ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g97 4/8 ಪು. 22-25
  • ಏರುಬ್ಬರದ ಭರಾಟಿ ಸಂಚಾರ ಕಾಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏರುಬ್ಬರದ ಭರಾಟಿ ಸಂಚಾರ ಕಾಲ
  • ಎಚ್ಚರ!—1997
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಳಿವೆಗಳ ಪ್ರಮುಖತೆ
  • ಉಕ್ಕುಭರತಗಳು
  • ಏರುತ್ತಿರುವ ಭರತ
  • ಭರಾಟಿ ಆರಂಭಿಸುತ್ತದೆ
  • ವಿಶ್ರಾಂತಿ ಸ್ಥಳ
  • ವಲಸೆ ಹೋಗುವಿಕೆಯ ರಹಸ್ಯಗಳನ್ನು ಪರೀಕ್ಷಿಸುವುದು
    ಎಚ್ಚರ!—1995
  • ಕಟ್ಟಡಕ್ಕೆ ಹಕ್ಕಿ ಡಿಕ್ಕಿಹೊಡೆಯುವಾಗ
    ಎಚ್ಚರ!—2009
  • ವಾಸ್ಕೋಡಿಗಾಮ ಎಂದು ಹೆಸರಿಡಲ್ಪಟ್ಟ ಒಂದು ಸೇತುವೆ
    ಎಚ್ಚರ!—1998
ಎಚ್ಚರ!—1997
g97 4/8 ಪು. 22-25

ಏರುಬ್ಬರದ ಭರಾಟಿ ಸಂಚಾರ ಕಾಲ

ಬ್ರಿಟನ್‌ನ ಎಚ್ಚರ! ಸುದ್ದಿಗಾರರಿಂದ

ಸುಮಾರು ಒಂದು ಕೋಟಿ ಪಕ್ಷಿಗಳು ಪ್ರತಿವರುಷ ವಾಯುವ್ಯ ಯೂರೋಪಿನಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಅವು ಉತ್ತರ ಧ್ರುವದ ಸಂತಾನವೃದ್ಧಿ ಪ್ರದೇಶದಿಂದ ಮಾತ್ರವಲ್ಲ, ಕೆನಡ ಮತ್ತು ಮಧ್ಯ ಸೈಬೀರಿಯದಷ್ಟು ದೂರದಿಂದಲೂ ಬರುತ್ತವೆ. ಆಫ್ರಿಕಕ್ಕೆ ಹೋಗುವ ದಾರಿಯಲ್ಲಿ, ಇನ್ನನೇಕ ಪಕ್ಷಿಗಳು, ಬ್ರಿಟಿಷ್‌ ದ್ವೀಪಗಳನ್ನು ದಾಟುವ ಋತು ಪ್ರಯಾಣ ಮಾರ್ಗವಾದ ಪೂರ್ವ ಅಟ್ಲಾಂಟಿಕ್‌ ಹಾರುದಾರಿಗೆ ಬಂದು ಸೇರುತ್ತವೆ.

ಇವುಗಳಿಗೆ ಆಹಾರ ಮತ್ತು ವಿಶ್ರಾಂತಿ ಸ್ಥಾನವನ್ನು ಬ್ರಿಟಿಷ್‌ ಜಲಸಮೂಹದಲ್ಲಿರುವ 30ಕ್ಕಿಂತಲೂ ಹೆಚ್ಚು ದೊಡ್ಡ ಅಳಿವೆಗಳ ಶ್ರೇಣಿಯು ಒದಗಿಸುತ್ತದೆ. ಇವುಗಳಲ್ಲಿ ಪ್ರತಿಯೊಂದು ಅಳಿವೆಯು 20,000ಕ್ಕೂ ಹೆಚ್ಚು ಪಕ್ಷಿಗಳಿಗೆ ಆಶ್ರಯ ಕೊಡುತ್ತದೆ. ಆದರೆ ಅತಿ ಪ್ರಮುಖವಾಗಿರುವುದು ಇಂಗ್ಲೆಂಡಿನ ಪೂರ್ವ ಕರಾವಳಿಯಲ್ಲಿರುವ ದ ವಾಷ್‌ ಒಳಚಾಚು. ಇದು ಕರ್ಲೂ, ಡನ್ಲಿನ್‌, ಗಾಡ್ವಿಟ್‌, ನಾಟ್‌, ಆಯ್‌ಸ್ಟರ್‌ಕ್ಯಾಚರ್‌, ಪ್ಲವರ್‌, ರೆಡ್‌ಶ್ಯಾಂಕ್‌ ಮತ್ತು ಟರ್ನ್‌ಸ್ಟೋನ್‌ ಪಕ್ಷಿಗಳನ್ನು ಒಳಗೊಂಡಿರುವ 2.5 ಲಕ್ಷಗಳಿಗೂ ಹೆಚ್ಚಿನ ಪಕ್ಷಿಗಳಿಗೆ ಆಶ್ರಯ ನೀಡುತ್ತದೆ. ಅಳಿವೆಗಳು ಯಾವ ರೀತಿಯ ಆಹಾರವನ್ನು ಒದಗಿಸುತ್ತವೆ ಮತ್ತು ಅವೇಕೆ ಅಷ್ಟು ಪ್ರಾಮುಖ್ಯ?

ಅಳಿವೆಗಳ ಪ್ರಮುಖತೆ

ಅಳಿವೆಗಳು, ಎಲ್ಲಿ ಕಡಲನೀರು ಸಿಹಿನೀರಿನೊಂದಿಗೆ ಬೆರೆಯುತ್ತದೊ ಅಂತಹ ಅರ್ಧಾವರಿತ ಕರಾವಳಿ ಪ್ರದೇಶಗಳು. ಇಲ್ಲಿ ಖನಿಜ ಮತ್ತು ಜೈವಿಕ ಪೋಷಕಗಳಲ್ಲಿ ಫಲವತ್ತಾಗಿರುವ ಬೆಚ್ಚಗಿನ ನೀರು, ಜಗತ್ತಿನ ಸಾಗರಗಳ ಜೀವಿಗಳಲ್ಲಿ ಅರ್ಧಾಂಶಕ್ಕೆ ಪೋಷಣೆ ಕೊಡುತ್ತದೆ. ಸಿಗಡಿ, ಸ್ಯಾಂಡ್‌ ಹಾಪರ್‌ ಮತ್ತು ಇತರ ಜೀವರೂಪಗಳು ಮರಳಿನಲ್ಲಿ ಕಂಡುಬರುವುದಾದರೂ ಅಳಿವೆಯ ಕೆಸರು ಮಣ್ಣು ಇನ್ನೂ ಹೆಚ್ಚಿನ ಜೀವರೂಪಗಳನ್ನು ಪೋಷಿಸುತ್ತದೆ.

