ಯೆಹೋವನ ಸಾಕ್ಷಿಗಳ ಕುರಿತಾದ ತಪ್ಪುತಿಳಿವಳಿಕೆಗಳನ್ನು ಹೋಗಲಾಡಿಸುವುದು
ತಮ್ಮ ಮನೆಮನೆಯ ಸಾರುವಿಕೆಯಲ್ಲಿ ಒಳಗೂಡಿದ್ದಾಗ, ಇಬ್ಬರು ಯೆಹೋವನ ಸಾಕ್ಷಿಗಳು, ತನಗೆ ಆಸಕ್ತಿಯಿಲ್ಲವೆಂದು ಹೇಳಿದ ಒಬ್ಬ ಪುರುಷನನ್ನು ಭೇಟಿಯಾದರು. ಸಾಕ್ಷಿಗಳು ಶಾಂತವಾಗಿ ಅಗಲಿದರು, ಆದರೆ ಅವರು ಪಕ್ಕದಾರಿಯಲ್ಲಿ ನಡೆದುಹೋಗುವಾಗ, ಆ ಮನುಷ್ಯನು ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದುದನ್ನು ಅವರು ಗಮನಿಸಿದರು. “ದಯವಿಟ್ಟು ನಿಲ್ಲಿರಿ!” ಎಂದು ಆ ಮನುಷ್ಯನು ಕೂಗಿ ಕರೆದನು. “ನಾನು ಕ್ಷಮೆಯಾಚಿಸಲು ಬಯಸುತ್ತೇನೆ. ಸಾಕ್ಷಿಗಳ ಕುರಿತು ನನಗೇನೂ ತಿಳಿದಿಲ್ಲ, ನಿಮ್ಮ ಕುರಿತು ಅನೇಕರಿಗೆ ತಪ್ಪಭಿಪ್ರಾಯ ಕೊಡಲ್ಪಟ್ಟಿದೆ ಎಂದು ನನ್ನೆಣಿಕೆ.”
ತದನಂತರ ಆ ವ್ಯಕ್ತಿ ತನ್ನನ್ನು, ಸೌತ್ ಸಾನ್ ಫ್ರಾನ್ಸಿಸ್ಕೊ, ಕ್ಯಾಲಿಫೊರ್ನಿಯ, ರೋಟರಿ ಕ್ಲಬ್ನ ಕಾರ್ಯಕ್ರಮ ಅಧ್ಯಕ್ಷರಾದ ರೆನಾನ್ ಡೋಮಿಂಗಸ್ ಎಂದು ಪರಿಚಯಪಡಿಸಿಕೊಂಡರು. ಸಾಕ್ಷಿಯೊಬ್ಬನು ಕ್ಲಬ್ಗೆ ಬಂದು ಯೆಹೋವನ ಸಾಕ್ಷಿಗಳ ನಂಬಿಕೆಗಳು ಮತ್ತು ಚಟುವಟಿಕೆಗಳ ಕುರಿತು ಒಂದು ಭಾಷಣವನ್ನು ಕೊಡಸಾಧ್ಯವೊ ಎಂದು ಅವರು ಕೇಳಿದರು. ಒಂದು ಕಾರ್ಯಸೂಚಿಯನ್ನು ಏರ್ಪಡಿಸಲಾಯಿತು. ಸಾಕ್ಷಿಯು 30 ನಿಮಿಷಗಳ ತನಕ ಮಾತಾಡಿ, ಬಳಿಕ ಸಭಿಕರ ಪ್ರಶ್ನೆಗಳನ್ನು ಉತ್ತರಿಸಲಿದ್ದನು. 1995ರ ಆಗಸ್ಟ್ 17ರಂದು, ರೋಟರಿ ಕ್ಲಬ್ನಲ್ಲಿ ಮಾತಾಡುವಂತೆ, ಸಾನ್ ಫ್ರಾನ್ಸಿಸ್ಕೊ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಸಾಕ್ಷಿಯಾಗಿದ್ದ ಅರ್ನಸ್ಟ್ ಗರೇಟ್ರನ್ನು ಕೇಳಿಕೊಳ್ಳಲಾಯಿತು, ಮತ್ತು ಅವರು ಈ ಕೆಳಗಿನ ವಿಷಯದಲ್ಲಿ ಪಾಲಿಗರಾದರು:
