ಸಿಂಗಾಪುರ ಏಷಿಯದ ಕಳಂಕಿತ ರತ್ನ
ಧಡಾರ್! ಒಬ್ಬ ಕ್ರೈಸ್ತಳಾಗಿದ್ದ 71 ವರ್ಷ ಪ್ರಾಯದ ದುರ್ಬಲ ವಿಧವೆಯು ಒಳಗೆ ಬಂದ ಬಳಿಕ, ಸಿಂಗಾಪುರದ ಚಂಗೀ ಮಹಿಳೆಯರ ಸೆರೆಮನೆಯ ಭಾರವಾದ ಕಬ್ಬಿಣದ ಬಾಗಿಲುಗಳು ಭಯಸೂಚಕವಾಗಿ ಮುಚ್ಚಿಕೊಂಡವು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದ ಅವಳು, “ಈ ಸರಕಾರಕ್ಕೆ ನಾನು ಬೆದರಿಕೆಯಾಗಿಲ್ಲ” ಎಂದು, ಅಧ್ಯಕ್ಷತೆ ವಹಿಸುತ್ತಿದ್ದ ನ್ಯಾಯಾಧೀಶನ ಬಳಿ ತನ್ನ ನಿಲುವನ್ನು ವಿವರಿಸಲು ಪ್ರಯತ್ನಿಸಿದ್ದಳು.
ಧಡಾರ್! ಅವಳ ಅನಂತರ 72 ವರ್ಷ ಪ್ರಾಯದ ಇನ್ನೊಬ್ಬ ಕ್ರೈಸ್ತ ಅಜ್ಜಿಯನ್ನು ಸೆರಮನೆಗೆ ಹಾಕಲಾಯಿತು. ಅವಳ ಅಪರಾಧವೇನು? ಅವಳ ಪವಿತ್ರ ಬೈಬಲಿನ ವೈಯಕ್ತಿಕ ಪ್ರತಿಯನ್ನು ಸೇರಿಸಿ, ವಾಚ್ ಟವರ್ ಸೊಸೈಟಿಯ ನಾಲ್ಕು ಬೈಬಲ್ ಪ್ರಕಾಶನಗಳು ಅವಳ ಬಳಿ ಇದ್ದದ್ದೇ ಆಗಿತ್ತು.
ಒಟ್ಟಿಗೆ, ಸಿಂಗಾಪುರದ 16ರಿಂದ 72 ವರ್ಷ ವಯಸ್ಸಿನ 64 ಪ್ರಜೆಗಳನ್ನು ಸೆರೆಹಿಡಿದು, ಅವರ ಮೇಲೆ ದೋಷಾರೋಪಣೆ ಹೊರಿಸಲಾಯಿತು. ನಲ್ವತ್ತೇಳು ಮಂದಿ ನೀತಿದೃಷ್ಟಿಯಿಂದ ದಂಡಗಳನ್ನು ತೆರಲು ನಿರಾಕರಿಸಿದರು ಮತ್ತು ಒಂದರಿಂದ ನಾಲ್ಕು ವಾರಗಳ ವರೆಗಿನ ವಿವಿಧ ಕಾಲಾವಧಿಗಳ ತನಕ ಸೆರೆಮನೆಯಲ್ಲಿ ಬಂಧಿಸಲ್ಪಟ್ಟರು. ಇಡೀ ಲೋಕದಲ್ಲೇ ಜೀವಿಸಲು ಅತ್ಯುತ್ತಮವಾಗಿರುವ ಸ್ಥಳಗಳಲ್ಲಿ ಒಂದೆಂದು ವರ್ಣಿಸಲ್ಪಟ್ಟಿರುವ ನಗರರಾಜ್ಯ (ಸಿಟಿ-ಸ್ಟೇಟ್)ದಲ್ಲಿ ಇದು ಹೇಗೆ ಸಂಭವಿಸಸಾಧ್ಯವಿತ್ತು? ಲೋಕವ್ಯಾಪಕವಾಗಿ ಅದರ ಆರ್ಥಿಕ ಭದ್ರತೆ, ಲೋಕೋತ್ತರವಾದ ಅಭಿವೃದ್ಧಿ, ಮತ್ತು ಆಧುನಿಕ ಕಟ್ಟಡಗಳು ಹಾಗೂ ಅದರ ಪ್ರತಿಪಾದಿತ ಧಾರ್ಮಿಕ ಸಹಿಷ್ಣುತೆಗೆ ಹೆಸರುವಾಸಿಯಾಗಿರುವ ಒಂದು ನಗರರಾಜ್ಯದಲ್ಲಿ ಇದು ಹೇಗೆ ಸಂಭವಿಸಸಾಧ್ಯವಿತ್ತು?
ಒಂದು ಆಧುನಿಕ ನಗರರಾಜ್ಯ
ಮೊದಲಾಗಿ, ನಾವು ಸಿಂಗಾಪುರದ ಒಂದು ಸಂಕ್ಷಿಪ್ತ ಇತಿಹಾಸವನ್ನು ಪರಿಗಣಿಸೋಣ. ಸಿಂಗಾಪುರದ ಆಧುನಿಕ ದಿನದ ಕಥೆಯು, 1819ರಲ್ಲಿ ಬ್ರಿಟನಿನ ಸರ್ ಥಾಮಸ್ ಸ್ಟ್ಯಾಮ್‌ಫರ್ಡ್ ರಾಫಲ್ಸ್‌ನ ಆಗಮನದೊಂದಿಗೆ ಆರಂಭವಾಯಿತು. ಈಸ್ಟ್ ಇಂಡಿಯ ಕಂಪೆನಿಯ ಒಬ್ಬ ಪ್ರತಿನಿಧಿಯಾಗಿದ್ದ ರಾಫಲ್ಸ್, ಪ್ರಾಚ್ಯ ಲೋಕದಲ್ಲಿ ಕಾರ್ಯಾಚರಣೆಗಳನ್ನು ನಡೆಸಲು ಒಂದು ಕೇಂದ್ರಸ್ಥಾನಕ್ಕಾಗಿ ಹುಡುಕುತ್ತಿದ್ದನು. ಅವನು ಸಿಂಗಾಪುರವನ್ನು ಪರಿಗಣಿಸಲು ನಿರ್ಧರಿಸಿದನು. ಹೀಗೆ, ಇಂದಿನ ವರೆಗೂ ಪೂರ್ವ ಏಷಿಯದ ಅಭಿವೃದ್ಧಿಯ ಮೇಲೆ ಬಲವಾದ ಪ್ರಭಾವವನ್ನು ಬೀರಿರುವ ಒಂದು ವಾಣಿಜ್ಯ ಕೇಂದ್ರವು ಆರಂಭವಾಯಿತು.
ಸ್ವಾತಂತ್ರ್ಯಪೂರ್ವ ಸಿಂಗಾಪುರವು, ಅಚ್ಚುಕಟ್ಟಾಗಿಲ್ಲದ ಒಂದು ನಗರದೋಪಾದಿ ವರ್ಣಿಸಲ್ಪಟ್ಟಿದೆ. ಇಂದು, ಯಾರೊಬ್ಬರೂ ಸಿಂಗಾಪುರವನ್ನು ಅಚ್ಚುಕಟ್ಟಾಗಿಲ್ಲದ್ದೆಂದು ವರ್ಣಿಸಲಾರರು. ಅದು ಅಚ್ಚುಕಟ್ಟಾಗಿದೆ ಎಂಬುದು ಸತ್ಯ. ಕಳೆದ 30 ವರ್ಷಗಳಲ್ಲಿ, ಹೆಚ್ಚು ಹಳೆಯದಾದ ಕಟ್ಟಡಗಳ ಮುಂಭಾಗವನ್ನು ಸಂರಕ್ಷಿಸುವ ಮೂಲಕ ಅಥವಾ ಇಡೀ ಐತಿಹಾಸಿಕ ರಚನೆಗಳನ್ನು ಸಮಗ್ರವಾಗಿ ಆಧುನಿಕ ಕಟ್ಟಡಗಳಾಗಿ ಮಾರ್ಪಡಿಸುವ ಮೂಲಕ, ಸಾಧ್ಯವಿರುವಲ್ಲೆಲ್ಲಾ ಹಳೆಯ ನಗರದ ವೈಶಿಷ್ಟ್ಯವನ್ನು ಬದಲಾಯಿಸದೆ, ಈ ನಗರವು ಬಹುಮಟ್ಟಿಗೆ ಸಂಪೂರ್ಣವಾಗಿ ಪುನರ್‌ನಿರ್ಮಿಸಲ್ಪಟ್ಟಿದೆ. ಸಿಂಗಾಪುರವು, ಪೂರ್ವ ಭಾಗದಲ್ಲಿನ ಕಡಲ ಸಂಬಂಧವಾದ ಸಂಚಾರಮಾರ್ಗಕ್ಕೆ ಅಡ್ಡಹಾದಿಯಾಗಿ ಪರಿಣಮಿಸಿದ್ದು, ಅನೇಕವೇಳೆ ಬಂದರಿನಲ್ಲಿ ಏಕಕಾಲದಲ್ಲಿ 800ರಷ್ಟು ಹಡಗುಗಳು ಇರುತ್ತವೆ. ಆಧುನಿಕ ಅತ್ಯಧಿಕ ತಾಂತ್ರಿಕತೆಯ ಸಲಕರಣೆಯು, ಕೆಲವೇ ತಾಸುಗಳಲ್ಲಿ ಒಂದು ದೊಡ್ಡ ಸರಕು ಸಾಗಾಣಿಕೆ ಹಡಗಿನಿಂದ ಸಾಮಾನನ್ನು ಇಳಿಸಲು ಹಾಗೂ ಹಡಗಿಗೆ ಸಾಮಾನನ್ನು ಪುನಃ ತುಂಬಿಸಲು ಸಾಧ್ಯಮಾಡುತ್ತದೆ. ಆ ನಗರದ ಹಣಕಾಸಿನ ದಳವು, ಒಂದು ಚದರ ಅಡಿಗೆ 5,000 ಡಾಲರುಗಳು ಅಥವಾ ಅದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ, ಸ್ಥಿರಾಸ್ತಿ ಬೆಲೆಗಳನ್ನು ತಗಾದೆಮಾಡಿ ಪಡೆದುಕೊಳ್ಳುತ್ತದೆ.
