ಜಗತ್ತನ್ನು ಗಮನಿಸುವುದು
“ಸೂಪರ್‌ಬಗ್ಸ್”ನ ಅಪಾಯ ಸೂಚನೆ
“ಬಹಳಷ್ಟು ಶಕ್ತಿಶಾಲಿಯಾದ ಆ್ಯಂಟಿಬಯೋಟಿಕ್‌ಗಳನ್ನು ತಡೆದುನಿಲ್ಲುವ ‘ಸೂಪರ್‌ಬಗ್ಸ್’ನ ನಿರೋಧಕಶಕ್ತಿಯು, ವೈದ್ಯಕೀಯ ಕ್ಷೇತ್ರದಲ್ಲಿರುವವರನ್ನು ಮಾತ್ರವಲ್ಲ, ಬಳಕೆದಾರರನ್ನು ಸಹ ಜಾಗೃತಗೊಳಿಸಬೇಕು” ಎಂದು ದಕ್ಷಿಣ ಆಫ್ರಿಕದ ಸ್ಟಾರ್ ಪತ್ರಿಕೆಯು ಹೇಳುತ್ತದೆ. “ಒಮ್ಮೆ ಹತೋಟಿಯಲ್ಲಿದ್ದ ಅಥವಾ ಹೆಚ್ಚುಕಡಿಮೆ ನಿರ್ಮೂಲಗೊಳಿಸಲ್ಪಟ್ಟಿದ್ದ ರೋಗಗಳು ಪುನಃ ತಲೆದೋರಿವೆ” ಎಂದು ರೋಗಶಾಸ್ತ್ರಜ್ಞರಾದ ಮೈಕ್ ಡವ್ ಎಚ್ಚರಿಸುತ್ತಾರೆ. ಆ್ಯಂಟಿಬಯೋಟಿಕ್‌ಗಳ ಹೆಚ್ಚಿನ ಬಳಕೆಯು, ಕ್ಷಯರೋಗ (ಟಿಬಿ), ಮಲೇರಿಯಾ, ಟೈಫೈಡ್, ಗೊನೊರೀಯ, ಮಿದುಳಿನ ಉರಿಯೂತ ಮತ್ತು ನ್ಯುಮೋನಿಯದ ಹೊಸ ರೂಪಗಳನ್ನು ಹೊರತಂದಿದೆ. ಮತ್ತು ಈ ರೋಗಗಳಿಗೆ ಚಿಕಿತ್ಸೆಕೊಡುವುದು ತುಂಬ ಕಷ್ಟಕರವಾಗುತ್ತಿದೆ, ಏಕೆಂದರೆ ಇವು ಆಧುನಿಕ ಔಷಧಗಳಿಗೆ ಒಗ್ಗಿಹೋಗಿವೆ. ವರ್ಷವೊಂದರಲ್ಲಿ ಮೂವತ್ತು ಲಕ್ಷಕ್ಕಿಂತಲೂ ಹೆಚ್ಚಿನ ಜನರು ಕೇವಲ ಟಿಬಿಯಿಂದಲೇ ಸಾಯುತ್ತಾರೆ. ರೋಗಿಗಳು ಈ ಮುಂದಿನ ವಿಷಯಗಳನ್ನು ಜ್ಞಾಪಿಸಿಕೊಳ್ಳುವ ಮೂಲಕ, ಸಹಾಯವನ್ನು ಪಡೆದುಕೊಳ್ಳಸಾಧ್ಯವಿದೆ: ಮೊದಲನೆಯದಾಗಿ, ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದು, ಸಾಕಷ್ಟು ವಿಶ್ರಾಂತಿಯನ್ನು ಪಡೆದುಕೊಳ್ಳುವುದು ಮತ್ತು ಗಂಟಲು ನೋವಿದ್ದರೆ ಸ್ವಲ್ಪ ಉಪ್ಪನ್ನು, ಉಗುರು ಬೆಚ್ಚನೆಯ ನೀರಿನಲ್ಲಿ ಕದಡಿ ಬಾಯಿಮುಕ್ಕಳಿಸುವಂತಹ ಚಿಕಿತ್ಸೆಗಳನ್ನು ಪ್ರಯತ್ನಿಸಿರಿ. ಆ್ಯಂಟಿಬಯೋಟಿಕ್‌ಗಳನ್ನು ಕೊಡುವಂತೆ ನಿಮ್ಮ ವೈದ್ಯನನ್ನು ಒತ್ತಾಯಿಸಬೇಡಿರಿ. ಅವು ನಿಜವಾಗಿಯೂ ಆವಶ್ಯಕವಾಗಿವೆಯೋ ಎಂಬುದನ್ನು ಅವನೇ ನಿರ್ಧರಿಸಲಿ. ಅವುಗಳನ್ನು ತೆಗೆದುಕೊಳ್ಳುವಂತೆ ನಿಮಗೆ ಹೇಳುವಲ್ಲಿ, ಸುಧಾರಣೆಯು ಕಂಡುಬರುವಲ್ಲಿಯೂ ಅವುಗಳನ್ನು ಪೂರ್ಣ ಸಮಯಾವಧಿಯ ವರೆಗೆ ತೆಗೆದುಕೊಳ್ಳಿರಿ. ವೈರಸ್‌ಗಳಿಂದಲ್ಲ ಬದಲಾಗಿ ಬ್ಯಾಕ್ಟೀರಿಯಾಗಳಿಂದ ಉಂಟಾದ ನೆಗಡಿ ಮತ್ತು ಫ್ಲೂಗಳನ್ನು ಆ್ಯಂಟಿಬಯೋಟಿಕ್‌ಗಳು ವಾಸಿಮಾಡಲಾರವು. “ಆರೋಗ್ಯಕ್ಕೆ ಮಹಾ ಗಂಡಾಂತರವನ್ನೇ ತರುವ ಈ ಭಯಂಕರ ಭೌಗೋಲಿಕ ಸಮಸ್ಯೆಯೊಂದಿಗೆ ಹೋರಾಡಲು ಎಲ್ಲರೂ ಸೇರಿ ಶ್ರಮಿಸಬೇಕು” ಎಂದು ಡವ್ ಹೇಳುತ್ತಾರೆ.
