ಯುವ ಜನರು ಪ್ರಶ್ನಿಸುವುದು. . .
ನನ್ನ ಹೆತ್ತವರು ನನ್ನ ವಿವಾಹವನ್ನು ವಿರೋಧಿಸುವುದಾದರೆ ಆಗೇನು?
ಲಾಕೀಷ ಮತ್ತು ಅವಳ ಬಾಯ್ಫ್ರೆಂಡ್ ವಿವಾಹವಾಗುವುದರ ಕುರಿತು ಯೋಚಿಸುತ್ತಿದ್ದಾರೆ, ಆದರೆ ಅವಳ ತಾಯಿ ಅದಕ್ಕೆ ಸಮ್ಮತಿಸುವುದಿಲ್ಲ. “ಈ ವರ್ಷ ನನಗೆ 19 ವರ್ಷ ವಯಸ್ಸಾಗಲಿದೆ, ಆದರೆ ನನಗೆ 21 ವರ್ಷ ವಯಸ್ಸಾಗುವ ತನಕ ನಾವು ಕಾಯಬೇಕೆಂದು ನನ್ನ ತಾಯಿ ಹಠಹಿಡಿದಿದ್ದಾರೆ” ಎಂದು ಲಾಕೀಷ ಹೇಳುತ್ತಾಳೆ.
ವಿವಾಹವಾಗಲು ನೀವು ಯೋಜಿಸುತ್ತಿರುವಲ್ಲಿ, ನಿಮ್ಮ ವಿಷಯವಾಗಿ ನಿಮ್ಮ ಹೆತ್ತವರು ಸಂತೋಷಿಸಬೇಕೆಂದು ಬಯಸುವುದು ತೀರ ಸ್ವಾಭಾವಿಕ. ಸಂಗಾತಿಯ ವಿಷಯದಲ್ಲಿ ನಿಮ್ಮ ಆಯ್ಕೆಯನ್ನು ನಿಮ್ಮ ಹೆತ್ತವರು ಒಪ್ಪದಿದ್ದಾಗ, ಅದು ನಿಜವಾಗಿಯೂ ನಿಮಗೆ ವ್ಯಥೆಯನ್ನುಂಟುಮಾಡಬಲ್ಲದು. ನೀವು ಏನು ಮಾಡತಕ್ಕದ್ದು? ಅವರ ಬಯಕೆಗಳನ್ನು ಕಡೆಗಣಿಸಿ, ನೀವು ನಿಮ್ಮ ವಿವಾಹದ ಯೋಜನೆಗಳೊಂದಿಗೆ ಮುಂದುವರಿಯಬೇಕೊ?a
ನೀವು ವಯಸ್ಕರಾಗಿದ್ದು, ಹೆತ್ತವರ ಒಪ್ಪಿಗೆಯಿಲ್ಲದೆ ವಿವಾಹವಾಗಲು ನ್ಯಾಯಸಮ್ಮತವಾಗಿ ಶಕ್ತರಾಗಿರುವಲ್ಲಿ ಹಾಗೆ ಮಾಡುವ ದುಷ್ಪ್ರೇರಣೆ ಬರಬಹುದು. ಆದರೂ, ಒಬ್ಬರ ಹೆತ್ತವರಿಗೆ ಮಾನಮರ್ಯಾದೆ ತೋರಿಸುವ ವಿಷಯದಲ್ಲಿ ಬೈಬಲು ಯಾವುದೇ ವಯೋಮಿತಿಯನ್ನು ಇಡುವುದಿಲ್ಲ. (ಜ್ಞಾನೋಕ್ತಿ 1:8) ಮತ್ತು ನೀವು ಅವರ ಅನಿಸಿಕೆಗಳನ್ನು ಕಡೆಗಣಿಸುವುದಾದರೆ, ಅವರೊಂದಿಗಿನ ನಿಮ್ಮ ಸಂಬಂಧಕ್ಕೆ ನೀವು ಶಾಶ್ವತವಾದ ಹಾನಿಯನ್ನು ಉಂಟುಮಾಡಸಾಧ್ಯವಿದೆ. ಅಲ್ಲದೆ, ನಿಮ್ಮ ವಿವಾಹವನ್ನು ವಿರೋಧಿಸಲು ನಿಮ್ಮ ಹೆತ್ತವರಿಗೆ ಸಮಂಜಸವಾದ ಕಾರಣಗಳಿರುವ ಸಾಧ್ಯತೆ—ಬಹುಶಃ ಸಂಭವವೂ ಇದೆ.
ಯಾವ ವಯಸ್ಸು ತೀರ ಚಿಕ್ಕ ವಯಸ್ಸಾಗಿದೆ?
