ಒಬ್ಬ “ಪಾಷಂಡಿ”ಯ ನ್ಯಾಯವಿಚಾರಣೆ ಮತ್ತು ಮರಣದಂಡನೆ
ಇಟಲಿಯ ಎಚ್ಚರ! ಸುದ್ದಿಗಾರರಿಂದ
ನೀರಸವಾದ ನ್ಯಾಯಾಲಯದ ಒಂದು ಬದಿಯಲ್ಲಿ, ನ್ಯಾಯಾಧೀಶರ ಅತ್ಯುಚ್ಚವೂ ಗಂಭೀರವೂ ಆದ ನ್ಯಾಯಪೀಠವಿದೆ. ಮಧ್ಯದಲ್ಲಿರುವ ಅಧ್ಯಕ್ಷನ ಆಸನವು, ಕಪ್ಪು ಬಟ್ಟೆಯ ಮೇಲ್ಕಟ್ಟಿನಿಂದ ಹೊದಿಸಲ್ಪಟ್ಟಿದೆ. ಆ ಆಸನದ ಮೇಲೆ, ಇಡೀ ನ್ಯಾಯಾಲಯಕ್ಕಿಂತ ಎತ್ತರವಾಗಿರುವ ದೊಡ್ಡದಾದ ಮರದ ಶಿಲುಬೆಯನ್ನು ಇರಿಸಲಾಗಿದೆ. ಅಧ್ಯಕ್ಷನ ಆಸನದ ಮುಂದೆ ಕಟಕಟೆಯು ಇದೆ.
ಭೀಕರವಾದ ಕ್ಯಾತೊಲಿಕ್ ಇನ್ಕ್ವಿಸಿಷನ್ (ಮಠೀಯ ನ್ಯಾಯಸ್ಥಾನ) ಅನ್ನು ಅನೇಕ ವೇಳೆ ಈ ರೀತಿಯಲ್ಲಿ ವರ್ಣಿಸಲಾಗುತ್ತಿತ್ತು. ಆ ಅದೃಷ್ಟಹೀನ ಪ್ರತಿವಾದಿಗಳ ವಿರುದ್ಧ ಮಾಡಲಾದ ಭಯಂಕರವಾದ ಆಪಾದನೆಯು, “ಪಾಷಂಡಮತ”ವಾಗಿತ್ತು. ಈ ಶಬ್ದವು, ಹಿಂಸೆ ಮತ್ತು ಕಂಬಕ್ಕೆ ಕಟ್ಟಿ ಸುಡುವ ಮೂಲಕ ಮರಣದಂಡನೆಯನ್ನು ಜಾರಿಗೊಳಿಸುವ ಚಿತ್ರಗಳನ್ನು ಒಬ್ಬನ ಮನಸ್ಸಿನಲ್ಲಿ ಮೂಡಿಸುತ್ತದೆ. ಇನ್ಕ್ವಿಸಿಷನ್ (ಇನ್ಕ್ವಿರೊ ಎಂಬ ಲ್ಯಾಟಿನ್ ಕ್ರಿಯಾಪದದಿಂದ, “ಯಾವುದೇ ವಿಷಯದ ಕುರಿತು ವಿಚಾರಿಸು”), ಪಾಷಂಡಮತವನ್ನು—ಅಂದರೆ, ಸಂಪ್ರದಾಯಬದ್ಧ ರೋಮನ್ ಕ್ಯಾತೊಲಿಕ್ ಬೋಧನೆಯೊಂದಿಗೆ ಅನುಗುಣವಾಗಿರದ ಅಭಿಪ್ರಾಯಗಳು ಇಲ್ಲವೆ ಸಿದ್ಧಾಂತಗಳು—ನಿರ್ನಾಮಮಾಡಲಿಕ್ಕಾಗಿ ಸ್ಥಾಪಿಸಲ್ಪಟ್ಟ ಒಂದು ವಿಶೇಷವಾದ ಚರ್ಚಿನ ನ್ಯಾಯಾಲಯವಾಗಿತ್ತು.
ಮಠೀಯ ನ್ಯಾಯಸ್ಥಾನವನ್ನು ಹಂತಹಂತವಾಗಿ ಸ್ಥಾಪಿಸಲಾಯಿತೆಂದು ಕ್ಯಾತೊಲಿಕ್ ಮೂಲಗಳು ಹೇಳುತ್ತವೆ. IIIನೆಯ ಪೋಪ್ ಲೂಷೀಅಸ್, 1184ರಲ್ಲಿ ವರೋನದಲ್ಲಿ ನಡೆದ ಸಭೆಯಲ್ಲಿ ಅದನ್ನು ಸ್ಥಾಪಿಸಿದನು, ಮತ್ತು ಅದರ ಸಂಘಟನೆ ಹಾಗೂ ಕಾರ್ಯವಿಧಾನಗಳು ಇತರ ಪೋಪರಿಂದ ಪರಿಷ್ಕರಿಸಲ್ಪಟ್ಟವು—ಆ ಭಯಂಕರವಾದ ಸ್ಥಾಪನೆಯನ್ನು ವರ್ಣಿಸಲು ಅಂತಹ ಒಂದು ಪದವನ್ನು ಬಳಸಸಾಧ್ಯವಿರುವಲ್ಲಿ. 13ನೆಯ ಶತಮಾನದಲ್ಲಿ, IXನೆಯ ಪೋಪ್ ಗ್ರೆಗರಿ, ಯೂರೋಪಿನ ಹಲವಾರು ಭಾಗಗಳಲ್ಲಿ ಮಠೀಯ ನ್ಯಾಯಾಲಯಗಳನ್ನು ಸ್ಥಾಪಿಸಿದನು.
ಕುಖ್ಯಾತ ಸ್ಪ್ಯಾನಿಷ್ ಮಠೀಯ ನ್ಯಾಯಸ್ಥಾನವು, ಆಳುವ ಚಕ್ರವರ್ತಿಗಳಾಗಿದ್ದ ಫರ್ಡಿನೆಂಡ್ ಮತ್ತು ಇಸೆಬೆಲ ಇವರ ವಿನಂತಿಯ ಮೇರೆಗೆ, IVನೆಯ ಪೋಪ್ ಸಿಕ್ಸ್ಟಸ್ನಿಂದ ಹೊರಡಿಸಲಾದ ಪೋಪನ ಆಜ್ಞೆಯೊಂದಿಗೆ 1478ರಲ್ಲಿ ಸ್ಥಾಪಿಸಲ್ಪಟ್ಟಿತು. ಹಿಂಸೆಯಿಂದ ತಪ್ಪಿಸಿಕೊಳ್ಳಲು ಕ್ಯಾತೊಲಿಕ್ ಮತಕ್ಕೆ ಪರಿವರ್ತಿತರಾದ ಹಾಗೆ ಸೋಗುಹಾಕಿದ ಯೆಹೂದ್ಯರನ್ನು, ಅಂದರೆ ಮರಾನೊರನ್ನು, ಅದೇ ಕಾರಣಕ್ಕಾಗಿ ಕ್ಯಾತೊಲಿಕ್ ಮತಕ್ಕೆ ಪರಿವರ್ತಿತರಾದ ಇಸ್ಲಾಮ್ ಧರ್ಮದ ಹಿಂಬಾಲಕರನ್ನು, ಅಂದರೆ ಮರಿಸ್ಕೊರನ್ನು, ಮತ್ತು ಸ್ಪೆಯ್ನ್ ದೇಶದ ಪಾಷಂಡಿಗಳನ್ನು ಎದುರಿಸಲಿಕ್ಕಾಗಿ ಅದನ್ನು ಸ್ಥಾಪಿಸಲಾಯಿತು. ತನ್ನ ಮತಭ್ರಾಂತ ಹುರುಪಿನ ಕಾರಣ, ಸ್ಪೆಯ್ನ್ನ ಮೊತ್ತಮೊದಲ ಮುಖ್ಯ ವಿಚಾರಣಾಧಿಕಾರಿಯಾದ ಡೊಮಿನಿಕನ್ ಕ್ರೈಸ್ತಭಿಕ್ಷು ಟೊಮಾಸ್ ಡಾ ಟಾರ್ಕಮೊಡ, ಮಠೀಯ ನ್ಯಾಯಸ್ಥಾನದ ಅತ್ಯಂತ ಕೇಡುಸೂಚಕ ವಿಷಯಗಳ ಸಂಕೇತವಾದನು.