ಕೆಸರು ಮಣ್ಣು, ಅದು ಯಾವುದರಿಂದ ಮಾಡಲ್ಪಡುತ್ತದೊ ಆ ಮಡ್ಡಿಯ ಗಾತ್ರಕ್ಕನುಸಾರವಾಗಿ ಭಿನ್ನವಾಗಿರುತ್ತದೆ. ಪ್ರತಿ ನಮೂನೆಯ ಕೆಸರು ಮಣ್ಣಿನಲ್ಲಿ ಅದರದ್ದೇ ಆದ, ನೀರಹಕ್ಕಿಗಳ ಆಹಾರವಾದ ವಿಶೇಷ ಜಲಜೀವಿಗಳಿವೆ.a ಉದಾಹರಣೆಗೆ, ಒಂದು ನಮೂನೆಯ ಕೆಸರಿನ ಒಂದು ಚದರ ಮೀಟರಿನಲ್ಲಿ ಲಕ್ಷಾಂತರ, ಮೂರು ಮಿಲಿಮೀಟರುಗಳಿಗಿಂತ ಕಡಮೆ ಉದ್ದದ ಸೂಕ್ಷ್ಮ ಬಸವನಹುಳುಗಳಿರಬಲ್ಲವು! ಕೂಡಿಕೆಯಾಗಿ, ಕೆಸರು ಮಣ್ಣು ಮೃದ್ವಂಗಿ, ಲಗ್ವರ್ಮ್‌, ರ್ಯಾಗ್ವರ್ಮ್‌ ಮತ್ತು ಇತರ ಅಕಶೇರುಕಗಳನ್ನೂ ಪೋಷಿಸುತ್ತದೆ.

ಉಕ್ಕುಭರತಗಳು

ಒಂದು ಅಳಿವೆಯಲ್ಲಿ ಅನೇಕ ಸಾವಿರ ನೀರಹಕ್ಕಿಗಳಿರಸಾಧ್ಯವಿದೆಯಾದರೂ, ಅವನ್ನು ಕಂಡುಹಿಡಿಯುವುದು ಕಷ್ಟಕರವಾಗಬಹುದು, ಏಕೆಂದರೆ ಅವು ಸಾಮಾನ್ಯವಾಗಿ ವಿಶಾಲವಾದ ಕ್ಷೇತ್ರಗಳಲ್ಲಿ ಹರಡಿರುತ್ತವೆ. ಆದರೂ ಉಕ್ಕುಭರತಗಳು ಬರುವಾಗ ಪರಿಸ್ಥಿತಿ ನಾಟಕೀಯವಾಗಿ ಬದಲಾಗುತ್ತದೆ. ನೀರಿನ ಭರತದ ಅಲೆಯು ಮರಳು ಮತ್ತು ಕೆಸರು ಪ್ರದೇಶಗಳನ್ನು ಮುಳುಗುವಂತೆ ಮಾಡಿ, ನೀರಹಕ್ಕಿಗಳನ್ನು ಅವು ಉಬ್ಬರವಿಳಿತ ಪ್ರಭಾವಿತ ಪ್ರದೇಶ (ಸಾಲ್ಟಿಂಗ್ಸ್‌)b ಮತ್ತಿತರ ಎತ್ತರ ಪ್ರದೇಶಗಳಿಗೆ ಹೋಗುವಂತೆ ಬಲಾತ್ಕರಿಸುತ್ತದೆ. ಆಗ, ಅವು ಒಟ್ಟು ಸೇರಿ, ದೊಡ್ಡ ಮಿಶ್ರಗುಂಪುಗಳಲ್ಲಿ ವಿಶ್ರಮಿಸುವಾಗ ಅವನ್ನು ಅವಲೋಕಿಸುವುದು ಹೆಚ್ಚು ಸುಲಭ.

ಇಂದು, ಉಜ್ವಲ ಸೂರ್ಯಪ್ರಕಾಶವಿರುವ ಈ ಎಪ್ರಿಲ್‌ ಬೆಳಿಗ್ಗೆ, ಉಕ್ಕುಭರತ ಬರುವ ಸಮಯ. ಆಲ್ಡ್‌ ನದಿ ಇಂಗ್ಲೆಂಡಿನ ಸಫಕ್‌ ಜಿಲ್ಲೆಯಲ್ಲಿ ಸುತ್ತಾಡುತ್ತ ನಾರ್ತ್‌ ಸಮುದ್ರಕ್ಕೆ ಹರಿಯುವಲ್ಲಿ ಒಂದು ಚಿಕ್ಕ ಸುಂದರ ಅಳಿವೆಗೆ ನಾವು ಗಾಡಿ ನಡೆಸಿಕೊಂಡು ಹೋಗುವಾಗ, ಶೀತಲ ಈಶಾನ್ಯ ಮಾರುತವೊಂದು ಬೀಸುತ್ತಿದೆ. ಇಲ್ಲಿ ಚಳಿಗಾಲದ ನೀರಹಕ್ಕಿಗಳ ಸಂಖ್ಯೆ 11,000ಕ್ಕಿಂತ ತುಸು ಹೆಚ್ಚಾಗಿದೆ ಮತ್ತು ಅಳಿವೆ ಕೇವಲ 0.8 ಕಿಲೊಮೀಟರ್‌ ಅಗಲವಿರುವುದರಿಂದ ಅವುಗಳ ಚಟುವಟಿಕೆಯನ್ನು ಅವಲೋಕಿಸುವುದು ನಮಗೆ ಹೆಚ್ಚು ಸುಲಭವಾಗುವುದು.

ನದೀಮಾರ್ಗವನ್ನು ತಡೆಗಳಿರುವ ರಕ್ಷಣಾ ರಚನೆಗಳ ಒಂದು ಸಂಕೀರ್ಣವು ಹಿಂಬಾಲಿಸುತ್ತದೆ. ಕೆಲವು ತೀರಗಳು ಜವುಗು ಸಸ್ಯಗಳಿಂದ, ಇನ್ನು ಕೆಲವು ಮ್ಯಾರಮ್‌ ತೀರಹುಲ್ಲಿನಿಂದಾವೃತವಾಗಿವೆ. ಉಳಿದ ಸ್ಥಳಗಳು ಬೋಳಾದ ಕಪ್ಪು ಮರಜೋಡಣೆಗಳು ಮತ್ತು ಕಲ್ಲುಳ್ಳದ್ದಾಗಿವೆ. ತುಸು ಮೇಲ್ಪ್ರವಾಹದಲ್ಲಿ, ವಿಕ್ಟೋರಿಯ ಕಾಲದ ಕಟ್ಟಡಗಳ ನಡುವೆ, ಆಲ್ಡ್‌ಬರ ಸಂಗೀತೋತ್ಸವದ ಮೂಲಸ್ಥಳವಾದ ಸ್ನೇಪ್‌ ಮಾಲ್ಟಿಂಗ್ಸ್‌ ಕಾನ್ಸರ್ಟ್‌ ಹಾಲ್‌ ಇದೆ. ಆದರೆ ನಾವು ನದೀಇಳಿವಿಗೆ ನಡೆದು ಮರೆಯಾಗಿರುವ ಒಂದು ಸ್ಥಳಕ್ಕೆ ಹೋಗಬೇಕು. ಗಾಳಿಯು ಈಗ ಬಲವಾಗಿಯೂ ಇರಿಯುವಂತಹದ್ದೂ ಆಗಿದ್ದು, ಬೇಗನೆ ನಮ್ಮ ಕಣ್ಣುಗಳು ಉರಿಯತೊಡಗುತ್ತವೆ.

ನಾವು ನದೀ ಅಂಚಿಗೆ ಬಂದೊಡನೆ (ಚಿತ್ರದಲ್ಲಿ ಪಾಯಿಂಟ್‌ ಎ ನೋಡಿ.), ನಮ್ಮನ್ನು ಆ್ಯವಸೆಟ್‌ ಪಕ್ಷಿಜೊತೆಯೊಂದರ ಸ್ವಚ್ಛವೂ ನಿರರ್ಗಳವೂ ಆದ ಕರೆಯು ಅಭಿವಂದಿಸುತ್ತದೆ. ಅವು ಅಳಿವೆಯ ನಮ್ಮ ಬದಿಯಲ್ಲಿ 40 ಮೀಟರುಗಳಿಗಿಂತ ಹೆಚ್ಚು ದೂರದಲ್ಲಿರದೆ, ಪ್ರಸ್ತುತ ಪರಸ್ಪರವಾಗಿ ಜೊತೆ ಅಂಟಿಕೆಯ ಸವರಿಕೆಯಲ್ಲಿ ತೊಡಗಿವೆ. ತನ್ನ ತೆಳ್ಳನೆಯ ಮೇಲ್ಬಾಗಿರುವ ಕೊಕ್ಕಿನಿಂದ ಪ್ರತಿ ಪಕ್ಷಿಯು ತನ್ನ ಎದೆಮಟ್ಟದ ಪಕ್ಕಗಳನ್ನು ಕಚ್ಚುತ್ತದೆ. ಇದು ನೋಡಲು ಆನಂದದಾಯಕವಾಗಿದ್ದರೂ, ಇನ್ನೂ ತುಂಬ ನೋಡಲಿಕ್ಕಿರುವುದರಿಂದ ನಾವು ಮುನ್ನಡೆಯಲೇಬೇಕು.

ಏರುತ್ತಿರುವ ಭರತ

ಈಗ ಭರತವು ಬೇಗನೇ ಏರುತ್ತಿರುವುದರಿಂದ ನಾವು ಬೇಗನೇ ನಮ್ಮ ನಿಯಮಿತ ಸಮೀಕ್ಷಾ ಸ್ಥಾನಕ್ಕೆ ಹೋಗುತ್ತೇವೆ. (ಚಿತ್ರದಲ್ಲಿ ಪಾಯಿಂಟ್‌ ಬಿ ನೋಡಿ.) ದಾರಿಯಲ್ಲಿ ಒಂದು ರೆಡ್‌ಶ್ಯಾಂಕ್‌ ಹಕ್ಕಿ, ಅಳಿವೆಯ ಪಹರೆ ಹಕ್ಕಿಯೆಂದು ಪ್ರಸಿದ್ಧವಾಗಿರುವ ಅದರ ಹೆಸರಿಗನುಸಾರವಾಗಿ, “ಟೂಹೂಹೂ-ಟೂಹೂಹೂ!” ಎನ್ನುತ್ತ ಅದರ ಎಚ್ಚರಿಕೆಯ ಚೀರಾಟದ ಕರೆಯೊಂದಿಗೆ ಆ ಕಡಲನೀರು ಬರುವ ಪ್ರದೇಶದಿಂದ ಎದ್ದು ಹಾರಿಹೋಗುತ್ತದೆ. ಅದರ ಕೆಂಪು ಕಾಲುಗಳು ಸೂರ್ಯನ ಬೆಳಕಲ್ಲಿ ಮಿರುಗುವ ಅದರ ರೆಕ್ಕೆಗಳ ಹಿಂಬದಿಯ ಅಂಚಿನ ಉಜ್ವಲ ಬಿಳಿ ಬಣ್ಣಕ್ಕೆ ವೈದೃಶ್ಯವಾಗಿವೆ. ನಮ್ಮ ಗಮ್ಯಸ್ಥಾನಕ್ಕೆ ಬಂದಾಗ, ನಾವು ಬೇಗನೆ ಶೀಘ್ರ ಕುಗ್ಗುತ್ತಿರುವ ಮರಳು ಮತ್ತು ಕೆಸರು ಪ್ರದೇಶವನ್ನು ಪರೀಕ್ಷಿಸುತ್ತೇವೆ.

ದೂರದಲ್ಲಿ ಹತ್ತಿಪ್ಪತ್ತು ರೆಡ್‌ಶ್ಯಾಂಕ್‌ ಹಕ್ಕಿಗಳು ಒಂದೇ ಸವನೆ ಮೆಲ್ಲನೆ ಕೆಸರನ್ನು ಎತ್ತಿಹಾಕಿ ಮೇವನ್ನು ತಿನ್ನುವಾಗ ಇತರ ಪಕ್ಷಿಗಳು ಹೆಚ್ಚು ಮರೆಯಾಗಿರುವ ಒಳಚಾಚುಗಳಲ್ಲಿ ಆಹಾರವನ್ನು ಹುಡುಕುತ್ತವೆ. ಸ್ವಾಭಾವಿಕವಾಗಿ ಕೆಳತಿರುವಿದ ಕೊಕ್ಕುಗಳುಳ್ಳ ಡನ್ಲಿನ್‌ಗಳು ಸಣ್ಣ ಗುಂಪುಗಳಾಗಿ ಹೆಚ್ಚು ಒತ್ತಾಗಿ ಕೂಡಿಕೊಳ್ಳುತ್ತವೆ. ಅಲೆದಾಡುತ್ತ, ಅವು ಅವಸರದಿಂದ ಕೆಸರಿನಲ್ಲಿ ಆಹಾರವನ್ನು ಹುಡುಕುತ್ತ ಮುಂದುವರಿಯುವಾಗ, ಅವು ನೀರಿನ ಅಂಚಿಗೆ ಅಂಟಿಕೊಳ್ಳುವ ಪ್ರವೃತ್ತಿಯುಳ್ಳವಾಗಿವೆ. ಚದರಿರುವ ಕರ್ಲೂಗಳು, ಮೃದುವಾದ ಅಂಟುಸ್ರಾವದಂತಹ ಮಣ್ಣನ್ನು ಜಾಗ್ರತೆಯಿಂದ ಪರೀಕ್ಷಿಸುತ್ತಾ ಪಕ್ಕದಲ್ಲಿ ಒಯ್ಯಾರದಿಂದ ನಡೆದುಹೋಗುತ್ತವೆ. ಇನ್ನೂ ಮುಂದಕ್ಕೆ, ಕೆಲವು ಟರ್ನ್‌ಸ್ಟೋನ್‌ ಹಕ್ಕಿಗಳು ತಮ್ಮ ಗಿಡ್ಡವಾದ, ಕೊಂಚ ಮೇಲ್ಬಾಗಿರುವ ಕೊಕ್ಕುಗಳಿಂದ ಹಳೆಯ ಸಮುದ್ರ ದಡದ ಉಬ್ಬರದಂಚಿನ ಮುರುಕಲುಗುಪ್ಪೆಯನ್ನು ಕೆದರುತ್ತ ಆಹಾರವನ್ನು ಹುಡುಕುತ್ತಿವೆ.