“ಬ್ಯಾಂಕರುಗಳು, ಲಾಯರ್ಗಳು, ಮತ್ತು ಡಾಕ್ಟರರಂತಹ ವ್ಯಾಪಾರ ಮತ್ತು ಸಾಮಾಜಿಕ ಮುಖಂಡರು ಒಳಗೊಳ್ಳುವ ರೋಟರಿ ಕ್ಲಬ್ಗೆ ನಾನೇನು ಹೇಳಸಾಧ್ಯವಿದೆ ಎಂದು ನಾನು ಯೋಚಿಸಿ, ಪ್ರಾರ್ಥಿಸಿದೆ. ನಾನು ತುಸು ಸಂಶೋಧನೆಯನ್ನು ಮಾಡಿ, ರೋಟರಿ ಕ್ಲಬ್ನ ಪ್ರಕಟಿತ ಗುರಿಯು ಸಮುದಾಯವನ್ನು ಬಲಗೊಳಿಸುವುದೆಂಬುದನ್ನು ಕಂಡುಕೊಂಡೆ. ಆದುದರಿಂದ ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಎಂಬ ಬ್ರೋಷರ್ನ 23ನೆಯ ಪುಟದಲ್ಲಿರುವ, ‘ನಿಮ್ಮ ಸಮುದಾಯಕ್ಕೆ ಸುವಾರ್ತೆಯ ವ್ಯಾವಹಾರಿಕ ಉಪಯುಕ್ತತೆ’ ಎಂಬ ಶೀರ್ಷಿಕೆಯ ಮಾಹಿತಿಯನ್ನು ಸಾದರಪಡಿಸಿದೆ.”a
“ಈ ದಿಕ್ಕಿನಲ್ಲಿ ಯೆಹೋವನ ಸಾಕ್ಷಿಗಳು ಒಂದು ಪ್ರಭಾವವಾಗಿರುತ್ತಾರೆಂಬುದನ್ನು ನಾನು ವಿವರಿಸಿದೆ. ವಾರದಲ್ಲಿ ಪ್ರತಿದಿನ ಯೆಹೋವನ ಸಾಕ್ಷಿಗಳು ತಮ್ಮ ಸಮುದಾಯದ ಜನರ ಬಾಗಿಲುಗಳನ್ನು ತಟ್ಟುತ್ತಾ ಹೋಗುತ್ತಾರೆ. ಒಂದು ಬಲವಾದ ಕುಟುಂಬವನ್ನು ಹೊಂದುವಂತೆ ತಮ್ಮ ನೆರೆಯವರನ್ನು ಪ್ರಭಾವಿಸುವುದೇ ಅವರ ಅಪೇಕ್ಷೆಯಾಗಿದೆ, ಮತ್ತು ಒಂದು ಬಲವಾದ ಕುಟುಂಬ ಘಟಕವು ಒಂದು ಬಲವಾದ ಸಮುದಾಯವನ್ನು ಉಂಟುಮಾಡುತ್ತದೆ. ಕ್ರೈಸ್ತ ಮೂಲತತ್ವಗಳಿಂದ ಜೀವಿಸಲು ಜನರನ್ನು ಮತ್ತು ಕುಟುಂಬಗಳನ್ನು ಯೆಹೋವನ ಸಾಕ್ಷಿಗಳು ಹೆಚ್ಚು ಪ್ರಭಾವಿಸಿದಷ್ಟಕ್ಕೆ, ಸಮುದಾಯದಲ್ಲಿ ನಡೆಯುವ ಅಪರಾಧ, ಅನೈತಿಕತೆ, ಮತ್ತು ಪಾತಕವು ಅಷ್ಟು ಕಡಿಮೆಗೊಳ್ಳುವುದು. ಈ ಸಮಾಚಾರವು ಸದಸ್ಯರಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿತು, ಯಾಕಂದರೆ ಅದು ರೋಟರಿ ಕ್ಲಬ್ನ ಗುರಿಗಳಿಗೆ ಹೊಂದಿಕೆಯಲ್ಲಿತ್ತು.”
“ರಾಜಕೀಯದಲ್ಲಿ ನೀವೇಕೆ ಒಳಗೂಡುವುದಿಲ್ಲ?”
