ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 1/8 ಪು. 16-18
  • ರಹಸ್ಯಗರ್ಭಿತ ಪ್ಲ್ಯಾಟಿಪಸ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ರಹಸ್ಯಗರ್ಭಿತ ಪ್ಲ್ಯಾಟಿಪಸ್‌
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಒಂದು ಪ್ಲ್ಯಾಟಿಪಸನ್ನು ನೋಡಲು ಹೋಗೋಣ
  • ಆ ಆಶ್ಚರ್ಯಜನಕ ಕೊಕ್ಕು
  • ಆ ಮುಳ್ಳುಗಳ ಕುರಿತು ಜಾಗ್ರತೆ!
  • ಮೊಟ್ಟೆಯಿಡುವ ಸಮಯ
  • ನಮ್ಮ ವಾಚಕರಿಂದ
    ಎಚ್ಚರ!—1997
  • ಕ್ಯಾಪಿಬಾರ ಸೃಷ್ಟಿಕ್ರಿಯೆಯ ದೋಷವೊ, ಬೆರಗೊ?
    ಎಚ್ಚರ!—1993
  • ಏಡ್‌—ಉಗ್ರರೂಪ ತಾಳುತ್ತಿರುವ ಸಾಂಕ್ರಾಮಿಕ ರೋಗ
    ಎಚ್ಚರ!—1998
ಎಚ್ಚರ!—1997
g97 1/8 ಪು. 16-18

ರಹಸ್ಯಗರ್ಭಿತ ಪ್ಲ್ಯಾಟಿಪಸ್‌

ಆಸ್ಟ್ರೇಲಿಯದ ಎಚ್ಚರ! ಸುದ್ದಿಗಾರರಿಂದ

ವಿಜ್ಞಾನಿಗಳು ಪ್ರಥಮವಾಗಿ ಪ್ಲ್ಯಾಟಿಪಸನ್ನು ನೋಡಿದಾಗ, ಅದನ್ನು ಹೇಗೆ ವರ್ಗೀಕರಿಸುವುದೆಂದು ಅವರಿಗೆ ತಿಳಿಯಲಿಲ್ಲ. ಅವರ ವೈಜ್ಞಾನಿಕ ನಂಬಿಕೆಗಳಲ್ಲಿ ಕೆಲವನ್ನು ಬುಡಮೇಲುಮಾಡಿದಂತಹ, ಒಂದು ಕಿಲೊಗ್ರಾಮ್‌ ತೂಕದ ಒಂದು ಜೀವಂತ ವಿರೋಧಾಭಾಸವು ಇಲ್ಲಿತ್ತು. ಒಂದು ಚಿತ್ತಾಕರ್ಷಕ, ನಾಚಿಕೆ ಸ್ವಭಾವದ, ಮತ್ತು ಮುದ್ದಿನ ಜೀವಿಯಾಗಿರುವ ಆಸ್ಟ್ರೇಲಿಯದ ಈ ಅಪೂರ್ವ ಪುಟ್ಟ ನಾಡಿಗನನ್ನು ಭೇಟಿಯಾಗಲು ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಆದಾಗಲೂ, ಪ್ರಥಮವಾಗಿ, ನಾವು 1799ರ ವರ್ಷಕ್ಕೆ ಹಿಂದೆಹೋಗಿ, ಪ್ಲ್ಯಾಟಿಪಸ್‌ನ ಮೊಟ್ಟಮೊದಲ ಹಸಿ ಚಕ್ಕಳವು ಬ್ರಿಟಿಷ್‌ ವಿಜ್ಞಾನಿಗಳಿಂದ ಪರೀಕ್ಷಿಸಲ್ಪಟ್ಟಾಗ, ಅದು ಉಂಟುಮಾಡಿದ ಗದ್ದಲವನ್ನು ನೋಡೋಣ.

“ಅವನಿಗೆ ಅಕ್ಷರಶಃವಾಗಿ [ತನ್ನ ಕಣ್ಣುಗಳನ್ನು] ನಂಬಲಾಗಲಿಲ್ಲ,” ಎಂದು ಬ್ರಿಟಿಷ್‌ ವಸ್ತುಸಂಗ್ರಹಾಲಯದ ನೈಸರ್ಗಿಕ ಇತಿಹಾಸ ವಿಭಾಗದಲ್ಲಿ ಸಹಾಯಕ ಉಸ್ತುವಾರಿ ವಹಿಸುವವನಾಗಿರುವ, ಡಾ. ಶಾ ಅವರ ಕುರಿತಾಗಿ, ಒಂದು ಎನ್‌ಸೈಕ್ಲೊಪೀಡಿಯ ಹೇಳುತ್ತದೆ. “ಯಾರೋ [ಚತುಷ್ಪಾದಿ ಪ್ರಾಣಿಯ] ದೇಹಕ್ಕೆ ಒಂದು ಬಾತಿನ ಕೊಕ್ಕನ್ನು ಕಸಿಕಟ್ಟಿದ್ದಾರೆ” ಎಂದು ಅವನು ಸಂದೇಹಪಟ್ಟನು. “ಅವನು ಆ ಕೊಕ್ಕನ್ನು [ತೆಗೆದುಹಾಕಲು] ಪ್ರಯತ್ನಿಸಿದನು, ಮತ್ತು ಇಂದು ಅವನ ಕತ್ತರಿಯ ಗುರುತುಗಳನ್ನು ಇನ್ನೂ ಆ ಮೂಲ ಚರ್ಮದ ಮೇಲೆ ನೋಡಬಹುದು.”

