ಹುಲಿ ಬಂತು! ಹುಲಿ!
ಭಾರತದ ಎಚ್ಚರ! ಸುದ್ದಿಗಾರರಿಂದ
‘ನಾ ನೊಮ್ಮೆ ಬೆಟ್ಟದ ಅಗಲ ಕಿರಿದಾದ ಬೆನ್ನೇಣಿನ ಮೇಲೆ ನಡೆಯುತ್ತಿದ್ದೆ,’ ಎಂದು ಜ್ಞಾಪಿಸಿಕೊಳ್ಳುತ್ತಾರೆ, ನೇಪಾಳದ ರಾಯಲ್ ಚಿಟ್ವಾನ್ ನ್ಯಾಷನಲ್ ಪಾರ್ಕ್‌ನಲ್ಲಿ ಅನೇಕ ವರ್ಷಕಾಲ ಹುಲಿಯನ್ನು ಗಮನಿಸಿರುವ ಡಾ. ಚಾರ್ಲ್ಸ್ ಮೆಕ್‌ಡೂಗಲ್. ‘ನಾನು ನಡೆಯುತ್ತಿದ್ದಾಗ, ಒಂದು ಹುಲಿ ನನ್ನ ಎದುರು ದಿಕ್ಕಿನಿಂದ ಬರುತ್ತಿತ್ತು. ನಾವು ಸುಮಾರು ತುದಿಯಲ್ಲಿ ಸಂಧಿಸಿದೆವು; ನಮ್ಮ ಮಧ್ಯೆ ಸುಮಾರು 15 ಹೆಜ್ಜೆಗಳ ಅಂತರವಿತ್ತು.’ ಡಾ. ಮೆಕ್‌ಡೂಗಲ್ ಅಲುಗಾಡದೆ ನಿಂತರು. ಹುಲಿಯನ್ನು ದಿಟ್ಟಿಸಿ ನೋಡುವ ಬದಲು—ಹುಲಿ ಇದನ್ನು ಪ್ರತಿಭಟನೆಯಾಗಿ ತೆಗೆದುಕೊಳ್ಳುತ್ತದೆ—ಅವರು ಹುಲಿಯ ಭುಜದ ಮೇಲಕ್ಕೆ ತಮ್ಮ ದೃಷ್ಟಿಹಾಯಿಸಿದರು. ಹುಲಿಯು ಮುದುರಿ ಕುಳಿತರೂ ಆಕ್ರಮಣಮಾಡುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಅನೇಕ ದೀರ್ಘ ನಿಮಿಷಗಳು ಕಳೆದ ಬಳಿಕ, ಡಾ. ಮೆಕ್‌ಡೂಗಲ್ ಕೆಲವು ಹೆಜ್ಜೆ ಹಿಂದಕ್ಕೆ ಸರಿದರು. ‘ಆ ಬಳಿಕ ಹಿಂದೆ ತಿರುಗಿ ನಾನು ಎಲ್ಲಿಂದ ಬಂದೆನೊ ಅಲ್ಲಿಗೆ ನಡೆದುಕೊಂಡು ಹೋದೆ,’ ಎನ್ನುತ್ತಾರೆ ಅವರು.
ಈ ಶತಮಾನದ ಆರಂಭದಲ್ಲಿ, ಅವುಗಳ ನಾಡಾದ ಏಷಿಯದಲ್ಲಿ, ಭಾರತದ ಸುಮಾರು 40,000ವನ್ನು ಸೇರಿಸಿ, 1,00,000 ಹುಲಿಗಳಿದ್ದವು. ಆದರೆ 1973ರೊಳಗೆ, ಈ ಘನವಾದ ಪ್ರಾಣಿಗಳ ಲೋಕಸಂಖ್ಯೆಯು, ಮುಖ್ಯವಾಗಿ ಬೇಟೆಯಾಡಿ ಕೊಂದಿರುವ ಫಲವಾಗಿ, 4,000ಕ್ಕೂ ಕೆಳಗಿಳಿದಿತ್ತು. ಬೆಕ್ಕಿನ ಜಾತಿಯಲ್ಲಿ ಅತಿ ದೊಡ್ಡದಾದ ಹುಲಿಯು, ಮನುಷ್ಯನಿಂದ ನಿರ್ನಾಮವಾಗುವ ಅಪಾಯಕ್ಕೊಳಗಾಯಿತು. ಆದರೆ ಹುಲಿಯು ಮನುಷ್ಯರಿಗೆ ಅಪಾಯಕಾರಿಯೊ? ಈ ಮಹಾ ಬೆಕ್ಕು ಎಂತಹ ರೀತಿಯದ್ದು? ನಿರ್ನಾಮವಾಗುವುದರಿಂದ ಅದನ್ನು ರಕ್ಷಿಸುವ ಪ್ರಯತ್ನಗಳು ಸಫಲಗೊಂಡಿವೆಯೊ?
