ಹೆಚ್ಚು ದಪ್ಪಗಿರುವುದು ಹೆಚ್ಚು ಆರೋಗ್ಯಕರವಲ್ಲದಿರುವಾಗ
“ಈಗ ನನ್ನ ಬಟ್ಟೆಗಳು ನನಗೆ ಸರಿಯಾಗಿ ಫಿಟ್ ಆಗುವುದಿಲ್ಲ” ಎಂದು 35 ವರ್ಷ ಪ್ರಾಯದ ರೋಸ ಹಲುಬಿದಳು. “ಈಗ ನಾನು 86 ಕಿಲೊಗ್ರಾಮ್ಗಳಷ್ಟಿದ್ದೇನೆ, ಮತ್ತು ನಾನು ಅಷ್ಟೊಂದು ದಪ್ಪವಾಗುವೆನೆಂದು ನಾನೆಂದೂ ಊಹಿಸಿರಲಿಲ್ಲ!”
ತನ್ನ ಹೆಚ್ಚುತ್ತಿರುವ ತೂಕದ ಕುರಿತಾಗಿ ಚಿಂತಿಸುತ್ತಿರುವವಳು ರೋಸ ಒಬ್ಬಳೇ ಅಲ್ಲ. ಅವಳು ನಿವಾಸಿಸುತ್ತಿರುವ ಅಮೆರಿಕದಲ್ಲಿ, ಬಹುಮಟ್ಟಿಗೆ ಜನತೆಯ ಮೂರನೇ ಒಂದು ಭಾಗವು ಸ್ಥೂಲಕಾಯವುಳ್ಳದ್ದಾಗಿದೆ.a ಬ್ರಿಟನ್ನಲ್ಲಿರುವ ಸ್ಥೂಲಕಾಯವುಳ್ಳ ವಯಸ್ಕರ ಅನುಪಾತವು, ಹತ್ತು ವರ್ಷಗಳಲ್ಲಿ ಇಮ್ಮಡಿಯಾಯಿತು. ಮತ್ತು ಅಧಿಕ ತೂಕವು ತುಂಬಾ ಅಪರೂಪವಾಗಿರುತ್ತಿದ್ದ ಜಪಾನಿನಲ್ಲಿ ಸ್ಥೂಲಕಾಯವು ಸಾಮಾನ್ಯವಾಗುತ್ತಿದೆ.
ಅಧಿಕ ಸಂಖ್ಯೆಯ ಮಕ್ಕಳು, ಅವರು ಎಷ್ಟು ತೂಕವುಳ್ಳವರಾಗಿರಬೇಕೋ ಅದಕ್ಕಿಂತಲೂ ಹೆಚ್ಚು ತೂಕವುಳ್ಳವರಾಗಿದ್ದಾರೆ. ಕೆನಡದ ಮಕ್ಕಳಲ್ಲಿ ಸುಮಾರು 20 ಪ್ರತಿಶತ ಮಕ್ಕಳು ಸ್ಥೂಲಕಾಯದವರಾಗಿರುವಾಗ, ಅಮೆರಿಕದ 6 ಮತ್ತು 17ರ ನಡುವಣ ಪ್ರಾಯಗಳ, ಸುಮಾರು 47 ಲಕ್ಷ ಯುವ ಜನರು ಅತ್ಯಧಿಕ ಭಾರಾಧಿಕ್ಯವುಳ್ಳವರಾಗಿದ್ದಾರೆ. ಸಿಂಗಾಪುರದಲ್ಲಿ, ಇತ್ತೀಚಿನ ವರ್ಷಗಳಲ್ಲಿ, ಬಾಲ್ಯಾವಸ್ಥೆಯ ಸ್ಥೂಲಕಾಯವು ಮೂರುಪಟ್ಟು ಏರಿಕೆಯನ್ನು ತೋರಿಸಿದೆ.
ಕೆಲವು ದೇಶಗಳಲ್ಲಿ, ತೂಕದ ಗಳಿಕೆಯಿಂದ ದಪ್ಪಗಿರುವುದು, ಸಮೃದ್ಧಿ ಹಾಗೂ ಆರೋಗ್ಯದ—ಬಡತನ ಹಾಗೂ ನ್ಯೂನಪೋಷಣೆಗಿಂತ ಹೆಚ್ಚು ಅಪೇಕ್ಷಣೀಯವಾದ ಸ್ಥಿತಿ—ಪುರಾವೆಯಾಗಿ ದೃಷ್ಟಿಸಲ್ಪಡುತ್ತದೆ. ಆದರೆ, ಅನೇಕವೇಳೆ ಆಹಾರವು ಸುಲಭವಾಗಿ ಲಭ್ಯವಿರುವಂತಹ ಪಾಶ್ಚಾತ್ಯ ದೇಶಗಳಲ್ಲಿ, ಸರ್ವಸಾಮಾನ್ಯವಾಗಿ ತೂಕವನ್ನು ಗಳಿಸುವುದು ಅಪೇಕ್ಷಣೀಯವಾಗಿ ಪರಿಗಣಿಸಲ್ಪಡುವುದಿಲ್ಲ. ಅದಕ್ಕೆ ಬದಲಾಗಿ, ಅದು ಸಾಮಾನ್ಯವಾಗಿ ಗಂಭೀರವಾದ ಚಿಂತೆಗೆ ಕಾರಣವಾಗಿದೆ. ಏಕೆ?
