ರೋಗಲಕ್ಷಣಗಳನ್ನು ಗುರುತಿಸಿ ಕ್ರಮ ಕೈಕೊಳ್ಳುವುದು
ಹೃದಯಾಘಾತದ ರೋಗಲಕ್ಷಣಗಳು ತೋರಿಬರುವಾಗ, ತತ್ಕ್ಷಣ ವೈದ್ಯಕೀಯ ಸಹಾಯವನ್ನು ಕೋರುವುದು ಅತ್ಯಾವಶ್ಯಕ. ಏಕೆಂದರೆ ಆಘಾತದ ಬಳಿಕ ಮೊದಲ ತಾಸಿನೊಳಗೆ ಮರಣಾಪಾಯವು ಅತ್ಯಂತ ಹೆಚ್ಚಾಗಿದೆ. ತತ್ಕ್ಷಣದ ಚಿಕಿತ್ಸೆಯು ಹೃದಯದ ಸ್ನಾಯುವನ್ನು ಸರಿಮಾಡಲಾಗದ ಹಾನಿಯಿಂದ ಕಾಪಾಡಬಲ್ಲದು. ಹೃದಯ ಸ್ನಾಯು ಎಷ್ಟು ಹೆಚ್ಚಾಗಿ ಉಳಿಸಲ್ಪಡುತ್ತದೊ, ಅಷ್ಟು ಹೆಚ್ಚು ಕಾರ್ಯಸಾಧಕವಾಗಿ ಆಘಾತಾನಂತರ ಹೃದಯವು ಪಂಪುಮಾಡುವುದು.
ಆದರೂ ಕೆಲವು ಹೃದಯಾಘಾತಗಳು, ಯಾವ ಹೊರ ರೋಗಲಕ್ಷಣಗಳನ್ನೂ ತೋರಿಸದೆ ಮೌನವಾಗಿ ಸಂಭವಿಸುತ್ತವೆ. ಈ ಸಂದರ್ಭಗಳಲ್ಲಿ, ತನಗೆ ಪರಿಧಮನಿ ರೋಗ (ಕ್ಯಾಡ್)ವಿದೆಯೆಂದು ಒಬ್ಬ ವ್ಯಕ್ತಿಗೆ ತಿಳಿದಿರಲಿಕ್ಕಿಲ್ಲ. ದುಃಖಕರವಾಗಿ, ಕೆಲವರಿಗೆ ಹೃದ್ರೋಗವಿದೆಯೆಂಬುದಕ್ಕೆ ಒಂದು ಭಾರೀ ಆಘಾತವೇ ಪ್ರಥಮ ಸುಳಿವಾಗಿರಬಹುದು. ಹೃದಯ ಸ್ತಂಭನವು ಸಂಭವಿಸುವಾಗ (ಹೃದಯವು ಪಂಪುಮಾಡುವುದನ್ನು ನಿಲ್ಲಿಸುತ್ತದೆ), ಆ ಕೂಡಲೆ ಒಂದು ವೈದ್ಯಕೀಯ ತಂಡವು ಕರೆಯಲ್ಪಟ್ಟು, ತತ್ಕ್ಷಣ ಪ್ರೇಕ್ಷಕ ಹೃದಯ ಶ್ವಾಸಾಪಧಮನಿ ಪುನರ್ಪ್ರಜ್ಞೆ ಬರಿಸುವಿಕೆ (ಕಾರ್ಡಿಯೋಪುಲ್ಮನೆರಿ ರಿಸಸಿಟೇಷನ್, ಸಿಪಿಆರ್)ಯನ್ನು ಮಾಡದಿರುವಲ್ಲಿ, ಬದುಕಿ ಉಳಿಯುವ ಸಾಧ್ಯತೆಯು ಕೊಂಚವೇ ಸರಿ.
ಕ್ಯಾಡ್ ರೋಗಲಕ್ಷಣಗಳಿರುವ ಹೆಚ್ಚಿನವರಲ್ಲಿ ಸುಮಾರು ಅರ್ಧಾಂಶ ಮಂದಿ ಆ ಕೂಡಲೆ ವೈದ್ಯಕೀಯ ಸಹಾಯವನ್ನು ಯಾಚಿಸುವುದಿಲ್ಲವೆಂದು ಹಾರ್ವರ್ಡ್ ಹೆಲ್ತ್ ಲೆಟರ್ ವರದಿಮಾಡುತ್ತದೆ. ಅದೇಕೆ? “ಸಾಧಾರಣವಾಗಿ ರೋಗಲಕ್ಷಣಗಳು ಏನು ಸೂಚಿಸುತ್ತವೆ ಎಂಬುದನ್ನು ಅವರು ಗುರುತಿಸದೆ ಇರುವುದರಿಂದಲೇ ಅಥವಾ ಅವನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದಲೇ.”
ಹೃದಯಾಘಾತದ ಆಹುತಿಯೂ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೂ ಆದ ಜಾನ್a ಬೇಡಿಕೊಳ್ಳುವುದು: “ಏನೋ ಚೆನ್ನಾಗಿಲ್ಲವೆಂದು ನಿಮಗೆ ತಿಳಿದುಬರುವಾಗ, ನೀವು ರಸಾತಿರೇಕವುಳ್ಳವರು ಎಂದು ತೋರಿಬರುವ ಭಯದಿಂದ, ವೈದ್ಯಕೀಯ ಸಹಾಯವನ್ನು ಪಡೆಯಲು ವಿಳಂಬಿಸಬೇಡಿರಿ. ಸಾಕಷ್ಟು ಬೇಗನೆ ಪ್ರತಿಕ್ರಿಯೆ ತೋರಿಸದ ಕಾರಣ ನಾನು ಹೆಚ್ಚುಕಡಮೆ ಪ್ರಾಣವನ್ನೇ ಕಳೆದುಕೊಂಡೆ.”