ಥಟ್ಟನೆ, ಗ್ರೇ ಪ್ಲವರ್‌ ಹಕ್ಕಿಯ ಒರಟಾದ, ಚಾಪಲ್ಯದ, ತ್ರೈಉಚ್ಚಾರಸೂಚಕ “ಟ್ಲೀ-ವೂ-ಯೀ” ಸೀಟಿ ಕೇಳಿಬರುತ್ತದೆ. ಅದು ಮೇಲಿನಿಂದ ಹಾರಿಹೋಗುವಾಗ, ಅದರ ಕಪ್ಪು ಪರ್ವಸ್ಥಳವು ಅದರ ಉಳಿದ ಅಡಿಭಾಗದ ಬಿಳಿಚಿನೆದುರು ಸ್ಪಷ್ಟವಾಗಿ ತೋರಿಬರುತ್ತದೆ. ನಾನ್ನೂರು ಗೋಲ್ಡನ್‌ ಪ್ಲವರ್‌ಗಳು ಒತ್ತಾಗಿ ಮೊಟ್ಟೆಯಾಕಾರದಲ್ಲಿ, ತಮ್ಮ ತಲೆಗಳನ್ನು ರೆಕ್ಕೆಗಳಡಿಯಲ್ಲಿ ಇಡುತ್ತ ಎಲ್ಲ ಗಾಳಿಗೆ ಮುಖಹಾಕಿ ಕುಳಿತಿವೆ. ಒಮ್ಮೊಮ್ಮೆ ಕುಕ್ಕು ಪ್ರಭುತ್ವ ವ್ಯವಸ್ಥೆಯು ಸ್ಥಾಪಿಸಲ್ಪಡುವ ಸಮಯದಲ್ಲಿ ಹಲವಾರು ಪ್ಲವರ್‌ ಹಕ್ಕಿಗಳ ನಡುವೆ ಕಾದಾಟಗಳು ನಡೆಯುತ್ತವೆ. ಹೆಚ್ಚಿನವು ಇನ್ನೂ ತಮ್ಮ ಮಚ್ಚೆಗಳಿರುವ ಚಳಿಗಾಲದ ಪುಕ್ಕಗಳಲ್ಲಿ—ಸುವರ್ಣ ಬಣ್ಣ ಮತ್ತು ಕಪ್ಪು ಮೇಲ್ಭಾಗಗಳು, ಕಣ್ಣಿನ ಸುತ್ತ, ಮುಖ ಮತ್ತು ಅಡಿಭಾಗ ಬಿಳಿಚು ಮತ್ತು ಕಪ್ಪು ಕೊಕ್ಕು—ಇವೆ. ನಾವು ನಮ್ಮ ಟೆಲಿಸ್ಕೋಪನ್ನು ಸರಿಹೊಂದಿಸುವಾಗ ನಾವು ರಿಂಗ್ಡ್‌ ಪ್ಲವರ್‌ಗಳನ್ನೂ ಕಂಡುಹಿಡಿದೆವು.

ಸುಮಾರು 1,000 ಲ್ಯಾಪ್ವಿಂಗ್‌ಗಳ ಒಂದು ವ್ಯಾಪಕ ಗುಂಪು ಫಕ್ಕನೆ ಬರುತ್ತದೆ. ಆ ಹಕ್ಕಿಗಳು ಉತ್ಸಾಹಪೂರಿತವಾಗಿ, ಅವುಗಳ ಅನನುಕರಣೀಯ ವಿಧದಲ್ಲಿ ಆಕಾಶದಲ್ಲಿ ಹಾರಿಬರುತ್ತ ಸಮೀಪಿಸುತ್ತವೆ. ಲ್ಯಾಪ್ವಿಂಗ್‌ಗಳೂ ಗೋಲ್ಡನ್‌ ಪ್ಲವರ್‌ಗಳೂ, ತಮ್ಮ ಹೆಚ್ಚು ಇಷ್ಟಕರವಾದ ಮೇವಿನ ಸ್ಥಳವಾದ ಪಶ್ಚಿಮಕ್ಕಿರುವ ಕೃಷಿಯೋಗ್ಯ ಸ್ಥಳದಲ್ಲಿದ್ದವು. ಅವು ಅಳಿವೆಗೆ ಬರುವುದು ಆಹಾರಕ್ಕಾಗಿ ಮಾತ್ರವಲ್ಲ, ಸ್ನಾನಮಾಡಿ ಪುಕ್ಕಗಳನ್ನು ಕೊಕ್ಕಿನಿಂದ ಸವರಿಕೊಳ್ಳಲು ಕೂಡ ಆಗಿರುತ್ತದೆ.