“ಸ್ಥೂಲಕಾಯವು ಹೊರತೋರಿಕೆಯ ಒಂದು ಸಮಸ್ಯೆಯಾಗಿದೆಯೆಂದು ಅಧಿಕಾಂಶ ಜನರು ನಂಬುತ್ತಾರಾದರೂ, ವಾಸ್ತವದಲ್ಲಿ ಅದು ಗುರುತರವಾದ ಒಂದು ರೋಗವಾಗಿದೆ” ಎಂದು, ಅಮೆರಿಕದ ಮಾಜಿ ಸರ್ಜನ್ ಜನರಲರಾದ ಡಾ. ಸಿ. ಎವ್ರಟ್ ಕೂಪ್ ಹೇಳುತ್ತಾರೆ. ನ್ಯೂ ಯಾರ್ಕ್ನ ಅಂತಃಸ್ರಾವಶಾಸ್ತ್ರಜ್ಞರಾದ ಎಫ್. ಈಗ್ಸೇವಿಯರ್ ಪೀಸನ್ಯಾಅರ್ ವಿವರಿಸುವುದು: “[ಅಮೆರಿಕವು ಹೆಚ್ಚು ಸ್ಥೂಲಕಾಯವುಳ್ಳದ್ದಾಗುತ್ತಿರುವುದು] ಹೆಚ್ಚು ಜನರನ್ನು, ಮಧುಮೂತ್ರರೋಗ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯು ಹೊಡೆತ, ಹೃದ್ರೋಗ, ಇನ್ನು ಕೆಲವು ರೀತಿಯ ಕ್ಯಾನ್ಸರ್ಗಳ ಅಪಾಯಕ್ಕೆ ಸಹ ಒಡ್ಡುತ್ತಿದೆ.”
ಹೆಚ್ಚು ತೂಕ, ಹೆಚ್ಚು ಅಪಾಯ
ಯಾರು 16 ವರ್ಷಗಳ ವರೆಗೆ ನಿಕಟವಾಗಿ ಅವಲೋಕಿಸಲ್ಪಟ್ಟರೋ, ಆ ಅಮೆರಿಕದ 1,15,000 ಸ್ತ್ರೀ ನರ್ಸ್ಗಳ ಕುರಿತಾದ ಒಂದು ಅಧ್ಯಯನವನ್ನು ಪರಿಗಣಿಸಿರಿ. ವಯಸ್ಕರು ಐದರಿಂದ ಎಂಟು ಕಿಲೊಗ್ರಾಮ್ಗಳಷ್ಟು ತೂಕವನ್ನು ಗಳಿಸುವಾಗಲೂ, ಅದು ಹೃದ್ರೋಗದ ಅತ್ಯಧಿಕ ಅಪಾಯದಲ್ಲಿ ಫಲಿಸುತ್ತದೆಂದು ಆ ಅಧ್ಯಯನವು ಕಂಡುಕೊಂಡಿತು. ಸೆಪ್ಟೆಂಬರ್ 14, 1995ರ ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಪ್ರಕಾಶಿಸಲ್ಪಟ್ಟ ಈ ಅಧ್ಯಯನವು, ಕ್ಯಾನ್ಸರ್ನಿಂದಾಗುವ ಮರಣಗಳಲ್ಲಿ ಮೂರನೇ ಒಂದು ಭಾಗದಷ್ಟು ಮರಣಗಳು ಹಾಗೂ ಹೃದಯರಕ್ತನಾಳಕ್ಕೆ ಸಂಬಂಧಿಸಿದ ಮರಣಗಳಲ್ಲಿ ಅರ್ಧದಷ್ಟು ಮರಣಗಳು, ಅಧಿಕ ತೂಕದ ಕಾರಣದಿಂದಾಗಿದ್ದವೆಂದು ಸೂಚಿಸಿತು. ಮೇ 22/29, 1996ರ, ದ ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ (ಜೆಎಎಮ್ಎ)ನಲ್ಲಿನ ಒಂದು ವರದಿಗನುಸಾರ, “ಪುರುಷರಲ್ಲಿ 78% ಹಾಗೂ ಸ್ತ್ರೀಯರಲ್ಲಿ 65% ಅತ್ಯುದ್ವೇಗ (ಹೈಪರ್ಟೆನ್ಷನ್)ವನ್ನು ಸ್ಥೂಲಕಾಯಕ್ಕೆ ನೇರವಾಗಿ ಅಧ್ಯಾರೋಪಿಸಸಾಧ್ಯವಿದೆ.” ಯಾರು “ಗಮನಾರ್ಹವಾಗಿ ಅಧಿಕ ತೂಕವುಳ್ಳವರಾಗಿರುತ್ತಾರೋ” (ಆದರ್ಶಪ್ರಾಯ ತೂಕಕ್ಕಿಂತ 40 ಪ್ರತಿಶತ ಅಥವಾ ಹೆಚ್ಚು) “ಅವರಿಗೆ ಕ್ಯಾನ್ಸರ್ನ ಅಪಾಯವು ಹೆಚ್ಚಾಗಿರುತ್ತದೆ” ಎಂದು ಅಮೆರಿಕನ್ ಕ್ಯಾನ್ಸರ್ ಸೊಸೈಟಿಯು ಹೇಳುತ್ತದೆ.