“ಕೂಟವು ಪ್ರಶ್ನೋತ್ತರಗಳಿಗಾಗಿ ತೆರೆಯಲ್ಪಟ್ಟಾಗ, ಮೊದಲನೆಯ ಪ್ರಶ್ನೆಗಳಲ್ಲೊಂದು, ‘ರಾಜಕೀಯದಲ್ಲಿ ಮತ್ತು ಸರಕಾರದಲ್ಲಿ ನೀವೇಕೆ ಒಳಗೂಡುವುದಿಲ್ಲ?’ ಎಂದಾಗಿತ್ತು. ಈ ಪ್ರಶ್ನೆಯನ್ನು ಕೇಳಿದ ಮಹನೀಯನು ಬಳಿಕ ಕೂಡಿಸಿದ್ದು: ‘ಸುಪುಸ್ತಕವು [ಬೈಬಲು] “ಕೈಸರನದನ್ನು ಕೈಸರನಿಗೆ ಕೊಡಿರಿ” ಎಂದು ಹೇಳುತ್ತದಲ್ಲಾ.’ ನಾವು ಆ ಹೇಳಿಕೆಯೊಂದಿಗೆ ಪೂರ್ಣ ಸಹಮತದಲ್ಲಿದ್ದೇವೆಂದೂ ಅದನ್ನು ಪೂರ್ತಿಯಾಗಿ ಅನುಮೋದಿಸುತ್ತೇವೆಂದೂ ನಾನು ಹೇಳಿದೆ. ಆ ವಚನವನ್ನು ಉದ್ಧರಿಸುವುದನ್ನು ನಾನು ಕೇಳಿರುವ ಅಧಿಕಾಂಶ ಜನರು, ‘ದೇವರದನ್ನು ದೇವರಿಗೆ ಕೊಡಿರಿ’ ಎಂದನ್ನುವ ಅದರ ಬೇರೆ ಅರ್ಧ ಭಾಗವನ್ನು ಎಂದೂ ಉದ್ಧರಿಸುವುದಿಲ್ಲ ಎಂದು ನಾನು ಸೂಚಿಸಿದೆ. (ಮತ್ತಾಯ 22:21) ಹೀಗಿರಲಾಗಿ, ಸಕಲವೂ ಕೈಸರನಿಗೆ ಸೇರಿದುದಲ್ಲವೆಂದು ನಾವು ತೀರ್ಮಾನಿಸಲೇಬೇಕು. ದೇವರಿಗೆ ಸೇರಿರುವ ಕೆಲವು ವಿಷಯಗಳೂ ಇವೆ. ಕೈಸರನಿಗೆ ಸೇರಿದ ವಿಷಯಗಳು ಯಾವುವು ಮತ್ತು ದೇವರಿಗೆ ಸೇರಿರುವ ವಿಷಯಗಳು ಯಾವುವು ಎಂಬುದನ್ನು ಕಂಡುಹಿಡಿಯುವ ಸಂಗತಿಯು ನಮ್ಮೆದುರಿಗಿದೆ.
“‘ಕೈಸರನಿಗೆ ತೆರಿಗೆ ಕೊಡುವುದು ಸರಿಯೊ ಸರಿಯಲ್ಲವೊ?’ ಎಂಬ ಪ್ರಶ್ನೆಯನ್ನು ಯೇಸುವಿಗೆ ಕೇಳಿದಾಗ, ಕೊಡಬೇಕೊ ಬೇಡವೊ ಎಂದು ಹೇಳುವ ಮೂಲಕ ಯೇಸು ಉತ್ತರಿಸಲಿಲ್ಲ ಎಂದು ನಾನು ಅವನಿಗೆ ತೋರಿಸಿದೆ. ಆತನಂದದ್ದು: ‘ತೆರಿಗೆ ಕೊಡುವ ನಾಣ್ಯವನ್ನು—ಒಂದು ರೋಮನ್ ದೀನಾರ—ನನಗೆ ತೋರಿಸಿರಿ.’ ಅವನು ಕೇಳಿದ್ದು: ‘ಈ ತಲೆಯೂ ಮುದ್ರೆಯೂ ಯಾರದ್ದು?’ ಅವರು ‘ಕೈಸರನದು,’ ಅಂದರು. ಬಳಿಕ ಅವನಂದದ್ದು: ‘ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ.’ (ಮತ್ತಾಯ 22:17-21) ಬೇರೊಂದು ಮಾತುಗಳಲ್ಲಿ, ಕೈಸರನಿಗೆ ತೆರಿಗೆಗಳನ್ನು ಕೊಡಿರಿ, ಯಾಕಂದರೆ ಕೈಸರನಿಂದ ಕೆಲವೊಂದು ಸೇವೆಗಳನ್ನು ನಾವು ಪಡೆಯುತ್ತೇವೆ ಮತ್ತು ಇವುಗಳಿಗಾಗಿ ತೆರಿಗೆಗಳನ್ನು ಯೋಗ್ಯವಾಗಿಯೆ ಕೊಡುತ್ತೇವೆ. ಯೆಹೋವನ ಸಾಕ್ಷಿಗಳು ತಮ್ಮ ತೆರಿಗೆಗಳನ್ನು ಕೊಡುತ್ತಾರೆ ಮತ್ತು ಯಾವುದು ಸರಕಾರಕ್ಕೆ ಯೋಗ್ಯವಾಗಿ ಸಲ್ಲಬೇಕೊ ಅದನ್ನು ಕೊಡದಿರುವುದರಿಂದ ಸರಕಾರವನ್ನು ವಂಚಿಸುವುದಿಲ್ಲ ಎಂದು ನಾನು ವಿವರಿಸಿದೆ.
