ಅವನು ತನ್ನ ಪ್ರಾಧಾನ್ಯಗಳನ್ನು ಬದಲಾಯಿಸಿದ ಕಾರಣ
ಬ್ರಿಟನಿನ ಎಚ್ಚರ! ಸುದ್ದಿಗಾರರಿಂದ
ಹಾಡಿನ ತುಂಬಿದ ಹೊಮ್ಮುವಿಕೆಯು ಥಟ್ಟನೆ ಗಾಳಿಯನ್ನು ವ್ಯಾಪಿಸಿತು. ಸ್ಫಟಿಕದಷ್ಟು ಸ್ಪಷ್ಟವಾದ ರಾಗಗಳು, ಅಂತ್ಯವಿಲ್ಲವೊ ಎಂಬಂತೆ ಹೊರ ಪ್ರವಹಿಸಿದವು. ನಾನು ಮಂತ್ರಮುಗ್ಧನಾಗಿ ನಿಂತೆ. “ಅದೊಂದು ನೈಟಿಂಗೇಲ್ ಪಕ್ಷಿ!” ಎಂದು ಜೆರೆಮಿ ಪಿಸುಗುಟ್ಟಿದನು. ಆ ಮಹಿಮಾಭರಿತವಾದ ಧ್ವನಿಯ ಮೂಲದ ಮೇಲೆ ಕೇಂದ್ರೀಕರಿಸಲು ಕಷ್ಟದಿಂದ ಪ್ರಯತ್ನಿಸುತ್ತಾ, ನಾವು ಮೆಲ್ಲನೆ ಕುರುಚಲು ಕಾಡಿನ ಸುತ್ತಲೂ ನುಸುಳಿಕೊಳ್ಳುತ್ತಾ ಹೋದೆವು. ಆಗ, ನಾವು ಪೊದರುಗಳ ಮೆಳೆಯಲ್ಲಿ ತೀರ ಒಳಗೆ, ನಾಚಿಕೆ ಸ್ವಭಾವದ, ಗಮನಾರ್ಹವಲ್ಲದ ತೆಳು ಕಂದು ಬಣ್ಣದ ಪಕ್ಷಿಯನ್ನು ಕಂಡೆವು. “ನಾವು ಅದನ್ನು ನೋಡಿದ್ದು ಒಳ್ಳೇದಾಯಿತು” ಎಂದು ನಾವು ಕಟ್ಟಕಡೆಗೆ ಹೊರಡುತ್ತಿದ್ದಂತೆ ಜೆರೆಮಿ ಹೇಳಿದನು. “ಅದನ್ನು ನೋಡುವವರು ಕೊಂಚವೇ ಮಂದಿ.”
ನಾನು ಇಂಗ್ಲೆಂಡಿನ ಅತಿ ಪೂರ್ವ ಭೂಭಾಗಗಳಲ್ಲಿ ಒಂದೂರಲ್ಲಿರುವ, ರಾಯಲ್ ಸೊಸೈಟಿ ಫಾರ್ ದ ಪ್ರೊಟೆಕ್ಷನ್ ಆಫ್ ಬರ್ಡ್ಸ್ (ಆರ್ಎಸ್ಪಿಬಿ)ನ 2,000 ಎಕರೆಯ ನೈಸರ್ಗಿಕ ಮೀಸಲು ಪ್ರದೇಶವಾದ, ಮಿನ್ಸ್ಮೀರ್ನ ಪಾಲಕನಾದ ಜೆರೆಮಿಯೊಂದಿಗೆ, ದಿನವನ್ನು ಕಳೆಯಲು ಬಂದಿದ್ದೆ. ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ, ನಾರ್ತ್ ಸೀ ಕರಾವಳಿಯ ಈ ಭಾಗವು, ಒಂದು ಸಂಭಾವ್ಯ ಜರ್ಮನ್ ಆಕ್ರಮಣವನ್ನು ಎದುರಿಸಲು ನೆರೆಯಿಂದ ಮುಳುಗಿಸಲ್ಪಟ್ಟಿತು. ಫಲಸ್ವರೂಪವಾಗಿ, ಜವುಗು ಸಸ್ಯನೆಲಗಳು ಸ್ಥಾಪಿತಗೊಂಡವು ಮತ್ತು ನೆರೆಯಿಂದ ಮುಳುಗಿಸಲ್ಪಟ್ಟ ಹುಲ್ಲುಗಾವಲುಗಳಲ್ಲಿ ಜವುಗು ಪ್ರದೇಶದ ಪಕ್ಷಿಗಳು ವಸಾಹತನ್ನು ಸ್ಥಾಪಿಸಲಾರಂಭಿಸಿದವು. 1947ರಲ್ಲಿ ಆ್ಯವಸಟ್ ಪಕ್ಷಿಗಳ ನಾಲ್ಕು ಜೋಡಿಗಳು ಗೂಡುಕಟ್ಟಿದಾಗ ಲವಲವಿಕೆಯು ಬೆಳೆಯಿತು, ಏಕೆಂದರೆ ಈ ಪಕ್ಷಿಜಾತಿಯು 100ಕ್ಕಿಂತಲೂ ಹೆಚ್ಚಿನ ವರ್ಷಗಳಲ್ಲಿ ಬ್ರಿಟನಿನಲ್ಲಿ ಸಂತಾನವೃದ್ಧಿಯನ್ನು ಮಾಡಿರಲಿಲ್ಲ.