ಉದಾಹರಣೆಗೆ, ವಿವಾಹವಾಗಲು ನೀವು ತೀರ ಚಿಕ್ಕವರೆಂದು ನಿಮ್ಮ ಹೆತ್ತವರು ಹೇಳುತ್ತಿದ್ದಾರೊ? ಒಳ್ಳೇದು, ಬೈಬಲು ವಿವಾಹಕ್ಕಾಗಿ ಯಾವುದೇ ಕನಿಷ್ಠ ವಯಸ್ಸನ್ನು ಇಡುವುದಿಲ್ಲ. ಆದರೆ ವಿವಾಹವಾಗುವ ಮುಂಚೆ, ಒಬ್ಬನು “ಯೌವನದ ಪರಿಪಕ್ವ ಸ್ಥಿತಿಯನ್ನು” (NW)—ಲೈಂಗಿಕ ಬಯಕೆಗಳು ತಮ್ಮ ಉಚ್ಚಬಿಂದುವಿನಲ್ಲಿರುವ, ಹರೆಯವನ್ನನುಸರಿಸಿ ಬರುವ ವರ್ಷಗಳನ್ನು—ಮೀರಿರಬೇಕೆಂದು ಅದು ಶಿಫಾರಸ್ಸುಮಾಡುತ್ತದೆ. (1 ಕೊರಿಂಥ 7:36) ಏಕೆ? ಏಕೆಂದರೆ ಇಂತಹ ಯುವ ಜನರು, ವೈವಾಹಿಕ ಜೀವನವನ್ನು ನಿರ್ವಹಿಸಲು ಅಗತ್ಯವಾಗಿರುವ ಭಾವನಾತ್ಮಕ ಪ್ರೌಢತೆ, ಆತ್ಮನಿಯಂತ್ರಣ, ಮತ್ತು ಆತ್ಮಿಕ ಗುಣಗಳನ್ನು ವಿಕಸಿಸಿಕೊಳ್ಳುವ ಆರಂಭಿಕ ಹಂತಗಳಲ್ಲಿದ್ದಾರೆ.—ಹೋಲಿಸಿ 1 ಕೊರಿಂಥ 13:11; ಗಲಾತ್ಯ 5:22, 23.
ಇಪ್ಪತ್ತು ವರ್ಷ ಪ್ರಾಯದ ಡೇಲ್ ವಿವಾಹವಾಗಲು ನಿರ್ಧರಿಸಿದಾಗ, ಅವನು ತನ್ನ ಹೆತ್ತವರ ವಿರೋಧದಿಂದ ನಿರುತ್ಸಾಹಗೊಂಡನು. ಅವನು ಹೇಳುವುದು, “ನಾನು ತೀರ ಚಿಕ್ಕವನೂ ಅನುಭವವಿಲ್ಲದವನೂ ಆಗಿದ್ದೆನೆಂದು ಅವರು ಹೇಳಿದರು. ನಾವು ಸಿದ್ಧರಾಗಿದ್ದೆವೆಂದು ಮತ್ತು ವಿವಾಹವಾದ ಬಳಿಕ ಕಲಿತುಕೊಳ್ಳಸಾಧ್ಯವೆಂದು ನೆನಸಿದೆವಾದರೂ, ನಾನು ಕೇವಲ ಉದ್ವೇಗದ ಮೇಲೆ ಕ್ರಿಯೆಗೈಯುತ್ತಿಲ್ಲ ಎಂಬುದನ್ನು ನನ್ನ ಹೆತ್ತವರು ಖಚಿತಪಡಿಸಿಕೊಳ್ಳಲು ಬಯಸಿದರು. ಅವರು ಅನೇಕ ಪ್ರಶ್ನೆಗಳನ್ನು ಕೇಳಿದರು. ನಾನು ಅನುದಿನದ ನಿರ್ಣಯಗಳು, ಹಣಕಾಸಿನ ವಿಷಯಗಳು, ಒಂದು ಕುಟುಂಬಕ್ಕಾಗಿ ಭೌತಿಕ, ಭಾವನಾತ್ಮಕ ಹಾಗೂ ಆತ್ಮಿಕ ವಿಧದಲ್ಲಿ ಒದಗಿಸುವುದರ ವಾಸ್ತವಿಕತೆಯನ್ನು ನಿರ್ವಹಿಸಲು ಸಿದ್ಧನಾಗಿದ್ದೆನೊ? ಒಬ್ಬ ಹೆತ್ತವನಾಗಲು ನಾನು ಸಿದ್ಧನಾಗಿದ್ದೆನೊ? ಸಂವಾದಮಾಡುವುದು ಹೇಗೆಂದು ನಾನು ನಿಜವಾಗಿಯೂ ಕಲಿತಿದ್ದೆನೊ? ಒಬ್ಬ ಸಂಗಾತಿಯ ಆವಶ್ಯಕತೆಗಳನ್ನು ನಾನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೆನೊ? ನಾನು ಮತ್ತೊಬ್ಬ ವಯಸ್ಕ ವ್ಯಕ್ತಿಯ ಪರಾಮರಿಕೆ ಮಾಡತೊಡಗುವ ಮೊದಲು, ಒಬ್ಬ ವಯಸ್ಕನೋಪಾದಿ ನನ್ನನ್ನೇ ಉತ್ತಮವಾಗಿ ತಿಳಿದುಕೊಳ್ಳಬೇಕೆಂದು ಅವರಿಗನಿಸಿತು.