ಚರ್ಮವು ನಿಜವಾದುದೆಂದು ಕಂಡುಹಿಡಿಯಲ್ಪಟ್ಟಾಗಲೂ, ವಿಜ್ಞಾನಿಗಳು ಕಕ್ಕಾವಿಕ್ಕಿಯಾಗಿದ್ದರು. ಪ್ಲ್ಯಾಟಿಪಸ್‌ಗೆ—ಅದರ ಹೆಸರಿನ ಅರ್ಥ “ಚಪ್ಪಟೆ ಪಾದವುಳ್ಳದ್ದು”—ಬಹುಮಟ್ಟಿಗೆ ಒಂದು ಪಕ್ಷಿಗಿರುವಂತಹ ರೀತಿಯ ಪುನರುತ್ಪಾದಕ ವ್ಯೂಹವಿದೆ, ಆದರೆ ಅದಕ್ಕೆ ಸ್ತನಗಳು, ಅಥವಾ ಹಾಲಿನ ರಸಗ್ರಂಥಿಗಳು ಕೂಡ ಇವೆ. ವಿರೋಧಾಭಾಸವೆಂದು ತೋರುವ ಈ ಪ್ರಾಣಿಯು ಈ ಪ್ರಶ್ನೆಯನ್ನು ಎಬ್ಬಿಸಿತು: ಈ ನಿಜವಲ್ಲದಿರಬಹುದಾದ ಜೀವಿಯು ಮೊಟ್ಟೆಗಳನ್ನಿಡುತ್ತಿತ್ತೊ, ಇಲ್ಲವೊ?

ಅನೇಕ ವರ್ಷಗಳ ವಿವಾದದ ನಂತರ, ಪ್ಲ್ಯಾಟಿಪಸ್‌ ನಿಜವಾಗಿಯೂ ಮೊಟ್ಟೆಗಳನ್ನಿಡುತ್ತಿತ್ತೆಂಬುದನ್ನು ಕಂಡುಹಿಡಿಯಲಾಯಿತು. ಆದರೆ ಪ್ರತಿಯೊಂದು ಕಂಡುಹಿಡಿತವು, ಒಗಟಿಗೆ ಹೆಚ್ಚನ್ನು ಕೂಡಿಸಿತೆಂಬಂತೆ ತೋರಿತು. (1) ಮೊಟ್ಟೆಗಳನ್ನಿಡುವ ಆದರೆ ಸ್ತನಗಳ ರಸಗ್ರಂಥಿಗಳು ಇರುವ, (2) ತುಪ್ಪುಳು ಚರ್ಮವುಳ್ಳದ್ದು ಆದರೆ ಬಾತಿನ ಕೊಕ್ಕಿರುವ, ಮತ್ತು (3) ಶೀತ-ರಕ್ತದ ಸರೀಸೃಪದ ವೈಶಿಷ್ಟ್ಯಗಳೊಂದಿಗಿನ ಒಂದು ಅಸ್ಥಿಪಂಜರವಿರುವ ಆದರೂ ಬಿಸಿ-ರಕ್ತದ್ದಾಗಿರುವ ಒಂದು ಜೀವಿಯನ್ನು ನೀವು ಹೇಗೆ ವರ್ಗೀಕರಿಸುವಿರಿ?

ಪ್ಲ್ಯಾಟಿಪಸ್‌, ಮೊನೊಟ್ರೇಮಾಟಾ ಎಂಬ ವರ್ಗದ ಒಂದು ಸಸ್ತನಿಯಾಗಿದೆಯೆಂದು ವಿಜ್ಞಾನಿಗಳು ಸಮಯಾನಂತರ ಒಪ್ಪಿಕೊಂಡರು. ಒಂದು ಮೊನೊಟ್ರೀಮ್‌ ಪ್ರಾಣಿಗೆ, ಸರೀಸೃಪದಂತೆ, ಮೊಟ್ಟೆಗಳು, ವೀರ್ಯ, ಮಲ ಮತ್ತು ಮೂತ್ರದ ಸಾಗಣೆಗಾಗಿ ಒಂದೇ ತೆರಪು ಅಥವಾ ಸಂದು ಇದೆ. ಜೀವಿಸುತ್ತಿರುವ ಇನ್ನೊಂದು ಏಕಮಾತ್ರ ಮೊನೊಟ್ರೀಮ್‌ ಪ್ರಾಣಿಯು, ಎಕೀಡ್ನಾ ಆಗಿದೆ. ಪ್ಲ್ಯಾಟಿಪಸ್‌ಗೆ ಕೊಡಲ್ಪಟ್ಟಿರುವ ವೈಜ್ಞಾನಿಕ ಹೆಸರು ಆರ್ನಿತಾರಿಂಕಸ್‌ ಆ್ಯನಟೈನಸ್‌. ಅದರ ಅರ್ಥ “ಪಕ್ಷಿಯ ಮೂತಿಯಿರುವ ಬಾತಿನಂತಹ ಪ್ರಾಣಿ.”