ಇಸವಿ 1542ರಲ್ಲಿ, IIIನೆಯ ಪೋಪ್ ಪೌಲ್, ರೋಮನ್ ಮಠೀಯ ನ್ಯಾಯಸ್ಥಾನವನ್ನು ಸ್ಥಾಪಿಸಿದನು, ಇದಕ್ಕೆ ಇಡೀ ಕ್ಯಾತೊಲಿಕ್ ಜಗತ್ತಿನ ಮೇಲೆ ಅಧಿಕಾರವಿತ್ತು. ಅವನು ಪವಿತ್ರ ರೋಮ್ನ ಸಭೆ ಮತ್ತು ವಿಶ್ವ ಮಠೀಯ ನ್ಯಾಯಸ್ಥಾನ ಎಂಬುದಾಗಿ ಕರೆಯಲ್ಪಟ್ಟ, ಆರು ಧರ್ಮಪಾಲಕರುಳ್ಳ ಒಂದು ಕೇಂದ್ರೀಯ ನ್ಯಾಯಾಲಯವನ್ನು ನೇಮಿಸಿದನು. ಈ ಚರ್ಚಿನ ಮಂಡಳಿಯು, “ಇಡೀ ರೋಮ್ ನಗರವನ್ನು ಭಯಗ್ರಸ್ಥಗೊಳಿಸಿದ ಭೀತಿಯ ಒಂದು ಸರಕಾರ”ವಾಯಿತು. (ಡಿಟ್ಸಾನಾರ್ಯೊ ಎನ್ಚೀಕ್ಲೋಪೆಡೀಕೊ ಈಟ್ಲ್ಯಾನೊ) ಯಾವ ದೇಶಗಳಲ್ಲಿ ಕ್ಯಾತೊಲಿಕ್ ಪಾದ್ರಿಪ್ರಭುತ್ವಕ್ಕೆ ಸಂಪೂರ್ಣ ಅಧಿಕಾರವಿತ್ತೊ ಆ ದೇಶಗಳನ್ನು ಪಾಷಂಡವಾದಿಗಳ ಮರಣದಂಡನೆಯು ದಿಗಿಲುಗೊಳಿಸಿತು.
ನ್ಯಾಯವಿಚಾರಣೆ ಮತ್ತು ಆಟೋ-ಡ-ಫೇ (ಶಿಕ್ಷೆ)
ಒಬ್ಬ ವ್ಯಕ್ತಿಯು ತಾನೊಬ್ಬ ಪಾಷಂಡವಾದಿಯೆಂದು ಒಪ್ಪಿಕೊಳ್ಳುವಂತೆ ಮಾಡುವ ಸಲುವಾಗಿ, ಪಾಷಂಡಮತದ ಆಪಾದನೆಗೆ ಒಳಪಟ್ಟವರನ್ನು ವಿಚಾರಣಾಧಿಕಾರಿಗಳು ಚಿತ್ರಹಿಂಸೆಗೊಳಪಡಿಸಿದರೆಂದು ಇತಿಹಾಸವು ಸ್ಥಿರಪಡಿಸುತ್ತದೆ. ಮಠೀಯ ನ್ಯಾಯಸ್ಥಾನದ ದೋಷವನ್ನು ಕಡಿಮೆಗೊಳಿಸುವ ಒಂದು ಪ್ರಯತ್ನದಲ್ಲಿ, ಆ ಸಮಯದಲ್ಲಿ ಐಹಿಕ ನ್ಯಾಯಾಲಯಗಳಲ್ಲಿಯೂ ಹಿಂಸೆಯು ಸರ್ವಸಾಮಾನ್ಯವಾಗಿತ್ತೆಂದು ಕ್ಯಾತೊಲಿಕ್ ವ್ಯಾಖ್ಯಾನಕಾರರು ಬರೆದಿದ್ದಾರೆ. ಆದರೆ ಕ್ರಿಸ್ತನ ಪ್ರತಿನಿಧಿಗಳೆಂದು ಪ್ರತಿಪಾದಿಸಿದ ಶುಶ್ರೂಷಕರಿಂದ ಇಂತಹ ಚಟುವಟಿಕೆಯು ನ್ಯಾಯಸಮ್ಮತವೆಂದು ಅದು ಸಮರ್ಥಿಸುತ್ತದೊ? ಕ್ರಿಸ್ತನು ತನ್ನ ವೈರಿಗಳಿಗೆ ತೋರಿಸಿದ ಅನುಕಂಪವನ್ನು ಅವರು ತೋರಿಸಬಾರದಾಗಿತ್ತೊ? ಇದನ್ನು ವಾಸ್ತವವಾಗಿ ವೀಕ್ಷಿಸಲು ನಾವು ಒಂದು ಸರಳವಾದ ಪ್ರಶ್ನೆಯನ್ನು ಪರಿಗಣಿಸಬಹುದು: ಕ್ರಿಸ್ತ ಯೇಸು ತನ್ನ ಬೋಧನೆಗಳ ವಿಷಯವಾಗಿ, ತನ್ನೊಂದಿಗೆ ಅಸಮ್ಮತಿಸಿದ ಜನರ ಮೇಲೆ ಹಿಂಸೆಯನ್ನು ಉಪಯೋಗಿಸಿರುವನೊ? ಯೇಸು ಹೇಳಿದ್ದು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಉಪಕಾರಮಾಡಿರಿ.”—ಲೂಕ 6:27.