ನಡೆದ ಸಂಗತಿ
ಜಾನ್ ವಿವರಿಸುವುದು: “ನನ್ನ ಹೃದಯಾಘಾತಕ್ಕೆ ಒಂದೂವರೆ ವರುಷದ ಮೊದಲು, ನನ್ನ ಅತಿರೇಕ ಕಲೆಸ್ಟರಾಲ್ ಬಗ್ಗೆ ಒಬ್ಬ ಡಾಕ್ಟರರು ನನ್ನನ್ನು ಎಚ್ಚರಿಸಿದರು. ಇದು ಕ್ಯಾಡ್ ರೋಗದಲ್ಲಿ ಒಂದು ದೊಡ್ಡ ಅಪಾಯದ ಅಂಶವಾಗಿದೆ. ಆದರೆ ನಾನು ಚಿಕ್ಕ ಪ್ರಾಯದವನು—40ಕ್ಕೂ ಕೆಳಗಿನ ಪ್ರಾಯ—ಮತ್ತು ಉತ್ತಮ ಆರೋಗ್ಯವುಳ್ಳವನೆಂದು ಎಣಿಸಿದ್ದರಿಂದ, ಆ ಎಚ್ಚರಿಕೆಯನ್ನು ಕಡೆಗಣಿಸಿದೆ. ಆಗಲೇ ನಾನು ಕ್ರಮ ಕೈಕೊಳ್ಳಲಿಲ್ಲವೆಂದು ತುಂಬ ವಿಷಾದಿಸುತ್ತೇನೆ. ನನಗೆ ಇನ್ನಿತರ ಎಚ್ಚರಿಕೆಯ ಸೂಚನೆಗಳಿದ್ದವು—ದೈಹಿಕ ಶ್ರಮ ತೆಗೆದುಕೊಂಡಾಗ ಮೇಲುಸಿರು, ಅಜೀರ್ಣದ ಕಾರಣವೆಂದು ನಾನೆಣಿಸಿದ ನೋವುಗಳು ಮತ್ತು ಆಘಾತಕ್ಕೆ ಮೊದಲು ಹಲವಾರು ತಿಂಗಳುಗಳಲ್ಲಿ ವಿಪರೀತ ಆಯಾಸ. ಇವುಗಳಲ್ಲಿ ಹೆಚ್ಚಿನವನ್ನು ನಾನು ತೀರ ಕಡಮೆ ನಿದ್ರೆ ಮತ್ತು ಕೆಲಸದಲ್ಲಿ ತುಂಬ ಒತ್ತಡದ ಮೇಲೆ ಆರೋಪಿಸಿದೆ. ನನ್ನ ಹೃದಯಾಘಾತಕ್ಕೆ ಮೂರು ದಿನಗಳಿಗೆ ಮೊದಲು, ನನ್ನ ಎದೆಯಲ್ಲಿ ಸ್ನಾಯು ಸೆಡೆತವೆಂದು ನಾನೆಣಿಸಿದ ಏನೊ ಸಂಭವಿಸಿತು. ಅದು ಮೂರು ದಿನಗಳ ತರುವಾಯ ಸಂಭವಿಸಿದ ದೊಡ್ಡ ಆಘಾತಕ್ಕೆ ಮೊದಲಾಗಿ ಸಂಭವಿಸಿದ ಚಿಕ್ಕ ಆಘಾತವಾಗಿತ್ತು.”
ಎದೆಸೆಳೆತ (ಆ್ಯಂಜೈನ) ಎಂದು ಕರೆಯಲ್ಪಡುವ ಎದೆನೋವು ಅಥವಾ ಒತ್ತಡವು, ಹೃದಯಾಘಾತ ಸಂಭವಿಸುವವರಲ್ಲಿ ಸುಮಾರು ಅರ್ಧಾಂಶ ಜನರಿಗೆ ಎಚ್ಚರಿಕೆಯನ್ನು ಕೊಡುತ್ತದೆ. ಕೆಲವರು ಮೇಲುಸಿರು ಅಥವಾ ಅತ್ಯಾಯಾಸ ಮತ್ತು ನಿರ್ಬಲತೆಯನ್ನು ರೋಗಲಕ್ಷಣಗಳಾಗಿ ಅನುಭವಿಸುತ್ತಾರೆ. ಹೃದಯವು ಪರಿಧಮನಿ ಅಡೆತಡೆಯ ಕಾರಣ ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತಿಲ್ಲವೆಂಬುದನ್ನು ಇವು ಸೂಚಿಸುತ್ತವೆ. ಈ ಎಚ್ಚರಿಕೆಯ ಸೂಚನೆಗಳು ಒಬ್ಬರನ್ನು ಹೃದಯದ ಮೌಲ್ಯಮಾಪನಕ್ಕಾಗಿ ಡಾಕ್ಟರರ ಬಳಿಗೆ ಹೋಗುವಂತೆ ಮಾಡಬೇಕು. ಡಾ. ಪೀಟರ್ ಕಾನ್ ಹೇಳುವುದು: “ಆ್ಯಂಜೈನದ ಚಿಕಿತ್ಸೆ ನಡೆದ ಬಳಿಕ ಹೃದಯಾಘಾತ ತಪ್ಪುತ್ತದೆಂಬುದಕ್ಕೆ ಯಾವ ಖಾತರಿಯೂ ಇಲ್ಲವಾದರೂ, ಕಡಮೆಪಕ್ಷ ಸನ್ನಿಹಿತ ಆಘಾತದ ಸಂದರ್ಭಗಳಾದರೂ ಕಡಮೆಯಾಗುತ್ತವೆ.”
ಆಘಾತ
ಜಾನ್ ಮುಂದುವರಿಸುವುದು: “ಆ ದಿನ ನಾವು ಚೆಂಡಾಡು (ಸಾಫ್ಟ್ಬಾಲ್)ವುದರಲ್ಲಿದ್ದೆವು. ಮಧ್ಯಾಹ್ನದೂಟಕ್ಕೆ ನಾನೊಂದು ಹ್ಯಾಂಬರ್ಗರ್ ಮತ್ತು ಹುರಿದ ಆಲೂಗೆಡ್ಡೆಯನ್ನು ಗಪಗಪನೆ ನುಂಗಿದಾಗ ಆದ ತುಸು ಅಸೌಖ್ಯ, ಓಕರಿಕೆ ಮತ್ತು ಮೇಲ್ದೇಹದ ಬಿಗುಪನ್ನು ನಾನು ಅಸಡ್ಡೆಮಾಡಿದೆ. ಆದರೆ ನಾವು ಆಟದ ಬಯಲಿಗೆ ಹೋಗಿ ಆಡತೊಡಗಿದಾಗ, ನನಗೇನೊ ಆಗುತ್ತಿತ್ತೆಂದು ನನಗೆ ಹೇಳಸಾಧ್ಯವಿತ್ತು. ಅಪರಾಹ್ಣ ಕಾಲದಲ್ಲಿ ನನ್ನ ದೇಹಸ್ಥಿತಿ ಕೆಡುತ್ತಾ ಹೋಯಿತು.