ಬೇಗನೆ ಆರ್ಎಸ್ಪಿಬಿ ಆ ನಿವೇಶನದ ಒಡೆತನವನ್ನು ವಹಿಸಿಕೊಂಡಿತು, ಮತ್ತು ಈಗ ಅದು ಅಂತಾರಾಷ್ಟ್ರೀಯ ಪ್ರಮುಖತೆಯ ಒಂದು ಸಂರಕ್ಷಣಾ ಕ್ಷೇತ್ರವಾಗಿದೆ. ಜವುಗು ಸಸ್ಯನೆಲಗಳಿಗೆ ಕೂಡಿಸಿ, ಪಕ್ಷಿ ಇರುನೆಲೆಗಳು ಉಪ್ಪುಪ್ಪಾದ ಮತ್ತು ಸಿಹಿನೀರಿನ ಹರವುಗಳು—ಇವುಗಳಲ್ಲಿ ಅತಿ ದೊಡ್ಡದ್ದು ಸ್ಕ್ರೇಪ್ ಎಂದು ಕರೆಯಲ್ಪಡುತ್ತದೆ—ನೊರಜುಗಲ್ಲು, ಮರಳು ದಿಬ್ಬಗಳು, ಜವುಗುಗಳು, ಹುಲ್ಲುಗಾವಲುಗಳು, ಕುರುಚಲು ಬಂಜರು ಭೂಮಿ ಮತ್ತು ವಾರ್ಷಿಕ ಪರ್ಣಪಾತಿಗಳು ಹಾಗೂ ಶಂಕುಧಾರಿ ಕಾಡುಪ್ರದೇಶಗಳನ್ನು ಒಳಗೊಂಡಿವೆ. 330ಕ್ಕಿಂತಲೂ ಹೆಚ್ಚಿನ ಪಕ್ಷಿಜಾತಿಗಳು ದಾಖಲಿಸಲ್ಪಟ್ಟಿವೆ, ಅವುಗಳಲ್ಲಿ 100ರಷ್ಟು ಪಕ್ಷಿಜಾತಿಗಳು ಆ ಮೀಸಲು ಪ್ರದೇಶದಲ್ಲಿ ಸಂತಾನವೃದ್ಧಿ ಮಾಡುತ್ತಿವೆ. ಪಕ್ಷಿ ಜೀವನದಲ್ಲಿನ ಈ ಮಹತ್ತಾದ ವೈವಿಧ್ಯವು ಮುಖ್ಯವಾಗಿ ಪೂರ್ವ ಕರಾವಳಿಯ ಉದ್ದಕ್ಕೂ ಇರುವ ವಲಸೆಹೋಗುವ ಮಾರ್ಗಗಳಿಂದಾಗಿದೆ, ಆದರೆ ಕುಶಲವಾದ ನಿರ್ವಹಣೆಯು ಸಹ ತನ್ನ ಪಾತ್ರವನ್ನು ವಹಿಸಿದೆ.
“ನಾನು ಇಲ್ಲಿ 1975ರಲ್ಲಿ ಬಂದೆ, ಯಾಕಂದರೆ ಮಿನ್ಸ್ಮೀರ್ ಒಂದು ಅಪೂರ್ವ ಪಂಥಾಹ್ವಾನವನ್ನು ಒಡ್ಡಿತು” ಎಂದು ಜೆರೆಮಿ ನನಗೆ ಹೇಳಿದನು. “1966ರಿಂದ ಆ್ಯವಸಟ್, ಆರ್ಎಸ್ಪಿಬಿಯ ಸಂಕೇತವಾಗಿ ಕಟ್ಟಕಡೆಗೆ ಪದಚಿಹ್ನೆಯಾಯಿತು. ಮಿನ್ಸ್ಮೀರ್ ಈಗ ಅನೇಕರಿಂದ ಆರ್ಎಸ್ಪಿಬಿಯ ಮೀಸಲು ಪ್ರದೇಶಗಳಲ್ಲಿ ಪ್ರಾಮುಖ್ಯವಾದದ್ದಾಗಿ ದೃಷ್ಟಿಸಲಾಗುತ್ತದೆ, ಅದು ಪ್ರತಿ ವರ್ಷ 80,000ದಷ್ಟು ಸಂದರ್ಶಕರನ್ನು ಸ್ವಾಗತಿಸುತ್ತದೆ.”
ಪ್ರಾರಂಭಿಕ ಪಂಥಾಹ್ವಾನ
“ನನ್ನ ಆಸಕ್ತಿಯು ಶಾಲೆಯಲ್ಲಿ ಕೆರಳಿಸಲ್ಪಟ್ಟಿತ್ತು” ಎಂದು ನಾವು ನಡೆಯುತ್ತಾ ಹೋದಂತೆ ಜೆರೆಮಿ ಮುಂದುವರಿಸಿದನು. “ಅಲ್ಲಿ ನಾನು ಪಕ್ಷಿಗಳಿಗೆ ಉಂಗುರಗಳನ್ನು ಹಾಕಲು ಕಲಿತೆ ಮತ್ತು ವಲಸೆಹೋಗುವಿಕೆಯ ಕುರಿತು ಅಭ್ಯಸಿಸಿದೆ. 60ಗಳ ಅಂತ್ಯ ಭಾಗದೊಳಗೆ, ಒಂದು ಹವ್ಯಾಸದೋಪಾದಿ ನಾನು ವರ್ಷವೊಂದರಲ್ಲಿ 12,000ದಿಂದ 20,000 ಪಕ್ಷಿಗಳಿಗೆ ಉಂಗುರ ಹಾಕುತ್ತಿದ್ದೆ. ಅನಂತರ ಪಕ್ಷಿಶಾಸ್ತ್ರಕ್ಕಾಗಿರುವ ಬ್ರಿಟಿಷ್ ಟ್ರಸ್ಟಿನ ಕ್ರಿಸ್ ಮೀಡ್, ಸಹಾರದ ಆಚೆ ಪಕ್ಕಕ್ಕೆ ವಲಸೆಹೋಗುವ ಪಕ್ಷಿಗಳಿಗೆ ಉಂಗುರಹಾಕುವ ಒಂದು ವಿಶೇಷಕಾರ್ಯ ಯಾನದಲ್ಲಿ ಸ್ಪೆಯ್ನ್ಗೆ ಹೋಗಲು ತಮ್ಮೊಂದಿಗೆ ಜೊತೆಗೂಡುವಂತೆ ನನ್ನನ್ನು ಆಮಂತ್ರಿಸಿದರು. ಬಳಸಲ್ಪಡುವ ಬಲೆಯು, ಸಡಿಲವಾಗಿ ತೂಗು ಹಾಕಲ್ಪಟ್ಟಿರುವ ಮತ್ತು ಪಕ್ಷಿಗಳಿಗೆ ಕಾಣಿಸದಂತೆ ಮರಗಳ ಹಿನ್ನೆಲೆಯಲ್ಲಿ ಜಾಗರೂಕತೆಯಿಂದ ಇರಿಸಲ್ಪಟ್ಟಿರುವ, 20ರಿಂದ 60 ಅಡಿ—ವಿವಿಧ ವ್ಯತ್ಯಾಸವುಳ್ಳದ್ದಾಗಿರುತ್ತದೆ—ಉದ್ದವಿರುವ, ಅತಿ ಸೂಕ್ಷ್ಮವಾದ ಕಪ್ಪು ಬಲೆಯಾಗಿದೆ. ಪಕ್ಷಿಗಳಿಗೆ ಹಾನಿಯಾಗುವುದಿಲ್ಲ ಮತ್ತು ಅವುಗಳು ಬಲೆಯಿಂದ ಹೊರ ತೆಗೆಯಲ್ಪಟ್ಟಂತೆ, ಸಾಮಾನ್ಯವಾಗಿ ಮೋನೆಲ್ ಲೋಹದಿಂದ ಮಾಡಲ್ಪಟ್ಟಿರುವಂತಹ ಒಂದು ಚಿಕ್ಕ ಗುರುತಿಸುವ ಉಂಗುರವನ್ನು ಒಂದು ಕಾಲಿನ ಸುತ್ತ ಬಂಧಿಸಲಾಗುತ್ತದೆ.a ಆ ಪಕ್ಷಿಗಳನ್ನು ಬಿಡುಗಡೆಗೊಳಿಸುವುದೂ ಒಂದು ಕಲೆಯಾಗಿದೆ. ಪಕ್ಷಿಗೆ ಉಂಗುರಹಾಕುವವನು, ನೀವು ಕೆಲವೊಮ್ಮೆ ಟೆಲಿವಿಷನಿನಲ್ಲಿ ನೋಡುವಂತೆ, ತನ್ನ ಪಕ್ಷಿಗಳನ್ನು ಎಂದೂ ಗಾಳಿಯಲ್ಲಿ ಎಸೆಯುವುದಿಲ್ಲ. ಅವು ಬಯಸಿದಾಗ ಹೋಗುವಂತೆ ಅವನು ಅವುಗಳನ್ನು ಅನುಮತಿಸುತ್ತಾನಷ್ಟೆ. ಉದಾಹರಣೆಗಾಗಿ, ಸ್ವಿಫ್ಟ್ ಪಕ್ಷಿಗಳು, ಒಬ್ಬನ ಉಣ್ಣೆಯ ಬಟ್ಟೆಗಳಿಗೆ ಅಂಟಿಕೊಳ್ಳುವವು ಮತ್ತು ಅವು ಸಿದ್ಧವಾಗುವಾಗ ಮಾತ್ರವೇ ಹಾರಿಹೋಗುವುವು.
“ನಾನು ಆರು ವಾರಗಳ ರಜೆಯನ್ನು ತೆಗೆಯಬೇಕಾಗಿದ್ದ—ಮತ್ತು ಅದಕ್ಕಾಗಿ ನಾನು ನನ್ನ ಕೆಲಸವನ್ನು ಕಳೆದುಕೊಂಡ—ಒಂದು ಮೋಹಕ ಅನುಭವವು ಅದಾಗಿತ್ತು! ಫಲಸ್ವರೂಪವಾಗಿ, ನಾನು ಬದಲಾವಣೆಯನ್ನು ಮಾಡಲು ಮತ್ತು ನಾನು ಪ್ರೀತಿಸಿದ ಕೆಲಸವನ್ನು—ನಿಸರ್ಗವನ್ನು ಸಂರಕ್ಷಿಸುವುದು, ವಿಶೇಷವಾಗಿ ಪಕ್ಷಿಗಳನ್ನು—ಬೆನ್ನಟ್ಟಲು ನಿರ್ಣಯಿಸಿದೆ. 1967ರಲ್ಲಿ ಆರ್ಎಸ್ಪಿಬಿ, ತಮ್ಮೊಂದಿಗೆ ಸೇರುವಂತೆ ನನ್ನನ್ನು ಆಮಂತ್ರಿಸಿದಾಗ ನಾನು ರೋಮಾಂಚಗೊಂಡೆ.”
ಪಕ್ಷಿಹಾಡುಗಳು ಮತ್ತು ಕರೆಗಳ ಮೌಲ್ಯ
ನೀವು ಒಂದು ಪಕ್ಷಿಯನ್ನು ಹೇಗೆ ಗುರುತಿಸುತ್ತೀರಿ? ಕೆಲವೊಮ್ಮೆ ನೋಡುವ ಮೂಲಕ, ಆದರೆ ಅದನ್ನು ಹಾಡು, ಅಥವಾ ಪಕ್ಷಿಕರೆಯ ಮೂಲಕ ಮಾಡುವುದು ಹೆಚ್ಚು ಭರವಸಾರ್ಹವಾದದ್ದಾಗಿದೆ. ಈ ವಿಷಯದಲ್ಲಿ ಜೆರೆಮಿಯ ಕೌಶಲ್ಯವು ಸುಪ್ರಸಿದ್ಧ. ಪ್ರಕೃತಿಶಾಸ್ತ್ರಜ್ಞರಾದ ಡೇವಿಡ್ ಟಾಮ್ಲಿನ್ಸನ್ ಮೆಚ್ಚುಗೆಯಿಂದ ಬರೆದದ್ದೇನಂದರೆ, ಜೆರೆಮಿ “ಪಕ್ಷಿಗಳನ್ನು ಕೇವಲ ಅವುಗಳ ಹಾಡಿನಿಂದ ಮಾತ್ರ ಗುರುತಿಸುವುದಿಲ್ಲ, ಬದಲಿಗೆ ಅವು ತಮ್ಮ ಸಂಗೀತಮಯ ಕರೆಗಳ ನಡುವೆ ಗಾಳಿಯನ್ನು ಹೀರುವ ವಿಧದಿಂದಲೇ ಅವುಗಳ ವ್ಯತ್ಯಾಸವನ್ನು ಅವನು ಹೇಳಬಲ್ಲನೆಂದು ನಾನು ಕಂಠೋಕ್ತವಾಗಿ ಹೇಳುತ್ತೇನೆ!”
