ಬೈಬಲಿನ ದೃಷ್ಟಿಕೋನ
ಕ್ರೈಸ್ತರು ಶಾಂತಿವಾದಿಗಳಾಗಿರಬೇಕೊ?
“ಚರ್ಚುಗಳು ಕ್ರೈಸ್ತತ್ವದ ಪ್ರಥಮ ಶತಮಾನಗಳಲ್ಲಿದ್ದಂತೆಯೇ ಪುನಃ ಶಾಂತಿವಾದಿಗಳಾಗಬೇಕು.” ಹ್ಯೂಬರ್ಟ್ ಬಟ್ಲರ್, ಐರಿಷ್ ಬರಹಗಾರ.
ಎರಡನೆಯ ಜಾಗತಿಕ ಯುದ್ಧದ ಅನಂತರ, ಯುಗೊಸ್ಲಾವಿಯಕ್ಕೆ ನೀಡಿದ ಒಂದು ಭೇಟಿಯ ತರುವಾಯ, ಹ್ಯೂಬರ್ಟ್ ಬಟ್ಲರ್ ಧೈರ್ಯವಾಗಿ ಈ ಮೇಲಿನ ಮಾತುಗಳನ್ನು 1947ರಲ್ಲಿ, ಆದರೆ ಕಳೆದ ವರ್ಷದ ವರೆಗೂ ಪ್ರಕಾಶಿಸಲ್ಪಡದ ಒಂದು ಪ್ರಬಂಧದಲ್ಲಿ ಬರೆದನು! “ಯುದ್ಧದ ಸಮಯದಲ್ಲಿ ಕ್ರೈಸ್ತ ಚರ್ಚು ಭಯಾನಕ ಅಪರಾಧಗಳ ಕಡೆಗೆ ಲಕ್ಷ್ಯಕೊಡದೆ, ಕ್ರಿಸ್ತನ ಬೋಧನೆಯನ್ನು ಬಹುವ್ಯಾಪಕವಾಗಿ ಬಿಟ್ಟು ಬೇರೆ ದಾರಿ ಹಿಡಿದ” ರೀತಿಯಿಂದ ಅವನು ತಲ್ಲಣಗೊಂಡನು.
ಬಟ್ಲರ್, ಜನಪ್ರಿಯವಲ್ಲದ ಧ್ಯೇಯಗಳು ಇಲ್ಲವೆ ಗುಂಪುಗಳ ಪರವಾಗಿ ಮಾತಾಡಲು ಭಯಪಡಲಿಲ್ಲ. ಅವನು ಹಾಗೆ ಮಾತಾಡಿದಾಗ, ಸಾಮಾನ್ಯವಾಗಿ ಇತರರ ಬೆಂಬಲವಿಲ್ಲದೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದನು. ಯೆಹೋವನ ಸಾಕ್ಷಿಗಳ ಧೈರ್ಯದ ನಿಲುವಿನೊಂದಿಗೆ ಅವನು ಚರ್ಚುಗಳ ವರ್ತನೆಯನ್ನು ವೈದೃಶ್ಯಗೊಳಿಸಿದಾಗ, ಅವನು ಯಾವ ಭಯವಿಲ್ಲದೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದನು. ದಿ ಐರಿಷ್ ಟೈಮ್ಸ್ನಲ್ಲಿ ಯೆಹೋವನ ಸಾಕ್ಷಿಗಳು, “ನಿಜವಾಗಿಯೂ ಅತ್ಯಂತ ನಿರ್ದೋಷಿಯಾದ ಹಾಗೂ ಎಲ್ಲ ಪಂಥಗಳಲ್ಲಿ ನಿಂದಾರಹಿತವಾಗಿ ಅರಾಜಕೀಯವಾದ ಧಾರ್ಮಿಕ ಪಂಥ”ದೋಪಾದಿ ವರ್ಣಿಸಲ್ಪಟ್ಟರು. “ಯುಗೊಸ್ಲಾವಿಯದ ಕುರಿತ ವರದಿ” ಎಂಬ ತನ್ನ ಪ್ರಬಂಧದಲ್ಲಿ ಬಟ್ಲರ್ ಬರೆದದ್ದೇನೆಂದರೆ, “ರಾಜಕೀಯ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿನ ನಾಯಕರಿಂದ ನ್ಯಾಯವೆಂದು ಸಮರ್ಥಿಸಲ್ಪಟ್ಟ ಯುದ್ಧದ ಎಲ್ಲ ಮೋಸಕರ ತರ್ಕಗಳನ್ನು ತಿರಸ್ಕರಿಸಿ[ದ]” ಸಾಕ್ಷಿಗಳು, ಯುದ್ಧ ಕಾರ್ಯಾಚರಣೆಯಲ್ಲಿ ಸೇರಲು ನಿರಾಕರಿಸಿದ್ದಕ್ಕಾಗಿ ಯುಗೊಸ್ಲಾವಿಯದ ಅಧಿಕಾರಿಗಳಿಂದ ನ್ಯಾಯವಿಚಾರಣೆಗೊಳಪಡಿಸಲ್ಪಟ್ಟರು.