ಆದರೆ ವಿಪರೀತ ತೂಕವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುವುದು ಮಾತ್ರ ಅಪಾಯಕರವಾಗಿರುವುದಿಲ್ಲ; ದೇಹದ ಕೊಬ್ಬಿನ ವಿತರಣೆಯು ಸಹ ರೋಗದ ಅಪಾಯವನ್ನು ಪ್ರಭಾವಿಸುತ್ತದೆ. ತಮ್ಮ ಸೊಂಟಗಳು ಹಾಗೂ ತೊಡೆಗಳಲ್ಲಿ ಹೆಚ್ಚು ತೂಕವನ್ನು ಹೊಂದಿರುವವರುಗಳಿಗಿಂತಲೂ, ಹೊಟ್ಟೆಯ ಭಾಗದಲ್ಲಿ ವಿಪರೀತ ಕೊಬ್ಬನ್ನು ಹೊಂದಿರುವವರು ವಾಸ್ತವವಾಗಿ ಹೆಚ್ಚು ಅಪಾಯದಲ್ಲಿರುತ್ತಾರೆ. ಹೊಟ್ಟೆಯ ಭಾಗದಲ್ಲಿರುವ ಕೊಬ್ಬು, ಮಧುಮೂತ್ರರೋಗ, ಹೃದ್ರೋಗ, ಸ್ತನದ ಕ್ಯಾನ್ಸರ್, ಹಾಗೂ ಗರ್ಭಾಶಯದ ಕ್ಯಾನ್ಸರ್ನ ಅಧಿಕ ಅಪಾಯದೊಂದಿಗೆ ಸಂಬಂಧಿಸಿದೆ.
ತದ್ರೀತಿಯಲ್ಲಿ, ಅಧಿಕ ತೂಕವುಳ್ಳ ಯುವ ಜನರು, ಅಧಿಕ ರಕ್ತದೊತ್ತಡ, ಅತ್ಯಧಿಕ ಕೊಲೆಸ್ಟರಾಲ್ ಮಟ್ಟಗಳು, ಹಾಗೂ ಮಧುಮೂತ್ರರೋಗದ ಪೂರ್ವಭಾವಿ ಸ್ಥಿತಿಗಳಿಂದ ಕಷ್ಟಾನುಭವಿಸುತ್ತಾರೆ. ಮತ್ತು ಅವರು ಅನೇಕವೇಳೆ ಸ್ಥೂಲಕಾಯವುಳ್ಳ ವಯಸ್ಕರಾಗುತ್ತಾರೆ. ದ ಲ್ಯಾನ್ಸೆಟ್ ಎಂಬ ಬ್ರಿಟಿಷ್ ವೈದ್ಯಕೀಯ ಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟ ದತ್ತಾಂಶವನ್ನು ಉಪಯೋಗಿಸಿ, ದ ನ್ಯೂ ಯಾರ್ಕ್ ಟೈಮ್ಸ್ ವರದಿಸಿದ್ದೇನೆಂದರೆ, “ಸರ್ವಸಾಮಾನ್ಯ ಜನರಿಗಿಂತಲೂ, ಮಕ್ಕಳಾಗಿದ್ದಾಗ ದಪ್ಪಗಿದ್ದ ಜನರು, ಹೆಚ್ಚು ಬೇಗನೆ ಮೃತರಾದರು ಮತ್ತು ತೀರ ಚಿಕ್ಕ ಪ್ರಾಯಗಳಲ್ಲಿಯೇ ಹೆಚ್ಚೆಚ್ಚು ರೋಗಗಳನ್ನು ಅನುಭವಿಸಿದರು.”
ಹೊಸ ತೂಕ ಮಾರ್ಗದರ್ಶನಗಳು
ಗಂಭೀರವಾದ ತೂಕದ ವಿಪತ್ತನ್ನು ಮನಗಂಡ ಅಮೆರಿಕ ಸರಕಾರವು, ಶಿಫಾರಸ್ಸುಮಾಡಲ್ಪಟ್ಟ ತನ್ನ ತೂಕ ಮಾರ್ಗದರ್ಶನಗಳನ್ನು 1995ರಲ್ಲಿ ಹೆಚ್ಚು ಕಟ್ಟುನಿಟ್ಟುಗೊಳಿಸಿತು. (ಮುಂದಿನ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.) ಕಾಲೋಚಿತಗೊಳಿಸಲ್ಪಟ್ಟ ಮಾರ್ಗದರ್ಶನಗಳು, “ಸ್ವಸ್ಥಕರವಾದ ತೂಕ,” “ಮಿತವಾದ ಭಾರಾಧಿಕ್ಯ,” ಹಾಗೂ “ಅತ್ಯಧಿಕ ಭಾರಾಧಿಕ್ಯ”ವನ್ನು ಗುರುತಿಸುತ್ತವೆ. ಆ ಮಾರ್ಗದರ್ಶನಗಳು, ವಯಸ್ಕ ಪುರುಷರು ಹಾಗೂ ಸ್ತ್ರೀಯರಿಗೆ—ಅವರ ವಯಸ್ಸು ಎಷ್ಟೇ ಆಗಿರಲಿ—ಇಬ್ಬರಿಗೂ ಅನ್ವಯವಾಗುತ್ತವೆ.
