ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g98 3/8 ಪು. 22-23
  • ವಿಸ್ಮಯಕರ ಬೇವು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿಸ್ಮಯಕರ ಬೇವು
  • ಎಚ್ಚರ!—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮರದೋಪಾದಿ ಅದರ ಪಾತ್ರ
  • ತಿಗಣೆಗಳು ಅದನ್ನು ದ್ವೇಷಿಸುತ್ತವೆ
  • “ಹಳ್ಳಿಯ ಔಷಧದಂಗಡಿ”
  • ಮರಣದ “ಚುಂಬನ”ದೊಂದಿಗೆ ಸೆಣಸಾಡುವುದು
    ಎಚ್ಚರ!—2000
ಎಚ್ಚರ!—1998
g98 3/8 ಪು. 22-23

ವಿಸ್ಮಯಕರ ಬೇವು

ನೈಜಿರೀಯದ ಎಚ್ಚರ! ಸುದ್ದಿಗಾರರಿಂದ

“ಹಳ್ಳಿಯ ಔಷಧದಂಗಡಿ”—ಭಾರತದಲ್ಲಿ ಜನರು ಬೇವಿನ ಮರವನ್ನು ಕರೆಯುವುದು ಹೀಗೆಯೇ. ಶತಮಾನಗಳಿಂದ ಆ ದೇಶದಲ್ಲಿರುವ ಜನರು, ವೇದನೆ, ಜ್ವರ, ಹಾಗೂ ಸೋಂಕುರೋಗಗಳಿಂದ ಉಪಶಮನವನ್ನು ಒದಗಿಸಲು ಬೇವಿನ ಮೇಲೆ ಭರವಸೆಯಿಟ್ಟಿದ್ದಾರೆ. ತಮ್ಮ ರಕ್ತವನ್ನು ಶುದ್ಧೀಕರಿಸಲು ಬೇವು ಸಹಾಯ ಮಾಡುವುದೆಂದು ನಂಬುತ್ತಾ, ಅನೇಕ ಹಿಂದೂಗಳು ಕೆಲವೊಂದು ಬೇವಿನ ಎಲೆಗಳನ್ನು ತಿನ್ನುವ ಮೂಲಕ ಪ್ರತಿಯೊಂದು ವರ್ಷವನ್ನು ಆರಂಭಿಸುತ್ತಾರೆ. ಜನರು ತಮ್ಮ ಹಲ್ಲುಗಳನ್ನು ಬೇವಿನ ಸಣ್ಣ ಕೊಂಬೆಗಳಿಂದಲೂ ಸ್ವಚ್ಛಮಾಡುತ್ತಾರೆ, ಚರ್ಮರೋಗಗಳಿಗೆ ಬೇವಿನ ಎಲೆಯ ರಸವನ್ನು ಲೇಪಿಸುತ್ತಾರೆ, ಮತ್ತು ಬೇವಿನ ಚಹವನ್ನು ಟಾನಿಕ್‌ನಂತೆಯೂ ಕುಡಿಯುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಬೇವಿನಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸಿದ್ದಾರೆ. ಹಾಗಿದ್ದರೂ, ಬೇವು—ಭೌಗೋಲಿಕ ಸಮಸ್ಯೆಗಳನ್ನು ಪರಿಹರಿಸಲಿಕ್ಕಾಗಿರುವ ಒಂದು ಮರ (ಇಂಗ್ಲಿಷ್‌) ಎಂಬ ಶೀರ್ಷಿಕೆಯ ಒಂದು ವೈಜ್ಞಾನಿಕ ವರದಿಯು ಎಚ್ಚರಿಸುವುದು: “ಸಾಧ್ಯತೆಗಳು ಬಹುಮಟ್ಟಿಗೆ ಅಂತ್ಯರಹಿತವಾಗಿ ಕಂಡರೂ, ಬೇವಿನ ಕುರಿತಾದ ಯಾವ ಸಂಗತಿಯೂ ಇನ್ನೂ ನಿಶ್ಚಿತವಾಗಿರುವುದಿಲ್ಲ. ಈ ಗಿಡ ಮತ್ತು ಅದರ ಸಂಭವನೀಯತೆಯ ಕುರಿತು ಬಹಳಷ್ಟು ಉತ್ಸಾಹಿಗಳಾಗಿರುವ ವಿಜ್ಞಾನಿಗಳು ಒಪ್ಪಿಕೊಳ್ಳುವುದೇನೆಂದರೆ, ಈ ಹಂತದಲ್ಲಿ ತಮ್ಮ ನಿರೀಕ್ಷಣೆಗಳನ್ನು ಬೆಂಬಲಿಸಲಿಕ್ಕಾಗಿರುವ ಪ್ರಮಾಣವು ಪರೀಕ್ಷಾರ್ಥಕವಾಗಿದೆ.” ಆದರೂ, ವರದಿಯು ಇದನ್ನೂ ಹೇಳುತ್ತದೆ: “ಎರಡು ದಶಕಗಳ ಸಂಶೋಧನೆಯು, ಈ ಅವ್ಯಕ್ತ ಜಾತಿಯು ಬಡ ಹಾಗೂ ಶ್ರೀಮಂತ ದೇಶಗಳಿಗೆ ಮಹತ್ತರವಾದ ಪ್ರಯೋಜನವನ್ನು ತರಬಹುದೆಂಬುದಕ್ಕೆ, ಅನೇಕ ಕ್ಷೇತ್ರದಲ್ಲಿ ಆಶಾದಾಯಕ ಪರಿಣಾಮಗಳನ್ನು ಪ್ರಕಟಪಡಿಸಿದೆ. ಅತ್ಯಂತ ಜಾಗರೂಕ ಸಂಶೋಧಕರಲ್ಲಿಯೂ ಕೆಲವರು, ‘ಬೇವು ಅದ್ಭುತಕರ ಗಿಡವೆಂದು ಕರೆಯಲ್ಪಡಲು ಅರ್ಹ’ವಾಗಿದೆ ಎಂದು ಹೇಳುತ್ತಿದ್ದಾರೆ.”