ಹುಲಿ ಕುಟುಂಬ ಜೀವನ
ವರ್ಷಗಳ ತಾಳ್ಮೆಯ ಅವಲೋಕನವು, ಪ್ರಕೃತಿ ಶಾಸ್ತ್ರಜ್ಞರಿಗೆ ಹುಲಿಯ ಜೀವನದ ಕುರಿತು ಹೆಚ್ಚು ಸ್ಪಷ್ಟವಾದ ಅಭಿಪ್ರಾಯವನ್ನು ಕೊಟ್ಟಿದೆ. ನಾವು ಉತ್ತರ ಭಾರತದ ರಣತಂಬೋರಿನ ಸುಂದರ ಕಾಡುಗಳಲ್ಲಿ ಒಂದು ಪ್ರತಿನಿಧಿರೂಪದ ಹುಲಿ ಕುಟುಂಬವನ್ನು ನೋಡುತ್ತಿದ್ದೇವೆಂದು ಭಾವಿಸೋಣ. ಗಂಡುಹುಲಿಯು ಅದರ ಮೂಗಿನಿಂದ ಬಾಲದ ತುದಿಯ ವರೆಗೆ ಹೆಚ್ಚುಕಡಮೆ 3 ಮೀಟರ್‌ಗಳಷ್ಟು ಉದ್ದವಿದ್ದು, ಸುಮಾರು 200 ಕಿಲೊಗ್ರಾಮ್ ತೂಕವುಳ್ಳದ್ದಾಗಿದೆ. ಅದರ ಜೊತೆಯು ಸುಮಾರು 2.7 ಮೀಟರುಗಳಷ್ಟು ಉದ್ದವೂ 140 ಕಿಲೊಗ್ರಾಮ್ ತೂಕದ್ದೂ ಆಗಿದೆ.a ಒಂದು ಗಂಡು, ಎರಡು ಹೆಣ್ಣು ಮರಿಗಳು, ಹೀಗೆ ಮೂರು ಹುಲಿಮರಿಗಳಿವೆ.
ಈ ಕಾಡುಗಳಲ್ಲಿ ಶಾಖದ ಮಟ್ಟವು 45 ಡಿಗ್ರಿ ಸೆಲ್ಸಿಯಸನ್ನು ಮೀರಿಹೋಗಸಾಧ್ಯವಿದೆ. ಆದರೆ ಈ ಹುಲಿ ಕುಟುಂಬವು ಎಲೆತುಂಬಿದ ಮರಗಳಡಿಯಲ್ಲಿ ನೆರಳನ್ನು ಕಂಡುಕೊಳ್ಳುತ್ತದೆ. ಮತ್ತು ಅವು ಯಾವಾಗಲೂ ಹತ್ತಿರವಿರುವ ಕೆರೆಗಳ ತಣ್ಣಗಿನ ನೀರಿನಲ್ಲಿ ಒಂದು ಮುಳುಗಿನಲ್ಲಿ ಆನಂದಿಸಬಲ್ಲವು. ಈಜಾಡುವ ಬೆಕ್ಕುಗಳೊ? ಹೌದು, ಹುಲಿಗಳಿಗೆ ನೀರೆಂದರೆ ತುಂಬ ಇಷ್ಟ! ವಾಸ್ತವವೇನಂದರೆ, ಅವುಗಳು ವಿಶ್ರಮಿಸದೆ ಐದಕ್ಕೂ ಹೆಚ್ಚು ಕಿಲೊಮೀಟರ್‌ಗಳಷ್ಟು ಈಜಾಡುವವೆಂದು ತಿಳಿದುಬಂದಿದೆ.
ಸೂರ್ಯನ ಬೆಳಕು ಮರಗಳನ್ನು ಹಾದುಹೋಗಿ, ಹುಲಿಗಳ ಮಿರುಗುವ ಕಿತ್ತಿಳೆ ಬಣ್ಣದ ಹೊರಚರ್ಮಗಳ ಮೇಲೆ ಬೀಳಲಾಗಿ, ಅವು ಹೊಳೆಯುವಂತೆ ತೋರುತ್ತವೆ. ಕಪ್ಪು ಪಟ್ಟೆಗಳು ಥಳಥಳಿಸುತ್ತವೆ ಮತ್ತು ಅವುಗಳ ತೃಣಮಣಿ ಕಣ್ಣುಗಳ ಮೇಲಿರುವ ಬಿಳಿ ಮಚ್ಚೆಗಳು ಪ್ರಜ್ವಲವಾಗಿ ಜ್ವಲಿಸುತ್ತವೆ. ನಾವು ಆ ಮೂರು ಮರಿಗಳನ್ನು ತುಸು ಸಮಯ ನೋಡಿದ ಬಳಿಕ, ಅವುಗಳ ವಿಭಿನ್ನ ಪಟ್ಟೆಗಳು ಮತ್ತು ಮುಖದಲ್ಲಿನ ಗುರುತುಗಳ ಮೂಲಕ ಅವುಗಳನ್ನು ಒಂದರಿಂದ ಇನ್ನೊಂದನ್ನು ಪ್ರತ್ಯೇಕಿಸುವುದು ನಮಗೆ ಸುಲಭವಾಗುತ್ತದೆ.