“ನಾವು ಕಾಯಲು ಬಯಸದಿದ್ದರೂ, ಪ್ರೌಢರಾಗಲು ನಮಗೆ ಸಮಯವನ್ನು ಕೊಟ್ಟುಕೊಳ್ಳುವ ಸಲುವಾಗಿ ನಾವು ನಮ್ಮ ವಿವಾಹವನ್ನು ಮುಂದೂಡಿದೆವು. ನಾವು ಕೊನೆಯದಾಗಿ ವಿವಾಹವಾದಾಗ, ಹೆಚ್ಚು ಭದ್ರವಾದ ಬುನಾದಿಯೊಂದಿಗೆ ಹಾಗೂ ಪರಸ್ಪರವಾಗಿ ನೀಡಿಕೊಳ್ಳಲು ಹೆಚ್ಚಿನ ವಿಷಯಗಳೊಂದಿಗೆ ನಾವು ಆ ಸಂಬಂಧವನ್ನು ಪ್ರವೇಶಿಸಿದೆವು.”
ಧಾರ್ಮಿಕ ವ್ಯತ್ಯಾಸಗಳು ಚಿಂತೆಯ ವಿಷಯವಾಗಿರುವಾಗ
ತಾನು ಆರಿಸಿಕೊಂಡ ಧಾರ್ಮಿಕ ವಿಶ್ವಾಸದಲ್ಲಿ ಪಾಲ್ಗೊಳ್ಳದ ಒಬ್ಬ ಪುರುಷನಿಗಾಗಿ ಟೆರೀ ಪ್ರಣಯಾತ್ಮಕ ಭಾವನೆಗಳನ್ನು ವಿಕಸಿಸಿಕೊಂಡಾಗ, ಅವಳು ಗೋಪ್ಯವಾಗಿ ಅವನನ್ನು ಡೇಟ್ ಮಾಡಿದಳು. ವಿವಾಹವಾಗುವ ತಮ್ಮ ಯೋಜನೆಗಳನ್ನು ಪ್ರಕಟಿಸಿದ ತರುವಾಯ, ಅವಳ ತಾಯಿ ಆ ವಿವಾಹವನ್ನು ವಿರೋಧಿಸಿದರೆಂಬುದನ್ನು ಕಂಡು ಟೆರೀ ಬಹಳ ಕಳವಳಗೊಂಡಳು. “ನನ್ನ ಕುರಿತು ನನ್ನ ತಾಯಿಗೆ ಈ ರೀತಿಯ ಅನಿಸಿಕೆಯಾಗುವುದು ನನಗೆ ಇಷ್ಟವಿಲ್ಲ. ಆ ತಾಯಿ ಮಗಳ ಸಂಬಂಧ ಮುಂದುವರಿಯುತ್ತಾ ಇರಬೇಕೆಂದು ನಾನು ಬಯಸುತ್ತೇನೆ” ಎಂದು ಟೆರೀ ಪ್ರಲಾಪಿಸಿದಳು.
ಆದರೆ ಆ ಸಂಬಂಧವನ್ನು ನಿಜವಾಗಿಯೂ ತಡೆಗಟ್ಟುತ್ತಿದ್ದವರು ಯಾರು? ಟೆರೀಯ ತಾಯಿ ಪೀಡಿಸುವವರೂ ವಿಚಾರಹೀನರೂ ಆಗಿದ್ದರೊ? ಇಲ್ಲ, ಅವರು ಕ್ರೈಸ್ತರಿಗೆ ಕೊಡಲ್ಪಟ್ಟ “ಕರ್ತನಲ್ಲಿ ಮಾತ್ರ” (NW) ವಿವಾಹವಾಗಬೇಕೆಂಬ ಬೈಬಲಿನ ಸಲಹೆಯನ್ನು ಎತ್ತಿಹಿಡಿಯುತ್ತಿದ್ದರಷ್ಟೇ. (1 ಕೊರಿಂಥ 7:39) ವಾಸ್ತವದಲ್ಲಿ, ಬೈಬಲು ಆಜ್ಞಾಪಿಸುವುದು: “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ.” (2 ಕೊರಿಂಥ 6:14, 15) ಹಾಗೇಕೆ?