ಮರದೋಪಾದಿ ಅದರ ಪಾತ್ರ

ಉಷ್ಣವಲಯದಲ್ಲಿ ಕಂಡುಕೊಳ್ಳಲ್ಪಡುವ ಬೇವು, ಮಹಾಗನಿ ಮರಗಳ ಕುಟುಂಬಕ್ಕೆ ಸೇರಿದ ಮರವಾಗಿದೆ. ಅದು 30 ಮೀಟರುಗಳಷ್ಟು ಎತ್ತರವಾಗಿ ಬೆಳೆದು, 2.5 ಮೀಟರುಗಳಿಗಿಂತ ಹೆಚ್ಚು ಸುತ್ತಳತೆಯನ್ನು ಪಡೆಯಬಲ್ಲದು. ಅದು ಎಲೆರಹಿತವಾಗಿರುವುದು ವಿರಳವಾದ ಕಾರಣ, ಅದು ವರ್ಷಪೂರ್ತಿ ನೆರಳನ್ನು ಒದಗಿಸುತ್ತದೆ. ಅದು ತ್ವರಿತವಾಗಿ ಬೆಳೆದು, ಬಹಳ ಕಡಿಮೆ ಪೋಷಣೆಯನ್ನು ಕೇಳಿಕೊಂಡು, ಫಲವತ್ತಲ್ಲದ ಮಣ್ಣಿನಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ.

ಈ ಶತಮಾನದ ಆದಿಭಾಗದಲ್ಲಿ ಅದು ಪಶ್ಚಿಮ ಆಫ್ರಿಕಕ್ಕೆ ಪರಿಚಯಿಸಲ್ಪಟ್ಟಿದ್ದು, ನೆರಳನ್ನು ಒದಗಿಸಲು ಮತ್ತು ದಕ್ಷಿಣ ದಿಕ್ಕಿಗೆ ಸಹಾರಾ ಮರುಭೂಮಿಯ ಹರಡುವಿಕೆಯನ್ನು ನಿಲ್ಲಿಸಲಿಕ್ಕಾಗಿಯೇ. ಈ ಮರವನ್ನು ವನ್ಯಾಧಿಕಾರಿಗಳು, ಫಿಜಿ, ಮಾರಿಷಿಯಸ್‌, ಸೌದಿ ಅರೇಬಿಯ, ಮಧ್ಯ ಮತ್ತು ದಕ್ಷಿಣ ಅಮೆರಿಕ, ಹಾಗೂ ಕ್ಯಾರಿಬಿಯನ್‌ ದ್ವೀಪಗಳಲ್ಲಿಯೂ ನೆಟ್ಟಿದ್ದಾರೆ. ಅಮೆರಿಕದಲ್ಲಿ, ಆ್ಯರಿಸೋನದ ದಕ್ಷಿಣ ಕ್ಷೇತ್ರಗಳು, ಕ್ಯಾಲಿಫೋರ್ನಿಯ, ಮತ್ತು ಫ್ಲೋರಿಡದಲ್ಲಿ ಪ್ರಾಯೋಗಿಕ ನೆಲಗಳಿವೆ.