1990ರ ಮಾರ್ಗದರ್ಶನಗಳು, ಮಧ್ಯಮ ವಯಸ್ಸಿನಲ್ಲಿ ಮಧ್ಯದೇಹದ—ಅನೇಕವೇಳೆ ಮಧ್ಯಪ್ರಾಯದ ಹರವು ಎಂದು ಕರೆಯಲಾದ—ಬೆಳವಣಿಗೆಗೆ ಸಮ್ಮತಿ ನೀಡಿದವು. ಸಮಯವು ಗತಿಸುವುದರೊಂದಿಗೆ ವಯಸ್ಕರು ತೂಕವನ್ನು ಗಳಿಸಲೇ ಬಾರದು ಎಂಬ ಸೂಚನೆಗಳಿರುವುದರಿಂದ, ಹೊಸ ಮಾರ್ಗದರ್ಶನಗಳು ಇದಕ್ಕೆ ಸಮ್ಮತಿಯನ್ನು ನೀಡುವುದಿಲ್ಲ.b ಹೀಗೆ, ಈ ಹಿಂದೆ ಸಾಮಾನ್ಯ ತೂಕದವನೆಂದು ಪರಿಗಣಿಸಲ್ಪಟ್ಟ ಒಬ್ಬ ವ್ಯಕ್ತಿಯು, ಈಗ ತನ್ನನ್ನು ಅಧಿಕ ತೂಕದ ವರ್ಗದಲ್ಲಿ ಕಂಡುಕೊಳ್ಳಬಹುದು. ಉದಾಹರಣೆಗೆ, 1990ರ ಮಾರ್ಗದರ್ಶನಗಳ ಕೆಳಗೆ, 35 ಮತ್ತು 65ರ ನಡುವಣ ಪ್ರಾಯದವನೂ, 75 ಕಿಲೊಗ್ರಾಮ್ಗಳಷ್ಟು ತೂಕವುಳ್ಳವನೂ, 168 ಸೆಂಟಿಮೀಟರುಗಳಷ್ಟು ಎತ್ತರವಿರುವವನೂ ಆಗಿರುವ ಒಬ್ಬ ವ್ಯಕ್ತಿಯು, ಸ್ವಸ್ಥಕರವಾದ ತೂಕದ ವ್ಯಾಪ್ತಿಯೊಳಗಿದ್ದಿರಬಹುದು. ಆದರೆ ಹೊಸ ಮಾರ್ಗದರ್ಶನಗಳ ಕೆಳಗೆ, ಅವನು ಅಥವಾ ಅವಳು, ಐದು ಕಿಲೊಗ್ರಾಮ್ಗಳಷ್ಟು ಅಧಿಕ ತೂಕವುಳ್ಳವರಾಗಿರುವರು!
ನಾವು ಇಷ್ಟು ದಪ್ಪಗಾದದ್ದು ಹೇಗೆ?
ಆನುವಂಶೀಯವಾಗಿ ಬಂದ ಗುಣಲಕ್ಷಣಗಳು, ಒಬ್ಬ ವ್ಯಕ್ತಿಯನ್ನು ಸ್ಥೂಲಕಾಯದವನಾಗುವಂತೆ ಪ್ರಭಾವಿಸಸಾಧ್ಯವಿರುವುದಾದರೂ, ಪಾಶ್ಚಾತ್ಯ ದೇಶಗಳಲ್ಲಿ ತೂಕದ ಗಳಿಕೆಗೆ ಅವು ಕಾರಣಗಳಾಗಿರುವುದಿಲ್ಲ. ಆ ಸಮಸ್ಯೆಗೆ ಬೇರಾವುದೋ ಒಂದು ವಿಷಯವು ಕಾರಣವಾಗಿದೆ.
ಕೊಬ್ಬನ್ನು ಸೇವಿಸುವುದು ನಮ್ಮನ್ನು ದಪ್ಪಮಾಡಸಾಧ್ಯವಿದೆ ಎಂದು ಆರೋಗ್ಯ ವೃತ್ತಿಪರರು ಒಪ್ಪಿಕೊಳ್ಳುತ್ತಾರೆ. ಹೆಚ್ಚು ಮಾಂಸ ಹಾಗೂ ಹೈನಿನ ಅನೇಕ ಉತ್ಪನ್ನಗಳು, ಬೇಕ್ಮಾಡಿದ ಪದಾರ್ಥಗಳು, ಫಾಸ್ಟ್-ಫುಡ್ಗಳು, ಉಪಾಹಾರಗಳು, ಕರಿದ ತಿಂಡಿಗಳು, ಸಾಸ್ಗಳು, ಗ್ರೇವಿಗಳು (ಸಾರುಗಳು), ಮತ್ತು ಎಣ್ಣೆಗಳು, ಕೊಬ್ಬಿನಿಂದ ತುಂಬಿವೆ, ಮತ್ತು ಅವುಗಳನ್ನು ತಿನ್ನುವುದು ಸ್ಥೂಲಕಾಯಕ್ಕೆ ನಡಿಸಬಲ್ಲದು. ಹೇಗೆ?