ಮಠೀಯ ನ್ಯಾಯಸ್ಥಾನವು, ಆಪಾದಿತನಿಗೆ ನ್ಯಾಯದ ಯಾವ ಖಾತರಿಯನ್ನೂ ಕೊಡಲಿಲ್ಲ. ಆಚರಣೆಯಲ್ಲಿ, ವಿಚಾರಣಾಧಿಕಾರಿಗೆ ಅಸೀಮಿತ ಅಧಿಕಾರಗಳಿದ್ದವು. “ವ್ಯಕ್ತಿಯೊಬ್ಬನು ತನ್ನ ಮುಂದೆ ಹಾಜರಾಗಬೇಕೆಂದು ಅಪ್ಪಣೆಮಾಡಲು, ವಿಚಾರಣಾಧಿಕಾರಿಗೆ ಸಂಶಯ, ಆಪಾದನೆಗಳು, ಗಾಳಿ ಸುದ್ದಿಯು ಸಹ ತಕ್ಕಷ್ಟು ಕಾರಣವಾಗಿತ್ತು.” (ಎನ್ಚೀಕ್ಲೋಪೆಡೀಆ ಕಾಟಾಲೀಕಾ) ಕಾನೂನಿನ ಇತಿಹಾಸಕಾರನಾದ ಈಟಾಲೊ ಮಿರೈ ದೃಢಪಡಿಸುವುದೇನೆಂದರೆ, ರೋಮನರಿಂದ ಸ್ಥಾಪಿಸಲ್ಪಟ್ಟ ಪ್ರಾಚೀನ ಆಪಾದನಾ ವ್ಯವಸ್ಥೆಯನ್ನು ತ್ಯಜಿಸುತ್ತಾ, ಕ್ಯಾತೊಲಿಕ್ ಪಾದ್ರಿಪ್ರಭುತ್ವವು ತಾನೇ ನ್ಯಾಯವಿಚಾರಣಾ ವ್ಯವಸ್ಥೆಯನ್ನು ರೂಪಿಸಿ ಅದನ್ನು ಸ್ವೀಕರಿಸಿಕೊಂಡಿತು. ಆಪಾದಿಸುವವನು ತನ್ನ ಆರೋಪವನ್ನು ರುಜುಪಡಿಸಬೇಕೆಂದು ರೋಮನ್ ಕಾನೂನು ಅಗತ್ಯಪಡಿಸಿತು. ಯಾವುದೇ ಸಂದೇಹವಿರುವಲ್ಲಿ, ನಿದೋರ್ಷಿಯಾಗಿದ್ದ ಒಬ್ಬನನ್ನು ಖಂಡಿಸುವ ಗಂಡಾಂತರಕ್ಕೆ ಈಡಾಗುವುದಕ್ಕಿಂತ ನಿರಪರಾಧಿಯೆಂದು ಘೋಷಿಸುವುದು ಉತ್ತಮವಾಗಿತ್ತು. ಕ್ಯಾತೊಲಿಕ್ ಪಾದ್ರಿಪ್ರಭುತ್ವವು ಈ ಮೂಲಭೂತ ಸಿದ್ಧಾಂತವನ್ನು, ಸಂಶಯವು ಅಪರಾಧವನ್ನು ಮುಂದೆಯೇ ಭಾವಿಸಿಕೊಳ್ಳುತ್ತದೆ ಎಂಬ ವಿಚಾರದಿಂದ ಸ್ಥಾನಪಲ್ಲಟಗೊಳಿಸಿತು. ಹೀಗೆ ಪ್ರತಿವಾದಿ ತನ್ನ ನಿರಪರಾಧಿತ್ವವನ್ನು ಪ್ರದರ್ಶಿಸಬೇಕಿತ್ತು. ಆಪಾದನೆ ಮಾಡಿದ ಸಾಕ್ಷಿಗಳ (ದೂರಿಗರು) ಹೆಸರುಗಳು ಗೋಪ್ಯವಾಗಿಡಲ್ಪಟ್ಟವು, ಮತ್ತು ಪ್ರತಿವಾದಿಯ ವಕೀಲನು—ಹಾಗೊಬ್ಬನು ಇದ್ದಾಗ—ಪಾಷಂಡಿಯೆಂದು ಭಾವಿಸಲ್ಪಟ್ಟವನನ್ನು ಯಶಸ್ವಿಕರವಾಗಿ ಸಮರ್ಥಿಸುವುದಾದರೆ, ಕುಖ್ಯಾತಿಯನ್ನು ಹೊಂದುವ ಮತ್ತು ತನ್ನ ಕೆಲಸವನ್ನು ಕಳೆದುಕೊಳ್ಳುವ ಗಂಡಾಂತರಕ್ಕೆ ಈಡಾದನು. ಫಲಸ್ವರೂಪವಾಗಿ, ಎನ್ಚೀಕ್ಲೋಪೆಡೀಆ ಕಾಟಾಲೀಕಾ ಒಪ್ಪಿಕೊಳ್ಳುವುದು, “ಆಪಾದಿತನು ವಾಸ್ತವವಾಗಿ ಅರಕ್ಷಿತನಾಗಿದ್ದನು. ತನ್ನ ತಪ್ಪೊಪ್ಪಿಕೊಳ್ಳುವಂತೆ ಅಪರಾಧಿಗೆ ಸಲಹೆ ನೀಡುವುದೊಂದೇ ವಕೀಲನಿಂದ ಮಾಡಸಾಧ್ಯವಿದ್ದ ಸಂಗತಿಯಾಗಿತ್ತು!”
ನ್ಯಾಯವಿಚಾರಣೆಯು, ಆಟೋ-ಡ-ಫೇ (ಶಿಕ್ಷೆ)—“ನಂಬಿಕೆಯ ಕ್ರಿಯೆ” ಎಂಬ ಅರ್ಥಕೊಡುವ ಒಂದು ಪೋರ್ಚುಗೀಸ್ ಅಭಿವ್ಯಕ್ತಿ—ದಲ್ಲಿ ಅಂತ್ಯಗೊಂಡಿತು. ಪಾಷಂಡಿಗಳ ಶಿಕ್ಷೆಯು ಏನಾಗಿತ್ತು? ಆ ಕಾಲದ ಕಲಾಕೃತಿಗಳು, ಪಾಷಂಡಮತದ ವಿಷಯವಾಗಿ ಆಪಾದಿಸಲ್ಪಟ್ಟ ನತದೃಷ್ಟ ಪ್ರತಿವಾದಿಗಳು ಒಂದು ಕರಾಳ ದೃಶ್ಯದ ಬಲಿಗಳಾದರೆಂದು ತೋರಿಸುತ್ತವೆ. ಡಿಟ್ಸಾನಾರ್ಯೊ ಏಕ್ಲೇಸಿಆಸ್ಟೀಕೊ, ಪಾಷಂಡಿಗಳ ಶಿಕ್ಷೆಯನ್ನು, ತಮಗಾದ ತೀರ್ಪು ಓದಲ್ಪಟ್ಟ ಅನಂತರ, “ಖಂಡಿಸಲ್ಪಟ್ಟ ಹಾಗೂ ಪಶ್ಚಾತ್ತಾಪಿಗಳಾದ ಪಾಷಂಡಿಗಳಿಂದ ನಡೆಸಲ್ಪಡುವ ಒಪ್ಪಂದದ ಬಹಿರಂಗ ಕ್ರಿಯೆ” ಎಂಬುದಾಗಿ ವಿಶದೀಕರಿಸುತ್ತದೆ.