ಒಂದು ಪ್ಲ್ಯಾಟಿಪಸನ್ನು ನೋಡಲು ಹೋಗೋಣ

ನಾವು ಒಂದು ಮೃಗಾಲಯಕ್ಕೆ ಹೋಗಸಾಧ್ಯವಿದೆ, ಆದರೆ ಗೋಪ್ಯಪ್ರವೃತ್ತಿಯ ಪ್ಲ್ಯಾಟಿಪಸನ್ನು ಕಾಡಿನಲ್ಲಿ ನೋಡುವಷ್ಟು ಅಪೂರ್ವವಾದ ಅನುಭವ ಇನ್ನೊಂದಿಲ್ಲ. ಆಸ್ಟ್ರೇಲಿಯದವರಲ್ಲೂ ಕೆಲವೇ ಜನರು ಅದನ್ನು ಹೀಗೆ ನೋಡಿದ್ದಾರೆ. ಆಸ್ಟ್ರೇಲಿಯದ ಪೂರ್ವ ದಿಕ್ಕಿನಲ್ಲಿರುವ ಸಿಹಿನೀರಿನ ನದಿಗಳು, ಕೊಳಗಳು ಮತ್ತು ಕೆರೆಗಳಲ್ಲೂ ನಾವು ಪ್ಲ್ಯಾಟಿಪಸನ್ನು ನೋಡಬಹುದಾದರೂ, ನಮ್ಮ ಶೋಧನೆಯು ಪೌರಾತ್ಯ ಆಸ್ಟ್ರೇಲಿಯದಲ್ಲಿ, ಸಿಡ್ನಿಯ ಪಶ್ಚಿಮಕ್ಕಿರುವ ಬ್ಲೂ ಮೌಂಟನ್ಸ್‌ಗಳಲ್ಲಿ ಆರಂಭವಾಗುತ್ತದೆ.

ನೀಲಗಿರಿ ಮರಗಳಿಂದ ಸಾಲುಗಟ್ಟಿರುವ, ಗಾಜಿನಂತಹ ನದಿಯೊಂದರ ಒಂದು ಹಳೆಯ ಮರದ ಸೇತುವೆಯ ಬಳಿ ನಾವು ಸೂರ್ಯೋದಯದ ಮುಂಚೆಯೇ ಆಗಮಿಸುತ್ತೇವೆ. ತಾಳ್ಮೆಯಿಂದ ಮತ್ತು ಮೌನವಾಗಿ ನಾವು ಕೆಳಕ್ಕೆ ಜೋಲಿರುವ ಒಂದು ನೆರಳುಚಿತ್ರಕ್ಕಾಗಿ ನೀರನ್ನು ನೋಡುತ್ತಾ ಇರುತ್ತೇವೆ. ಬೇಗನೆ ನಮಗೆ ಪ್ರತಿಫಲ ಸಿಗುತ್ತದೆ. ಹೊಳೆಯಲ್ಲಿ ಸುಮಾರು 50 ಮೀಟರುಗಳ ದೂರದಲ್ಲಿ, ನಮ್ಮ ದಿಕ್ಕಿನತ್ತ ಚಲಿಸುತ್ತಾ ಬರುತ್ತಿರುವ ಒಂದು ಆಕಾರವು ತೋರಿಬರುತ್ತದೆ. ನಾವು ಸ್ವಲ್ಪವೂ ಚಲಿಸದೆ ನಿಲ್ಲಬೇಕು.

ಅದರ ಕೊಕ್ಕಿನಿಂದ ಹರಡುವ ತರಂಗಗಳ ಸುರಿಮಳೆಯು, ಅದು ಒಂದು ಪ್ಲ್ಯಾಟಿಪಸ್‌ ಆಗಿದೆಯೆಂಬುದನ್ನು ದೃಢೀಕರಿಸುತ್ತದೆ. ಆ ಸ್ವಯಂಸೂಚಕ ತರಂಗಗಳು, ಪ್ಲ್ಯಾಟಿಪಸ್‌, ನದಿಯ ತಳದಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿರುವಾಗ ತನ್ನ ಗಲ್ಲದ ಚೀಲಗಳಲ್ಲಿ ಶೇಖರಿಸಿಕೊಂಡಿರುವ ಆಹಾರವನ್ನು ಅಗಿಯುತ್ತಿರುವಾಗ ಉಂಟಾಗುತ್ತವೆ. ಅದರ ಆಹಾರಪಥ್ಯದಲ್ಲಿ, ಪ್ರಧಾನವಾಗಿ ಹುಳುಗಳು, ಕೀಟದ ಮರಿಹುಳುಗಳು ಮತ್ತು ಸಿಹಿನೀರಿನ ಸೀಗಡಿಗಳು ಒಳಗೂಡಿರುವುದಾದರೂ, ಅದು ಋತುವಿಗನುಸಾರ ಬದಲಾಗುತ್ತದೆ.