ಒಳ್ಳೇದು, ನಾವು ತಿನ್ನುವ ಆಹಾರದಲ್ಲಿ, ನಮ್ಮ ದೇಹವು ವಿನಿಯೋಗಿಸುವುದಕ್ಕಿಂತಲೂ ಹೆಚ್ಚು ಕ್ಯಾಲೊರಿಗಳನ್ನು ಬಳಸುವುದು, ನಾವು ತೂಕವನ್ನು ಹೆಚ್ಚಿಸಿಕೊಳ್ಳುವಂತೆ ಮಾಡುತ್ತದೆ. ಒಂದು ಗ್ರ್ಯಾಮ್ ಸಸಾರಜನಕ (ಪ್ರೋಟೀನ್) ಅಥವಾ ಒಂದು ಗ್ರ್ಯಾಮ್ ಶರ್ಕರ ಪಿಷ್ಟ (ಕಾರ್ಬೊಹೈಡ್ರೇಟ್)ದಲ್ಲಿರುವ ನಾಲ್ಕು ಕ್ಯಾಲೊರಿಗಳಿಗೆ ಹೋಲಿಸುವಾಗ, ಒಂದು ಗ್ರ್ಯಾಮ್ ಕೊಬ್ಬಿನಲ್ಲಿ ಒಂಬತ್ತು ಕ್ಯಾಲೊರಿಗಳಿವೆ. ಆದುದರಿಂದ ನಾವು ಕೊಬ್ಬನ್ನು ತಿನ್ನುವಾಗ, ಹೆಚ್ಚು ಕ್ಯಾಲೊರಿಗಳನ್ನು ಸೇವಿಸುತ್ತೇವೆ. ಆದರೆ ಇನ್ನೊಂದು ಪ್ರಮುಖ ಅಂಶವೂ ಇದರಲ್ಲಿ ಸೇರಿದೆ—ಕಾರ್ಬೊಹೈಡ್ರೇಟ್ಗಳು, ಪ್ರೋಟೀನ್, ಹಾಗೂ ಕೊಬ್ಬಿನಿಂದ ಒದಗಿಸಲ್ಪಡುವ ಶಕ್ತಿಯನ್ನು ಮಾನವ ದೇಹವು ಉಪಯೋಗಿಸುವ ವಿಧವೇ. ದೇಹವು ಕಾರ್ಬೊಹೈಡ್ರೇಟ್ಗಳು ಹಾಗೂ ಪ್ರೋಟೀನನ್ನು ಮೊದಲಾಗಿ ದಹಿಸಿ, ತದನಂತರ ಕೊಬ್ಬನ್ನು ದಹಿಸುತ್ತದೆ. ಉಪಯೋಗಿಸದೆ ಬಿಡಲ್ಪಟ್ಟ ಕೊಬ್ಬು, ದೇಹದ ಕೊಬ್ಬಾಗಿ ಪರಿವರ್ತಿತವಾಗುತ್ತದೆ. ಆದುದರಿಂದ ಕೊಬ್ಬುಳ್ಳ ಆಹಾರಗಳನ್ನು ಮಿತಗೊಳಿಸುವುದು, ತೂಕವನ್ನು ಕಡಿಮೆಮಾಡುವ ಒಂದು ಪ್ರಮುಖ ಮಾರ್ಗವಾಗಿದೆ.
ಆದರೂ, ತಮ್ಮ ಕೊಬ್ಬು ಸೇವನೆಯನ್ನು ತಾವು ಕಡಿಮೆಮಾಡಿದ್ದೇವೆಂದು ನಂಬುವ ಕೆಲವರು, ತಮ್ಮ ದೇಹಗಳು ಇನ್ನೂ ದಪ್ಪವಾಗುತ್ತಿರುವುದನ್ನು ಕಂಡುಕೊಳ್ಳುತ್ತಾರೆ. ಏಕೆ? ಒಂದು ಕಾರಣವೇನೆಂದರೆ, ಅವರು ದೊಡ್ಡ ಪರಿಮಾಣಗಳಲ್ಲಿ ಆಹಾರವನ್ನು ತಿನ್ನುತ್ತಿದ್ದಾರೆ. ಅಮೆರಿಕದಲ್ಲಿನ ಪೋಷಕ ಆಹಾರಶಾಸ್ತ್ರಜ್ಞರೊಬ್ಬರು ಹೇಳುವುದು: “ತುಂಬಾ ಹೆಚ್ಚು ಬಡಿಸಲ್ಪಡುವುದರಿಂದ ನಾವು ಹೆಚ್ಚು ಊಟಮಾಡುತ್ತೇವೆ. ಅದು ಲಭ್ಯವಿರುವಾಗ, ನಾವದನ್ನು ಉಣ್ಣುತ್ತೇವೆ.” ಜನರಿಗೆ, ಕಡಿಮೆ ಕೊಬ್ಬಿರುವ ಅಥವಾ ಕೊಬ್ಬಿಲ್ಲದ ಆಹಾರಗಳನ್ನು ತುಂಬಾ ಬಳಸುವ ಪ್ರವೃತ್ತಿಯೂ ಇದೆ. ಆದರೆ ಅಮೆರಿಕದ ಆಹಾರೋದ್ಯಮ ಸಂಪರ್ಕ ಸಂಸ್ಥೆಯ ಪರಿಣತರೊಬ್ಬರು ವಿವರಿಸುವುದು: “[ಬಹಳ ಹೆಚ್ಚು ಕ್ಯಾಲೊರಿಗಳಿರುವ] ಸಕ್ಕರೆ ಪರಿಮಾಣವನ್ನು ಹೆಚ್ಚಿಸುವ ಮೂಲಕ, ಕಡಿಮೆ ಕೊಬ್ಬುಳ್ಳ ಉತ್ಪನ್ನಗಳು ಅನೇಕವೇಳೆ ಒಳ್ಳೆಯ ರುಚಿಯನ್ನು ಉಂಟುಮಾಡುತ್ತವೆ.” ಹೀಗೆ, ದ ನ್ಯೂ ಯಾರ್ಕ್ ಟೈಮ್ಸ್ ವರದಿಸಿದ್ದು: “90ಗಳ ಎರಡು ಪ್ರವೃತ್ತಿಗಳು—ವ್ಯಯಿಸಿದ ಹಣಕ್ಕೆ ಬದಲಾಗಿ ಸಾಕಷ್ಟು ಹೆಚ್ಚನ್ನು ಪಡೆಯುವುದು ಮತ್ತು ಕಡಿಮೆ ಕೊಬ್ಬುಳ್ಳ ಅಥವಾ ಕೊಬ್ಬುರಹಿತ ಆಹಾರ ಪದಾರ್ಥಗಳನ್ನು ತಿನ್ನುವುದು—ಹೊಟ್ಟೆಬಾಕತನವನ್ನು ಉದ್ರೇಕಿಸಿವೆ,” ಇದರಿಂದಾಗಿಯೇ ತೂಕವು ಹೆಚ್ಚುತ್ತಿದೆ.
