವಾಗಿ ಸ್ವತಃ ಬಡತನದ ಬಲಿಪಶುಗಳಾಗಿದ್ದಾರೆ. ಮಿತಿಮೀರಿದ ಕನ್ಯಾಶುಲ್ಕವನ್ನು ತಗಾದೆಪಡಿಸುವ ಹೆತ್ತವರು ಸಹ ಒಂದು ಅಂಶವಾಗಿದ್ದಾರೆ. ತಾವು ಕನ್ಯಾಶುಲ್ಕವನ್ನು ಕೊಡಲು ಆವಶ್ಯಕವಾದ ಹಣವನ್ನು ಹೊಂದಿಸಿಕೊಳ್ಳಲು ಅಸಾಧ್ಯವಾದ ಕಾರಣದಿಂದ, ಅನೇಕ ಪುರುಷರು ವಿವಾಹವಾಗುವುದಿಲ್ಲ. ಆದುದರಿಂದ ಕೆಲವರು ಅನೇಕ ಕಾನೂನುಬಾಹಿರ ಸಂಬಂಧಗಳನ್ನು ಹೊಂದಿರುವ ಜೀವನವನ್ನು ಸಾಗಿಸುವ ಹಂತವನ್ನು ತಲಪಿರುತ್ತಾರೆ. ಇಂತಹ ಒಂದು ನೈತಿಕ ಹಾಗೂ ಆರ್ಥಿಕ ವಾತಾವರಣದಲ್ಲಿ, ಏಯ್ಡ್ಸ್ ರೋಗವು ತೀವ್ರಗತಿಯಲ್ಲಿ ಹಬ್ಬಿದೆ.
ಈ ವಿಪತ್ತಿಗೆ ಪರಿಹಾರ
ಆಫ್ರಿಕದಲ್ಲಿನ ಏಯ್ಡ್ಸ್ ವಿಪತ್ತಿಗಾಗಿ, ಕ್ರೈಸ್ತಪ್ರಪಂಚವು ಎಲ್ಲಾ ದೋಷವನ್ನು ಹೊರುವುದಿಲ್ಲವೆಂಬುದು ಸ್ಪಷ್ಟ. ಆದರೆ ಇದು ಅದರಲ್ಲಿನ ಬಹುಭಾಗ ದೋಷವನ್ನು ಹೊರುತ್ತದೆಂಬುದು ವೇದನಾಭರಿತವಾಗಿ ಸ್ಪಷ್ಟವಾಗಿದೆ. ಯೇಸು ಯಾರನ್ನು “ಸತ್ಯ ಆರಾಧಕರು” ಎಂಬುದಾಗಿ ಕರೆದನೋ ಆ ಜನರ ನಡುವೆ ಇರಲಿಕ್ಕಾಗಿ ಬಯಸುವ ವ್ಯಕ್ತಿಗಳನ್ನು, ಇದು ಗಂಭೀರವಾದ ತೊಡಕಿನಲ್ಲಿ ಸಿಕ್ಕಿಸುತ್ತದೆ.—ಯೋಹಾನ 4:23, NW.
ದೋಷಾರೋಪವನ್ನು ತಡೆಯಲಸಾಧ್ಯವಾಗುವಂತೆ, ಏಯ್ಡ್ಸ್ ಸಾಂಕ್ರಾಮಿಕ ರೋಗವನ್ನು ನಿಲ್ಲಿಸಲಿಕ್ಕಾಗಿ ಏನು ಮಾಡಸಾಧ್ಯವಿದೆ? ಆಫ್ರಿಕದ ಸರಕಾರಗಳು ಶಿಶ್ನಕವಚಗಳ ಉಪಯೋಗವನ್ನು ಪ್ರವರ್ಧಿಸುವ ಮೂಲಕ, ಏಯ್ಡ್ಸ್ ಅನ್ನು ತಡೆಗಟ್ಟುವ ಕಾರ್ಯಾಚರಣೆಗಳನ್ನು ಕೈಕೊಂಡಿವೆ. ಆದರೆ ನೈಜೀರಿಯಕ್ಕಾಗಿರುವ ಲೋಕಾರೋಗ್ಯ ಸಂಸ್ಥೆಯ ಪ್ರತಿನಿಧಿಯಾದ ಡಾ. ಸ್ಯಾಮ್ವೆಲ್ ಬ್ರೂ-ಗ್ರಾವ್ಸ್, ಮುಚ್ಚುಮರೆಯಿಲ್ಲದ ಈ ಒಪ್ಪಿಗೆಯನ್ನು ತಿಳಿಸಿದರು: “ವ್ಯಕ್ತಿಯೊಬ್ಬನು ಸ್ವಸ್ಥಕರವಾದ ಜೀವನಶೈಲಿಯನ್ನು ಅಂಗೀಕರಿಸಬೇಕು . . . , ಕುಟುಂಬವೂ . . . ಲೈಂಗಿಕ ಸ್ವೇಚ್ಛಾಚಾರವನ್ನು ತೊರೆಯಬೇಕು.”