ಸರಿಸುಮಾರಾಗಿ 34,00,000 ಮಂದಿಯಿರುವ ಜನಸಂಖ್ಯೆಯು, ಚೀನೀಯರು, ಮಲೇಶಿಯದವರು (ಮಲಯಕುಲದವರು), ಭಾರತೀಯರು, ಐರೋಪ್ಯರು, ಹಾಗೂ ಇನ್ನಿತರರು ಇರುವ ವಿಭಿನ್ನ ಜನರಿಂದ ರಚಿತವಾಗಿದೆ. ಅವರು ಮಾತಾಡುವ ಭಾಷೆಗಳಲ್ಲಿ, ಮ್ಯಾಂಡರಿನ್, ಮಲಯ, ತಮಿಳು, ಹಾಗೂ ಇಂಗ್ಲಿಷ್ ಭಾಷೆಗಳು ಸೇರಿವೆ.
ಎಂಬತ್ತಮೂರು ಕಿಲೊಮೀಟರುಗಳಷ್ಟಿರುವ, ಭೂಮಿಯ ಮೇಲಣ ಹಾಗೂ ಭೂಗತವಾದ ಅದರ ತೀವ್ರಗತಿಯ ಸಾಗಣೆ ವ್ಯವಸ್ಥೆಯು, ಸಿಂಗಾಪುರಕ್ಕೆ ಲೋಕದಲ್ಲಿರುವ ಅತ್ಯಾಧುನಿಕ, ಕಾರ್ಯಸಮರ್ಥ ಸಂಚಾರಸಾರಿಗೆ ವ್ಯವಸ್ಥೆಗಳಲ್ಲಿ ಒಂದನ್ನು ಒದಗಿಸುತ್ತದೆ. ನಗರದಾದ್ಯಂತ, ಆಧುನಿಕ ಕಟ್ಟಡಗಳ ಉನ್ನತ ಭೂದೃಶ್ಯಗಳ ಮಧ್ಯೆ ಅನೇಕಾನೇಕ ಹಸುರು ತೋಡಗಳನ್ನು ನೆಟ್ಟು, ವೈವಿಧ್ಯಗೊಳಿಸಲಾಗಿದೆ. ಮೊದಲ ಬಾರಿಗೆ ಹೋಗುವ ಪ್ರವಾಸಿಗೆ “ನೋಡಲೇಬೇಕಾದ ಆಕರ್ಷಣೆ”ಗಳಲ್ಲೊಂದು, ಸಂಪೂರ್ಣವಾಗಿ ನವೀಕರಿಸಲ್ಪಟ್ಟಿರುವ ರಾಫಲ್ಸ್ ಹೋಟೆಲಾಗಿದೆ. ಅದು 1889ರಲ್ಲಿ ಆರಂಭವಾದುದರಿಂದ, ಈಗ ಅದನ್ನು ಒಂದು ರಾಷ್ಟ್ರೀಯ ಸ್ಮಾರಕವಾಗಿ ಸೂಚಿಸಲಾಗುತ್ತದೆ. ಎರಡನೆಯದು, 128 ಎಕರೆಯಷ್ಟಿರುವ ಸಸ್ಯ ಹಾಗೂ ತೋಟಗಾರಿಕೆ ಕೇಂದ್ರವಾಗಿದ್ದು, ಅದರಲ್ಲಿ 10 ಎಕರೆಗಳಷ್ಟು ಪ್ರದೇಶವನ್ನು ಕುರುಚಲು ಕಾಡಾಗಿ ಸಂರಕ್ಷಿಸಲಾಗಿದೆ; ಒಂದು ಕಾಲದಲ್ಲಿ ಅಲ್ಲಿ ಹುಲಿಗಳು ಓಡಾಡಿಕೊಂಡಿದ್ದವು.
ಧಾರ್ಮಿಕ ಸ್ವಾತಂತ್ರ್ಯದ ಖಾತ್ರಿಕೊಡಲ್ಪಟ್ಟದ್ದು
ಅದರ ಅಸಮಾಂತರ ಆರ್ಥಿಕ ಪ್ರಗತಿಗೆ ಅನುಪೂರಕವಾಗಿ, ಸಿಂಗಾಪುರವು ಎಲ್ಲ ನಿವಾಸಿಗಳಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ವಾಗ್ದಾನಿಸುತ್ತದೆ. ವಿಷಾದಕರವಾಗಿ, ಸಿಂಗಾಪುರವು ತನ್ನ ವಾಗ್ದಾನವನ್ನು ನೆರವೇರಿಸಿಲ್ಲ. ವಿಶೇಷವಾಗಿ ಯೆಹೋವನ ಸಾಕ್ಷಿಗಳ ಸಭೆಯೊಂದಿಗೆ ಸಹವಾಸಿಸುವ ಜನರು, ಅದನ್ನು ಸತ್ಯವಾದದ್ದಾಗಿ ಕಂಡುಕೊಂಡಿದ್ದಾರೆ.
ಸಿಂಗಾಪುರ ಗಣರಾಜ್ಯದ ಸಂವಿಧಾನವು, ಕಟ್ಟಳೆ 15(1)ರಲ್ಲಿ, ಆರಾಧನಾ ಸ್ವಾತಂತ್ರ್ಯದ ಮೂಲಭೂತ ಖಾತ್ರಿಯನ್ನು ಒದಗಿಸುತ್ತದೆ: “ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಧರ್ಮವನ್ನು ಬಹಿರಂಗವಾಗಿ ಒಪ್ಪಿಕೊಂಡು, ಅದನ್ನು ಆಚರಿಸುವ ಹಾಗೂ ಅದನ್ನು ಪ್ರಸಾರಮಾಡುವ ಹಕ್ಕು ಇದೆ.”
ಸಂವಿಧಾನದ ಕಟ್ಟಳೆ 15(3) ಹೀಗೆ ಖಾತ್ರಿಕೊಡುತ್ತದೆ: “ಪ್ರತಿಯೊಂದು ಧಾರ್ಮಿಕ ಗುಂಪಿಗೆ ಈ ಹಕ್ಕಿದೆ—
(ಎ) ಅದರ ಸ್ವಂತ ಧಾರ್ಮಿಕ ಕಾರ್ಯಗಳನ್ನು ನಿಭಾಯಿಸುವ ಹಕ್ಕು;
(ಬಿ) ಧಾರ್ಮಿಕ ಅಥವಾ ದಾನಶೀಲ ಉದ್ದೇಶಗಳಿಗಾಗಿ ಸಂಸ್ಥೆಗಳನ್ನು ಸ್ಥಾಪಿಸಿ, ಅವುಗಳನ್ನು ನಡೆಸಿಕೊಂಡುಹೋಗುವ ಹಕ್ಕು; ಹಾಗೂ
(ಸಿ) ಆಸ್ತಿಯನ್ನು ಗಳಿಸಿ, ಒಡೆತನಪಡೆದುಕೊಂಡು, ಅದನ್ನು ಸ್ವಾಧೀನಪಡಿಸಿಕೊಳ್ಳುವ ಹಾಗೂ ನಿಯಮಕ್ಕನುಸಾರ ಅದನ್ನು ಉಪಯೋಗಿಸುವ ಹಕ್ಕು.”
1936ರಷ್ಟು ಆರಂಭದಿಂದಲೇ, ಯೆಹೋವನ ಸಾಕ್ಷಿಗಳು ಸಿಂಗಾಪುರದ ಸಮುದಾಯದ ಭಾಗವಾಗಿದ್ದರು. ಅನೇಕ ವರ್ಷಗಳ ವರೆಗೆ ಅವರು ಕ್ರಮವಾದ ಸಭಾ ಕೂಟಗಳನ್ನು, ಕಾರ್ಯೋದ್ಯುಕ್ತ ಮಾರುಕಟ್ಟೆಯ ಮುಂದೆಯೇ ಇರುವ, 8 ಎಕ್ಸ್‌ಟರ್ ರೋಡ್‌ನಲ್ಲಿರುವ ತಮ್ಮ ಸ್ವಂತ ರಾಜ್ಯ ಸಭಾಗೃಹದಲ್ಲಿ ನಡೆಸಿದರು. ಆ ಸಭೆಯು ಬಹಳವಾಗಿ ಅಭಿವೃದ್ಧಿಗೊಂಡು, ಅದೇ ಸಮಯದಲ್ಲಿ ಸಮುದಾಯ ಜೀವನದ ಸ್ಥಿರತೆಗೆ ತನ್ನ ಸ್ವಂತ ಅಪೂರ್ವ ನೆರವನ್ನು ನೀಡುತ್ತಾ ಇತ್ತು.
ಯೆಹೋವನ ಸಾಕ್ಷಿಗಳು ನಿಷೇಧಿಸಲ್ಪಟ್ಟದ್ದು
ಜನವರಿ 12, 1972ರಂದು ಇದೆಲ್ಲವೂ ಬದಲಾಯಿತು. ಸರಕಾರಿ ಗಡೀಪಾರು ಶಾಸನ, ಪ್ರಕರಣ 109ರ ಆಧಾರದ ಮೇಲೆ ಬಹಿಷ್ಕಾರದ ಆದೇಶವು ಕೊಡಲ್ಪಟ್ಟು, 23 ವರ್ಷಗಳಿಂದ ಸಿಂಗಾಪುರದ ನಿವಾಸಿಗಳಾಗಿದ್ದು, ಕ್ರೈಸ್ತ ಮಿಷನೆರಿಗಳಾಗಿದ್ದ ನಾರ್ಮನ್ ಡೇವಿಡ್ ಬೆಲಾಟಿ ಹಾಗೂ ಅವರ ಹೆಂಡತಿಯಾದ ಗ್ಲ್ಯಾಡಿಸ್‌ರಿಗೆ, ದೇಶವನ್ನು ಬಿಟ್ಟುಹೋಗುವಂತೆ ಅಪ್ಪಣೆಯು ಕೊಡಲ್ಪಟ್ಟಿತು. ಇದರ ಅನಂತರ ತತ್‌ಕ್ಷಣವೇ, ಸಿಂಗಾಪುರದ ಯೆಹೋವನ ಸಾಕ್ಷಿಗಳ ಸಭೆಯ ರಿಜಿಸ್ಟ್ರೇಷನ್ (ನೊಂದಾವಣೆ) ಅನ್ನು ರದ್ದುಮಾಡಲಾಯಿತು. ಕೆಲವೇ ತಾಸುಗಳೊಳಗೆ ಪೊಲೀಸರು ರಾಜ್ಯ ಸಭಾಗೃಹವನ್ನು ಸ್ವಾಧೀನಪಡಿಸಿಕೊಂಡು, ಅದರ ಮುಂಬಾಗಿಲನ್ನು ಮುರಿದು, ಒಳಗೆ ಬಂದರು. ಅನಂತರ ಬಹುಮಟ್ಟಿಗೆ ಆ ಕೂಡಲೆ, ವಾಚ್ ಟವರ್ ಸೊಸೈಟಿಯ ಎಲ್ಲ ಸಾಹಿತ್ಯದ ಮೇಲೆ ಒಂದು ಅಧಿಕೃತ ನಿಷೇಧವು ತರಲ್ಪಟ್ಟಿತು. ಹೀಗೆ, ಯೆಹೋವನ ಸಾಕ್ಷಿಗಳ ನಿಗ್ರಹದ ಕಾಲಾವಧಿಯು ಆರಂಭವಾಯಿತು.