ಒಂದು ವಿಷಯವೇನೆಂದರೆ, ಒಂದು ಸಂತೋಷದ ಹಾಗೂ ಯಶಸ್ವಿಕರ ವಿವಾಹದಲ್ಲಿ ಧಾರ್ಮಿಕ ಸಾಮರಸ್ಯವು ಬಹಳ ಪ್ರಾಮುಖ್ಯವಾದ ಅಂಶವಾಗಿದೆ. ಅಂತರ್ಜಾತೀಯ ವಿವಾಹಗಳಿಗೆ ಸಾಮಾನ್ಯವಾಗಿರುವ ಒತ್ತಡಗಳು ಹಾಗೂ ಜಂಜಾಟಗಳು ಅನೇಕ ವೇಳೆ ವಿವಾಹವಿಚ್ಛೇದನಕ್ಕೆ ನಡೆಸುತ್ತವೆಂದು ಪರಿಣತರು ಹೇಳುತ್ತಾರೆ. ಆದರೆ ಹೆಚ್ಚು ಪ್ರಾಮುಖ್ಯವಾದ ಕಾರಣವು, ಒಬ್ಬರ ಧಾರ್ಮಿಕ ನಂಬಿಕೆಗಳ ಒಪ್ಪಂದಮಾಡಿಕೊಳ್ಳುವಂತೆ ಇಲ್ಲವೆ ಅವುಗಳನ್ನು ಸಂಪೂರ್ಣವಾಗಿ ತೊರೆದುಬಿಡುವಂತೆ ಒತ್ತಾಯಿಸಲ್ಪಡುವುದರ ಸಾಧ್ಯತೆಯೇ ಆಗಿದೆ. ಒಬ್ಬ ಅವಿಶ್ವಾಸಿ ಸಂಗಾತಿಯು ನಿಮ್ಮ ಆರಾಧನೆಯಲ್ಲಿ ತಲೆಹಾಕದಿದ್ದರೂ, ಅವನು ಅಥವಾ ಅವಳೊಂದಿಗೆ ನಿಮ್ಮ ಅತಿ ಆಳವಾದ ನಂಬಿಕೆಗಳನ್ನು ಹಂಚಿಕೊಳ್ಳಲು ಅಶಕ್ತರಾಗಿರುವುದರ ಮನೋವೇದನೆಯೊಂದಿಗೆ ನೀವು ಇನ್ನೂ ಜೀವಿಸಬೇಕಾಗುವುದು. ಇದು ವೈವಾಹಿಕ ಪರಮಾನಂದಕ್ಕಾಗಿರುವ ಸೂತ್ರದಂತೆ ತೋರುತ್ತದೊ?
ಆದುದರಿಂದ, ಟೆರೀಗೆ ಬಹಳ ಕಠಿನವಾದ ನಿರ್ಣಯವನ್ನು ಮಾಡಬೇಕಾಯಿತು. “ನಾನು ಯೆಹೋವ ದೇವರನ್ನು ಪ್ರೀತಿಸುತ್ತೇನಾದರೂ, ನನ್ನ ಬಾಯ್ಫ್ರೆಂಡನ್ನು ಕಳೆದುಕೊಳ್ಳಲು ನಾನು ಬಯಸುವುದಿಲ್ಲ” ಎಂದು ಟೆರೀ ಹೇಳಿದಳು. ನೀವು ಇದೂ ಬೇಕು ಅದೂ ಬೇಕು ಎಂದರೆ ಸಾಧ್ಯವಿಲ್ಲ. ನೀವು ದೇವರ ಮಟ್ಟಗಳ ಒಪ್ಪಂದಮಾಡಿಕೊಂಡು, ಆತನ ಅನುಗ್ರಹ ಹಾಗೂ ಆಶೀರ್ವಾದವನ್ನು ಇನ್ನೂ ಅನುಭವಿಸುತ್ತಾ ಇರಸಾಧ್ಯವಿಲ್ಲ.
ಆದರೆ ನಿಮ್ಮ ಹೆತ್ತವರು, ನೀವು ಒಬ್ಬ ನಿರ್ದಿಷ್ಟ ಜೊತೆ ಕ್ರೈಸ್ತನನ್ನು ವಿವಾಹವಾಗುವುದನ್ನು ವಿರೋಧಿಸಬಹುದು. ಒಬ್ಬ ವಿಶ್ವಾಸಿಯೊಂದಿಗೆ ಇಜ್ಜೋಡಾಗಸಾಧ್ಯವಿದೆಯೊ? ಹೌದು, ಆ ವ್ಯಕ್ತಿಯು ನಿಮ್ಮ ಆತ್ಮಿಕ ಗುರಿಗಳು ಇಲ್ಲವೆ ದೇವರಿಗೆ ಭಕ್ತಿ ತೋರಿಸುವ ವಿಷಯದಲ್ಲಿ ಪಾಲ್ಗೊಳ್ಳದಿರುವಲ್ಲಿ ಅದು ಸಾಧ್ಯ. ವಿಷಯವು ಹಾಗಿರುವಲ್ಲಿ, ಇಲ್ಲವೆ ಆ ವ್ಯಕ್ತಿಯು ಅವನ ಅಥವಾ ಅವಳ ಸಭೆಯಲ್ಲಿರುವ ಸಹೋದರರಿಂದ “ಒಳ್ಳೇ ಸಾಕ್ಷಿ”ಯನ್ನು ಪಡೆಯದಿರುವಲ್ಲಿ, ಆ ವ್ಯಕ್ತಿಯನ್ನು ನೀವು ವಿವಾಹವಾಗುವುದರ ಕುರಿತು ನಿಮ್ಮ ಹೆತ್ತವರು ಯೋಗ್ಯವಾಗಿಯೇ ಚಿಂತಿತರಾಗಿರಬಹುದು.—ಅ. ಕೃತ್ಯಗಳು 16:2.
ಜಾತೀಯ ಇಲ್ಲವೆ ಸಾಂಸ್ಕೃತಿಕ ವ್ಯತ್ಯಾಸಗಳ ಕುರಿತೇನು?