ಪ್ಲ್ಯಾಟಿಪಸ್‌ನ ಚಿಕ್ಕ ಗಾತ್ರವು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೊ? ಅದು ಅನೇಕ ಜನರನ್ನು ಆಶ್ಚರ್ಯಗೊಳಿಸುತ್ತದೆ. ಒಂದು ಪ್ಲ್ಯಾಟಿಪಸ್‌, ಸುಮಾರು ಒಂದು ಬೀವರ್‌ ಅಥವಾ ಒಂದು ನೀರುನಾಯಿಯ ಗಾತ್ರದಷ್ಟು ದೊಡ್ಡದಾಗಿರುತ್ತದೆಂದು ಅವರು ಊಹಿಸಿಕೊಳ್ಳುತ್ತಾರೆ. ಆದರೆ ನೀವು ನೋಡುತ್ತಿರುವಂತೆ, ಅದು ಒಂದು ಸಾಮಾನ್ಯವಾದ ಮನೆ ಬೆಕ್ಕಿಗಿಂತಲೂ ಚಿಕ್ಕದಾಗಿದೆ. ಗಂಡುಗಳು 45ರಿಂದ 60 ಸೆಂಟೀಮೀಟರುಗಳಷ್ಟು ಉದ್ದವಾಗಿರುತ್ತವೆ ಮತ್ತು ಒಂದರಿಂದ ಎರಡೂವರೆ ಕಿಲೊಗ್ರಾಮ್‌ಗಳಷ್ಟು ತೂಕದ್ದಾಗಿರುತ್ತವೆ. ಹೆಣ್ಣುಗಳು ಸ್ವಲ್ಪ ಚಿಕ್ಕದ್ದಾಗಿರುತ್ತವೆ.

ಅದರ ಜಾಲಗಳುಳ್ಳ ಮುಂಗಾಲುಗಳಿಂದ ಒಂದರ ನಂತರ ಒಂದರ ಹುಟ್ಟುಹಾಕುವಿಕೆಯಿಂದ ಮುನ್ನೂಕಲ್ಪಟ್ಟು, ಅದು ಶಾಂತವಾಗಿ ಧುಮುಕುತ್ತದೆ ಮತ್ತು ಅದು ಸೇತುವೆಯ ಕೆಳಗೆ ಈಜುತ್ತಿರುವಾಗ, ಒಂದೆರಡು ನಿಮಿಷಗಳಿಗಾಗಿ ನೀರಿನಡಿಯಲ್ಲಿರುತ್ತದೆ. ಆಂಶಿಕವಾಗಿ ಜಾಲಗಳುಳ್ಳ ಅದರ ಹಿಂಗಾಲುಗಳು, ಮುನ್ನೂಕುವಿಕೆಗಾಗಿ ಉಪಯೋಗಿಸಲ್ಪಡುವುದಿಲ್ಲ, ಬದಲಾಗಿ ಚುಕ್ಕಾಣಿಗಳಂತೆ ಕಾರ್ಯನಡಿಸುತ್ತವೆ ಮತ್ತು ಪ್ಲ್ಯಾಟಿಪಸ್‌ ಈಜುತ್ತಿರುವಾಗ ಅದರ ಬಾಲದೊಂದಿಗೆ ಹೊಂದಿಕೆಯಲ್ಲಿ ಕೆಲಸಮಾಡುತ್ತವೆ. ಅದು ಬಿಲ ತೋಡುವಾಗ ಅದರ ದೇಹವನ್ನು ಅವು ಭದ್ರವಾಗಿ ನಿಲ್ಲಿಸುತ್ತವೆ ಕೂಡ.