ವರ್ಷಕ್ಕೆ ಎರಡು ಅಥವಾ ಹೆಚ್ಚು ಬಾರಿ, ತಪ್ಪಿತಸ್ಥರೆಂದು ನಿರ್ಣಯಿಸಲ್ಪಟ್ಟ ಹಲವಾರು ಪಾಷಂಡಿಗಳನ್ನು ಒಂದು ಭಯಾನಕ ದೃಶ್ಯದಲ್ಲಿ ಒಟ್ಟುಗೂಡಿಸಸಾಧ್ಯವಾಗುವಂತೆ, ಪಾಷಂಡಿಗಳ ತೀರ್ಪು ಮತ್ತು ಮರಣದಂಡನೆಯನ್ನು ಮುಂದೆಹಾಕಲಾಗುತ್ತಿತ್ತು. ಪರಪೀಡಾಕರ್ಷಣೆ ಮತ್ತು ಭೀತಿಯ ಭಾವನೆಗಳಿಂದ ಭಾಗವಹಿಸಿದ ಪ್ರೇಕ್ಷಕರ ಮುಂದೆ, ಪಾಷಂಡಿಗಳನ್ನು ಒಂದು ದೀರ್ಘ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ತಪ್ಪಿತಸ್ಥರೆಂದು ನಿರ್ಣಯಿಸಲ್ಪಟ್ಟವರನ್ನು ಒಂದು ದೊಡ್ಡ ಚೌಕದ ಮಧ್ಯದಲ್ಲಿರುವ ವೇದಿಕೆಯ ಮೇಲೆ ಹತ್ತುವಂತೆ ಮಾಡಿ, ಅವರಿಗಾದ ತೀರ್ಪುಗಳನ್ನು ಗಟ್ಟಿಯಾಗಿ ಓದಲಾಯಿತು. ಬಹಿರಂಗವಾಗಿ ತಪ್ಪೊಪ್ಪಿಕೊಂಡವರು, ಅಂದರೆ, ಪಾಷಂಡಮತದ ಸಿದ್ಧಾಂತಗಳನ್ನು ತೊರೆದವರು, ಜಾತಿಭ್ರಷ್ಟಮಾಡಲ್ಪಡುವ ವಿಧಿಯಿಂದ ಬಿಡಿಸಲ್ಪಟ್ಟು, ಜೀವಾವಧಿಯ ಸೆರೆಮನೆವಾಸವನ್ನು ಸೇರಿಸಿ ವಿವಿಧ ದಂಡನೆಗೊಳಪಟ್ಟರು. ಯಾರು ಬಹಿರಂಗವಾಗಿ ತಪ್ಪೊಪ್ಪಿಕೊಳ್ಳದೆ, ಕೊನೆಯ ಗಳಿಗೆಯಲ್ಲಿ ಒಬ್ಬ ಪಾದ್ರಿಯ ಬಳಿ ಪಾಪನಿವೇದನೆ ಮಾಡಿದರೊ ಅವರನ್ನು, ಕತ್ತು ಹಿಸುಕಿ ಕೊಲ್ಲುವಂತೆ, ನೇಣುಹಾಕುವಂತೆ, ಇಲ್ಲವೆ ಶಿರಚ್ಛೇದನ ಮಾಡುವಂತೆ ಮತ್ತು ಅನಂತರ ಸುಟ್ಟುಬಿಡುವಂತೆ ಪೌರ ಅಧಿಕಾರಿಗಳಿಗೆ ಒಪ್ಪಿಸಲಾಯಿತು. ಪಶ್ಚಾತ್ತಾಪಪಡದವರನ್ನು ಜೀವಂತವಾಗಿ ಸುಡಲಾಯಿತು. ಮರಣದಂಡನೆಯ ಜಾರಿಗೊಳಿಸುವಿಕೆಯು, ಮತ್ತೊಂದು ಬಹಿರಂಗ ದೃಶ್ಯವನ್ನು ಅನುಸರಿಸಿ, ಸ್ವಲ್ಪ ಸಮಯದ ಅನಂತರ ಸಂಭವಿಸಿತು.
ರೋಮನ್ ಮಠೀಯ ನ್ಯಾಯಸ್ಥಾನದ ಚಟುವಟಿಕೆಯನ್ನು ಅತ್ಯಂತ ಗೋಪ್ಯವಾಗಿಡಲಾಯಿತು. ಈ ದಿನದ ವರೆಗೂ, ಅದರ ದಾಖಲೆಗಳಿಂದ ಮಾಹಿತಿಯನ್ನು ಸಂಗ್ರಹಿಸುವಂತೆ ವಿದ್ವಾಂಸರು ಅನುಮತಿಸಲ್ಪಡುವುದಿಲ್ಲ. ಹಾಗಿದ್ದರೂ, ತಾಳ್ಮೆಯ ಸಂಶೋಧನೆಯು, ರೋಮನ್ ನ್ಯಾಯಾಲಯದ ನ್ಯಾಯವಿಚಾರಣೆಯ ದಾಖಲೆಗಳಲ್ಲಿ ಬಹಳಷ್ಟನ್ನು ಬೆಳಕಿಗೆ ತಂದಿದೆ. ಅವು ಏನನ್ನು ಪ್ರಕಟಪಡಿಸುತ್ತವೆ?
ಒಬ್ಬ ಧರ್ಮಾಧ್ಯಕ್ಷನ ನ್ಯಾಯವಿಚಾರಣೆ
ಹದಿನಾರನೆಯ ಶತಮಾನದ ಆರಂಭದಲ್ಲಿ ಫ್ಲಾರೆನ್ಸ್ನಲ್ಲಿ ಜನಿಸಿದ ಪಿಯಟ್ರೊ ಕಾರ್ನೆಸೆಕಿ, ಅವನನ್ನು ತನ್ನ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡ VIIನೆಯ ಪೋಪ್ ಕ್ಲೆಮೆಂಟ್ನ ಶಾಲೆಯಲ್ಲಿ ತನ್ನ ಚರ್ಚ್ಸಂಬಂಧಿತ ವೃತ್ತಿಯಲ್ಲಿ ತೀವ್ರ ಪ್ರಗತಿಯನ್ನು ಮಾಡಿದನು. ಆದರೆ, ಆ ಪೋಪನು ಸತ್ತಾಗ, ಕಾರ್ನೆಸೆಕಿಯ ವೃತ್ತಿಯು ಏಕಾಏಕಿಯಾಗಿ ಕೊನೆಗೊಂಡಿತು. ತದನಂತರ ಅವನು, ತನ್ನಂತೆಯೇ ಪ್ರಾಟೆಸ್ಟಂಟ್ ಸುಧಾರಣೆಯಿಂದ ಕಲಿಸಲ್ಪಟ್ಟ ಕೆಲವು ಸಿದ್ಧಾಂತಗಳನ್ನು ಸ್ವೀಕರಿಸಿದ ಶ್ರೀಮಂತ ವರ್ಗದವರು ಮತ್ತು ವೈದಿಕರೊಂದಿಗೆ ಪರಿಚಯ ಮಾಡಿಕೊಂಡನು. ಫಲಸ್ವರೂಪವಾಗಿ ಅವನು ಮೂರು ಬಾರಿ ನ್ಯಾಯವಿಚಾರಣೆಗೊಳಗಾದನು. ಮರಣಕ್ಕೆ ಖಂಡಿಸಲ್ಪಟ್ಟ ಅವನ ಶಿರಚ್ಛೇದನ ಮಾಡಿ, ಅವನ ದೇಹವನ್ನು ಸುಡಲಾಯಿತು.
