ಈ ಲೋಕವು ಎತ್ತಸಾಗುತ್ತಿದೆ?
ಮುಂದಿನ 10, 20 ಇಲ್ಲವೆ 30 ವರುಷಗಳಲ್ಲಿ ಏನು ಸಂಭವಿಸಲಿದೆ? ಭಯೋತ್ಪಾದನೆಯ ಈ ಯುಗದಲ್ಲಿ ಭವಿಷ್ಯತ್ತಿನ ಕುರಿತು ಆಲೋಚಿಸುವುದೇ ಭಯಪ್ರೇರಕವಾಗಿರಸಾಧ್ಯವಿದೆ. ತಾಂತ್ರಿಕತೆಯು ಪ್ರಗತಿಯನ್ನು ಹೊಂದುತ್ತಲೇ ಇದೆ. ಭೌಗೋಳೀಕರಣದಿಂದಾಗಿ ಅನೇಕ ರಾಷ್ಟ್ರಗಳು ಪರಸ್ಪರ ಅವಲಂಬಿಸಿಕೊಂಡು ಮುಂದೊತ್ತಶಕ್ತವಾಗಿವೆ. ಆದರೆ, ಲೋಕದ ಮುಖಂಡರೆಲ್ಲರು ಐಕ್ಯಗೊಂಡು ಉಜ್ವಲವಾದ ಭವಿಷ್ಯತ್ತನ್ನು ತರಬಲ್ಲರೊ? ಹೌದೆಂದು ಕೆಲವು ಜನರು ಹೇಳುತ್ತಾರೆ. ಇದಕ್ಕೆ ಕಾರಣ, 2015ರೊಳಗಾಗಿ ಲೋಕದ ಮುಖಂಡರು ಬಡತನ ಮತ್ತು ಆಹಾರದ ಕೊರತೆಯನ್ನು ನೀಗಿಸುವರು, ಏಡ್ಸ್ ರೋಗದ ಹರಡುವಿಕೆಯನ್ನು ತಡೆಗಟ್ಟುವರು ಹಾಗೂ ಸುರಕ್ಷಿತ ನೀರು ಮತ್ತು ನಿರ್ಮಲೀಕರಣ ವ್ಯವಸ್ಥೆಯಿಲ್ಲದವರ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆಗೊಳಿಸುವರು ಎಂದು ಅವರು ನಿರೀಕ್ಷಿಸಿರುವುದೇ ಆಗಿದೆ.—“ಆಶಾವಾದ ಮತ್ತು ನಿಜತ್ವ” ಎಂಬ ಚೌಕವನ್ನು ನೋಡಿರಿ.
ಆದರೆ, ಭವಿಷ್ಯತ್ತಿನ ಕುರಿತಾದ ಮಾನವನ ಈ ಎಲ್ಲ ವಿಚಾರಗಳು ಬರಿಯ ಭ್ರಾಂತಿಯಾಗಿವೆ. ಉದಾಹರಣೆಗೆ ದಶಕಗಳ ಹಿಂದೆ, 1984ರೊಳಗಾಗಿ ನೀರಿನಡಿಯಲ್ಲಿ ಉಪಯೋಗಿಸಶಕ್ತವಾಗಿರುವ ಟ್ರ್ಯಾಕ್ಟರ್‌ನ ಮೂಲಕ ವ್ಯವಸಾಯಗಾರರು ಸಮುದ್ರದ ತಳವನ್ನು ಉಳುವರು ಎಂಬುದಾಗಿ ಒಬ್ಬ ಪ್ರವೀಣನು ತಿಳಿಸಿದ್ದನು; 1995ರೊಳಗಾಗಿ ಅಪಘಾತವನ್ನು ತಡೆಗಟ್ಟಬಲ್ಲ ಕಂಪ್ಯೂಟರೀಕೃತ ಸಾಧನಗಳಿರುವ ಕಾರ್‌ಗಳನ್ನು ತಯಾರಿಸಲಾಗುವುದು ಎಂದು ಇನ್ನೊಬ್ಬ ಪ್ರವೀಣನು ಹೇಳಿದ್ದನು; 2000ದೊಳಗಾಗಿ ಸುಮಾರು 50,000 