ನಮ್ಮ ವಾಚಕರಿಂದ
ಡೌನ್ ಅಂಡರ್‌ನಲ್ಲಿನ ಜೀವನ “ಡೌನ್ ಅಂಡರ್‌ನಲ್ಲಿನ ಜೀವನ ಭಿನ್ನ” (ನವೆಂಬರ್ 8, 1997) ಎಂದು ಕರೆಯಲ್ಪಟ್ಟ, ಆಸ್ಟ್ರೇಲಿಯದ ಕುರಿತಾದ ಹೃತ್ಪೂರ್ವಕವಾದರೂ, ಸಜೀವವಾದ ಲೇಖನಕ್ಕಾಗಿ, ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಚಿತ್ತಾಕರ್ಷಕ ಹಾಗೂ ವರ್ಣರಂಚಿತವಾದ ದೇಶದ ಕುರಿತು ನಾನು ತುಂಬ ವಿಷಯಗಳನ್ನು ಓದಿದ್ದೇನಾದರೂ, ಯೆಹೋವನ ಅದ್ಭುತಕರವಾದ ಸೃಷ್ಟಿಗಾಗಿ ನಾವು ಆತನಿಗೆ ಎಷ್ಟು ಕೃತಜ್ಞರಾಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಲೇಖನವು ನನಗೆ ಸಹಾಯ ಮಾಡಿತು.
ಎಲ್. ಕೆ., ಜರ್ಮನಿ
ಕ್ಲೇಶಮುಕ್ತ ಪ್ರಮೋದವನ “ಕ್ಲೇಶಮುಕ್ತ ಪ್ರಮೋದವನ—ಯಾವಾಗ?” (ನವೆಂಬರ್ 8, 1997) ಎಂಬ ಲೇಖನಮಾಲೆಗಾಗಿ ನಾನು ತುಂಬ ಆಭಾರಿಯಾಗಿದ್ದೇನೆ. ನಾನು ಹುಟ್ಟುವುದಕ್ಕೆ ಮೊದಲೇ ನನ್ನ ಅಜ್ಜಿ ಸತ್ತುಹೋದರು. ಅವರು ಕ್ಯಾನ್ಸರ್‌ನಿಂದ ಸತ್ತರು. ಆದರೆ ಪ್ರಮೋದವನದಲ್ಲಿ, ಇನ್ನೆಂದಿಗೂ ಅಸ್ವಸ್ಥತೆಯಿರುವುದಿಲ್ಲ. ಪ್ರಮೋದವನದಲ್ಲಿ ನಾನು ಅವರನ್ನು ನೋಡಸಾಧ್ಯವಾಗುವಂತೆ ನಂಬಿಗಸ್ತಿಕೆಯಿಂದ ಉಳಿಯಲು ಈ ಲೇಖನವು ನನ್ನನ್ನು ಉತ್ತೇಜಿಸಿತು.
ಎಮ್. ಜೆ., ಟ್ರಿನಿಡಾಡ್
ಪ್ರಾಣಿ ನಿದ್ರಾವಸ್ಥೆ “ಪ್ರಾಣಿ ನಿದ್ರಾವಸ್ಥೆಯ ರಹಸ್ಯಗಳು” (ನವೆಂಬರ್ 8, 1997) ಎಂಬ ಲೇಖನಕ್ಕಾಗಿ ನನ್ನ ಗಣ್ಯತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ಅದು ವಿನೋದಕರವಾಗಿತ್ತು—ಆದರೆ ನಾನು ಸೃಷ್ಟಿಯ ಕುರಿತಾದ ಕೆಲವು ಅದ್ಭುತಕರ ವಿಚಾರಗಳನ್ನು ಕಲಿತುಕೊಂಡೆ.
ಜೆ. ಜಿ., ಪೋರ್ಟರೀಕೊ
ನನ್ನ ಬಳಿ ಒಂದು ಸಾಕು ಮೀನಿದೆ, ಮತ್ತು ಎಂದಾದರೂ ಮೀನು ನಿದ್ರೆಮಾಡುತ್ತದೋ ಎಂಬುದನ್ನು ತಿಳಿದುಕೊಳ್ಳಲು ನಾನು ಬಯಸುತ್ತಿದ್ದೆ. ಆದುದರಿಂದ, ಅದು ಸ್ತಬ್ಧವಾಗಿ ನಿಂತಿರುವುದನ್ನು ನಾನು ನೋಡುವಾಗ, ಅದು ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದೆ ಎಂಬುದನ್ನು ಕಂಡುಕೊಂಡು ನಾನು ತುಂಬ ಸಂತೋಷಪಟ್ಟೆ.