ಹಾಗಾದರೆ, ಯೆಹೋವನ ಸಾಕ್ಷಿಗಳನ್ನು ಶಾಂತಿವಾದಿಗಳೆಂದು ವರ್ಣಿಸುವುದು ಶಾಸ್ತ್ರೀಯವಾಗಿ ಸರಿಯೊ? ಆ ವಿಷಯವನ್ನು ಸ್ಪಷ್ಟೀಕರಿಸಲು, ಅದು “ಶಾಂತಿವಾದಿ” (ಪ್ಯಾಸಿಫಿಸ್ಟ್) ಎಂಬ ಪದವು ಅರ್ಥೈಸುವ ವಿಷಯದ ಮೇಲೆ ಅವಲಂಬಿಸಬಹುದು. ಯುದ್ಧಾಚರಣೆಯಲ್ಲಿ ಶಸ್ತ್ರಗಳನ್ನು ತೆಗೆದುಕೊಳ್ಳಲು ನಿರಾಕರಿಸುವುದರಲ್ಲಿ—ಮಹತ್ತರವಾದ ವೈಯಕ್ತಿಕ ನಷ್ಟದ ಎದುರಿನಲ್ಲಿ—ಸಾಕ್ಷಿಗಳು ತೋರಿಸಿದ ಧೈರ್ಯವನ್ನು ಪ್ರಶಂಸಿಸಲು ಬಟ್ಲರ್ ಆ ಪದವನ್ನು ಉಪಯೋಗಿಸಿದನು. ಆದರೆ ವಿಷಾದಕರವಾಗಿ, ಯುದ್ಧದ ಉದ್ವೇಗದಲ್ಲಿ ಸಿಲುಕಿಕೊಂಡಿರುವ ಅನೇಕ ಜನರು ಒಬ್ಬ ಶಾಂತಿವಾದಿಯನ್ನು “ತನ್ನ ರಾಷ್ಟ್ರದ ಪ್ರತಿ ತನಗಿರುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಆತುರನಾಗಿರುವ ಒಬ್ಬ ಹೇಡಿ ಇಲ್ಲವೆ ಒಬ್ಬ ದ್ರೋಹಿ”ಯಾಗಿ ಮಾತ್ರ ವೀಕ್ಷಿಸುತ್ತಾರೆ. ಆ ದೃಷ್ಟಿಕೋನವು ಸರಿಯಾದದ್ದೊ?
ಯುದ್ಧ ಅಥವಾ ಹಿಂಸಾಚಾರಕ್ಕೆ ವಿರೋಧ
ವೆಬ್ಸ್ಟರ್ಸ್ ನೈನ್ತ್ ನ್ಯೂ ಕಲೀಜಿಅಟ್ ಡಿಕ್ಷನರಿ ಹೇಳುವುದೇನೆಂದರೆ, ಒಬ್ಬ ಪ್ಯಾಸಿಫಿಸ್ಟ್, “ಸಂಘರ್ಷ ಮತ್ತು ವಿ[ಶೇಷವಾಗಿ] ಯುದ್ಧವನ್ನು ಬಲವಾಗಿ ಹಾಗೂ ಸಕ್ರಿಯವಾಗಿ ವಿರೋಧಿಸುವ” ವ್ಯಕ್ತಿಯಾಗಿದ್ದಾನೆ. ಅದು “ಪ್ಯಾಸಿಫಿಸಮ್” ಅನ್ನು “ಕಲಹಗಳನ್ನು ಬಗೆಹರಿಸುವ ಒಂದು ವಿಧವಾಗಿ ಯುದ್ಧ ಅಥವಾ ಹಿಂಸಾಚಾರಕ್ಕೆ ವಿರೋಧ; ನಿರ್ದಿ[ಷ್ಟವಾಗಿ]: ನೈತಿಕ ಇಲ್ಲವೆ ಧಾರ್ಮಿಕ ಆಧಾರಗಳ ಮೇಲೆ ಶಸ್ತ್ರಗಳನ್ನು ಹಿಡಿಯಲು ನಿರಾಕರಿಸುವುದು,” ಎಂಬುದಾಗಿ ವಿಶದೀಕರಿಸುತ್ತದೆ. ಈ ಅರ್ಥನಿರೂಪಣೆಗಳು ಆದಿ ಕ್ರೈಸ್ತ ಸಭೆಯ ವಿಶ್ವಾಸಿಗಳಿಗೆ ಹೇಗೆ ಅನ್ವಯವಾಗಲಿದ್ದವು?