ಹುಲಿಯಾಗಿ ಬೆಳೆಯುವುದು
ತಾಯಿ ಹುಲಿ ಬಸುರಿಯಾಗಿದ್ದಾಗ, ಅದು ದಟ್ಟ ಸಸ್ಯಾವೃತವಾಗಿ ಒಳ್ಳೆಯದಾಗಿ ಮರೆಯಾಗಿರುವ ಒಂದು ಯೋಗ್ಯ ಗುಹೆಯನ್ನು ಕಂಡುಹಿಡಿಯಿತು. ಅಲ್ಲಿಂದ ಕುಟುಂಬವು ಈಗ, ಇತರ ಪ್ರಾಣಿಗಳನ್ನು ಆಕರ್ಷಿಸುವ ಒಂದು ನೀರುಗಂಡಿಯಿರುವ ಕೆಳಬಯಲಿನ ದೃಶ್ಯದಲ್ಲಿ ಆನಂದಿಸುತ್ತದೆ. ಆ ಹೆಣ್ಣುಹುಲಿಯು ಈ ಸ್ಥಳವನ್ನು ಆರಿಸಿದ್ದು, ಅದು ತನ್ನ ಮರಿಗಳಿಂದ ಹೆಚ್ಚು ದೂರ ಹೋಗದೆ ಆಹಾರಕ್ಕಾಗಿ ಅಲ್ಲಿಯೇ ಬೇಟೆಯಾಡಸಾಧ್ಯವಾಗುವಂತೆಯೇ.
ಹುಟ್ಟಿನಿಂದ ಹಿಡಿದು ಈ ಮರಿಗಳಿಗೆ ತುಂಬ ಗಮನವನ್ನು ಕೊಡಲಾಯಿತು. ಅವುಗಳ ಶೈಶವದಲ್ಲೆಲ್ಲ ಅವುಗಳ ತಾಯಿ, ತಾನು ಮೆಲ್ಲನೆ ಮೆಲುನುಡಿಯುತ್ತಿರುವಾಗ, ಅವುಗಳನ್ನು ತನ್ನ ಮುಂಗಾಲುಗಳಿಂದ ತಬ್ಬಿ, ಮೂಗು ಒತ್ತಿ, ನೆಕ್ಕುತ್ತದೆ. ಮರಿಗಳು ದೊಡ್ಡವಾದಾಗ, ಅವು ಕಣ್ಣುಮುಚ್ಚಾಲೆ ಆಡಿ ಕೃತಕ ಹೋರಾಟಗಳನ್ನು ಮಾಡಲಾರಂಭಿಸಿದವು. ಪರ್‌ಗುಟ್ಟುವುದು ಹುಲಿ ಮರಿಗಳಿಗೆ ಅಸಾಧ್ಯವಾದರೂ, ಸುಮಾರು ಒಂದು ವರ್ಷ ಪ್ರಾಯದಿಂದ ತೊಡಗಿ, ಅವು ತಮ್ಮ ತಾಯಿ ತುಸು ಸಮಯ ಇಲ್ಲದಿದ್ದು, ಬಳಿಕ ಹಿಂದಿರುಗಿ ಬರುವಾಗ ದೊಡ್ಡ ಶಬ್ದದಿಂದ ನಿಶ್ವಾಸಬಿಡುತ್ತವೆ.
ಮರಿಗಳು ತಮ್ಮ ತಾಯಿಯೊಂದಿಗೆ ನೀರಿನಲ್ಲಿ ಈಜಿ, ಆಡಲು ತುಂಬ ಇಷ್ಟಪಡುತ್ತವೆ. ಹೆಣ್ಣುಹುಲಿ, ಕೆರೆಯ ಅಂಚಿನಲ್ಲಿ ನೀರಿನಲ್ಲಿ ತನ್ನ ಬಾಲವನ್ನಿಟ್ಟುಕೊಂಡು ಕುಳಿತಿರುವುದನ್ನು ಚಿತ್ರಿಸಿಕೊಳ್ಳಿರಿ. ಆಗಿಂದಾಗ್ಗೆ, ಅದು ತನ್ನ ಬಾಲವನ್ನು ಎಳೆದು ತನ್ನ ಬಿಸಿ ದೇಹಕ್ಕೆ ಒಂದು ತಣ್ಣಗಿನ ವೃಷ್ಟಿಸ್ನಾನವನ್ನು ಕೊಟ್ಟುಕೊಳ್ಳುತ್ತದೆ. ಮತ್ತು ಬಾಲಗಳ ವಿಷಯವಾಗಿ ಮಾತಾಡುವುದಾದರೆ, ಮರಿಗಳು, ಅವುಗಳ ತಾಯಿ ಪಕ್ಕದಿಂದ ಪಕ್ಕಕ್ಕೆ ಬಾಲವನ್ನು ಬೀಸುವಾಗ, ಅದನ್ನು ಹಿಡಿಯಲು ಪ್ರಯತ್ನಿಸುವುದರಲ್ಲಿ ಎಂದಿಗೂ ಆಯಾಸಗೊಳ್ಳುವುದಿಲ್ಲ. ಹೀಗೆ ಮಾಡುವಾಗ, ಹೆಣ್ಣುಹುಲಿ ತನ್ನ ಮರಿಗಳೊಂದಿಗೆ ಆಡುತ್ತಿರುವುದು ಮಾತ್ರವಲ್ಲ; ಥಟ್ಟನೆ ಮೇಲೆರಗುವ ಚಳಕವನ್ನೂ ಅದು ಅವುಗಳಿಗೆ ಕಲಿಸುತ್ತದೆ. ಇದನ್ನು ಅವು ಮುಂದೆ, ಬೇಟೆಯಾಡಲು ಆರಂಭಿಸುವಾಗ ಉಪಯೋಗಿಸುವುವು. ಮರಿಗಳಿಗೆ ಮರಗಳನ್ನು ಹತ್ತುವುದೂ ಇಷ್ಟ. ಆದರೆ ಸುಮಾರು 15 ತಿಂಗಳುಗಳ ಪ್ರಾಯದೊಳಗೆ, ಅವು ಮರಗಳನ್ನು ಸುಲಭವಾಗಿ ಹತ್ತಲು ತೀರ ದೊಡ್ಡವೂ ಭಾರವಾಗಿರುವುವುಗಳೂ ಆಗಿರುತ್ತವೆ.
