ಯುವ ಜನರು ಪ್ರಶ್ನಿಸುವುದು . . .
ಇತರ ಯೌವನಸ್ಥರು ಏಕೆ ಎಲ್ಲಾ ವಿನೋದವನ್ನು ಅನುಭವಿಸುತ್ತಾರೆ?
“ನಾವು ಕೇವಲ ವಿನೋದವನ್ನು ಬಯಸುತ್ತೇವೆ, ಆದರೆ ಅದು ತುಂಬ ಕಷ್ಟಕರ,” ಎಂದು 15 ವರ್ಷ ಪ್ರಾಯದ ಜೆಸನ್ ದೂರಿದನು.
ವಿನೋದವನ್ನು ಬಯಸುವುದು ಸ್ವಾಭಾವಿಕವೇ ಸರಿ—ವಿಶೇಷವಾಗಿ ನೀವು ಯೌವನಸ್ಥರಾಗಿರುವಾಗ! ಹೆಚ್ಚಿನ ಯೌವನಸ್ಥರಿಗೆ, ವಿನೋದವನ್ನು ಅನುಭವಿಸುವುದು ತಿನ್ನುವುದು ಮತ್ತು ಮಲಗುವಷ್ಟೇ ಪ್ರಾಮುಖ್ಯವಾಗಿದೆ. ತಮ್ಮ ಸಮಾನಸ್ಥರು ಮತ್ತು ವಾರ್ತಾಮಾಧ್ಯಮದಿಂದ ಪ್ರೇರಿಸಲ್ಪಟ್ಟು, ಯೌವನಸ್ಥರು ಮನೋರಂಜಕ ಚಟುವಟಿಕೆಗಳ ಒಂದು ವಿಸ್ತಾರವಾದ ವೈವಿಧ್ಯವನ್ನು ಕಾತುರದಿಂದ ಬೆನ್ನಟ್ಟುತ್ತಾರೆ. ಒಂದು ಸಮೀಕ್ಷೆಗನುಸಾರ, ಸ್ನೇಹಿತರನ್ನು ಭೇಟಿಮಾಡುವುದು, ಟಿವಿಯನ್ನು ವೀಕ್ಷಿಸುವುದು, ಚಲನ ಚಿತ್ರಗಳಿಗೆ ಹೋಗುವುದು, ಪಾರ್ಟಿ ಮಾಡುವುದು, ಮತ್ತು ನರ್ತನವು, ಹದಿವಯಸ್ಕರ ನಡುವಿನ ಅಚ್ಚುಮೆಚ್ಚಿನ ಸಂಜಾ ಕಾಲಕ್ಷೇಪಗಳ ಪಟ್ಟಿಯಲ್ಲಿ ಪ್ರಥಮವಾಗಿದ್ದವು. ಓದುವುದು, ಆಟಗಳನ್ನು ಆಡುವುದು ಮತ್ತು ಕ್ರೀಡೆಗಳು ಹಾಗೂ ಸಂಗೀತವನ್ನು ಆಲಿಸುವುದು ಸಹ ಜನಪ್ರಿಯವಾಗಿದ್ದವು.
ವಿನೋದದ ಇಷ್ಟೊಂದು ಚಟುವಟಿಕೆಗಳು ಲಭ್ಯವಿರುವುದರಿಂದ, ತಮಗೆ ಸಾಕಷ್ಟು ವಿನೋದವಿಲ್ಲವೆಂದು ಭಾವಿಸುವ ಜೇಸನ್ರಂತಹ ಕೆಲವು ಯೌವನಸ್ಥರನ್ನು ಅರ್ಥಮಾಡಿಕೊಳ್ಳಲು ವಯಸ್ಕರಿಗೆ ಕಷ್ಟವಾಗಬಹುದು. ಆದರೆ ಕೆಲವು ಕ್ರೈಸ್ತ ಯೌವನಸ್ಥರು ನಿಷ್ಕೃಷ್ಟವಾಗಿ ಅದನ್ನೇ ಹೇಳಿಕೊಂಡಿದ್ದಾರೆ! ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿರುವ ಯುವ ಕ್ಯಾಸಿ, ಅದನ್ನು ಈ ರೀತಿಯಲ್ಲಿ ಹೇಳುತ್ತಾಳೆ: “ಶಾಲೆಯಲ್ಲಿರುವ ನಿಮ್ಮೆಲ್ಲ ಸ್ನೇಹಿತರು ಪಾರ್ಟಿಗಳನ್ನು ಮಾಡುವುದನ್ನು ಮತ್ತು ವಿಷಯಗಳನ್ನು ಮಾಡುವುದನ್ನು ನೀವು ನೋಡುತ್ತೀರಿ, ಮತ್ತು ನೀವು ನಿಜವಾಗಿ ಬಿಟ್ಟುಬಿಡಲ್ಪಟ್ಟಿರುವ ಅನಿಸಿಕೆಯನ್ನು ಹೊಂದುತ್ತೀರಿ.” ಆದರೆ ಪರಿಸ್ಥಿತಿಯು ವಾಸ್ತವವಾಗಿ ಅಷ್ಟೊಂದು ಕೆಟ್ಟದ್ದಾಗಿದೆಯೊ?