ಖಿನ್ನತೆಯಿಂದಾಗುವ ಹಾನಿ
“ಶಾರೀರಿಕ ಅಸ್ವಸ್ಥತೆಗಿಂತಲೂ ಹೆಚ್ಚಿನದ್ದಾದ ಖಿನ್ನತೆಯು, ಕೆಲಸದಲ್ಲಿನ ಅನ್ಯಮನಸ್ಕತೆಗೆ ಹಾಗೂ ಲೋಕದಲ್ಲಿ ತೀರ ಕಳಪೆ ಗುಣಮಟ್ಟದ ಉತ್ಪಾದನೆಗೆ ಮುಖ್ಯ ಕಾರಣವಾಗಿದೆ” ಎಂದು ಬ್ರೆಸಿಲಿನ ವಾರ್ತಾಪತ್ರಿಕೆಯಾದ ಯೂ ಗ್ಲೋಬೂ ಹೇಳುತ್ತದೆ. 1997ರಲ್ಲಾದ 2,00,000 ಮೃತ್ಯುಗಳಿಗೆ, ಮಾನಸಿಕ ಅಸ್ವಸ್ಥತೆಗಳೇ ಕಾರಣವಾಗಿದ್ದವು ಎಂದು ಲೋಕಾರೋಗ್ಯ ಸಂಸ್ಥೆಯ ವರದಿಯು ತೋರಿಸುತ್ತದೆ. ಅಷ್ಟುಮಾತ್ರವಲ್ಲದೆ, ಮನಸ್ಥಿತಿಯ ಏರುಪೇರುಗಳಂಥ ಚಿಕ್ಕಪುಟ್ಟ ಮಾನಸಿಕ ವ್ಯಾಧಿಗಳು, ಲೋಕದಾದ್ಯಂತ 14 ಕೋಟಿ 60 ಲಕ್ಷಕ್ಕಿಂತಲೂ ಹೆಚ್ಚಿನ ಜನರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿತ್ತು. ಈ ಸಂಖ್ಯೆಯು, ಶ್ರವಣ ಸಮಸ್ಯೆಗಳಿಂದ ಬಾಧಿತರಾದ 12 ಕೋಟಿ 30 ಲಕ್ಷ ಕಾರ್ಮಿಕರು ಅಥವಾ ಕೆಲಸದಲ್ಲಿದ್ದಾಗ ಅಪಘಾತಗಳಿಗೆ ತುತ್ತಾದ 2 ಕೋಟಿ 50 ಲಕ್ಷ ಕಾರ್ಮಿಕರ ಸಂಖ್ಯೆಗಿಂತಲೂ ತುಂಬ ಹೆಚ್ಚಾಗಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಗೈ ಗುಡ್‌ವೆನ್‌ರವರ ಒಂದು ಅಧ್ಯಯನಕ್ಕನುಸಾರ, ಖಿನ್ನತೆಯ ಸಮಸ್ಯೆಯು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಾಗುವುದು ಮತ್ತು ಇದು ಸಮಾಜಕ್ಕೆ ಹೊರಲಾರದ ಹೊರೆಯಾಗಿ ಪರಿಣಮಿಸುವುದು. ಏಕೆಂದರೆ ಇದು ಉತ್ಪಾದನೆಯಲ್ಲಿ ನಷ್ಟವನ್ನು ಉಂಟುಮಾಡುತ್ತದೆ ಮತ್ತು ಅದರ ಚಿಕಿತ್ಸೆಗೆ ತುಂಬ ಹಣವು ತಗಲುತ್ತದೆ. ಕೇವಲ ಅಮೆರಿಕವೊಂದರಲ್ಲಿ, ಖಿನ್ನತೆಯಿಂದ ಉಂಟಾಗುವ ವಾರ್ಷಿಕ ನಷ್ಟಗಳು ಈಗಾಗಲೇ 5 ಕೋಟಿ 30 ಲಕ್ಷ ಡಾಲರುಗಳಿಗೆ ಸಮವಾಗಿದೆ.