ಜನರು ಅಂತರಿಕ್ಷದಲ್ಲಿ ವಾಸಿಸುತ್ತಾ ಕೆಲಸಮಾಡುತ್ತಾ ಇರುವರು ಎಂಬುದಾಗಿ ಮತ್ತೊಬ್ಬ ಪ್ರವೀಣನು ತಿಳಿಸಿದ್ದನು. ಈ ರೀತಿಯಾಗಿ ಮುಂತಿಳಿಸಿದ ವ್ಯಕ್ತಿಗಳು, ತಾವು ಸುಮ್ಮನಿರುತ್ತಿದ್ದರೆ ಒಳ್ಳೇದಿತ್ತು ಎಂದು ಒಂದುವೇಳೆ ಈಗ ನೆನಸುತ್ತಿರಬಹುದು. ಒಬ್ಬ ಪತ್ರಕರ್ತನು ಬರೆದದ್ದು: “ಕಾಲದ ಗತಿಸುವಿಕೆಯು ಲೋಕದ ಅತಿ ಬುದ್ಧಿವಂತರನ್ನು ಮುಟ್ಠಾಳರೆಂದು ರುಜುಪಡಿಸುತ್ತದೆ.”
ನಮ್ಮನ್ನು ಮಾರ್ಗದರ್ಶಿಸುವ “ನಕ್ಷೆ”
ಜನರು ಭವಿಷ್ಯತ್ತಿನ ಬಗ್ಗೆ ನಿರಂತರವಾಗಿ ಊಹಿಸುತ್ತಿರುತ್ತಾರೆ. ಆದರೆ ಭವಿಷ್ಯತ್ತಿನ ಕುರಿತಾದ ಅವರ ಚಿತ್ರಣವು ಕೆಲವೊಮ್ಮೆ ಹೆಚ್ಚು ಆದರ್ಶಾತ್ಮಕವಾದದ್ದಾಗಿ ಇರುತ್ತದೆಯೇ ಹೊರತು ವಾಸ್ತವಿಕವಾಗಿರುವುದಿಲ್ಲ. ಭವಿಷ್ಯತ್ತಿನ ಕುರಿತಾದ ಭರವಸಾರ್ಹ ಪ್ರತೀಕ್ಷೆಯನ್ನು ನಾವು ಎಲ್ಲಿ ಕಂಡುಕೊಳ್ಳಬಲ್ಲೆವು?
ಒಂದು ದೃಷ್ಟಾಂತವನ್ನು ಪರಿಗಣಿಸಿರಿ. ಪರದೇಶವೊಂದರಲ್ಲಿ ನೀವು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ನಿಮಗೆ ಆ ಸ್ಥಳವು ಅಪರಿಚಿತವಾಗಿರುವ ಕಾರಣ ನೀವು ಪೇಚಾಟಕ್ಕೆ ಒಳಗಾಗುತ್ತೀರಿ. ‘ನಾನು ಈಗ ಎಲ್ಲಿದ್ದೇನೆ? ಈ ಬಸ್ ನಿಜವಾಗಿಯೂ ಸರಿಯಾದ ಸ್ಥಳಕ್ಕೆ ಹೋಗುತ್ತಿದೆಯೊ? ನಾನು ಹೋಗಬೇಕಾದ ಸ್ಥಳದಿಂದ ಈಗ ಎಷ್ಟು ದೂರದಲ್ಲಿದ್ದೇನೆ?’ ಎಂದೆಲ್ಲ ನೀವು ಆಲೋಚಿಸುತ್ತೀರಿ. ಒಂದು ನಿಷ್ಕೃಷ್ಟವಾದ ನಕ್ಷೆಯನ್ನು ನೋಡುವ ಮತ್ತು ನಿಮ್ಮ ಕಿಟಕಿಯಿಂದ ಹೊರಗೆ ದಾರಿಯಲ್ಲಿರುವ ಸೂಚನಾ ಫಲಕಗಳನ್ನು ಗಮನಿಸುವ ಮೂಲಕ ನೀವು ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಲ್ಲಿರಿ.