“ಬಳಿಕ ನಾನು, ಯೆಹೋವನ ಸಾಕ್ಷಿಗಳು ತಮ್ಮ ಜೀವಕ್ಕಾಗಿ ಕೈಸರನಿಗೆ ಋಣಿಗಳೆಂದು ಎಣಿಸುವುದಿಲ್ಲ ಎಂದು ಹೇಳಿದೆ. ತಮ್ಮ ಆರಾಧನೆಯು ದೇವರಿಗೆ ಸಲ್ಲತಕ್ಕದೆಂಬುದನ್ನು ಅವರು ನಂಬುತ್ತಾರೆ, ಮತ್ತು ಇದನ್ನು ಅವರು ನ್ಯಾಯವಾಗಿಯೆ ಆತನಿಗೆ ಹಿಂದೆಸಲ್ಲಿಸುತ್ತಾರೆ. ಆದುದರಿಂದ ನಾವು ಈ ನಿಲುವನ್ನು ತೆಗೆದುಕೊಳ್ಳುವಾಗ, ಕೈಸರನಿಗಾಗಿ ಯಾವುದೆ ಅನಾದರವನ್ನು ಉದ್ದೇಶಿಸುವುದಿಲ್ಲ. ಕೈಸರನ ಎಲ್ಲ ನಿಯಮಗಳನ್ನು ನಾವು ಪಾಲಿಸುತ್ತೇವೆ, ಆದರೆ ಒಂದು ಘರ್ಷಣೆಯು ಇರುವಾಗ, ಮನುಷ್ಯರಿಗಿಂತಲೂ ಹೆಚ್ಚಾಗಿ, ಆಳುವವನಾದ ದೇವರಿಗೆ ವಿಧೇಯರಾಗಲು ನಾವು ಗೌರವಪೂರ್ವಕವಾಗಿ ಆದುಕೊಳ್ಳುತ್ತೇವೆ. ಆಗ ಪ್ರಶ್ನೆ ಕೇಳಿದ ಮನುಷ್ಯನು ಇಡೀ ಗುಂಪಿನ ಮುಂದೆ ಅಂದದ್ದು: ‘ನಾನು ಅದರೊಂದಿಗೆ ಸಮ್ಮತಿಸದೆ ಇರಲಾರೆ!’
“ನಮ್ಮ ಸಾರುವ ಚಟುವಟಿಕೆಯ ಕುರಿತ ಅನೇಕ ಪ್ರಶ್ನೆಗಳನ್ನೂ ನಾವು ಉತ್ತರಿಸಶಕ್ತರಾದೆವು. ಕೂಟದ ಅನಂತರ ಸದಸ್ಯರಲ್ಲಿ ಅನೇಕರು ಬಂದು ನಮ್ಮ ಕೈಕುಲುಕಿದರು—ಕುಟುಂಬವು ಬಲವಾದ ಸಮುದಾಯದ ತಳಪಾಯವೆಂಬುದಕ್ಕೆ—ನಮ್ಮೊಂದಿಗೆ ತಾವು ಪೂರ್ಣ ಸಹಮತದಲ್ಲಿದ್ದೇವೆಂದರು. ಆಮೇಲೆ ಪ್ರತಿಯೊಬ್ಬ ಸದಸ್ಯರಿಗೆ ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಬ್ರೋಷರನ್ನು ನಾವು ನೀಡಿದೆವು.