ತಂದೆಯ ಪಾತ್ರ
ತಾಯಿ ಹುಲಿ ಒಂಟಿಯಾಗಿಯೇ ಮರಿಗಳನ್ನು ಬೆಳೆಸುತ್ತದೆ, ಸಂದರ್ಭಕೊಟ್ಟಲ್ಲಿ ಗಂಡುಹುಲಿ ಮರಿಗಳನ್ನು ಕೊಲ್ಲುತ್ತದೆ ಎಂದು, ಇತ್ತೀಚಿನ ವರೆಗೆ ಅನೇಕರು ನಂಬುತ್ತಿದ್ದರು. ಆದರೆ ಹೆಚ್ಚಿನ ಹುಲಿಗಳ ಸಂಬಂಧದಲ್ಲಿ ವಿಷಯವು ಹೀಗಿರುವುದಿಲ್ಲ. ತಂದೆ ಹುಲಿಯು ದೀರ್ಘಾವಧಿಗಳ ವರೆಗೆ ಕಾಡಿನೊಳಗೆ, 50 ಚದರ ಕಿಲೊಮೀಟರ್‌ಗಳ ತನ್ನ ಪ್ರದೇಶದಲ್ಲಿ ತಿರುಗುತ್ತ ಹೋಗುತ್ತದೆಂಬುದು ನಿಜ. ಆದರೆ ಅದು ತನ್ನ ಕುಟುಂಬಕ್ಕೂ ಭೇಟಿಕೊಡುತ್ತದೆ. ಮತ್ತು ಹಾಗೆ ಭೇಟಿಕೊಡುವಾಗ ಅದು, ಬೇಟೆಯಲ್ಲಿ ಹೆಣ್ಣುಹುಲಿ ಮತ್ತು ಮರಿಗಳನ್ನು ಜೊತೆಗೂಡಬಹುದು ಮತ್ತು ಕೊಂದ ಪ್ರಾಣಿಯನ್ನು ಅವುಗಳೊಂದಿಗೆ ಹಂಚಿಕೊಳ್ಳಲೂಬಹುದು. ಹೆಚ್ಚು ಮುನ್ನುಗ್ಗುವ ಪ್ರವೃತ್ತಿಯ ಗಂಡುಮರಿ ತಿನ್ನುವ ತನ್ನ ಸರದಿಯನ್ನು ಮೊದಲು ತೆಗೆದುಕೊಳ್ಳಬಹುದು. ಆದರೆ ಅದು ದುರಾಸೆಯಿಂದ ತನ್ನ ತಂಗಿಯರನ್ನು ಹೆಚ್ಚು ಸಮಯ ದೂರವಿರಿಸುವುದಾದರೆ, ಅದರ ತಾಯಿ, ಹೆಣ್ಣುಮರಿಗಳಿಗೆ ಔತಣದಲ್ಲಿ ಸರಿಯಾದ ಪಾಲು ದೊರೆಯುವಂತೆ, ಅದನ್ನು ಮೆತ್ತಗೆ ತಿವಿಯುತ್ತದೆ ಅಥವಾ ಮುಂಗಾಲಿನಿಂದ ಹೊಡೆಯುವುದೂ ಉಂಟು.
ಮರಿಗಳು ತಮ್ಮ ದೊಡ್ಡಶರೀರದ ತಂದೆಯೊಂದಿಗೆ ಆಡುವುದರಲ್ಲಿ ಆನಂದಿಸುತ್ತವೆ. ಇದಕ್ಕೆ ಅಚ್ಚುಮೆಚ್ಚಿನ ಒಂದು ಸ್ಥಳವು ಹತ್ತಿರದ ನೀರುಗಂಡಿಯೇ. ತಂದೆ ಹುಲಿ, ತಲೆ ಮಾತ್ರ ಮುಳುಗದಂತೆ ನೋಡಿಕೊಂಡು ನೀರಿನಲ್ಲಿ ಅಂಗಾತ ಮಲಗಿರುತ್ತದೆ. (ಹುಲಿಗಳಿಗೆ ತಮ್ಮ ಕಣ್ಣುಗಳಿಗೆ ನೀರು ಚಿಮ್ಮಿಸಿಕೊಳ್ಳುವುದು ಇಷ್ಟವಿಲ್ಲ!) ಬಳಿಕ ಅದು ತನ್ನ ಮರಿಗಳು ತನ್ನನ್ನು ಮೂಗಿನಿಂದ ಉಜ್ಜುವಂತೆ ಬಿಡುವಾಗ ಅದು ಅವುಗಳ ಮುಖವನ್ನು ನೆಕ್ಕುತ್ತದೆ. ಬಲವಾದ ಕುಟುಂಬ ಅಂಟಿಕೆಯಿದೆಯೆಂಬುದು ಸ್ಪಷ್ಟ.