“ಅನೇಕ ಬಾರಿ, ನಾನು ಆಟಗಾರರ ಬೆಂಚಿನಲ್ಲಿ ಮುಖ ಮೇಲೆಮಾಡಿ ಮಲಗಿ, ನನ್ನ ಎದೆಸ್ನಾಯಗಳನ್ನು ಹಿಗ್ಗಿಸಲು ಪ್ರಯತ್ನಿಸಿದೆ, ಆದರೆ ಅವು ಹೆಚ್ಚೆಚ್ಚು ಬಿಗಿಯಾಗುತ್ತ ಹೋದವು. ಆಟವಾಡುತ್ತಿದ್ದಾಗ, ಕೆಲವು ಬಾರಿ ಬೆವತು ತಣ್ಣಗಾಗಿ ನಿಶ್ಶಕ್ತಿಯ ಅನಿಸಿಕೆಯಾದಾಗ ನಾನು, ‘ನನಗೇನೊ ಫ್ಲೂ ಹಿಡಿದಿರಬೇಕು’ ಎಂದು ನನ್ನಷ್ಟಕ್ಕೇ ಹೇಳಿಕೊಂಡೆ. ನಾನು ಓಡಿದಾಗ, ಉಸಿರಾಡುವುದು ಕಷ್ಟಕರವೆಂದು ಗಮನಾರ್ಹವಾಗಿ ತಿಳಿದುಬಂತು. ನಾನು ಪುನಃ ಬೆಂಚಿನ ಮೇಲೆ ಮಲಗಿದೆ. ನಾನು ಎದ್ದು ಕುಳಿತುಕೊಂಡಾಗ ತೀರ ತೊಂದರೆಗೊಳಗಾಗಿದ್ದೇನೆಂಬುದಕ್ಕೆ ಸಂಶಯವೇ ಇರಲಿಲ್ಲ. ನನ್ನ ಮಗ ಜೇಮ್ಸ್ನನ್ನು ಕೂಗಿ ಕರೆದು, ‘ನಾನು ಈಗಲೇ ಆಸ್ಪತ್ರೆಗೆ ಹೋಗಬೇಕಾಗಿದೆ!’ ಎಂದೆ. ನನ್ನ ಎದೆಯು ಒಳಗೇ ಕುಸಿದು ಬಿದ್ದಿದ್ದಂತೆ ಭಾಸವಾಯಿತು. ಬೇನೆಯು ಎಷ್ಟು ಹೆಚ್ಚಾಗಿತ್ತೆಂದರೆ, ನನಗೆ ಎದ್ದೇಳಲು ಸಾಧ್ಯವಾಗಲಿಲ್ಲ. ‘ಇದು ಹೃದಯಾಘಾತವಾಗಿರಲಾರದು, ಅಲ್ಲವೆ? ನನಗೆ ಕೇವಲ 38 ವರ್ಷ ಪ್ರಾಯ!’ ಎಂದು ನಾನು ಯೋಚಿಸಿದೆ.”
ಆಗ 15 ವರ್ಷ ಪ್ರಾಯದವನಾಗಿದ್ದ ಜಾನ್ನ ಮಗನು ಹೇಳುವುದು: “ಬಲವನ್ನು ಕಳೆದುಕೊಳ್ಳಲು ನನ್ನ ತಂದೆಗೆ ಕೇವಲ ನಿಮಿಷಗಳೇ ಹಿಡಿದವು. ಅವರನ್ನು ಕಾರಿಗೆ ಹೊತ್ತುಕೊಂಡು ಹೋಗಬೇಕಾಯಿತು. ನನ್ನ ಮಿತ್ರ ಕಾರ್ ನಡೆಸುತ್ತ ಹೋದಾಗ, ತಂದೆಯ ಪರಿಸ್ಥಿತಿಯನ್ನು ಕಂಡುಹಿಡಿಯಲು ಪ್ರಶ್ನೆಗಳನ್ನು ಕೇಳುತ್ತ ಹೋದನು. ಕೊನೆಗೆ, ತಂದೆಯವರು ಉತ್ತರಿಸಲಿಲ್ಲ. ‘ಜಾನ್!’ ಎಂದು ಗಟ್ಟಿಯಾಗಿ ಕೂಗಿದ ನನ್ನ ಸ್ನೇಹಿತ. ಆದರೆ ತಂದೆಯವರು ಆಗಲೂ ಪ್ರತಿಕ್ರಿಯಿಸಲಿಲ್ಲ. ಬಳಿಕ ತಂದೆ ತನ್ನ ಸೀಟ್ನಲ್ಲಿ ಜಗ್ಗಿ, ಸೆಡೆತ (ಕನ್ವಲ್ಶನ್)ಗಳಿಂದ ನರಳುತ್ತಾ, ಕಾರತೊಡಗಿದರು. ನಾನು ಪದೇ ಪದೇ, ‘ಅಪ್ಪಾ! ನಾನು ನಿಮ್ಮನ್ನು ಪ್ರೀತಿಸುತ್ತೇನೆ! ದಯವಿಟ್ಟು ಸಾಯಬೇಡಿ!’ ಎಂದು ಅರಚಿದೆ. ಈ ಆಘಾತ ಮುಗಿದಾಗ, ಅವರ ಇಡೀ ದೇಹ ಆ ಸೀಟ್ನ ಮೇಲೆ ಮೆತ್ತಗಾಗಿ ಬಿದ್ದಿತ್ತು. ಅವರು ಸತ್ತಿದ್ದರೆಂದು ನಾನೆಣಿಸಿದೆ.”