“ಪಕ್ಷಿಗಳು ಸಂವಾದಿಸುತ್ತವೆ,” ಎಂದು ಜೆರೆಮಿ ವಿವರಿಸಿದನು. “ಪ್ರತಿಯೊಂದು ಕರೆಯು ಯಾವುದೊ ಭಿನ್ನವಾದ ವಿಷಯವನ್ನು ಅರ್ಥೈಸುತ್ತದೆ. ಉದಾಹರಣೆಗಾಗಿ, ಒಂದು ಮಾಂಸಭಕ್ಷಕ ಪ್ರಾಣಿಯು ಸುತ್ತಮುತ್ತಲಲ್ಲಿ ಇರುವಾಗ, ಆ್ಯವಸಟ್ಗಳು, ಟಿಟ್ಟಿಭಗಳು, ಗಲ್ಪಕ್ಷಿಗಳು, ಮತ್ತು ರೆಡ್ಷ್ಯಾಂಕ್ಗಳು, ಎಲ್ಲಕ್ಕೆ ತಮ್ಮ ಸ್ವಂತ ನಿರ್ದಿಷ್ಟ ಕರೆಗಳಿವೆ, ಆದರೆ ಪ್ರತಿಯೊಂದು ಒಂದೇ ವಿಷಯವನ್ನು ಅರ್ಥೈಸುತ್ತದೆ: ‘ನರಿಯೊಂದು ಹತ್ತಿರದಲ್ಲೇ ಇದೆ!’ ನಾನು ಗಾಢವಾದ ನಿದ್ದೆಯಿಂದ ಎದ್ದು, ಒಂದು ನರಿ ಎಲ್ಲಿದೆಯೆಂಬುದನ್ನು ಕರೆಯುತ್ತಿರುವ ಪಕ್ಷಿಯ ಜಾತಿಯಿಂದ ತತ್ಕ್ಷಣವೇ ತಿಳಿಯಬಲ್ಲೆ. ಆದರೆ ನರಿಗಳಿಗೂ ಅತ್ಯುತ್ಕೃಷ್ಟವಾದ ಶ್ರವಣಶಕ್ತಿಯಿದೆಯೆಂಬುದನ್ನು ಮರೆಯಬೇಡಿ. ಟರ್ನ್ ಪಕ್ಷಿಗಳು ಒಂದು ವರ್ಷ ಯಶಸ್ವಿಯಾಗಿ ಏಕೆ ಸಂತಾನವೃದ್ಧಿಮಾಡುತ್ತಿರಲಿಲ್ಲ ಎಂದು ನಾವು ಸೋಜಿಗಪಟ್ಟೆವು ಮತ್ತು ಮೊಟ್ಟೆಯೊಡೆಯುವ ತುಸು ಮುಂಚೆ ತಮ್ಮ ಮೊಟ್ಟೆಚಿಪ್ಪುಗಳೊಳಗಿರುವ ಮರಿಗಳು ಕರೆಯುತ್ತಿರುವುದನ್ನು ಒಂದು ನರಿಯು ಕೇಳುತ್ತಿತ್ತೆಂಬುದನ್ನು ನಾವು ಕಂಡುಹಿಡಿದೆವು. ಅವನು ಅವುಗಳನ್ನು ಕಂಡುಹಿಡಿದ ಕೂಡಲೇ ಅವುಗಳನ್ನು ತಿಂದುಬಿಡುತ್ತಿದ್ದನು!”
ಪಕ್ಷಿವೀಕ್ಷಣೆಯ ಕಲೆ
ಬ್ರಿಟನಿನಲ್ಲಿರುವ ಒಬ್ಬ ಒಳ್ಳೆಯ ಪಕ್ಷಿವೀಕ್ಷಕನು ಒಂದು ವರ್ಷದಲ್ಲಿ ಸುಮಾರು 220 ವಿವಿಧ ಜಾತಿಗಳನ್ನು ದಾಖಲಿಸಿಕೊಳ್ಳಸಾಧ್ಯವಿದೆ. ವಿರಳ ಪಕ್ಷಿಗಳನ್ನು ಅಧ್ಯಯನಿಸುವವರು (ಟ್ವಿಚರ್ಸ್), ವಿರಳಪಕ್ಷಿಗಳ ದರ್ಶನಗಳನ್ನು ದಾಖಲಿಸಲು ಸ್ಪರ್ಧಿಸುವ ಪಕ್ಷಿವೀಕ್ಷಕರು ಸುಮಾರು 320ರಷ್ಟನ್ನು ಗುರುತಿಸಶಕ್ತರು.b ಒಂದು ಪಕ್ಷಿದರ್ಶನದ ವಾರ್ತೆಯು, ಅದನ್ನು ತಾವಾಗಿಯೇ ನೋಡಲಿಕ್ಕಾಗಿ ದೇಶದಾಚೆ ಪ್ರಯಾಣಿಸುವಂತೆ ಅವರನ್ನು ಪ್ರಚೋದಿಸುವುದು. ಜೆರೆಮಿಯು ಹೆಚ್ಚು ಸಂತೃಪ್ತನಾಗಿದ್ದಿರುತ್ತಾನೆ. “ಒಂದು ಅಪರೂಪದ ಜಾತಿಯನ್ನು ನೋಡಲು ನಾನು 16 ಕಿಲೊಮೀಟರುಗಳಿಗಿಂತ ಹೆಚ್ಚು ದೂರ ವಾಹನ ಚಲಾಯಿಸಿಕೊಂಡು ಹೋಗುತ್ತಿರಲಿಲ್ಲ,” ಎಂದು ಅವನು ತನ್ನ ಅಂತರಂಗವನ್ನು ತೋಡಿಕೊಂಡನು. “ವಾಸ್ತವದಲ್ಲಿ, ನೋಡಲಿಕ್ಕಾಗಿ ನಾನು ಎಂದೂ ಪ್ರಯಾಣಿಸಿದಂತಹವುಗಳು ಕೇವಲ ಮೂರು ಆಗಿವೆ: ಒಂದು ನಟ್ಕ್ರ್ಯಾಕರ್, ಒಂದು ಬಫ್ಬ್ರೆಸ್ಟಡ್ ಸ್ಯಾಂಡ್ಪೈಪರ್, ಮತ್ತು ಒಂದು ದೊಡ್ಡ ಹೆಬ್ಬಕ, ಇವೆಲ್ಲವೂ 16 ಕಿಲೊಮೀಟರುಗಳ ಅಂತರದೊಳಗೆ. ನನಗೆ 500 ಜಾತಿಗಳು ಚೆನ್ನಾಗಿ ತಿಳಿದಿರುವುದಾದರೂ, ನಾನು ಕೇವಲ ಮೇಲ್ಮೈಯನ್ನು ಕೆರೆಯುತ್ತಿದ್ದೇನೆ ಎಂಬುದನ್ನು ನಾನು ಗ್ರಹಿಸುತ್ತೇನೆ. ಲೋಕದ ಸುತ್ತಲೂ ಪಕ್ಷಿಗಳ ಸುಮಾರು 9,000 ಜಾತಿಗಳಿವೆ, ನಿಮಗೆ ಗೊತ್ತೆ!”