ಬಹಳಷ್ಟು ಸಮಯವನ್ನು ಟಿವಿ ನೋಡುವುದರಲ್ಲಿ ಕಳೆಯುವಂತಹ ಜೀವನ ಶೈಲಿಯೂ ತೂಕದ ಗಳಿಕೆಯನ್ನು ಪ್ರವರ್ಧಿಸುತ್ತದೆ. ಬ್ರಿಟನಿನಲ್ಲಿನ ಅಧ್ಯಯನವೊಂದು ಕಂಡುಕೊಂಡಿದ್ದೇನೆಂದರೆ, ಆ ದೇಶದಲ್ಲಿರುವ ವಯಸ್ಕರಲ್ಲಿ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಮಂದಿ, ಪ್ರತಿ ವಾರ 20 ನಿಮಿಷಗಳಿಗಿಂತಲೂ ಕಡಿಮೆ ವೇಳೆ ಸಾಧಾರಣವಾದ ವ್ಯಾಯಾಮವನ್ನು ಮಾಡುತ್ತಾರೆ. ಅರ್ಧಕ್ಕಿಂತಲೂ ಕಡಿಮೆ ಮಂದಿ ಎಂದೂ ಕ್ರಿಯಾಶೀಲ ಕ್ರೀಡೆಯಲ್ಲಿ ಒಳಗೂಡುವುದಿಲ್ಲ. ಅನೇಕ ಪಾಶ್ಚಾತ್ಯ ದೇಶಗಳಲ್ಲಿ, ನಡೆಯುವುದು ಕಾರ್ ಪ್ರಯಾಣದಿಂದ ಸ್ಥಾನಪಲ್ಲಟಗೊಳಿಸಲ್ಪಟ್ಟಿದೆ. ಮತ್ತು ಅಧಿಕ ಟೆಲಿವಿಷನ್ ವೀಕ್ಷಣೆಯು, ಆಲಸ್ಯವನ್ನೂ ಹೊಟ್ಟೆಬಾಕತನವನ್ನೂ ಉತ್ತೇಜಿಸುತ್ತದೆ. ಅಮೆರಿಕದಲ್ಲಿ, ಮಕ್ಕಳು ಕುಳಿತುಕೊಂಡು, ಪ್ರತಿ ವಾರ ಅಂದಾಜುಮಾಡಲ್ಪಟ್ಟ 26 ತಾಸುಗಳನ್ನು ಟೆಲಿವಿಷನ್ ವೀಕ್ಷಣೆಯಲ್ಲಿ ಕಳೆಯುತ್ತಾರೆ. ವಿಡಿಯೋ ಆಟಗಳಲ್ಲಿ ಕಳೆಯುವ ಸಮಯವು ಇದರಲ್ಲಿ ಒಳಗೂಡಿಲ್ಲ. ಈ ಮಧ್ಯೆ, ಸುಮಾರು 36 ಪ್ರತಿಶತ ಶಾಲೆಗಳಲ್ಲಿ ಮಾತ್ರ ಇನ್ನೂ ಶಾರೀರಿಕ ವ್ಯಾಯಾಮವು ನಡೆಸಲ್ಪಡುತ್ತದೆ.
ಅಧಿಕ ತೂಕವುಳ್ಳವರಾಗಿರುವುದಕ್ಕೆ ಮನಶ್ಶಾಸ್ತ್ರೀಯ ಕಾರಣಗಳು ಸಹ ಇವೆ. “ನಾವು ಭಾವನಾತ್ಮಕ ಆವಶ್ಯಕತೆಗಳಿಂದಾಗಿ ತಿನ್ನುತ್ತೇವೆ” ಎಂದು, ಜಾನ್ಸ್ ಹಾಪ್ಕಿನ್ಸ್ ತೂಕ ನಿರ್ವಾಹಕ ಕೇಂದ್ರದ ಡಾ. ಲಾರೆನ್ಸ್ ಚೆಸ್ಕಿನ್ ಹೇಳುತ್ತಾರೆ. “ನಾವು ಸಂತೋಷಿತರಾಗಿರುವಾಗ ತಿನ್ನುತ್ತೇವೆ, ನಾವು ದುಃಖಿತರಾಗಿರುವಾಗ ತಿನ್ನುತ್ತೇವೆ. ಆಹಾರವು ಇನ್ನೂ ಅನೇಕ ವಿಷಯಗಳಿಗೆ ಬದಲಿಯಾಗಿದೆಯೋ ಎಂಬಂತಹ ಒಂದು ವಿಧದಲ್ಲಿ ನಾವು ಬೆಳೆದುಬಂದಿದ್ದೇವೆ.”
ನಾವು ಸಫಲರಾಗಬಳಲ್ಲೆವೊ?