ಅವರು ‘ನೈತಿಕ ಹಾಗೂ ಧಾರ್ಮಿಕ ಆಧಾರಗಳ ಮೇಲೆ ಶಸ್ತ್ರಗಳನ್ನು ಹಿಡಿಯಲು ನಿರಾಕರಿಸಿದರು’ ಮತ್ತು ಎಲ್ಲ ‘ಸಂಘರ್ಷ ಹಾಗೂ ಯುದ್ಧ’ದಿಂದ ದೂರವಿದ್ದರು. ಏಕೆ? ಏಕೆಂದರೆ ತನ್ನ ಹಿಂಬಾಲಕರು “ಲೋಕದ ಕಡೆಯವರಲ್ಲ” ಮತ್ತು “ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು,” ಎಂದು ಯೇಸು ಹೇಳಿದ್ದನೆಂಬುದು ಅವರಿಗೆ ಗೊತ್ತಿತ್ತು. (ಯೋಹಾನ 15:19; ಮತ್ತಾಯ 26:52) ಆದಿ ಚರ್ಚು ಮತ್ತು ಲೋಕ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಒಬ್ಬ ಇತಿಹಾಸಕಾರನು ನಮಗೆ ಹೇಳುವುದೇನೆಂದರೆ, “ಕಡಿಮೆ ಪಕ್ಷ ಮಾರ್ಕಸ್ ಆರೀಲಿಯಸ್ನ ಆಳಿಕೆಯ ವರೆಗೂ [ಸಾ.ಶ. 161-180], ಯಾವ ಕ್ರೈಸ್ತನೂ ತನ್ನ ದೀಕ್ಷಾಸ್ನಾನದ ಬಳಿಕ ಒಬ್ಬ ಸೈನಿಕನಾಗುತ್ತಿರಲಿಲ್ಲ.” ಹಳೆಯ ಲೋಕದಲ್ಲಿ ಹೊಸ ಲೋಕದ ಅಸ್ತಿವಾರಗಳು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಮತ್ತೊಬ್ಬ ಇತಿಹಾಸಕಾರ್ತಿಯು ಹೇಳುವುದು: “ಹೋರಾಡುವುದು ತಪ್ಪಾಗಿತ್ತೆಂದು ಪ್ರಥಮ ಕ್ರೈಸ್ತರು ನೆನಸಿದರು, ಮತ್ತು ಸಾಮ್ರಾಜ್ಯಕ್ಕೆ ಸೈನಿಕರ ಅಗತ್ಯವಿದ್ದಾಗಲೂ ಸೇನೆಯಲ್ಲಿ ಸೇವೆಸಲ್ಲಿಸುತ್ತಿರಲಿಲ್ಲ.”