ಆಸ್ಪತ್ರೆಯಲ್ಲಿ
“ಸಹಾಯ ಪಡೆದುಕೊಳ್ಳಲು ನಾವು ಆಸ್ಪತ್ರೆಯೊಳಗೆ ಓಡಿದೆವು. ತಂದೆಯವರು ಸತ್ತಿದ್ದರೆಂದು ನಾನೆಣಿಸಿ ಎರಡೊ ಮೂರೊ ನಿಮಿಷಗಳು ದಾಟಿಹೋಗಿದ್ದವು. ಆದರೆ ಅವರನ್ನು ಪುನಃ ಚೇತರಿಸಲು ಸಾಧ್ಯವಿರಬಹುದೆಂದು ನಾನು ಹಾರೈಸಿದೆ. ನನಗೆ ಆಶ್ಚರ್ಯವಾಗುವಂತೆ, ಆ ಆಟದ ಬಯಲಿನಲ್ಲಿದ್ದ ಸುಮಾರು 20 ಮಂದಿ ಜೊತೆ ಯೆಹೋವನ ಸಾಕ್ಷಿಗಳು ಆಸ್ಪತ್ರೆಯ ನಿರೀಕ್ಷಣಾಲಯದಲ್ಲಿದ್ದರು. ನನಗೆ ಸಾಂತ್ವನದ ಮತ್ತು ಪ್ರೀತಿಸಲ್ಪಟ್ಟ ಅನಿಸಿಕೆಯಾಗುವಂತೆ ಅವರು ಮಾಡಿದರು. ಇದು ಅಂತಹ ಸಂಕಟಕರ ಸಮಯದಲ್ಲಿ ಮಹಾ ಸಹಾಯವಾಗಿ ಪರಿಣಮಿಸಿತು. ಸುಮಾರು 15 ನಿಮಿಷಗಳ ಬಳಿಕ ಡಾಕ್ಟರರೊಬ್ಬರು ಬಂದು, ‘ನಿನ್ನ ತಂದೆಯವರನ್ನು ಪುನಃ ಚೇತರಿಸಲು ನಮಗೆ ಸಾಧ್ಯವಾಯಿತು, ಆದರೆ ಅವರಿಗೊಂದು ಭಾರೀ ಹೃದಯಾಘಾತವಾಗಿದೆ. ಅವರು ಬದುಕುತ್ತಾರೆಂಬ ಖಾತರಿ ನಮಗಿಲ್ಲ.’
“ಬಳಿಕ ನಾನು ತುಸು ಸಮಯ ತಂದೆಯವರನ್ನು ನೋಡುವಂತೆ ಅವರು ಬಿಟ್ಟರು. ನಮ್ಮ ಕುಟುಂಬಕ್ಕೆ ತಂದೆಯವರ ಪ್ರೀತಿಯ ಅಭಿವ್ಯಕ್ತಿಗಳು ನನ್ನನ್ನು ಪರವಶಗೊಳಿಸಿದವು. ಮಹಾ ಬೇನೆಯುಳ್ಳವರಾಗಿ ಅವರಂದದ್ದು: ‘ಮಗನೇ, ನಾನು ನಿನ್ನನ್ನು ಪ್ರೀತಿಸುತ್ತೇನೆ. ನಮ್ಮ ಜೀವಿತಗಳಲ್ಲಿ ಯೆಹೋವನೇ ಅತಿ ಪ್ರಮುಖ ವ್ಯಕ್ತಿಯೆಂಬುದನ್ನು ಸದಾ ನೆನಪಿನಲ್ಲಿಡು. ಆತನನ್ನು ಸೇವಿಸುವುದನ್ನು ಎಂದಿಗೂ ನಿಲ್ಲಿಸದಿರು ಮತ್ತು ನಿನ್ನ ಅಮ್ಮ ಮತ್ತು ಸೋದರರು ಆತನನ್ನು ಸೇವಿಸುವುದನ್ನು ಎಂದಿಗೂ ನಿಲ್ಲಿಸದಂತೆ ಸಹಾಯಮಾಡು. ನಮಗೆ ಪುನರುತ್ಥಾನದಲ್ಲಿ ಬಲವಾದ ನಿರೀಕ್ಷೆಯಿದೆ. ಮತ್ತು ನಾನು ಸಾಯುವಲ್ಲಿ, ಹಿಂದಿರುಗಿ ಬರುವಾಗ ನಾನು ನಿಮ್ಮೆಲ್ಲರನ್ನು ನೋಡಬಯಸುತ್ತೇನೆ.’ ನಾವಿಬ್ಬರೂ ಪ್ರೀತಿ, ಭಯ ಮತ್ತು ನಿರೀಕ್ಷೆಯ ಕಣ್ಣೀರನ್ನು ಸುರಿಸುತ್ತಿದ್ದೆವು.”
ಜಾನ್ನ ಹೆಂಡತಿ, ಮೇರಿ, ಒಂದು ತಾಸಿನ ಬಳಿಕ ಬಂದರು. “ನಾನು ಇಮರ್ಜೆನ್ಸಿ ಕೋಣೆಯೊಳಗೆ ಬಂದಾಗ ಡಾಕ್ಟರರು, ‘ನಿಮ್ಮ ಗಂಡನಿಗೆ ಭಾರೀ ಹೃದಯಾಘಾತವಾಗಿದೆ,’ ಎಂದರು. ನಾನು ಸ್ತಬ್ಧಳಾದೆ. ಜಾನ್ನ ಹೃದಯವನ್ನು ಎಂಟು ಬಾರಿ ಸಹಜ ಕಂಪನ ಸ್ಥಿರೀಕರಣ (ಡೀಫಿಬ್ರಲೇಶನ್)ಕ್ಕೆ ತರಲಾಗಿದೆ ಎಂದು ಅವರು ವಿವರಿಸಿದರು. ಈ ತುರ್ತುಕ್ರಮದಲ್ಲಿ, ಹೃದಯದ ಅಸ್ತವ್ಯಸ್ತ ಮಿಡಿತವನ್ನು ನಿಲ್ಲಿಸಿ, ಅದನ್ನು ಸಹಜ ಮಿಡಿತಕ್ಕೆ ತರಲು ವಿದ್ಯುತ್ ವೋಲ್ಟ್ಮಾನವನ್ನು ಉಪಯೋಗಿಸುವುದು ಒಳಗೊಂಡಿದೆ. ಸಿಪಿಆರ್, ಆಕ್ಸಿಜನ್ ಡೆಲಿವರಿ ಮತ್ತು ಅಂತರಭಿಧಮನಿ (ಇಂಟ್ರವೀನಸ್) ಔಷಧಗಳೊಂದಿಗೆ, ಡೀಫಿಬ್ರಲೇಶನ್ ಮುಂದುವರಿದ ಒಂದು ಜೀವರಕ್ಷಕ ವಿಧಾನವಾಗಿದೆ.