ಲಿನ್ ಎಂಬವಳ ಹೆತ್ತವರು ಒಂದು ಭಿನ್ನವಾದ ಕಾರಣಕ್ಕಾಗಿ ಆಕ್ಷೇಪಣೆಗಳನ್ನೆತ್ತಿದರು: ಅವಳು ಬೇರೆ ಜಾತಿಯ ಪುರುಷನನ್ನು ವಿವಾಹವಾಗಬಯಸಿದಳು. ಈ ವಿಷಯದಲ್ಲಿ ಬೈಬಲು ಏನು ಕಲಿಸುತ್ತದೆ? “ದೇವರು ಪಕ್ಷಪಾತಿಯಲ್ಲ” ಮತ್ತು “ಆತನು ಒಬ್ಬನಿಂದಲೇ ಎಲ್ಲಾ ಜನಾಂಗದವರನ್ನು ಹುಟ್ಟಿಸಿ”ದನೆಂದು ಅದು ನಮಗೆ ಹೇಳುತ್ತದೆ. (ಅ. ಕೃತ್ಯಗಳು 10:34, 35; 17:26) ಮಾನವರಿಗೆ ಒಂದು ಸಾಮಾನ್ಯ ಆರಂಭವಿದ್ದು, ದೇವರ ದೃಷ್ಟಿಯಲ್ಲಿ ಅವರು ಸರಿಸಮ ಯೋಗ್ಯತೆಯುಳ್ಳವರಾಗಿದ್ದಾರೆ.
ಹಾಗಿದ್ದರೂ, ಎಲ್ಲ ವಿವಾಹಿತ ದಂಪತಿಗಳು “ಶರೀರಸಂಬಂಧವಾಗಿ ಕಷ್ಟ” ಅನುಭವಿಸುವುದಾದರೂ, ಅಂತರ್ಜಾತೀಯ ದಂಪತಿಗಳು ಹೆಚ್ಚಿನ ಪಂಥಾಹ್ವಾನಗಳನ್ನು ಅನುಭವಿಸಬಹುದು. (1 ಕೊರಿಂಥ 7:28) ಏಕೆ? ಏಕೆಂದರೆ ಇಂದಿನ ದ್ವೇಷತುಂಬಿದ ಲೋಕದಲ್ಲಿರುವ ಅನೇಕ ಜನರು, ಜಾತಿಯ ವಿಷಯದಲ್ಲಿ ದೇವರ ದೃಷ್ಟಿಕೋನವನ್ನು ಸ್ವೀಕರಿಸುವುದಿಲ್ಲ. ಕೆಲವು ಪಾಶ್ಚಾತ್ಯ ದೇಶಗಳಲ್ಲಿ ಅಂತರ್ಜಾತೀಯ ವಿವಾಹಗಳು ಹೆಚ್ಚೆಚ್ಚು ಸಾಮಾನ್ಯವಾಗಿ ಪರಿಣಮಿಸಿರುವಾಗ, ಮಿಶ್ರ ದಂಪತಿಗಳು ಬಲವಾದ ಪೂರ್ವಾಗ್ರಹವನ್ನು ಎದುರಿಸುವ ಕ್ಷೇತ್ರಗಳು ಇನ್ನೂ ಇವೆ. ಆದುದರಿಂದ, ನೀವು ಇಂತಹ ಒತ್ತಡಗಳನ್ನು ನಿರ್ವಹಿಸಲು ಸಜ್ಜಿತರಾಗಿಲ್ಲವೆಂದು ನಿಮ್ಮ ಹೆತ್ತವರು ಭಯಪಡಬಹುದು.
“ಅದು ನಮಗೆ ಬಹಳ ಕಷ್ಟಕರವಾಗಿರುವುದೆಂದು ನನ್ನ ಹೆತ್ತವರು ನೆನಸಿದರು” ಎಂಬುದನ್ನು ಲಿನ್ ಒಪ್ಪಿಕೊಳ್ಳುತ್ತಾಳೆ. ವಿವೇಕಯುತವಾಗಿ, ಲಿನ್ ಅವರ ಅನಿಸಿಕೆಗಳಿಗೆ ಗೌರವ ತೋರಿಸಿ, ವಿವಾಹವಾಗುವ ವಿಷಯದಲ್ಲಿ ಆತುರಪಡಲಿಲ್ಲ. ಲಿನ್ನಳ ಹೆತ್ತವರು ಅವಳ ಪ್ರೌಢತೆಯನ್ನು ಗಮನಿಸಿದಂತೆ ಮತ್ತು ಅವಳು ಪ್ರೀತಿಸಿದಂತಹ ಪುರುಷನೊಂದಿಗೆ ಹೆಚ್ಚು ಪರಿಚಿತರಾದಂತೆ, ಈ ವಿವಾಹದ ಒತ್ತಡಗಳನ್ನು ಅವಳು ನಿರ್ವಹಿಸಬಲ್ಲಳೆಂದು ಅವರಿಗೆ ಕ್ರಮೇಣವಾಗಿ ತಕ್ಕಮಟ್ಟಿಗಿನ ಭರವಸೆಯ ಅನಿಸಿಕೆಯಾಗತೊಡಗಿತು. ಲಿನ್ ಹೇಳುವುದು: “ನಾವು ನಿಜವಾಗಿಯೂ ಒಟ್ಟಿಗೆ ಸಂತೋಷದಿಂದಿರಸಾಧ್ಯವೆಂದು ಅವರಿಗನಿಸಿದಾಗ, ನಮ್ಮ ಪರವಾಗಿಯೂ ಅವರು ಸಂತೋಷಿಸಿದರು.”