ಕ್ರೈಸ್ತರ ನಿಯೋಗವು ಸುವಾರ್ತೆಯನ್ನು ಸಾರುವುದಾಗಿತ್ತು. (ಮತ್ತಾಯ 24:14; 28:19, 20) ದೇವರ ವೈರಿಗಳ ವಿರುದ್ಧ ಯುದ್ಧ ನಡೆಸಲು, ಸ್ವಲ್ಪಮಟ್ಟಿಗೆ ಆತನ ವಧಕಾರರಂತೆ ಕಾರ್ಯನಡೆಸಲು ಅವರಿಗೆ ದೇವರಿಂದ ಯಾವ ನಿಯೋಗವೂ ಕೊಡಲ್ಪಟ್ಟಿರಲಿಲ್ಲವೆಂದು ಅವರು ತಿಳಿದುಕೊಂಡರು. (ಮತ್ತಾಯ 5:9; ರೋಮಾಪುರ 12:17-21) ಬಟ್ಲರನು ಹೇಳಿದಂತೆ, ಕ್ರೈಸ್ತರೆಂದು ಹೇಳಿಕೊಳ್ಳುವವರು ‘ಕ್ರಿಸ್ತನ ಬೋಧನೆಯನ್ನು ಬಿಟ್ಟು ಬೇರೆ ದಾರಿ ಹಿಡಿದಾಗ’ ಮಾತ್ರ, ಅವರು ರಾಷ್ಟ್ರಗಳ ಯುದ್ಧಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಅನಂತರ ವೈದಿಕರು ಒಂದು ಸಂಘರ್ಷದ ಎರಡೂ ಕಡೆ ಇರುವ ಸೇನೆಗಳನ್ನು ಆಶೀರ್ವದಿಸಿ, ಜಯಕ್ಕಾಗಿ ಪ್ರಾರ್ಥಿಸುತ್ತಾರೆ. (ಹೋಲಿಸಿ ಯೋಹಾನ 17:16; 18:36.) ಉದಾಹರಣೆಗೆ, ಮಧ್ಯ ಯುಗಗಳಲ್ಲಿ, ಪ್ರಾಟೆಸ್ಟಂಟರು ಮತ್ತು ಕ್ಯಾತೊಲಿಕರು ಅನೇಕ ರಕ್ತಮಯ ಯುದ್ಧಗಳಲ್ಲಿ ಹೋರಾಡಿದರು. ಇದು, “ಎರಡೂ ಪಕ್ಷಗಳವರು, ತಾವು ದೇವರ ಕ್ರೋಧದ ಸಾಧನಗಳೆಂದು ಪ್ರತಿಪಾದಿಸುವುದರೊಂದಿಗೆ, ಪಾಶ್ಚಾತ್ಯ ಯೂರೋಪಿನ ಮೇಲೆ [ಎರಗಿದ] ಭೀತಿ”ಗಳಲ್ಲಿ ಫಲಿಸಿತೆಂದು, ನಾಗರಿಕತೆ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಕೆನೆತ್ ಕ್ಲಾರ್ಕ್ ಬರೆಯುತ್ತಾನೆ. ಈ ರೀತಿಯ ಯುದ್ಧಾಚರಣೆಯನ್ನು ನ್ಯಾಯವೆಂದು ಸಮರ್ಥಿಸಲು ಮಾಡಲ್ಪಟ್ಟ ವಾದಗಳು, “ಐಹಿಕ ಅಧಿಕಾರಿಗಳನ್ನು ಸಮಾಧಾನಪಡಿಸುವ ಒಂದು ಬಯಕೆಯಿಂದ ವಿಕಸಿಸಿರುವುದು ವ್ಯಕ್ತ, ಮತ್ತು ಸ್ಪಷ್ಟವಾಗಿ ಇಂತಹ ವಾದಗಳು ಪ್ರಾಚೀನ ಕ್ರೈಸ್ತ ಸಿದ್ಧಾಂತ ಮತ್ತು ಸುವಾರ್ತೆಯ ನಿಜವಾದ ಅರ್ಥಕ್ಕೆ ವಿರುದ್ಧವಾಗಿವೆ,” ಎಂದು ಮ್ಯಾಕ್ಲಿನ್ಟಾಕ್ ಮತ್ತು ಸ್ಟ್ರಾಂಗರ, ಬೈಬಲಿನ, ದೇವತಾಶಾಸ್ತ್ರದ, ಮತ್ತು ಚರ್ಚಿನ ಸಾಹಿತ್ಯದ ವಿಶ್ವಕೋಶ (ಇಂಗ್ಲಿಷ್)ವು ಹೇಳುತ್ತದೆ.—ಯಾಕೋಬ 4:4.
ಯುದ್ಧವನ್ನು ಸಂಪೂರ್ಣವಾಗಿ ವಿರೋಧಿಸುವವರಾಗಿದ್ದಾರೊ?
