ಜಗತ್ತನ್ನು ಗಮನಿಸುವುದು
ಗ್ರೀಸ್‌ನಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಪುನರ್‌ಪರಿಗಣಿಸಲ್ಪಟ್ಟದ್ದು
“ಇತ್ತೀಚೆಗೆ [ಗ್ರೀಕ್] ಸರಕಾರವು, ಇನ್ನೂ ನಿರ್ಣಯಿಸಲ್ಪಟ್ಟಿರದ ಸಾಂವಿಧಾನಿಕ ತಿದ್ದುಪಡಿಯನ್ನೂ ಸೇರಿಸಿ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನೊಂದಿಗೆ ಸಂಬಂಧಿಸಿರುವ ವಿಷಯಗಳ ಕುರಿತು ಚಿಂತಿತಗೊಂಡಿದೆ ಎಂದು ತೋರುತ್ತದೆ” ಎಂಬುದಾಗಿ ಅಥೇನ್ಯದ ವಾರ್ತಾಪತ್ರಿಕೆಯಾದ ಟೊ ವೀಮ ವರದಿಸುತ್ತದೆ. “ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸುವ ಕಾನೂನಿನ ಚೌಕಟ್ಟನ್ನು, ಮತಾಂತರವನ್ನು ಒಂದು ಕ್ರಿಮಿನಲ್ ಅಪರಾಧವನ್ನಾಗಿ ಮಾಡುವ ನಿರಂಕುಶಾಧಿಕಾರಿ ಮೆಟಾಕ್ಸಾಸ್‌ನ ನಿಯಮಗಳನ್ನು ಮತ್ತು ಆರ್ತೊಡಾಕ್ಸರಲ್ಲದ ಧಾರ್ಮಿಕ ಅಲ್ಪಸಂಖ್ಯಾತರು, ಚರ್ಚುಗಳನ್ನು ಹಾಗೂ ಸಭೆಯಾಗಿ ಕೂಡುವ ಸ್ಥಳಗಳನ್ನು ಕಟ್ಟಲು ಅನುಮತಿಸುವ ಷರತ್ತುಗಳನ್ನು ಪುನರ್‌ಪರಿಶೀಲಿಸುವ ಒಂದು ಅನಧಿಕೃತ ಕಮಿಟಿಯನ್ನು ವಿದೇಶಿ ವ್ಯವಹಾರಗಳ ಖಾತೆಯೊಳಗೆ ರಚಿಸಲಾಗಿದೆ.” ಗ್ರೀಸಿನಲ್ಲಿರುವ ಯೆಹೋವನ ಸಾಕ್ಷಿಗಳು, ಯೂರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯದ ಮುಂದೆ ಹಲವಾರು ಕಾನೂನು ಮೊಕದ್ದಮೆಗಳನ್ನು ಮುಂದಿಟ್ಟದ್ದರಿಂದ, ಈ ಪ್ರಯತ್ನವು ಮುಖ್ಯವಾಗಿ ಮಾಡಲ್ಪಟ್ಟಿತು.
ವಿಶ್ವದಲ್ಲಿಯೇ ಅತ್ಯಂತ ನೀಳ ಕೂದಲು