ಶಾಂತಿಭಂಗ ಮಾಡಲ್ಪಡುವಲ್ಲಿ, ಪ್ಲ್ಯಾಟಿಪಸ್‌ ಒಂದು ಕರ್ಣಗೋಚರ ಅಪ್ಪಳಿಕೆಯೊಂದಿಗೆ ಧುಮುಕುತ್ತದೆ, ಮತ್ತು ಅದರ ಅರ್ಥ ಶುಭಮಸ್ತು! ಆದುದರಿಂದ ಅದು ನೀರಿನಡಿಯಲ್ಲಿರುವಾಗ ಮಾತ್ರವೇ ನಾವು ಮಾತಾಡುತ್ತೇವೆ. “ಇಷ್ಟು ಪುಟ್ಟ ಪ್ರಾಣಿಯು, ವಿಶೇಷವಾಗಿ ಚಳಿಗಾಲದ ಹಿಮದಂತಹ ನೀರುಗಳಲ್ಲಿ ಹೇಗೆ ಬೆಚ್ಚಗಿರುತ್ತದೆ?” ಎಂದು ನೀವು ಪಿಸುಗುಟ್ಟುತ್ತೀರಿ. ಈ ಎರಡು ಸಹಾಯಕಗಳಿಂದಾಗಿ ಪ್ಲ್ಯಾಟಿಪಸ್‌ ಚೆನ್ನಾಗಿ ನಿರ್ವಹಿಸಿಕೊಂಡುಹೋಗುತ್ತದೆ: ಶೀಘ್ರ ಗತಿಯಲ್ಲಿ ಶಕ್ತಿಯನ್ನು ಉತ್ಪಾದಿಸುವ ಮತ್ತು ಈ ರೀತಿಯಲ್ಲಿ ಅದನ್ನು ಒಳಗಿನಿಂದ ಬೆಚ್ಚಗೆಗೊಳಿಸುವ ಜೀವದ್ರವ್ಯ ಪರಿಣಾಮ, ಹಾಗೂ ಶಾಖವನ್ನು ಒಳಗಿಡುವ ದಟ್ಟವಾದ ತುಪ್ಪುಳು.

ಆ ಆಶ್ಚರ್ಯಜನಕ ಕೊಕ್ಕು

ಪ್ಲ್ಯಾಟಿಪಸ್‌ನ ಮೆತ್ತಗಿನ, ರಬ್ಬರಿನಂತಹ ಕೊಕ್ಕು, ತುಂಬ ಜಟಿಲವಾಗಿದೆ. ಸ್ಪರ್ಶ ಮತ್ತು ವಿದ್ಯುತ್‌ ಚಟುವಟಿಕೆಗಾಗಿ ಅದು ಸಂವೇದಕ ಗ್ರಾಹಕಗಳಿಂದ ಮುಚ್ಚಲ್ಪಟ್ಟಿದೆ. ನದಿಯ ತಳದಲ್ಲಿ ಪ್ಲ್ಯಾಟಿಪಸ್‌ ತನ್ನ ಬೇಟೆಯ ಮಾಂಸಲ ಸಂಕೋಚನಗಳಿಂದ ಉಂಟುಮಾಡಲ್ಪಟ್ಟ ತೀರ ಮಂದವಾದ ವಿದ್ಯುತ್‌ ಕ್ಷೇತ್ರಗಳನ್ನೂ ಪತ್ತೆಹಚ್ಚುತ್ತಾ, ತನ್ನ ಕೊಕ್ಕನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಮೆಲ್ಲನೆ ಬೀಸುತ್ತದೆ. ಪ್ಲ್ಯಾಟಿಪಸ್‌ ನೀರಿನಡಿಯಲ್ಲಿರುವಾಗ, ಅದರ ಕಣ್ಣುಗಳು, ಕಿವಿಗಳು ಮತ್ತು ಮೂಗು ಬಿಗಿಯಾಗಿ ಮುಚ್ಚಿರುವುದರಿಂದ, ಅದರ ಕೊಕ್ಕು ಆ ಪ್ರಪಂಚದೊಂದಿಗಿನ ಮುಖ್ಯ ಸಂಪರ್ಕಸಾಧನವಾಗಿರುತ್ತದೆ.

ಆ ಮುಳ್ಳುಗಳ ಕುರಿತು ಜಾಗ್ರತೆ!

ನಮ್ಮ ಪುಟ್ಟ ಸ್ನೇಹಿತನು ಒಬ್ಬ ಗಂಡಾಗಿರುವಲ್ಲಿ, ಅವನ ಹಿಂಗಾಲುಗಳು, ತೊಡೆಯ ಕ್ಷೇತ್ರದಲ್ಲಿರುವ ಎರಡು ವಿಷಗ್ರಂಥಿಗಳಿಗಿರುವ ನಾಳಗಳೊಂದಿಗೆ ಜೋಡಿಸಲ್ಪಟ್ಟಿರುವ ಎರಡು ಕಣಕಾಲು ಮುಳ್ಳುಗಳೊಂದಿಗೆ ಸಜ್ಜಿತವಾಗಿವೆ. ಒಬ್ಬ ರಾಹುತನು ತನ್ನ ಕುದುರೆಯನ್ನು ತಿವಿಯುವ ರೀತಿಗೆ ಸಾಧಾರಣವಾಗಿ ಹೋಲುತ್ತಾ, ಅವನು ಎರಡೂ ಮುಳ್ಳುಗಳನ್ನು ಆಕ್ರಮಣಕಾರನ ಮಾಂಸದೊಳಗೆ ಬಲವಾಗಿ ಚುಚ್ಚುತ್ತಾನೆ. ಆರಂಭದ ಆಘಾತದ ನಂತರ ಸ್ಪಲ್ಪ ಸಮಯದಲ್ಲೇ, ಬಲಿಯಾದವನು ತೀವ್ರವಾದ ನೋವು ಮತ್ತು ಆ ಭಾಗದಲ್ಲಿ ಊತವನ್ನು ಅನುಭವಿಸುತ್ತಾನೆ.