ಉಷ್ಣ ವಾತಾವರಣಗಳಲ್ಲಿ ವರ್ಷವಿಡೀ ನೆರಳನ್ನು ಒದಗಿಸುವುದರೊಂದಿಗೆ, ಬೇವನ್ನು ಸೌದೆಯಾಗಿ ಉಪಯೋಗಿಸಸಾಧ್ಯವಿದೆ. ಅಲ್ಲದೆ, ಅದರ ಗೆದ್ದಲು ನಿರೋಧಕ ಕಟ್ಟಿಗೆಯು ನಿರ್ಮಾಣ ಹಾಗೂ ಮರಗೆಲಸದಲ್ಲಿ ಉಪಯೋಗಕರವಾಗಿದೆ. ಹೀಗೆ, ಮರದೋಪಾದಿ ಅದರ ಉಪಯೋಗದ ಆಧಾರದ ಮೇಲೆ ಹೇಳುವುದಾದರೆ, ಬೇವು ಬಹಳ ಉಪಯೋಗಕರವಾಗಿದೆ. ಆದರೆ ಅದು ಕೇವಲ ಆರಂಭವಷ್ಟೆ.

ತಿಗಣೆಗಳು ಅದನ್ನು ದ್ವೇಷಿಸುತ್ತವೆ

ಬೇವಿನ ಎಲೆಗಳು ತೊಂದರೆಕೊಡುವ ಕೀಟಗಳನ್ನು ವಿಕರ್ಷಿಸುತ್ತವೆಂದು ಭಾರತದ ಜನರಿಗೆ ದೀರ್ಘಸಮಯದಿಂದ ಗೊತ್ತಿರುವ ಕಾರಣ, ಅವರು ಬೇವಿನ ಎಲೆಗಳನ್ನು, ಬೆಡ್‌ಗಳು, ಪುಸ್ತಕಗಳು, ಕಸದ ತೊಟ್ಟಿಗಳು, ಅಲಮಾರುಗಳು, ಮತ್ತು ಕಪಾಟುಗಳಲ್ಲಿಡುತ್ತಾರೆ. 1959ರಲ್ಲಿ ಒಬ್ಬ ಜರ್ಮನ್‌ ಕೀಟಶಾಸ್ತ್ರಜ್ಞ ಮತ್ತು ಅವನ ವಿದ್ಯಾರ್ಥಿಗಳು, ಸೂಡಾನ್‌ನಲ್ಲಿ ಭಾರಿ ಪ್ರಮಾಣದ ಮಿಡತೆಯ ಉಪದ್ರವವನ್ನು ಕಣ್ಣಾರೆ ಕಂಡ ತರುವಾಯ ಬೇವಿನ ಸಂಶೋಧನೆಯಲ್ಲಿ ಒಳಗೊಂಡರು. ಆ ಸಮಯದಲ್ಲಿ ಕೋಟ್ಯನುಕೋಟಿ ಮಿಡತೆಗಳು ಬೇವಿನ ಎಲೆಗಳನ್ನು ಬಿಟ್ಟು ಬೇರೆ ಎಲ್ಲ ಮರದ ಎಲೆಗಳನ್ನು ಕಬಳಿಸಿಬಿಟ್ಟವು.

