ಹೃದ್ರೋಗ ಜೀವಕ್ಕೆ ಬೆದರಿಕೆ
ಪ್ರತಿ ವರುಷ ಲೋಕವ್ಯಾಪಕವಾಗಿ ಲಕ್ಷಾಂತರ ಸ್ತ್ರೀಪುರುಷರಿಗೆ ಹೃದಯಾಘಾತಗಳಾಗುತ್ತವೆ. ಅನೇಕರು ಕೆಲವೇ ಫಲಾಂತರಗಳಿದ್ದವರಾಗಿ ಬದುಕಿ ಉಳಿಯುತ್ತಾರೆ. ಇತರರು ಬದುಕಿ ಉಳಿಯುವುದಿಲ್ಲ. ಇನ್ನಿತರರ ಹೃದಯಕ್ಕೆ ಎಷ್ಟು ಹಾನಿಯಾಗುತ್ತದೆಂದರೆ, ಅವರು “ಉಪಯುಕ್ತ ಚಟುವಟಿಕೆಗೆ ಹಿಂದಿರುಗುವುದು ಸಂದೇಹಾಸ್ಪದ,” ಎನ್ನುತ್ತ ಹೃದಯ ಶಾಸ್ತ್ರಜ್ಞ ಪೀಟರ್ ಕಾನ್ ಕೂಡಿಸುವುದು: “ಆದುದರಿಂದ, ಸಾಧ್ಯವಾದಾಗೆಲ್ಲ ಹೃದಯಾಘಾತಗಳನ್ನು ಆರಂಭದಲ್ಲಿಯೇ ನಿರ್ಮೂಲಗೊಳಿಸುವುದು ಅತ್ಯಗತ್ಯ.”
ಹೃದಯವು ಶರೀರದಲ್ಲೆಲ್ಲ ರಕ್ತವನ್ನು ಪಂಪುಮಾಡುವ ಒಂದು ಸ್ನಾಯು. ಹೃದಯಾಘಾತ (ಮಯಕಾರ್ಡೀಯಲ್ ಇನ್ಫಾರ್ಕ್ಷನ್)ದಲ್ಲಿ, ರಕ್ತದ ಕೊರತೆಯುಂಟಾದಾಗ ಹೃದಯ ಸ್ನಾಯುವಿನ ಅಂಶವು ಸಾಯುತ್ತದೆ. ಆರೋಗ್ಯವುಳ್ಳದ್ದಾಗಿ ಉಳಿಯಲು, ಹೃದಯಕ್ಕೆ ರಕ್ತದ ಮೂಲಕ ಸಾಗಿಸಲ್ಪಡುವ ಆಮ್ಲಜನಕವೂ ಇತರ ಪೋಷಕಗಳೂ ಆವಶ್ಯಕ. ಇವು ಹೃದಯದ ಹೊರಮೈಯನ್ನು ಸುತ್ತಿಕೊಳ್ಳುವ ಪರಿಧಮನಿ (ಕಾರನೆರಿ ಆರ್ಟರಿ)ಗಳಿಂದ ಅದಕ್ಕೆ ದೊರೆಯುತ್ತವೆ.
ರೋಗಗಳು ಹೃದಯದ ಯಾವ ಭಾಗವನ್ನೂ ತಟ್ಟಬಲ್ಲವು. ಆದರೂ, ಅತಿ ಸಾಮಾನ್ಯವಾಗಿರುವಂತಹದ್ದು, ಅಗೋಚರವಾಗಿ ಹರಡುವ ಪರಿಧಮನಿಗಳ ರೋಗವಾದ ಅಪಧಮನಿಕಾಠಿಣ್ಯ (ಆ್ಯಥರೋಸ್ಕ್ಲರೋಸಿಸ್)ವೇ ಆಗಿದೆ. ಇದು ಸಂಭವಿಸುವಾಗ, ಪ್ಲ್ಯಾಕ್ ಅಥವಾ ಕೊಬ್ಬಿನ ಪೊರೆಗಳು ಅಪಧಮನಿಯ ಗೋಡೆಗಳಲ್ಲಿ ಬೆಳೆಯುತ್ತವೆ. ಸಮಯ ದಾಟಿದಂತೆ ಈ ಪ್ಲ್ಯಾಕ್ ವೃದ್ಧಿಯಾಗಿ, ಗಟ್ಟಿಯಾಗಿ, ಅಪಧಮನಿಗಳನ್ನು ಸಂಕುಚಿತಗೊಳಿಸಿ, ಹೃದಯಕ್ಕೆ ರಕ್ತದ ಹರಿವನ್ನು ಮಿತಿಗೊಳಿಸಬಲ್ಲದು. ಈ ಅಂತರ್ನಿಹಿತ ಪರಿಧಮನಿ ರೋಗ (ಸೀಏಡೀ, ಕ್ಯಾಡ್)ವೇ ಹೆಚ್ಚಿನ ಹೃದಯಾಘಾತಗಳಿಗೆ ನಡೆಸುತ್ತದೆ.