ಮಜಾ ಮಾಡುವುದನ್ನು ಬೈಬಲ್ ಪ್ರತಿಬಂಧಿಸುತ್ತದೊ? ತೀರ ವ್ಯತಿರಿಕ್ತ. ಬೈಬಲ್ ಯೆಹೋವನನ್ನು “ಸಂತೋಷವುಳ್ಳ ದೇವರು” ಎಂದು ಕರೆಯುತ್ತದೆ. (1 ತಿಮೊಥೆಯ 1:11, NW) ಆದುದರಿಂದ ರಾಜನಾದ ಸೊಲೊಮೋನನು ಹೀಗೆ ಹೇಳಿದ್ದು ನಿಮ್ಮನ್ನು ಆಶ್ಚರ್ಯಗೊಳಿಸಬಾರದು: “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ . . . ಅಳುವ ಸಮಯ, ನಗುವ ಸಮಯ; ಗೋಳಾಡುವ ಸಮಯ, ಕುಣಿದಾಡುವ ಸಮಯ.” (ಪ್ರಸಂಗಿ 3:1, 4) ಇಲ್ಲಿರುವ “ನಗು” ಎಂಬುದಕ್ಕಾಗಿರುವ ಪದದ ಮೂಲ ಹೀಬ್ರು ಶಬ್ದವು ಮತ್ತು ಸಂಬಂಧಿತ ಶಬ್ದಗಳು “ಉತ್ಸವಮಾಡು,” (NW) “ಆಟವಾಡು,” “ತಮಾಷೆಮಾಡು,” (NW) ‘ವಿನೋದವಾಡು’ ಮತ್ತು “ಮಜಾ ಮಾಡು” (NW) ಎಂದು ಸಹ ಅರ್ಥೈಸಸಾಧ್ಯವಿದೆ.—2 ಸಮುವೇಲ 6:21; ಯೋಬ 41:5; ನ್ಯಾಯಸ್ಥಾಪಕರು 16:25; ವಿಮೋಚನಕಾಂಡ 32:6; ಆದಿಕಾಂಡ 26:8.
ಹಿಂದೆ ಬೈಬಲ್ ಸಮಯಗಳಲ್ಲಿ, ದೇವರ ಜನರು ಸಂಗೀತದ ಉಪಕರಣಗಳನ್ನು ನುಡಿಸುವ, ಹಾಡುವ, ನರ್ತಿಸುವ, ಸಂಭಾಷಿಸುವ ಮತ್ತು ಆಟಗಳನ್ನು ಆಡುವಂತಹ ಹಿತಕರವಾದ ಚಟುವಟಿಕೆಗಳ ಒಂದು ವೈವಿಧ್ಯವನ್ನು ಆನಂದಿಸಿದರು. ಉತ್ಸವವನ್ನು ಮಾಡಲು ಮತ್ತು ಆನಂದಭರಿತ ಸಹವಾಸಕ್ಕಾಗಿ ವಿಶೇಷ ಸಂದರ್ಭಗಳೂ ಅವರಿಗಿದ್ದವು. (ಯೆರೆಮೀಯ 7:34; 16:9; 25:30; ಲೂಕ 15:25) ಅಷ್ಟೇಕೆ, ಯೇಸು ಕ್ರಿಸ್ತನು ತಾನೇ ಒಂದು ವಿವಾಹೋತ್ಸವವನ್ನು ಹಾಜರಾದನು!—ಯೋಹಾನ 2:1-10.