“ಈ ಕೂಟದ ಅನಂತರ, ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ. ಡೊಮಿಂಗಸ್ ನನಗೆ ಫೋನ್ ಮಾಡಿ, ನಮ್ಮ ನಂಬಿಕೆಗಳ ಕುರಿತು ಅವರಿಗೆ ಹೆಚ್ಚು ಪ್ರಶ್ನೆಗಳನ್ನು ಕೇಳಲಿಕ್ಕಿದ್ದುದರಿಂದ ತನ್ನ ಆಫೀಸಿಗೆ ಬರುವಿಯೊ ಎಂದು ಕೇಳಿದರು. ಹಲವಾರು ಶಾಸ್ತ್ರವಚನಗಳ ಮೇಲೆ ಒಂದು ಒಳ್ಳೆಯ ಚರ್ಚೆಯನ್ನು ನಾವು ಮಾಡಿದೆವು. ರಕ್ತದ ಕುರಿತ ನಮ್ಮ ನಿಲುವನ್ನು ನಾನು ಅವರಿಗೆ ವಿವರಿಸುವಂತೆ ಅವರು ವಿಶೇಷವಾಗಿ ಬಯಸಿದರು. ತಾವು ಸ್ವತಃ ರಕ್ತಪೂರಣವನ್ನು ತೆಗೆದುಕೊಳ್ಳರೆಂದು ಅವರು ತಾವಾಗಿಯೆ ನುಡಿದರು, ಮತ್ತು ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಎಂಬ ಬ್ರೋರ್ಷನಿಂದ ಕೊಟ್ಟ ಮಾಹಿತಿಯಿಂದ ಎಷ್ಟು ಪ್ರಭಾವಿತರಾದರೆಂದರೆ, ರಕ್ತದ ಕುರಿತ ನಮ್ಮ ನಿಲುವನ್ನು ಕ್ಲಬ್ ಸದಸ್ಯರಿಗೆ ತಿಳಿಸಲು ಪುನಃ ಬರುವಂತೆ ನನ್ನನ್ನು ಆಮಂತ್ರಿಸಿದರು. ನಾನು ಮತ್ತೊಬ್ಬ ಸಾಕ್ಷಿಯಾದ ಡಾನ್ ಡಾಲ್ರನ್ನು ಈ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಜೊತೆಗೂಡುವಂತೆ ಆಮಂತ್ರಿಸಿದೆ. ಸಾಕ್ಷಿಗಳಿಗೆ ಶಸ್ತ್ರಚಿಕಿತ್ಸೆಗಳಿಗೆ ಹೋಗಬೇಕಾದಾಗ ರಕ್ತದ ಕುರಿತು ಡಾಕ್ಟರರೊಂದಿಗೆ ಮಾತಾಡಲು ಇವರು ಆಸ್ಪತ್ರೆಗಳಿಗೆ ಹೋಗುತ್ತಿರುತ್ತಾರೆ. ಇಬ್ಬರೂ ಕೂಡಿ, ನಮ್ಮ ಶಾಸ್ತ್ರೀಯ ನಿಲುವನ್ನು ಸ್ಪಷ್ಟೀಕರಿಸಲು ಮತ್ತು ರಕ್ತಪೂರಣಕ್ಕೆ ಯಶಸ್ವಿಕರವಾದ ಬದಲಿಗಳನ್ನು ನೀಡಲು, ಡಾಕ್ಟರರೊಂದಿಗೆ ಮತ್ತು ಆಸ್ಪತ್ರೆಯ ಆಡಳಿತಗಾರರೊಂದಿಗೆ ನಾವು ಹೇಗೆ ಕಾರ್ಯನಡಿಸುತ್ತೇವೆಂಬುದನ್ನು ಕೂಲಂಕಷವಾಗಿ ವಿವರಿಸಿದೆವು.”—ಯಾಜಕಕಾಂಡ 17:10-12; ಅ. ಕೃತ್ಯಗಳು 15:19-21, 28, 29.
‘ನೀವು ನಿಮ್ಮ ಮಗನನ್ನು ಸಾಯಲು ಬಿಡುವಿರೆಂದು ನಿಮ್ಮರ್ಥವೊ?’