ತರುವಾಯ ಸರಕಾರದ ಸ್ವೇಚ್ಛಾನುಸಾರವಾದ ಕೃತ್ಯದ ಒಂದು ಭಾಗದೋಪಾದಿ, ರಾಜ್ಯ ಸಭಾಗೃಹವು ಸರಕಾರದಿಂದ ಮಾರಲ್ಪಟ್ಟಿತು—ಇದೆಲ್ಲವೂ ಯಾವುದೇ ಪ್ರಕಟನೆ, ಯಾವುದೇ ವಿಚಾರಣೆ, ಯಾವುದೇ ಪರಿಶೀಲನೆ, ಪ್ರತಿಕ್ರಿಯಿಸಲು ಯಾವುದೇ ಅವಕಾಶವಿಲ್ಲದೆ ಮಾಡಲ್ಪಟ್ಟಿತು.
ಯೆಹೋವನ ಸಾಕ್ಷಿಗಳು ಮಿಲಿಟರಿ ಸೇವೆಯಲ್ಲಿ ಭಾಗವಹಿಸದಿರುವುದನ್ನು, ಸಿಂಗಾಪುರದ ಸರಕಾರವು ಆಗಿಂದಾಗ್ಗೆ ಸಂಪೂರ್ಣ ನಿಷೇಧಕ್ಕಾಗಿರುವ ಸಮರ್ಥನೆಯಾಗಿ ಉದಾಹರಿಸಿದೆ. ಡಿಸೆಂಬರ್ 29, 1995ರಷ್ಟು ಇತ್ತೀಚಿಗೆ, ಜಿನೀವದಲ್ಲಿರುವ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳಿಗಾಗಿರುವ ಸಹಾಯಕ ಸೆಕ್ರಿಟರಿ-ಜನರಲ್‌ರಾದ ಏಚ್. ಇ. ಇಬ್ರಾಹಿಮ್ ಫಾಲ್‌ರಿಗೆ ಸಂಬೋಧಿಸಲ್ಪಟ್ಟ ಪತ್ರವೊಂದರಲ್ಲಿ, ಜಿನೀವದ ವಿಶ್ವ ಸಂಸ್ಥೆಯ ಸಿಂಗಾಪುರದ ಶಾಶ್ವತ ಪ್ರತಿನಿಧಿಯಾದ ಶ್ರೀ. ಕೆ. ಕೇಶವಪಾಣಿಯವರು ಈ ಕೆಳಗಿನ ವಿಷಯವನ್ನು ನಮೂದಿಸಿದರು:
“ಯೆಹೋವನ ಸಾಕ್ಷಿಗಳ ಕಾರ್ಯಾಚರಣೆಯ ಮೇಲಿನ ನನ್ನ ಸರಕಾರದ ನಿಷೇಧವು, ರಾಷ್ಟ್ರೀಯ ಭದ್ರತೆಯ ಪರಿಗಣನೆಗಳಿಂದ ಮೂಡಿಬರುತ್ತದೆ. ಈ ಕಾರ್ಯಾವಳಿಯು ಅಸ್ತಿತ್ವದಲ್ಲಿರುತ್ತಾ ಮುಂದುವರಿಯುವುದು, ಸಾರ್ವಜನಿಕರ ಹಿತಕ್ಕೆ ಹಾಗೂ ಸಿಂಗಾಪುರದಲ್ಲಿನ ಸುವ್ಯವಸ್ಥೆಗೆ ಹಾನಿಕರವಾಗಿರುವುದು. ಯೆಹೋವನ ಸಾಕ್ಷಿಗಳ ರಿಜಿಸ್ಟ್ರೇಷನ್ ರದ್ದುಮಾಡಲ್ಪಟ್ಟದ್ದಕ್ಕೆ ಒಂದು ಅತ್ಯಗತ್ಯ ಉಪಸಿದ್ಧಾಂತವು ಏನಾಗಿತ್ತೆಂದರೆ, ಆ ಕಾರ್ಯಾಚರಣೆಯ ಮೇಲೆ ನಿಷೇಧವನ್ನು ಭದ್ರಪಡಿಸಿ, ಅವರ ನಂಬಿಕೆಗಳ ಪ್ರಸಾರಮಾಡುವಿಕೆಯನ್ನು ಹಾಗೂ ಪ್ರಚಾರಕಾರ್ಯವನ್ನು ನಿರ್ಬಂಧಿಸುವುದಕ್ಕಾಗಿ, ಅವರ ಎಲ್ಲ ಪ್ರಕಾಶನಗಳನ್ನು ಪ್ರತಿಷೇಧಿಸುವುದೇ ಆಗಿತ್ತು.”
ಸಿಂಗಾಪುರದ ರಾಷ್ಟ್ರೀಯ ಭದ್ರತೆಯ ಅಪಾಯದ ಕುರಿತಾದ ಪ್ರತಿರೋಧವನ್ನು ಪರಿಗಣಿಸುವಲ್ಲಿ, ಮಿಲಿಟರಿ ಸೇವೆಯನ್ನು ನಿರಾಕರಿಸುವ ಯುವ ಸಾಕ್ಷಿಗಳ ಸಂಖ್ಯೆಯು, ಸರಿಸುಮಾರಾಗಿ ಒಂದು ವರ್ಷಕ್ಕೆ ಐವರು ವ್ಯಕ್ತಿಗಳು ಎಂಬುದನ್ನು ಗಮನಿಸತಕ್ಕದ್ದು. ಸಿಂಗಾಪುರವು ಸುಮಾರು 3,00,000ದಷ್ಟು ಮಿಲಿಟರಿ ಸೇನೆಯನ್ನು ಇಟ್ಟುಕೊಂಡಿರುತ್ತದೆ. ಒಳಗೊಂಡಿರುವವರು ಕೇವಲ ಕೆಲವರೇ ಆದರೂ, ಸಿಂಗಾಪುರ ಸರಕಾರವು ಅವರಿಗಾಗಿ ಸಿವಿಲಿಯನ್ ರಾಷ್ಟ್ರೀಯ ಸೇವೆಯ ಕುರಿತು ಚರ್ಚಿಸಲು ಸಹ ನಿರಾಕರಿಸಿದೆ.
ಬಹಿರಂಗ ನಿಗ್ರಹ
ಅನೇಕ ವರ್ಷಗಳ ಆತಂಕಭರಿತವಾದ ಸಹನೆಯ ಬಳಿಕ, 1992ರಲ್ಲಿ, ಮಾನವ ಹಕ್ಕುಗಳ ಕುರಿತ ಬಹಿರಂಗವಾದ ನಿಗ್ರಹದ ಹೊಸ ಅಧ್ಯಾಯವು ತೆರೆದುಕೊಳ್ಳಲಾರಂಭಿಸಿತು. ಆಗ ಅನಪೇಕ್ಷಿತ ಪ್ರಕಾಶನಗಳ ಶಾಸನದ ಆಧಾರದ ಮೇಲೆ, ನಿಷೇಧಿತ ಸಾಹಿತ್ಯವನ್ನು ಹೊಂದಿರುವ ಆರೋಪ ಹೊರಿಸಲ್ಪಟ್ಟು, ಅನೇಕ ಜನರು ಸೆರೆಹಿಡಿಯಲ್ಪಟ್ಟರು. 1994ರಲ್ಲಿ ವಾಚ್ ಟವರ್ ಸೊಸೈಟಿಯು, ಒಬ್ಬ ವಕೀಲರೂ ತಮ್ಮ ಜೀವಮಾನಕಾಲದಲ್ಲೆಲ್ಲಾ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರೂ ಆಗಿದ್ದ, 75 ವರ್ಷ ಪ್ರಾಯದ ಡಬ್ಲ್ಯೂ. ಗ್ಲೆನ್ ಹೌ, ಕ್ಯೂ.ಸಿ. ಇವರನ್ನು ಸಿಂಗಾಪುರಕ್ಕೆ ಕಳುಹಿಸಿಕೊಟ್ಟಿತು. ಕ್ವೀನ್ಸ್ ಕೌನ್ಸೆಲ್‌ರೋಪಾದಿ ಅವರ ಸ್ಥಾನಮಾನವು ಅವರಿಗೆ ಮನ್ನಣೆಯನ್ನು ಕೊಟ್ಟಿತು; ಇದರಿಂದಾಗಿ ಅವರಿಗೆ ಸಿಂಗಾಪುರದ ಕೋರ್ಟ್‌ಗಳ ಸಮಕ್ಷಮದಲ್ಲಿ ಹಾಜರಾಗುವಂತೆ ಅನುಮತಿಸಲಾಯಿತು. ದಸ್ತಗಿರಿಗಳ ಸಮಂಜಸತೆ ಹಾಗೂ 1972ರ ನಿಷೇಧದ ಒಂದು ಪಂಥಾಹ್ವಾನವನ್ನು ಒಳಗೊಂಡು, ಸಂವಿಧಾನದ ಧಾರ್ಮಿಕ ಖಾತ್ರಿಯ ದೃಷ್ಟಿಯಿಂದ, ಸಿಂಗಾಪುರದ ಹೈ ಕೋರ್ಟಿಗೆ ಒಂದು ಅಪೀಲು ಸಲ್ಲಿಸಲ್ಪಟ್ಟಿತು. ಆಗಸ್ಟ್ 8, 1994ರಂದು, ಸಿಂಗಾಪುರದ ಹೈ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಯಾಂಗ್ ಪಂಗ್ ಹೌರಿಂದ ಆ ಅಪೀಲು ವಜಾಮಾಡಲ್ಪಟ್ಟಿತು. ಈ ನಿರ್ಣಯವನ್ನು ಅಪೀಲು ಮಾಡಲಿಕ್ಕಾಗಿ ನಡೆಸಲ್ಪಟ್ಟ ಇನ್ನೂ ಹೆಚ್ಚಿನ ಪ್ರಯತ್ನಗಳು ನಿಷ್ಫಲವಾದವು.