ಅಧಿಕ ತೂಕದ ವಿವಾದಾಂಶಗಳು ಜಟಿಲವಾಗಿವೆ. ಪ್ರತಿ ವರ್ಷ ಅಂದಾಜುಮಾಡಲ್ಪಟ್ಟ ಎಂಟು ಕೋಟಿ ಅಮೆರಿಕನರು ಆಹಾರಪಥ್ಯವನ್ನು ಆರಂಭಿಸುತ್ತಾರೆ. ಆದರೆ ಸ್ವಲ್ಪ ತೂಕವನ್ನು ಕಳೆದುಕೊಂಡ ಕೂಡಲೆ, ಬಹುಮಟ್ಟಿಗೆ ಎಲ್ಲರೂ ತಮ್ಮ ಹಿಂದಿನ ತಿನ್ನುವ ಹವ್ಯಾಸವನ್ನು ಪುನಃ ಆರಂಭಿಸುತ್ತಾರೆ. ಐದು ವರ್ಷಗಳೊಳಗೆ, 95 ಪ್ರತಿಶತ ಮಂದಿ ತಾವು ಕಳೆದುಕೊಂಡಿರುವ ತೂಕವನ್ನು ಪುನಃ ಗಳಿಸುತ್ತಾರೆ.
ತೂಕವನ್ನು ಕಡಿಮೆಮಾಡಲು ಹಾಗೂ ತೂಕವನ್ನು ಪಡೆದುಕೊಳ್ಳದಿರಲು ಅಗತ್ಯವಿರುವುದೇನೆಂದರೆ, ಜೀವನ ಶೈಲಿಯ ಬದಲಾವಣೆಗಳೇ. ಅಂತಹ ಬದಲಾವಣೆಗಳು, ಪ್ರಯತ್ನ ಹಾಗೂ ಕಟ್ಟುಪಾಡನ್ನು ಅಗತ್ಯಪಡಿಸುತ್ತವೆ; ಇದರೊಂದಿಗೆ ಕುಟುಂಬ ಹಾಗೂ ಸ್ನೇಹಿತರ ಸಹಾಯವೂ ಬೇಕು. ಕೆಲವೊಂದು ವಿದ್ಯಮಾನಗಳಲ್ಲಿ, ಆರೋಗ್ಯ ವೃತ್ತಿಪರರ ಸಹಾಯವೂ ಬೇಕಾಗಬಹುದು.c ಆದರೂ, ನಿಮ್ಮ ಪ್ರಯತ್ನಗಳು ಸಫಲವಾಗಬೇಕಾದರೆ, ಸಕಾರಾತ್ಮಕ ಪ್ರಚೋದನೆಯು ಬೇಕೇಬೇಕು. ಆದುದರಿಂದ ಸ್ವತಃ ಹೀಗೆ ಕೇಳಿಕೊಳ್ಳುವುದು ಒಳ್ಳೇದು: ‘‘ನಾನು ತೂಕವನ್ನು ಕಡಿಮೆಮಾಡಿಕೊಳ್ಳಲು ಏಕೆ ಬಯಸುತ್ತೇನೆ?’ ಆರೋಗ್ಯದ ಅಪಾಯಗಳನ್ನು ತಪ್ಪಿಸುವ ಬಯಕೆಯೊಂದಿಗೆ, ಹೆಚ್ಚು ಉತ್ತಮವಾದ ಅನಿಸಿಕೆಯಾಗುವ ಮತ್ತು ಚೆನ್ನಾಗಿ ಕಾಣುವ ಹಾಗೂ ನಿಮ್ಮ ಜೀವಿತದ ಮಟ್ಟವನ್ನು ಉತ್ತಮಗೊಳಿಸುವ ಬಯಕೆಯು ಜೊತೆಗೂಡಿರುವಲ್ಲಿ, ತೂಕವನ್ನು ಕಡಿಮೆಮಾಡಲಿಕ್ಕಾಗಿರುವ ನಿಮ್ಮ ಪ್ರಯತ್ನಗಳು ಸಫಲವಾಗುವುದು ಹೆಚ್ಚು ಸಂಭವನೀಯ.
ಪುಷ್ಟಿದಾಯಕವೂ ಕಡಿಮೆ ಕ್ಯಾಲೊರಿಗಳಿರುವಂತಹದ್ದೂ ಆಗಿರುವ, ಸ್ವಾದಿಷ್ಟಕರವಾದ ಹಾಗೂ ತೃಪ್ತಿದಾಯಕ ಆಹಾರಪದಾರ್ಥವನ್ನು ನೀವು ಬಹಳಷ್ಟು ತಿನ್ನಸಾಧ್ಯವಿದೆ. ಆದರೆ ತೂಕವನ್ನು ಕಡಿಮೆಮಾಡುವಂತೆ ನಿಮಗೆ ಸಹಾಯಮಾಡಸಾಧ್ಯವಿರುವ ಆಹಾರಪದಾರ್ಥಗಳನ್ನು ಪರಿಗಣಿಸುವುದಕ್ಕೆ ಮೊದಲು, ಆಹಾರಪಥ್ಯದ ಕೆಲವೊಂದು ಘಟಕಗಳು, ಹೇಗೆ ಆರೋಗ್ಯದ ಅಪಾಯಗಳಾಗಿ ಪರಿಣಮಿಸಬಲ್ಲವು ಎಂಬುದನ್ನು ನಾವು ಪರೀಕ್ಷಿಸೋಣ.