ಉತ್ತರ ಥೈಲ್ಯಾಂಡಿನಲ್ಲಿರುವ ಹಮಂಗ್ ಬುಡಕಟ್ಟಿನವನಾದ, 85 ವರ್ಷ ಪ್ರಾಯದ ಹೂ ಸಾಟೀಯೋ, ತನ್ನ ಕೂದಲನ್ನು ಸುಮಾರು 70 ವರ್ಷಗಳಿಂದ ಕತ್ತರಿಸಿಲ್ಲ. “ನಾನು 18 ವರ್ಷ ಪ್ರಾಯದವನಾಗಿದ್ದಾಗ, ಕೂದಲನ್ನು ಕತ್ತರಿಸಿದೆ, ಆದರೆ ನಾನು ಬಹಳ ಅಸ್ವಸ್ಥನಾದೆ” ಎಂದು ಹೂ ಹೇಳಿದನು. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ತೀರ್ಪುಗಾರನು ಇತ್ತೀಚೆಗೆ ಅಳತೆಮಾಡಿದಾಗ, ಅವನ ಕೂದಲು 520 ಸೆಂಟಿಮೀಟರುಗಳಷ್ಟಿತ್ತು. ಅದಕ್ಕೆ ಸಂಬಂಧಿಸಿದ ಪ್ರೆಸ್, ಆ ವ್ಯಕ್ತಿಯ ಕೂದಲು ತಾನೇ ವಿಶ್ವದಲ್ಲಿಯೇ ಅತಿ ನೀಳದ್ದಾಗಿದೆ ಎಂದು ವರದಿಸುತ್ತದೆ. ಹೂ ತನ್ನ ಕೂದಲನ್ನು ವರ್ಷಕ್ಕೆ ಒಂದು ಸಲ ತೊಳೆಯುತ್ತಾನೆ ಮತ್ತು ಅಡ್ಡಪಟ್ಟಿಗಳುಳ್ಳ ತಡಕೆಯ ಮೇಲೆ ಅದನ್ನು ಒಣಗಿಸಲು ಇಳಿಬಿಡುತ್ತಾನೆ. ಅವನ 87 ವರ್ಷ ಪ್ರಾಯದ ಅಣ್ಣನಾದ ಯೀ—1957ರಲ್ಲಿ ತನ್ನ ಕೂದಲನ್ನು ಕತ್ತರಿಸಿದ್ದು ಅದೇ ಕೊನೆ ಬಾರಿ—ಅವನು ಹೂ ಸಾಟೀಯೋವಿನ ಅತ್ಯಂತ ನಿಕಟ ಪ್ರತಿಸ್ಪರ್ಧಿಯಾಗಿದ್ದಾನೆ. ಆದರೂ ಯೀಯ ಕೂದಲು ಹಿಂದಣ ದಾಖಲೆಗಾರ್ತಿಗಿಂದ ಉದ್ದವಾಗಿದೆ. ಭಾರತೀಯ ಸ್ತ್ರೀಯಾದ, ಆಕೆಯ ಕೂದಲು 13 ಅಡಿ 8 ಇಂಚು ಉದ್ದವಾಗಿತ್ತು. ಅಷ್ಟು ನೀಳವಾಗಿರುವ ತನ್ನ ಕೂದಲನ್ನು ಹೂ ಪ್ರಯೋಜನಕಾರಿಯಾಗಿ ಕಂಡುಕೊಳ್ಳುತ್ತಾನೆ. ವಿಶೇಷವಾಗಿ ಥೈಲ್ಯಾಂಡಿನ ಶೀತಲ ಪರ್ವತಗಳ ಮೇಲೆ ಪ್ರಯೋಜನಕಾರಿಯಾಗಿದೆ. “ಅದು ನನ್ನನ್ನು ಬೆಚ್ಚಗಾಗಿಡುತ್ತದೆ” ಎಂದು ಅವನು ಹೇಳುತ್ತಾನೆ.
ನ್ಯೂನಪೋಷಣೆಯು ಮಕ್ಕಳನ್ನು ಕೊಲ್ಲುತ್ತಿದೆ
“ಬೇರೆ ಇನ್ಯಾವುದೇ ಸಾಂಕ್ರಾಮಿಕ ರೋಗ, ನೈಸರ್ಗಿಕ ವಿಪತ್ತು ಅಥವಾ ಯುದ್ಧಗಳಿಗಿಂತ ಹೆಚ್ಚಾಗಿ ನ್ಯೂನಪೋಷಣೆಯು ಹೆಚ್ಚು ಮಕ್ಕಳನ್ನು ಕೊಲ್ಲುತ್ತದೆ” ಎಂದು ಫ್ರೆಂಚ್ ದಿನಪತ್ರಿಕೆಯಾದ ಲೆ ಮೊಂಡ್ ವರದಿಸುತ್ತದೆ. ಸಾಕಷ್ಟು ಆಹಾರವಿಲ್ಲದ ಕಾರಣ ಪ್ರತಿವರ್ಷ ಹೆಚ್ಚುಕಡಿಮೆ ಎಪ್ಪತ್ತು ಲಕ್ಷ ಮಕ್ಕಳು ಸಾಯುತ್ತಾರೆಂದು ಅಂದಾಜುಮಾಡಲಾಗಿದೆ. 