1995ರ ಆರಂಭದಷ್ಟಕ್ಕೆ, ಸಿಂಗಾಪುರದ ಸಂವಿಧಾನದ ಮೇಲಾಧಾರಿತವಾದ ಶಾಸನಬದ್ಧ ಪಂಥಾಹ್ವಾನವು, ಇನ್ನೂ ಹೆಚ್ಚಿನ ನಿಗ್ರಹಾತ್ಮಕ ಕ್ರಮಗಳನ್ನು ಮುಂತಂದಿದ್ದಂತೆ ತೋರಿಬಂತು. ಆಪರೇಷನ್ ಹೋಪ್ ಎಂದು ಕರೆಯಲ್ಪಟ್ಟ ಮಿಲಿಟರಿ ಶೈಲಿಯ ಯೋಜನೆಯ ಕೆಳಗೆ, ಅಪರಾಧಿ ತನಿಖೆ ಇಲಾಖೆಯ ಗುಪ್ತ ಸೊಸೈಟಿಗಳ ಬ್ರಾಂಚ್‌ನಿಂದ ಬಂದ ರಹಸ್ಯಾಧಿಕಾರಿಗಳು, ಖಾಸಗಿ ಮನೆಗಳಲ್ಲಿ ಸೇರುತ್ತಿದ್ದ ಕ್ರೈಸ್ತರ ಹಲವಾರು ಚಿಕ್ಕ ಗುಂಪುಗಳ ಮೇಲೆ ಫಕ್ಕನೆ ಆಕ್ರಮಣಮಾಡಿದರು. ಸುಮಾರು 70 ಅಧಿಕಾರಿಗಳು ಹಾಗೂ ಅವರನ್ನು ಬೆಂಬಲಿಸುವ ಸಿಬ್ಬಂದಿಯು, ಕಮಾಂಡೊ-ಮಾದರಿಯ ದಾಳಿಗಳನ್ನು ನಡೆಸಿ, 69 ವ್ಯಕ್ತಿಗಳನ್ನು ದಸ್ತಗಿರಿಮಾಡಿತು. ಎಲ್ಲರನ್ನೂ ವಿಚಾರಣಾ ಕೇಂದ್ರಗಳಿಗೆ ಕರೆದೊಯ್ಯಲಾಯಿತು; ಕೆಲವರನ್ನು ಇಡೀ ರಾತ್ರಿ ಪ್ರಶ್ನಿಸಲಾಯಿತು, ಮತ್ತು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗುತ್ತಿದ್ದ ಹಾಗೂ ಬೈಬಲ್ ಪ್ರಕಾಶನಗಳನ್ನು ಹೊಂದಿದ್ದ ದೋಷಾರೋಪಣೆಯು ಅವರ ಮೇಲೆ ಹೊರಿಸಲ್ಪಟ್ಟಿತು. ಕೆಲವರು ಸುಮಾರು 18 ತಾಸುಗಳ ವರೆಗೆ ಏಕಾಂತವಾಸದಲ್ಲಿ ಇರಿಸಲ್ಪಟ್ಟಿದ್ದು, ಅವರು ತಮ್ಮ ಕುಟುಂಬಗಳಿಗೆ ಟೆಲಿಫೋನ್ ಮಾಡಲು ಸಹ ಅಶಕ್ತರಾಗಿದ್ದರು.
ವಿದೇಶೀಯರ ವಿರುದ್ಧವಾಗಿ ಹೊರಿಸಲ್ಪಟ್ಟ ಆರೋಪಗಳು ತೆಗೆದುಹಾಕಲ್ಪಟ್ಟವು. ಆದರೆ, ಸಿಂಗಾಪುರದ ಪ್ರಜೆಗಳಾಗಿರುವ 64 ಮಂದಿಯನ್ನು, 1995ರ ಅಂತ್ಯಭಾಗದಲ್ಲಿ ಹಾಗೂ 1996ರ ಆರಂಭದಲ್ಲಿ, ಕೋರ್ಟಿನಲ್ಲಿ ವಿಚಾರಣೆಗೆ ಒಪ್ಪಿಸಲಾಯಿತು. ಎಲ್ಲ 64 ಮಂದಿಯೂ ದೋಷಿಗಳಾಗಿ ತೀರ್ಮಾನಿಸಲ್ಪಟ್ಟರು. 16 ಹಾಗೂ 72ರ ನಡುವಿನ ವಯೋವರ್ಗಗಳ ನಲ್ವತ್ತೇಳು ಮಂದಿ, ಸಾವಿರಗಟ್ಟಲೆ ಡಾಲರುಗಳಷ್ಟು ಮೊತ್ತದ ದಂಡಗಳನ್ನು ತೆರಲಿಲ್ಲ; ಇದರಿಂದಾಗಿ ಅವರನ್ನು ಒಂದರಿಂದ ನಾಲ್ಕು ವಾರಗಳ ವರೆಗೆ ಸೆರೆಮನೆಗೆ ಕಳುಹಿಸಲಾಯಿತು.
ಸೆರೆಕೋಣೆಗಳಿಗೆ ಕಳುಹಿಸುವ ಮುಂಚೆ, ಆ ಸ್ತ್ರೀಪುರುಷರನ್ನು ಅನೇಕ ಜನರ ಮುಂದೆ ನಗ್ನಮಾಡಲಾಯಿತು ಮತ್ತು ಅವರ ತಪಾಸಣೆಮಾಡಲಾಯಿತು. ತಮ್ಮ ತೋಳುಗಳನ್ನು ಚಾಚುವಂತೆ, ಐದು ಸಾರಿ ಮಂಡಿಯೂರುವಂತೆ, ಹಾಗೂ ತಮ್ಮ ಬಾಯಿಯನ್ನು ತೆರೆದು, ನಾಲಗೆಯನ್ನು ಮೇಲೆತ್ತುವಂತೆ ಕೆಲವು ಸ್ತ್ರೀಯರಿಗೆ ಹೇಳಲಾಯಿತು. ಕಡಿಮೆಪಕ್ಷ ಒಬ್ಬ ಹೆಂಗಸಿಗೆ, ತನ್ನ ಬೆರಳುಗಳನ್ನು ಉಪಯೋಗಿಸಿ ಗುದದ್ವಾರವನ್ನು ತೆರೆಯುವಂತೆ ಹೇಳಲಾಯಿತು. ಸೆರೆಮನೆಯಲ್ಲಿ, ಕೆಲವು ಪುರುಷರು ಟ್ಲಾಯೆಟ್‌ನ ಬೋಗುಣಿಗಳಿಂದ ನೀರನ್ನು ಕುಡಿಯಬೇಕಿತ್ತು. ಕೆಲವು ಯುವ ಸ್ತ್ರೀಯರನ್ನು ಅಪಾಯಕರ ದುಷ್ಕರ್ಮಿಗಳೋಪಾದಿ ಉಪಚರಿಸಲಾಯಿತು; ಅವರ ಶಿಕ್ಷಾವಧಿಯು ಮುಗಿಯುವ ತನಕ ಅವರನ್ನು ಏಕಾಂತವಾಸದಲ್ಲಿ ಇಡಲಾಯಿತು, ಮತ್ತು ಸೆರೆವಾಸಿಗಳಿಗೆ ಕೊಡಲಾಗುವ ಆಹಾರದಲ್ಲಿ ಅರ್ಧದಷ್ಟನ್ನು ಮಾತ್ರ ಕೊಡಲಾಯಿತು. ಸೆರೆಯ ಕೆಲವು ವಾರ್ಡನ್‌ಗಳು, ಸಾಕ್ಷಿಗಳಿಗೆ ಅವರ ಬೈಬಲುಗಳನ್ನು ಕೊಡಲು ಸಹ ನಿರಾಕರಿಸಿದರು.
ಆದರೆ ಸೆರೆಯಲ್ಲಿ ಬಂಧಿತರಾಗಿದ್ದ ಸ್ತ್ರೀಯರಲ್ಲಿ ಕೆಲವರು ನುಡಿದ ಹೇಳಿಕೆಗಳ ಕಡೆಗೆ ನಾವು ಗಮನವನ್ನು ಹರಿಸೋಣ. ಅವರೇ ನೇರವಾಗಿ ಒದಗಿಸಿದ ವರದಿಗಳು ಏನನ್ನು ಪ್ರಕಟಪಡಿಸಿದವೋ ಅದು, ಈ ಆಧುನಿಕ ನಗರದ ಹಿಂದಿನ ನಿರ್ಮಲ ಸ್ಥಿತಿಯ ಮುಖಭಾವದೊಂದಿಗೆ ತೀರ ವ್ಯತಿರಿಕ್ತವಾಗಿತ್ತು.
“ಸೆರೆಕೋಣೆಯು ಬಹಳ ಗಲೀಜಾಗಿತ್ತು. ವಾಷ್‌ಬೇಸಿನ್ ಹಾಗೂ ಟ್ಲಾಯೆಟ್‌ಗಳು ಸಂತಪಿಸುವಂತಹ ಸ್ಥಿತಿಯಲ್ಲಿದ್ದವು. ಅವು ಅಸಹ್ಯಕರವಾಗಿಯೂ ಕೊಳಕಾಗಿಯೂ ಇದ್ದವು. ನಾನು ಕುಳಿತುಕೊಂಡ ಬೆಂಚಿನ ಕೆಳಭಾಗದಲ್ಲಿ ಜೇಡರಬಲೆಗಳು ಇದ್ದು, ಅದು ತುಂಬ ಕೊಳಕಾಗಿತ್ತು.”
“ಬಟ್ಟೆಬಿಚ್ಚಿಹಾಕುವಂತೆ ನನಗೆ ಹೇಳಲಾಯಿತು, ಮತ್ತು ನನಗೆ ಒಂದು ಜೊತೆ ಸೆರೆಯುಡುಪು, ಒಂದು ಸೋಪಿನ ಡಬ್ಬ (ಅದರಲ್ಲಿ ಸೋಪು ಇರಲಿಲ್ಲ), ಹಾಗೂ ಒಂದು ಟೂತ್‌ಬ್ರಷ್ ಅನ್ನು ಕೊಡಲಾಯಿತು. ಅಲ್ಪಕಾಲಾವಧಿಯ ಸೆರೆವಾಸಿಗಳಿಗೆ ಟೂತ್‌ಪೇಸ್ಟಾಗಲಿ, ಟ್ಲಾಯೆಟ್ ಪೇಪರಾಗಲಿ ಕೊಡಲ್ಪಡಲಿಲ್ಲವೆಂದು ನನ್ನ ಸೆರೆಕೋಣೆಯಲ್ಲಿದ್ದ ಇತರ ಸೆರೆವಾಸಿಗಳು ನನಗೆ ಹೇಳಿದರು.”