“ನಾನು ಜಾನ್ನನ್ನು ನೋಡಿದಾಗ ನನಗೆ ಸಂಕಟವಾಯಿತು. ಅವರು ತುಂಬಾ ಬಿಳಿಚಿಹೋಗಿದ್ದರು ಮತ್ತು ಅನೇಕ ಟ್ಯೂಬ್ಗಳು ಮತ್ತು ಸರಿಗೆಗಳು ಅವರ ದೇಹವನ್ನು ಪರೀಕ್ಷಕ (ಮಾನಿಟರ್)ಗಳಿಗೆ ಜೋಡಿಸಿದ್ದವು. ನಮ್ಮ ಮೂವರು ಗಂಡುಮಕ್ಕಳ ಸಲುವಾಗಿ ಈ ಪರೀಕ್ಷೆಯನ್ನು ಸಹಿಸಿಕೊಳ್ಳಲಿಕ್ಕಾಗಿ ನನಗೆ ಶಕ್ತಿಯನ್ನು ಕೊಡುವಂತೆ ನಾನು ಮೌನವಾಗಿ ಯೆಹೋವನಿಗೆ ಪ್ರಾರ್ಥಿಸಿದೆ. ಮತ್ತು ಮುಂದಿರಬಹುದಾದ ವಿಷಯಗಳ ಕುರಿತು ವಿವೇಕಭರಿತ ನಿರ್ಣಯಗಳನ್ನು ಮಾಡಲು ಬೇಕಾದ ಮಾರ್ಗದರ್ಶನಕ್ಕಾಗಿಯೂ ನಾನು ಪ್ರಾರ್ಥಿಸಿದೆ. ನಾನು ಜಾನ್ನ ಮಂಚವನ್ನು ಸಮೀಪಿಸಿದಾಗ, ‘ಈ ರೀತಿಯ ಸಮಯದಲ್ಲಿ ನಾನು ನನ್ನ ಪ್ರಿಯನಿಗೆ ಏನು ಹೇಳಲಿ? ಇಂತಹ ಜೀವ ಬೆದರಿಕೆಯ ಪರಿಸ್ಥಿತಿಗಾಗಿ ನಾವು ನಿಜವಾಗಿಯೂ ಸಿದ್ಧರಾಗಿದ್ದೇವೊ?’ ಎಂದು ನಾನು ಯೋಚಿಸಿದೆ.
“‘ಪ್ರಿಯೆ, ನಾನು ಇದರಿಂದ ಪಾರಾಗಲಿಕ್ಕಿಲ್ಲವೆಂದು ನಿನಗೆ ತಿಳಿದದೆ. ಆದರೆ ನೀನೂ ಹುಡುಗರೂ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವುದು ಪ್ರಾಮುಖ್ಯ. ಏಕೆಂದರೆ ಈ ವ್ಯವಸ್ಥೆಯು ಬೇಗನೆ ಅಂತ್ಯಗೊಳ್ಳಲಿದೆ ಮತ್ತು ಆ ಬಳಿಕ ಅಸ್ವಸ್ಥತೆ ಮತ್ತು ಮರಣಗಳು ಇನ್ನಿರವು. ಆ ಹೊಸ ವ್ಯವಸ್ಥೆಯಲ್ಲಿ ನಾನು ಎದ್ದುಬಂದು, ನಿನ್ನನ್ನೂ ನಮ್ಮ ಹುಡುಗರನ್ನೂ ನೋಡಬಯಸುತ್ತೇನೆ’ ಎಂದು ಜಾನ್ ಹೇಳಿದರು. ಕಣ್ಣೀರು ನಮ್ಮ ಮುಖಗಳ ಮಾರ್ಗವಾಗಿ ಧಾರೆಯಾಗಿ ಹರಿದುಹೋಯಿತು.”
ಡಾಕ್ಟರರು ಸ್ಪಷ್ಟಪಡಿಸುತ್ತಾರೆ
“ಡಾಕ್ಟರರು ತರುವಾಯ ನನ್ನನ್ನು ಪಕ್ಕಕ್ಕೆ ಕರೆದು, ಜಾನ್ನ ಹೃದಯಾಘಾತವು, ಎಡ ಮುಂಭಾಗದಲ್ಲಿ ಇಳಿದುಬರುವ ಅಪಧಮನಿಯಲ್ಲಿ 100 ಪ್ರತಿಶತ ಅಡೆತಡೆಯ ಕಾರಣವೇ ಎಂಬುದಾಗಿ ತನಿಖೆಯು ತೋರಿಸಿತೆಂದು ವಿವರಿಸಿದರು. ಜಾನ್ಗೆ ಇನ್ನೊಂದು ಅಪಧಮನಿಯಲ್ಲಿಯೂ ಅಡೆತಡೆಯಿತ್ತು. ಜಾನ್ನ ಚಿಕಿತ್ಸೆಯ ಕುರಿತು ನಾನೊಂದು ನಿರ್ಣಯವನ್ನು ಮಾಡಲೇಬೇಕೆಂದು ಡಾಕ್ಟರರು ಹೇಳಿದರು. ಔಷಧಗಳು ಮತ್ತು ರಕ್ತನಾಳ ಶಸ್ತ್ರಚಿಕಿತ್ಸೆ (ಆ್ಯಂಜಿಯೊಪ್ಲ್ಯಾಸ್ಟಿ)—ಇವು, ಲಭ್ಯವಿದ್ದ ಐಚ್ಛಿಕ ಚಿಕಿತ್ಸೆಗಳಲ್ಲಿ ಎರಡು ಚಿಕಿತ್ಸೆಗಳಾಗಿದ್ದವು. ಎರಡನೆಯದ್ದು ಹೆಚ್ಚು ಉತ್ತಮವೆಂದು ಅವರು ನೆನಸಿದ್ದರಿಂದ ನಾವು ಆ್ಯಂಜಿಯೊಪ್ಲ್ಯಾಸ್ಟಿಯನ್ನು ಆರಿಸಿಕೊಂಡೆವು. ಆದರೆ ಈ ರೀತಿಯ ಹೃದಯಾಘಾತದಲ್ಲಿ ಹೆಚ್ಚಿನವರು ಬದುಕಿ ಉಳಿಯುವುದಿಲ್ಲವಾದುದರಿಂದ, ಡಾಕ್ಟರರು ಜಯಹೊಂದುತ್ತೇವೆಂಬ ಯಾವ ವಚನವನ್ನೂ ಕೊಡಲಿಲ್ಲ.”