ಮುಖ್ಯ ಹಿನ್ನೆಲೆಯ ಸದ್ದು, ಕರ್ಲೂಗಳ ಗುಳುಗುಳೆನ್ನುವ ಕರೆ, ರೆಡ್‌ಶ್ಯಾಂಕ್‌ಗಳ ಹೆಚ್ಚು ತೃಪ್ತಿಕರವಾದ ಸುಶ್ರಾವ್ಯ ಸೀಟಿ, ಮತ್ತು ಕಪ್ಪುತಲೆಯ ಗಲ್‌ ಪಕ್ಷಿಗಳ ಚೀರಲು. ಪಟ್ಟೆ ಬಾಲಗಳ ಎರಡು ಗಾಡ್ವಿಟ್‌ಗಳು ಕೆಸರಿನೊಳಕ್ಕೆ ಆಳವಾಗಿ ಕೊಕ್ಕುಹಾಕಿ ಪರೀಕ್ಷಿಸುತ್ತವೆ. ಕೆಲವು ಆಯ್‌ಸ್ಟರ್‌ಕ್ಯಾಚರ್‌ ಪಕ್ಷಿಗಳು ತಮ್ಮ ದಪ್ಪವಾದ ಕಿತ್ತಿಳೆ-ಕೆಂಪು ಕೊಕ್ಕುಗಳ ಮೂಲಕ ಲಗ್‌ವರ್ಮ್‌ ಹುಳುಗಳನ್ನು ಎಳೆಯುತ್ತಿವೆ. ಒಂಟಿಯಾಗಿರುವ ಒಂದು ಗ್ರೇ ಪ್ಲವರ್‌ ಗಂಭೀರವಾದ ಕೆಲವು ಹೆಜ್ಜೆಗಳನ್ನಿಟ್ಟು, ನಿಂತು, ಬಲಪಾದವನ್ನು ಕುಲುಕುತ್ತ ಬಳಿಕ ತನ್ನ ಆಹಾರದ ಹಿಂದೆ ಹೋಗಿ ಕಬಳಿಸುತ್ತದೆ. ಆದರೆ ಒಳಬರುತ್ತಿರುವ ಉಬ್ಬರವು ಥಟ್ಟನೆ ಅವೆಲ್ಲವುಗಳ ಬೆನ್ನು ಹಿಡಿಯುತ್ತದೆ!

ಭರಾಟಿ ಆರಂಭಿಸುತ್ತದೆ

ಒಡನೆ, ಪಕ್ಷಿಗಳು ಎದ್ದು, ಮುಖ್ಯವಾಗಿ ತಮ್ಮ ಸ್ವಂತ ಜಾತಿಯೊಂದಿಗೆ ಗುಂಪುಗೂಡಲು ಹಾರಿಹೋಗುತ್ತವೆ. ನೀರಹಕ್ಕಿಗಳು ಒತ್ತಾಗಿ ಕೂಡಿಕೊಂಡಿರುವ ವಿನ್ಯಾಸದಲ್ಲಿ ಹಾರಿಹೋಗುವುದನ್ನು ನೋಡುವುದು ಪರಿಣಾಮಕಾರಕ ದೃಶ್ಯ. ಪಕ್ಕದಿಂದ ಪಕ್ಕಕ್ಕೆ ಓಲಿಕೊಂಡು ಹಾರುವ ಸಮಯದಲ್ಲಿ ಸೂರ್ಯನ ಕಿರಣವು ಅವುಗಳ ಮೇಲೆ ಬೀಳುವಾಗ, ಹಿಂಡುಗಳ ಬಣ್ಣ—ಗಾಢವಾದ ಕಂದು ಬಣ್ಣದಿಂದ ಮಿನುಗುವ ರಜತ-ಶ್ವೇತ ಬಣ್ಣಕ್ಕೆ—ಒಂದು ಕ್ಷಣ ಸ್ಪಷ್ಟವಾಗಿ ಕಾಣಿಸಿಕೊಂಡು, ಇನ್ನೊಂದು ಕ್ಷಣ, ಒಳಬರುವ ಕೆಸರು ಬಣ್ಣದ ನೀರಿನ ಹಿನ್ನೆಲೆಯೊಂದಿಗೆ ಇನ್ನೇನು ಲೀನವಾದಂತೆ ಬದಲಾವಣೆ ಹೊಂದುತ್ತದೆ. ಶ್ಯಾಮ ಬಣ್ಣದಿಂದ ರಜತ ಬಣ್ಣಕ್ಕೆ, ರಜತದಿಂದ ಶ್ಯಾಮಕ್ಕೆ, ಪರಿಪೂರ್ಣ ಸಾಮರಸ್ಯದಲ್ಲಿ ಮತ್ತು ಅದೇ ಸಮಯದಲ್ಲಿ—ಸರಿಸುಮಾರಾಗಿ ಮೊಟ್ಟೆಯ ಆಕಾರದಿಂದ ಉರುಟು ಆಕಾರಕ್ಕೆ, ಬಳಿಕ ಸುರುಳಿಯಾಗಿ, ಕೊನೆಗೆ ಲಂಬವಾಗಿ ಸತತವಾಗಿ ಆಕಾರದಲ್ಲಿ ಬದಲಾವಣೆಯಾಗುತ್ತದೆ. ಹೆಚ್ಚಿನವು ನೀರಿನ ಉಬ್ಬರದಿಂದ ಇನ್ನೂ ತುಂಬಲಿರುವ ಕೆಸರು ಪ್ರದೇಶದಲ್ಲಿ ಇಳಿಯುತ್ತವೆ.

ಬೇಗನೆ ನಮ್ಮ ಸುತ್ತಲಿರುವ ಕೆಸರು ಮತ್ತು ಮರಳಿನ ಪ್ರದೇಶದಲ್ಲಿ ನೀರು ತುಂಬಲಿರುವುದರಿಂದ ನಾವು ಅವಸರದಿಂದ ನದೀಪ್ರವಾಹದ ವಿರುದ್ಧ ದಿಕ್ಕಿಗೆ, ನೀರಹಕ್ಕಿಗಳ ಒಂದೇ ಸವನೆಯ ಗುಂಪುಗಳೊಂದಿಗೆ ಹೋಗುತ್ತೇವೆ. ವೇಗದ ರೆಕ್ಕೆಬಡಿತಗಳುಳ್ಳ ಚಿಕ್ಕ ಡನ್ಲಿನ್‌ಗಳ ಸಣ್ಣ ಗುಂಪುಗಳು, ಆಗಾಗ್ಗೆ ತಮ್ಮ ಹ್ರಸ್ವವಾದ ತೀಕ್ಷ್ಣ ಸೀಟಿಗಳಿಂದ ಸಂಪರ್ಕವನ್ನಿಟ್ಟುಕೊಳ್ಳುತ್ತ ಮೊದಲಾಗಿ ನಮ್ಮನ್ನು ದಾಟಿಹೋಗುತ್ತವೆ. ಬಳಿಕ ಹೆಚ್ಚು ದೊಡ್ಡದಾದ ರೆಡ್‌ಶ್ಯಾಂಕ್‌ ಹಕ್ಕಿಗಳು, ಹೆಚ್ಚು ವ್ಯಾಪಕವಾದ ಮತ್ತು ಗಂಭೀರವಾದ ಹಿಂಡಾಗಿ ದಾಟುತ್ತವೆ. ದೊಡ್ಡ ಗಲ್‌ ಪಕ್ಷಿಗಾತ್ರದ ಕರ್ಲೂಗಳು, ತಮ್ಮ ಅಂದವಾದ ಗುಳುಗುಳೆನ್ನುವ ಲಲಿತ ಕಂಪನಧ್ವನಿಯನ್ನು ಊದುತ್ತ ದಾಟಿಹೋಗುತ್ತವೆ. ಆ್ಯವಸೆಟ್‌ಗಳು ನೀಲಾಕಾಶದ ಹಿನ್ನೆಲೆಯಲ್ಲಿ ಕಪ್ಪು ಮತ್ತು ಬಿಳಿಯನ್ನು ವೈದೃಶ್ಯವಾಗಿಸಿ ಹಿಂಬಾಲಿಸುತ್ತವೆ. ಅವು ಅಳಿವೆಯ ಮೇಲ್ಭಾಗದಲ್ಲಿ, ಅವುಗಳ ಸ್ಲೇಟ್‌-ನೀಲ ಕಾಲುಗಳು ನೀರಿನಿಂದ ತುಸು ಮೇಲೆ ತೋರಿಬರುವಂತೆ ನೆಲೆಸುತ್ತವೆ.