ಎ. ಪಿ. ಎಲ್. ಎಮ್., ಬ್ರೆಸಿಲ್
ನೋಯುವ ಪಾದಗಳು “ನೋಯುವ ಪಾದಗಳಿಗೆ ನೆರವು” (ನವೆಂಬರ್ 8, 1997) ಎಂಬ ನಿಮ್ಮ ಲೇಖನವು, ಮುಖ್ಯವಾಗಿ ಸ್ತ್ರೀಯರಿಗೋಸ್ಕರ ಬರೆಯಲ್ಪಟ್ಟಿರುವಂತೆ ತೋರಿತು. ಹಾಗಿದ್ದರೂ, ಈ ಲೇಖನವನ್ನು ಓದಿದ ಕೆಲವು ದಿನಗಳ ಬಳಿಕ, ತನ್ನ ಪಾದಗಳ ನೋಯುವಿಕೆಯ ಕುರಿತು ನನ್ನ ಗಂಡನು ನನಗೆ ಹೇಳಿದನು. ಏಕೆಂದರೆ ಆ ನೋವು ಅವನಿಗೆ ಏಳು ವರ್ಷಗಳಿಂದ ಇದೆ. ನಾನು ಈ ಲೇಖನದಲ್ಲಿ ಏನು ಓದಿದ್ದೆನೋ ಅದನ್ನು ಜ್ಞಾಪಿಸಿಕೊಂಡು, ನಾವು ಒಂದು ಚಪ್ಪಲಿ ಅಂಗಡಿಗೆ ಹೋದೆವು. ನೀವು ನಂಬುತ್ತೀರಾ—ಅವನಿಗೆ 9ರ ಸೈಸನ್ನು ಹಾಕುವ ಅಗತ್ಯವಿತ್ತು, ಆದರೆ ಅವನು 8ರ ಸೈಸನ್ನು ಹಾಕಿದ್ದನು! ಅವನಿಗೆ ಈಗಾಗಲೇ ನಿರಾಳವಾದ ಅನಿಸಿಕೆಯಾಗಿದೆ, ಎಚ್ಚರ! ಪತ್ರಿಕೆಗೆ ಉಪಕಾರ.
ಎಸ್. ಜೆ., ಅಮೆರಿಕ
ನಾನು ಬಹುಮಟ್ಟಿಗೆ ಇಡೀ ದಿನ ಕೆಲಸದ ಸ್ಥಳದಲ್ಲಿ ನಿಂತುಕೊಂಡಿರುತ್ತೇನೆ, ಮತ್ತು ನಾನು ಎತ್ತರ ಹಿಮ್ಮಡಿಯುಳ್ಳ ಚಪ್ಪಲಿಗಳನ್ನು ಮೆಟ್ಟಿಕೊಳ್ಳುವುದರಿಂದ ನನಗೆ ಸಮಸ್ಯೆಗಳು ಉಂಟಾಗತೊಡಗಿದ್ದವು. ಈ ತಿಂಗಳು ನಾನು ಒಬ್ಬ ಆಕ್ಸಿಲಿಯರಿ ಪಯನೀಯರಳೋಪಾದಿ (ಅಲ್ಪಕಾಲಿಕ ಸೌವಾರ್ತಿಕಳಾಗಿ) ಸೇವೆಮಾಡಿದೆ, ಈ ಲೇಖನದ ಫಲವಾಗಿ, ನಾನು ನನಗೆ ಹಿತಕರವೆನಿಸುವ ಮೂರು ಜೊತೆ ಚಪ್ಪಲಿಗಳನ್ನು ಕೊಂಡುಕೊಂಡೆ. ನಮ್ಮ ಆರೋಗ್ಯದಲ್ಲಿ ಆಸಕ್ತಿಯುಳ್ಳವರಾಗಿರುವುದಕ್ಕಾಗಿ ಮತ್ತು ನಮಗೆ ಮಾಹಿತಿಯನ್ನು ಒದಗಿಸುತ್ತಾ ಇರುವುದಕ್ಕಾಗಿ ಉಪಕಾರ.