ಆದರೆ ಕೆಲವೊಮ್ಮೆ ವಿವಾದಾಂಶವು ಜಾತಿಯಲ್ಲ, ಸಂಸ್ಕೃತಿಯಾಗಿರುತ್ತದೆ. ಯಾರ ಜೀವನ ಶೈಲಿ, ನಿರೀಕ್ಷೆಗಳು, ಮತ್ತು ಆಹಾರ, ಸಂಗೀತ, ಹಾಗೂ ಮನೋರಂಜನೆಯಲ್ಲಿನ ಅಭಿರುಚಿಗಳು ನಿಮ್ಮವುಗಳಿಂದ ಬಹಳಷ್ಟು ಭಿನ್ನವಾಗಿವೆಯೊ, ಅಂತಹ ವ್ಯಕ್ತಿಯೊಂದಿಗೆ ಜೀವಿಸುತ್ತಾ ಆನಂದವನ್ನು ಅನುಭವಿಸುವುದನ್ನು ಕಟ್ಟಕಡೆಗೆ ನೀವು ಕಷ್ಟಕರವಾಗಿ ಕಂಡುಕೊಳ್ಳುವಿರೆಂದು ನಿಮ್ಮ ಹೆತ್ತವರು ಚಿಂತಿತರಾಗಿರಬಹುದು. ವಿಷಯವು ಏನೇ ಆಗಿರಲಿ, ಭಿನ್ನವಾದ ಕುಲ ಇಲ್ಲವೆ ಭಿನ್ನವಾದ ಸಂಸ್ಕೃತಿಯ ವ್ಯಕ್ತಿಯನ್ನು ವಿವಾಹವಾಗುವುದು ದೊಡ್ಡ ಪಂಥಾಹ್ವಾನಗಳನ್ನು ಪ್ರಸ್ತುತಪಡಿಸಬಲ್ಲದು. ಆ ಪಂಥಾಹ್ವಾನಗಳನ್ನು ನಿರ್ವಹಿಸಲು ನೀವು ನಿಜವಾಗಿಯೂ ಸಿದ್ಧರಾಗಿದ್ದೀರೊ?
ಹೆತ್ತವರ ವಿರೋಧವು ವಿಚಾರಹೀನವಾಗಿ ತೋರುವಾಗ
ಆದರೆ ತಮ್ಮ ವಿರೋಧದಲ್ಲಿ ನಿಮ್ಮ ಹೆತ್ತವರು ತೀರ ವಿಚಾರಹೀನರೆಂದು ನಿಮಗನಿಸುವುದಾದರೆ ಆಗೇನು? ಫೇತ್ ಎಂಬ ಹೆಸರಿನ ಒಬ್ಬ ಯುವ ಸ್ತ್ರೀಯು ತನ್ನ ತಾಯಿಯ ಕುರಿತು ಹೇಳುವುದು: “ತಾಯಿಯವರಿಗೆ ಹಲವಾರು ಬಾರಿ ವಿವಾಹವಿಚ್ಛೇದವಾಗಿದೆ. ನೀವು ವಿವಾಹವಾಗುವ ವ್ಯಕ್ತಿಯನ್ನು ನೀವು ನಿಜವಾಗಿಯೂ ಅರಿತುಕೊಳ್ಳುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆಂದು ಅವರು ಹೇಳುತ್ತಾರೆ. ವಿವಾಹದಲ್ಲಿ ನಾನು ಸಂತೋಷವನ್ನು ಕಂಡುಕೊಳ್ಳಲಾರೆ ಎಂಬ ವಿಷಯದಲ್ಲಿ ಅವರು ಮನಗಾಣಿಸಲ್ಪಟ್ಟಿದ್ದಾರೆ.” ಅನೇಕ ವೇಳೆ, ಸ್ವತಃ ಅಸಫಲ ವಿವಾಹವನ್ನು ಅನುಭವಿಸಿರುವ ಹೆತ್ತವರು ತಮ್ಮ ಮಕ್ಕಳ ವಿವಾಹವನ್ನು ಪಕ್ಷಪಾತರಹಿತವಾಗಿ ವೀಕ್ಷಿಸಲು ಶಕ್ತರಾಗಿರುವುದಿಲ್ಲ. ಕೆಲವು ವಿದ್ಯಮಾನಗಳಲ್ಲಿ, ಹೆತ್ತವರಿಗೆ ತಮ್ಮ ಮಕ್ಕಳ ವಿವಾಹವನ್ನು ವಿರೋಧಿಸಲು—ಮಕ್ಕಳ ಜೀವನದ ಮೇಲೆ ನಿಯಂತ್ರಣವನ್ನು ಕಾಪಾಡಿಕೊಳ್ಳುವ ಬಯಕೆಯಂತಹ ಸಂದೇಹಾಸ್ಪದವಾದ ಹೇತುಗಳಿರುತ್ತವೆ.