ಸೇಡುತೀರಿಸಿಕೊಳ್ಳುವುದೇ ಅವರ ಕೆಲಸವಾಗಿದೆ
“ಗೋಪ್ಯತೆಯನ್ನು ಕಾಪಾಡುತ್ತೇವೆ” ಮತ್ತು ಜಪಾನಿನಲ್ಲಿ ಎಲ್ಲಿ ಬೇಕೋ ಅಲ್ಲಿ ಸೇವೆಯನ್ನು ಸಲ್ಲಿಸುತ್ತೇವೆಂಬ ಭರವಸೆಯನ್ನು ಕೊಡುತ್ತಾ, ಟೋಕಿಯೋದ ಒಂದು ಕಂಪನಿಯು ಹೀಗೆ ಜಾಹೀರಾತನ್ನು ನೀಡುತ್ತದೆ: “ನಿಮ್ಮ ಪರವಾಗಿ ನಾವು ಲೆಕ್ಕವನ್ನು ತೀರಿಸುತ್ತೇವೆ.” “ನಮ್ಮ ಕಕ್ಷಿದಾರನಿಗೆ ಕಷ್ಟಕೊಟ್ಟ ಯಾವನೇ ಒಬ್ಬ ವ್ಯಕ್ತಿಗೆ ತದ್ರೀತಿಯ ಕಿರುಕುಳವನ್ನು ನೀಡುವುದೇ” ಇದರ ಮುಖ್ಯ ಉದ್ದೇಶವಾಗಿದೆ ಎಂದು ಆ ಕಂಪನಿಯನ್ನು ನಡೆಸುವ ಒಬ್ಬ ವ್ಯಕ್ತಿಯು ಹೇಳುತ್ತಾನೆ. ಆಸಾಹೀ ಈವ್‌ನಿಂಗ್ ನ್ಯೂಸ್‌ನಲ್ಲಿ ವರದಿಸಲ್ಪಟ್ಟಂತೆ, ಆ ಕಂಪನಿಯು “ಒಬ್ಬ ವ್ಯಕ್ತಿಯು ತನ್ನ ಉದ್ಯೋಗ ಮತ್ತು ತನ್ನ ಕುಟುಂಬವನ್ನು ಕಳೆದುಕೊಳ್ಳುವಂತೆ” ಮಾಡುವ ಮೂಲಕ, ಸಂಬಂಧಗಳಲ್ಲಿ ಬಿರುಕನ್ನುಂಟುಮಾಡುವ ಮೂಲಕ, ಮತ್ತು “ಸಹೋದ್ಯೋಗಿಯೊಬ್ಬನು ಕೆಲಸವನ್ನು ಕಳೆದುಕೊಳ್ಳುವಂತೆ ಹಾಗೂ ಲೈಂಗಿಕ ಕಿರುಕುಳವನ್ನು ಕೊಟ್ಟ ಒಬ್ಬ ಧಣಿಯ ಸೊಕ್ಕಡಗಿಸುವ ಮೂಲಕ, ಇವು ಮುಯ್ಯಿಗೆ ಮುಯ್ಯಿ ತೀರಿಸುವ ಕಾನೂನು ರೀತ್ಯಾ ಕಾರ್ಯಗಳನ್ನು ಮಾಡುತ್ತವೆ.” ಪ್ರತಿ ದಿನ ಆ ಕಂಪನಿಗೆ ಫೋನ್ ಮಾಡುವ ಸುಮಾರು 50 ಜನರಲ್ಲಿ, 20 ಮಂದಿ ಕೊಲೆಗೈಯುವುದಕ್ಕಾಗಿ ಗುತ್ತಿಗೆಗಳ ಬಗ್ಗೆ ಕೇಳುತ್ತಾರೆ; ಆದರೆ ಕಂಪನಿಯ ಸಾಮಾನ್ಯ ಕಟ್ಟಳೆಯು, ಬಲಪ್ರಯೋಗಿಸಬಾರದು ಅಥವಾ ನಿಯಮವನ್ನು ಮುರಿಯಬಾರದು ಎಂದಾಗಿದೆ. “ಆದರೆ ಕೆಲವೊಮ್ಮೆ ಅವರ ಕಾರ್ಯವು ಹೆಚ್ಚುಕಡಿಮೆ ಅದಕ್ಕೆ ಸಮೀಪವಾಗಿರುತ್ತದೆ.” ಆ ಕಂಪನಿಯು ಹಲವಾರು ಕಾರ್ಮಿಕರನ್ನು ಕೆಲಸಕ್ಕಿಟ್ಟುಕೊಳ್ಳುತ್ತದೆ, ಅವರಲ್ಲಿ ಹೆಚ್ಚಿನವರು ಇತರ ಉದ್ಯೋಗಗಳಲ್ಲಿ ಪೂರ್ಣಸಮಯ ಕೆಲಸಮಾಡುತ್ತಾರೆ. ಅಂತಹ ಜನರಲ್ಲಿ ಕೆಲವರು ಸ್ವತಃ ನೊಂದಿದ್ದಾರೆ ಮತ್ತು ಇವರು ಸೇಡನ್ನು ತೀರಿಸಿಕೊಳ್ಳುವಂತೆ ಇತರರಿಗೆ ಸಹಾಯಮಾಡಲು ಇಷ್ಟಪಡುತ್ತಾರೆ. “ಹಿಂದೆ ನೀವು ಮಾಡಿದ ಯಾವುದೋ ವಿಷಯವು ಇತರರು ನಿಮ್ಮ ಮೇಲೆ ಪ್ರತೀಕಾರವನ್ನು ತೆಗೆದುಕೊಳ್ಳುವಂತೆ ಮಾಡಬಹುದು. ಆದುದರಿಂದ ಜಾಗರೂಕರಾಗಿರಿ” ಎಂದು ಆ ಕಂಪನಿಯ ಮಾಲಿಕನು ಎಚ್ಚರಿಕೆಯನ್ನು ನೀಡುತ್ತಾನೆ.