ಆ ಸಮಯದಂದಿನಿಂದ, ವಿಜ್ಞಾನಿಗಳು ತಿಳಿದುಕೊಂಡಿರುವುದು ಏನೆಂದರೆ, ಬೇವಿನ ಜಟಿಲವಾದ ರಾಸಾಯನಿಕ ರಚನೆಯು, 200ಕ್ಕಿಂತಲೂ ಹೆಚ್ಚಿನ ಕೀಟ ಜಾತಿಗಳು, ಅಲ್ಲದೆ ಹಲವಾರು ಹುಳುಗಳು, ತಂತುವಿನಾಕಾರದ ಹುಳುಗಳು, ಬೂಷ್ಟು, ಬ್ಯಾಕ್ಟೀರಿಯ ಮತ್ತು ಹಲವಾರು ವಿಷಾಣುಗಳ ವಿರುದ್ಧವೂ ಪರಿಣಾಮಕಾರಿಯಾಗಿದೆ. ಒಂದು ಪ್ರಯೋಗದಲ್ಲಿ, ಸಂಶೋಧಕರು ಸೋಯಾಬೀನ್ಸ್‌ನ ಎಲೆಗಳನ್ನು ಜೀರುಂಡೆಗಳೊಂದಿಗೆ ಒಂದು ಪಾತ್ರೆಯಲ್ಲಿಟ್ಟರು. ಪ್ರತಿಯೊಂದು ಎಲೆಯ ಅರ್ಧಭಾಗವು ಬೇವಿನ ಸ್ವತಗಳಿಂದ ಸಿಂಪಡಿಸಲಾಗಿತ್ತು. ಜೀರುಂಡೆಗಳು ಸಿಂಪಡಿಸದಿದ್ದ ಪ್ರತಿಯೊಂದು ಎಲೆಯ ಅರ್ಧಭಾಗವನ್ನು ಕಬಳಿಸಿದವಾದರೂ, ಸಿಂಪಡಿಸಲ್ಪಟ್ಟ ಭಾಗಗಳನ್ನು ಮುಟ್ಟಲಿಲ್ಲ. ವಾಸ್ತವದಲ್ಲಿ, ಅವು ಹಸಿವಿನಿಂದ ಸತ್ತುಹೋದವು, ಆದರೆ ಸಿಂಪಡಿಸಲ್ಪಟ್ಟ ಎಲೆಗಳ ಚಿಕ್ಕ ತುಂಡನ್ನೂ ತಿನ್ನಲಿಲ್ಲ.

ಇಂತಹ ಪ್ರಯೋಗಗಳು, ಕೆಲವೊಂದು ಕೃತ್ರಿಮವಾಗಿ ಸಂಯೋಜಿಸಲ್ಪಟ್ಟ ಕೀಟನಾಶಕಗಳಿಗೆ, ಅಗ್ಗವಾದ, ವಿಷಕಾರಿಯಲ್ಲದ, ಮತ್ತು ಸುಲಭವಾಗಿ ತಯಾರಿಸಲ್ಪಟ್ಟ ಬದಲಿ ಕೀಟನಾಶಕಗಳನ್ನು ವಿಕಸಿಸುವ ಸಾಧ್ಯತೆಯನ್ನು ಸೂಚಿಸುತ್ತವೆ. ಉದಾಹರಣೆಗೆ ನಿಕರಾಗುವದಲ್ಲಿ, ರೈತರು ಪುಡಿಮಾಡಲ್ಪಟ್ಟ ಬೇವಿನ ಬೀಜವನ್ನು ನೀರಿನಲ್ಲಿ—ಒಂದು ಲೀಟರ್‌ ನೀರಿಗೆ 80 ಗ್ರ್ಯಾಮ್‌ಗಳಷ್ಟು ಬೀಜ—ಬೆರಸುತ್ತಾರೆ. ಪುಡಿಮಾಡಲ್ಪಟ್ಟ ಬೀಜವನ್ನು ಅವರು 12 ತಾಸುಗಳ ವರೆಗೆ ನೆನೆಹಾಕಿ, ಬೀಜಗಳನ್ನು ತೆಗೆದುಬಿಟ್ಟು, ತರುವಾಯ ಬೆಳೆಗಳ ಮೇಲೆ ಆ ನೀರನ್ನು ಸಿಂಪಡಿಸುತ್ತಾರೆ.