ಬಲೂನ್ ತುದಿಯ ತೂರುನಳಿಗೆ (ಕ್ಯಾಥಟರ್)ಯೊಂದನ್ನು ಪರಿಧಮನಿಯೊಳಗೆ ತುರುಕಿಸಿ, ಅಡೆತಡೆಯನ್ನು ತೆರೆಯಲು ಬಳಿಕ ಅದನ್ನು ಗಾಳಿಯಿಂದ ತುಂಬಿಸುವ ಶಸ್ತ್ರಚಿಕಿತ್ಸಾ ವಿಧಾನವೇ ಆ್ಯಂಜಿಯೊಪ್ಲ್ಯಾಸ್ಟಿ. ರಕ್ತಪ್ರವಾಹವನ್ನು ಪುನಃಸ್ಥಾಪಿಸುವುದರಲ್ಲಿ ಈ ಕಾರ್ಯವಿಧಾನಕ್ಕೆ ಉನ್ನತ ಪ್ರಮಾಣದ ಯಶಸ್ಸಿದೆ. ಅನೇಕ ಅಪಧಮನಿಗಳಲ್ಲಿ ಗುರುತರವಾದ ಅಡೆತಡೆಗಳಿರುವಾಗ, ಉಪಮಾರ್ಗ (ಬೈಪಾಸ್) ಶಸ್ತ್ರಚಿಕಿತ್ಸೆಯನ್ನು ಸಾಮಾನ್ಯವಾಗಿ ಶಿಫಾರಸ್ಸು ಮಾಡಲಾಗುತ್ತದೆ.
ನಿರಾಶಾಜನಕವಾದ ಮುನ್ನರಿವು
ಈ ಆ್ಯಂಜಿಯೊಪ್ಲ್ಯಾಸ್ಟಿಯ ಬಳಿಕ, ಜಾನ್ನ ಜೀವವು ಇನ್ನು 72 ತಾಸುಗಳ ತನಕ ಅಪಾಯದಲ್ಲಿರುತ್ತ ಮುಂದುವರಿಯಿತು. ಕೊನೆಗೆ, ಅವನ ಹೃದಯವು ಆ ರೋಗಸ್ಥಿತಿಯಿಂದ ಚೇತರಿಸಿಕೊಳ್ಳತೊಡಗಿತು. ಆದರೆ ಜಾನ್ನ ಹೃದಯವು ಅದರ ಮೊದಲಿನ ಧಾರಣಶಕ್ತಿಗಿಂತ ಅರ್ಧದಷ್ಟನ್ನು ಮಾತ್ರ ಪಂಪುಮಾಡುತ್ತಿತ್ತು, ಮತ್ತು ಅದರ ದೊಡ್ಡ ಅಂಶವೊಂದು ಕಲೆಗಟ್ಟಿರುವ ಅಂಗಾಂಶವಾಗಿತ್ತು. ಆದಕಾರಣ, ಅವನು ಹೃದ್ರೋಗ ಅಂಗವಿಕಲನಾಗುವುದು ಅನಿವಾರ್ಯವಾದ ಪ್ರತೀಕ್ಷೆಯಾಗಿತ್ತು.
ಹಿನ್ನೋಟದಲ್ಲಿ, ಜಾನ್ ಬುದ್ಧಿಹೇಳುವುದು: “ವಿಶೇಷವಾಗಿ ನಮಗೆ ಅಪಾಯವಿರುವಲ್ಲಿ, ನಾವು ಎಚ್ಚರಿಕೆಗಳಿಗೆ ಕಿವಿಗೊಟ್ಟು, ನಮ್ಮ ಆರೋಗ್ಯದ ಜಾಗ್ರತೆ ತೆಗೆದುಕೊಳ್ಳುವ ವಿಷಯದಲ್ಲಿ ನಮ್ಮ ಸೃಷ್ಟಿಕರ್ತನಿಗೆ, ನಮ್ಮ ಕುಟುಂಬಗಳಿಗೆ, ನಮ್ಮ ಆತ್ಮಿಕ ಸಹೋದರರಿಗೆ ಮತ್ತು ಸಹೋದರಿಯರಿಗೆ ಮತ್ತು ಸ್ವತಃ ನಮಗೆ ಸಹ ಹಂಗಿಗರಾಗಿದ್ದೇವೆ. ಗಣನೀಯ ಮಟ್ಟದಲ್ಲಿ, ನಾವು ನಮ್ಮ ಸಂತೋಷ ಅಥವಾ ದುಃಖಕ್ಕೆ ಕಾರಣಭೂತರಾಗಿರಬಲ್ಲೆವು. ಅದು ನಮಗೆ ಸೇರಿದ್ದು.”
ಜಾನ್ನ ರೋಗವು ಗುರುತರವಾಗಿದ್ದು, ಶೀಘ್ರ ಗಮನವನ್ನು ಕೇಳಿಕೊಂಡಿತು. ಆದರೆ ಎದೆಯುರಿತದಂತಹ ರೀತಿಯ ಅಸೌಖ್ಯವುಳ್ಳವರೆಲ್ಲ ಡಾಕ್ಟರರ ಬಳಿ ಓಡಬೇಕೆಂದಿಲ್ಲ. ಆದರೂ, ಅವನಿಗಾದ ಅನುಭವವು ಒಂದು ಎಚ್ಚರಿಕೆಯಾಗಿದೆ ಮತ್ತು ತಮಗೆ ರೋಗಲಕ್ಷಣಗಳಿವೆಯೆಂದೆಣಿಸುವವರು ತಪಾಸಣೆ ಮಾಡಿಸಿಕೊಳ್ಳಬೇಕು.
ಹೃದಯಾಘಾತದ ಅಪಾಯವನ್ನು ಕಡಮೆಮಾಡಲು ಏನು ಮಾಡಸಾಧ್ಯವಿದೆ? ಮುಂದಿನ ಲೇಖನ ಇದನ್ನು ಚರ್ಚಿಸುವುದು.
[ಅಧ್ಯಯನ ಪ್ರಶ್ನೆಗಳು]
a ಈ ಲೇಖನಗಳಲ್ಲಿ ಹೆಸರುಗಳು ಬದಲಾಯಿಸಲ್ಪಟ್ಟಿವೆ.