ಇಂದು ಅನೇಕರ ಸನ್ನಿವೇಶವು ಇದೇ ರೀತಿಯಲ್ಲಿದೆ. ಅವರು, ಭವಿಷ್ಯತ್ತಿನ ಕುರಿತು ಆಲೋಚಿಸುವಾಗ ಪೇಚಾಟಕ್ಕೆ ಒಳಗಾಗುತ್ತಾರೆ. ‘ನಾವು ಎತ್ತ ಸಾಗುತ್ತಿದ್ದೇವೆ? ನಾವು ಭೌಗೋಳಿಕ ಶಾಂತಿಯತ್ತ ನಿಜವಾಗಿಯೂ ಸಾಗುತ್ತಿದ್ದೇವೊ? ಹಾಗಿರುವಲ್ಲಿ, ನಾವು ಯಾವಾಗ ನಮ್ಮ ಗುರಿಯನ್ನು ತಲಪುತ್ತೇವೆ?’ ಎಂದೆಲ್ಲ ಅವರು ಆಲೋಚಿಸುತ್ತಾರೆ. ಬೈಬಲ್ ಒಂದು ನಕ್ಷೆಯಂತಿದ್ದು ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ನಮಗೆ ಸಹಾಯನೀಡುತ್ತದೆ. ಆದುದರಿಂದ ಬೈಬಲನ್ನು ಜಾಗರೂಕತೆಯಿಂದ ಓದುವ ಮತ್ತು ನಮ್ಮ “ಕಿಟಕಿಯಿಂದ” ಹೊರಗೆ ಲೋಕದಲ್ಲಿ ಏನು ಸಂಭವಿಸುತ್ತಿದೆಯೊ ಅದನ್ನು ನಿಕಟವಾಗಿ ಗಮನಿಸುವ ಮೂಲಕ ನಮ್ಮ ಸದ್ಯದ ಸನ್ನಿವೇಶಗಳ ಹಾಗೂ ನಾವು ಎತ್ತಸಾಗುತ್ತಿದ್ದೇವೆ ಎಂಬುದರ ಕುರಿತು ಬಹಳಷ್ಟನ್ನು ಕಲಿಯಬಲ್ಲೆವು. ಆದರೆ ಮೊದಲಾಗಿ ನಮ್ಮ ಸಮಸ್ಯೆಗಳು ಹೇಗೆ ಆರಂಭಗೊಂಡವು ಎಂಬುದನ್ನು ಪರಿಗಣಿಸಬೇಕು.
ವಿಪತ್ಕಾರಕ ಆರಂಭಬಿಂದು
ದೇವರು ಮೊದಲ ಪುರುಷ ಮತ್ತು ಸ್ತ್ರೀಯನ್ನು ಸೃಷ್ಟಿಸಿದಾಗ ಅವರು ಪರಿಪೂರ್ಣರಾಗಿದ್ದರು ಮತ್ತು ಆತನು ಅವರನ್ನು ಒಂದು ಪರದೈಸಿಕ ಪರಿಸರದಲ್ಲಿಟ್ಟನು ಎಂಬುದಾಗಿ ಬೈಬಲ್ ತಿಳಿಸುತ್ತದೆ. ಆದಾಮಹವ್ವರು ಕೇವಲ 70 ಇಲ್ಲವೆ 80 ವರುಷ ಜೀವಿಸಲೆಂದು ಸೃಷ್ಟಿಸಲ್ಪಡದೆ ಸದಾಕಾಲ ಜೀವಿಸಲೆಂದು ಸೃಷ್ಟಿಸಲ್ಪಟ್ಟರು. ದೇವರು ಅವರಿಗೆ ಹೇಳಿದ್ದು: “ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ.” ಆದಾಮಹವ್ವರ ಸಂತತಿಯವರು ಪರದೈಸನ್ನು ಭೌಗೋಳಿಕವಾಗಿ ವಿಸ್ತರಿಸಬೇಕೆಂಬುದು ದೇವರ ಉದ್ದೇಶವಾಗಿತ್ತು.—ಆದಿಕಾಂಡ 1:28; 2:8, 15, 22.