ವಿಶ್ರಾಂತಿ ಸ್ಥಳ

ನಾವು ಬೇಗನೆ ನಡೆದು ಅಳಿವೆ ಕಿರಿದಾಗುವಲ್ಲಿ ಒಂದು ಎತ್ತರ ಸ್ಥಳವನ್ನು ಮುಟ್ಟುತ್ತೇವೆ. (ಚಿತ್ರದಲ್ಲಿ ಪಾಯಿಂಟ್‌ ಸಿ ನೋಡಿ.) ಒಂದೇ ಜಾತಿಯ ಪಕ್ಷಿಗಳಿಗೆ ಹಿಂಡಾಗಿ ಕೂಡುವ ಪ್ರವೃತ್ತಿ ಇದ್ದರೂ ಇದೊಂದು ನಿಯತ ನಿಯಮವಾಗಿರುವುದಿಲ್ಲ. ನೀರು ಬೇಗನೆ ತುಂಬುತ್ತ ಹೋಗುವಾಗ, ಇನ್ನೂ ಹೆಚ್ಚು ಪಕ್ಷಿಗಳು ಗುಂಪನ್ನು ಕೂಡಿಕೊಳ್ಳುತ್ತವೆ. ತಡವಾಗಿ ಬರುವ ಪಕ್ಷಿಗಳು ಹೆಚ್ಚೆಚ್ಚು ಸ್ಥಳವನ್ನು ಕೇಳಿಕೊಳ್ಳುವಾಗ ದಡಗಳಲ್ಲಿ ನಿಲ್ಲುವ ಸ್ಥಳವನ್ನು ಕಂಡುಕೊಳ್ಳುವುದು ಹೆಚ್ಚು ಕಷ್ಟಕರವಾಗಿ ಪರಿಣಮಿಸುವುದರಿಂದ ಸತತವಾಗಿ ಸ್ಥಾನಬದಲಾವಣೆಯನ್ನು ಮಾಡಬೇಕಾಗುತ್ತದೆ.

ಈಗ ಉಕ್ಕುಭರತ ಬಂದಿದೆ. ಲ್ಯಾಪ್ವಿಂಗ್‌ ಮತ್ತು ಗೋಲ್ಡನ್‌ ಪ್ಲವರ್‌ ಹಕ್ಕಿಗಳು ಕೃಷಿಯೋಗ್ಯ ಜಮೀನಿಗೆ ಹಿಂದೆ ಹೋಗಿವೆ. ಉಳಿದ ಪಕ್ಷಿಗಳೆಲ್ಲ ಹಳೆಯ ನದೀದಡದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲಿಕ್ಕಾಗಿ ಕೆಸರು ಪ್ರದೇಶದಿಂದ ಎದ್ದು ಹೋಗುವಂತೆ ನಿರ್ಬಂಧಿಸಲ್ಪಟ್ಟಿವೆ. ಆಯ್‌ಸ್ಟರ್‌ಕ್ಯಾಚರ್‌ಗಳ ಸತತ ಕೊಳಲೂದುವಿಕೆಗಳು ಅವುಗಳ ಸಂಖ್ಯೆಗೆ ತೀರ ಜಾಸ್ತಿ ಪ್ರಮಾಣದ್ದಾಗಿವೆ. ರೆಡ್‌ಶ್ಯಾಂಕ್‌ ಮತ್ತು ಕರ್ಲೂ ಪಕ್ಷಿಗಳ ಸದ್ದು ಹಿನ್ನೆಲೆಯ ಗದ್ದಲಕ್ಕೆ ಕೂಡಿಸುತ್ತದೆ ಮತ್ತು ಈಗ ಅದನ್ನು ಒಂದು ಬಾನಾಡಿ ಪಕ್ಷಿ (ಸ್ಕೈಲಾರ್ಕ್‌)ಯ ಮೇಲ್ಗಡೆಯ ಹಾಡು—ನಿಜವಾಗಿಯೂ ಆಶ್ಚರ್ಯಕರವಾದ ವಾತಾವರಣ—ಮೀರಿಸುತ್ತದೆ.

ಕಾಲನಡಗೆಯ ನೀರಪಕ್ಷಿಗಳು ಉಕ್ಕುಭರತದ ಸಮಯ ತಮ್ಮ ಅಪರಾಹ್ಣದ ಅತ್ಯರ್ಹ ವಿಶ್ರಾಂತಿಯನ್ನು ಪಡೆಯುತ್ತಿರುವಾಗ ನಾವು ಅಗಲುತ್ತೇವೆ. ಕೆಲವು ಪಕ್ಷಿಗಳು ಸಮುದ್ರಗೋಡೆಯ ಹಿಂಬದಿಯಲ್ಲಿದ್ದು ನೀರನ್ನು ನೋಡದಿದ್ದರೂ, ತಾವು ಯಾವಾಗ ಕೆಸರು ಪ್ರದೇಶಕ್ಕೆ ಅಥವಾ ಮರಳು ತೀರಕ್ಕೆ ಹಿಂದಿರುಗಬೇಕೆಂದು ಅವುಗಳಿಗೆ ಗೊತ್ತಾಗುವುದು. ಪರಿಪೂರ್ಣ ಸಮಯಪಾಲಕರೂ ಹುಟ್ಟರಿವಿನಿಂದ ವಿವೇಕಿಗಳೂ ಆದ ಅವುಗಳಿಗೆ ಉಬ್ಬರವಿಳಿತಗಳು ಹೇಗೆ ಕಾರ್ಯನಡೆಸುತ್ತವೆಂಬುದು ಗೊತ್ತು.