ಸೆರೆಮನೆಯಲ್ಲಿ ಕಾರ್ನೆಸೆಕಿಯ ಬಂಧನವು, ವ್ಯಾಖ್ಯಾನಕಾರರಿಂದ ಒಂದು ಜೀವಂತ ಮರಣವಾಗಿ ವರ್ಣಿಸಲ್ಪಟ್ಟಿತು. ಅವನ ಪ್ರತಿಭಟನೆಯನ್ನು ಮುರಿಯಲು, ಅವನಿಗೆ ಚಿತ್ರಹಿಂಸೆ ಕೊಟ್ಟು, ಉಪವಾಸವಿರುವಂತೆ ಮಾಡಲಾಯಿತು. 1567, ಸೆಪ್ಟೆಂಬರ್ 21ರಂದು, ಬಹುಮಟ್ಟಿಗೆ ರೋಮ್ನಲ್ಲಿರುವ ಎಲ್ಲ ಕಾರ್ಡಿನಲರ ಉಪಸ್ಥಿತಿಯಲ್ಲಿ ಅವನ ಶಿಕ್ಷೆಯ ಪ್ರಕಟನೆಯನ್ನು ವಿಧಿವಿಹಿತವಾಗಿ ನಡೆಸಲಾಯಿತು. ಜನರ ಗುಂಪಿನ ಮುಂದೆ, ವೇದಿಕೆಯ ಮೇಲೆ ನಿಂತಿದ್ದ ಕಾರ್ನೆಸೆಕಿಗೆ ಅವನ ತೀರ್ಪನ್ನು ಓದಿಹೇಳಲಾಯಿತು. ಅದು ವಾಡಿಕೆಯ ಹೇಳಿಕೆ ಮತ್ತು ಪಾಷಂಡಿಯು ಯಾವ ಪೌರ ನ್ಯಾಯಾಲಯಕ್ಕೆ ಒಪ್ಪಿಸಲ್ಪಡಲಿದ್ದನೊ ಅದರ ಸದಸ್ಯರಿಗೆ, ‘ಆ ವ್ಯಕ್ತಿಯ ಮೇಲಿದ್ದ ಶಿಕ್ಷೆಯನ್ನು ಮಿತಗೊಳಿಸಬೇಕು ಮತ್ತು ಅವನಿಗೆ ಮರಣಶಿಕ್ಷೆ ವಿಧಿಸಬಾರದು ಇಲ್ಲವೆ ಅವನನ್ನು ಅತಿಯಾಗಿ ಹಿಂಸಿಸಬಾರದು’ ಎಂಬ ಬೇಡಿಕೆಯೊಂದಿಗೆ ಕೊನೆಗೊಂಡಿತು. ಇದು ಮಿತಿಮೀರಿದ ಕಪಟಾಚಾರವಾಗಿರಲಿಲ್ಲವೊ? ವಿಚಾರಣಾಧಿಕಾರಿಗಳು ಪಾಷಂಡಿಗಳನ್ನು ನಿರ್ಮೂಲಮಾಡಲು ಬಯಸಿದರು, ಆದರೆ ಅದೇ ಸಮಯ, ಮಾನ ಉಳಿಸಿಕೊಳ್ಳುತ್ತಾ ಮತ್ತು ರಕ್ತಾಪರಾಧದ ಹೊರೆಯನ್ನು ಮತ್ತೊಬ್ಬರ ಮೇಲೆ ಹೊರಿಸುತ್ತಾ, ಕರುಣೆಯನ್ನು ತೋರಿಸುವಂತೆ ಐಹಿಕ ಅಧಿಕಾರಿಗಳಲ್ಲಿ ಕೇಳುವ ನಟನೆ ಮಾಡಿದರು. ಕಾರ್ನೆಸೆಕಿಯ ತೀರ್ಪನ್ನು ಓದಿದ ತರುವಾಯ, ಒಂದು ಪಶ್ಚಾತ್ತಾಪ ವಸ್ತ್ರ—ಪಶ್ಚಾತ್ತಾಪಿಗಳಿಗಾಗಿ ಕೆಂಪು ಬಣ್ಣದ ಶಿಲುಬೆಗಳ ಗುರುತು ಇದ್ದ ಹಳದಿ ಬಣ್ಣದ, ಇಲ್ಲವೆ ಪಶ್ಚಾತ್ತಾಪ ಪಡದವರಿಗೆ ಉರಿಜ್ವಾಲೆಗಳ ಮತ್ತು ಭೂತಗಳ ಚಿತ್ರಗಳಿದ್ದ ಕಪ್ಪು ಬಣ್ಣದ ಗೋಣಿತಟ್ಟಿನಿಂದ ಮಾಡಿದ ನಿಲುವಂಗಿ—ವನ್ನು ಧರಿಸಿಕೊಳ್ಳುವಂತೆ ಅವನನ್ನು ಒತ್ತಾಯಿಸಲಾಯಿತು. ತೀರ್ಪನ್ನು ಹತ್ತು ದಿನಗಳ ತರುವಾಯ ಜಾರಿಗೊಳಿಸಲಾಯಿತು.
ಪೋಪನ ಈ ಮಾಜಿ ಕಾರ್ಯದರ್ಶಿಯು ಪಾಷಂಡಮತದ ವಿಷಯವಾಗಿ ಆಪಾದಿಸಲ್ಪಟ್ಟದ್ದು ಏಕೆ? ಹಿಂದಿನ ಶತಮಾನದ ಕೊನೆಯಲ್ಲಿ ಕಂಡುಹಿಡಿಯಲ್ಪಟ್ಟ ಅವನ ನ್ಯಾಯವಿಚಾರಣೆಯ ವರದಿಗಳು ಪ್ರಕಟಪಡಿಸುವುದೇನೆಂದರೆ, ಅವನು ವಿರೋಧಿಸಿದ ಸಿದ್ಧಾಂತಗಳಿಗೆ ಅನುರೂಪವಾಗಿದ್ದ 34 ಆಪಾದನೆಗಳ ವಿಷಯದಲ್ಲಿ ಅವನು ತಪ್ಪಿತಸ್ಥನೆಂದು ತೀರ್ಪುಮಾಡಲಾಯಿತು. ಅವುಗಳಲ್ಲಿ, ಶುದ್ಧಿಲೋಕ, ಪಾದ್ರಿಗಳು ಮತ್ತು ನನ್ಗಳ ಬ್ರಹ್ಮಚರ್ಯ, ವಸ್ವಂತರೀಕರಣ, ಸ್ಥಿರೀಕರಣ ಸಂಸ್ಕಾರ (ಕನ್ಫರ್ಮೇಷನ್), ಪಾಪನಿವೇದನೆ, ಆಹಾರಗಳ ನಿಷೇಧ, ಶೇಷಪಾಪಕ್ಷಮೆಗಳು ಮತ್ತು “ಸಂತ”ರಿಗೆ ಮಾಡಲ್ಪಡುವ ಪ್ರಾರ್ಥನೆಗಳ ಕುರಿತಾದ ಬೋಧನೆಗಳು ಸೇರಿದ್ದವು. ಎಂಟನೆಯ ಆಪಾದನೆಯು ವಿಶೇಷವಾಗಿ ಸ್ವಾರಸ್ಯಕರವಾಗಿದೆ. (ಪುಟ 21, ರೇಖಾಚೌಕವನ್ನು ನೋಡಿರಿ.) ಯಾರು “ಪವಿತ್ರ ಶಾಸ್ತ್ರಗಳಲ್ಲಿ ವ್ಯಕ್ತಪಡಿಸಲ್ಪಟ್ಟ ದೇವರ ವಾಕ್ಯವನ್ನು” ಮಾತ್ರ ನಂಬಿಕೆಯ ಆಧಾರವಾಗಿ ಸ್ವೀಕರಿಸಿದರೊ, ಅವರನ್ನು ಮರಣಕ್ಕೆ ಖಂಡಿಸುವ ಮೂಲಕ, ಕ್ಯಾತೊಲಿಕ್ ಚರ್ಚು ಪವಿತ್ರ ಬೈಬಲನ್ನು ಏಕಮಾತ್ರ ಪ್ರೇರಿತ ಮೂಲವಾಗಿ ಪರಿಗಣಿಸುವುದಿಲ್ಲವೆಂದು ಮಠೀಯ ನ್ಯಾಯಸ್ಥಾನವು ಸ್ಪಷ್ಟವಾಗಿ ತೋರಿಸಿತು. ಹೀಗೆ ಚರ್ಚಿನ ಸಿದ್ಧಾಂತಗಳಲ್ಲಿ ಹೆಚ್ಚಿನವು ಶಾಸ್ತ್ರಗಳ ಮೇಲಲ್ಲ, ಚರ್ಚಿನ ಸಂಪ್ರದಾಯದ ಮೇಲೆ ಆಧಾರಿತವಾಗಿರುವುದು ಆಶ್ಚರ್ಯಕರವೇನೂ ಅಲ್ಲ.
