ಒಂದು ಅಪೂರ್ವವಾದ ಪುನರ್ಮಿಲನ
ಬ್ರಿಟನಿನ ಎಚ್ಚರ! ಸುದ್ದಿಗಾರರಿಂದ
ಇಸವಿ 1945ರಲ್ಲಿ ಬ್ರೂಸ್‌ನ ತಾಯಿಯಾದ ಮರೀ, ಅವನನ್ನು ಕೊನೆಯ ಬಾರಿ ನೋಡಿದಾಗ ಅವನು ಎರಡು ವರ್ಷ ಪ್ರಾಯದವನಾಗಿದ್ದನು. ಮರೀಯ ವಿವಾಹ ವಿಚ್ಛೇದವನ್ನು ಅನುಸರಿಸಿ, ಬ್ರೂಸ್‌ನ ತಂದೆಗೆ ಅವನ ಕಾನೂನುರೀತ್ಯ ರಕ್ಷಣೆಯ ಜವಾಬ್ದಾರಿಯು ವಹಿಸಲ್ಪಟ್ಟಿತು. ಮರೀ ತನ್ನ ಸ್ವಾಭಾವಿಕ ಭಾವನೆಗಳನ್ನು ನಿಗ್ರಹಿಸಿಕೊಳ್ಳುತ್ತಾ, ಬ್ರೂಸ್, ಅವನ ತಂದೆ ಹಾಗೂ ಅವನ ತಂದೆಯ ಹೊಸ ಹೆಂಡತಿಯಿಂದ—ಅವಳಿಂದ ಯಾವುದೇ ಭಾವನಾತ್ಮಕ ಸೆಳೆತವಿಲ್ಲದೆ—ಬೆಳೆಸಲ್ಪಡುವುದು ತನ್ನ ಮಗನ ಒಳಿತಿಗಾಗಿರುವುದೆಂದು ನಿರ್ಣಯಿಸಿದಳು. ತರುವಾಯ, ಅವಳು ಬ್ರೂಸ್‌ನೊಂದಿಗಿನ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಂಡಳು.
ಕೆಲವು ವರ್ಷಗಳ ತರುವಾಯ, ಮರೀ ಪುನಃ ವಿವಾಹವಾಗಿ ಮತ್ತೊಬ್ಬ ಮಗನನ್ನು ಪಡೆದಳಾದರೂ, ಅವಳು ಇನ್ನೂ ಬ್ರೂಸ್‌ನ ಬಗ್ಗೆ ಆಲೋಚಿಸುತ್ತಿದ್ದಳು. ಅವನೆಲ್ಲಿರಬಹುದು? ಅವನು ಯಾವ ಸ್ಥಿತಿಯಲ್ಲಿರಬಹುದು?
1976ರಲ್ಲಿ ಬ್ರೂಸ್‌ನ ತಂದೆ ತೀರಿಕೊಂಡಾಗ, ಮರೀ ಅವನ ಶವಸಂಸ್ಕಾರಕ್ಕೆ ಹೋದಳು. ಮೂವತ್ತರ ಪ್ರಾಯದ, ಒಬ್ಬ ಸುಂದರ ಯುವ ಪುರುಷನೋಪಾದಿ ಬ್ರೂಸ್, ತನ್ನ ಮಲತಾಯಿಯೊಂದಿಗೆ ಅಲ್ಲಿದ್ದನು. ಬ್ರೂಸ್ ತನ್ನ ಮಲತಾಯಿಯನ್ನು ತನ್ನ ಸ್ವಂತ ತಾಯಿಯಾಗಿ ಭಾವಿಸಿದ್ದನೆಂದು ಮರೀ ಇನ್ನೂ ನಂಬಿದ ಕಾರಣ, ವಿಶೇಷವಾಗಿ ಇಂತಹ ಸಮಯದಲ್ಲಿ ತಾನು ಯಾರೆಂದು ಹೇಳಿಕೊಳ್ಳುವುದು ದಯಾರಹಿತವಾಗಿರುವುದೆಂದು ಅವಳು ನೆನಸಿದಳು. ಬ್ರೂಸ್ ಅವನ ತಂದೆಯ ಪುನರ್‌ವಿವಾಹದ ಒಡನೆಯೇ ಅವರಿಂದ ತಿರಸ್ಕರಿಸಲ್ಪಟ್ಟಿದ್ದನೆಂದು ಮತ್ತು ಅವನ ಅಜ್ಜಿಯಿಂದ ಬೆಳೆಸಲ್ಪಟ್ಟಿದ್ದನೆಂದು ಮರೀಗೆ ಗೊತ್ತಿರುತ್ತಿದ್ದರೆ, ಅವಳು ಭಿನ್ನವಾಗಿ ವರ್ತಿಸುತ್ತಿದ್ದಳು.
ಸುಮಾರು ಈ ಸಮಯದಷ್ಟಕ್ಕೆ, ಮರೀಯು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದ ಸೂ ಎಂಬ ಸ್ತ್ರೀಯನ್ನು ಸಂಧಿಸಿ, ಒಂದು ಮನೆ ಬೈಬಲ್ ಅಧ್ಯಯನಕ್ಕೆ ಕೂಡಲೆ ಸಮ್ಮತಿಸಿದಳು. ಅದೇ ಸಮಯಕ್ಕೆ, ಕಾಕತಾಳೀಯವಾಗಿ, ಬ್ರೂಸ್ ಮತ್ತು ಅವನ ಹೆಂಡತಿ, ಸೂಳ ಗಂಡನಾದ ಆ್ಯಲನ್‌ನೊಂದಿಗೆ ಬೈಬಲನ್ನು ಅಭ್ಯಾಸಿಸತೊಡಗಿದರು. ಆದರೆ ಬೇಗನೆ, ಆರೋಗ್ಯ ಸಮಸ್ಯೆಗಳ ಕಾರಣ, ಮರೀ ತನ್ನ ಅಧ್ಯಯನವನ್ನು ನಿಲ್ಲಿಸಿ, ಬೇರೆ ಕಡೆಗೆ ಸ್ಥಳಾಂತರಿಸಿದಳು.