ನಾವು ನಮ್ಮ ದುರ್ಬೀನುಗಳನ್ನು ಜವುಗುಗಳ ಮೇಲೆ ನಿರ್ದೇಶಿಸಿದಂತೆ, ಜೆರೆಮಿಯು ತುಸು ಚಾಪಲ್ಯದಿಂದ ಕೂಡಿಸಿದ್ದು: “ನಾನು ಹೆಚ್ಚು ಸಂತೋಷಭರಿತವಾದ ಅಥವಾ ಹೆಚ್ಚು ಉತ್ಪನ್ನದಾಯಕವಾದ ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ, ವಿಶೇಷವಾಗಿ ಮಿನ್ಸ್ಮೀರ್ನಲ್ಲಿನ ನನ್ನ 16 ವರ್ಷಗಳನ್ನು!” ನಾನು ಅವನನ್ನು ನೋಡಿ, ಈಗತಾನೇ ಒಂದು ಲಂಡನ್ ವಾರ್ತಾಪತ್ರವಾದ ದ ಟೈಮ್ಸ್ನಲ್ಲಿ ಬಂದ ಕಥೆಯನ್ನು ಮನಸ್ಸಿಗೆ ತಂದುಕೊಂಡೆ. ಅದು ಹೇಳಿದ್ದು: “ಮಿನ್ಸ್ಮೀರ್ ಅವನ [ಜೆರೆಮಿಯ] ಅತ್ಯುತ್ಕೃಷ್ಟ ಸಾಧನೆ, ಅವನ ಬದುಕಿನ ಕೆಲಸವಾಗಿತ್ತು.” ಜೆರೆಮಿ ಮಿನ್ಸ್ಮೀರನ್ನು ಬಿಡಲಿದ್ದನು. ಯಾಕೆ?
ಬೀಜಗಳು ಮತ್ತು ಬೆಳವಣಿಗೆ
ಆ ದಿನದ ಆರಂಭದ ಭಾಗದಲ್ಲಿ, ನಾವು ಆ್ಯವಸಟ್ ಮೈಥುನದ ಅಸಾಮಾನ್ಯವಾದ ಪ್ರದರ್ಶನವನ್ನು ನೋಡಿದ್ದೆವು. “ಅದರ ಶುದ್ಧ ಸೌಂದರ್ಯವನ್ನು ಯಾವುದೊ ರೀತಿಯ ವಿಕಾಸವಾದಿ ಪಾರಾಗುವಿಕೆಗೆ ಅಧ್ಯಾರೋಪಿಸಲು ಸಾಧ್ಯವಿಲ್ಲ” ಎಂದು ಜೆರೆಮಿ ಹೇಳಿದ್ದನು. “ಆದರೆ ಕೆಲವು ವರ್ಷಗಳ ಹಿಂದೆ ಒಬ್ಬ ದೇವರನ್ನು ನಂಬುತ್ತೇನೊ ಎಂದು ನನಗೆ ಕೇಳಲ್ಪಟ್ಟಾಗ, ‘ನನಗೆ ಯಾವುದೇ ಕಲ್ಪನೆಯಿಲ್ಲ—ಮತ್ತು ಹೇಗೆ ಕಂಡುಹಿಡಿಯುವುದೆಂದು ನನಗೆ ಗೊತ್ತಿಲ್ಲ!’ ಎಂದು ನಾನು ಒಪ್ಪಿಕೊಂಡದ್ದು ನನಗೆ ನೆನಪಿದೆ. ಆದುದರಿಂದ ಬೈಬಲಿನಲ್ಲಿ ಹುಡುಕಲು ಉತ್ತೇಜಿಸಲ್ಪಟ್ಟಾಗ, ನಾನು ಸಿದ್ಧನಾಗಿ ಒಪ್ಪಿಕೊಂಡೆ. ನನಗೆ ಅದರ ಕುರಿತಾಗಿ ಸ್ವಲ್ಪವೇ ತಿಳಿದಿತ್ತು ಮತ್ತು ನನಗೆ ಏನೂ ನಷ್ಟವಿಲ್ಲ—ಮತ್ತು ಪ್ರಾಯಶಃ ಏನಾದರೂ ಗಳಿಸುವೆ—ಎಂದು ನಾನು ಲೆಕ್ಕಮಾಡಿದೆ. ಈಗ, ನಾನು ಕಲಿತಿರುವ ವಿಷಯದ ಫಲಿತಾಂಶವಾಗಿ, ನಾನು ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗಲು ಮಿನ್ಸ್ಮೀರನ್ನು ಬಿಟ್ಟುಹೋಗುತ್ತಿದ್ದೇನೆ.”