ವಿವಾಹವು ಆರೋಗ್ಯಕ್ಕೆ ಒಳ್ಳೆಯದು
ವಿವಾಹವಾಗುವುದರಿಂದ ಸ್ತ್ರೀಪುರುಷರಿಬ್ಬರ “ಆಯುಷ್ಯವು ಹೆಚ್ಚಾಗುತ್ತದೆ, ಶಾರೀರಿಕ ಹಾಗೂ ಭಾವನಾತ್ಮಕ ಆರೋಗ್ಯವು ವಾಸ್ತವವಾಗಿ ಉತ್ತಮಗೊಳ್ಳುತ್ತದೆ ಮತ್ತು ಆದಾಯವು ಸಹ ಹೆಚ್ಚುತ್ತದೆ” ಎಂದು ದ ನ್ಯೂ ಯಾರ್ಕ್ ಟೈಮ್ಸ್‌ನ ಒಬ್ಬ ಸಂಶೋಧಕಿಯು ಹೇಳುತ್ತಾಳೆ. ವಿವಾಹಿತ ಸ್ತ್ರೀಯರು ಹೆಚ್ಚಿನ ಮನೋವ್ಯಾಕುಲತೆಯನ್ನು ಅನುಭವಿಸುತ್ತಾರೆ ಎಂದು 1972ರಲ್ಲಿ ಪ್ರಕಾಶಿಸಲ್ಪಟ್ಟ ವರದಿಯೊಂದನ್ನು, ಶಿಕಾಗೋ ವಿಶ್ವವಿದ್ಯಾನಿಲಯದ ಪ್ರೊಫೆಸರರಾದ ಲಿಂಡ ಜೆ. ವೇಟ್‌ರ ಅಧ್ಯಯನವು ವಿರೋಧಿಸುತ್ತದೆ. “ವಿವಾಹವು ಜನರ ನಡವಳಿಕೆಯನ್ನು ಸಹ ಬದಲಾಯಿಸಿ, ಉತ್ತಮಗೊಳಿಸುತ್ತದೆ” ಎಂದು ಡಾ. ವೇಟ್ ಹೇಳುತ್ತಾರೆ. ಉದಾಹರಣೆಗೆ, ಆಲ್ಕೋಹಾಲ್ ಸೇವನೆಯನ್ನು ಕಡಿಮೆಮಾಡುವುದಕ್ಕೆ ಸಹಾಯಮಾಡುತ್ತದೆ. ವಿವಾಹವು ಖಿನ್ನತೆಯನ್ನು ಸಹ ಕಡಿಮೆಮಾಡುವಂತೆ ತೋರುತ್ತದೆ. ವಾಸ್ತವದಲ್ಲಿ, “ಅಧ್ಯಯನದ ಆರಂಭದಲ್ಲಿಯೇ, ಅವಿವಾಹಿತ ಪುರುಷರು ಖಿನ್ನರಾಗಿದ್ದರು ಮತ್ತು ಅವಿವಾಹಿತರಾಗಿಯೇ ಉಳಿದಲ್ಲಿ ಇನ್ನೂ ಹೆಚ್ಚು ಖಿನ್ನರಾಗಿ ಪರಿಣಮಿಸಿದರು.” ಆದರೆ, ದತ್ತಾಂಶವು ಗುಂಪುಗಳಿಗೆ ಸೂಚಿಸುವುದರಿಂದ, ವಿವಾಹವಾಗುವ ಪ್ರತಿಯೊಬ್ಬರೂ ಮೊದಲಿಗಿಂತಲೂ ಹೆಚ್ಚು ಉತ್ತಮವಾದ ಸ್ಥಿತಿಯಲ್ಲಿದ್ದಾರೆ ಇಲ್ಲವೇ ತಾವು ಇಷ್ಟಪಡದ ವ್ಯಕ್ತಿಯನ್ನು ವಿವಾಹವಾದ ಜನರು ಸುಖಸಂತೋಷದಿಂದ ಇದ್ದಾರೆ ಎಂಬುದನ್ನು ಇದು ಅರ್ಥೈಸುವುದಿಲ್ಲವೆಂದು, ಮಿನೆಸೋಟ ವಿಶ್ವವಿದ್ಯಾನಿಲಯದ ಡಾ. ವಿಲ್ಯಮ್ ಜೆ. ಡಾರ್ಥೀ ಹೇಳುತ್ತಾರೆ.