ಆದರೆ ಆದಾಮಹವ್ವರು ದೇವರ ವಿರುದ್ಧ ದಂಗೆಯೆದ್ದರು. ಇದರ ಪರಿಣಾಮವಾಗಿ ಅವರು ತಮ್ಮ ಮನೆಯಾದ ಪರದೈಸನ್ನು ಕಳೆದುಕೊಂಡರು. ಅದಕ್ಕಿಂತಲೂ ಹೆಚ್ಚಾಗಿ, ಅವರು ನಿಧಾನವಾಗಿ ಮತ್ತು ಹಂತಹಂತವಾಗಿ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಅವನತಿಗೊಳ್ಳಲು ಆರಂಭಿಸಿದರು. ಒಂದೊಂದು ದಿನ ಕಳೆದಂತೆ, ಆದಾಮನು ತನ್ನ ಮರಣಕ್ಕೆ ಒಂದೊಂದು ಹೆಜ್ಜೆ ಹತ್ತಿರವಾಗುತ್ತಿದ್ದನು. ಏಕೆ? ಏಕೆಂದರೆ ದೇವರಿಗೆ ಬೆನ್ನುಹಾಕುವ ಮೂಲಕ ಅವರು ಪಾಪಿಗಳಾದರು ಮತ್ತು ‘ಪಾಪವು ಕೊಡುವ ಸಂಬಳ ಮರಣವಾಗಿದೆ.’—ರೋಮಾಪುರ 6:23.
ಕೊನೆಗೆ ಆದಾಮಹವ್ವರು ಮೃತಪಟ್ಟರು. ಆದರೆ ಅದಕ್ಕಿಂತ ಮುಂಚೆ ಅವರು ಅನೇಕ ಪುತ್ರ ಪುತ್ರಿಯರನ್ನು ಹೊಂದಿದ್ದರು. ಈ ಮಕ್ಕಳು ದೇವರ ಆದಿ ಉದ್ದೇಶವನ್ನು ನೆರವೇರಿಸಶಕ್ತರಾಗಿದ್ದರೊ? ಇಲ್ಲ. ಏಕೆಂದರೆ, ಅವರು ತಮ್ಮ ಹೆತ್ತವರಿಂದ ಅಪರಿಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದುಕೊಂಡಿದ್ದರು. ವಾಸ್ತವದಲ್ಲಿ, ಸಂತತಿಯಿಂದ ಸಂತತಿಗೆ ಆದಾಮನ ವಂಶಾವಳಿಯಲ್ಲಿ ಬಂದ ಎಲ್ಲರೂ ಪಾಪ ಮತ್ತು ಮರಣವನ್ನು ಬಾಧ್ಯತೆಯಾಗಿ ಪಡೆದರು. ನಾವೂ ಅದನ್ನು ಹೊಂದಿದ್ದೇವೆ. ಬೈಬಲ್ ಹೇಳುವುದು: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”—ರೋಮಾಪುರ 3:23; 5:12.