“ಒಂದು ಸೆರೆಕೋಣೆಯಲ್ಲಿ ನಾವು 20 ಮಂದಿ ಇದ್ದೆವು. ಟಾಯ್ಲೆಟ್ಟು ಮಂಡಿಯೂರಿ ಕುಳಿತುಕೊಳ್ಳುವಂತಹದ್ದಾಗಿದ್ದು, ಅದರ ಗೋಡೆಯು ನನ್ನ ಸೊಂಟದ ವರೆಗಿತ್ತು. ಸ್ನಾನಗೃಹದಲ್ಲಿ ಒಂದೇ ಒಂದು ಶವರ್ ಮತ್ತು ನಲ್ಲಿಯಿದ್ದ ಒಂದು ವಾಷ್‌ಬೇಸಿನ್ ಇತ್ತು. ನಾವು 6 ಮಂದಿ ಒಟ್ಟಿಗೆ ಒಂದು ಗುಂಪಾಗಿ ಸ್ನಾನಮಾಡಬೇಕಿತ್ತು. ಸೆರೆಕೋಣೆಯಲ್ಲಿದ್ದ ನಾವೆಲ್ಲರೂ ಬೆಳಗ್ಗೆ ಅರ್ಧಗಂಟೆಯೊಳಗೆ ಸ್ನಾನವನ್ನು ಮಾಡಿಮುಗಿಸಬೇಕಿತ್ತು.”
ಸೆರೆವಾಸದ ದುರವಸ್ಥೆಯನ್ನು ಅನುಭವಿಸಿದರೂ, ಸನ್ನಿವೇಶಗಳು ಯಾವುವೇ ಆಗಲಿ, ಎಲ್ಲೇ ಆಗಲಿ, ಯಾವಾಗಲೇ ಆಗಲಿ, ಎಲ್ಲರೂ ಅದನ್ನು ದೇವರನ್ನು ಸೇವಿಸುವ ಒಂದು ಸುಯೋಗವಾಗಿ ಪರಿಗಣಿಸಿದರು. ಹದಿಪ್ರಾಯದ ಒಬ್ಬ ಹುಡುಗಿಯಿಂದ ನುಡಿಯಲ್ಪಟ್ಟ ಈ ಕೆಳಗಿನ ಹೇಳಿಕೆಯನ್ನು ಗಮನಿಸಿರಿ:
“ನಾನು ಸೆರೆಮನೆಯೊಳಗೆ ಬಂದ ಕ್ಷಣದಿಂದ, ಯಾವ ಉದ್ದೇಶಕ್ಕಾಗಿ ನಾನು ಅಲ್ಲಿದ್ದೆನೆಂಬುದನ್ನು ನಾನು ಯಾವಾಗಲೂ ಮನಸ್ಸಿಗೆ ತಂದುಕೊಂಡೆ. ಯೆಹೋವನು ನನ್ನ ಪ್ರಾರ್ಥನೆಗೆ ಕಿವಿಗೊಡುವಂತೆ ಹಾಗೂ ನನ್ನನ್ನು ತೊರೆಯದಂತೆ ನಾನು ಪ್ರತಿದಿನ ಆತನಿಗೆ ಪ್ರಾರ್ಥಿಸಿದೆ. ಆತನು ನನ್ನ ಪ್ರಾರ್ಥನೆಗೆ ಉತ್ತರಿಸಿದನು ಎಂದು ನನಗನಿಸಿತು. ಏಕೆಂದರೆ ನಾನು ತಾಳಿಕೊಳ್ಳುವಂತೆ ನನಗೆ ಸಹಾಯ ಮಾಡಿದ್ದು ಆತನ ಪವಿತ್ರಾತ್ಮವೇ ಆಗಿತ್ತು. ಆಗ ಮಾತ್ರವೇ ನಾನು ಆತನೊಂದಿಗೆ ನನಗಿದ್ದ ಆಪ್ತತೆಯನ್ನು ಗ್ರಹಿಸಿದೆ, ಮತ್ತು ಆತನು ನಮ್ಮನ್ನು ಗಮನಿಸುತ್ತಿದ್ದಾನೆಂಬುದನ್ನು ತಿಳಿದುಕೊಂಡಿರುವುದು, ನನ್ನನ್ನು ಬಹಳವಾಗಿ ಬಲಪಡಿಸಿದೆ. ಆತನ ನಾಮಕ್ಕಾಗಿ ಈ ಪರೀಕ್ಷೆಯನ್ನು ಅನುಭವಿಸಲು ಶಕ್ತಳಾದುದಕ್ಕಾಗಿ ನಾನು ಸುಯೋಗಿತಳೆಂದು ಭಾವಿಸುತ್ತೇನೆ.”
ಲೋಕದಾದ್ಯಂತವಾಗಿ ವಾರ್ತಾಪತ್ರಿಕೆಗಳು ಈ ಕಥೆಯನ್ನು ತ್ವರಿತಗತಿಯಲ್ಲಿ ತಿಳಿದುಕೊಂಡವು. ಅಮೆರಿಕ, ಆಸ್ಟ್ರೇಲಿಯ, ಕೆನಡ, ಮಲೇಶಿಯ, ಯೂರೋಪ್, ಹಾಂಗ್ ಕಾಂಗ್, ಮತ್ತು ಇತರ ಸ್ಥಳಗಳಲ್ಲಿರುವ ವಾರ್ತಾ ಮಾಧ್ಯಮಗಳು, ಈ ಘಟನೆಗಳನ್ನು ಪುನಃ ಪುನಃ ಪ್ರತಿಧ್ವನಿಸಿದವು. ಕೆನಡದ ದ ಟೊರಾಂಟೊ ಸ್ಟಾರ್, “ಬೈಬಲನ್ನು ಪಡೆದಿದ್ದಕ್ಕಾಗಿ ಅಜ್ಜಿಯು ಬಂಧಿಸಲ್ಪಟ್ಟದ್ದು” ಎಂಬ ಶಿರೋನಾಮದ ಕೆಳಗೆ, ಆ ಸಮಯದ ಆಘಾತವನ್ನು ಸಾರಾಂಶಿಸಿತು. ಇನ್ನೂ ಹೆಚ್ಚು ಜನರನ್ನು ಒಳಗೊಂಡಿರುವ ಅನೇಕ ಗಂಭೀರ ಸಮಸ್ಯೆಗಳು ಲೋಕದಲ್ಲಿವೆಯಾದರೂ, ಈ ವಿದ್ಯಮಾನದಲ್ಲಿ ಎಲ್ಲಾ ಕಡೆಗಳಲ್ಲಿರುವ ದಿಗ್ಭ್ರಮೆಗೊಂಡ ಜನರಿಂದ ಕೇಳಲ್ಪಟ್ಟ ಪ್ರಶ್ನೆಯು ಒಂದೇ ಆಗಿತ್ತೆಂಬುದು ಒಪ್ಪತಕ್ಕ ವಿಷಯವೇ. “ನಿಜವಾಗಿಯೂ ಇದು ಸಿಂಗಾಪುರದಲ್ಲಿ ನಡೆಯುತ್ತಿದೆಯೆ?”
ಭೂಗೋಳವ್ಯಾಪಕವಾಗಿ 200ಕ್ಕಿಂತಲೂ ಹೆಚ್ಚು ದೇಶಗಳಲ್ಲಿ, ಶಾಸನದ ಸಂಪೂರ್ಣ ಸಂರಕ್ಷಣೆಯೊಂದಿಗೆ ಮುಕ್ತವಾಗಿ ಕಾರ್ಯನಡಿಸುವ ಒಂದು ಧರ್ಮವು, ಸಿಂಗಾಪುರದಲ್ಲಿ ಹಿಂಸೆಯ ಗುರಿಹಲಗೆಯಾಗಿ ಮಾಡಲ್ಪಡಬೇಕೇಕೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿದೆ. ಸಿಂಗಾಪುರದಲ್ಲಿರುವ ಇತರ ಯಾವುದೇ ಧರ್ಮವು ಇಷ್ಟೊಂದು ಅಸಮಂಜಸತೆ ಹಾಗೂ ಸ್ವೇಚ್ಛಾನುಸಾರವಾಗಿ ವ್ಯವಹರಿಸಿಲ್ಲವೆಂಬುದನ್ನು ನಾವು ಪರಿಗಣಿಸುವಾಗ, ಇದನ್ನು ಅರ್ಥಮಾಡಿಕೊಳ್ಳುವುದು ಇನ್ನೂ ಹೆಚ್ಚು ಕಷ್ಟಕರವಾಗಿ ಪರಿಣಮಿಸುತ್ತದೆ.
ವಾಸ್ತವವಾಗಿ, ಯೆಹೋವನ ಸಾಕ್ಷಿಗಳ ಮೇಲೆ ನಡೆದ ದಾಳಿಯ ಪಕ್ಷವನ್ನು ಮುನ್ನಡಿಸಿದ ಪೊಲೀಸರ ಸಹಾಯಕ ಮೇಲ್ವಿಚಾರಕನು, ತಾನೂ ತನ್ನ ಅಧಿಕಾರಿಗಳೂ ಒಂದು ಧಾರ್ಮಿಕ ಕೂಟದ ಮೇಲೆ ತಡೆಯೊಡ್ಡುವಂತೆ ಆಜ್ಞಾಪಿಸಲ್ಪಟ್ಟದ್ದು ಇದೇ ಪ್ರಥಮ ಬಾರಿಯಾಗಿತ್ತು ಎಂಬುದನ್ನು ಕೋರ್ಟಿನಲ್ಲಿ ಒಪ್ಪಿಕೊಂಡನು. ಈ ಕೆಳಗಿನ ಉಲ್ಲೇಖಗಳು ಆ ಪುರಾವೆಯ ನಕಲುಪ್ರತಿಯಿಂದ ತೆಗೆದವುಗಳಾಗಿವೆ:
ಪ್ರ: (ಸಾಕ್ಷಿಗೆ) ನಿಮಗೆ ಗೊತ್ತಿರುವಂತೆ, ಯೆಹೋವನ ಸಾಕ್ಷಿಗಳನ್ನು ಬಿಟ್ಟು, ರಿಜಿಸ್ಟರ್ ಆಗಿರದ ಯಾವುದೇ ಧಾರ್ಮಿಕ ಗುಂಪುಗಳನ್ನು, ಗುಪ್ತ ಸೊಸೈಟಿಗಳ ಬ್ರಾಂಚು ಎಂದಾದರೂ ತನಿಖೆಮಾಡಿ, ಕಾನೂನುಕ್ರಮ ಕೈಗೊಂಡಿರುವುದುಂಟೊ?