1997ರ ವಿಶ್ವ ಸಂಸ್ಥೆಯ ಮಕ್ಕಳ ನಿಧಿಯ ವರದಿಯು ಸೂಚಿಸಿತೇನೆಂದರೆ, ಪ್ರತಿವರ್ಷ ಸಾಯುವ ಐದು ವರ್ಷಕ್ಕಿಂತ ಚಿಕ್ಕವರಾಗಿರುವ 120 ಲಕ್ಷ ಮಕ್ಕಳಲ್ಲಿ, ಶೇಕಡ 55ರಷ್ಟು ಮಕ್ಕಳು ಸಾಯುವುದು ನ್ಯೂನಪೋಷಣೆಯ ಕಾರಣದಿಂದಾಗಿದೆ. ಮಕ್ಕಳನ್ನು ಕೊಲ್ಲುವುದಲ್ಲದೆ, ನ್ಯೂನಪೋಷಣೆಯು ಹಲವಾರು ಶಾರೀರಿಕ ಮತ್ತು ಮಾನಸಿಕ ತೊಂದರೆಗಳನ್ನು ಹಾಗೂ ಬಲಹೀನ ಸೋಂಕು ರಕ್ಷಣಾ ವ್ಯವಸ್ಥೆಗಳಿಗೆ ಜವಾಬ್ದಾರಿಯಾಗಿದೆ. ದಕ್ಷಿಣ ಏಷ್ಯಾದಲ್ಲಿ, ಪ್ರತಿ ಇಬ್ಬರು ಮಕ್ಕಳಲ್ಲಿ ಒಂದು ಮಗು ಮತ್ತು ಆಫ್ರಿಕದಲ್ಲಿ ಪ್ರತಿ 3 ಮಕ್ಕಳಲ್ಲಿ ಒಂದು ಮಗುವು ನ್ಯೂನಪೋಷಣೆಯಿಂದ ನರಳುತ್ತಿದೆ. ಅಷ್ಟುಮಾತ್ರವಲ್ಲದೆ, ಈ ಸಮಸ್ಯೆಯು ಔದ್ಯೋಗೀಕರಣ ದೇಶಗಳನ್ನು ಸಹ ಬಾಧಿಸುತ್ತಿದೆ. ಉದಾಹರಣೆಗೆ, ವಿಶ್ವ ಸಂಸ್ಥೆ ಮಕ್ಕಳ ನಿಧಿಯು ವರದಿಸುವುದೇನೆಂದರೆ, ಅಮೆರಿಕದಲ್ಲಿ 12ಕ್ಕಿಂತ ಕಡಿಮೆ ವಯಸ್ಸಿನ ಪ್ರತಿ 4 ಮಕ್ಕಳಲ್ಲಿ ಒಂದು ಮಗುವು, ಅವನಿಗೆ ಅಥವಾ ಅವಳಿಗೆ ಅಗತ್ಯವಿರುವ ಪೋಷಣೆಯನ್ನು ಪಡೆದುಕೊಳ್ಳುವುದಿಲ್ಲ.
ಚಂದ್ರನ ಮೇಲೆ ನೀರೋ?
ಲೂನಾರ್ ಪ್ರಾಸ್ಪೆಕ್ಟರ್ ಎಂಬ ಬಾಹ್ಯಾಕಾಶ ನೌಕೆಯು, ಚಂದ್ರನ ಧ್ರುವ ಪ್ರದೇಶಗಳಲ್ಲಿ ಹಿಮಗಟ್ಟಿದಂತೆ ಕಾಣಿಸಿದ ನೀರನ್ನು ಕಂಡುಹಿಡಿದಿದೆ ಎಂದು ದ ನ್ಯೂ ಯಾರ್ಕ್ ಟೈಮ್ಸ್ ವರದಿಸುತ್ತದೆ. ಆ ಬಾಹ್ಯಾಕಾಶ ನೌಕೆಯ ಸಾಧನಗಳು, ಜಲಜನಕದ ಇರುವಿಕೆಯನ್ನು ಸೂಚಿಸುತ್ತದೆ ಮತ್ತು ಜಲಜನಕವು, ಹೆಚ್ಚಾಗಿ ನೀರಿನ ಧಾತುವಿನೋಪಾದಿ ಚಂದ್ರನಲ್ಲಿ ಕಂಡುಬರಸಾಧ್ಯವಿದೆ. ನೀರು, ಅಲ್ಪಸ್ವಲ್ಪ ಮಣ್ಣಿನೊಂದಿಗೆ ಮಿಶ್ರಗೊಂಡಿರುವ ಚಿಕ್ಕಚಿಕ್ಕ ಮಂಜುಗಡ್ಡೆಯ ಹರಳಿನ ರೂಪದಲ್ಲಿದೆಯೆಂದು