ಒಬ್ಬ ಯುವ ವಿದ್ಯಾರ್ಥಿಯ ಮರಣದಂಡನೆ
1531ರಲ್ಲಿ ನೇಪಲ್ಸ್ನ ಬಳಿ ಜನಿಸಿದ ಪೋಂಪಾನ್ಯೊ ಆಲ್ಜೇರಿಯ ಸಂಕ್ಷಿಪ್ತ ಹಾಗೂ ಹೃದಯಸ್ಪರ್ಶಿ ಜೀವನಕಥೆಯು ಪ್ರಸಿದ್ಧವಾಗಿರದಿದ್ದರೂ, ಹಲವಾರು ವಿದ್ವಾಂಸರ ಶ್ರದ್ಧಾಪೂರ್ವಕ ಐತಿಹಾಸಿಕ ತನಿಖೆಗಳಿಂದಾಗಿ ಅದು ಅಜ್ಞಾತವಾದ ಗತಕಾಲದಿಂದ ಹೊರಬಂದಿದೆ. ಪಾಡವ ವಿಶ್ವವಿದ್ಯಾನಿಲಯದಲ್ಲಿ ಅವನು ಓದುತ್ತಿದ್ದಾಗ ಯೂರೋಪಿನ ವಿವಿಧ ಭಾಗಗಳಿಂದ ಬಂದಿದ್ದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಂಪರ್ಕದಿಂದ, ಆಲ್ಜೇರಿ ಪಾಷಂಡಿಗಳೆಂದು ಕರೆಯಲ್ಪಡುವವರಿಗೆ ಮತ್ತು ಪ್ರಾಟೆಸ್ಟಂಟ್ ಸುಧಾರಣೆಯ ಸಿದ್ಧಾಂತಗಳಿಗೆ ಪರಿಚಯಿಸಲ್ಪಟ್ಟನು. ಶಾಸ್ತ್ರಗಳಲ್ಲಿ ಅವನ ಆಸಕ್ತಿಯು ಬೆಳೆಯಿತು.
ಬೈಬಲ್ ಮಾತ್ರ ಪ್ರೇರಿತವಾದದ್ದೆಂದು ಅವನು ನಂಬತೊಡಗಿದ ಕಾರಣ, ಪಾಪನಿವೇದನೆ, ಸ್ಥಿರೀಕರಣ ಸಂಸ್ಕಾರ, ಶುದ್ಧಿಲೋಕ, ವಸ್ವಂತರೀಕರಣ, ಮತ್ತು “ಸಂತ”ರ ಮಧ್ಯಸ್ಥಿಕೆ ಅಷ್ಟೇ ಅಲ್ಲದೆ ಪೋಪನು ಕ್ರಿಸ್ತನ ಪ್ರತಿನಿಧಿಯೆಂಬ ಬೋಧನೆಯಂತಹ ಹಲವಾರು ಕ್ಯಾತೊಲಿಕ್ ಸಿದ್ಧಾಂತಗಳನ್ನು ಅವನು ತಿರಸ್ಕರಿಸಿದನು.
ಆಲ್ಜೇರಿ ಸೆರೆಹಿಡಿಯಲ್ಪಟ್ಟು, ಪಾಡವದಲ್ಲಿದ್ದ ಮಠೀಯ ನ್ಯಾಯಸ್ಥಾನದಿಂದ ನ್ಯಾಯವಿಚಾರಣೆಗೊಳಗಾದನು. ಅವನು ತನ್ನ ವಿಚಾರಣಾಧಿಕಾರಿಗಳಿಗೆ ಹೇಳಿದ್ದು: “ನಾನು ಸ್ವೇಚ್ಛೆಯಿಂದ ಪುನಃ ಸೆರೆಮನೆಗೆ ಹೋಗುತ್ತಿದ್ದೇನೆ, ಅದು ದೇವರ ಚಿತ್ತವಾಗಿರುವಲ್ಲಿ ಬಹುಶಃ ನನ್ನ ಮರಣಕ್ಕೂ ಹೋಗುತ್ತಿದ್ದೇನೆ. ತನ್ನ ವೈಭವದ ಮೂಲಕ ದೇವರು ಪ್ರತಿಯೊಬ್ಬನನ್ನು ಇನ್ನೂ ಹೆಚ್ಚು ಜ್ಞಾನೋದಯಗೊಳಿಸುವನು. ನಾನು ಪ್ರತಿಯೊಂದು ಹಿಂಸೆಯನ್ನು ಉಲ್ಲಾಸದಿಂದ ತಾಳಿಕೊಳ್ಳುವೆನು, ಏಕೆಂದರೆ ಬಾಧಿತ ಪ್ರಾಣಗಳ ಪರಿಪೂರ್ಣ ಸಾಂತ್ವಾನಕಾರನಾದ ಕ್ರಿಸ್ತನು, ನನ್ನ ಜ್ಞಾನೋದಯ ಹಾಗೂ ನಿಜವಾದ ಬೆಳಕಾಗಿದ್ದು, ಎಲ್ಲ ಅಂಧಕಾರವನ್ನು ತೊಲಗಿಸಶಕ್ತನಾಗಿದ್ದಾನೆ.” ಫಲಸ್ವರೂಪವಾಗಿ ರೋಮನ್ ಮಠೀಯ ನ್ಯಾಯಸ್ಥಾನವು ಅವನನ್ನು ಪಾಡವದಿಂದ ಶಾಸನಬದ್ಧವಾಗಿ ವಶಪಡಿಸಿಕೊಂಡು, ಮರಣದಂಡನೆಗೆ ಗುರಿಮಾಡಿತು.