ನರಭಕ್ಷಕಗಳೊ?
ಪುಸ್ತಕಗಳೂ ಚಲನ ಚಿತ್ರಗಳೂ ಅನೇಕ ವೇಳೆ ಹುಲಿಗಳನ್ನು ಭಯಂಕರ, ಆಕ್ರಮಣಶೀಲ ಪ್ರಾಣಿಗಳೆಂದು, ಸುಳಿವು ಕೊಡದೆ ಮನುಷ್ಯರನ್ನು ಬೆನ್ನಟ್ಟಿ, ಮೇಲೆಬಿದ್ದು, ತದನಂತರ ಗಾಯಗೊಳಿಸಿ ತಿನ್ನುವವುಗಳೆಂದು ಚಿತ್ರಿಸುತ್ತವೆ. ಇದು ನಿಶ್ಚಯ ಸತ್ಯವಲ್ಲ. ಎಲ್ಲ ಹುಲಿಗಳು ನರಭಕ್ಷಕಗಳಲ್ಲ. ಸಾಮಾನ್ಯವಾಗಿ, ಒಂದು ಹುಲಿಯು ಕಾಡಿನಲ್ಲಿ ಒಬ್ಬ ಮನುಷ್ಯನನ್ನು ನೋಡುವುದಾದರೆ, ಅದು ಸದ್ದುಮಾಡದೆ ಹೋಗಿಬಿಡಲು ಇಷ್ಟಪಡುತ್ತದೆ. ಆಸಕ್ತಿಕರವಾಗಿ, ಮಾನವ ವಾಸನೆ ಹುಲಿಯ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲವೆಂದು ತೋರಿಬರುತ್ತದೆ.
ಆದರೂ, ಕೆಲವು ಸನ್ನಿವೇಶಗಳಲ್ಲಿ ಹಸಿದಿರುವ ಒಂದು ಹುಲಿಯು ನಿಶ್ಚಯವಾಗಿಯೂ ಅಪಾಯಕಾರಿಯಾಗಿರಬಲ್ಲದು. ಮುದಿಪ್ರಾಯದ ಕಾರಣ ಅದರ ಹಲ್ಲುಗಳು ನಷ್ಟವಾಗಿರುವಲ್ಲಿ ಅಥವಾ ಅದು ಜನರಿಂದ ಗಾಯಗೊಂಡಿರುವಲ್ಲಿ, ಅದಕ್ಕೆ ವಾಡಿಕೆಯಂತೆ ಬೇಟೆಯಾಡುವುದು ಅಸಾಧ್ಯವಾದೀತು. ಹಾಗೆಯೇ, ಮಾನವ ವಸತಿಯು ಹುಲಿಗಳ ವಾಸಸ್ಥಾನವನ್ನು ಅತಿಕ್ರಮಿಸುವಲ್ಲಿ, ಹುಲಿಗಳ ಸ್ವಾಭಾವಿಕ ಆಹಾರಕ್ಕೆ ಕೊರತೆ ಬರಬಹುದು. ಈ ರೀತಿಯ ಕಾರಣಗಳಿಗಾಗಿ, ಭಾರತದಲ್ಲಿ ಒಂದು ವರ್ಷಕ್ಕೆ ಸುಮಾರು 50 ಜನರು ಹುಲಿಗಳಿಂದ ಕೊಲ್ಲಲ್ಪಡುತ್ತಾರೆ. ಆದರೆ ಹಾವುಗಳಿಂದ ಕೊಲ್ಲಲ್ಪಡುವವರಿಗಿಂತ ಇದು ನೂರು ಪಾಲು ಕಡಮೆ. ಹುಲಿ ಆಕ್ರಮಣಗಳು ಮುಖ್ಯವಾಗಿ ಗಂಗಾ ನದೀಮುಖಜ ಭೂಮಿಯ ಜೌಗುಪ್ರದೇಶಗಳಲ್ಲಿ ನಡೆಯುತ್ತವೆ.