ಆದುದರಿಂದ ಹಿತಕರವಾದ ವಿನೋದವು ಇಂದು ಕ್ರೈಸ್ತ ಯೌವನಸ್ಥರ ನಡುವೆ ಪ್ರತಿಬಂಧಿಸಲ್ಪಟ್ಟಿಲ್ಲ. ಖಂಡಿತವಾಗಿಯೂ ಬೈಬಲ್ ಹೀಗೆ ಹೇಳುತ್ತದೆ: “ಯೌವನಸ್ಥನೇ, ಪ್ರಾಯದಲ್ಲಿ ಆನಂದಿಸು; ಯೌವನದ ದಿನಗಳಲ್ಲಿ ಹೃದಯವು ನಿನ್ನನ್ನು ಹರ್ಷಗೊಳಿಸಲಿ.” ಹಾಗಿದ್ದರೂ, ಸೊಲೊಮೋನನು ಈ ಮಾತುಗಳನ್ನು ಒಂದು ಎಚ್ಚರಿಕೆಯೊಂದಿಗೆ ಹಿಂಬಾಲಿಸುತ್ತಾನೆ: “ಆದರೆ ಈ ಎಲ್ಲಾ ವಿಷಯಗಳಲ್ಲಿಯೂ ದೇವರು ನಿನ್ನನ್ನು ನ್ಯಾಯವಿಚಾರಣೆಗೆ ಗುರಿಮಾಡುವನೆಂದು ತಿಳಿದಿರು.” (ಪ್ರಸಂಗಿ 11:9) ಹೌದು, ನೀವು ಮಾಡುವಂತಹ ಆಯ್ಕೆಗಳಿಗಾಗಿ ನೀವು ದೇವರ ಮುಂದೆ ಜವಾಬ್ದಾರರಾಗಿದ್ದೀರಿ. ಆದುದರಿಂದ, ಮನೋರಂಜನೆಯ ವಿಷಯದಲ್ಲಿ ನೀವು “ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ.” (ಎಫೆಸ 5:15, 16) ಕಾರಣವೇನು? ಅನೇಕ ಯುವ ವ್ಯಕ್ತಿಗಳು ಈ ವಿಷಯದಲ್ಲಿ ತೀರ ನ್ಯೂನವಾದ ಆಯ್ಕೆಗಳನ್ನು ಮಾಡುತ್ತಾರೆ.
ವಿನೋದವು ನಿಯಂತ್ರಣ ಮೀರಿ ಹೋಗುವಾಗ
ಹಿಂದೆ ಬೈಬಲ್ ಸಮಯಗಳಲ್ಲಿ ಏನು ಸಂಭವಿಸಿತೊ ಅದನ್ನು ಪರಿಗಣಿಸಿರಿ. ಮನೋರಂಜನೆಯ ವಿಷಯದಲ್ಲಿ ಕೆಲವು ಇಸ್ರಾಯೇಲ್ಯರು ಎಲ್ಲಾ ಸಮತೋಲನವನ್ನು ಕಳೆದುಕೊಳ್ಳುತ್ತಾ, ಇಡೀ ರಾತ್ರಿ ಇರುತ್ತಿದ್ದ ಹುಚ್ಚಾಬಟ್ಟೆಯ ಪಾರ್ಟಿಗಳನ್ನು ನಡಿಸಿದರು! ಪ್ರವಾದಿಯಾದ ಯೆಶಾಯನು ಹೇಳಿದ್ದು: “ಅಯ್ಯೋ, ಮದ್ಯದ ಗೀಳಿನಿಂದಲೇ ಮುಂಜಾನೆ ಎದ್ದು ಸಂಜೆಯಾದ ಮೇಲೆಯೂ ದ್ರಾಕ್ಷಾರಸದಿಂದ ಅಮಲೇರಿದವರಾಗಿ ಕಾಲಕಳೆಯುವವರ ಪಾಡು ಏನು ಹೇಳಲಿ! ಕಿನ್ನರಿ, ವೀಣೆ, ದಮ್ಮಡಿ, ಕೊಳಲು, ದ್ರಾಕ್ಷಾರಸ ಇವುಗಳೇ ಅವರ ಔತಣಗಳ ಸೊಬಗು.” ಜೊತೆಸೇರಿ ಬರುವುದು ಮತ್ತು ಆಹಾರ, ಸಂಗೀತ ಮತ್ತು ನರ್ತನವನ್ನು ಆನಂದಿಸುವುದು ತಪ್ಪಾಗಿತ್ತು ಎಂದಲ್ಲ. ಆದರೆ ಯೆಶಾಯನು ಈ ವಿಲಾಸಿಗಳ ಕುರಿತು ಹೇಳುವುದು: “ಯೆಹೋವನ ಕೆಲಸವನ್ನೋ ಅವರು ಲಕ್ಷಿಸರು.”—ಯೆಶಾಯ 5:11, 12.