ಆದರೂ, ಬಂಧಿವಾಸದಲ್ಲಿರುವಾಗ, ಪ್ಲ್ಯಾಟಿಪಸ್‌ ಒಂದು ನಾಯಿಮರಿಯಷ್ಟು ಸಾಧುವಾಗಿರಬಲ್ಲದು. ವಿಕ್ಟೋರಿಯದಲ್ಲಿರುವ ಹೀಲ್ಸ್‌ವಿಲ್ಲಾ ಸ್ಯಾಂಕ್ಚುರಿ ಈ ಪ್ರಾಣಿಗಳನ್ನು ಅನೇಕ ದಶಕಗಳಿಂದ ಇಟ್ಟಿದೆ. ಒಂದು ಆರಂಭದ ನಿವಾಸಿ ಪ್ಲ್ಯಾಟಿಪಸ್‌, “ತನ್ನ ಹೊಟ್ಟೆಯನ್ನು ತುರಿಸಿಕೊಳ್ಳಲು ಪದೇ ಪದೇ ಹೊರಳಾಡುತ್ತಾ, ಸಂದರ್ಶಕರಿಗೆ ಗಂಟಾನುಗಟ್ಟಲೆ ಮನೋರಂಜನೆ ನೀಡುತ್ತಿತ್ತು . . . ಈ ಅಸಾಧಾರಣವಾದ ಪುಟ್ಟ ಪ್ರಾಣಿಯನ್ನು ನೋಡಲು ಸಾವಿರಾರು ಸಂದರ್ಶಕರು ಹಿಂಡುಹಿಂಡಾಗಿ ಬರುತ್ತಿದ್ದರು.”

ನಮ್ಮ ಪೂರ್ವದಿಕ್ಕಿನಲ್ಲಿರುವ ಪರ್ವತ ಶ್ರೇಣಿಗಳಿಂದ ಬೆಳಗ್ಗಿನ ಸೂರ್ಯನು ಇಣಿಕಿದಂತೆ, ನಮ್ಮ ಪ್ಲ್ಯಾಟಿಪಸ್‌ ಆ ದಿನಕ್ಕಾಗಿರುವ ತನ್ನ ಕೊನೆಯ ಧುಮುಕುವಿಕೆಯನ್ನು ಮಾಡುತ್ತಾನೆ. ರಾತ್ರಿಯೆಲ್ಲಾ ಅವನು ತನ್ನ ಮೈತೂಕದ ಐದನೇ ಒಂದಂಶಕ್ಕಿಂತ ಹೆಚ್ಚು ಆಹಾರವನ್ನು ತಿಂದಿದ್ದಾನೆ. ಅವನು ನೀರಿನಿಂದ ಹೊರಬಂದಂತೆ, ಅವನ ಮುಂಗಾಲುಗಳ ಮೇಲಿನ ಜಾಲಗಳು, ಸಂಕುಚಿತಗೊಳ್ಳುತ್ತಾ, ಬಲವಾದ ಉಗುರುಗಳನ್ನು ಹೊರಚಾಚುತ್ತವೆ. ಈಗ ಅವನು ತನ್ನ ಅನೇಕ ಬಿಲಗಳಲ್ಲಿ ಒಂದು ಬಿಲದ ಕಡೆಗೆ ಸಾಗುತ್ತಾನೆ. ಇವು, ಸವೆತ ಮತ್ತು ಕುಸಿತದ ವಿರುದ್ಧ ಸಂರಕ್ಷಣೆಗಾಗಿ ವಿವೇಕಯುತವಾಗಿ ಮರಗಳ ಬೇರುಗಳ ನಡುವೆ ತೋಡಲ್ಪಟ್ಟಿವೆ. ಮೊಟ್ಟೆಮರಿಗಳನ್ನಿಡುವ ಬಿಲಗಳು ಸಾಧಾರಣವಾಗಿ ಸುಮಾರು ಎಂಟು ಮೀಟರ್‌ಗಳಷ್ಟು ಉದ್ದವಿರುತ್ತವೆ, ಆದರೆ ಬೇರೆ ಬಿಲಗಳು ಒಂದು ಮೀಟರ್‌ನಿಂದ ಹಿಡಿದು ಹತ್ತಿರಹತ್ತಿರ ಮೂವತ್ತು ಮೀಟರುಗಳಷ್ಟು ಉದ್ದವಾಗಿದ್ದು, ಪಕ್ಕದಲ್ಲಿ ಅನೇಕ ಶಾಖೆಗಳನ್ನು ಹೊಂದಿರಬಹುದು. ಬಿಲಗಳು ವಿಪರೀತ ತಾಪಮಾನಗಳಿಂದಲೂ ಸಂರಕ್ಷಣೆಯನ್ನು ಒದಗಿಸುತ್ತಾ, ಅವುಗಳನ್ನು, ಹೆಣ್ಣುಗಳು ತಮ್ಮ ಮರಿಗಳನ್ನು ಬೆಳೆಸಲು ಸುಖದಾಯಕವಾದ ಗೂಡುಗಳನ್ನಾಗಿ ಮಾಡುತ್ತವೆ.