ಹತ್ತು ವರ್ಷಗಳ ವರೆಗೆ, ಜೆರೆಮಿಯ ಅಣ್ಣನಾದ ಮೈಕಲ್, ಒಬ್ಬ “ಪಯನೀಯರ್”—ತಮ್ಮ ಪೂರ್ಣ ಸಮಯದ ಸೌವಾರ್ತಿಕರನ್ನು ವರ್ಣಿಸಲು ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲ್ಪಡುವ ಪದ—ಆಗಿದ್ದನು. ನಾವು ನಮ್ಮ ಚಹವನ್ನು ಕುಡಿಯುತ್ತಾ ಕುಳಿತುಕೊಂಡಂತೆ, ಜೆರೆಮಿಯು ತನ್ನ ಅಣ್ಣನನ್ನು ಜೊತೆಗೂಡುವ ತನ್ನ ಯೋಜನೆಗಳ ಒಂದು ಸಂಕ್ಷಿಪ್ತ ವರ್ಣನೆಯನ್ನು ಕೊಡಲು ಆರಂಭಿಸಿದನು. “ನನ್ನ ಸಹಕರ್ಮಿಗಳೆಲ್ಲರೂ ನಾನು ಮಾಡಿರುವ ನಿರ್ಣಯವನ್ನು ಗೌರವಿಸುತ್ತಾರೆ,” ಎಂದು ಜೆರೆಮಿ ವಿವರಿಸಿದನು. “ಆರ್ಎಸ್ಪಿಬಿ ಆಸಕ್ತಿಯುಳ್ಳವರೂ ಲಕ್ಷಿಸುವವರೂ ಆಗಿದ್ದಾರೆ. ಅವರು ನನಗೆ ತಮ್ಮ ಪೂರ್ಣ ಬೆಂಬಲವನ್ನು ಕೊಟ್ಟಿದ್ದಾರೆ ಮತ್ತು ಒಂದು ರಾಷ್ಟ್ರೀಯ ಬಹುಮಾನದ ಅರ್ಹತೆಗೂ ನನ್ನನ್ನು ಶಿಫಾರಸ್ಸು ಮಾಡಿದ್ದಾರೆ.”
ಆದರೂ ಸ್ಪಲ್ಪ ಟೀಕೆ ಇತ್ತೆಂದು ನನಗೆ ತಿಳಿದಿತ್ತು.
ಸಮತೋಲನಕ್ಕಾಗಿರುವ ಅಗತ್ಯ
“ಹೆಚ್ಚಿನ ಜನರು ಬೆಂಬಲಾತ್ಮಕರಾಗಿದ್ದಾರೆ, ಆದರೆ ಅಸಂತೋಷಕರವಾಗಿ ಇತರರು ಇಲ್ಲಿನ ನನ್ನ ಕೆಲಸದ ಕುರಿತಾಗಿ ಒಂದು ತಪ್ಪಾದ ನೋಟವನ್ನು ಹೊಂದಿರುವಂತೆ ತೋರುತ್ತದೆ,” ಎಂದು ಜೆರೆಮಿ ತನ್ನ ಅಂತರಂಗವನ್ನು ತೋಡಿಕೊಂಡನು. “ಆತ್ಮಿಕತೆಗಿರುವ ಅತ್ಯಂತ ದೊಡ್ಡ ರಕ್ಷಣೆಯು ನಿಸರ್ಗದ ಪಕ್ಕದಲ್ಲಿರುವುದು, ಅರಣ್ಯಜೀವಿಗಳನ್ನು ಪರಾಮರಿಸುವುದು—ಸಂರಕ್ಷಣೆಗಾಗಿ ಕೆಲಸಮಾಡುವುದು ಆಗಿದೆಯೆಂದು ಅವರಿಗೆ ಅನಿಸುತ್ತದೆ. ಇದು ನೀವು ಪ್ರಮೋದವನಕ್ಕೆ ತಲಪಸಾಧ್ಯವಿರುವಷ್ಟು ಹತ್ತಿರವಾಗಿದೆ, ಆದುದರಿಂದ ಏಕೆ ಬಿಡಬೇಕು? ಎಂದು ಅವರು ನನಗೆ ಹೇಳುತ್ತಾರೆ.
“ವ್ಯಕ್ತವಾಗಿಯೇ, ಈ ಕೆಲಸಕ್ಕೆ ಒಂದು ಆತ್ಮಿಕ ಆಯಾಮವಿದೆ ಆದರೆ ಅದು ಆತ್ಮಿಕತೆಯೊಂದಿಗೆ ಸಮವಾಗಿರುವುದಿಲ್ಲ. ಆತ್ಮಿಕತೆಯು ಒಂದು ವೈಯಕ್ತಿಕ ಸ್ವತ್ತು, ಬೆಳೆಸಲು ಸಮಯ ತಗಲುವ ಒಂದು ಗುಣವಾಗಿದೆ. ಅದು ಕ್ರೈಸ್ತ ಸಭೆಯೊಂದಿಗೆ ಸಹವಸಿಸುವ ಮತ್ತು ಅದನ್ನು ಪರಾಮರಿಸುವ, ಭಕ್ತಿವೃದ್ಧಿಮಾಡಲು ಮತ್ತು ಭಕ್ತಿವೃದ್ದಿಹೊಂದುವ ಅಗತ್ಯವನ್ನು ಒಳಗೊಳ್ಳುತ್ತದೆ. ನಾವೇನು ಮಾಡಸಾಧ್ಯವಿಲ್ಲವೆಂದು ಯೇಸು ಹೇಳಿದನೊ—ಇಬ್ಬರು ಯಜಮಾನರನ್ನು ಸೇವಿಸುವುದು—ಅದನ್ನು ನಾನು ಮಾಡಲು ಪ್ರಯತ್ನಿಸುತ್ತಿದ್ದೇನೆಂದು ನನಗೆ ಕೆಲವೊಮ್ಮೆ ಅನಿಸಿದೆ. ಅತಿ ಸುರಕ್ಷಿತವಾದ ಪರಿಸರವು ಕ್ರೈಸ್ತ ಸಭೆಯ ನಡುವಿನಲ್ಲೇ ಆಗಿದೆಯೆಂದು ನಾನೀಗ ಗ್ರಹಿಸುತ್ತೇನೆ, ಮತ್ತು ಅಲ್ಲಿಗೆ ಹೋಗುವ ಮಾರ್ಗವು ಪಯನೀಯರ್ ಸೇವೆಯನ್ನು ಮಾಡುವುದೇ ಆಗಿದೆ!”