ಆದರೆ, ‘ಪ್ರಾಚೀನ ಕ್ರೈಸ್ತ ಸಿದ್ಧಾಂತ ಮತ್ತು ಸುವಾರ್ತೆಯ ನಿಜವಾದ ಅರ್ಥವು’ ನಿಜವಾಗಿಯೂ ಶಾಂತಿವಾದವಾಗಿತ್ತೊ? ಈ ಹಿಂದೆ ಅರ್ಥನಿರೂಪಿಸಿದಂತೆ, ಆದಿ ಕ್ರೈಸ್ತರನ್ನು ನಿಜವಾಗಿಯೂ ಶಾಂತಿವಾದಿಗಳೆಂದು ವರ್ಣಿಸಸಾಧ್ಯವಿತ್ತೊ? ಇಲ್ಲ! ಏಕೆ ಇಲ್ಲ? ಒಂದು ಕಾರಣವೇನೆಂದರೆ, ಅವರು ಯುದ್ಧವನ್ನು ನಡೆಸಲು ದೇವರಿಗಿರುವ ಹಕ್ಕನ್ನು ಅಂಗೀಕರಿಸಿದರು. (ವಿಮೋಚನಕಾಂಡ 14:13, 14; 15:1-4; ಯೆಹೋಶುವ 10:14; ಯೆಶಾಯ 30:30-32) ಇದಕ್ಕೆ ಕೂಡಿಸಿ, ಪ್ರಾಚೀನ ಇಸ್ರಾಯೇಲ್ ರಾಷ್ಟ್ರವು ಭೂಮಿಯ ಮೇಲೆ ದೇವರ ಏಕೈಕ ಸಾಧನವಾಗಿ ಸೇವೆಸಲ್ಲಿಸಿದಾಗ, ತನಗಾಗಿ ಆ ರಾಷ್ಟ್ರವು ಹೋರಾಡುವಂತೆ ಅನುಮತಿ ಕೊಡುವ ವಿಷಯದಲ್ಲಿ ಆತನಿಗಿದ್ದ ಹಕ್ಕನ್ನು ಅವರು ಎಂದೂ ವಿರೋಧಿಸಲಿಲ್ಲ.—ಕೀರ್ತನೆ 144:1; ಅ. ಕೃತ್ಯಗಳು 7:45; ಇಬ್ರಿಯ 11:32-34.
ನ್ಯಾಯದ ಆಧಾರದ ಮೇಲೆ ದೇವರಿಗೆ, ಭೂಮಿಯಿಂದ ದುಷ್ಟ ಜನರನ್ನು ತೆಗೆದುಹಾಕುವ ಹಕ್ಕು ಮಾತ್ರವಲ್ಲ ಹಂಗೂ ಇದೆ. ತಮ್ಮ ನಡತೆಯನ್ನು ಸರಿಪಡಿಸಿಕೊಳ್ಳುವಂತೆ ದೇವರು ಅವರ ಪರವಾಗಿ ಮಾಡುವ ತಾಳ್ಮೆಯ ಕೋರಿಕೆಗಳಿಗೆ ಅನೇಕ ಕೇಡಿಗರು ಎಂದೂ ಪ್ರತಿಕ್ರಿಯಿಸರು. (ಯೆಶಾಯ 45:22; ಮತ್ತಾಯ 7:13, 14) ದುಷ್ಟತನದ ವಿಷಯದಲ್ಲಿ ದೇವರ ಸಹನೆಗೆ ಮಿತಿಗಳುಂಟು. (ಯೆಶಾಯ 61:2; ಅ. ಕೃತ್ಯಗಳು 17:30) ಆದುದರಿಂದ ಕಟ್ಟಕಡೆಗೆ ದೇವರು, ಭೂಮಿಯಿಂದ ದುಷ್ಟ ಜನರನ್ನು ಒತ್ತಾಯಪೂರ್ವಕವಾಗಿ ತೆಗೆದುಹಾಕುವನೆಂದು ಕ್ರೈಸ್ತರು ಗುರುತಿಸುತ್ತಾರೆ. (2 ಪೇತ್ರ 3:9, 10) ಬೈಬಲು ಮುಂತಿಳಿಸುವಂತೆ, ಇದು “ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ . . . ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವ” ಸಮಯದಲ್ಲಿ ನೆರವೇರುವುದು.—2 ಥೆಸಲೊನೀಕ 1:6-9.