ಉ: ನನಗೆ ಗೊತ್ತಿರುವ ಪ್ರಕಾರ ಇಲ್ಲ.
ತದನಂತರ ಪ್ರಶ್ನಿಸುವುದನ್ನು ಮುಂದುವರಿಸಲಾಯಿತು.
ಪ್ರ: (ಸಾಕ್ಷಿಗೆ) ನೀವು ವೈಯಕ್ತಿಕವಾಗಿ ಯಾವುದೇ ಸಮಯದಲ್ಲಿ, ಒಂದು ಮನೆಯಲ್ಲಿ ಕೂಡುತ್ತಿದ್ದು, ಸೊಸೈಟಿಗಳ ಶಾಸನಕ್ಕನುಸಾರ ರಿಜಿಸ್ಟರ್ ಆಗಿರದ ಒಂದು ಚಿಕ್ಕ ಧಾರ್ಮಿಕ ಗುಂಪಿನ ಮೇಲೆ ಎಂದಾದರೂ ತದ್ರೀತಿಯ ದಾಳಿಯನ್ನು ಎಸಗಿದ್ದೀರಾ?
ಉ: ನಾನು ಅಂತಹ ದಾಳಿಯನ್ನು ಎಸಗಿಲ್ಲ.
ಕ್ರಮಕೈಕೊಳ್ಳಲಿಕ್ಕಾಗಿ ಕರೆ
ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬಾರ್ ಅಸೋಸಿಯೇಷನ್—ಪ್ರತಿಯೊಂದು ಸಂಸ್ಥೆಯು, ವಿಚಾರಣೆಗಳ ಯಥಾರ್ಥತೆಯನ್ನು ಗಮನಿಸಲಿಕ್ಕಾಗಿ ಅದರ ಸ್ವಂತ ವಿಶೇಷ ಪ್ರೇಕ್ಷಕನನ್ನು ಅಲ್ಲಿಗೆ ಕಳುಹಿಸಿತು. ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ನಿಷ್ಪಕ್ಷಪಾತಿ ಪ್ರೇಕ್ಷಕನಾದ ಆ್ಯಂಡ್ರೂ ರ್ಯಾಫಲ್—ಅವನು ಹಾಂಗ್ ಕಾಂಗ್‌ನ ಒಬ್ಬ ಬ್ಯಾರಿಸ್ಟರ್ ಆಗಿದ್ದನು—ಈ ಕೆಳಗಿನ ವಿಷಯವನ್ನು ಹೇಳಿದನು: “ಆ ವಿಚಾರಣೆಯು ಪ್ರದರ್ಶನಾತ್ಮಕ ವಿಚಾರಣೆಯ ತೋರಿಕೆಯನ್ನು ಪಡೆದಿತ್ತೆಂದು ನಾನು ನನ್ನ ವರದಿಯಲ್ಲಿ ತಿಳಿಸಿದ್ದೇನೆ.” ಸಾಕ್ಷಿಗಳಾಗಿ ಕರೆಯಲ್ಪಟ್ಟಿದ್ದ ಸರಕಾರಿ ಅಧಿಕಾರಿಗಳು, ಯೆಹೋವನ ಸಾಕ್ಷಿಗಳ ಸಾಹಿತ್ಯವು ಯಾಕೆ ಅನಪೇಕ್ಷಿತವೆಂದು ಪರಿಗಣಿಸಲ್ಪಟ್ಟಿತ್ತು ಎಂಬುದನ್ನು ವಿವರಿಸಲು ಅಶಕ್ತರಾಗಿದ್ದರು ಎಂದೂ ಅವನು ವಿವರಿಸಿದನು. ನಿಷೇಧಿತ ಬೈಬಲ್ ಪ್ರಕಾಶನಗಳಲ್ಲಿ ಕೆಲವನ್ನು ರ್ಯಾಫಲ್ ಪಟ್ಟಿಮಾಡಿದನು. ಅದರಲ್ಲಿ ಸಂತೋಷ—ಅದನ್ನು ಹೇಗೆ ಕಂಡುಕೊಳ್ಳುವುದು (ಇಂಗ್ಲಿಷ್) ಹಾಗೂ ನಿಮ್ಮ ಯೌವನ—ಅದರಿಂದ ಅತ್ಯುತ್ತಮವಾದುದನ್ನು ಪಡೆದುಕೊಳ್ಳುವುದು (ಇಂಗ್ಲಿಷ್) ಎಂಬ ಪುಸ್ತಕಗಳೂ ಸೇರಿದ್ದವು. ಯಾವುದೇ ಅರ್ಥದಲ್ಲಿ ಅವುಗಳನ್ನು ಅನಪೇಕ್ಷಿತವೆಂದು ನಿಜವಾಗಿಯೂ ಪರಿಗಣಿಸಸಾಧ್ಯವಿರಲಿಲ್ಲವೆಂದೂ ಅವನು ಕೂಡಿಸಿ ಹೇಳಿದನು.
ಇಂಟರ್‌ನ್ಯಾಷನಲ್ ಬಾರ್ ಅಸೋಸಿಯೇಷನ್‌ನ ಪ್ರೇಕ್ಷಕನಾದ ಸಿಸಿಲ್ ರಾಜೇಂದ್ರನು ಈ ಕೆಳಗಿನ ವಿಷಯವನ್ನು ಹೇಳಿದನು:
“ಆರಂಭದಿಂದಲೇ, ಇಡೀ ವಿಚಾರಣೆಯು ವಾಸ್ತವವಾಗಿ ಒಂದು . . . ಸೋಗಾಗಿದ್ದು, ಸಿಂಗಾಪುರದಲ್ಲಿ ಪ್ರಜಾಪ್ರಭುತ್ವವು ಇನ್ನೂ ರೂಢಿಯಲ್ಲಿದೆ ಎಂಬುದನ್ನು ಲೋಕಕ್ಕೆ ಪ್ರದರ್ಶಿಸುವ ಆಕರ್ಷಣೋದ್ದೇಶದಿಂದ ಏರ್ಪಡಿಸಲ್ಪಟ್ಟದ್ದಾಗಿತ್ತೆಂಬುದು ಈ ಪ್ರೇಕ್ಷಕನಿಗೆ ಸುವ್ಯಕ್ತವಾಗಿತ್ತು.
“ಇದರ ಪರಿಣಾಮವು ಪೂರ್ವಭಾವಿ ತೀರ್ಮಾನವಾಗಿತ್ತು ಮತ್ತು ಯಾವುದೇ ಸಮಯದಲ್ಲಿ, ಅಂದರೆ ವಿಚಾರಣೆಯ ಮುಂಚೆ, ವಿಚಾರಣೆಯ ಸಮಯದಲ್ಲಿ ಇಲ್ಲವೆ ಅದರ ಸಮಾಪ್ತಿಯಲ್ಲಿ, ನಿಂದಾರ್ಹರೆಲ್ಲರೂ ತಪ್ಪಿತಸ್ಥರಾಗಿ ಪರಿಗಣಿಸಲ್ಪಟ್ಟು, ದೋಷಾರೋಪ ಹೊರಿಸಲ್ಪಡುವರೆಂಬ ವಿಷಯದಲ್ಲಿ ಸಂಶಯದ ಒಂದು ಛಾಯೆಯೂ ಇರಲಿಲ್ಲ.
“ಆ ವಿಚಾರಣೆಯು ಸಬಾರ್ಡಿನೇಟ್ (ಕೆಳಗಣ ದರ್ಜೆಯ) ಕೋರ್ಟಿನಲ್ಲಿ ನಡೆಸಲ್ಪಟ್ಟು, ಸೊಸೈಟಿಗಳ ಶಾಸನದ ಅತಿ ಕ್ಷುಲ್ಲಕ ಉಲ್ಲಂಘನೆಗಳ ಕಾರಣಕ್ಕಾಗಿ ವಾಸ್ತವವಾಗಿ ದೋಷಾರೋಪಣೆಗಳು ಹೊರಿಸಲ್ಪಟ್ಟವಾದರೂ, ಕೋರ್ಟ್‌ಹೌಸಿನಲ್ಲಿ ಆವರಿಸಿದ್ದ ವಾತಾವರಣವು, ಭಯ ಹಾಗೂ ದಿಗಿಲನ್ನು ಹುಟ್ಟಿಸುವಂತಹದ್ದಾಗಿತ್ತು.
“ಭಯ ಹಾಗೂ ದಿಗಿಲು ಹುಟ್ಟಿಸುವಂತಹ ವಾತಾವರಣಕ್ಕೆ ಕಾರಣವೇನಾಗಿತ್ತೆಂದರೆ, ಅಲ್ಲಿ ಸಮವಸ್ತ್ರಧಾರಿತರಾದ 10 ಮಂದಿ ಪೊಲೀಸರು (ಕೋರ್ಟ್‌ರೂಮಿನ ಒಳಗೆ 6 ಮಂದಿ ಹಾಗೂ ಹೊರಗೆ 4 ಮಂದಿ) ನಿಂತಿದ್ದರು; ಇದಲ್ಲದೆ ಸಾಮಾನ್ಯ ಉಡುಪುಗಳನ್ನು ಧರಿಸಿಕೊಂಡಿದ್ದ ವಿಶೇಷ ಬ್ರಾಂಚ್‌ನ ಅನೇಕ ಅಧಿಕಾರಿಗಳೂ ಗ್ಯಾಲರಿಯಲ್ಲಿ ಕುಳಿತುಕೊಂಡಿದ್ದರು.”