ಮರೀ 1995ರಲ್ಲಿ ಪುನಃ ಯೆಹೋವನ ಸಾಕ್ಷಿಗಳಿಂದ ಸಂಪರ್ಕಿಸಲ್ಪಟ್ಟಳು. ಅವಳು ತನ್ನ ಬೈಬಲ್ ಅಧ್ಯಯನವನ್ನು ಪುನಃ ಆರಂಭಿಸಿ, ತೀವ್ರವಾದ ಪ್ರಗತಿಯನ್ನು ಮಾಡಿದಳು. ದೀಕ್ಷಾಸ್ನಾನವನ್ನು ಅವಳು ಸಮೀಪಿಸಿದಂತೆ, ಬ್ರೂಸ್‌ನ ಕುರಿತು ಮರೀ ಒಬ್ಬ ಕ್ರೈಸ್ತ ಹಿರಿಯನಲ್ಲಿ ಹೇಳಿಕೊಂಡಳು. ಆ ಹಿರಿಯನು ಬ್ರೂಸ್‌ನ ಕುರಿತು ವಿಚಾರಿಸಿ, ಬ್ರೂಸ್ ಮತ್ತು ಅವನ ಕುಟುಂಬವು ಯೆಹೋವನ ಸಾಕ್ಷಿಗಳಾಗಿರುವುದು ಮಾತ್ರವಲ್ಲ, ಮರೀಯು ವಾಸವಾಗಿದ್ದ ಅದೇ ಪಟ್ಟಣದ ಒಂದು ಸಭೆಯಲ್ಲೇ ಬ್ರೂಸ್ ಒಬ್ಬ ಹಿರಿಯನೂ ಆಗಿದ್ದನೆಂದು ತಿಳಿದುಕೊಂಡನು!
ಬ್ರೂಸ್‌ನ ಸಭೆಯಲ್ಲಿದ್ದ ಇತರ ಹಿರಿಯರು ಚಿಂತಾಗ್ರಸ್ತರಾಗಿದ್ದರು. ಬ್ರೂಸ್‌ಗೆ, ಮುಂದಿನ ವಿಶೇಷ ಸಮ್ಮೇಳನ ದಿನದಂದು ಅವನ ತಾಯಿ ದೀಕ್ಷಾಸ್ನಾನ ಪಡೆದುಕೊಳ್ಳಲಿದ್ದಳೆಂದು ಅವರು ಹೇಳಿದರೆ, ಅವನು ಹೇಗೆ ಪ್ರತಿಕ್ರಿಯಿಸುವನು? ಅವರು ಜೀವಂತವಾಗಿದ್ದಾರೆ ಎಂಬುದಾದರೂ ಅವನಿಗೆ ಗೊತ್ತಿತ್ತೊ? ಆದರೆ, ನಿಜಾಂಶಗಳನ್ನು ತಿಳಿದುಕೊಂಡ ಕೂಡಲೆ, ಬ್ರೂಸ್ ಮರೀಯನ್ನು ಸಂಧಿಸಲು ತನ್ನ ಕುಟುಂಬದೊಂದಿಗೆ ಧಾವಿಸಿದನು. ಬ್ರೂಸ್ ತನ್ನ ತಾಯಿಯನ್ನು ಅಪ್ಪಿಕೊಂಡಂತೆ, ಅವನ ಸಾಂತ್ವನದಾಯಕ ಮಾತುಗಳು ಇವುಗಳಾಗಿದ್ದವು: “ಸತ್ಯದಲ್ಲಿ ಗತಕಾಲವು ಪ್ರಾಮುಖ್ಯವಾದದ್ದಲ್ಲ, ಪ್ರಾಮುಖ್ಯವಾಗಿರುವುದು ಭವಿಷ್ಯತ್ಕಾಲವೇ!”
ಮಾರ್ಚ್ 1996ರಲ್ಲಿ, ಆಗ 78 ವರ್ಷ ಪ್ರಾಯದವಳಾಗಿದ್ದ ಮರೀ, ಇಂಗ್ಲೆಂಡ್‌ನ ಯೆಹೋವನ ಸಾಕ್ಷಿಗಳ ಈಸ್ಟ್ ಪೆನೈನ್ ಸಮ್ಮೇಳನ ಗೃಹದಲ್ಲಿ ದೀಕ್ಷಾಸ್ನಾನ ಪಡೆದುಕೊಂಡಳು—ಬ್ರೂಸ್ ಅವಳಿಗೆ ದೀಕ್ಷಾಸ್ನಾನ ಮಾಡಿಸಿದನು. ತನ್ನ ತಾಯಿಯನ್ನು ಒಬ್ಬ ಆತ್ಮಿಕ ಸಹೋದರಿಯೋಪಾದಿ ಪಡೆದುಕೊಳ್ಳಲು ಬ್ರೂಸ್ ಎಷ್ಟು ರೋಮಾಂಚಗೊಂಡಿದ್ದನು!
[ಪುಟ 24 ರಲ್ಲಿರುವ ಚಿತ್ರ]
ತನ್ನ ತಾಯಿಯೊಂದಿಗೆ ಬ್ರೂಸ್