[ಪುಟ 7 ರಲ್ಲಿರುವ ಚೌಕ]
ಹೃದಯಾಘಾತದ ರೋಗಲಕ್ಷಣಗಳು
• ಎದೆಯಲ್ಲಿ ಕೆಲವೇ ನಿಮಿಷಗಳಿಗಿಂತ ಹೆಚ್ಚು ಸಮಯ ಇರುವ ಅಹಿತಕರವಾದ ಒತ್ತಡ, ಹಿಸುಕುವಿಕೆ ಅಥವಾ ಬೇನೆ. ಇದನ್ನು ತೀಕ್ಷ್ಣ ಎದೆಯುರಿತವೆಂದು ತಪ್ಪಾಗಿ ತಿಳಿದುಕೊಳ್ಳಸಾಧ್ಯವಿದೆ
• ದವಡೆ, ಕತ್ತು, ಭುಜಗಳು, ತೋಳುಗಳು, ಮೊಣಕೈಗಳಿಗೆ, ಅಥವಾ ಎಡಗೈಗೆ ಹರಡುವ ಅಥವಾ ಅವುಗಳಲ್ಲಿ ಮಾತ್ರ ಆಗುತ್ತಿರುವ ಬೇನೆ
• ಹೊಟ್ಟೆಯ ಮೇಲ್ಬದಿಯಲ್ಲಿ ಲಂಬಿಸಿದ ಬೇನೆ
• ಸಾಕಷ್ಟು ಗಾಳಿಸೇವನೆ ಮಾಡಲಾಗದಿರುವಿಕೆ, ತಲೆಸುತ್ತುವಿಕೆ, ಮೂರ್ಛೆಹೋಗುವುದು, ಬೆವರುವುದು ಅಥವಾ ಸ್ಪರ್ಶಿಸುವಾಗ ತಣ್ಣಗೆ ಮತ್ತು ಅಂಟಂಟಾಗಿರುವುದು
• ಬಹಳ ಬಳಲಿಕೆ—ಆಘಾತವಾಗುವ ಕೆಲವು ವಾರಗಳ ಮುಂಚೆ ಅನುಭವಿಸಲ್ಪಡಬಹುದು
• ಓಕರಿಕೆ ಅಥವಾ ಕಾರುವಿಕೆ
• ಶ್ರಮದ ಕಾರಣದಿಂದ ಉಂಟಾಗದ ಎದೆಸೆಳವಿನ (ಆ್ಯಂಜೈನ) ಆಘಾತಗಳು
ರೋಗಲಕ್ಷಣಗಳು, ಮೃದುವಾದವುಗಳಿಂದ ತೀವ್ರತೆಯುಳ್ಳವುಗಳ ತನಕ ವ್ಯತ್ಯಾಸವುಳ್ಳವುಗಳಾಗಿರಬಹುದು ಮತ್ತು ಪ್ರತಿಯೊಂದು ಹೃದಯಾಘಾತದಲ್ಲಿ ಇವೆಲ್ಲವೂ ಸಂಭವಿಸುವುದಿಲ್ಲ. ಆದರೆ ಇವುಗಳಲ್ಲಿ ಯಾವುದಾದರೂ ಒಟ್ಟುಗೂಡಿ ಸಂಭವಿಸುವುದಾದರೆ, ಕೂಡಲೆ ಸಹಾಯ ಪಡೆಯಿರಿ. ಆದರೂ, ಕೆಲವು ಸಂದರ್ಭಗಳಲ್ಲಿ ರೋಗಲಕ್ಷಣಗಳಿರುವುದಿಲ್ಲ; ಇವನ್ನು ಮೌನ ಹೃದಯಾಘಾತಗಳೆಂದು ಸೂಚಿಸಲಾಗುತ್ತದೆ.
[ಪುಟ 8 ರಲ್ಲಿರುವ ಚೌಕ]
ಬದುಕಿ ಉಳಿಯಲಿಕ್ಕಾಗಿ ಕಾರ್ಯಗತಿಗಳು
ನೀವಾಗಲಿ ನಿಮ್ಮ ಪರಿಚಯಸ್ಥನಾಗಲಿ ಹೃದಯಾಘಾತದ ರೋಗಲಕ್ಷಣಗಳನ್ನು ತೋರಿಸುವಲ್ಲಿ:
• ರೋಗಲಕ್ಷಣಗಳನ್ನು ಗುರುತಿಸಿರಿ.
• ನೀವು ಏನನ್ನೇ ಮಾಡುತ್ತಿದ್ದರೂ ಅದನ್ನು ನಿಲ್ಲಿಸಿ, ಕುಳಿತುಕೊಳ್ಳಿರಿ ಅಥವಾ ಮಲಗಿರಿ.
• ರೋಗಲಕ್ಷಣಗಳು ಕೆಲವೇ ನಿಮಿಷಗಳಿಗಿಂತಲೂ ಹೆಚ್ಚು ಕಾಲ ಮುಂದುವರಿಯುವುದಾದರೆ, ಸ್ಥಳಿಕ ತುರ್ತು ಟೆಲಿಫೋನ್ ನಂಬರಿಗೆ ಫೋನ್ಮಾಡಿರಿ. ಹೃದಯಾಘಾತದ ಅನುಮಾನ ನಿಮಗಿದೆಯೆಂದು ರವಾನೆದಾರ (ಡಿಸ್ಪ್ಯಾಚರ್)ನಿಗೆ ಹೇಳಿ, ನಿಮ್ಮನ್ನು ಕಂಡುಹಿಡಿಯಲು ಬೇಕಾದ ಮಾಹಿತಿಯನ್ನು ಅವನಿಗೆ ಕೊಡಿರಿ.
• ನೀವೇ ವಾಹನ ನಡೆಸಿಕೊಂಡು ರೋಗಿಯನ್ನು ಆಸ್ಪತ್ರೆಯ ಇಮರ್ಜೆನ್ಸಿ ಕೋಣೆಗೆ ಹೆಚ್ಚು ವೇಗವಾಗಿ ಕೊಂಡೊಯ್ಯಶಕ್ತರಾಗುವುದಾದರೆ, ಹಾಗೆಯೇ ಮಾಡಿರಿ. ನಿಮಗೇ ಹೃದಯಾಘಾತವಾಗುತ್ತಿದೆ ಎಂದೆಣಿಸುವುದಾದರೆ, ಇನ್ನೊಬ್ಬನು ವಾಹನ ನಡೆಸಿಕೊಂಡು ನಿಮ್ಮನ್ನು ಕರೆದೊಯ್ಯುವಂತೆ ಕೇಳಿಕೊಳ್ಳಿರಿ.