ಇಂದು ಅನೇಕ ಯೌವನಸ್ಥರು ಅದನ್ನೇ ಮಾಡುತ್ತಾರೆ—ಮನೋರಂಜನೆಯನ್ನು ಹುಡುಕುವಾಗ ಅವರು ದೇವರಿಗೆ ಯಾವ ಪರಿಗಣನೆಯನ್ನೂ ಕೊಡುವುದಿಲ್ಲ. “ವಿನೋದ”ಕ್ಕಾಗಿ ವಿವಾಹಪೂರ್ವ ಲೈಂಗಿಕತೆ, ವಿಧ್ವಂಸಕತೆ, ಅಮಲೌಷದದ ದುರುಪಯೋಗ, ಮತ್ತು ಇತರ ವಿಚಾರಹೀನ ನಡವಳಿಕೆಯಲ್ಲಿ ತೊಡಗುತ್ತಾ, ಕೆಲವರು ಮುಚ್ಚುಮರೆಯಿಲ್ಲದೆ ದೈವಿಕ ಮಟ್ಟಗಳನ್ನು ನಿರಾಕರಿಸುತ್ತಾರೆ. ಇತರ ವಿದ್ಯಮಾನಗಳಲ್ಲಾದರೊ, ಆ ಯುವ ವ್ಯಕ್ತಿಗಳು ನಿಜವಾಗಿಯೂ ದುಷ್ಟರಾಗಿರಲು ಪ್ರಯತ್ನಿಸುತ್ತಿಲ್ಲ. ಆದರೆ ಅವರು ವಿಷಯಗಳನ್ನು ಮಿತಭಾವದಿಂದ ಮಾಡಲು ಮತ್ತು ಅತಿರೇಕಗಳನ್ನು ಹೋಗಲಾಡಿಸಲು ತಪ್ಪಿಹೋಗುತ್ತಾರೆ. (ಜ್ಞಾನೋಕ್ತಿ 23:20; 1 ತಿಮೊಥೆಯ 3:11) ಆದುದರಿಂದ ಅವರು ಮಜಾ ಮಾಡಲು ಒಟ್ಟುಗೂಡುವಾಗ, ವಿಷಯಗಳು ನಿಯಂತ್ರಣವನ್ನು ಮೀರಿಹೋಗುವ ಪ್ರವೃತ್ತಿಯದ್ದಾಗಿರುತ್ತವೆ.—1 ಕೊರಿಂಥ 10:6-8ನ್ನು ಹೋಲಿಸಿರಿ.
ಇತ್ತೀಚೆಗೆ, ಎಚ್ಚರ! ಪತ್ರಿಕೆಯು ಕೆಲವು ಯುವ ವ್ಯಕ್ತಿಗಳಿಗೆ, “ಇಂದಿನ ಲೌಕಿಕ ಪಾರ್ಟಿಗಳಲ್ಲಿ ಏನು ನಡೆಯುತ್ತದೆ?” ಎಂದು ಕೇಳಿತು. ಒಬ್ಬ ಹದಿವಯಸ್ಕ ಹುಡುಗಿಯು ಉತ್ತರಿಸಿದ್ದು: “ಅಮಲೌಷಧ, ಮಿತಿಮೀರಿದ ಕುಡಿಯುವಿಕೆ. ಅದು ನಿಜವಾಗಿಯೂ ಸಂಭವಿಸುತ್ತದೆ.” ತನ್ನ ಶಾಲೆಯಲ್ಲಿರುವ ಪಾರ್ಟಿಗಳಿಗೆ ಹೋಗುವಂತಹ ಕೆಲವು ಹುಡುಗರ ಕುರಿತಾಗಿ ಯುವ ಆ್ಯಂಡ್ರೂ ಹೇಳಿದ್ದು: “ಅವರು ಮಾಡುವಂತಹದ್ದು ಇಷ್ಟನ್ನೇ, ತಾವು ಎಷ್ಟು ಹೆಚ್ಚು ಕುಡಿದೆವು ಎಂಬುದರ ಕುರಿತಾಗಿ ಬಡಾಯಿಕೊಚ್ಚಿಕೊಳ್ಳುವುದು.” ಜೆಸನ್ ಇದನ್ನೂ ಹೇಳುವಷ್ಟರ ಮಟ್ಟಿಗೆ ಮುಂದುವರಿದನು: “ಒಂದು ಲೌಕಿಕ ಪಾರ್ಟಿಯಲ್ಲಿ ಬಹುಮಟ್ಟಿಗೆ ಯಾವಾಗಲೂ ಕೆಟ್ಟ ವಿಷಯಗಳು ನಡೆಯುತ್ತಿರುತ್ತವೆ.” “ವಿಲಾಸಗೋಷ್ಠಿಗಳು” ಅಥವಾ “ಹುಚ್ಚಾಬಟ್ಟೆಯ ಪಾರ್ಟಿಗಳು” ಬೈಬಲಿನಲ್ಲಿ ಖಂಡಿಸಲ್ಪಟ್ಟಿರುವುದರಿಂದ, ಅಂತಹ ಆಚರಣೆಗಳು ಪ್ರಧಾನವಾಗಿರುವ ಸಾಮಾಜಿಕ ನೆರವಿಗಳನ್ನು ದೇವಭಯವುಳ್ಳ ಯೌವನಸ್ಥರು ದೂರವಿರಿಸುತ್ತಾರೆ.—ಗಲಾತ್ಯ 5:21; ಬೈಯಿಂಗ್ಟನ್.