ಆರೈಕೆಯ ಪ್ರಾಧಾನ್ಯಗಳು
“ನನ್ನನ್ನು ತಪ್ಪುತಿಳಿಯಬೇಡಿ. ಒಬ್ಬ ಪಾಲಕನಾಗಿ ಪರಾಮರಿಸುವುದು, ಅದು ಕೆಲವೊಮ್ಮೆ ಆಶಾಭಂಗಗೊಳಿಸುವಂತಹದ್ದು ಆಗಿರುವುದಾದರೂ, ಒಂದು ಮೋಹಗೊಳಿಸುವ ಮತ್ತು ಪ್ರತಿಫಲದಾಯಕವಾದ ಅನುಭವವಾಗಿದೆ. ಉದಾಹರಣೆಗಾಗಿ, ಈ ಇರುನೆಲೆಯಲ್ಲಿ ಪಿಸಿಬಿ ಮತ್ತು ಪಾದರಸದಿಂದ ಆಗುವ ಮಾಲಿನ್ಯವು ಒಬ್ಬನನ್ನು ಚಿಂತೆಗೀಡು ಮಾಡುವಷ್ಟು ಉಚ್ಚ ಮಟ್ಟಗಳಲ್ಲಿದೆ—ಮತ್ತು ಹಾವುಮೀನುಗಳು ಅವನ್ನು ಒಳತರುತ್ತಿವೆಯೆಂದು ನಾವು ಸಂಶಯಿಸುತ್ತೇವಾದರೂ, ಏಕೆ ಎಂದು ನಮಗೆ ನಿಜವಾಗಿ ತಿಳಿದಿಲ್ಲ.c ಆದರೆ ಸಮತೋಲನವನ್ನು ಪುನಃಸ್ಥಾಪಿಸಲು ನಾನು ಮಾಡಸಾಧ್ಯವಿರುವ ಯಾವುದೇ ವಿಷಯವು ಬಹಳಷ್ಟು ಸೀಮಿತವಾಗಿದೆ. ಒಬ್ಬ ಪರಿಣತ ಜೀವಿಪರಿಸ್ಥಿತಿ ಶಾಸ್ತ್ರಜ್ಞನೆಂಬ ಯಾವ ವ್ಯಕ್ತಿಯೂ ಇಲ್ಲ. ನಮಗೆ ಸಾಧ್ಯವಿರುವಷ್ಟು ಅತ್ಯುತ್ತಮವಾದದ್ದನ್ನು ಕಲಿಯುತ್ತಾ, ನಾವೆಲ್ಲರೂ ಸುತ್ತಲೂ ತಡಕಾಡುತ್ತಾ ಇದ್ದೇವೆ. ನಮಗೆ ಮಾರ್ಗದರ್ಶನದ ಅಗತ್ಯವಿದೆ. ನಾವು ಹೇಗೆ ಜೀವಿಸಬೇಕು ಮತ್ತು ಭೂಮಿಯನ್ನು ಹಾಗೂ ಅದರ ಸಂಪದ್ಭರಿತವಾದ ಜೀವದ ವೈವಿಧ್ಯತೆಯನ್ನು ಹೇಗೆ ಪರಾಮರಿಸಬೇಕೆಂಬುದು ಕೇವಲ ನಮ್ಮ ಸೃಷ್ಟಿಕರ್ತನಿಗೆ ತಿಳಿದಿದೆ.”
ಶಾಂತವಾಗಿ, ಜೆರೆಮಿ ತನ್ನ ಅನಿಸಿಕೆಗಳನ್ನು ಸಾರಾಂಶಿಸಿದುದು: “ನಾನು ಅರಣ್ಯಜೀವವನ್ನು ಸಂರಕ್ಷಿಸಲಿಕ್ಕಾಗಿ ನನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಲಿಲ್ಲ; ಅದನ್ನು ಸ್ವತಃ ಪರಾಮರಿಸಲು ಆತನು ಪರಿಪೂರ್ಣವಾಗಿ ಸಮರ್ಥನಾಗಿದ್ದಾನೆ. ತನ್ನ ರಾಜ್ಯದ ಮೂಲಕ, ಅರಣ್ಯಜೀವವು ಆತನು ಬಯಸುವಂತಹ ವಿಧದಲ್ಲಿ ಎಲ್ಲಾ ಸಮಯಕ್ಕೂ ನಮ್ಮಿಂದ ನಿರ್ವಹಿಸಲ್ಪಡುವಂತೆ ಆತನು ಖಚಿತಪಡಿಸುವನು. ನನ್ನ ಜೊತೆಮಾನವನನ್ನು ಪರಾಮರಿಸುವ ನನ್ನ ಜವಾಬ್ದಾರಿಯನ್ನು ನಿರ್ವಹಿಸಲಿಕ್ಕಾಗಿ ನಾನು ರಾಜ್ಯದ ಸುವಾರ್ತೆಯನ್ನು ಸಾರುವುದು ಈಗ ಪ್ರಧಾನ ಸ್ಥಾನವನ್ನು ತೆಗೆದುಕೊಳ್ಳಬೇಕು.”
ನಾನು ಇತ್ತೀಚೆಗೆ ಪುನಃ ಒಮ್ಮೆ ಜೆರೆಮಿಯನ್ನು ಭೇಟಿಯಾದೆ. ಆ ಮೀಸಲು ಪ್ರದೇಶದಲ್ಲಿ ನಾವು ಆ ಸಂತೋಷಭರಿತ ದಿನವನ್ನು ಕಳೆದಂದಿನಿಂದ ಮೂರು ವರ್ಷಗಳು ಸಂದಿವೆ. ಅವನು ಈಗ ತನ್ನ ಪ್ರಿಯ ಸ್ಥಳವಾದ ಮಿನ್ಸ್ಮೀರ್ನಿಂದ 8 ಕಿಲೊಮೀಟರ್ ದೂರದಲ್ಲಿ, ತನ್ನ ಅಣ್ಣನೊಂದಿಗೆ ಸಂತೋಷದಿಂದ ಪಯನೀಯರ್ ಸೇವೆಮಾಡುತ್ತಾ, ಜೀವಿಸುತ್ತಿದ್ದಾನೆ. ಆದರೆ ಕೆಲವು ಜನರು ಅವನು ಒಬ್ಬ ಪಾಲಕನಾಗಿ ತನ್ನ ಕೆಲಸವನ್ನು ಬಿಟ್ಟಿರುವ ಕಾರಣವನ್ನು ತಿಳಿದುಕೊಳ್ಳಲು ತಮಗೆ ಇನ್ನೂ ಕಷ್ಟವಾಗುತ್ತದೆಯೆಂದು ಹೇಳುತ್ತಾರೆಂದು ಅವನು ನನಗೆ ಹೇಳಿದನು. ನಿಮಗೆ ತಿಳಿದುಕೊಳ್ಳಲು ಕಷ್ಟವಾಗುತ್ತದೊ? ಜೆರೆಮಿಗೆ, ಅದು ಕೇವಲ ಪ್ರಾಧಾನ್ಯಗಳ ಒಂದು ವಿಷಯವಾಗಿತ್ತು.