ಬೇವಿನ ಉತ್ಪಾದನೆಗಳು ಹೆಚ್ಚಿನ ಕೀಟಗಳನ್ನು ಒಂದೇ ಏಟಿಗೆ ಕೊಲ್ಲುವುದಿಲ್ಲ. ಬೇವಿನ ತುಂತುರು ದ್ರವಗಳು ಒಂದು ಕೀಟದ ಜೀವನ ಪ್ರಕ್ರಿಯೆಗಳನ್ನು ಬದಲಾಯಿಸಿಬಿಡುತ್ತವೆ, ಹೀಗೆ ಕಟ್ಟಕಡೆಗೆ ಅದಕ್ಕೆ ಇನ್ನುಮುಂದೆ ತಿನ್ನಲು, ಸಂತಾನವೃದ್ಧಿಮಾಡಲು, ಇಲ್ಲವೆ ರೂಪಾಂತರ ಮಾಡಲು ಸಾಧ್ಯವಿರುವುದಿಲ್ಲ. ಬೇವಿನ ಉತ್ಪಾದನೆಗಳು ತಿಗಣೆಗಳ ವಿರುದ್ಧ ಕಾರ್ಯಮಾಡುತ್ತವಾದರೂ, ಅವು ಪಕ್ಷಿಗಳಿಗೆ, ಬಿಸಿರಕ್ತದ ಪ್ರಾಣಿಗಳಿಗೆ, ಇಲ್ಲವೆ ಮನುಷ್ಯರಿಗೆ ಹಾನಿಕಾರಕವಾಗಿರುವಂತೆ ತೋರುವುದಿಲ್ಲ.

“ಹಳ್ಳಿಯ ಔಷಧದಂಗಡಿ”

ತರುವಾಯ, ಮಾನವರಿಗಾಗಿರುವ ಬೇರೆ ಪ್ರಯೋಜನಗಳೂ ಇವೆ. ಬೀಜಗಳು ಮತ್ತು ಎಲೆಗಳಲ್ಲಿ, ಪೂತಿನಾಶಕ, ವೈರಸ್‌ ನಿರೋಧಕ ಮತ್ತು ಬೂಷ್ಟುವಿರೋಧಿ ಚಟುವಟಿಕೆಯನ್ನು ಪ್ರದರ್ಶಿಸುವ ಸಂಯುಕ್ತ ವಸ್ತುಗಳಿವೆ. ಬೇವು, ಊತ, ಅತ್ಯುದ್ವೇಗ, ಮತ್ತು ಹುಣ್ಣುಗಳ ವಿರುದ್ಧ ಹೋರಾಡಲು ಶಕ್ತವಾಗಿರಬಹುದೆಂಬ ಸೂಚನೆಗಳಿವೆ. ಬೇವಿನ ಸ್ವತಗಳಿಂದ ತಯಾರಿಸಿದ ಔಷಧಗಳು, ಮಧುಮೂತ್ರ ರೋಗ ಮತ್ತು ಮಲೇರಿಯದ ವಿರುದ್ಧ ಹೋರಾಡುತ್ತವೆಂದು ಹೇಳಲಾಗಿದೆ. ಇತರ ಸಂಭಾವ್ಯ ಪ್ರಯೋಜನಗಳಲ್ಲಿ ಈ ಮುಂದಿನವುಗಳು ಸೇರಿವೆ:

ಕೀಟ ನಿವಾರಕಗಳು. ಸ್ಯಲನಿನ್‌ ಎಂಬುದಾಗಿ ಕರೆಯಲ್ಪಡುವ ಬೇವಿನ ಒಂದು ಪದಾರ್ಥವು, ಕಚ್ಚುವ ಕೆಲವು ಕೀಟಗಳನ್ನು ಶಕ್ತಿಶಾಲಿಯಾಗಿ ವಿಕರ್ಷಿಸುತ್ತದೆ. ಬೇವಿನ ಎಣ್ಣೆಯಿಂದ ತಯಾರಿಸಲ್ಪಟ್ಟ ನೊಣ ಹಾಗೂ ಸೊಳ್ಳೆ ನಿವಾರಕವು ಈಗಾಗಲೇ ಮಾರುಕಟ್ಟೆಯಲ್ಲಿದೆ.