[ಅಧ್ಯಯನ ಪ್ರಶ್ನೆಗಳು]
a ಅನೇಕವೇಳೆ ಸ್ಥೂಲಕಾಯವನ್ನು, ಯಾವುದು ಆದರ್ಶಪ್ರಾಯ ತೂಕವೆಂದು ನಂಬಲಾಗುತ್ತದೋ ಅದಕ್ಕಿಂತ 20 ಪ್ರತಿಶತ ಅಥವಾ ಅದಕ್ಕಿಂತಲೂ ಹೆಚ್ಚು ತೂಕವುಳ್ಳದ್ದಾಗಿರುವುದು ಎಂದು ಅರ್ಥನಿರೂಪಿಸಲಾಗುತ್ತದೆ.
b 1995ರ ಮಾರ್ಗದರ್ಶನಗಳು, ಅಧಿಕಾಂಶ ವಯೋಮಿತಿಗಳವರಿಗೆ ಅನ್ವಯವಾಗುತ್ತವಾದರೂ, ಸರ್ವರಿಗೂ ಅಲ್ಲ. “ಸಾಮಾನ್ಯವಾದ ಒಂದು ಒಪ್ಪಂದವಿದೆ ಏನೆಂದರೆ, ತೂಕದ ಈ ಹೊಸ ಮಾರ್ಗದರ್ಶನಗಳು, 65 ವರ್ಷಗಳಿಗಿಂತಲೂ ಹೆಚ್ಚು ವೃದ್ಧರಾದ ಜನರಿಗೆ ಬಹುಶಃ ಅನ್ವಯವಾಗುವುದಿಲ್ಲ” ಎಂದು, ಜೂನ್ 19, 1996ರ ಜೆಎಎಮ್ಎಯಲ್ಲಿ ಡಾ. ರಾಬರ್ಟ್ ಎಮ್. ರಸಲ್ ಹೇಳುತ್ತಾರೆ. “ವೃದ್ಧ ವ್ಯಕ್ತಿಯಲ್ಲಿ ಸ್ವಲ್ಪ ಹೆಚ್ಚು ತೂಕವಿರುವುದು, ಅಸ್ವಸ್ಥ ಸಮಯಾವಧಿಗಳಿಗಾಗಿ ಶಕ್ತಿಯನ್ನು ಕೂಡಿಸಿಟ್ಟುಕೊಳ್ಳುವಂತೆ ಮಾಡಿ, ಮಾಂಸಖಂಡ ಹಾಗೂ ಮೂಳೆಯ ದ್ರವ್ಯರಾಶಿಯನ್ನು ಸಂರಕ್ಷಿಸಿಕೊಳ್ಳಲು ಸಹಾಯ ಮಾಡುವ ಮೂಲಕ ಪ್ರಯೋಜನಕರವಾಗಿ ಇರಲೂಬಹುದು.”
c ತೂಕವನ್ನು ಕಡಿಮೆಮಾಡುವ ವಿಷಯದ ಕುರಿತಾದ ಸಲಹೆಗಳಿಗಾಗಿ, ಅವೇಕ್! ಪತ್ರಿಕೆಯ ಮೇ 8, 1994, 20-2ನೆಯ ಪುಟಗಳು, ಜನವರಿ 22, 1993, 12-14ನೆಯ ಪುಟಗಳು, ಮತ್ತು ಡಿಸೆಂಬರ್ 8, 1989, 3-12ನೆಯ ಪುಟಗಳನ್ನು ನೋಡಿರಿ.
[ಪುಟ 7 ರಲ್ಲಿರುವ ಚಿತ್ರ]
ನೀವು “ಸ್ವಸ್ಥಕರವಾದ ತೂಕ,” “ಮಿತವಾದ ಭಾರಾಧಿಕ್ಯ” ಅಥವಾ “ಅತ್ಯಧಿಕ ಭಾರಾಧಿಕ್ಯ”ದ ಶ್ರೇಣಿಯಲ್ಲಿದ್ದೀರೊ? ಇಲ್ಲಿ ತೋರಿಸಲ್ಪಟ್ಟಿರುವ ನಕ್ಷೆಯು, ಆ ಪ್ರಶ್ನೆಯನ್ನು ಉತ್ತರಿಸಲು ನಿಮಗೆ ಸಹಾಯ ಮಾಡುವುದು
ಸ್ತ್ರೀಯರಿಗಾಗಿಯೂ ಪುರುಷರಿಗಾಗಿಯೂ ಇರುವ 1995ರ ತೂಕ ಮಾರ್ಗದರ್ಶನಗಳು
(For fully formatted text, see publication)
ಎತ್ತರ* ಸೆಂ.ಮಿ.
198
190
180 ಸ್ವಸ್ಥಕರವಾದ ತೂಕ ಮಿತವಾದ ಭಾರಾಧಿಕ್ಯ ಅತ್ಯಧಿಕ ಭಾರಾಧಿಕ್ಯ
170
160
150
ಕೆಜಿ 30 40 50 60 70 80 90 100 110
ತೂಕ†
ಈ ಕೆಳಗಿನವುಗಳ ಮೇಲಾಧಾರಿತವಾದ ಸಂಖ್ಯಾಸಂಗ್ರಹಣಗಳು: ಅಮೆರಿಕದ ಕೃಷಿ ಇಲಾಖೆ, ಅಮೆರಿಕದ ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆ
*ಪಾದರಕ್ಷೆಗಳಿಲ್ಲದೆ.
†ಉಡುಪುಗಳಿಲ್ಲದೆ. ಅನೇಕ ಪುರುಷರಂತಹ, ಹೆಚ್ಚು ಮಾಂಸಖಂಡ ಹಾಗೂ ಮೂಳೆಯಿರುವ ಜನರಿಗೆ, ಅತ್ಯಧಿಕ ತೂಕಗಳು ಅನ್ವಯವಾಗುತ್ತವೆ.