ನೀವು ಇಮರ್ಜೆನ್ಸಿ ಮೆಡಿಕಲ್ ಸಿಬ್ಬಂದಿಗಾಗಿ ಕಾಯುವುದಾದರೆ:
• ಬಿಗಿಯಾಗಿರುವ ಉಡುಪುಗಳನ್ನು—ಬೆಲ್ಟ್ ಅಥವಾ ಟೈ ಸೇರಿಸಿ—ಸಡಿಲಿಸಿರಿ. ರೋಗಿಗೆ ಆರಾಮವಾಗುವಂತೆ, ಆವಶ್ಯಕತೆಯಿರುವಲ್ಲಿ ತಲೆದಿಂಬುಗಳ ಆಸರೆಕೊಟ್ಟು ಸಹಾಯಮಾಡಿರಿ.
• ನೀವು ರೋಗಿಯಾಗಿದ್ದರೂ ಸಹಾಯಕರಾಗಿದ್ದರೂ ಶಾಂತರಾಗಿರಿ. ಉದ್ರೇಕವು ಜೀವಾಪಾಯಕರವಾದ ಏರಿದ್ಮಿಯದ ಸಂಭವನೀಯತೆಯನ್ನು ಹೆಚ್ಚಿಸಬಹುದು. ಪ್ರಾರ್ಥನೆಯು ಶಾಂತರಾಗಿರಲು ಬಲದಾಯಕವಾದ ಸಹಾಯವಾಗಿರಬಲ್ಲದು.
ರೋಗಿಯು ಉಸಿರಾಟವನ್ನು ನಿಲ್ಲಿಸುತ್ತಾನೆಂದು ಕಂಡುಬರುವಲ್ಲಿ:
• ಗಟ್ಟಿ ಸ್ವರದಿಂದ, “ನಾನು ಹೇಳುವುದು ಕೇಳುತ್ತದೊ” ಎಂದು ಪ್ರಶ್ನಿಸಿರಿ. ಪ್ರತಿವರ್ತನೆಯಿಲ್ಲದಿರುವಲ್ಲಿ, ನಾಡಿ ಬಡಿತವಿಲ್ಲದಿರುವಲ್ಲಿ, ಹಾಗೂ ರೋಗಿಯು ಉಸಿರಾಡದಿರುವಲ್ಲಿ, ಹೃದಯ ಶ್ವಾಸಾಪಧಮನಿ ಪುನರ್ಪ್ರಜ್ಞೆ ಬರಿಸುವಿಕೆ (ಸೀಪೀಆರ್)ಯನ್ನು ಆರಂಭಿಸಿರಿ.
• ಸೀಪೀಆರ್ನ ಮೂರು ಮೂಲ ಹೆಜ್ಜೆಗಳು ಜ್ಞಾಪಕದಲ್ಲಿರಲಿ:
1. ಗಾಳಿಮಾರ್ಗವನ್ನು ತೆರೆಯಲಿಕ್ಕಾಗಿ ರೋಗಿಯ ಗಲ್ಲವನ್ನು ಮೇಲೆತ್ತಿರಿ.
2. ಗಾಳಿಮಾರ್ಗ ತೆರೆದದ್ದಾಗಿರುವಾಗ, ರೋಗಿಯ ಮೂಗನ್ನು ಚಿವುಟಿ ಮುಚ್ಚಿ, ಎದೆ ಉಬ್ಬುವ ತನಕ ಬಾಯಿಯೊಳಗೆ ಎರಡು ಬಾರಿ ನಿಧಾನವಾಗಿ ಊದಿರಿ.
3. ಮೊಲೆತೊಟ್ಟುಗಳ ಮಧ್ಯೆ ಇರುವ ಎದೆಯ ಮಧ್ಯಭಾಗವನ್ನು, ರಕ್ತವನ್ನು ಹೃದಯ ಮತ್ತು ಎದೆಗಳಿಂದ ಹೊರದೂಡಲಿಕ್ಕಾಗಿ 10ರಿಂದ 15 ಬಾರಿ ಒತ್ತಿರಿ. ಪ್ರತಿ 15 ಸೆಕೆಂಡ್ಗಳಿಗೆ, ಎರಡು ಬಾರಿ ಊದಿ ಬಳಿಕ 15 ಬಾರಿ ಒತ್ತಿ, ಹೀಗೆ ಆವರ್ತಿಸಿರಿ. ನಾಡಿ ಬಡಿತ ಮತ್ತು ಉಸಿರಾಟ ಪುನಃ ಆರಂಭವಾಗುವ ತನಕ ಅಥವಾ ಇಮರ್ಜೆನ್ಸಿ ತಂಡ ಬರುವ ತನಕ ಹಾಗೆ ಮಾಡುತ್ತ ಹೋಗಿರಿ.
ಸೀಪೀಆರ್ ಚಿಕಿತ್ಸೆಯನ್ನು ತರಬೇತುಹೊಂದಿರುವ ಯಾವನಾದರೂ ಕೊಡಬೇಕು. ಆದರೆ ತರಬೇತುಹೊಂದಿರುವವರು ದೊರೆಯದಿರುವಲ್ಲಿ, “ಕೊಡದಿರುವುದಕ್ಕಿಂತ ಯಾವುದೇ ರೀತಿಯಲ್ಲಾದರೂ ಸೀಪೀಆರ್ ಕೊಡುವುದೇ ಲೇಸು” ಎಂದು ಇಮರ್ಜೆನ್ಸಿ ಕಾರ್ಡಿಯ್ಯಾಕ್ ಚಿಕಿತ್ಸೆಯ ಡೈರೆಕ್ಟರ್, ಡಾ. ಆರ್. ಕಮಿನ್ಸ್ ಹೇಳುತ್ತಾರೆ. ಈ ಹೆಜ್ಜೆಗಳನ್ನು ಯಾರಾದರೂ ಆರಂಭಿಸುವ ಹೊರತು, ಬದುಕಿ ಉಳಿಯುವ ಸಾಧ್ಯತೆಗಳು ತೀರ ಕಡಮೆ. ಸಹಾಯವು ಬರುವ ತನಕ ಸೀಪೀಆರ್ ವ್ಯಕ್ತಿಯನ್ನು ಸಜೀವವಾಗಿಡುತ್ತದೆ.
[ಪುಟ 6 ರಲ್ಲಿರುವ ಚಿತ್ರ]
ಒಂದು ಹೃದಯಾಘಾತದ ಬಳಿಕ, ಶೀಘ್ರ ಚಿಕಿತ್ಸೆಯು ಜೀವವನ್ನು ಉಳಿಸಿ, ಹೃದಯದ ಹಾನಿಯನ್ನು ಕಡಿಮೆಮಾಡಬಹುದು