ನಂಬಲಾಗಿದೆ. ಅದರಲ್ಲಿ ಶೇಕಡ 1 ಅಥವಾ ಅದಕ್ಕಿಂತ ಕಡಿಮೆ ಶಿಲಾಮಯ ಮಣ್ಣಿದೆ. ಈ ನೀರು, ಮಾನವರನ್ನು ಸಜೀವವಾಗಿಡಲು ಸಹಾಯಮಾಡಸಾಧ್ಯವಿದೆ ಮತ್ತು ಚಂದ್ರನಿಂದ ಉಡಾಯಿಸಲ್ಪಟ್ಟ ಬಾಹ್ಯಾಕಾಶನೌಕೆಗಾಗಿ ಇಂಧನದೋಪಾದಿ, ಜಲಜನಕ ಮತ್ತು ಆಮ್ಲನಜನಕವನ್ನು ಒದಗಿಸಸಾಧ್ಯವಿದೆ ಎಂದು ಈಗಾಗಲೇ ಕೆಲವು ವಿಜ್ಞಾನಿಗಳು ಮುಂದಾಗಿಯೇ ಹೇಳುತ್ತಿದ್ದಾರೆ. ಅಲ್ಲಿ ನೀರು ಇರುವುದಾದರೂ, ಅದನ್ನು ಹೊರತೆಗೆಯುವುದು ಮಿತವ್ಯಯವಾಗಿರುವುದಿಲ್ಲ ಎಂದು ಇತರರು ಇದರ ಬಗ್ಗೆ ಚಿಂತಿತರಾಗಿದ್ದಾರೆ. ಕ್ಯಾಲಿಫೊರ್ನಿಯದ ತಾಂತ್ರಿಕ ಇನ್ಸ್ಟಿಟ್ಯೂಟ್‌ನ ಡಾ. ಬ್ರೂಸ್ ಮರೆ, ಚಂದ್ರನನ್ನು ತೋಡುವ ಬದಲಿಗೆ ಭೂಮಿಯಿಂದ ನೀರನ್ನು ತೆಗೆದುಕೊಂಡು ಹೋಗುವುದು ಅಗ್ಗವಾಗಿರುವುದು ಎಂದು ಹೇಳಿದರು.
“ಆದರ್ಶಪ್ರಾಯ ಸೌಮ್ಯ ಔಷಧಿಯೋ”?
ಚಾಕಲೇಟಿನ ಉತ್ತೇಜನಕಾರಿ, ಉಪಶಾಮಕವಿರೋಧಿ, ಮತ್ತು ಕಾಮೋತ್ತೇಜಕವೂ ಆದ ಗುಣಗಳನ್ನು ನೂರಾರು ವರ್ಷಗಳಿಂದ ಹೊಗಳಲಾಗುತ್ತಿದೆ. ಆದರೂ, ಇತ್ತೀಚಿನ ಸಂಶೋಧನೆಯು, ಚಾಕಲೇಟುಗಳು “ಕಳವಳದ ಮಟ್ಟಗಳು, ಮನಶ್ಶಾಂತಿ, ಮತ್ತು ಲೈಂಗಿಕ ವರ್ತನೆ”ಯನ್ನು ಬಾಧಿಸುತ್ತವೆ ಎಂದು ಸೂಚಿಸಬಹುದು ಎಂಬುದಾಗಿ ಫ್ರೆಂಚ್ ವಾರ್ತಾಪತ್ರಿಕೆಯಾದ ಲೆ ಮೊಂಡ್ ವರದಿಸುತ್ತದೆ. ಚಾಕಲೇಟಿನಲ್ಲಿರುವ ಒಂದು ಪದಾರ್ಥವು, ಆ್ಯಂಫೆಟಮೀನ್‌ಗಳಿಗೆ ಸ್ವಲ್ಪ ಹೋಲುತ್ತದೆ ಮತ್ತು ಇನ್ನೊಂದಕ್ಕೆ “ವಿಶೇಷವಾದ ಉಪಶಾಮಕವಿರೋಧಿ ಗುಣ”ವಿದೆ ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಗಾಂಜಾದಂಥ, “ಇಂದ್ರಿಯಾನುಭವಗಳನ್ನು ಹೆಚ್ಚಿಸಿ, ಉತ್ತೇಜಿಸುವ” ನರವಾಹಕವಾದ ಆ್ಯನಾಂಡಾಮೈಡ್‌ನ ಇರುವಿಕೆಯನ್ನು ಸಹ ಹೊಸ ಸಂಶೋಧನೆಯು