ಕಾಲಪ್ರವಾಹದಲ್ಲಿ ನಾವು ಎಲ್ಲಿದ್ದೇವೆಂದು ಗುರುತಿಸುವುದು
ಆದಾಮಹವ್ವರ ದಂಗೆಯು, ನಮ್ಮ ದಿನದ ವರೆಗೆ ಮುಂದುವರಿದಿರುವ ಮಾನವಕುಲದ ದೀರ್ಘವಾದ ಮತ್ತು ಅಹಿತಕರವಾದ ಪ್ರಯಾಣದ ಆರಂಭವನ್ನು ಗುರುತಿಸಿತು. ಮಾನವಕುಲವು “ವ್ಯರ್ಥತ್ವಕ್ಕೆ ಒಳಗಾಯಿತು” ಎಂಬುದಾಗಿ ಬೈಬಲಿನ ಒಬ್ಬ ಬರಹಗಾರನು ತಿಳಿಸುತ್ತಾನೆ. (ರೋಮಾಪುರ 8:20) ಮಾನವರ ಹೆಣಗಾಟಕ್ಕೆ ಇದು ಎಂಥ ಒಂದು ಉತ್ತಮ ವರ್ಣನೆ! ಆದಾಮನ ಸಂತತಿಯವರಲ್ಲಿ ವಿಜ್ಞಾನದಲ್ಲಿ ಮೇಧಾವಿಗಳಾದ ಸ್ತ್ರೀಪುರುಷರು, ವೈದ್ಯಶಾಸ್ತ್ರದಲ್ಲಿ ಪ್ರಚಂಡ ಬುದ್ಧಿಶಕ್ತಿಯುಳ್ಳ ವ್ಯಕ್ತಿಗಳು ಮತ್ತು ತಂತ್ರಜ್ಞಾನದಲ್ಲಿ ನವಮಾರ್ಗಗಳನ್ನು ಶೋಧಿಸುವವರು ಇದ್ದಾರೆ. ಆದರೂ, ಇವರಲ್ಲಿ ಒಬ್ಬರೂ ಮಾನವರಿಗಾಗಿ ದೇವರು ಉದ್ದೇಶಿಸಿದ್ದಂಥ ಭೌಗೋಳಿಕ ಶಾಂತಿ ಮತ್ತು ಉತ್ತಮ ಆರೋಗ್ಯವನ್ನು ತರಶಕ್ತರಾಗಲಿಲ್ಲ.
ಆದಾಮಹವ್ವರ ದಂಗೆಯು ನಮ್ಮಲ್ಲಿ ಪ್ರತಿಯೊಬ್ಬರನ್ನು ವೈಯಕ್ತಿಕ ರೀತಿಯಲ್ಲಿ ಬಾಧಿಸುತ್ತದೆ. ಉದಾಹರಣೆಗೆ, ಅನ್ಯಾಯದ ನೋವನ್ನು, ಹಿಂಸೆಯ ಭಯವನ್ನು, ದೀರ್ಘಕಾಲದ ಅಸ್ವಸ್ಥತೆಯ ಯಾತನೆಯನ್ನು ಇಲ್ಲವೆ ಪ್ರಿಯ ವ್ಯಕ್ತಿಯ ಮರಣದಿಂದ ಉಂಟಾಗುವ ವೇದನೆಯನ್ನು ಯಾರು ತಾನೇ ಅನುಭವಿಸಿರುವುದಿಲ್ಲ? ನಮ್ಮ ಜೀವನವು ಸರಾಗವಾಗಿ ಸಾಗುತ್ತಿದ್ದರೆ ಕೂಡಲೆ ಯಾವುದಾದರೊಂದು ವಿಪತ್ತು ಮಧ್ಯಪ್ರವೇಶಿಸಿ ಎಲ್ಲವನ್ನೂ ಹಾಳುಮಾಡುವಂತೆ ತೋರುತ್ತದೆ. ಒಂದುವೇಳೆ ಜೀವನದಲ್ಲಿ ಸಂತೋಷಕರ ಕ್ಷಣಗಳನ್ನು ನಾವು ಅನುಭವಿಸುವುದಾದರೂ, ನಮ್ಮ ಅಸ್ತಿತ್ವವು ಪೂರ್ವಜನಾದ ಯೋಬನು ವರ್ಣಿಸಿದಂತೆಯೇ ಇದೆ. ಅವನು ಹೇಳಿದ್ದು: “ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು.”—ಯೋಬ 14:1.