ನ್ಯಾಯಸಮ್ಮತ ವಿಚಾರಕ್ಕೆ ಕಿವಿಗೊಡಲು ನಿಮ್ಮ ಹೆತ್ತವರು ಅಸಿದ್ಧರಾಗಿರುವಲ್ಲಿ, ನೀವು ಏನು ಮಾಡಬಲ್ಲಿರಿ? ಯೆಹೋವನ ಸಾಕ್ಷಿಗಳಲ್ಲಿ ಕುಟುಂಬ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಸಭಾ ಹಿರಿಯರನ್ನು ನೆರವಿಗಾಗಿ ಕರೆಯಸಾಧ್ಯವಿದೆ. ಅವರು ಪಕ್ಷಪಾತಿಗಳಾಗಿರದೆ, ಕುಟುಂಬದ ಸದಸ್ಯರು ಪ್ರಶಾಂತವಾಗಿ, ಶಾಂತಿಭರಿತ, ಹಾಗೂ ಫಲದಾಯಕವಾದ ವಿಧದಲ್ಲಿ ವಿಷಯಗಳನ್ನು ಚರ್ಚಿಸಲು ಸಹಾಯ ಮಾಡಸಾಧ್ಯವಿದೆ.—ಯಾಕೋಬ 3:18.
ಶಾಂತಿಯನ್ನು ಹುಡುಕುವುದು
ನೀವು ವಿವಾಹವಾಗುವುದನ್ನು ನಿಮ್ಮ ಹೆತ್ತವರು ವಿರೋಧಿಸುವಂತೆ, ಹಣಕಾಸಿನ ಚಿಂತೆಗಳು ಇಲ್ಲವೆ ಒಬ್ಬ ಭಾವಿ ಸಂಗಾತಿಯ ವ್ಯಕ್ತಿತ್ವದಂತಹ ಇತರ ಅನೇಕ ಅಂಶಗಳು ಮಾಡಸಾಧ್ಯವೆಂಬುದು ನಿಶ್ಚಯ. ಏಡ್ಸ್ ಮತ್ತು ಇತರ ರತಿರವಾನಿತ ರೋಗಗಳ ಈ ಯುಗದಲ್ಲಿ, ನಿಮ್ಮ ಭಾವಿ ಪತಿಯು ಕ್ರೈಸ್ತನಾಗುವ ಮೊದಲು ಸ್ವೇಚ್ಛಾಚಾರದ ಜೀವನವನ್ನು ನಡೆಸಿರುವುದಾದರೆ, ನಿಮ್ಮ ಹೆತ್ತವರು ನಿಮ್ಮ ಆರೋಗ್ಯದ ಕುರಿತು ಯೋಗ್ಯವಾಗಿಯೇ ಚಿಂತಿತರಾಗಿರಬಹುದು.b
ನೀವು ನಿಮ್ಮ ಹೆತ್ತವರ ಮನೆಯಲ್ಲಿ ವಾಸಿಸುವಷ್ಟು ಸಮಯ, ನಿಮ್ಮ ಮೇಲೆ ಅವರಿಗಿರುವ ಅಧಿಕಾರವನ್ನು ನೀವು ಅಂಗೀಕರಿಸುವ ಹಂಗುಳ್ಳವರಾಗಿದ್ದೀರಿ. (ಕೊಲೊಸ್ಸೆ 3:20) ಆದರೆ ನೀವು ಸ್ವಾವಲಂಬಿಗಳಾಗಿದ್ದು, ನಿಮ್ಮ ಸ್ವಂತ ನಿರ್ಣಯಗಳನ್ನು ಮಾಡುವಷ್ಟು ದೊಡ್ಡವರಾಗಿದ್ದರೂ, ನಿಮ್ಮ ಹೆತ್ತವರ ಆತಂಕಗಳನ್ನು ಕೂಡಲೇ ತಳ್ಳಿಹಾಕಬೇಡಿರಿ. ಕಿವಿಗೊಡಲು ಸಿದ್ಧರಾಗಿರಿ. (ಜ್ಞಾನೋಕ್ತಿ 23:22) ವಿವಾಹವಾಗುವುದರ ಸಂಭಾವ್ಯ ಪರಿಣಾಮಗಳನ್ನು ಜಾಗರೂಕತೆಯಿಂದ ತೂಗಿನೋಡಿರಿ.—ಲೂಕ 14:28ನ್ನು ಹೋಲಿಸಿರಿ.
