ಲೋಕದ ಧರ್ಮಗಳು ತಮ್ಮ ಅಂತ್ಯವನ್ನು ಸಮೀಪಿಸುತ್ತಿವೆಯೆ?
ಸ್ವೀಡನಿನ ಎಚ್ಚರ! ಸುದ್ದಿಗಾರರಿಂದ
ಈ ಶೀರ್ಷಿಕೆಯು ನಿಮ್ಮನ್ನು ಹೀಗೆ ಕೇಳುವಂತೆ ಮಾಡುತ್ತದೊ: ‘ಅದು ಹೇಗೆ ಸಾಧ್ಯ? ಲೋಕದ ಧರ್ಮಗಳು ಇಂದು ಭೂಮಿಯಾದ್ಯಂತ ಸ್ವತಭರಿತವೂ ಪ್ರಭಾವಯುಕ್ತವೂ ಆಗಿಲ್ಲವೆ?’
ಹೌದು, ಅಪಾರವಾದ ತೊಂದರೆಗಳನ್ನು ದಾಟಿಹೋಗುತ್ತಿರುವುದಾದರೂ ಅವು ಸ್ವತಭರಿತವೂ ಪ್ರಭಾವಯುಕ್ತವೂ ಆಗಿರುವಂತೆ ತೋರುತ್ತವೆ. ಈ 20ನೆಯ ಶತಮಾನದಲ್ಲಿ, ಧರ್ಮದ ಕುರಿತು ಗಂಭೀರವಾದ ಸಂದೇಹಗಳು ವ್ಯಕ್ತಪಡಿಸಲ್ಪಟ್ಟಿವೆ ಮತ್ತು ಅವು ಮಾನವ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಬಯಲುಮಾಡಲ್ಪಟ್ಟಿವೆ. ಜ್ಯೋತಿರ್ವಿಜ್ಞಾನಿಗಳು ತಮ್ಮ ದೈತ್ಯಾಕಾರದ ದುರ್ಬೀನುಗಳಿಂದ ವಿಶ್ವವನ್ನು ದಿಟ್ಟಿಸಿನೋಡಿದ್ದಾರೆ, ಮತ್ತು ಗಗನಯಾತ್ರಿಕರು ಬಾಹ್ಯಾಂತರಾಳವನ್ನು ಅಡ್ಡಾದಿಡ್ಡಿಯಾಗಿ ದಾಟಿರುತ್ತಾರೆ; ಮತ್ತು ಸೋವಿಯೆಟ್ ಗಗನಯಾತ್ರಿಯೊಬ್ಬನು ವ್ಯಕ್ತಪಡಿಸಿದಂತೆ, “ಯಾವ ದೇವರನ್ನಾಗಲಿ ದೇವದೂತರನ್ನಾಗಲಿ” ಅವರು ಕಂಡಿಲ್ಲ. ಭೌತವಿಜ್ಞಾನಿಗಳು ಭೌತದ್ರವ್ಯವನ್ನು ಹೆಚ್ಚು ಚಿಕ್ಕ ಚಿಕ್ಕದಾಗಿರುವ ಕಣಗಳಾಗಿ ವಿಭಾಗಿಸಿದರೂ ಜೀವವನ್ನು ಆರಂಭಿಸಿದ್ದಿರಬಹುದಾದ ಯಾವುದೇ ದೈವಿಕ ಶಕ್ತಿಯನ್ನು ಕಂಡುಹಿಡಿಯದೆ ಇದ್ದಾರೆ. ಜೀವಿಪರಿಸ್ಥಿತಿಶಾಸ್ತ್ರಜ್ಞರು ಮತ್ತು ಭೂವಿಜ್ಞಾನಿಗಳು, ಅಮೀಬದಿಂದ ಹಿಡಿದು ಮನುಷ್ಯನ ವರೆಗಿನ ಜೀವದ ದೀರ್ಘವಾದ ವಿಕಾಸದ ಸರಪಣಿಯನ್ನು ಪುನಾರಚಿಸಿದ್ದೇವೆಂದು ವಾದಿಸುತ್ತಾರಾದರೂ, ಆ ಸರಪಣಿಯಲ್ಲೆಲ್ಲೂ ನಿರ್ಮಾಣಿಕನ ಹಸ್ತಕ್ಷೇಪದ ಸೂಕ್ಷ್ಮಾತಿಸೂಕ್ಷ್ಮ ಕೊಂಡಿಯೂ ಅವರಿಗೆ ತೋರಿಬಂದಿಲ್ಲ.