ಹೌದು, ಉಕ್ಕುಭರತದ ಭರಾಟಿ ಕಾಲವು, ವಿಶೇಷವಾಗಿ ಪ್ರಥಮ ಬಾರಿ, ಪ್ರೇಕ್ಷಿಸಲು ರೋಮಾಂಚಕ!

[ಅಧ್ಯಯನ ಪ್ರಶ್ನೆಗಳು]

a ಅಮೆರಿಕ ಮತ್ತು ಕೆನಡದಲ್ಲಿ, ಕಾಲನಡಗೆಯ ನೀರಹಕ್ಕಿಗಳು (ಕರಾಡ್ರೀಫಾರ್ಮೀಸ್‌ ಜಾತಿ) ತೀರಹಕ್ಕಿಗಳೆಂದು ಹೆಚ್ಚು ಪ್ರಸಿದ್ಧವಾಗಿವೆ.

b ಉಬ್ಬರದ ನೀರು ಕ್ರಮವಾಗಿ ತುಂಬುವ ಜಮೀನು.

[ಪುಟ 35 ರಲ್ಲಿರುವ ಚೌಕ/ಚಿತ್ರಗಳು]

ಭರಾಟಿ ಕಾಲದಲ್ಲಿ ಆನಂದಿಸಿರಿ

ಉಕ್ಕುಭರತದ ಭರಾಟಿ ಕಾಲದಲ್ಲಿ ಆನಂದಿಸಲು, ಮೊದಲನೆಯದಾಗಿ ಒಂದು ಅನುಕೂಲವಾದ ಅಳಿವೆಯನ್ನು ಹುಡುಕಿ ಕಂಡುಹಿಡಿಯಿರಿ. ಬಳಿಕ, ಆ ಪ್ರದೇಶದ ಸ್ವಲ್ಪ ಮಾಹಿತಿ, ಅಂದರೆ ನೀರಹಕ್ಕಿಗಳು ಎಲ್ಲಿಹೋಗುತ್ತವೆ ಮತ್ತು ಅವುಗಳನ್ನು ಎಲ್ಲಿ ನೋಡಬಹುದು ಎಂಬ ಮಾಹಿತಿ ನಿಮಗೆ ಬೇಕಾದೀತು. ಹುಣ್ಣಿಮೆ ಅಥವಾ ಅಮಾವಾಸ್ಯೆಯ ನಂತರ ಒಡನೆ ಸಂಭವಿಸುವ ಉಕ್ಕುಭರತಕ್ಕಾಗಿ ಉಬ್ಬರವಿಳಿತದ ಕಾಲತಖ್ತೆಯನ್ನು ನೋಡಿರಿ. ಪ್ರಯಾಣಕ್ಕೆ ತಗಲುವ ಸಮಯವನ್ನು ಬಿಟ್ಟು ಪಕ್ಷಿಗಳನ್ನು ಒಳ್ಳೆಯದಾಗಿ ಪ್ರೇಕ್ಷಿಸಲಿಕ್ಕಾಗಿ ಮೂರು ತಾಸುಗಳನ್ನು ಬದಿಗಿಡಿರಿ ಮತ್ತು ಉಕ್ಕುಭರತಕ್ಕೆ ಕಡಮೆಪಕ್ಷ ಎರಡು ತಾಸು ಮೊದಲೇ ಬನ್ನಿರಿ.

ನಿಮಗೆ ಯಾವ ಸಲಕರಣೆಗಳು ಬೇಕಾಗುವುವು? ನೀರಹಕ್ಕಿಗಳ ಕುರಿತಾಗಿ ನೀವು ಅಪರಿಚಿತರಾಗಿರುವುದಾದರೆ, ಅವುಗಳನ್ನು ಗುರುತಿಸಲು ಸಹಾಯಕ್ಕಾಗಿ ಒಂದು ಪುಸ್ತಕವನ್ನು ತೆಗೆದುಕೊಳ್ಳಿರಿ. ದುರ್ಬೀನುಗಳು ಸಹ ಬಹಳ ಉಪಯೋಗಕರವಾಗಿರಬಲ್ಲವು. ಪ್ರತಿಯೊಂದು ಜಾತಿಯ ನೀರಹಕ್ಕಿಗೆ ಅದರ ಸ್ವಂತ ವೈಲಕ್ಷಣ್ಯಗಳಿವೆಯೆಂದೂ ಅದರ ಕೊಕ್ಕು ನಿರ್ಮಿಸಲ್ಪಟ್ಟಿರುವ ರೀತಿಯಲ್ಲಿ ಅದು ಆಹಾರವನ್ನು ಸಂಗ್ರಹಿಸುತ್ತದೆಂದೂ ನೀವು ಬೇಗನೆ ಕಂಡುಕೊಳ್ಳುವಿರಿ. ಒಂದು ಟೆಲಿಸ್ಕೋಪಿನ ಆವಶ್ಯಕತೆಯಿಲ್ಲದಿದ್ದರೂ ಬೆಚ್ಚಗಾದ ಜಲಾಭೇದ್ಯ ಉಡುಪು ಅವಶ್ಯ! ಅಪಾಯಗಳಿಗೆ ಎಚ್ಚರವಾಗಿರಿ. ಚೆನ್ನಾಗಿ ಮಾಹಿತಿ ಇರುವ ಹೊರತು ಕೆಸರಿನಲ್ಲಿ ದೂರ ಹೋಗಬೇಡಿರಿ. ಶೀಘ್ರ ಉಕ್ಕಿಬರುತ್ತಿರುವ ಉಬ್ಬರದಲ್ಲಿ ನೀವು ಸಿಕ್ಕಿಕೊಳ್ಳುವುದು ಸುಲಭ. ಅಲ್ಲದೆ ಕೇವಲ ಸಮುದ್ರಮಂಜಿನ ಇಳಿದುಬರುವಿಕೆಯು ನಿಮ್ಮನ್ನು ದಾರಿತಪ್ಪಿಸಬಲ್ಲದು. ಗಾಳಿಯನ್ನೂ ಪರಿಗಣಿಸಿರಿ. ಬಿರುಗಾಳಿಯು ಉಕ್ಕೇರುವ ಉಬ್ಬರಗಳನ್ನು ಬರಮಾಡಬಲ್ಲದು ಮತ್ತು ಇದು ಯಾವುದೇ ಅಳಿವೆಯಲ್ಲಿ ಬಹು ಹಾನಿಕಾರಕವಾಗಿರಬಲ್ಲದು.