ಸಿ. ಎಲ್., ಜರ್ಮನಿ
ಒಡಹುಟ್ಟಿದವರ ಸಮಸ್ಯೆಗಳು “ಯುವ ಜನರು ಪ್ರಶ್ನಿಸುವುದು . . . ಎಲ್ಲ ಗಮನವನ್ನು ನನ್ನ ಸಹೋದರನು ಗಿಟ್ಟಿಸಿಕೊಳ್ಳುವುದೇಕೆ?” (ನವೆಂಬರ್ 8, 1997) ಎಂಬ ಲೇಖನವು, ನಮಗೆ ಅಗತ್ಯವಿದ್ದ ಸಮಯಕ್ಕೆ ಸರಿಯಾಗಿ ಬಂದುಮುಟ್ಟಿತು. ಅಸಮಾನವಾದ ಉಪಚಾರವು ನಿಜವಾಗಿಯೂ ಅನ್ಯಾಯವಾಗಿಲ್ಲ ಎಂಬುದನ್ನು ಗ್ರಹಿಸಲು ಅದು ನಮಗೆ ಸಹಾಯ ಮಾಡಿತು. ನಮ್ಮ ಒಡಹುಟ್ಟಿದವರಿಗೆ ಹೆಚ್ಚಿನ ಗಮನವನ್ನು ಕೊಡುವುದಕ್ಕಾಗಿ ನಮ್ಮ ಹೆತ್ತವರಿಗೆ ಈಗ ಸಕಾರಣಗಳಿವೆ ಎಂಬುದನ್ನು ನಾವು ಅರ್ಥಮಾಡಿಕೊಂಡೆವು. ನಿಜವಾಗಿಯೂ ನಾವು ಈ ಲೇಖನದೊಂದಿಗೆ ಸಹಮತಿಸುತ್ತೇವೆ.
ಬಿ. ಕೆ., ಏಚ್. ಕೆ., ಮತ್ತು ಜಿ. ಯೂ. ಓ., ನೈಜೀರಿಯ
ಶಬ್ದ ಮಾಲಿನ್ಯ ನಾನು ಅನೇಕ ವರ್ಷಗಳ ವರೆಗೆ ಒಂದು ದೊಡ್ಡ ಕಾರ್ಖಾನೆಯಲ್ಲಿ ಕೆಲಸಮಾಡಿದ್ದೇನೆ, ಮತ್ತು ನನ್ನ ಜೊತೆಕೆಲಸಗಾರರಲ್ಲಿ ಕೆಲವರು ಹಾಗೂ ನಾನು ದೊಡ್ಡ ಶಬ್ದದ ಪರಿಣಾಮಗಳಿಂದ ಕಷ್ಟವನ್ನು ಅನುಭವಿಸಿದ್ದೇವೆ. ನಾನು ಡಿಸೆಂಬರ್ 8 1997ರ ಸಂಚಿಕೆಯನ್ನು (“ಶಬ್ದ—ಅತಿ ಹಾನಿಕರವಾದ ಮಲಿನಕಾರಕವೊ?”) ಕೆಲಸದ ಸ್ಥಳಕ್ಕೆ ಕೊಂಡೊಯ್ದೆ, ಮತ್ತು ಎಲ್ಲ ಕೆಲಸಗಾರರ ಆರೋಗ್ಯವನ್ನು ಸಂರಕ್ಷಿಸಲು ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.
ಆರ್. ಪಿ., ಇಟಲಿ
ನನ್ನ ನೆರೆಯವರು ಮಾಡುತ್ತಿದ್ದ ಶಬ್ದದ ಕಾರಣ ನಾನು ಅನೇಕ ವರ್ಷಗಳಿಂದ ಬೇಸರಗೊಂಡಿದ್ದೆ. ಅವನು ರಾತ್ರಿ ಬಹಳ ಹೊತ್ತಿನ ವರೆಗೆ ತನ್ನ ವ್ಯಾಪಾರವನ್ನು ನಡೆಸುತ್ತಾನೆ. ಕೆಲವೊಮ್ಮೆ ನಾನು ತುಂಬ ಕೋಪಗೊಂಡಿದ್ದೆ. ಆದರೆ ಶಬ್ದಕ್ಕೆ ಬಲಿಪಶುವಾದ ಅನೇಕ ಕ್ರೈಸ್ತ ಸಹೋದರ ಸಹೋದರಿಯರು ಇದ್ದಾರೆ, ಆದರೂ ಅವರು ಆತ್ಮಸಂಯಮವನ್ನು ಉಪಯೋಗಿಸುವ ಮೂಲಕ ಅದನ್ನು ನಿಭಾಯಿಸುತ್ತಿದ್ದಾರೆ ಎಂಬುದನ್ನು ತಿಳಿದು ನಾನು ಬಲಗೊಳಿಸಲ್ಪಟ್ಟೆ.
ಟಿ. ಓ., ಜಪಾನ್