ಡಾ. ಮೆಕ್‌ಡೂಗಲ್‌ರಿಗನುಸಾರ, ಹುಲಿಗಳು ಹೆಚ್ಚಿನ ಜನರು ಭಾವಿಸುವಷ್ಟು ಅಪಾಯಕಾರಿಗಳಾಗಿರುವುದಿಲ್ಲ. ಸಮೀಪ ಕ್ಷೇತ್ರದಲ್ಲಿ ಎದುರು ಬಂದು ಹುಲಿಯನ್ನು ಬೆಚ್ಚಿಬೀಳಿಸುವುದು ಆಕ್ರಮಣವನ್ನು ಪ್ರಚೋದಿಸಬಹುದಾದರೂ, “ಹುಲಿಯು ಅತಿ ಶಾಂತ, ದುಡುಕದ ಮತ್ತು ಸಮಾಹಿತವಾದ ಒಂದು ಪ್ರಾಣಿ,” ಎನ್ನುತ್ತಾರೆ ಅವರು. “ಸಾಮಾನ್ಯವಾಗಿ, ನೀವು ಒಂದು ಹುಲಿಯನ್ನು, ಸುಮಾರು ಹತ್ತಿರ ಕ್ಷೇತ್ರದಿಂದ ಸಂಧಿಸುವಲ್ಲಿಯೂ ಅದು ಆಕ್ರಮಣಮಾಡದು.”
ಹುಲಿಗಳ ಮಧ್ಯೆ ಆಕ್ರಮಣ ವಿರಳ. ಉದಾಹರಣೆಗೆ, ಒಂದು ಎಳೆಯ ಹುಲಿಯು ಅಲೆದಾಡುತ್ತ ಇನ್ನೊಂದು ಹುಲಿಯ ಕ್ಷೇತ್ರದೊಳಕ್ಕೆ ಹೋಗಿ ಅಲ್ಲಿಯ ನಿವಾಸಿಯಾಗಿರುವ ಒಂದು ಗಂಡುಹುಲಿಯನ್ನು ಸಂಧಿಸಬಹುದು. ಆಳವಾದ ಗುರ್ರೆನ್ನುವಿಕೆಗಳು, ರಕ್ತ ಹೆಪ್ಪುಗಟ್ಟಿಸುವ ಗರ್ಜನೆಗಳು, ಮತ್ತು ಭಯಂಕರವಾದ ಮೂಗು-ಮೂಗು ತಾಗಿಸಿದ ಗುರುಗುಟ್ಟುವಿಕೆಗಳು ಸಂಭವಿಸುತ್ತವೆ. ಆದರೆ ಹೆಚ್ಚು ಪ್ರಾಯದ ಗಂಡು, ತನ್ನ ಶ್ರೇಷ್ಠತೆಯನ್ನು ತೋರಿಸುವಲ್ಲಿ, ಎಳೆಯ ಹುಲಿಯು ಸಾಮಾನ್ಯವಾಗಿ ಅಧೀನತೆಯ ಸೂಚನೆಯಾಗಿ, ಅಂಗಾತ ಹೊರಳಿ ಮುಂಗಾಲುಗಳನ್ನು ಮೇಲಕ್ಕೆತ್ತುವಾಗ ಮುಕಾಬಿಲೆ ಮುಗಿಯುತ್ತದೆ.
ಮಹಾ ಬೆಕ್ಕಿನ ಭವಿಷ್ಯತ್ತು
ಹುಲಿಯಿಂದ ಅಪಾಯಕ್ಕೊಳಗಾಗುವ ಬದಲು, ಮನುಷ್ಯನೇ ಹುಲಿಗಿರುವ ಏಕಮಾತ್ರ ನಿಜ ಅಪಾಯವಾಗಿ ಪರಿಣಮಿಸಿದ್ದಾನೆ. ಪ್ರಸ್ತುತ, ಹುಲಿಯನ್ನು ನಿರ್ನಾಮವಾಗುವುದರಿಂದ ರಕ್ಷಿಸುವರೆ ಪ್ರಯತ್ನಗಳು ನಡೆಯುತ್ತಿವೆ. ಏಷಿಯದ ಅನೇಕ ದೇಶಗಳು ಹುಲಿ ಅಭಯಾರಣ್ಯಗಳನ್ನು ಸ್ಥಾಪಿಸಿವೆ. 1973ರಲ್ಲಿ ಪ್ರಾಜೆಕ್ಟ್ ಟೈಗರ್ ಎಂಬ ಒಂದು ವಿಶೇಷ ಪ್ರಯತ್ನವೊಂದನ್ನು ಉತ್ತರ ಭಾರತದ ಕಾರ್ಬೆಟ್ ನ್ಯಾಷನಲ್ ಪಾರ್ಕ್‌ನಲ್ಲಿ ಆರಂಭಿಸಲಾಯಿತು. ಪ್ರಾಜೆಕ್ಟ್ ಟೈಗರ್‌ಗಾಗಿ ಹಣ ಮತ್ತು ಸಾಮಾನು ಸರಂಜಾಮು ಲೋಕದ ಎಲ್ಲ ಕಡೆಗಳಿಂದ ಬರತೊಡಗಿತು. ಕೊನೆಗೆ, ಭಾರತದಲ್ಲಿ ಒಟ್ಟು 28,000ಕ್ಕೂ ಹೆಚ್ಚು ಚದರ ಕಿಲೋಮೀಟರ್‌ಗಳ ಕ್ಷೇತ್ರದಲ್ಲಿ, 18 ಹುಲಿ ಅಭಯಾರಣ್ಯಗಳನ್ನು ಬದಿಗಿರಿಸಲಾಯಿತು. 1978ರೊಳಗೆ ಹುಲಿಗಳನ್ನೂ ಅಪಾಯಕ್ಕೊಳಗಾಗಿರುವ ಪ್ರಾಣಿಜಾತಿಗಳ ಪಟ್ಟಿಗೆ ಸೇರಿಸಲಾಯಿತು. ಫಲಿತಾಂಶಗಳು ಬೆರಗುಗೊಳಿಸುವಂತಹವುಗಳಾಗಿದ್ದವು! ಹುಲಿ ಬೇಟೆಯು ನಿಷೇಧಿಸಲ್ಪಡುವ ಮೊದಲು, ಹುಲಿಗಳು ಮನುಷ್ಯ ಭಯದ ಕಾರಣ ನೋಡಲು ಸಿಗದವುಗಳೂ, ಪ್ರಧಾನವಾಗಿ ರಾತ್ರಿಸಂಚಾರಿಗಳೂ ಆಗಿದ್ದವು. ಆದರೆ ಕೆಲವು ವರ್ಷಗಳ ಸಂರಕ್ಷಣೆಯ ಬಳಿಕ, ಹುಲಿಗಳು ಅಭಯಾರಣ್ಯಗಳಲ್ಲಿ ಹಗಲುಹೊತ್ತಿನಲ್ಲಿ ಸಂಚರಿಸಿ ಬೇಟೆಯಾಡತೊಡಗಿದವು!