[ಪುಟ 36 ರಲ್ಲಿರುವ ಚೌಕ/ಚಿತ್ರಗಳು]

ಪ್ರಧಾನ ಭೌಗೋಲಿಕ ಅಳಿವೆಗಳು

ನೆದರ್ಲೆಂಡ್ಸ್‌ನ ವಾಡನ್‌ ಸೇ, ಯೂರೋಪಿನ ಅತಿ ಪ್ರಮುಖ ಉಬ್ಬರವಿಳಿತ ಪ್ರದೇಶ. ಇಲ್ಲಿ ಕೆಲವು ವೇಳೆ ಪ್ರಾಯಶಃ 40 ಲಕ್ಷ ನೀರಹಕ್ಕಿಗಳಿರುತ್ತವೆ. ಅದು ಆಗ್ನೇಯ ಜಟ್ಲೆಂಡ್‌ಗೆ ಉತ್ತರಾಭಿಮುಖವಾಗಿ ಹರಡಿರುತ್ತದೆ. ಈ ವಿಸ್ತಾರವಾದ ಕ್ಷೇತ್ರದಲ್ಲಿ ಭೇಟಿಕೊಡಸಾಧ್ಯವಿರುವ ಮೂರು ಉತ್ತಮ ಸ್ಥಳಗಳು, ಡೆನ್ಮಾರ್ಕ್‌ನ ರಮಕ್ಕೆ ಹೋಗುವ ಎತ್ತರಿಸಿದ ಕಾಲುದಾರಿ; ಜರ್ಮನಿಯ ವೇಸರ್‌ ನದೀ ಅಳಿವೆ, ಉಕ್ಕುಭರತದ ಪ್ರಮುಖ ವಿಶ್ರಾಂತಿ ಸ್ಥಳ; ಮತ್ತು ನೆದರ್ಲೆಂಡ್ಸ್‌ನಲ್ಲಿ ಗ್ರೋನಿಂಗನ್‌ ಹತ್ತಿರವಿರುವ ಲಾವರ್ಸ್‌ ಸೇ. ಐಬಿರೀಯ ದ್ವೀಪಕಲ್ಪದಲ್ಲಿರುವ ಅತ್ಯಂತ ಗಮನಾರ್ಹವಾದ ಅಳಿವೆಯು ಪೋರ್ಚುಗಲ್‌ನ ಟೇಗಸ್‌ ನದಿಯದ್ದು.

ಉತ್ತರ ಮತ್ತು ದಕ್ಷಿಣ ಅಮೆರಿಕಗಳೆರಡರ ಪ್ಯಾಸಿಫಿಕ್‌ ಕಡಲಕರೆಯುದ್ದಕ್ಕೂ ಇರುವ ಅಳಿವೆಗಳು ಸುಮಾರು 60ರಿಂದ 80 ಲಕ್ಷ ನೀರಹಕ್ಕಿ ವಲಸೆಗಾರರಿಗೆ ಆಹಾರವನ್ನೊದಗಿಸುತ್ತವೆ. ಮುಖ್ಯ ಸ್ಥಳಗಳಲ್ಲಿ, ಕ್ಯಾಲಿಫಾರ್ನಿಯದ ಸ್ಯಾನ್‌ ಫ್ರಾನ್ಸಿಸ್ಕೊ ಮತ್ತು ಹಂಬೋಲ್ಟ್‌ ಕೊಲ್ಲಿಗಳು; ಕೆನಡದ ಬ್ರಿಟಿಷ್‌ ಕೊಲಂಬಿಯದ ವ್ಯಾಂಕೂವರ್‌ನ ಬೌಂಡರೀ ಕೊಲ್ಲಿಯಿಂದ ಹಿಡಿದು ಅಯೋನ ದ್ವೀಪದ ವರೆಗಿರುವ 200 ಚದರ ಕಿಲೊಮೀಟರುಗಳು; ಮತ್ತು ಅಲಾಸ್ಕದ ಸ್ಟಿಕೀನ್‌ ಅಳಿವೆ ಮತ್ತು ಕಾಪರ್‌ ನದೀ ಮುಖಜಭೂಮಿ.

ನೀರಹಕ್ಕಿಗಳಿರುವ ಅತ್ಯುತ್ತಮ ಪ್ರದೇಶಗಳು ಅಮೆರಿಕದ ಟೆಕ್ಸಸ್‌ನ ಬಾಲವರ್‌ ಪ್ರದೇಶ ಮತ್ತು ಗ್ಯಾಲ್‌ವಸ್ಟನ್‌; ಹಾಂಗ್‌ ಕಾಂಗ್‌ನ ಟೈಪೊ; ಈಶಾನ್ಯ ಆಸ್ಟ್ರೇಲಿಯದ ಕ್ಯಾರ್‌ನ್ಸ್‌; ಮತ್ತು ಕೆನ್ಯದಲ್ಲಿ ಮೊಂಬಾಸದ ಹತ್ತಿರ.

[ಪುಟ 33 ರಲ್ಲಿರುವ ಚಿತ್ರ]

ಐದು ಆಯ್‌ಸ್ಟರ್‌ಕ್ಯಾಚರ್‌ಗಳು

[ಪುಟ 34 ರಲ್ಲಿರುವ ಚಿತ್ರ]

ವಿಶ್ರಾಂತಿ ಸ್ಥಳದಿಂದ ಧಾವಿಸಿಬರುತ್ತಿರುವ ನಾಟ್‌ ಹಕ್ಕಿಗಳು

ಸ್ನೇಪ್‌ ಮಾಲ್ಟಿಂಗ್ಸ್‌ ರಿವರ್‌ಸೈಡ್‌ ಸೆಂಟರ್‌

ಆಲ್ಡ್‌ ಅಳಿವೆ, ಸಫಕ್‌

ಸಮೀಕ್ಷಾ ಸ್ಥಳ ಬಿ

ಪ್ರೇಕ್ಷಣ ಸ್ಥಳ ಸಿ

ಆರಂಭದ ವೀಕ್ಷಣೆ ಎ

[ಕೃಪೆ]

Snape Maltings Riverside Centre

[ಪುಟ 35 ರಲ್ಲಿರುವ ಚಿತ್ರ]

ಸ್ನೇಪ್‌ ಮಾಲ್ಟಿಂಗ್ಸ್‌ ಕಾನ್ಸರ್ಟ್‌ ಹಾಲ್‌

ನಾಟ್‌

ರೆಡ್‌ಶ್ಯಾಂಕ್‌

ಕರ್ಲೂ

[ಪುಟ 36 ರಲ್ಲಿರುವ ಚಿತ್ರ]

ಮೇಲುಗಡೆ: ಕರ್ಲೂಗಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