ಆಲ್ಜೇರಿ ಸತ್ತಾಗ ಅವನು 25 ವರ್ಷ ಪ್ರಾಯದವನಾಗಿದ್ದನು. ರೋಮ್ನಲ್ಲಿ ಅವನನ್ನು ಮರಣಕ್ಕೆ ಒಪ್ಪಿಸಿದ ದಿನ ಅವನು ಪಾಪನಿವೇದನೆ ಮಾಡಲು ಇಲ್ಲವೆ ಪ್ರಭುಭೋಜನ ಸಂಸ್ಕಾರದಲ್ಲಿ ಭಾಗವಹಿಸಲು ನಿರಾಕರಿಸಿದನು. ಅವನ ವಧೆಯ ಸಲಕರಣೆಯು ಸಾಮಾನ್ಯಕ್ಕಿಂತಲೂ ಹೆಚ್ಚು ಕ್ರೂರವಾಗಿತ್ತು. ಅವನನ್ನು ಕಂಬಕ್ಕೆ ಕಟ್ಟಿ ಸುಡಲಾಗಲಿಲ್ಲ. ಬದಲಿಗೆ ಸುಲಭವಾಗಿ ಉರಿಹೊತ್ತಿಕೊಳ್ಳುವ ಸಾಮಗ್ರಿ—ಎಣ್ಣೆ, ರಾಳ, ಮತ್ತು ಅಂಟು ಪದಾರ್ಥ—ಗಳಿಂದ ತುಂಬಿದ ಒಂದು ದೊಡ್ಡ ಹಂಡೆಯನ್ನು, ಜನರ ಗುಂಪು ಸ್ಪಷ್ಟವಾಗಿ ನೋಡಸಾಧ್ಯವಾಗುವಂತೆ ವೇದಿಕೆಯ ಮೇಲೆ ಇಡಲಾಯಿತು. ಬಂಧಿಸಲ್ಪಟ್ಟ ಆ ಯುವ ಪುರುಷನು ಅದರೊಳಗೆ ಇಳಿಸಲ್ಪಟ್ಟನು ಮತ್ತು ಅದಕ್ಕೆ ಉರಿಹೊತ್ತಿಸಲಾಯಿತು. ಅವನು ನಿಧಾನವಾಗಿ ಜೀವಂತ ಸುಡಲ್ಪಟ್ಟನು.
ಗಂಭೀರ ಅಪರಾಧದ ಮತ್ತೊಂದು ಮೂಲ
ಮಠೀಯ ನ್ಯಾಯಸ್ಥಾನದಿಂದ ಮರಣಕ್ಕೆ ಒಪ್ಪಿಸಲ್ಪಟ್ಟ ಕಾರ್ನೆಸೆಕಿ, ಆಲ್ಜೇರಿ ಮತ್ತು ಇತರರಿಗೆ ಶಾಸ್ತ್ರಗಳ ಅಸಂಪೂರ್ಣ ತಿಳಿವಳಿಕೆಯಿತ್ತು. ಜ್ಞಾನವು ಈ ವಿಷಯಗಳ ವ್ಯವಸ್ಥೆಯ “ಅಂತ್ಯಕಾಲ”ದಲ್ಲಿ ‘ಹೆಚ್ಚಾಗ’ಲಿತ್ತು. ಆದರೂ, ತಾವು ದೇವರ ವಾಕ್ಯದಿಂದ ಗಳಿಸಶಕ್ತರಾಗಿದ್ದ ಸೀಮಿತ ಪ್ರಮಾಣದ ‘ಸತ್ಯ ಜ್ಞಾನ’ಕ್ಕಾಗಿ ಅವರು ಸಾಯಲೂ ಸಿದ್ಧರಾಗಿದ್ದರು.—ದಾನಿಯೇಲ 12:4.
ಕೆಲವು ಸುಧಾರಕರು ಸೇರಿದ್ದ ಪ್ರಾಟೆಸ್ಟಂಟರು ಸಹ, ಸಮ್ಮತಿಸದವರನ್ನು ಕಂಬಕ್ಕೆ ಕಟ್ಟಿ ಸುಡುವ ಮೂಲಕ ನಿರ್ಮೂಲಮಾಡಿದರು ಇಲ್ಲವೆ ಐಹಿಕ ಅಧಿಕಾರಿಗಳ ಸಹಾಯದಿಂದ ಕ್ಯಾತೊಲಿಕರನ್ನು ಕೊಂದುಹಾಕಿದರು. ಉದಾಹರಣೆಗೆ, ಕ್ಯಾಲ್ವಿನ್, ಪಾಷಂಡಿಗಳ ಶಿರಚ್ಛೇದನ ಮಾಡುವುದನ್ನು ಇಷ್ಟಪಡುತ್ತಿದ್ದರೂ, ತ್ರಯೈಕ್ಯ ವಿರೋಧಿಯಾದ ಪಾಷಂಡಿ ಎಂದು ಪರಿಗಣಿಸಲ್ಪಟ್ಟ ಮೈಕಲ್ ಸರ್ವೀಟಸ್ನನ್ನು ಜೀವಂತವಾಗಿ ಸುಟ್ಟನು.
ಪಾಷಂಡಿಗಳ ಹಿಂಸೆ ಮತ್ತು ಮರಣದಂಡನೆಯು, ಕ್ಯಾತೊಲಿಕರು ಮತ್ತು ಪ್ರಾಟೆಸ್ಟಂಟರಲ್ಲಿ—ಇಬ್ಬರಲ್ಲೂ—ಸಾಮಾನ್ಯವಾಗಿತ್ತೆಂಬ ನಿಜತ್ವವು ಖಂಡಿತವಾಗಿಯೂ ಆ ಕೃತ್ಯಗಳನ್ನು ಮನ್ನಿಸುವುದಿಲ್ಲ. ಆದರೆ ಆ ಕೊಲ್ಲುವಿಕೆಗಳಿಗಾಗಿ ಶಾಸ್ತ್ರೀಯ ನ್ಯಾಯಸಮರ್ಥನೆಯನ್ನು ಪ್ರತಿಪಾದಿಸಿ, ನಂತರ ಸ್ವತಃ ದೇವರೇ ಅಂತಹ ಕೃತ್ಯಗಳನ್ನು ಕೇಳಿಕೊಂಡನೊ ಎಂಬಂತೆ ಕಾರ್ಯಮಾಡಿದ್ದಕ್ಕಾಗಿ, ಧಾರ್ಮಿಕ ಪಾದ್ರಿಪ್ರಭುತ್ವಗಳಿಗೆ ಇನ್ನೂ ಹೆಚ್ಚಿನ ಗಂಭೀರ ಜವಾಬ್ದಾರಿಯಿದೆ. ಇದು ದೇವರ ಹೆಸರಿನ ಮೇಲೆ ನಿಂದೆಯನ್ನು ಹೇರುವುದಿಲ್ಲವೇ? ಜನಪ್ರಿಯ ಕ್ಯಾತೊಲಿಕ್ “ಚರ್ಚಿನ ಪಿತ”ನಾದ ಅಗಸ್ಟೀನ್, “ಧಾರ್ಮಿಕ” ಬಲಪ್ರಯೋಗದ ತತ್ವವನ್ನು, ಅಂದರೆ, ಪಾಷಂಡಮತವನ್ನು ವಿರೋಧಿಸಲು ಬಲದ ಉಪಯೋಗವನ್ನು ಬೆಂಬಲಿಸಿದವರಲ್ಲಿ ಪ್ರಥಮನೆಂದು ಅನೇಕ ವಿದ್ವಾಂಸರು ದೃಢಪಡಿಸುತ್ತಾರೆ. ಆ ಆಚರಣೆಯನ್ನು ನ್ಯಾಯವೆಂದು ಸಮರ್ಥಿಸುವ ಸಲುವಾಗಿ ಬೈಬಲನ್ನು ಉಪಯೋಗಿಸುವ ಒಂದು ಪ್ರಯತ್ನದಲ್ಲಿ ಅವನು, ಲೂಕ 14:16-24ರಲ್ಲಿ ಕಂಡುಕೊಳ್ಳಲ್ಪಡುವ ಯೇಸುವಿನ ಸಾಮ್ಯದಲ್ಲಿನ ಮಾತುಗಳನ್ನು ಉದ್ಧರಿಸಿದನು: “ಸಿಕ್ಕಿದವರನ್ನು ಬಲವಂತಮಾಡಿ ಒಳಕ್ಕೆ ಕರಕೊಂಡು ಬಾ.” ಸ್ಪಷ್ಟವಾಗಿ, ಅಗಸ್ಟೀನ್ನಿಂದ ವಿಕೃತಗೊಳಿಸಲ್ಪಟ್ಟ ಈ ಮಾತುಗಳು, ಕ್ರೂರವಾದ ಬಲಪ್ರಯೋಗವನ್ನಲ್ಲ, ಉದಾರವಾದ ಅತಿಥಿಸತ್ಕಾರವನ್ನು ಸೂಚಿಸಿದವು.