“ಆ ಕೂಟದ ಅನಂತರ ಒಬ್ಬ ಮಹನೀಯನು ಬಂದು ನನ್ನನ್ನು ಖಾಸಗಿಯಾಗಿ ಕೇಳಿದ್ದು: ‘ಒಂದುವೇಳೆ ನಿಮ್ಮ ಮಗನು ಅಪಘಾತಕ್ಕೊಳಗಾಗಿ ಅತಿರೇಕವಾಗಿ ರಕ್ತವನ್ನು ಸ್ರವಿಸುತ್ತಾ ತುರ್ತುಚಿಕಿತ್ಸೆಯ ಕೊಠಡಿಗೆ ತರಲ್ಪಟ್ಟಲ್ಲಿ, ಅವನನ್ನು ಸಾಯಲು ಬಿಡುವಿರೆಂದು ನಿಮ್ಮರ್ಥವೊ?’ ಅವನ ಚಿಂತೆಯಲ್ಲಿ ನಾನೂ ಭಾಗಿಯೆಂಬ ಆಶ್ವಾಸನೆಯಿತ್ತೆ, ಯಾಕಂದರೆ ನನಗೂ ಒಬ್ಬ ಮಗನಿದ್ದನು, 1988ರಲ್ಲಿ, ಲಾಕರ್ಬೀ, ಸ್ಕಾಟ್ಲೆಂಡ್ನ ವಿಮಾನ ಸ್ಫೋಟದಲ್ಲಿ ನಾನು ಅವನನ್ನು ಕಳೆದುಕೊಂಡಿದ್ದೆ. ಅವನ ಪ್ರಶ್ನೆಗೆ ಉತ್ತರದಲ್ಲಿ, ಮೊದಲಾಗಿ ನನ್ನ ಮಗನು ಸಾಯುವಂತೆ ನಾನು ಬಯಸೆನು ಎಂದು ಹೇಳಿದೆ.
“ನಾವು ವೈದ್ಯವಿರೋಧಿಗಳಲ್ಲ, ಚಿಕಿತ್ಸೆವಿರೋಧಿಗಳು ಅಥವಾ ಆಸ್ಪತ್ರೆವಿರೋಧಿಗಳಲ್ಲ. ಭಕ್ತಿಚಿಕಿತ್ಸಕರೂ ಅಲ್ಲ. ವೈದ್ಯಕೀಯ ವೃತ್ತಿಯ ಸೇವೆಗಳು ನಮಗೆ ಬೇಕು. ನಾವು ದೇವರಲ್ಲಿ ನಮ್ಮ ಭರವಸೆಯನ್ನಿಟ್ಟಿದ್ದೇವೆ ಮತ್ತು ರಕ್ತದ ಕುರಿತ ಆತನ ಮಾರ್ಗದರ್ಶನಗಳು ನಮ್ಮ ಬಾಳುವ ಹಿತಕ್ಕಾಗಿವೆಯೆಂಬ ದೃಢವಿಶ್ವಾಸ ನಮಗಿದೆ. ದೇವರು ಬೈಬಲಿನಲ್ಲಿ, ‘ನೀನು ನಡೆಯಬೇಕಾದ ಮಾರ್ಗದಲ್ಲಿ ನಿನ್ನನ್ನು ನಡೆಯಿಸುವವನಾಗಿ ನಿನಗೆ ಪ್ರಯೋಜನ ಮಾಡಿಕೊಳ್ಳುವಂತೆ ನಿನಗೆ ಕಲಿಸುವವ’ನಾಗಿ ವರ್ಣಿಸಲ್ಪಟ್ಟಿದ್ದಾನೆ. (ಯೆಶಾಯ 48:17, NW) ಆತನು ತನ್ನ ಮಗನಿಗೆ ಮೃತರನ್ನು ಪುನರುತ್ಥಾನಗೊಳಿಸುವ ಶಕ್ತಿಯನ್ನೂ ಕೊಟ್ಟಿದ್ದಾನೆ. ಯೇಸುವಂದದ್ದು: ‘ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನನ್ನು ನಂಬಿದವನು ಸತ್ತರೂ ಬದುಕುವನು; ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ. ಇದನ್ನು ನಂಬುತ್ತಿಯಾ?’—ಯೋಹಾನ 11:25, 26.