ಮೊಟ್ಟೆಯಿಡುವ ಸಮಯ

ವಸಂತಕಾಲದಲ್ಲಿ, ಹೆಣ್ಣು ಪ್ಲ್ಯಾಟಿಪಸ್‌ ತನ್ನ ಹೆಚ್ಚು ಆಳವಾಗಿರುವ ಬಿಲಗಳಲ್ಲಿ ಸಸ್ಯದಿಂದ ಹಾಸಲ್ಪಟ್ಟ ಒಂದು ಗೂಡಿಗೆ ಹೋಗಿ, ಒಂದರಿಂದ ಮೂರು (ಸಾಮಾನ್ಯವಾಗಿ ಎರಡು) ಹೆಬ್ಬೆಟ್ಟುಗುರಿನ ಗಾತ್ರದ ಮೊಟ್ಟೆಗಳನ್ನಿಡುತ್ತದೆ. ತನ್ನ ದೇಹ ಮತ್ತು ಕೊಬ್ಬುತುಂಬಿದ ಬಾಲದಿಂದ ಮೊಟ್ಟೆಗಳನ್ನು ಸುತ್ತುವರಿಯುವ ಮೂಲಕ ಅವಳು ಮೊಟ್ಟೆಗಳಿಗೆ ಕಾವು ಕೊಡುತ್ತಾಳೆ. ಸುಮಾರು ಹತ್ತು ದಿವಸಗಳೊಳಗೆ, ಮರಿಗಳು ತಮ್ಮ ಚರ್ಮಕಾಗದದಂತಹ ಚಿಪ್ಪುಗಳಿಂದ ಹೊರಬಂದು, ತಮ್ಮ ತಾಯಿಯ ಎರಡು ಸ್ತನ ರಸಗ್ರಂಥಿಗಳಿಂದ ಬರುವ ಹಾಲನ್ನು ಸೇವಿಸುತ್ತವೆ. ಅಂದ ಹಾಗೆ, ಹೆಣ್ಣು ಪ್ಲ್ಯಾಟಿಪಸ್‌ ತನ್ನ ಮರಿಗಳನ್ನು ಒಬ್ಬಳೇ ಬೆಳೆಸುತ್ತಾಳೆ; ಈ ಸಸ್ತನಿಗಳು ದೀರ್ಘಾವಧಿಯ ಜೋಡಿ ಬಂಧನದ ಯಾವುದೇ ಪುರಾವೆಯನ್ನು ಒದಗಿಸುವುದಿಲ್ಲ.

ಮೂರುವರೆ ತಿಂಗಳುಗಳ ಬೆಳವಣಿಗೆಯ ಚಿಮ್ಮುವಿಕೆಯ ನಂತರ, ಸುಮಾರು ಫೆಬ್ರವರಿಯಷ್ಟಕ್ಕೆ ಮರಿಗಳು ನೀರಿನಲ್ಲಿ ಹೋಗಲು ಸಿದ್ಧವಾಗಿರುತ್ತವೆ. ಒಂದು ಜಲರಾಶಿಯು ಇಂತಿಷ್ಟೇ ಪ್ರಾಣಿಗಳನ್ನು ಪೋಷಿಸಲು ಸಾಧ್ಯವಿರುವುದರಿಂದ, ಕಟ್ಟಕಡೆಗೆ ಮರಿಗಳು ಕಡಿಮೆ ಸಾಂದ್ರತೆಯುಳ್ಳ ಜಲರಾಶಿಗಳ ಅನ್ವೇಷಣೆಯಲ್ಲಿ ಹೊರಡಬಹುದು. ಇದನ್ನು ಮಾಡಲಿಕ್ಕಾಗಿ ಅವು ಅಪಾಯಕರವಾದ ಭೂಕ್ಷೇತ್ರಗಳನ್ನು ದಾಟಿಹೋಗಬಹುದು.