ಮನೋರಂಜನೆಯ ಹಾನಿರಹಿತವಾದ ರೂಪಗಳೆಂದು ತೋರುವಂತಹವುಗಳಲ್ಲಿಯೂ ಅಪಾಯಗಳು ಸುಳಿದಾಡುತ್ತಿರಬಹುದು. ಉದಾಹರಣೆಗಾಗಿ, ಇಂದಿನ ಜನಪ್ರಿಯ ಚಲನ ಚಿತ್ರಗಳಲ್ಲಿ ಹೆಚ್ಚಿನವು, ನಗ್ನತೆ, ಸಚಿತ್ರ ಕಾಮ, ಮತ್ತು ಜುಗುಪ್ಸೆಗೊಳಿಸುವ ಹಿಂಸಾಚಾರವನ್ನು ಪ್ರದರ್ಶಿಸುತ್ತವೆ. ಜನಪ್ರಿಯ ಹಾಡುಗಳಲ್ಲಿ ಅನೇಕ ವೇಳೆ ಲಂಪಟ ವರ್ಣನೆಯ ಲಹರಿಗಳು ಅಡಕವಾಗಿರುತ್ತವೆ. ರಾಕ್ ಸಂಗೀತ ಗೋಷ್ಠಿಗಳು ಸಾಮಾನ್ಯವಾಗಿ ಅಮಲೌಷಧದ ದುರುಪಯೋಗ, ಗಲಾಟೆ ಮತ್ತು ಹಿಂಸಾಚಾರದ ದೃಶ್ಯಗಳಾಗಿರುತ್ತವೆ.a
ಹೆತ್ತವರು ಬೇಡ ಅನ್ನುವಾಗ
ಈ ವಿಷಯದ ಕುರಿತಾಗಿ ಮೂಲಭೂತ ವಾಸ್ತವಾಂಶವು ಏನಾಗಿದೆ? ನೀವು ಒಬ್ಬ ಕ್ರೈಸ್ತರಾಗಿರುವಲ್ಲಿ, ನಿಮ್ಮ ಸಮಾನಸ್ಥರು ಮಾಡಲು ಆನಂದಿಸುವ ಎಲ್ಲಾ ವಿಷಯಗಳನ್ನು ನೀವು ಸುಮ್ಮನೆ ಮಾಡಸಾಧ್ಯವಿಲ್ಲ. ಎಷ್ಟೆಂದರೂ, ತನ್ನ ಹಿಂಬಾಲಕರು “ಲೋಕದ ಭಾಗವಾಗಿರದೆ” (NW) ಇರುವರೆಂದು ಯೇಸು ಹೇಳಿದ್ದನು, ಮತ್ತು ಅದರ ಅರ್ಥ ಇತರ ಜನರಿಂದ ಭಿನ್ನರಾಗಿರುವುದೇ. (ಯೋಹಾನ 15:19) ನಿಮ್ಮ ಹೆತ್ತವರು ದೇವಭಯವುಳ್ಳವರಾಗಿರುವಲ್ಲಿ, ಅವರು ಈ ವಾಸ್ತವಾಂಶದ ಕುರಿತು ತೀವ್ರವಾಗಿ ಅರಿವುಳ್ಳವರಾಗಿದ್ದಾರೆ. ಆದುದರಿಂದ ಕೆಲವೊಮ್ಮೆ, ನಿಮ್ಮನ್ನು ಸಂರಕ್ಷಿಸುವ ಅಭಿಲಾಷೆಯಿಂದ, ನಿಮ್ಮ ಹೆತ್ತವರು ನಿರ್ದಿಷ್ಟ ವಿಷಯಗಳನ್ನು—ಇತರ ಯುವಕರು ಮಾಡಲು ಅನುಮತಿಸಲ್ಪಡುವ ವಿಷಯಗಳನ್ನು—ನಿರುತ್ತೇಜಿಸಬಹುದು ಅಥವಾ ದೃಢವಾಗಿ ನಿಷೇಧಿಸಬಹುದು. ಇದನ್ನು ಸ್ವೀಕರಿಸುವುದು ಯಾವಾಗಲೂ ಸುಲಭವಾಗಿರುವುದಿಲ್ಲ. “ಜನರು ವಿನೋದವನ್ನು ಬಯಸುತ್ತಾರೆ!” ಎಂದು ಒಬ್ಬ ಹದಿವಯಸ್ಕ ಹುಡುಗಿಯು ಪಟ್ಟುಹಿಡಿದಳು. “ನಮ್ಮ ಹೆತ್ತವರು ಅವರು ಯುವಕರಾಗಿದ್ದಾಗ ವಿನೋದವನ್ನು ಅನುಭವಿಸಿದರು, ಆದರೆ ಅವರು ನಮ್ಮನ್ನು ಬಂಧಿಸಿ ಇಡಲು ಬಯಸುತ್ತಾರೆ ಎಂಬಂತೆ ಕೆಲವೊಮ್ಮೆ ಅನಿಸುತ್ತದೆ.”