ಆದರೂ ಭೌತಿಕ ವಿವೇಕ ಮತ್ತು ಪ್ರಾಪಂಚಿಕ ತತ್ವಜ್ಞಾನವು ಈ ಭೂಮಿಯಿಂದ ಧಾರ್ಮಿಕ ಭಾವಾತಿರೇಕವನ್ನು ತೊಡೆದುಹಾಕುವುದರಲ್ಲಿ ವಿಫಲಗೊಂಡಿದೆ, ಮತ್ತು ನಿರೀಶ್ವರವಾದಿ ರಾಜಕೀಯ ಶಕ್ತಿಗಳು ಮತ್ತು ತತ್ವಜ್ಞಾನಗಳು ಅದಕ್ಕಿಂತ ಹೆಚ್ಚು ಸಫಲಗೊಂಡಿರುವುದಿಲ್ಲ. 70 ವರ್ಷಗಳಿಗೂ ಮುಂಚಿನಿಂದ, ನಿರಂಕುಶವಾದಿಯೂ ನಿರೀಶ್ವರವಾದಿಯೂ ಆಗಿರುವ ಕಮ್ಯೂನಿಸಮ್, ಧರ್ಮವನ್ನು ಮೂಢನಂಬಿಕೆಯೆಂದು ಮತ್ತು “ಜನರನ್ನು ಸುಪ್ತಿಗೊಳಿಸುವ ಅಫೀಮು” ಎಂದು ಹೆಸರಿಸಿತು, ಧಾರ್ಮಿಕ ಮುಖಂಡರನ್ನು ಅವರ ಸ್ಥಾನಗಳಿಂದ ತೆಗೆದುಹಾಕಿತು, ಮತ್ತು ಅವರ ಚಟುವಟಿಕೆಗಳನ್ನು ನಿಷೇಧಿಸಿತು, ಚರ್ಚುಗಳನ್ನೂ ದೇವಸ್ಥಾನಗಳನ್ನೂ ನಾಶಮಾಡಿತು ಅಥವಾ ಸೂರೆಮಾಡಿತು, ಮತ್ತು ಆರಾಧಕರನ್ನು ಮಸ್ತಿಷ್ಕಭ್ರಮಣೆಮಾಡಿ, ಕೊಂದುಹಾಕಿತು. ಆದರೂ, ಅಂತಹ ಕೃತ್ಯಗಳು ಧಾರ್ಮಿಕ ಭಾವಾತಿರೇಕವನ್ನು ನಿರ್ಮೂಲಗೊಳಿಸಲಿಲ್ಲ. ಆ ಸರಕಾರಗಳು ಉರುಳಿಸಲ್ಪಟ್ಟ ಕೂಡಲೆ ಧರ್ಮವು, ನವಚೈತನ್ಯದಿಂದಲೊ ಎಂಬಂತೆ ಧೂಳಿಯಿಂದ ಮೇಲೇರಿಬಂತು. ಹಿಂದೆ ಕಮ್ಯೂನಿಸ್ಟ್ ಆಗಿದ್ದ ದೇಶಗಳಲ್ಲಿ, ಜನರು ಪುನಃ ತಮ್ಮ ಹಳೆಯ ದೇವಾಲಯಗಳಲ್ಲಿ ಒಟ್ಟುಗೂಡುತ್ತಾ, ತಮ್ಮ ಪೂರ್ವಜರು ಮಾಡಿದಂತೆಯೆ ಭಕ್ತಿಯುತ ಆರಾಧನೆಯಲ್ಲಿ ಮೊಣಕಾಲೂರುತ್ತಾರೆ.
ಧಾರ್ಮಿಕ ಭಾವಾತಿರೇಕವು ಲೋಕದ ಇತರ ಭಾಗಗಳಲ್ಲಿ ಇನ್ನೂ ಬಲವತ್ತಾಗಿರುತ್ತದೆ. ಪ್ರತಿ ವರ್ಷ ಸೌದಿ ಅರೇಬಿಯದ ಮಕ್ಕ ನಗರವು, ಭೂಮಿಯಾದ್ಯಂತದಿಂದ ಬರುವ ಕೋಟ್ಯಂತರ ಮುಸ್ಲಿಮ್ ಯಾತ್ರಿಕರ ಆತಿಥ್ಯಮಾಡುತ್ತದೆ. ಪೋಪರ ಕ್ಷಣದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾ, ಅವರ ಆಶೀರ್ವಾದವನ್ನು ಪಡೆಯುವ ನಿರೀಕ್ಷೆಯಿಂದ ಬರುವ ಕ್ಯಾತೊಲಿಕ್ ವಿಶ್ವಾಸಿಗಳಿಂದ, ವ್ಯಾಟಿಕನ್ನ ಸೆಂಟ್ ಪೀಟರ್ಸ್ ಸ್ಕ್ವೇರ್ ಪದೇ ಪದೇ ಕಿಕ್ಕಿರಿದು ತುಂಬಿರುತ್ತದೆ. ಭಾರತದ “ಪವಿತ್ರ” ನದಿಗಳ ತೀರದಲ್ಲಿರುವ ನೂರಾರು ತೀರ್ಥಾಟನೆಯ ಸ್ಥಳಗಳಲ್ಲಿ ಕೋಟ್ಯಂತರ ಹಿಂದೂ ಭಕ್ತರು ಪ್ರವಹಿಸುತ್ತಾ ಇದ್ದಾರೆ. ಧರ್ಮಶ್ರದ್ಧೆಯ ಯೆಹೂದ್ಯರು ಯೆರೂಸಲೇಮಿನ ಗೋಳಾಡುವ ಗೋಡೆಗೆ ಪ್ರಾರ್ಥನೆ ಮಾಡಲಿಕ್ಕಾಗಿ ಕೂಡಿಬಂದು, ತಮ್ಮ ಲಿಖಿತ ಪ್ರಾರ್ಥನೆಗಳನ್ನು ಗೋಡೆಯ ಬಿರುಕುಗಳಲ್ಲಿ ಬಿಟ್ಟುಹೋಗುತ್ತಾರೆ.