ಬಂಧಿವಾಸದಲ್ಲಿ ಪ್ಲ್ಯಾಟಿಪಸ್‌ಗಳು 20ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಜೀವಿಸಿವೆ, ಆದರೆ ಕಾಡಿನಲ್ಲಿ ಹೆಚ್ಚಿನವು ಅಷ್ಟು ದೀರ್ಘ ಸಮಯ ಜೀವಿಸುವುದಿಲ್ಲ. ಕ್ಷಾಮ ಮತ್ತು ನೆರೆಗಳು ಅವುಗಳ ಬಲಿತೆಗೆದುಕೊಳ್ಳುತ್ತವೆ. ಅಷ್ಟೇ ಅಲ್ಲ, ಗೊಆನಾಗಳು (ದೊಡ್ಡಗಾತ್ರದ ಮಾನಿಟರ್‌ ಹಲ್ಲಿಗಳು), ನರಿಗಳು, ಹಿಂಸ್ರ ಪಕ್ಷಿಗಳು ಮತ್ತು ದೂರದ ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿ, ಮೊಸಳೆಗಳಿಂದಲೂ ಅವು ಕೊಂದು ತಿನ್ನಲ್ಪಡುತ್ತವೆ. ಆದಾಗಲೂ, ಪ್ಲ್ಯಾಟಿಪಸ್‌ಗಳಿಗೆ ಅತಿ ದೊಡ್ಡದಾದ ಬೆದರಿಕೆಯು ಮನುಷ್ಯನಾಗಿದ್ದಾನೆ. ಅವುಗಳನ್ನು ಉದ್ದೇಶಪೂರ್ವಕವಾಗಿ ಕೊಲ್ಲುವ ಮೂಲಕವಲ್ಲ (ಪ್ಲ್ಯಾಟಿಪಸ್‌ಗಳನ್ನು ಈಗ ಕಟ್ಟುನಿಟ್ಟಾಗಿ ಸಂರಕ್ಷಿಸಲಾಗಿದೆ), ಬದಲಾಗಿ ಅವುಗಳ ಇರುನೆಲೆಯನ್ನು ನಿರಂತರವಾಗಿ ಅತಿಕ್ರಮಿಸುವ ಮೂಲಕವೇ.

ನೀವೆಂದಾದರೂ ಆಸ್ಟ್ರೇಲಿಯಕ್ಕೆ ಭೇಟಿನೀಡುವಲ್ಲಿ, ನೀವು ಸ್ವತಃ ನಮ್ಮ ಅಪೂರ್ವವಾದ ಬಾತುಕೊಕ್ಕಿನ ಪುಟ್ಟ ಕಲಬೆರಕೆಯನ್ನು ಅದರ ನೈಸರ್ಗಿಕ ಇರುನೆಲೆಯಲ್ಲಿ ನೋಡಬಹುದು. ಯಾಕಂದರೆ ಲೋಕದಲ್ಲಿ ಇನ್ನೆಲ್ಲಿಯೂ ಯಾವ ಕಾಡಿನಲ್ಲೂ ನೀವು ಒಂದನ್ನು ಕಾಣಲಾರಿರಿ. ಪ್ಲ್ಯಾಟಿಪಸ್‌ನ ಸೌಜನ್ಯದಿಂದಾಗಿ, ಸೃಷ್ಟಿಕರ್ತನ ಮಿತಿಯಿಲ್ಲದ ಊಹನಾಶಕ್ತಿ—ಹಾಗೂ ಹಾಸ್ಯಪ್ರಜ್ಞೆ—ಯ ಇನ್ನೊಂದು ಮುಖವನ್ನು ನೀವು ಅನುಭವಿಸುವಿರಿ.

[ಪುಟ 28 ರಲ್ಲಿರುವ ಚಿತ್ರ]

ಪ್ಲ್ಯಾಟಿಪಸ್‌ ತನ್ನ ಜಾಲಗಳುಳ್ಳ ಪಾದಗಳಿಂದ ತನ್ನನ್ನೇ ಮುನ್ನೂಕಿಕೊಳ್ಳುತ್ತದೆ

[ಕೃಪೆ]

Courtesy of Taronga Zoo

[ಪುಟ 28 ರಲ್ಲಿರುವ ಚಿತ್ರ]

ಪ್ಲ್ಯಾಟಿಪಸ್‌ ಸಾಮಾನ್ಯವಾದ ಮನೆ ಬೆಕ್ಕಿಗಿಂತ ಚಿಕ್ಕದ್ದಾಗಿದ್ದು, ಒಂದರಿಂದ ಎರಡೂವರೆ ಕಿಲೊಗ್ರಾಮ್‌ಗಳಷ್ಟು ತೂಕದ್ದಾಗಿರುತ್ತದೆ

[ಕೃಪೆ]

Courtesy of Dr. Tom Grant

[ಪುಟ 28 ರಲ್ಲಿರುವ ಚಿತ್ರ]

ಅದರ ತೀಕ್ಷ್ಣವಾದ ಸಂವೇದನಾಶೀಲ ಕೊಕ್ಕು, ನೀರಿನಡಿಯಲ್ಲಿ ಬೇಟೆಯನ್ನು ಕಂಡುಹಿಡಿಯುತ್ತದೆ. (ಈ ಪ್ಲ್ಯಾಟಿಪಸ್‌ ಹೀಲ್ಸ್‌ವಿಲ್ಲಾ ಸ್ಯಾಂಕ್ಚುರಿಯಲ್ಲಿದೆ)

[ಕೃಪೆ]

Courtesy of Healesville Sanctuary

[ಪುಟ 27 ರಲ್ಲಿರುವ ಚಿತ್ರ ಕೃಪೆ]

ಛಾಯಾಚಿತ್ರ: Courtesy of Dr. Tom Grant

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