ಹಿಂಸಾತ್ಮಕ ಹೀರೋಗಳು
ಮಾಧ್ಯಮದಲ್ಲಾಗುವ ಹಿಂಸಾತ್ಮಕ ಪರಿಣಾಮದ ಕುರಿತ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ, ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಯನಕ್ಕನುಸಾರ, ಮಕ್ಕಳ ಅತಿ ನೆಚ್ಚಿನ ವ್ಯಕ್ತಿಗಳಲ್ಲಿ ಕೆಲವರು ಆ್ಯಕ್ಷನ್ ಫಿಲ್ಮ್ ಹೀರೋಗಳಾಗಿದ್ದಾರೆ. 23 ದೇಶಗಳಲ್ಲಿ ಇಂಟರ್‌ವ್ಯೂ ಮಾಡಲ್ಪಟ್ಟ 12 ವರ್ಷ ಪ್ರಾಯದ ಐದು ಸಾವಿರ ಮಕ್ಕಳಲ್ಲಿ, 26 ಪ್ರತಿಶತದಷ್ಟು ಮಕ್ಕಳು, ತಮ್ಮ ನಡೆನುಡಿಗಳಲ್ಲಿ ತಮ್ಮ ಮಾಡೆಲ್‌ಗಳೋಪಾದಿ, ಈ ಚಲನಚಿತ್ರದ ಹೀರೋಗಳಿಗೆ, “ಪಾಪ್ ಸ್ಟಾರ್ ಮತ್ತು ಸಂಗೀತಗಾರರು (18.5 ಪ್ರತಿಶತ), ಧಾರ್ಮಿಕ ಮುಖಂಡರು (8 ಪ್ರತಿಶತ), ಅಥವಾ ರಾಜಕಾರಣಿಗಳ (3 ಪ್ರತಿಶತ) ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಕೊಟ್ಟರು” ಎಂದು ಬ್ರೆಸಿಲಿನ ಜೂರ್ನಾಲ್ ಡಾ ಟಾರ್ಡಿ ಹೇಳುತ್ತದೆ. ಕಷ್ಟಕರ ಸನ್ನಿವೇಶಗಳಿಂದ ಹೇಗೆ ಪಾರಾಗಿ ಉಳಿಯುವುದು ಎಂಬುದಕ್ಕಾಗಿ ಮಕ್ಕಳು ಹಿಂಸಾತ್ಮಕ ಹೀರೋಗಳನ್ನು ತಮ್ಮ ಮಾಡೆಲ್‌ಗಳಾಗಿ ಮಾಡಿಕೊಳ್ಳುವುದು ನಿಜ ಎಂದು ಅಧ್ಯಯನದ ಸಂಯೋಜಕರಾದ ಪ್ರೊಫೆಸರ್ ಜೋ ಗ್ರೋಯ್ಬೆಲ್ ಹೇಳುತ್ತಾರೆ. ಮಕ್ಕಳು ಹಿಂಸಾಚಾರಕ್ಕೆ ಹೆಚ್ಚು ಒಗ್ಗಿಕೊಂಡಷ್ಟು, ಹೆಚ್ಚು ಹಿಂಸಾತ್ಮಕವಾದ ರೀತಿಯಲ್ಲಿ ನಡೆದುಕೊಳ್ಳುವರು ಎಂದು ಗ್ರೋಯ್ಬೆಲ್ ಎಚ್ಚರಿಕೆಯನ್ನು ನೀಡುತ್ತಾರೆ. ಅವರು ಕೂಡಿಸುವುದು: “ಹಿಂಸಾಚಾರವು ಸರ್ವೇಸಾಮಾನ್ಯವೂ ಲಾಭಕರವೂ ಆದದ್ದಾಗಿದೆ ಎಂಬ ವಿಷಯವನ್ನು ಮಾಧ್ಯಮವು ಪ್ರಸಾರಮಾಡುತ್ತದೆ.” ತಮ್ಮ ಮಕ್ಕಳು ಕಾಲ್ಪನಿಕತೆ ಮತ್ತು ವಾಸ್ತವಿಕತೆಯ ಮಧ್ಯೆಯಿರುವ ವ್ಯತ್ಯಾಸವನ್ನು ಕಂಡುಕೊಳ್ಳಸಾಧ್ಯವಾಗುವಂತೆ, ಅವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುವುದರಲ್ಲಿ ಹೆತ್ತವರು ಅತಿ ಮುಖ್ಯ ಪಾತ್ರವನ್ನು ವಹಿಸುತ್ತಾರೆ.