ಹಾಗೆ ಮಾಡಿದ ತರುವಾಯ, ನೀವು ಇನ್ನೂ ವಿವಾಹವಾಗಲು ಬಯಸುತ್ತೀರೆಂಬುದನ್ನು ನೀವು ನಿರ್ಧರಿಸಬಹುದು. ಸ್ವಾಭಾವಿಕವಾಗಿಯೇ, ಅಂತಹ ಒಂದು ನಿರ್ಣಯಕ್ಕಾಗಿ ನೀವು ಪೂರ್ಣ ಹೊರೆಯನ್ನು ಹೊತ್ತುಕೊಳ್ಳಬೇಕು. (ಗಲಾತ್ಯ 6:5) ನಿಮ್ಮ ಹೆತ್ತವರ ದೃಷ್ಟಿಕೋನವನ್ನು ಪರಿಗಣಿಸಲು ನೀವು ಸಕಲ ಪ್ರಯತ್ನವನ್ನು ಮಾಡಿರುವಲ್ಲಿ, ಮನಸ್ಸಿಲ್ಲದಿದ್ದರೂ ನಿಮ್ಮ ನಿರ್ಣಯವನ್ನು ಬೆಂಬಲಿಸಲು ಅವರು ಬಹುಶಃ ಪ್ರಚೋದಿಸಲ್ಪಡುವರು. ಆದರೆ ಅವರು ಆಕ್ಷೇಪಿಸುವುದನ್ನು ಮುಂದುವರಿಸಿದರೆ, ಅಸಮಾಧಾನಪಡದಂತೆ ಇಲ್ಲವೆ ಕೋಪಿಸಿಕೊಳ್ಳದಂತೆ ಪ್ರಯತ್ನಿಸಿರಿ. ನೆನಪಿನಲ್ಲಿಡಿ: ನಿಮ್ಮ ಹೆತ್ತವರು ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ನಿಮ್ಮ ಭಾವೀ ಸಂತೋಷದ ಕುರಿತು ಚಿಂತಿಸುತ್ತಾರೆ. ಅವರೊಂದಿಗೆ ಸಮಾಧಾನದಿಂದಿರಲು ಪ್ರಯತ್ನಿಸುತ್ತಾ ಇರಿ. ನಿಮ್ಮ ವಿವಾಹವನ್ನು ನೀವು ಸಫಲಗೊಳಿಸಿದಂತೆ, ಬಹುಶಃ ಅವರ ಮನೋಭಾವವು ಸೌಮ್ಯವಾಗುವುದು.
ಮತ್ತೊಂದು ಕಡೆಯಲ್ಲಿ, ನಿಮ್ಮ ಹೆತ್ತವರು ಹೇಳುವ ಪ್ರತಿಯೊಂದು ವಿಷಯವನ್ನು ನೀವು ನಿಜವಾಗಿಯೂ ಗಣನೆಗೆ ತೆಗೆದುಕೊಂಡು, ನಿಮ್ಮ ಹಾಗೂ ನೀವು ವಿವಾಹವಾಗಲು ಅಷ್ಟೊಂದು ಆತುರರಾಗಿರುವ ವ್ಯಕ್ತಿಯ ಕಡೆಗೆ ಒಂದು ನಿಷ್ಕಪಟ ನೋಟವನ್ನು ತೆಗೆದುಕೊಳ್ಳುವುದಾದರೆ, ನಿಮ್ಮ ಹೆತ್ತವರು ಏನು ಹೇಳುತ್ತಿದ್ದರೊ ಅದು ಸರಿಯೆಂಬ ಚಕಿತಗೊಳಿಸುವ ತೀರ್ಮಾನಕ್ಕೆ ನೀವು ಬರುವುದಾದರೆ ಆಶ್ಚರ್ಯಗೊಳ್ಳದಿರಿ.
[ಅಧ್ಯಯನ ಪ್ರಶ್ನೆಗಳು]
a ಈ ಲೇಖನದಲ್ಲಿರುವ ಮಾಹಿತಿಯು, ಯಾವ ದೇಶಗಳಲ್ಲಿ ಒಬ್ಬನು ತನ್ನ ಸ್ವಂತ ವಿವಾಹ ಸಂಗಾತಿಯನ್ನು ಆರಿಸಿಕೊಳ್ಳುವುದು ವಾಡಿಕೆಯಾಗಿದೆಯೊ ಅಲ್ಲಿರುವ ಯುವ ಜನರಿಗೆ ನಿರ್ದೇಶಿಸಲ್ಪಟ್ಟಿದೆ.
b ಮಾರ್ಚ್ 22, 1994ರ ಎಚ್ಚರ! ಪತ್ರಿಕೆಯ (ಇಂಗ್ಲಿಷ್) ಸಂಚಿಕೆಯಲ್ಲಿ “ಏಡ್ಸ್ ಇರುವವರಿಗೆ ಸಹಾಯಮಾಡುವುದು” ಎಂಬ ಲೇಖನವನ್ನು ನೋಡಿರಿ.
[ಪುಟ 32 ರಲ್ಲಿರುವ ಚಿತ್ರ]
ವಿವಾಹವಾಗಲು ನೀವು ತೀರ ಚಿಕ್ಕವರೆಂದು ನಿಮ್ಮ ಹೆತ್ತವರಿಗೆ ಅನಿಸಬಹುದು