ಇಂತಹ ವಿಷಯಗಳಲ್ಲಿ ನಿಮ್ಮ ಹೆತ್ತವರ ಬುದ್ಧಿವಾದವನ್ನು ಅನುಸರಿಸುವುದು ಸುಲಭವಾಗಿರಲಿಕ್ಕಿಲ್ಲ, ನೀವು ಮೂಲತಃ ಅವರ ದೃಷ್ಟಿಕೋನದಲ್ಲಿ ಪಾಲಿಗರಾಗುವಾಗಲೂ. ಕ್ರೀಡಾಪಟುವಿನಂತೆ ತೋರುವ ಒಬ್ಬ ಯುವಕನು—ನಾವು ಅವನನ್ನು ಜಾರೆಡ್ ಎಂದು ಕರೆಯೋಣ—ಜ್ಞಾಪಿಸಿಕೊಳ್ಳುವುದು: “ನಾನು ಶಾಲಾ ತಂಡದಲ್ಲಿ ಬಾಸ್ಕೆಟ್ಬಾಲ್ ಆಡಲು ಬಯಸಿದೆ. ಆಡುವಂತೆ ತುಂಬ ಜನರು ನನ್ನ ಮೇಲೆ ಒತ್ತಡ ಹಾಕುತ್ತಿದ್ದರು, ಮತ್ತು ಅದು ಸಾಧಾರಣಮಟ್ಟಿಗೆ ನನ್ನನ್ನು ಕಾಡಿತು. ಆದರೆ ಆಗ ನಾನು ನನ್ನ ಹೆತ್ತವರೊಂದಿಗೆ ಮಾತಾಡಿದೆ.” ಜಾರೆಡನ ಹೆತ್ತವರು “ದುಸ್ಸಹವಾಸಗಳ” ಅಪಾಯಗಳಿಗೆ ಕೈತೋರಿಸಿದರು ಮತ್ತು ಅವನ ಕ್ರೀಡಾ ಚಟುವಟಿಕೆಗಳು ಎಷ್ಟು ಸಮಯವನ್ನು ವ್ಯಯಮಾಡುವಂಥವುಗಳಾಗಿರುವವು ಎಂಬುದರ ಕುರಿತು ಅವನಿಗೆ ನೆನಪಿಸಿದರು. (1 ಕೊರಿಂಥ 15:33) “ಆದುದರಿಂದ ನಾನು ಶಾಲಾ ತಂಡದಲ್ಲಿ ಬಾಸ್ಕೆಟ್ಬಾಲ್ ಆಡಲು ಸಾಧ್ಯವಿರಲಿಲ್ಲ,” ಎನ್ನುತ್ತಾನೆ ಜಾರೆಡ್ ಬೇಸರದಿಂದ. ಅವನು ತನ್ನ ಹೆತ್ತವರ ಬುದ್ಧಿವಾದಕ್ಕೆ ವಿಧೇಯನಾದನು, ಆದರೆ ಅವನಿಗೆ ಚೆಂಡಾಟವಾಡಲು ಸಿಗದಿದ್ದ ಕಾರಣ ಅವನಿಗೆ ಇನ್ನೂ ಕೆಡುಕೆನಿಸಿತು.
‘ನನಗೆ ತಪ್ಪಿಹೋಗುತ್ತಿದೆ!’
ನಿಮ್ಮ ಪರಿಸ್ಥಿತಿಯು ಏನೇ ಆಗಿರಲಿ, ನಿಮ್ಮ ಶಾಲಾಸಂಗಾತಿಗಳು ತಮ್ಮ ಮಜಾ ಮಾಡುವಿಕೆಗಳ ಕುರಿತಾಗಿ ಬಡಾಯಿಕೊಚ್ಚಿಕೊಳ್ಳುವುದನ್ನು ನೀವು ಕೇಳುವಾಗ, ಆಗಿಂದಾಗ್ಗೆ ನೀವು ತದ್ರೀತಿಯಲ್ಲಿ ನಿರುತ್ಸಾಹಗೊಳ್ಳಬಹುದು. ‘ಇತರ ಯೌವನಸ್ಥರು ಏಕೆ ಎಲ್ಲಾ ವಿನೋದವನ್ನು ಅನುಭವಿಸುತ್ತಾರೆ?’ ಎಂದು ನೀವು ಕೇಳಬಹುದು. ಹೌದು, ನಿಮಗೆ ತಪ್ಪಿಹೋಗುತ್ತಿದೆಯೆಂಬ ಅನಿಸಿಕೆಯನ್ನು ನೀವು ಹೇಗೆ ಜಯಿಸಸಾಧ್ಯವಿದೆ?