“ತರುಣಿಯರ ನಂ. 1 ಹಂತಕ”
ಆರ್ಥಿಕವಾಗಿ ಮುಂದುವರಿದ ದೇಶಗಳಲ್ಲಿ, ಕ್ಷಯರೋಗವು 65ಕ್ಕಿಂತಲೂ ಮೇಲ್ಪಟ್ಟ ವಯಸ್ಸಿನ ಪುರುಷರನ್ನು ಅನೇಕ ವೇಳೆ ಬಾಧಿಸುತ್ತದೆ ಎಂದು ನಂಡೋ ಟೈಮ್ಸ್ ವರದಿಸುತ್ತದೆ. ಆದರೆ ಲೋಕಾರೋಗ್ಯ ಸಂಸ್ಥೆ (ಡಬ್ಲ್ಯೂಎಚ್)ಗನುಸಾರ, ಭೌಗೋಲಿಕ ಮಟ್ಟದಲ್ಲಿ, ಕ್ಷಯರೋಗವು “ತರುಣಿಯರ ನಂ. 1 ಹಂತಕ” ಆಗಿದೆ ಎಂದು ವರದಿಯು ಹೇಳುತ್ತದೆ. “ಪತ್ನಿಯರು, ತಾಯಂದಿರು ಮತ್ತು ಕೂಲಿ ಕೆಲಸ ಮಾಡುವ ಸ್ತ್ರೀಯರು ತರುಣಾವಸ್ಥೆಯಲ್ಲಿಯೇ ಮರಣಹೊಂದುತ್ತಿದ್ದಾರೆ” ಎಂದು ಲೋಕಾರೋಗ್ಯದ ಭೌಗೋಲಿಕ ಕ್ಷಯರೋಗ ಕಾರ್ಯಕ್ರಮದ ಡಾ. ಪಾಲ್ ಡೋಲಿನ್ ಹೇಳುತ್ತಾರೆ. ಸ್ವೀಡನಿನ ಯಾರ್ಟೆಬಾರೀಯಲ್ಲಿ ನಡೆದ ವೈದ್ಯಕೀಯ ಸೆಮಿನಾರ್‌ನಲ್ಲಿ ಇತ್ತೀಚೆಗೆ ಒಟ್ಟುಗೂಡಿದ ಪರಿಣತರು, ಲೋಕದಾದ್ಯಂತ 90 ಕೋಟಿಗಿಂತಲೂ ಹೆಚ್ಚಿನ ಸ್ತ್ರೀಯರು ಕ್ಷಯರೋಗದಿಂದ ಪೀಡಿತರಾಗಿದ್ದಾರೆ ಎಂದು ಹೇಳಿದರು. ಇವರಲ್ಲಿ ಸುಮಾರು ಹತ್ತು ಲಕ್ಷ ಜನರು ಪ್ರತಿ ವರ್ಷ ಮೃತರಾಗುತ್ತಾರೆ. ಇವರಲ್ಲಿ ಹೆಚ್ಚಿನವರ ವಯಸ್ಸು 15ರಿಂದ 44ರ ನಡುವಿನದ್ದಾಗಿದೆ. ಬ್ರೆಸಿಲಿನ ವಾರ್ತಾಪತ್ರಿಕೆಯಾದ ಓ ಎಸ್ಟಾಡೊ ಡೆ ಸಾನ್ ಪಾಲೂಗನುಸಾರ, ರೋಗವು ವಾಸಿಯಾಗುವ ಮುಂಚೆಯೇ ಚಿಕಿತ್ಸೆಯನ್ನು ನಿಲ್ಲಿಸಿಬಿಡುವುದೇ ಮರಣದ ಸಂಖ್ಯೆಗೆ ಕಾರಣವಾಗಿದೆ.
ಭೂಏಡಿಗಳು ಮತ್ತು ಜೀವವಿಜ್ಞಾನ
ಇರುವೆಗಳು, ಗೆದ್ದಲುಗಳು, ಮತ್ತು ಹುಳುಗಳು ಅರಣ್ಯಪ್ರದೇಶದ ತರಗೆಲೆಗಳನ್ನು ಮತ್ತು ಭಗ್ನಾವಶೇಷಗಳನ್ನು ಕೊಳೆತುಹೋಗುವಂತೆ ಮಾಡುತ್ತವೆ. ಆದರೆ ನಿಯತಕಾಲಿಕವಾಗಿ ನೆರೆ ಬರುವ ಉಷ್ಣವಲಯದ ಮಳೆಗಾಡುಗಳಲ್ಲಿ ಏನು ಸಂಭವಿಸುತ್ತದೆ? ಭೂಏಡಿಗಳು ಆ ಕೆಲಸವನ್ನು ಮಾಡುತ್ತವೆ. ಕಾಸ್ಟರೀಕದ ಪೆಸಿಫಿಕ್ ಕರಾವಳಿಯ ವಿಶಾಲವಾದ ಅರಣ್ಯದ ನೆಲದ ಮೇಲೆ ಎಲ್ಲಿಯೂ ಎಲೆಗಳು ಬಿದ್ದಿರಲಿಲ್ಲ, ಬದಲಾಗಿ ಅಲ್ಲಿ ಹಲವಾರು ದೊಡ್ಡ ದೊಡ್ಡ ರಂಧ್ರಗಳನ್ನು ನೋಡಿದ ಅಮೆರಿಕದ ಮಿಷಿಗನ್ ವಿಶ್ವವಿದ್ಯಾನಿಲಯದ ಜೀವವಿಜ್ಞಾನಿಯು ಆಶ್ಚರ್ಯಗೊಂಡನು. ರಾತ್ರಿಯ ಹೊತ್ತಿನಲ್ಲಿ, ಅಂದಾಜಾಗಿ ಒಂದು ಎಕರೆಗೆ 24,000ದಷ್ಟು ಭೂಏಡಿಗಳು ಕೊಳೆತ ಎಲೆಗಳು, ಹಣ್ಣುಗಳು ಮತ್ತು ಸಸ್ಯಗಳನ್ನು ತಿನ್ನಲಿಕ್ಕಾಗಿ ಮತ್ತು ಅವುಗಳನ್ನು