ಬೈಬಲಿನ ಕೊನೆಯ ಪುಸ್ತಕವು ಈ ಸಂಘರ್ಷವನ್ನು, “ಸರ್ವಶಕ್ತ ದೇವರ ಮಹಾ ದಿನದ ಯುದ್ಧ” (NW) ಅಥವಾ ಅರ್ಮಗೆದೋನ್ ಎಂಬುದಾಗಿ ವರ್ಣಿಸುತ್ತದೆ. (ಪ್ರಕಟನೆ 16:14, 16) ಯೇಸು ಕ್ರಿಸ್ತನು ಇದರಲ್ಲಿ ನಾಯಕತ್ವ ವಹಿಸಿ, “ನೀತಿಯಿಂದ . . . ಯುದ್ಧಮಾಡುತ್ತಾನೆ” (NW) ಎಂದು ಅದು ಹೇಳುತ್ತದೆ. (ಪ್ರಕಟನೆ 19:11, 14, 15) ಸೂಕ್ತವಾಗಿಯೇ ಯೇಸು ಕ್ರಿಸ್ತನು “ಸಮಾಧಾನ [“ಶಾಂತಿ,” NW]ದ ಪ್ರಭು” ಎಂಬುದಾಗಿ ಕರೆಯಲ್ಪಟ್ಟಿದ್ದಾನೆ. (ಯೆಶಾಯ 9:6) ಆದರೂ ಅವನು ಶಾಂತಿವಾದಿಯಲ್ಲ. ಸ್ವರ್ಗದಿಂದ ದೇವರ ಎಲ್ಲ ದಂಗೆಕೋರ ವೈರಿಗಳನ್ನು ತೆಗೆದುಹಾಕಲು ಅವನು ಈಗಾಗಲೇ ಅಲ್ಲಿ ಯುದ್ಧಮಾಡಿದ್ದಾನೆ. (ಪ್ರಕಟನೆ 12:7-9) ಬೇಗನೆ ಅವನು “ಲೋಕನಾಶಕರನ್ನು ನಾಶ”ಮಾಡಲು ಮತ್ತೊಂದು ಯುದ್ಧವನ್ನು ಮಾಡುವನು. ಹಾಗಿದ್ದರೂ, ಭೂಮಿಯ ಮೇಲಿರುವ ಅವನ ಹಿಂಬಾಲಕರು ಆ ದೈವಿಕ ನ್ಯಾಯತೀರ್ಪಿನಲ್ಲಿ ಭಾಗವಹಿಸಲಾರರು.—ಪ್ರಕಟನೆ 11:17, 18.
ಸತ್ಯ ಕ್ರೈಸ್ತರು ಶಾಂತಿಯನ್ನು ಪ್ರೀತಿಸುತ್ತಾರೆ. ಅವರು ಲೋಕದ ಮಿಲಿಟರಿ, ರಾಜಕೀಯ ಹಾಗೂ ಕುಲಸಂಬಂಧಿತ ಸಂಘರ್ಷಗಳಲ್ಲಿ ಸಂಪೂರ್ಣವಾಗಿ ತಟಸ್ಥರಾಗಿ ಉಳಿಯುತ್ತಾರೆ. ಆದರೆ ನಿಷ್ಕೃಷ್ಟವಾಗಿ ಹೇಳುವುದಾದರೆ, ಅವರು ಶಾಂತಿವಾದಿಗಳಲ್ಲ. ಏಕೆ? ಏಕೆಂದರೆ ಭೂಮಿಯ ಮೇಲೆ ದೇವರ ಚಿತ್ತವನ್ನು ಅಂತಿಮವಾಗಿ ಜಾರಿಗೊಳಿಸುವ ಆತನ ಯುದ್ಧ—ವಿಶ್ವ ಪರಮಾಧಿಕಾರದ ಮಹಾ ವಿವಾದಾಂಶವನ್ನು ಬಗೆಹರಿಸುವ ಮತ್ತು ಕಡೆಯದಾಗಿ ಶಾಂತಿಯ ಎಲ್ಲ ವೈರಿಗಳನ್ನು ಭೂಮಿಯಿಂದ ತೆಗೆದುಹಾಕುವ ಒಂದು ಯುದ್ಧ—ವನ್ನು ಅವರು ಸ್ವಾಗತಿಸುತ್ತಾರೆ.—ಯೆರೆಮೀಯ 25:31-33; ದಾನಿಯೇಲ 2:44; ಮತ್ತಾಯ 6:9, 10.
[ಪುಟ 33 ರಲ್ಲಿರುವ ಚಿತ್ರ ಕೃಪೆ]
ಕ್ರಿಸ್ತನು ಗೇಲಿಮಾಡಲ್ಪಟ್ಟದ್ದು/The Doré Bible Illustrations/Dover Publications, Inc.