ಏಯ್ಡ್ಸ್ ರೋಗದ ಕುರಿತಾಗಿ ಜನರು ತಿಳಿಯುವ ಬಹಳ ಸಮಯದ ಹಿಂದೆ, ಬೈಬಲು ಸ್ವೇಚ್ಛಾಚಾರವನ್ನು ಖಂಡಿಸಿ, ಅವ್ಯಭಿಚಾರತೆ, ಸ್ವನಿಯಂತ್ರಣ, ಹಾಗೂ ವೈವಾಹಿಕ ನಿಷ್ಠೆಯನ್ನು ಪ್ರವರ್ಧಿಸಿತು. (ಜ್ಞಾನೋಕ್ತಿ 5:18-20; 1 ಕೊರಿಂಥ 6:18) ಈ ಮೂಲತತ್ವಗಳನ್ನು ಅನುಸರಿಸುವುದು, ಏಯ್ಡ್ಸ್ ರೋಗದಿಂದ ಮತ್ತು ಇತರ ರತಿ ರವಾನಿತ ರೋಗಗಳಿಂದ ಪರಿಗಣನಾರ್ಹವಾದ ರಕ್ಷಣೆಯನ್ನು ಒದಗಿಸುತ್ತದೆಂಬುದಕ್ಕೆ, ಆಫ್ರಿಕದಲ್ಲಿನ ಲಕ್ಷಾಂತರ ಯೆಹೋವನ ಸಾಕ್ಷಿಗಳು ಸಾಕ್ಷಾತ್ತಾದ ರುಜುವಾತನ್ನು ಕೊಡಬಲ್ಲರು. ಬೈಬಲಿನ ಮಟ್ಟಗಳಿಗೆ ಅವರ ಅಂಟಿಕೊಳ್ಳುವಿಕೆಯು, ಕ್ರೈಸ್ತಪ್ರಪಂಚದ ಮೇಲೆ ಒಂದು ನೈಜವಾದ ಆಪಾದನೆಯಾಗಿದೆ. ಈ ಸತ್ಯ ಕ್ರೈಸ್ತರು, “ನೀತಿಯು ವಾಸವಾಗಿರುವ,” ಬರಲಿರುವ ಹೊಸ ಲೋಕವೊಂದರಲ್ಲಿಯೂ ತಮ್ಮ ಭರವಸೆಯನ್ನು ಇರಿಸಿದ್ದಾರೆ. (2 ಪೇತ್ರ 3:13, NW) ನಂಬಿಕೆಯುಳ್ಳ ಜನರಿಗಾದರೋ, ಏಯ್ಡ್ಸ್ ರೋಗದ ವಿಪತ್ತಿಗೆ ಇದು ಅಂತಿಮ ಪರಿಹಾರವಾಗಿದೆ.
[ಅಧ್ಯಯನ ಪ್ರಶ್ನೆಗಳು]
a ಇನ್ನೂ ಹೆಚ್ಚಿನ ಮಾಹಿತಿಗಾಗಿ, ನಮ್ಮ ಆಗಸ್ಟ್ 8, 1992ರ (ಇಂಗ್ಲಿಷ್) ಸಂಚಿಕೆಯಲ್ಲಿರುವ, “ಆಫ್ರಿಕದಲ್ಲಿ ಏಯ್ಡ್ಸ್—ಇದು ಹೇಗೆ ಕೊನೆಗೊಳ್ಳುವುದು?” ಎಂಬ ಸರಣಿಯನ್ನು ನೋಡಿರಿ.
b ರಕ್ತಪೂರಣದ ಮೂಲಕ ಮತ್ತು ಅಮಲೌಷಧಗಳನ್ನು ಅಭಿಧಮನಿಗಳ ಒಳಗೆ ಸೇರಿಸಲು ಉಪಯೋಗಿಸಲ್ಪಡುವ ಸೂಜಿಗಳನ್ನು ಹಂಚಿಕೊಳ್ಳುವ ಮೂಲಕ ಸಹ ಈ ರೋಗವು ಹರಡಸಾಧ್ಯವಿದೆ. ಲೈಂಗಿಕ ಅನೈತಿಕತೆಯನ್ನು ನಡೆಸಿರುವ ಅಥವಾ ಅಮಲೌಷಧಗಳನ್ನು ಉಪಯೋಗಿಸಿರುವ ಸಂಗಾತಿಗಳಿಂದ, ಕೆಲವು ನಿರಪರಾಧಿ ಕ್ರೈಸ್ತರು ಈ ರೋಗವನ್ನು ಅಂಟಿಸಿಕೊಂಡಿದ್ದಾರೆ.
[ಪುಟ 31 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ವನ್ಯಪ್ರದೇಶದ ಅನೇಕ ಭಾಗಗಳಲ್ಲಿ, . . . ಪಾದ್ರಿಗಳು ಹಾಗೂ ಬಿಷಪರು ಬಹುಪತ್ನೀಕರಾಗಿದ್ದಾರೆ.”—ದ ನ್ಯೂ ಯಾರ್ಕ್ ಟೈಮ್ಸ್
[ಪುಟ 31 ರಲ್ಲಿರುವ ಚಿತ್ರ]
ಕ್ರೈಸ್ತಪ್ರಪಂಚದ ವೈದಿಕರ ನ್ಯೂನ ಮಾದರಿಯು, ಆಫ್ರಿಕದಲ್ಲಿನ ಲೈಂಗಿಕ ಸ್ವೇಚ್ಛಾಚಾರದ ಸಾಂಕ್ರಾಮಿಕ ರೋಗವನ್ನು ಉದ್ದೀಪಿಸಿದೆ
[ಪುಟ 32 ರಲ್ಲಿರುವ ಚಿತ್ರ]
“ಕ್ರೈಸ್ತ” ರಾಷ್ಟ್ರಗಳಿಂದ ರಫ್ತುಮಾಡಲ್ಪಟ್ಟ ಅನೈತಿಕ ಮನೋರಂಜನೆಗೆ ಯುವಜನರು ಒಡ್ಡಲ್ಪಟ್ಟಿದ್ದಾರೆ