ತಮ್ಮ ಮೂರು ಅಡಿ ಬಿಲಗಳ ತಳದ ವರೆಗೆ ಕೊಂಡೊಯ್ಯಲಿಕ್ಕಾಗಿ ಹೊರಬಂದವು. ಉಸಿರಾಡಲು ಕಿವಿರುಗಳಿರುವ ಮತ್ತು ಮರಿಹಾಕಲು ಮಾತ್ರ ಯಾವಾಗಲಾದರೊಮ್ಮೆ ಸಮುದ್ರಕ್ಕಿಳಿಯುವ ಈ ಎಂಟು ಇಂಚು ಉದ್ದದ ಏಡಿಗಳು, ಆಳವಾಗಿ ಬೇರೂರಿದ ಮರಗಳಿಗೆ ಪೋಷಣೆಯನ್ನು ನೀಡುತ್ತವೆ. ಅರಣ್ಯದ ಸಂಪೂರ್ಣ ಜೀವವಿಜ್ಞಾನವು, ಈ ಜೀವಿಗಳು ಏನು ಮಾಡುತ್ತವೋ ಅದರ ಮೇಲೆ ಅವಲಂಬಿಸಿದೆ ಎಂದು ಲಂಡನಿನ ದ ಟೈಮ್ಸ್ ವರದಿಸುತ್ತದೆ.
ಕುಟುಂಬದೊಟ್ಟಿಗೆ ಊಟಮಾಡುವುದು
ತಮ್ಮ ಕುಟುಂಬಗಳೊಂದಿಗೆ ವಾರಕ್ಕೆ ಕಡಿಮೆಪಕ್ಷ ಐದು ಬಾರಿ ರಾತ್ರಿಯ ಊಟವನ್ನು ಮಾಡುತ್ತಿದ್ದ 527 ಹದಿವಯಸ್ಕರ ಒಂದು ಅಧ್ಯಯನದಲ್ಲಿ, ಮಕ್ಕಳು “ಅಮಲೌಷಧಗಳನ್ನು ಸೇವಿಸುವ ಅಥವಾ ಖಿನ್ನರಾಗುವ ಸಾಧ್ಯತೆಯಿರಲಿಲ್ಲ, ಅದಕ್ಕೆ ಬದಲಾಗಿ, ಶಾಲೆಯಲ್ಲಿ ತುಂಬ ಚುರುಕಾಗಿದ್ದರು ಮತ್ತು ಸಮವಯಸ್ಕರಲ್ಲಿ ಒಳ್ಳೆಯ ಸಂಬಂಧಗಳನ್ನು ಇಟ್ಟುಕೊಂಡಿದ್ದರು” ಎಂದು ಕೆನಡದ ಟೊರಾಂಟೊ ಸ್ಟಾರ್ ಎಂಬ ವಾರ್ತಾಪತ್ರಿಕೆಯು ಹೇಳುತ್ತದೆ. “‘ಚೆನ್ನಾಗಿ ಒಗ್ಗಿಕೊಂಡಿರದವರು’ ಎಂದು ಹೇಳಲ್ಪಟ್ಟ ಹದಿವಯಸ್ಕರು, ತಮ್ಮ ಕುಟುಂಬಗಳೊಟ್ಟಿಗೆ ವಾರಕ್ಕೆ ಮೂರು ಅಥವಾ ಅದಕ್ಕಿಂತ ಕಡಿಮೆ ಬಾರಿ ಊಟಮಾಡಿದರು.” ಕುಟುಂಬದ ಊಟದ ಸಮಯವು, “ಆರೋಗ್ಯಕರ ಕುಟುಂಬದ ಒಂದು ವಿಶೇಷ ಲಕ್ಷಣ”ವಾಗಿದೆ ಎಂದು ಮನೋವೈದ್ಯರಾದ ಬ್ರೂಸ್ ಬ್ರೈನ್ ಒತ್ತಿಹೇಳುತ್ತಾರೆ. ಒಟ್ಟಿಗೆ ಊಟಮಾಡುವುದು, ಕುಟುಂಬದ ಬಂಧಗಳನ್ನು, ಮಾತಾಡುವ ಕೌಶಲಗಳನ್ನು, ಮತ್ತು ನಾವೆಲ್ಲರೂ ಒಬ್ಬರಿಗೊಬ್ಬರು ಬೇಕಾದವರು ಎಂಬ ಭಾವನೆಯನ್ನು ಸಾಕಿಸಲಹುತ್ತದೆ ಎಂದು ಆ ವರದಿಯು ಹೇಳುತ್ತದೆ. ಮತ್ತು ಊಟಮಾಡುವಾಗ ಅಗತ್ಯವಾಗಿರುವ ಶಿಷ್ಟಾಚಾರಗಳನ್ನು ಅದು ಕಲಿಸುತ್ತದೆ ಅಷ್ಟುಮಾತ್ರವಲ್ಲದೆ, ಮಾತಾಡುವುದರಲ್ಲಿ, ಹಾಸ್ಯಪ್ರವೃತ್ತಿಯಲ್ಲಿ ಮತ್ತು ಪ್ರಾರ್ಥನೆಯಲ್ಲಿ ಒಳಗೂಡುವ ಅವಕಾಶವನ್ನು ಒದಗಿಸುತ್ತದೆ. ಯಾವಾಗಲೂ ಒಟ್ಟಿಗೆ ಊಟಮಾಡಿದ ಕುಟುಂಬವೊಂದರಲ್ಲಿನ ಪ್ರಾಯಕ್ಕೆ ಬಂದ ಮಗಳೊಬ್ಬಳು ಹೇಳುವುದು, ಅವರು ಈ ರೀತಿಯ ರೂಢಿಯನ್ನು ಮಾಡಿರದಿದ್ದಲ್ಲಿ, “ನಾನು ಈಗ ಅವರಿಗೆ ಎಷ್ಟು ಆಪ್ತಳಾಗಿದ್ದೇನೋ ಅಷ್ಟು ಆಪ್ತಳಾಗಿರುತ್ತಿರಲಿಲ್ಲ ಎಂಬುದು ನನ್ನನಿಸಿಕೆ.”