ದಂತದ ಆರೋಗ್ಯ. ಕೋಟಿಗಟ್ಟಲೆ ಭಾರತೀಯರು ಪ್ರತಿ ಬೆಳಗ್ಗೆ ಬೇವಿನ ಒಂದು ಸಣ್ಣ ಕೊಂಬೆಯನ್ನು ಮುರಿದು, ಅದನ್ನು ಮೃದುಗೊಳಿಸಲು ಅದರ ಕೊನೆಯನ್ನು ಅಗಿದು, ತದನಂತರ ಅವನ್ನು ತಮ್ಮ ಹಲ್ಲು ಹಾಗೂ ಒಸಡುಗಳನ್ನು ಉಜ್ಜಲು ಉಪಯೋಗಿಸುತ್ತಾರೆ. ಇದು ಪ್ರಯೋಜನಕಾರಿಯಾಗಿದೆ ಎಂದು ಸಂಶೋಧನೆಯು ತೋರಿಸಿದೆ, ಏಕೆಂದರೆ ತೊಗಟೆಯಲ್ಲಿರುವ ಸಂಯುಕ್ತಗಳು ಪ್ರಬಲವಾದ ಪೂತಿನಾಶಕವಾಗಿವೆ.

ಗರ್ಭನಿರೋಧಕ ಗುಣಗಳು. ಬೇವಿನ ಎಣ್ಣೆಯು ಶಕ್ತಿಶಾಲಿ ವೀರ್ಯನಾಶಕವಾಗಿದ್ದು, ಪ್ರಯೋಗಾಲಯದ ಪ್ರಾಣಿಗಳಲ್ಲಿ ಜನನ ದರವನ್ನು ಕಡಿಮೆಗೊಳಿಸುವುದರಲ್ಲಿ ಪರಿಣಾಮಕಾರಿಯಾಗಿ ರುಜುವಾಗಿದೆ. ಬೇವಿನ ಸಂಯುಕ್ತಗಳಿಂದ ಪುರುಷರಿಗಾಗಿ ಜನನನಿಯಂತ್ರಣದ ಮಾತ್ರೆಗಳನ್ನೂ ಮಾಡಸಾಧ್ಯವೆಂದು, ಕೋತಿಗಳೊಂದಿಗಿನ ಪ್ರಯೋಗಗಳು ತೋರಿಸುತ್ತವೆ.

ಸ್ಪಷ್ಟವಾಗಿಯೇ, ಬೇವು ಒಂದು ಸಾಧಾರಣವಾದ ಮರವಾಗಿರುವುದಿಲ್ಲ. ಆ ಮರದ ಕುರಿತು ಸಕಲ ವಿಷಯವೂ ಗೊತ್ತಿರದಿದ್ದರೂ, ಬೇವು, ಕೀಟನಿಯಂತ್ರಣದಲ್ಲಿ ಸುಧಾರಣೆಯನ್ನು ತರುವ, ಆರೋಗ್ಯವನ್ನು ಪ್ರವರ್ಧಿಸುವ, ಮರಗಳನ್ನು ಬೆಳೆಸುವ ಕಾರ್ಯದಲ್ಲಿ ನೆರವು ನೀಡುವ, ಮತ್ತು ಬಹುಶಃ ಹೆಚ್ಚಿನ ಜನಸಂಖ್ಯೆಯನ್ನು ನಿಯಂತ್ರಿಸುವ ವಿಷಯದಲ್ಲಿ ಮಹಾನ್‌ ನಿರೀಕ್ಷೆಗಳನ್ನು ತೋರಿಸುತ್ತದೆ. ಜನರು ವಿಸ್ಮಯಕರವಾದ ಬೇವನ್ನು “ಮಾನವಜಾತಿಗೆ ದೇವರ ಕೊಡುಗೆ” ಎಂದು ಕರೆದಿರುವಲ್ಲಿ ಯಾವ ಆಶ್ಚರ್ಯವೂ ಇರುವುದಿಲ್ಲ!

[ಪುಟ 23 ರಲ್ಲಿರುವ ಚಿತ್ರ]

ಬೇವು, ಒಳಸೇರಿಕೆಯಲ್ಲಿ ಬೇವಿನ ಎಲೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