ನೀವು ಕೀರ್ತನೆ 73ನ್ನು ಓದಿ, ಆಸಾಫ್ ಎಂಬ ಬೈಬಲ್ ಬರಹಗಾರನ ಅನುಭವದ ಕುರಿತು ಮನನ ಮಾಡುವುದಾದರೆ ಸಹಾಯವಾಗಬಹುದು. ವಚನಗಳು 2 ಮತ್ತು 3ರಲ್ಲಿ, ಅವನು ಈ ನಿವೇದನೆಯನ್ನು ಮಾಡುತ್ತಾನೆ: “ಆದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು. ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ.” ಹೌದು, ಆಸಾಫನು ಒಂದು ಕಟ್ಟುಪಾಡಿನ ಜೀವನವನ್ನು ನಡಿಸುತ್ತಿದ್ದಾಗ, ಇತರರು ತಾವು ಮಾಡಲು ಬಯಸುತ್ತಿದ್ದ—ಯಾವುದೇ ಕೆಟ್ಟ ಪರಿಣಾಮಗಳಿಲ್ಲದಿರುವಂತೆ ವ್ಯಕ್ತವಾಗುತ್ತಿದ್ದ—ಯಾವುದೇ ವಿಷಯವನ್ನು ಮಾಡಸಾಧ್ಯವಿತ್ತೆಂದು ಬಡಾಯಿಕೊಚ್ಚಿಕೊಳ್ಳುತ್ತಿದ್ದರು. ಅವರಿಗೆ ಭೌತಿಕವಾಗಿ ಹೇರಳತೆ ಇತ್ತೆಂದು ಮತ್ತು ಯಾವಾಗಲೂ ಹೆಚ್ಚನ್ನು ಪಡೆಯುತ್ತಿದ್ದರೆಂದು ತೋರುತ್ತಿತ್ತು. (ವಚನ 12) ಹೀಗಿರುವುದರಿಂದ ಆಸಾಫನು ಎಷ್ಟು ನಿರುತ್ಸಾಹಗೊಂಡನೆಂದರೆ ಅವನು ಕೂಗಿ ಹೇಳಿದ್ದು: “ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡದ್ದೂ ಶುದ್ಧತ್ವದಲ್ಲಿ ಕೈತೊಳಕೊಂಡದ್ದೂ ವ್ಯರ್ಥವೇ ಸರಿ.”—ಕೀರ್ತನೆ 73:13.
ಸಂತೋಷಕರವಾಗಿ, ಆಸಾಫನು ಯಾವುದೇ ಅವಿಚಾರದ ವಿಷಯವನ್ನು ಮಾಡುವ ಮುಂಚೆ ದಾರಿಗೆ ಬಂದನು. ಅವನು “ದೇವಾಲಯಕ್ಕೆ” ಒಂದು ಭೇಟಿಯನ್ನು ಕೊಟ್ಟನು ಮತ್ತು ಆ ಹಿತಕರವಾದ ಪರಿಸರದಲ್ಲಿ ಅವನು ವಿಷಯಗಳನ್ನು ಗಂಭೀರವಾಗಿ ಯೋಚಿಸಿದನು. ಬೇಗನೆ ಆಸಾಫನು ಭಕ್ತಿಹೀನ ಭೋಗಾನ್ವೇಷಕರ ಕುರಿತಾಗಿ ಒಂದು ಗಮನಾರ್ಹವಾದ ತೀರ್ಮಾನವನ್ನು ಮಾಡಿದ್ದನು: “ನೀನು ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು [“ಜಾರುವ ನೆಲ,” NW] ಬೀಳಿಸಿ ನಾಶಮಾಡಿಬಿಡುತ್ತೀ.”—ಕೀರ್ತನೆ 73:17, 18.
ನಿಮ್ಮ ಭೋಗಾನ್ವೇಷಕ ಸಮಾನಸ್ಥರಲ್ಲಿ ಅನೇಕರ ಕುರಿತಾಗಿಯೂ ಅದನ್ನೇ ಹೇಳಸಾಧ್ಯವಿದೆ. ಅವರು ಈಗ ಮಜಾ ಮಾಡುತ್ತಿದ್ದಾರೆಂದು ಅವರು ನೆನಸಬಹುದು. ಆದರೆ ಪಾಪದ ಆನಂದಿಸುವಿಕೆ ಕೇವಲ ತಾತ್ಕಾಲಿಕವಾದದ್ದಾಗಿದೆ! (ಇಬ್ರಿಯ 11:25) ಅವರು ಬೈಬಲ್ ಮಟ್ಟಗಳನ್ನು ಅನುಸರಿಸದಿರುವ ಕಾರಣ, ಅವರು “ಜಾರುವ ನೆಲದ ಮೇಲೆ” ನಿಂತುಕೊಂಡಿದ್ದಾರೆ ಮತ್ತು ಒಂದು ಭಯಂಕರ ಅಪ್ಪಳಿಸುವಿಕೆಯನ್ನು—ಒಮ್ಮೆಲೆ ಮತ್ತು ಎಚ್ಚರಿಕೆಯಿಲ್ಲದೆ—ಅನುಭವಿಸುವ ಅಪಾಯದಲ್ಲಿದ್ದಾರೆ. ದೇವರ ವಾಕ್ಯವು ಪ್ರಕಟಿಸುವುದು: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯುವನು.” (ಗಲಾತ್ಯ 6:7) ನಿಮ್ಮ ಪ್ರಾಯದ ಯುವ ವ್ಯಕ್ತಿಗಳು ಈಗಾಗಲೇ “ವಿನೋದದ” ಅಪಾಯಕರ ಕ್ರಿಯೆಗಳಿಂದಾಗಿ ಅಕಾಲಿಕ ಮರಣ, ರತಿ ರವಾನಿತ ರೋಗ, ಅನಪೇಕ್ಷಿತ ಗರ್ಭಧಾರಣೆ, ಅಥವಾ ಸೆರೆಮನೆವಾಸವನ್ನು ಅನುಭವಿಸಿರುವ ಕುರಿತಾಗಿ ನೀವು ನಿಶ್ಚಯವಾಗಿಯೂ ಕೇಳಿರಬಹುದು. ಹಾಗಾದರೆ, ಇಂತಹ ವಿಷಯಗಳಲ್ಲಿ ಒಳಗೂಡದೆ ಇರುವುದು ನಿಮಗೆ ಪ್ರಯೋಜನವನ್ನು ತರುವುದಿಲ್ಲವೊ?—ಯೆಶಾಯ 48:17.