“ನಮ್ಮ ನಿಲುವು ಒಂದು ಮನಸ್ಸಾಕ್ಷಿಯ ವಿಷಯ ಮತ್ತು ಅದು ಒಪ್ಪಂದಮಾಡಲಾಗದ ವಿಷಯವೆಂಬುದನ್ನು ತಿಳಿದುಕೊಳ್ಳುವಂತೆ ಮಾತ್ರ ನಾವು ಡಾಕ್ಟರರನ್ನು ಕೇಳಿಕೊಳ್ಳುತ್ತೇವೆ. ವ್ಯಭಿಚಾರದ ಕುರಿತ ದೇವರ ನಿಯಮದಲ್ಲಿ ನಾವು ಹೇಗೆ ಒಪ್ಪಂದಮಾಡಿಕೊಳ್ಳಸಾಧ್ಯವಿಲ್ಲವೊ, ಹಾಗೆಯೇ ಈ ವಿಷಯದಲ್ಲೂ ನಾವು ಒಪ್ಪಂದಮಾಡಿಕೊಳ್ಳಲಾರೆವು. ನಾವು ದೇವರೊಂದಿಗೆ ಒಪ್ಪಂದಕ್ಕೆ ಪ್ರಯತ್ನಿಸಸಾಧ್ಯವಿಲ್ಲ ಮತ್ತು ‘ದೇವರೇ, ನಾನು ವ್ಯಭಿಚಾರಗೈಯಸಾಧ್ಯವಿರುವ ಯಾವುದೆ ಪರಿಸ್ಥಿತಿಗಳಿವೆಯೆ?’ ಎಂದು ಹೇಳಸಾಧ್ಯವಿಲ್ಲ. ಬಳಿಕ ನಾನು ಈ ಮನುಷ್ಯನಿಗೆ ಹೇಳಿದ್ದು: ‘ರಕ್ತಪೂರಣವನ್ನು ನಿರಾಕರಿಸುವ ಮೂಲಕ ನಾನು ನನ್ನ ಮಗನನ್ನು ಸಾಯುವಂತೆ ಬಿಡುವೆನೊ ಎಂದು ನೀವು ನನ್ನನ್ನು ಕೇಳಿದಿರಿ. ಸಲ್ಲತಕ್ಕ ಸಕಲ ಆದರದೊಂದಿಗೆ ನಾನು ಕೇಳಬಯಸುವುದೇನಂದರೆ, ಯಾವುದೇ ರಾಷ್ಟ್ರದ ಮಿಲಿಟರಿ ಸೇವೆಯಲ್ಲಿ ನಿಮ್ಮ ಮಗನು ಸಾಯುವಂತೆ ನೀವು ಬಿಟ್ಟುಕೊಡುವಿರೊ?’ ಅವನು ಕೂಡಲೆ ಮತ್ತು ಖಂಡಿತವಾಗಿ ಉತ್ತರಿಸಿದ್ದು: ‘ಹೌದು! ಯಾಕಂದರೆ ಅದು ಅವನ ಹಂಗು!’ ನಾನಂದದ್ದು: ‘ನೀವು ನಿಮ್ಮ ಮಗನನ್ನು ಸಾಯಲು ಬಿಡುವಿರಿ, ಯಾಕಂದರೆ ನೀವು ನಂಬುವ ಒಂದು ಧ್ಯೇಯಕ್ಕಾಗಿ ಅದಿರುತ್ತದೆ. ನನ್ನ ಮಗನೊಂದಿಗೂ ಅದೇ ಸುಯೋಗವನ್ನು ನನಗೆ ಅನುಮತಿಸಿರಿ.’
“ಇದೆಲ್ಲದರ ನಂತರದ ಒಂದು ಆಸಕ್ತಿಕರ ವಿಕಸನವು, ಕಾರ್ಯಕ್ರಮ ಅಧ್ಯಕ್ಷರಾದ ಶ್ರೀ. ಡೋಮಿಂಗಸ್ರು ನನ್ನನ್ನು ಮತ್ತು ನನ್ನ ಪತ್ನಿಯನ್ನು ಅವರೊಂದಿಗೆ ಮತ್ತು ಅವರ ಪತ್ನಿಯೊಂದಿಗೆ ಊಟಕ್ಕೆ ಆಮಂತ್ರಿಸಿದುದೇ. ತಮ್ಮ ಪತ್ನಿ ಯೆಹೋವನ ಸಾಕ್ಷಿಗಳ ಕುರಿತ ತಪ್ಪುತಿಳುವಳಿಕೆ ಮತ್ತು ತಪ್ಪುಗ್ರಹಿಕೆಗೆ ಬಲಿಯಾಗಿದ್ದರೆಂದು ಅವರೆಣಿಸಿದರು. ಅವರೆಣಿಕೆ ಸರಿಯಾಗಿತ್ತು. ಆಕೆಗೆ ತಪ್ಪುತಿಳಿವಳಿಕೆಯಿತ್ತು. ನಾವು ಸಂಜೆಯನ್ನು ಆನಂದದಿಂದ ಕಳೆದೆವು, ಮತ್ತು ಅವರ ಪತ್ನಿ ನಮ್ಮ ಕುರಿತು ಮತ್ತು ನಮ್ಮ ಕೆಲಸದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳಿ, ನಾವದನ್ನು ಸವಿಸ್ತಾರವಾಗಿ ವಿವರಿಸುವಂತೆ ಅನುಮತಿಸಿದರು. ಮರುದಿನ ಅವರು ನನಗೆ ಫೋನ್ ಮಾಡಿ, ನನ್ನ ಮತ್ತು ನನ್ನ ಪತ್ನಿಯ ಭೇಟಿಯನ್ನು ಅವರ ಪತ್ನಿ ಪೂರ್ತಿಯಾಗಿ ಸಂತೋಷಿಸಿದರೆಂದೂ ನಾವು ಅತ್ಯಂತ ಸಜ್ಜನರೆಂದೆಣಿಸಿದರೆಂದೂ ಹೇಳಿದರು.