ಪ್ರಕಟಪಡಿಸಿದೆ. ಚಾಕಲೇಟಿನಲ್ಲಿ ಕಡಿಮೆ ವಿಷವಿರುವ ಕಾರಣ, ವಾರ್ತಾಪತ್ರಿಕೆಯು ಈ ನಿರ್ಣಯಕ್ಕೆ ಬರುವಂತೆ ನಡೆಸಿತು: “ಶಾರೀರಿಕ ಮತ್ತು ಬುದ್ಧಿಗ್ರಾಹ್ಯ ಚಟುವಟಿಕೆಯನ್ನು ಪ್ರಚೋದಿಸುವ ಮೂಲಕ ಶಕ್ತಿಯನ್ನು ಒದಗಿಸಿ, ಉತ್ತೇಜಕ ಮತ್ತು ಸಂತುಷ್ಟಕರವಾದ ಒಂದು ಭಾವನೆಯನ್ನು ಹುಟ್ಟಿಸುವ ಮೂಲಕ, ಮತ್ತು ಕಾರ್ಯತಃ ಯಾವುದೇ ಅಡ್ಡಪರಿಣಾಮಗಳಿಲ್ಲದೆ, ಚಟವನ್ನು ಉದ್ಧೀಪನಗೊಳಿಸದ ಮೂಲಕ, ಚಾಕಲೇಟ್ ಹೆಚ್ಚುಕಡಿಮೆ ಆದರ್ಶಪ್ರಾಯ ಸೌಮ್ಯ ಔಷಧಿಯಾಗಿ ಅರ್ಹಗೊಳ್ಳುತ್ತದೆ.”
ಬೆಲೆಕಟ್ಟಲಾರದ್ದಕ್ಕೆ ಬೆಲೆಕಟ್ಟುವುದು
ಹಣದ ಮೂಲಕ ಪ್ರಕೃತಿಯ ಸಮೃದ್ಧತೆಯನ್ನು ಗುಣವಿಮರ್ಶಿಸುವ ಒಂದು ವರದಿಯನ್ನು ಹಲವಾರು ದೇಶಗಳಿಂದ ಬಂದ ಹದಿಮೂರು ವಿಜ್ಞಾನಿಗಳು ಸಂಕಲಿಸಿದ್ದಾರೆ. ಪ್ರತಿ ಹೆಕ್ಟೇರ್ ಭೂಮಿಯಿಂದ ಸಿಗುವ ಅನೇಕ ಲಾಭಗಳನ್ನು ಬೇರೆಯದಕ್ಕೆ ಪರಿವರ್ತಿಸಿದರೆ, ಎಷ್ಟು ಹಣವಾಗಬಹುದು ಎಂಬುದನ್ನು ಅಂದಾಜು ಮಾಡುವ 100ಕ್ಕಿಂತಲೂ ಹೆಚ್ಚಿನ ಪ್ರಕಟಿತ ಅಧ್ಯಯನಗಳ ವರದಿಯನ್ನು ಆ ವಿಜ್ಞಾನಿಗಳು ಹೊರಡಿಸಿದರು. (ಒಂದು ಹೆಕ್ಟೇರ್ ಸುಮಾರು 2.5 ಎಕ್ರೆಗಳಿಗೆ ಸಮ.) ಉದಾಹರಣೆಗೆ, ಅಮೆರಿಕದಲ್ಲಿ ಕಟ್ಟಡವನ್ನು ಕಟ್ಟಲಿಕ್ಕಾಗಿ ತರಿ ಜಮೀನುಗಳ ಪ್ರತಿ ಹೆಕ್ಟೇರನ್ನು ಉಪಯೋಗಿಸಲಾಯಿತು ಮತ್ತು “ನೆರೆನೀರನ್ನು ಹೀರಿಕೊಳ್ಳುವ ತರಿ ಜಮೀನುಗಳ ಇಲ್ಲದಿರುವಿಕೆಯು, 3,300 ಡಾಲರಿನಿಂದ 11,000 ಡಾಲರಿನಷ್ಟು ವಾರ್ಷಿಕ ನೆರೆಹಾನಿಗಳನ್ನು ಹೆಚ್ಚಿಸಿದೆ” ಎಂದು ಸೈಯನ್ಸ್ ಪತ್ರಿಕೆಯು ಹೇಳುತ್ತದೆ. ಅನೇಕರು ಭೂಮಿಯ ನೈಸರ್ಗಿಕ ಪದಾರ್ಥಗಳನ್ನು ಮತ್ತು ಸೇವೆಗಳನ್ನು ತುಂಬ ಮಾಮೂಲಾಗಿ ಎಣಿಸುತ್ತಾರಾದರೂ, ಅದರ ವಾರ್ಷಿಕ ಹಣಕಾಸಿನ ಮೌಲ್ಯವು 3,33,00,00,00,00,000 ಡಾಲರಾಗಿರಬೇಕೆಂದು ವಿಜ್ಞಾನಿಗಳು ಅಂದಾಜುಮಾಡುತ್ತಾರೆ. ಇದು ಇಡೀ ಲೋಕದ ಒಟ್ಟುಮೊತ್ತದ ರಾಷ್ಟ್ರೀಯ ಉತ್ಪಾದನೆಯನ್ನು ಸೇರಿಸಿ ಎರಡು ಪಟ್ಟು ಹೆಚ್ಚಾಗಿದೆ.