ವಿಚಾರಣೆಯು ತಾನೇ ನಡೆಸಲ್ಪಟ್ಟ ರೀತಿಯ ಕುರಿತಾಗಿ ಹೇಳಿಕೆ ನೀಡುತ್ತಾ, ರಾಜೇಂದ್ರನು ಮುಂದುವರಿಸಿದ್ದು:
“ವೀಕ್ಷಣೆಯ ಸಮಯಾವಧಿಯಲ್ಲಿ (ಹಾಗೂ ನಕಲುಪ್ರತಿಗಳಲ್ಲಿ ಪುರಾವೆಯು ಕೊಡಲ್ಪಟ್ಟಿರುವಂತೆ, ವಿಚಾರಣೆಯ ಕಾಲದಲ್ಲೆಲ್ಲಾ), ಈ ಮುಂಚೆ ತಿಳಿಸಲಾಗಿದ್ದ ನ್ಯಾಯಾಧೀಶನ ವರ್ತನೆಯು, ಅನ್ಯಾಯಕರವಾಗಿ ಕಂಡುಬಂತು. . . . ನಿಷ್ಪಕ್ಷಪಾತವಾದ ವಿಚಾರಣೆಯ ಎಲ್ಲಾ ಪ್ರಮಾಣಗಳಿಗೆ ಪ್ರತಿಕೂಲವಾಗಿ, ಆ ನ್ಯಾಯಾಧೀಶನು ಫಿರ್ಯಾದಿ ಪಕ್ಷದ ಪರವಾಗಿ ಪದೇ ಪದೇ ಹಸ್ತಕ್ಷೇಪಮಾಡುತ್ತ, ಪ್ರತಿವಾದಿ ಪಕ್ಷದವರು ನಿಷಿದ್ಧ ಸಾಹಿತ್ಯಗಳುಳ್ಳವರಾಗಿದ್ದರೆಂಬುದನ್ನು ತೋರಿಸಲು, ಫಿರ್ಯಾದಿ ಪಕ್ಷವು ಸಲ್ಲಿಸಿದ—ಉದಾ. ಬೈಬಲಿನ ದ ಕಿಂಗ್ ಜೇಮ್ಸ್ ವರ್ಷನ್—ಪ್ರದರ್ಶಿತ ವಸ್ತುಗಳ ಮೇಲೆ ಫಿರ್ಯಾದಿ ಪಕ್ಷದ ಸಾಕ್ಷಿಗಳಿಗೆ ಪಾಟಿಸವಾಲು ಹಾಕುವ ಪ್ರತಿವಾದಿಗಳ ಪ್ರಯತ್ನವನ್ನು ಭಂಗಗೊಳಿಸಿದನು!”
ಸಿಂಗಾಪುರದ ಮಾನವ ಹಕ್ಕುಗಳ ನಿಗ್ರಹದಿಂದ ಫಲಿಸಿದ ಅಂತಾರಾಷ್ಟ್ರೀಯ ಹಿತಾಸಕ್ತಿಯ ತೀವ್ರತೆಯು ಎಷ್ಟು ಮಹತ್ತರವಾಗಿದೆಯೆಂದರೆ, ಸರಹದ್ದುಗಳಿಲ್ಲದ ಮಾನವ ಹಕ್ಕುಗಳು (ಇಂಗ್ಲಿಷ್) ಎಂಬ ಶಿರೋನಾಮವುಳ್ಳ ಬೆಲ್ಜಿಯಮ್ ಆಧಾರಿತ ಪತ್ರಿಕೆಯೊಂದು, ಯೆಹೋವನ ಸಾಕ್ಷಿಗಳ ಮೇಲೆ ಸಿಂಗಾಪುರದ ಸರಕಾರದಿಂದ ನಡೆಸಲ್ಪಟ್ಟ ಆಕ್ರಮಣದ ವಿಷಯದಲ್ಲೇ ಸಂಪೂರ್ಣವಾಗಿ ವ್ಯವಹರಿಸುವ, 18-ಪುಟದ ಒಂದು ವರದಿಯನ್ನು ಪ್ರಕಾಶಿಸಿತು. ಆ ಪತ್ರಿಕೆಯ ಮುಖ್ಯ ಸಂಪಾದಕರಾದ ವಿಲಿ ಫಾಟ್ರೇ, ಸಂಪಾದಕೀಯವಾಗಿ ಬರೆಯುತ್ತಾ, ಯಾವುದೇ ರಾಜಕೀಯ ಸರಕಾರದಲ್ಲಿ ಮಾನವ ಸ್ವಾತಂತ್ರ್ಯದ ನೈಜ ಪರಿಮಾಣವನ್ನು ಅತಿ ಸಂಕ್ಷಿಪ್ತವಾಗಿ ನಿರೂಪಿಸಿದರು:
“ಯಾವುದೇ ನಿಗದಿತ ಸಮಾಜದಲ್ಲಿ, ಮಾನವ ಸ್ವಾತಂತ್ರ್ಯದ ಸಾಮಾನ್ಯ ಸ್ಥಿತಿಯ ಅತ್ಯುತ್ತಮ ಸೂಚನೆಗಳಲ್ಲಿ ಧಾರ್ಮಿಕ ಅನಿರ್ಬಂಧತೆಯು ಒಂದಾಗಿರುವುದಾದರೂ, ಕೇವಲ ಕೆಲವೇ ಐಹಿಕ ಮಾನವ ಹಕ್ಕುಗಳ ಸಂಸ್ಥೆಗಳು, ಧರ್ಮ ಅಥವಾ ನಂಬಿಕೆಯ ಮೇಲಾಧಾರಿತವಾದ ಅಂತಹ ಭೇದ ಹಾಗೂ ಅಸಹಿಷ್ಣುತೆಯ ರೂಪಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ಅಥವಾ ಧಾರ್ಮಿಕ ಸ್ವಾತಂತ್ರ್ಯವನ್ನು ಸಂರಕ್ಷಿಸಿ, ಅದನ್ನು ಪ್ರವರ್ಧಿಸಬಹುದಾದ ಧೋರಣೆಗಳ ವಿಕಸನದಲ್ಲಿ ಒಳಗೊಂಡಿವೆ.”
ಸರಹದ್ದುಗಳಿಲ್ಲದ ಮಾನವ ಹಕ್ಕುಗಳು (ಇಂಗ್ಲಿಷ್) ಎಂಬ ಪತ್ರಿಕೆಯು, ತಮ್ಮ ವರದಿಯ ಕೊನೆಯ ಪುಟದಲ್ಲಿ, ಅದರ ಶಿಫಾರಸ್ಸುಗಳ ಪಟ್ಟಿಯನ್ನು ದಪ್ಪಕ್ಷರಗಳಲ್ಲಿ ಪ್ರಕಾಶಿಸಿತು.
ಯೆಹೋವನ ಸಾಕ್ಷಿಗಳು ಸಿಂಗಾಪುರಕ್ಕೆ ಉಪಕಾರಜೀವಿಗಳಾಗಿದ್ದಾರೆ. ಅವರು ತಮ್ಮ ನೆರೆಯವರ ಹಕ್ಕುಗಳನ್ನು ಗೌರವಿಸುತ್ತಾರೆ ಮತ್ತು ಅವರ ವಿರುದ್ಧವಾಗಿ ಯಾವುದೇ ಅಪರಾಧವನ್ನು ಮಾಡುವುದಿಲ್ಲ. ಸಿಂಗಾಪುರದ ಯಾವುದೇ ಪ್ರಜೆಯು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಿಂದ ಕನ್ನಗಳ್ಳತನ ಮಾಡಲ್ಪಡುವ, ದೋಚಲ್ಪಡುವ, ಹೊಡೆಯಲ್ಪಡುವ, ಅಥವಾ ಬಲಾತ್ಕಾರ ಸಂಭೋಗಮಾಡಲ್ಪಡುವುದರ ಕುರಿತಾಗಿ ಚಿಂತಿಸುವ ಅಗತ್ಯವಿಲ್ಲ.
ಅವರ ಸ್ವಯಂ ಅಪೇಕ್ಷಿತ ಸಾರ್ವಜನಿಕ ಶುಶ್ರೂಷೆಯು, ಕೌಟುಂಬಿಕ ಜೀವಿತವನ್ನು ಬಲಪಡಿಸಿ, ಅದನ್ನು ಉತ್ತಮಗೊಳಿಸುತ್ತದೆ ಹಾಗೂ ಒಳ್ಳೆಯ ಪೌರತನವನ್ನು ಪ್ರೋತ್ಸಾಹಿಸುತ್ತದೆ. ಬೈಬಲಿನ ಭಕ್ತಿವೃದ್ಧಿಯನ್ನುಂಟುಮಾಡುವ ಮೂಲತತ್ವಗಳನ್ನು ಕಲಿಯಲು ಹಾಗೂ ಅವನ ಅಥವಾ ಅವಳ ಜೀವಿತದಲ್ಲಿ ಅದನ್ನು ಹೇಗೆ ಅನ್ವಯಿಸಿಕೊಳ್ಳುವುದೆಂಬುದನ್ನು ತಿಳಿದುಕೊಳ್ಳಲು ಬಯಸುವ ಯಾರೊಂದಿಗೇ ಆಗಲಿ, ಅವರು ಉಚಿತ ಬೈಬಲ್ ಅಭ್ಯಾಸಗಳನ್ನು ನಡೆಸುತ್ತಾರೆ. ಬೈಬಲ್ ಅಭ್ಯಾಸ ಹಾಗೂ ಪ್ರಾರ್ಥನೆಗಾಗಿರುವ ಅವರ ಕೂಟಗಳು, ಅವರ ಕ್ರೈಸ್ತ ಶಿಕ್ಷಣದ ಭಾಗವಾಗಿವೆ. ಇದು ಅವರನ್ನು ಒಳ್ಳೆಯ ಪ್ರಜೆಗಳಾಗಿರುವಂತೆ ಮಾಡಿದೆ.
ತಮ್ಮ ಗಣರಾಜ್ಯವನ್ನು ಗೌರವಿಸುವ ಹಾಗೂ ಅದರ ಭವಿಷ್ಯತ್ತಿಗಾಗಿ ಅತ್ಯುತ್ತಮವಾದುದನ್ನು ಬಯಸುವ ಸಿಂಗಾಪುರದ ಪ್ರಜೆಗಳು, ಸಿಂಗಾಪುರದ ಸಮಾಜದಲ್ಲಿ ಯೆಹೋವನ ಸಾಕ್ಷಿಗಳ ನ್ಯಾಯವಾದ ಹಕ್ಕುಳ್ಳ ಸ್ಥಾನದ ಕಡೆಗೆ ಒಂದು ಹೊಸ ನೋಟವನ್ನು ಹರಿಸುವಂತೆ ಸರಕಾರವನ್ನು ಪ್ರಚೋದಿಸತಕ್ಕದ್ದು. ಅವರ ವಿರುದ್ಧವಾಗಿರುವ ನಿರ್ಣಯಗಳನ್ನು ತೆಗೆದುಹಾಕಿ, ಪ್ರತಿ ಪ್ರಜೆಯು ಯಾವುದಕ್ಕೆ ಹಕ್ಕುದಾರನೋ ಆ ಆರಾಧನಾ ಸ್ವಾತಂತ್ರ್ಯವನ್ನು ಅವರಿಗೆ ಪುನಃ ಹಿಂದಿರುಗಿಸುವ ಸಮಯವು ಇದೇ ಆಗಿದೆ.