ಸೊಲೊಮೋನನು ಹೀಗೆ ಹೇಳುವಾಗ ಒಳ್ಳೆಯ ಬುದ್ಧಿವಾದವನ್ನು ಕೊಡುತ್ತಾನೆ: “ಪಾಪಿಗಳನ್ನು ನೋಡಿ ಹೊಟ್ಟೆಕಿಚ್ಚುಪಡಬೇಡ; ಯೆಹೋವನಲ್ಲಿ ದಿನವೆಲ್ಲಾ ಭಯಭಕ್ತಿಯುಳ್ಳವನಾಗಿರು. ಒಂದು ಕಾಲ ಉಂಟು, ನಿನ್ನ ನಿರೀಕ್ಷೆಯು ನಿರರ್ಥಕವಾಗದು.” (ಜ್ಞಾನೋಕ್ತಿ 23:17, 18) ಹೌದು, ಯಾವುದೇ “ಮಜಾ,” ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾಕಾಲ ಜೀವಿಸುವ ಒಬ್ಬನ ನಿರೀಕ್ಷೆಯನ್ನು ಕಳೆದುಕೊಳ್ಳುವಷ್ಟು ಅರ್ಹವಾಗಿಲ್ಲ.
ಅಷ್ಟರತನಕ, ಒಮ್ಮೊಮ್ಮೆ ನಿಜವಾಗಿಯೂ ಮಜಾ ಮಾಡುವ ನಿಮ್ಮ ಸ್ವಾಭಾವಿಕ ಆಶೆಯನ್ನು ನೀವು ಹೇಗೆ ತೃಪ್ತಿಪಡಿಸಿಕೊಳ್ಳಸಾಧ್ಯವಿದೆ? ಹಾಗೆ ಮಾಡಲು ಸುರಕ್ಷಿತ, ಹಿತಕರವಾದ ವಿಧಗಳಿವೆಯೊ? ಹಣ ಮತ್ತು ಇತರ ಸಂಪನ್ಮೂಲಗಳು ಸೀಮಿತವಾಗಿರುವುದಾದರೆ ಆಗೇನು? ಎಚ್ಚರ! ಪತ್ರಿಕೆಯು ಲೋಕದ ಸುತ್ತಲಿರುವ ಯೌವನಸ್ಥರಿಗೆ ಕೆಲವು ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಕೇಳಿತು. ಇವು ಈ ಸರಣಿಗಳಲ್ಲಿನ ಭವಿಷ್ಯತ್ತಿನ ಒಂದು ಲೇಖನದಲ್ಲಿ ಚರ್ಚಿಸಲ್ಪಡಲಿರುವವು.
[ಪಾದಟಿಪ್ಪಣಿ]
a “ಯುವ ಜನರು ಪ್ರಶ್ನಿಸುವುದು . . . ನಾನು ರಾಕ್ ಸಂಗೀತ ಗೋಷ್ಠಿಗಳನ್ನು ಹಾಜರಾಗಬೇಕೊ?” ಎಂಬ ಲೇಖನವನ್ನು ನಮ್ಮ 1995, ಡಿಸೆಂಬರ್ 22ರ (ಇಂಗ್ಲಿಷ್) ಸಂಚಿಕೆಯಲ್ಲಿ ನೋಡಿರಿ.
[ಪುಟ 33 ರಲ್ಲಿರುವ ಚಿತ್ರ]
ಲೋಕವು ಯಾವುದನ್ನು ವಿನೋದ ಎಂದು ಕರೆಯುತ್ತದೊ ಅದರಲ್ಲಿ ಒಳಗೂಡಸಾಧ್ಯವಿರದ ಕಾರಣದಿಂದ ನಿಮಗೆ ಬಿಟ್ಟುಬಿಡಲ್ಪಟ್ಟಿರುವ ಅನಿಸಿಕೆಯಾಗಬೇಕೊ?