ಪ್ರೀತಿಯು ಎಂದೂ ತಪ್ಪಿಹೋಗುವುದಿಲ್ಲ
“ತಮ್ಮ ಹೆತ್ತವರು ಮತ್ತು ಶಿಕ್ಷಕರೊಂದಿಗೆ ಬಲವಾದ ಭಾವನಾತ್ಮಕ ಅನುಬಂಧಗಳಿರುವ ಹದಿವಯಸ್ಕರು, ಅಮಲೌಷಧ ಮತ್ತು ಮದ್ಯಪಾನವನ್ನು ಸೇವಿಸುವುದು, ಆತ್ಮಹತ್ಯೆಯನ್ನು ಮಾಡಿಕೊಳ್ಳುವುದು, ಹಿಂಸಾಚಾರದಲ್ಲಿ ತೊಡಗುವುದು ಅಥವಾ ತೀರ ಎಳೆಯ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ಒಳಗೂಡುವ ಸಂಭವನೀಯತೆಯು ತೀರ ಕಡಿಮೆ” ಎಂದು ದ ವಾಷಿಂಗ್ಟನ್ ಪೋಸ್ಟ್ ವರದಿಸುತ್ತದೆ. ಮಿನಸೋಟ ವಿಶ್ವವಿದ್ಯಾನಿಲಯ ಮತ್ತು ಉತ್ತರ ಕಾರಲೀನ ವಿಶ್ವವಿದ್ಯಾನಿಲಯದ ಚ್ಯಾಪಲ್ ಹಿಲ್‌ನಲ್ಲಿರುವ ಸಂಶೋಧಕರು ಸಹ, ಒಂದು ಮಗುವು ಏಕಹೆತ್ತವ ಅಥವಾ ಇಬ್ಬರೂ ಇರುವ ಕುಟುಂಬದಲ್ಲಿ ವಾಸಿಸುತ್ತದೋ ಇಲ್ಲವೋ, ಈ ಮಾತು ನಿಜವಾಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಮಗುವಿಗೆ ತನ್ನನ್ನು ಪ್ರೀತಿಸುತ್ತಾರೆ, ಗಣ್ಯಮಾಡುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ ಎಂಬ ಭಾವನೆ ಮೂಡುವುದು ಪ್ರಾಮುಖ್ಯವಾದ ವಿಷಯವಾಗಿದೆ. ಮತ್ತೊಂದು ಅಂಶವನ್ನು ಒತ್ತಿಹೇಳಿದ ಆ ಅಧ್ಯಯನವು, “ಹೆತ್ತವರು, ಹದಿವಯಸ್ಕ ವರ್ಷಗಳಲ್ಲಿ ತಮ್ಮ ಮಕ್ಕಳ ಜೀವಿತಗಳಲ್ಲಿ ಉತ್ಸುಕತೆಯಿಂದ ಒಳಗೂಡುತ್ತಾ ಇರುವುದರ—ತಮ್ಮ ಪಾತ್ರವು ಕಡಿಮೆಯಾಗುತ್ತಿದೆ ಎಂಬುದು ಅವರಿಗೆ ಅನಿಸಬಹುದಾದರೂ—ಪ್ರಾಮುಖ್ಯತೆ”ಯಾಗಿದೆ ಎಂದು ಪೋಸ್ಟ್ ಹೇಳುತ್ತದೆ.