ಹೌದು, ಮಾನವಕುಲದಿಂದ ಧರ್ಮವನ್ನು ತೊಡೆದುಹಾಕುವುದು ಅಸಾಧ್ಯವಾಗಿ ತೋರಿಬರುತ್ತದೆ. “ಮನುಷ್ಯನು ಸ್ವಭಾವಜನ್ಯವಾಗಿ ಒಬ್ಬ ಧಾರ್ಮಿಕ ಪ್ರಾಣಿ” ಎಂಬುದಾಗಿ ಐರ್ಲೆಂಡಿನಲ್ಲಿ ಹುಟ್ಟಿದ ರಾಜ್ಯನೀತಿಜ್ಞ ಎಡ್ಮಂಡ್ ಬರ್ಕ್ ಹೇಳಿದರು. ಸಂಖ್ಯಾಸಂಗ್ರಹಣಕ್ಕನುಸಾರ, ಭೂಮಿಯಲ್ಲಿರುವ 6 ಜನರಲ್ಲಿ 5 ಮಂದಿ ಹೆಚ್ಚುಕಡಮೆ ಯಾವುದೊ ಧರ್ಮದಲ್ಲಿ ಜತೆಗೂಡಿದವರಾಗಿದ್ದಾರೆ. ಇತ್ತೀಚಿನ ಸಂಖ್ಯೆಗಳಿಗನುಸಾರ, ಲೋಕದಲ್ಲಿ ಧರ್ಮರಹಿತ ಜನರ ಸಂಖ್ಯೆಯು ಕೇವಲ ಸುಮಾರು 84.2 ಕೋಟಿಯಾಗಿರುವಾಗ, ಸ್ಥಾಪಿತ ಧರ್ಮಗಳ ಅವಲಂಬಿಗಳಾದರೊ ಸುಮಾರು 490 ಕೋಟಿ ಸಂಖ್ಯೆಯಲ್ಲಿದ್ದಾರೆ.a
ಇದನ್ನು ದೃಷ್ಟಿಯಲ್ಲಿಟ್ಟುಕೊಂಡು, ಲೋಕದ ಧರ್ಮಗಳು ತಮ್ಮ ಅಂತ್ಯವನ್ನು ಸಮೀಪಿಸುತ್ತಿವೆಯೆಂದು ನಂಬುವುದು ನ್ಯಾಯಸಮ್ಮತವೊ? ಮತ್ತು ಅವು ಅಂತ್ಯವನ್ನು ಸಮೀಪಿಸುತ್ತಿರುವುದಾದರೆ, ಅವು ಅದನ್ನು ಯಾವಾಗ ಮತ್ತು ಹೇಗೆ ಅನುಭವಿಸುವುವು? ಯಾವ ಧರ್ಮವಾದರೂ ಉಳಿಯುವುದೊ? ಈ ಪ್ರಶ್ನೆಗಳನ್ನು ಮುಂದಿನ ಎರಡು ಲೇಖನಗಳಲ್ಲಿ ನಾವು ಪರಿಗಣಿಸೋಣ.
[ಪಾದಟಿಪ್ಪಣಿ]
a “ಧರ್ಮರಹಿತರಲ್ಲಿ ಯಾವ ಧರ್ಮವನ್ನೂ ಅವಲಂಬಿಸದವರು, ಅವಿಶ್ವಾಸಿಗಳು, ಆಜ್ಞೇಯತಾವಾದಿಗಳು, ಯಾವ ಮತಧರ್ಮವನ್ನೂ ಒಪ್ಪದವರು, ಸಕಲ ಧರ್ಮಕ್ಕೆ ಔದಾಸೀನ್ಯರಾದ ಐಹಿಕವಾದಿಗಳು” ಸೇರಿರುತ್ತಾರೆ.
[ಪುಟ 4 ರಲ್ಲಿರುವ ಚಿತ್ರ]
ಸೆಂಟ್ ಪೀಟರ್ಸ್ ಸ್ಕ್ವೇರ್, ವ್ಯಾಟಿಕನ್ ಸಿಟಿ