ಹುಲಿಗೆ ಇನ್ನೂ ಮುಂದುವರಿಯುತ್ತಿರುವ ಬೆದರಿಕೆಯೊಂದಿದೆ: ಹುಲಿಯ ದೇಹಭಾಗಗಳಿಂದ ಮಾಡಿದ ಸಾಂಪ್ರದಾಯಿಕ ಏಷಿಯನ್ ಔಷಧಗಳಿಗಿರುವ ಅಂತಾರಾಷ್ಟ್ರೀಯ ಬೇಡಿಕೆ. ಉದಾಹರಣೆಗೆ, ಹುಲಿ ಎಲುಬುಗಳ ಒಂದು ಚೀಲವು ಭಾರತದಲ್ಲಿ 500 ಡಾಲರುಗಳಿಗಿಂತ ಹೆಚ್ಚನ್ನು ತರಬಲ್ಲದು. ಮತ್ತು ಅದರ ಎಲುಬುಗಳು ಪರಿಷ್ಕರಿಸಲ್ಪಟ್ಟು, ದೂರ ಪೂರ್ವದ ಮಾರುಕಟ್ಟೆಗಳನ್ನು ತಲಪುವಷ್ಟರೊಳಗೆ, ಅದರ ಮೌಲ್ಯವು 25,000 ಡಾಲರುಗಳಿಗಿಂತಲೂ ಹೆಚ್ಚಾಗಿರುತ್ತದೆ. ಇಷ್ಟು ಹೆಚ್ಚು ಹಣವು ಒಳಗೊಂಡಿರುವಾಗ, ವನರಕ್ಷಕರನ್ನು ಬುದ್ಧಿವಂತಿಕೆಯಿಂದ ಮೀರಿಸುವುದರಲ್ಲಿ ಹುಲಿಯ ಕಳ್ಳ ಬೇಟೆಗಾರರೊಂದಿಗೆ ಸಹಕರಿಸುವಂತೆ ಬಡ ಹಳ್ಳಿಗರು ಪ್ರೇರಿಸಲ್ಪಡುತ್ತಾರೆ. ಆರಂಭದಲ್ಲಿ, ಹುಲಿಯನ್ನು ರಕ್ಷಿಸುವ ಪ್ರಯತ್ನಗಳು ಯಶಸ್ವಿಕರವೆಂದು ಭಾವಿಸಲ್ಪಟ್ಟವು. ಆದರೆ 1988ರಿಂದ ಪರಿಸ್ಥಿತಿಯು ವಿಷಮವಾಗಿ ಪರಿಣಮಿಸಿದೆ. ಇಂದು ರಣತಂಬೋರ್‌ನಲ್ಲಿ, 20 ವರ್ಷಗಳ ಹಿಂದೆ ಇದ್ದ 40 ಹುಲಿಗಳಿಗೆ ಸರಿಹೋಲಿಸುವಾಗ, ಸುಮಾರು 27 ಹುಲಿಗಳಷ್ಟೇ ಅಲೆದಾಡುತ್ತವೆ. ಮತ್ತು ಲೋಕದ ಹುಲಿ ಸಂಖ್ಯೆಯು 5,000ದಷ್ಟೂ ಇಳಿತವಾಗಿರಬಹುದು!