[ಅಧ್ಯಯನ ಪ್ರಶ್ನೆಗಳು]
a ಮೋನೆಲ್ ಲೋಹವು, ತುಕ್ಕುಹಿಡಿಯುವಿಕೆಗೆ ನಿರೋಧಕವಾಗಿರುವ ಉಚ್ಚ ಕರ್ಷಕ ಬಲವುಳ್ಳ ನಿಕಲ್-ತಾಮ್ರದ ಒಂದು ಮಿಶ್ರ ಲೋಹವಾಗಿದೆ.
b ಅಮೆರಿಕದಲ್ಲಿ, ಪಕ್ಷಿಗಳ ಅಧ್ಯಯನ ಮಾಡುವವರು (ಟ್ವಿಚರ್ಸ್) ಲಿಸ್ಟರ್ಸ್ ಎಂದು ಹೆಚ್ಚು ಉತ್ತಮವಾಗಿ ಜ್ಞಾತರಾಗಿದ್ದಾರೆ.
c ಪಿಸಿಬಿ, ಒಂದು ಕೈಗಾರಿಕಾ ಹಿಪ್ಪೆಯಾದ ಪೊಲಿಕ್ಲೊರಿನೆಟೆಡ್ ಬೈಫೇನಿಲ್ ಆಗಿದೆ.
[ಪುಟ 20 ರಲ್ಲಿರುವ ಚೌಕ/ಚಿತ್ರಗಳು]
ಒಂದು ಆನಂದದ ಭಾವಾವೇಶ
ತಾವು ಕೇಳುವ ನೈಟಿಂಗೇಲನ್ನು—ಆದರೆ ಒಮ್ಮೆ ಕೇಳಿದರೆ, ಆ ಹಾಡು ಮರೆಯಲಸಾಧ್ಯವಾದಂತಹದ್ದು—10 ಜನರಲ್ಲಿ ಕೇವಲ ಒಬ್ಬರು ನೋಡಲು ಶಕ್ತರಾಗುವರು. “ಅದು ಶುದ್ಧ ಸಂಗೀತ, ಒಂದು ಸಂಪೂರ್ಣ ಮತ್ತು ಪರಿಷ್ಕೃತ ವಿಷಯವಾಗಿದೆ” ಎಂದು ಸೈಮನ್ ಜನ್ಕಿನ್ಸ್, ಲಂಡನಿನ ದ ಟೈಮ್ಸ್ನಲ್ಲಿ ಬರೆದರು. ಪಕ್ಷಿಯು ಹೆಚ್ಚಾಗಿ ಸತತವಾಗಿ ಹಾಡುತ್ತದೆ—ಒಂದು ಪಕ್ಷಿಯು ಐದು ತಾಸುಗಳು 25 ನಿಮಿಷಗಳ ತನಕ ಹಾಡುತ್ತಿದ್ದುದನ್ನು ರೆಕಾರ್ಡ್ ಮಾಡಲಾಗಿದೆ. ಆ ಹಾಡನ್ನು ಅಪೂರ್ವವಾದದ್ದಾಗಿ ಮಾಡುವ ವಿಷಯವು ಯಾವುದು? ನೈಟಿಂಗೇಲ್ನ ಧ್ವನಿಪೆಟ್ಟಿಗೆಯು ಸಂಗೀತಮಯವಾಗಿ ಪರಿಪೂರ್ಣವಾಗಿರುವ ಸ್ವರಮೇಳಗಳನ್ನು ಸೇರಿಸಿ, ಒಂದೇ ಸಮಯದಲ್ಲಿ ನಾಲ್ಕು ವಿಭಿನ್ನ ಶ್ರುತಿಗಳನ್ನು ಉತ್ಪಾದಿಸಬಲ್ಲದು. ಮತ್ತು ಇದನ್ನು ಅದು ತನ್ನ ಕೊಕ್ಕು ಮುಚ್ಚಿರುವಾಗ ಅಥವಾ ತನ್ನ ಪುಟ್ಟ ಮರಿಗಳಿಗಾಗಿ ತನ್ನ ಬಾಯಿ ಆಹಾರದಿಂದ ತುಂಬಿಕೊಂಡಿರುವಾಗಲೂ ಮಾಡಬಲ್ಲದು. ಅದು ಅಷ್ಟು ಅತ್ಯಾಸಕ್ತಿಯಿಂದ ಹಾಡುವುದೇಕೆ? ಬರಿಯ ಆನಂದಕ್ಕಾಗಿ ಎಂದು ಕೆಲವು ಅವಲೋಕನಗಾರರು ಹೇಳುತ್ತಾರೆ. “ಇಡೀ ನಿಸರ್ಗದಲ್ಲಿ ಒಂದು ನೈಟಿಂಗೇಲ್ನ ಧ್ವನಿಪೆಟ್ಟಿಗೆಗಿಂತ ಹೆಚ್ಚು ಆಶ್ಚರ್ಯಗೊಳಿಸುವ ಸೃಷ್ಟಿ ಇದೆಯೊ?” ಎಂದು ಜೆನ್ಕಿನ್ಸ್ ಸಮಾಪ್ತಿಗೊಳಿಸುತ್ತಾರೆ.
[ಕೃಪೆ]
Roger Wilmshurst/RSPB
[ಪುಟ 28 ರಲ್ಲಿರುವ ಚಿತ್ರ]
ದ ಸ್ಕ್ರೇಪ್
[ಕೃಪೆ]
Courtesy Geoff Welch
[ಪುಟ 29 ರಲ್ಲಿರುವ ಚಿತ್ರ]
ಕಪ್ಪು ತಲೆಯ ಗಲ್ ಪಕ್ಷಿ
[ಕೃಪೆ]
Courtesy Hilary & Geoff Welch
[ಪುಟ 29 ರಲ್ಲಿರುವ ಚಿತ್ರ]
ಆ್ಯವಸಟ್
[ಪುಟ 31 ರಲ್ಲಿರುವ ಚಿತ್ರ]
ಸ್ಯಾಂಡ್ವಿಚ್ ಟರ್ನ್
[ಪುಟ 31 ರಲ್ಲಿರುವ ಚಿತ್ರ]
ರೆಡ್ಷ್ಯಾಂಕ್