“ನಾನು ಶ್ರೀ. ಡೋಮಿಂಗಸ್ರನ್ನು ಕ್ರಮವಾಗಿ ಭೇಟಿಮಾಡುವುದನ್ನು ಮುಂದುವರಿಸಿದ್ದೇನೆ ಮತ್ತು ಅವರು ಬೈಬಲಿನಲ್ಲಿ ತೀವ್ರಾಸಕ್ತಿಯನ್ನು ತೋರಿಸುತ್ತಾರೆ. ಅವರು ನನಗೆ ಹೀಗೆ ಹೇಳಿದ್ದಾರೆ: ‘ಗ್ರೇಟರ್ ಸಾನ್ ಫ್ರಾನ್ಸಿಸ್ಕೊ ಬೇ ಕ್ಷೇತ್ರದಲ್ಲಿನ ಎಲ್ಲ ರೋಟರಿ ಕ್ಲಬ್ಗಳ ಕಾರ್ಯಕ್ರಮ ಅಧ್ಯಕ್ಷರನ್ನು ಸಂಪರ್ಕಿಸಿ, ನೀವು ನಮ್ಮ ಕ್ಲಬ್ನಲ್ಲಿ ಕೊಟ್ಟಂತಹದ್ದೇ ಭಾಷಣವನ್ನು ಅವರ ಕ್ಲಬ್ನಲ್ಲೂ ನೀಡುವಂತೆ ನಿಮ್ಮನ್ನು ಉತ್ತೇಜಿಸಲು ನಾನು ಹಿಂಜರಿಯುವುದಿಲ್ಲ. ಯಾರಾದರೂ ಕೇಳಿದರೆ ನನ್ನ ಹೆಸರನ್ನು ನೀವು ಉಪಯೋಗಿಸಬಹುದು, ಮತ್ತು ನನ್ನನ್ನು ಸಂಪರ್ಕಿಸಿದಾಗ, ಅತಿಥಿ ಭಾಷಣಕಾರನೋಪಾದಿ ನಿನಗೆ ಉತ್ಕೃಷ್ಟ ಶಿಫಾರಸ್ಸು ಕೊಡಲು ನಾನು ಸಂತೋಷಿಸುವೆ.’
“ರೋಟರಿ ಕ್ಲಬ್ಗಳು ಅಂತಾರಾಷ್ಟ್ರೀಯವಾಗಿವೆ. ಅಮೆರಿಕದಲ್ಲಿರುವ ಕ್ಲಬ್ಬುಗಳು, ಹಾಗೂ ಲೋಕದಾದ್ಯಂತ ಇರುವ ಇತರ ಕ್ಲಬ್ಗಳೂ ಯೆಹೋವನ ಸಾಕ್ಷಿಗಳ ಸಾದರಗೊಳಿಸುವಿಕೆಗಳಿಗೆ ತಮ್ಮ ದ್ವಾರಗಳನ್ನು ತೆರೆಯಲು ಒಂದುವೇಳೆ ಸಾಧ್ಯವಿರಬಹುದೆ?”
[ಪಾದಟಿಪ್ಪಣಿ]
a 1989ರಲ್ಲಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟದ್ದು.
[ಪುಟ 28 ರಲ್ಲಿರುವ ಚಿತ್ರ]
ಶ್ರೀ. ರೆನನ್ ಡೊಮಿಂಗಸ್, ಎಡಕ್ಕೆ, ಮತ್ತು ಸಹೋದರ ಅರ್ನೆಸ್ಟ್ ಗ್ಯಾರೆಟ್