ಹೊಗೆಸೊಪ್ಪು ಕ್ರೀಡೆಯ ಹೊಣೆಹೊತ್ತುಕೊಳ್ಳುತ್ತದೆ
ತಮ್ಮ ಉತ್ಪಾದನೆಗಳನ್ನು ಮಾರುಕಟ್ಟೆಯಲ್ಲಿ ಮುಂದೆ ತರಲಿಕ್ಕಾಗಿ ಹೊಗೆಸೊಪ್ಪಿನ ಉದ್ಯಮಗಳು ಕ್ರೀಡೆಗಳಲ್ಲಿ ಮತ್ತು ಇತರ ಮನೋರಂಜನೆಯಲ್ಲಿ ತುಂಬ ಒಳಗೂಡುತ್ತಿರುವುದರಿಂದ, “ಕ್ರೀಡೆ . . . ಮತ್ತು ಸಿಗರೇಟ್ ಸೇದುವಿಕೆಯ ನಡುವೆ ಬಲವಾದ ಬಂಧವು ಏರ್ಪಟ್ಟಿದೆ” ಎಂದು ಆಸ್ಟ್ರೇಲಿಯದ ವಿಕ್ಟೋರಿಯನ್ ಹೆಲ್ತ್ ಪ್ರಮೋಷನ್ ಫೌಂಡೇಷನಿನ ರಾಂಡ ಗಾಲ್‌ಬೆಲೀ ಹೇಳುತ್ತಾರೆ. ಆದುದರಿಂದ, ಅನೇಕ ವೇಳೆ ಕ್ರೀಡೆಗಳಲ್ಲಿ ತೋರಿಸಲ್ಪಡುವ ಈ ಕುಟಿಲವಾದ ಹೊಗೆಸೊಪ್ಪಿನ ಜಾಹೀರಾತು, ಜನರನ್ನು ಧೂಮಪಾನ ಮಾಡುವಂತೆ ಒಲಿಸಬಹುದು. “ಟೆಲಿವಿಷನಿನಲ್ಲಿ ಮೋಟರ್ ರೇಸಿಂಗನ್ನು ನೋಡಲು ತುಂಬ ಇಷ್ಟಪಟ್ಟ ಹುಡುಗರು ಧೂಮಪಾನವನ್ನು ಮಾಡುವ ಸಂಭವನೀಯತೆಯು ಹೆಚ್ಚುಕಡಿಮೆ ಎರಡು ಪಟ್ಟು ಇತ್ತು” ಎಂದು ಬ್ರಿಟನಿನ ಕ್ಯಾನ್ಸರ್ ಸಂಶೋಧನಾ ಕಾರ್ಯಾಚರಣೆಯು ಕಂಡುಕೊಂಡಿತು ಎಂದು ಪಾನೊಸ್ ನ್ಯೂಸ್ ಏಜೆನ್ಸಿಯು ವರದಿಸುತ್ತದೆ. “ಯೂರೋಪಿನಲ್ಲಿ ಕೇವಲ ಕಾರ್ ರೇಸಿಂಗನ್ನು ಬೆಂಬಲಿಸಲಿಕ್ಕಾಗಿ ಹೊಗೆಸೊಪ್ಪಿನ ಕಂಪನಿಗಳು ಪ್ರತಿ ವರ್ಷ ಕೋಟ್ಯಂತರ ಡಾಲರುಗಳನ್ನು ವ್ಯಯಿಸುತ್ತವೆ.” ಅಷ್ಟುಮಾತ್ರವಲ್ಲದೆ, ಟೆಲಿವಿಷನಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಈ ಕಾರುಗಳು ಚಲಿಸುವ ಜಾಹೀರಾತುಗಳಾಗಿವೆ.