ದೇವರಿಲ್ಲದ ಒಂದು ಬೈಬಲ್
ಹೀಬ್ರೂ ಶಾಸ್ತ್ರವಚನಗಳ ಪರಿಷ್ಕೃತ ಭಾಷಾಂತರವನ್ನು—ದೇವರ ಎಲ್ಲ ಉಲ್ಲೇಖಗಳನ್ನು ಬಿಟ್ಟು—ಒಬ್ಬ ಡ್ಯಾನಿಷ್ ವೈದ್ಯನು ಪ್ರಕಾಶಿಸಿದ್ದಾನೆ. ದೇವರು ಮತ್ತು ನಂಬಿಕೆಯು, “ಕೇವಲ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಗತಕಾಲಗಳ ವಿಷಯವಾಗಿವೆ” ಎಂದು ಡಾ. ಸ್ವೆನ್ ಲಿನ್ಸ್ ನಂಬುತ್ತಾನೆ ಎಂಬುದಾಗಿ, ಕ್ರಿಸ್ಟಲೀಟ್ ಡೌಬ್ಲೆತ್ ಡ್ಯಾನಿಷ್ ವಾರ್ತಪತ್ರಿಕೆಯು ವರದಿಸುತ್ತದೆ. ಅನೇಕ ಜನರು ಅಸಂತೋಷಿತರೂ ಒಂಟಿತನದ ಭಾವನೆಯುಳ್ಳವರೂ ಆಗಿದ್ದಾರೆಂದು ಲಿನ್ಸ್ ಗಮನಿಸಿದನು. “ನಾವು ಯೆಹೂದಿ-ಕ್ರೈಸ್ತ ಸಂಸ್ಕೃತಿಯಲ್ಲಿ ಜೀವಿಸುತ್ತಿದ್ದೇವೆ” ಎಂದು ಲಿನ್ಸ್ ಹೇಳುತ್ತಾನೆ. “ಹೀಗೆ ನಮ್ಮ ಸಂತೋಷದ ಕೊರತೆಗೆ ಯೆಹೂದಿ-ಕ್ರೈಸ್ತ ಸಂಸ್ಕೃತಿಯೇ ಹೊಣೆಯಾಗಿರಬೇಕು.” ವಾರ್ತಾಪತ್ರಿಕೆಗೆ ಅನುಸಾರವಾಗಿ, ಲಿನ್ಸ್‌ನ ಗುರಿಯು, ಬೈಬಲಿನ ತನ್ನ ಹೊಸ ಭಾಷಾಂತರದ ಮೂಲಕ, “ನಮ್ಮ ಸಂಸ್ಕೃತಿಯ ತಳಪಾಯಗಳನ್ನು ಬುಡಮೇಲುಮಾಡುವುದೇ ಆಗಿದೆ.” ದೇವರಿಲ್ಲದ ಬೈಬಲ್ ಎಂಬ ಲಿನ್ಸ್‌ನ ಆದಿಕಾಂಡ 3:12 ಹೇಳುವುದು: “ಆದಾಮನು ತನ್ನಷ್ಟಕ್ಕೇ ಅಂದುಕೊಂಡದ್ದು: ‘ನನ್ನ ಪಕ್ಕದಲ್ಲಿರುವ ಸ್ತ್ರೀಯು ಆ ಮರದಿಂದ ಹಣ್ಣನ್ನು ನನಗೆ ಕೊಟ್ಟಳು ಮತ್ತು ನಾನು ಅದನ್ನು ತಿಂದೆ.’” ಕ್ರಿಸ್ಟಲೀಟ್ ಡೌಬ್ಲೆತ್ ಕೇಳುವುದು: “ಹಿಮದಿಂದ ನೀರನ್ನು ತೆಗೆಯಲು ಪ್ರಯತ್ನಿಸಿ, ಆಮೇಲೆ ಇನ್ನೇನು ಉಳಿದಿದೆ ಎಂದು ನೋಡುವಂತೆ ಇದಿರುವುದಿಲ್ಲವೋ?”