ಮಠೀಯ ನ್ಯಾಯಸ್ಥಾನವು ಸಕ್ರಿಯವಾಗಿದ್ದಾಗಲೂ, ಧಾರ್ಮಿಕ ಸಹಿಷ್ಣುತೆಯ ಬೆಂಬಲಿಗರು ಗೋದಿ ಮತ್ತು ಹಣಜಿಗಳ ಸಾಮ್ಯವನ್ನು ಉದ್ಧರಿಸುತ್ತಾ, ಪಾಷಂಡಿಗಳ ಹಿಂಸೆಯ ವಿರುದ್ಧ ವಾದಿಸಿದರೆಂಬುದು ಗಮನಾರ್ಹವಾದ ವಿಷಯ. (ಮತ್ತಾಯ 13:24-30, 36-43) ಅವರಲ್ಲಿ ಒಬ್ಬನಾದ ರಾಟರ್ಡ್ಯಾಮ್ನ ಡೇಸಿಡೆರ್ಯುಸ್ ಇರಾಸ್ಮಸ್ ಹೇಳಿದ್ದೇನೆಂದರೆ, ಹೊಲದ ಯಜಮಾನನಾದ ದೇವರು, ಹಣಜಿಗಳನ್ನು, ಪಾಷಂಡಿಗಳನ್ನು ಸಹಿಸಿಕೊಳ್ಳಬೇಕೆಂದು ಬಯಸಿದನು. ಇನ್ನೊಂದು ಕಡೆಯಲ್ಲಿ ಮಾರ್ಟಿನ್ ಲೂಥರ್, ಸಮ್ಮತಿಸದ ರೈತರ ವಿರುದ್ಧ ಹಿಂಸಾಚಾರವನ್ನು ಆರಂಭಿಸಿದನು, ಮತ್ತು ಬಹುಮಟ್ಟಿಗೆ 1,00,000 ಜನರು ಕೊಲ್ಲಲ್ಪಟ್ಟರು.
ಪಾಷಂಡಿಗಳೆಂದು ಕರೆಯಲ್ಪಟ್ಟವರ ಹಿಂಸೆಯನ್ನು ಪ್ರವರ್ಧಿಸಿದ ಕ್ರೈಸ್ತಪ್ರಪಂಚದ ಧರ್ಮಗಳ ಮೇಲಿರುವ ಗಂಭೀರ ಜವಾಬ್ದಾರಿಯನ್ನು ಗ್ರಹಿಸಿಕೊಳ್ಳುತ್ತಾ, ನಾವು ಏನು ಮಾಡುವಂತೆ ಪ್ರಚೋದಿಸಲ್ಪಡಬೇಕು? ನಿಶ್ಚಯವಾಗಿಯೂ, ನಾವು ದೇವರ ವಾಕ್ಯದ ಸತ್ಯ ಜ್ಞಾನವನ್ನು ಹುಡುಕಬಯಸಬೇಕು. ಒಬ್ಬ ಸತ್ಯ ಕ್ರೈಸ್ತನ ಗುರುತು, ದೇವರಿಗಾಗಿ ಮತ್ತು ನೆರೆಯವರಿಗಾಗಿರುವ ತನ್ನ ಪ್ರೀತಿ—ಸ್ಪಷ್ಟವಾಗಿ ಹಿಂಸಾಚಾರವನ್ನು ಅನುಮತಿಸದ ಒಂದು ಪ್ರೀತಿ—ಯಾಗಿರುವುದೆಂದು ಯೇಸು ಹೇಳಿದನು.—ಮತ್ತಾಯ 22:37-40; ಯೋಹಾನ 13:34, 35; 17:3.
[ಪುಟ 38 ರಲ್ಲಿರುವ ಚೌಕ]
ಕಾರ್ನೆಸೆಕಿ ತಪ್ಪಿತಸ್ಥನೆಂದು ನಿರ್ಣಯಿಸಲ್ಪಟ್ಟ ಕೆಲವು ಆಪಾದನೆಗಳು
8. “ಪವಿತ್ರ ಶಾಸ್ತ್ರಗಳಲ್ಲಿ ವ್ಯಕ್ತಪಡಿಸಲ್ಪಟ್ಟ ದೇವರ ವಾಕ್ಯವನ್ನು ಬಿಟ್ಟು ಬೇರೇನನ್ನೂ ನಂಬಬಾರದೆಂದು [ನೀನು ಹೇಳಿರುವೆ].”
12. “ಮತಸಂಸ್ಕಾರದಂತಹ ಪಾಪನಿವೇದನೆಯು ಡೆ ಯೂರೆ ಡೀವೀನೊ [ದೈವಿಕ ನಿಯಮಕ್ಕನುಸಾರ] ಅಲ್ಲ, ಅದು ಕ್ರಿಸ್ತನಿಂದ ಸ್ಥಾಪಿಸಲ್ಪಡಲಿಲ್ಲ ಅಥವಾ ಶಾಸ್ತ್ರಗಳಿಂದ ರುಜುಪಡಿಸಲ್ಪಟ್ಟಿಲ್ಲ, ಇಲ್ಲವೆ ಸ್ವತಃ ದೇವರಿಗೇ ಮಾಡಲ್ಪಡುವ ಪಾಪನಿವೇದನೆಯ ಹೊರತು ಬೇರೆ ಯಾವ ಪ್ರಕಾರದ ಪಾಪನಿವೇದನೆಯೂ ಅಗತ್ಯವಿಲ್ಲವೆಂದು [ನೀನು ನಂಬಿರುವೆ].”
15. “ನೀನು ಶುದ್ಧಿಲೋಕದ ವಿಷಯದಲ್ಲಿ ಸಂದೇಹಪಟ್ಟಿರುವೆ.”
16. “ಸತ್ತವರಿಗಾಗಿ ಪ್ರಾರ್ಥನೆಗಳನ್ನು ಒಳಗೊಂಡಿರುವ ಮ್ಯಾಕಬೀಸ್ ಪುಸ್ತಕವನ್ನು ನೀನು ಅವಿಶ್ವಸನೀಯವೆಂದು ಪರಿಗಣಿಸಿರುವೆ.”
[ಪುಟ 35 ರಲ್ಲಿರುವ ಚಿತ್ರ ಕೃಪೆ]
The Complete Encyclopedia of Illustration/J. G. Heck