ಕಳೆದ ಶತಮಾನದ ಅಂತ್ಯದ ವರೆಗೆ, ಹುಲಿಗಳೂ ಮನುಷ್ಯರೂ ಭಾರತದಲ್ಲಿ ಸಾಪೇಕ್ಷವಾದ ಸಾಮರಸ್ಯದಿಂದ ಸಹಜೀವನಮಾಡಿದರು. ಅವರು ಮತ್ತೊಮ್ಮೆ ಹಾಗೆ ಎಂದಾದರೂ ಮಾಡಶಕ್ತರಾಗಿರುವರೋ? ಈಗಷ್ಟೇ, “ಹುಲಿ ಬಂತು! ಹುಲಿ!” ಎಂಬ ಉದ್ರೇಕದ ಕೂಗಿಗೆ, ಜಗತ್ತಿನ ಮಹಾ ಬೆಕ್ಕುಜಾತಿಯು ನೋಡಲು ಸಿಕ್ಕಿದೆ ಎಂಬರ್ಥ ಇನ್ನೂ ಇರಬಲ್ಲದು. ರಕ್ಷಣಾ ಕಾರ್ಯಕ್ರಮಗಳು ಭವಿಷ್ಯತ್ತಿನಲ್ಲಿ ಹುಲಿಯ ಭದ್ರತೆಯ ಭರವಸೆಯನ್ನು ಕೊಟ್ಟಾವೊ ಎಂಬುದು ಇನ್ನೂ ಸಂದೇಹಾಸ್ಪದ. ಆದರೆ ಒಂದು ದಿನ, ಇಡೀ ಭೂಮಿಯು ಏದೆನ್ ಉದ್ಯಾನವನದಂತೆ ಪ್ರಮೋದವನವಾಗುವುದು ಎಂದು ಬೈಬಲು ಭರವಸೆ ನೀಡುತ್ತದೆ. ಆಗ, ಮನುಷ್ಯನೂ ಹುಲಿಯಂತಿರುವ ಕಾಡುಮೃಗಗಳೂ ಭೂಮಿಯಲ್ಲಿ ಶಾಂತಿಯಿಂದ ಪಾಲಿಗವಾಗುವವು.—ಯೆಶಾಯ 11:6-9.
[ಪಾದಟಿಪ್ಪಣಿ]
a ಅತಿ ದೊಡ್ಡ ಉಪಜಾತಿಯಾದ ಸೈಬೀರಿಯದ ಹುಲಿಗಳು, 320 ಕಿಲೊಗ್ರಾಮ್‌ಗಳಷ್ಟು ತೂಕವುಳ್ಳವುಗಳಾಗಿದ್ದು, 4 ಮೀಟರ್‌ಗಳಷ್ಟು ಉದ್ದವನ್ನು ತಲುಪಬಹುದು.
[ಪುಟ 27 ರಲ್ಲಿರುವ ಚೌಕ/ಚಿತ್ರಗಳು]
ಬಿಳಿಯ ಹುಲಿ
ಭಾರತದ ರಾಷ್ಟ್ರೀಯ ನಿಧಿಯಾಗಿರುವ ಅಪೂರ್ವವಾದ ಬಿಳಿಯ ಹುಲಿಯು ದುರ್ಬಲ ವಂಶಗುಣವು, ವ್ಯತ್ಯಾಸಸಾಧ್ಯ ವಂಶವಾಹಿಯ ಫಲ. 1951ರಲ್ಲಿ ಭಾರತದ ರೇವ ಕಾಡಿನಲ್ಲಿ ಒಂದು ಬಿಳಿಯ ಗಂಡು ಹುಲಿಮರಿಯನ್ನು ಹಿಡಿಯಲಾಯಿತು. ಸಾಮಾನ್ಯ ಬಣ್ಣದ ಹೆಣ್ಣುಹುಲಿಯೊಂದಿಗೆ ಕೂಡಿಸಿದಾಗ, ಸಾಮಾನ್ಯವಾದ ಮರಿಗಳುಂಟಾದವು. ಆದರೂ, ಈ ಮರಿಗಳಿಂದ ಒಂದು ಹೆಣ್ಣನ್ನು, ಈ ಬಿಳಿಯ ಜನಕಹುಲಿಯೊಂದಿಗೆ ಕೂಡಿಸಿದಾಗ, ಆ ಹೆಣ್ಣುಹುಲಿ ನಾಲ್ಕು ಬಿಳಿಯ ಮರಿಗಳಿಗೆ ಜನ್ಮಕೊಟ್ಟಿತು. ಜಾಗ್ರತೆಯ ತಳಿ ಬೆಳೆಸುವಿಕೆಯು, ಅನೇಕ ಸ್ಥಳಗಳ ಜನರು ತಮ್ಮ ಮೃಗಾಲಯಗಳಲ್ಲಿ ಈ ಅಪೂರ್ವ ಸುಂದರ ಪ್ರಾಣಿಯನ್ನು ನೋಡುವಂತೆ ಸಾಧ್ಯಮಾಡಿದೆ.
[ಪುಟ 26 ರಲ್ಲಿರುವ ಚಿತ್ರ]
ಈಜಾಡುವ ಬೆಕ್ಕುಗಳೊ? ಹೌದು!
[ಪುಟ 27 ರಲ್ಲಿರುವ ಚಿತ್ರ]
ಹುಲಿಗಳು ಹೆಚ್ಚಿನ ಜನರು ಯೋಚಿಸುವಷ್ಟು ಅಪಾಯಕಾರಿಗಳಲ್ಲ