[ಪುಟ 35 ರಲ್ಲಿರುವ ಚೌಕ]
ಜಗತ್ತು ವೀಕ್ಷಿಸುತ್ತಿದೆ
1. “ಸಿಂಗಾಪುರದ ಪೊಲೀಸರು, ಕಳೆದ ಫೆಬ್ರವರಿ ತಿಂಗಳ ಒಂದು ರಾತ್ರಿಯಂದು, ಐದು ಮನೆಗಳ ಮೇಲೆ ಮಿಲಿಟರಿ ಶೈಲಿಯ ಉಗ್ರದಾಳಿಯನ್ನು ಫಕ್ಕನೆ ನಡೆಸಿದಾಗ, 69 ಮಂದಿ ಪುರುಷರು, ಸ್ತ್ರೀಯರು ಹಾಗೂ ಹದಿವಯಸ್ಕರು ದಸ್ತಗಿರಿಮಾಡಲ್ಪಟ್ಟರು ಮತ್ತು ಪೊಲೀಸ್ ಮುಖ್ಯಕಾರ್ಯಾಲಯಕ್ಕೆ ಬಲವಂತವಾಗಿ ಎಳೆದೊಯ್ಯಲ್ಪಟ್ಟರು. ಬೈಬಲ್ ಅಭ್ಯಾಸ ಕೂಟಗಳು ಈ ರೀತಿಯಲ್ಲಿ ಮುಕ್ತಾಯಗೊಳ್ಳಬೇಕಾಗಿರಲಿಲ್ಲ.”—ದಿ ಆಟವ ಸಿಟಿಸನ್, ಕೆನಡ, ಡಿಸೆಂಬರ್ 28, 1995, ಪುಟ A10.
2. “ಸಿಂಗಾಪುರದ ಸರಕಾರವು, ಈ ಮುಗ್ಧ ಹಾಗೂ ಅಪಾಯರಹಿತ ಗುಂಪಿನ ಸದಸ್ಯರ ವಿಷಯದಲ್ಲಿನ ತನ್ನ ಸ್ಥಾನವನ್ನು ತಿದ್ದಿಕೊಂಡು, ಅಡಚಣೆ ಅಥವಾ ಭಯವಿಲ್ಲದೇ ಅವರು ತಮ್ಮ ನಂಬಿಕೆಯನ್ನು ಆಚರಿಸುವಂತೆ ಹಾಗೂ ಪ್ರಸಾರಮಾಡುವಂತೆ ಅನುಮತಿಸುವಲ್ಲಿ, ಧಾರ್ಮಿಕ ಅನಿರ್ಬಂಧತೆ ಹಾಗೂ ಮನಸ್ಸಾಕ್ಷಿಯ ಹಕ್ಕುಗಳ ವಿಷಯದಲ್ಲಿ ಚಿಂತಿತರಾಗಿರುವವರೆಲ್ಲರಿಗೆ, ಇದು ಒಂದು ನೈಜ ತೃಪ್ತಿಯ ಒಂದು ಮೂಲವಾಗಿರುವುದು.”—ಪ್ರೊಫೆಸರ್ ಬ್ರಾಯನ್ ಆರ್. ವಿಲ್ಸನ್, ಯೂನಿವರ್ಸಿಟಿ ಆಫ್ ಆಕ್ಸ್‌ಫರ್ಡ್, ಇಂಗ್ಲೆಂಡ್.
3. “ಅಂತಾರಾಷ್ಟ್ರೀಯ ಪೌರ ಸ್ವಾತಂತ್ರ್ಯಗಳ ಗುಂಪುಗಳ ಮೂಲಕ ನಡೆಸಲ್ಪಟ್ಟ ಪ್ರತಿಭಟನೆಗಳಿಂದ ಹೊತ್ತಿಸಲ್ಪಟ್ಟ ವಿಚಾರಣಾ ಸರಣಿಯಲ್ಲಿ, ಸಿಂಗಾಪುರದ ಕೋರ್ಟುಗಳು ಕಳೆದ ನವೆಂಬರ್ ತಿಂಗಳಿನಿಂದ 63 ಯೆಹೋವನ ಸಾಕ್ಷಿಗಳನ್ನು ಬಂಧಿಸಿವೆ.”—ಆಸಾಹಿ ಈವ್ನಿಂಗ್ ನ್ಯೂಸ್, ಜಪಾನ್, ಜನವರಿ 19, 1996, ಪುಟ 3.
4. “ದಸ್ತಗಿರಿ ಅಥವಾ ಸೆರೆವಾಸದ ಬೆದರಿಕೆಯಿಲ್ಲದೆ, ಯೆಹೋವನ ಸಾಕ್ಷಿಗಳು ಕೂಟವಾಗಿ ಕೂಡಿ, ತಮ್ಮ ಧರ್ಮವನ್ನು ಶಾಂತಿಭರಿತವಾಗಿ ಆಚರಿಸುವಂತೆ ಅವರಿಗೆ ಅನುಮತಿ ನೀಡಲ್ಪಡಬೇಕು. ಧಾರ್ಮಿಕ ಸ್ವಾತಂತ್ರ್ಯವು, ಸಿಂಗಾಪುರದ ಸಂವಿಧಾನದಿಂದ ಖಾತ್ರಿನೀಡಲ್ಪಟ್ಟಿರುವ ಒಂದು ಮೂಲಭೂತ ಹಕ್ಕಾಗಿದೆ.”—ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್, ನವೆಂಬರ್ 22, 1995.
5. ಹಾಂಗ್ ಕಾಂಗ್ ಕ್ಯಾತೊಲಿಕ್ ಡೈಒಸೀಸ್‌ನ ನ್ಯಾಯ ಹಾಗೂ ಶಾಂತಿಯ ಕಾರ್ಯಾಚರಣೆಯ ಅಧ್ಯಕ್ಷರಾದ ಚನ್ ಸಿಯೂ ಚಿಂಗ್, ಜೂನ್ 1, 1995ನೇ ತಾರೀಖಿನ, ಲೀ ಕ್ವಾನ್ ಯ್ಯು, ಸೀನಿಯರ್ ಮಿನಿಸ್ಟರ್, ಪ್ರಧಾನಮಂತ್ರಿಯವರ ಕಛೇರಿಗೆ ಬರೆದ ಒಂದು ಪತ್ರದಲ್ಲಿ ತಿಳಿಸಿದ್ದು: “ಪ್ರಮುಖ ವಿವಾದಾಂಶವು ಯಾವುದೆಂದರೆ, ಮಿಲಿಟರಿ ಸೇವೆಯನ್ನು ನಿರಾಕರಿಸುತ್ತಿರುವವರು, ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ ಮತ್ತು ಅವರಿಗೆ ಶಿಕ್ಷೆ ವಿಧಿಸಲ್ಪಡಬೇಕೆಂದು ಸಿಂಗಾಪುರದ ಸರಕಾರವು ಅಭಿಪ್ರಯಿಸುವುದಾದರೂ, ಕೇವಲ ಆರಾಧನೆಯ ಉದ್ದೇಶಕ್ಕಾಗಿ ಧಾರ್ಮಿಕ ಒಟ್ಟುಗೂಡುವಿಕೆಯಲ್ಲಿ ಭಾಗವಹಿಸುವ ಇನ್ನಿತರ ಸದಸ್ಯರನ್ನು ಅದು ಬಾಧಿಸಬಾರದು. . . .
“ಆದುದರಿಂದ ನಾವು ನಿಮ್ಮ ಸರಕಾರಕ್ಕೆ ಈ ಬಿನ್ನಹವನ್ನು ಬರೆಯುತ್ತೇವೆ:
1. ಯೆಹೋವನ ಸಾಕ್ಷಿಗಳು ಆರಾಧನೆಯ ಹಾಗೂ ಮನಸ್ಸಾಕ್ಷಿಯ ಸ್ವಾತಂತ್ರ್ಯದಲ್ಲಿ ಆನಂದಿಸಸಾಧ್ಯವಾಗುವಂತೆ ಅವರ ಮೇಲೆ ನಿಷೇಧ ತರಬೇಡಿ.
2. ಧಾರ್ಮಿಕ ಉದ್ದೇಶದ ಒಟ್ಟುಗೂಡುವಿಕೆಗಳಿಗೆ ಮಾತ್ರವೇ ಹಾಜರಾಗುವ ಯೆಹೋವನ ಸಾಕ್ಷಿಗಳ ಸದಸ್ಯರ ಮೇಲೆ ದೋಷಾರೋಪ ಹೊರಿಸುವುದನ್ನು ನಿಲ್ಲಿಸಿರಿ.
3. ಧಾರ್ಮಿಕ ಚಟುವಟಿಕೆಗಳಿಗೆ ಹಾಜರಾದುದಕ್ಕಾಗಿ ಮಾತ್ರವೇ ಇತ್ತೀಚೆಗೆ ದಸ್ತಗಿರಿಮಾಡಲ್ಪಟ್ಟಿರುವ ಯೆಹೋವ[ನ] ಸಾಕ್ಷಿಗಳ ಆ ಸದಸ್ಯರನ್ನು ಬಿಡುಗಡೆಮಾಡಿ.”
[ಪುಟ 32 ರಲ್ಲಿರುವ ಚಿತ್ರ]
ದೋಷಾರೋಪಗಳು ಹೊರಿಸಲ್ಪಟ್ಟ ಬಳಿಕ ಕೋರ್ಟ್‌ಹೌಸಿನಲ್ಲಿ ಯೆಹೋವನ ಸಾಕ್ಷಿಗಳು
[ಪುಟ 32 ರಲ್ಲಿರುವ ಚಿತ್ರ]
“ಈ ಸರಕಾರಕ್ಕೆ ನಾನು ಬೆದರಿಕೆಯಾಗಿಲ್ಲ” ಎಂದು, 71 ವರ್ಷ ಪ್ರಾಯದ ಈ ಸಾಕ್ಷಿಯು ನ್ಯಾಯಾಧೀಶನಿಗೆ ಹೇಳಿದಳು. ಆದರೂ ಅವಳನ್ನು ಸೆರೆಮನೆಗೆ ಹಾಕಲಾಯಿತು