ಒಂದು ಅಥವಾ ಹೆಚ್ಚು ಅಪಧಮನಿಗಳಲ್ಲಿ ಉಂಟಾಗುವ ಅಡಚಣೆ (ಕ್ಲಾಗಿಂಗ್)ಯು, ಆಮ್ಲಜನಕಕ್ಕಾಗಿರುವ ಹೃದಯದ ಕೇಳಿಕೊಳ್ಳುವಿಕೆಯು ಸರಬರಾಯಿಗಿಂತ ಜಾಸ್ತಿಯಾಗುವಾಗ ಆಘಾತವನ್ನು ತ್ವರೆಗೊಳಿಸುತ್ತದೆ. ಕಡಮೆ ತೀಕ್ಷ್ಣವಾಗಿ ಸಂಕುಚಿತವಾಗಿರುವ ಅಪಧಮನಿಗಳಲ್ಲೂ ಪ್ಲ್ಯಾಕ್ನ ಪೊರೆಯು ಒಡೆದುಹೋಗಿ, ರಕ್ತಗೆಡ್ಡೆ (ಬ್ಲಡ್ ಕ್ಲಾಟ್, ತ್ರಾಂಬಸ್)ಯ ರೂಪುಗೊಳ್ಳುವಿಕೆಗೆ ನಡೆಸಬಲ್ಲದು. ರೋಗಗ್ರಸ್ತ ಅಪಧಮನಿಗಳು, ಸೆಡೆತ (ಸ್ಪ್ಯಾಸ್ಮ್)ಗಳಿಗೂ ಹೆಚ್ಚು ಸುಲಭವಾಗಿ ಈಡಾಗುತ್ತವೆ. ಸೆಡೆತವಾಗುವ ಸ್ಥಳದಲ್ಲಿ ಒಂದು ರಕ್ತಗೆಡ್ಡೆಯು ರೂಪುಗೊಂಡು, ಅದು ಅಪಧಮನಿಯ ಗೋಡೆಯನ್ನು ಇನ್ನೂ ಹೆಚ್ಚು ಸಂಕುಚಿತಮಾಡುವ ಒಂದು ರಾಸಾಯನಿಕ ದ್ರವ್ಯವನ್ನು ಹೊರಡಿಸಿ, ಆಘಾತವನ್ನು ಆರಂಭಗೊಳಿಸಬಲ್ಲದು.
ಹೃದಯ ಸ್ನಾಯು (ಕಾರ್ಡಿಯ್ಯಾಕ್ ಮಸ್ಲ್)ವಿಗೆ ಆಮ್ಲಜನಕವು ಸಾಕಷ್ಟು ದೀರ್ಘಕಾಲ ದೊರೆಯದಿದ್ದರೆ, ಹತ್ತಿರವಿರುವ ಅಂಗಾಂಶಕ್ಕೆ ಹಾನಿಯಾಗಬಹುದು. ಕೆಲವು ಅಂಗಾಂಶಗಳಿಗೆ ಅಸದೃಶವಾಗಿ, ಹೃದಯ ಸ್ನಾಯು ಮತ್ತೆ ಹುಟ್ಟುವುದಿಲ್ಲ. ಆಘಾತವು ಎಷ್ಟು ದೀರ್ಘವೊ, ಹೃದಯಕ್ಕೆ ಹಾನಿಯು ಎಷ್ಟು ಹೆಚ್ಚೊ, ಮರಣ ಸಂಭವನೀಯತೆಯೂ ಅಷ್ಟೇ ಹೆಚ್ಚು. ಹೃದಯದ ವಿದ್ಯುತ್ಕ್ರಮ (ಎಲೆಕ್ಟ್ರಿಕಲ್ ಸಿಸ್ಟಮ್)ವು ಹಾನಿಗೊಳ್ಳುವಲ್ಲಿ, ಹೃದಯದ ರೂಢಿಯ ಮಿಡಿತವು ಅಸ್ತವ್ಯಸ್ತಗೊಂಡು, ಹೃದಯವು ಹತೋಟಿಮೀರಿ ಕಂಪಿಸ (ಫಿಬ್ರಿಲೇಟ್)ತೊಡಗಬಲ್ಲದು. ಇಂತಹ ತಾಳಗತಿರಾಹಿತ್ಯ (ಏರಿದ್ಮಿಯ)ದಲ್ಲಿ, ಮಿದುಳಿಗೆ ರಕ್ತವನ್ನು ಪರಿಣಾಮಕಾರಿಯಾಗಿ ಪಂಪುಮಾಡುವ ಹೃದಯದ ಸಾಮರ್ಥ್ಯವು ಲೋಪಗೊಳ್ಳುತ್ತದೆ. ಹತ್ತು ನಿಮಿಷಗಳೊಳಗೆ ಮಿದುಳು ಸತ್ತು, ಮರಣವು ಸಂಭವಿಸುತ್ತದೆ.
ಆದಕಾರಣ, ತರಬೇತು ಹೊಂದಿರುವ ವೈದ್ಯಕೀಯ ಸಿಬ್ಬಂದಿಯಿಂದ ಮಾಡಲ್ಪಡುವ ಆರಂಭದ ಹಸ್ತಕ್ಷೇಪವು ಮಹತ್ವದ್ದು. ಅದು ಹೃದಯವನ್ನು ಮುಂದುವರಿಯುವ ಹಾನಿಯಿಂದ ಕಾಪಾಡಿ, ತಾಳಗತಿರಾಹಿತ್ಯವನ್ನು ತಡೆದು, ಅಥವಾ ಗುಣಪಡಿಸಿ, ವ್ಯಕ್ತಿಯ ಜೀವವನ್ನೂ ರಕ್ಷಿಸಬಲ್ಲದು.