ನಾವು ಎಲ್ಲಿಂದ ಬಂದೆವು ಮತ್ತು ಈಗ ನಾವು ಎಂಥ ದುಃಖಕರ ಪರಿಸ್ಥಿತಿಯಲ್ಲಿದ್ದೇವೆ ಎಂಬುದನ್ನು ಪರಿಗಣಿಸುವಾಗ, ಭವಿಷ್ಯವು ಮಬ್ಬಾಗಿ ತೋರಬಹುದು. ಆದರೆ ಇಂಥ ಪರಿಸ್ಥಿತಿಗಳು ಇದೇ ರೀತಿ ಮುಂದುವರಿಯುವಂತೆ ದೇವರು ಅನುಮತಿಸುವುದಿಲ್ಲ ಎಂಬುದಾಗಿ ಬೈಬಲ್ ಆಶ್ವಾಸನೆಯನ್ನು ನೀಡುತ್ತದೆ. ಮಾನವರ ಕಡೆಗಿನ ದೇವರ ಮೂಲ ಉದ್ದೇಶವು ಕೈಗೂಡಲಿದೆ. (ಯೆಶಾಯ 55:10, 11) ಇದು ಬೇಗನೆ ಸಂಭವಿಸುವುದೆಂದು ನಾವು ಹೇಗೆ ಖಾತ್ರಿಯಿಂದಿರಬಲ್ಲೆವು?
ಬೈಬಲಿಗನುಸಾರ, ನಾವೀಗ ‘ಕಡೇ ದಿವಸಗಳು’ ಎಂಬುದಾಗಿ ಸಂಬೋಧಿಸಲ್ಪಟ್ಟಿರುವ ಕಠಿನ ಯುಗದಲ್ಲಿ ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1) ಈ ವಾಕ್ಸರಣಿಯು, ಭೂಗ್ರಹದ ಮತ್ತು ಅದರ ಮೇಲಿರುವ ಜೀವಿಗಳ ಅಂತ್ಯವನ್ನು ಸೂಚಿಸುವುದಿಲ್ಲ. ಬದಲಾಗಿ, ಈ ‘ಯುಗದ ಸಮಾಪ್ತಿಯನ್ನು’ ಸೂಚಿಸುತ್ತದೆ. ಅಂದರೆ, ನಮಗೆ ವೇದನೆಯನ್ನು ಉಂಟುಮಾಡುತ್ತಿರುವ ಎಲ್ಲ ಪರಿಸ್ಥಿತಿಗಳ ಅಂತ್ಯವನ್ನು ಸೂಚಿಸುತ್ತದೆ. (ಮತ್ತಾಯ 24:3) ಕಡೇ ದಿವಸಗಳಲ್ಲಿ ನಡೆಯುವ ಘಟನೆಗಳನ್ನು ಮತ್ತು ಆ ಸಮಯದಲ್ಲಿನ ಜನರ ಗುಣಲಕ್ಷಣಗಳನ್ನು ಬೈಬಲ್ ವರ್ಣಿಸುತ್ತದೆ. ಕೆಲವನ್ನು 8ನೇ ಪುಟದಲ್ಲಿರುವ ಚೌಕದಲ್ಲಿ ನೋಡಬಹುದು. ಅದನ್ನು ಗಮನಿಸಿದ ಅನಂತರ, “ಕಿಟಕಿಯಿಂದ” ಹೊರಗೆ ಲೋಕದ ದೃಶ್ಯವನ್ನು ನೋಡಿರಿ. ನಮ್ಮ ನಕ್ಷೆಯಾದ ಬೈಬಲ್ ಈಗ ನಾವು ಈ ಯುಗದ ಸಮಾಪ್ತಿಗೆ ತೀರ ಹತ್ತಿರದಲ್ಲಿದ್ದೇವೆಂದು ಗುರುತಿಸಲು ಸಹಾಯಮಾಡುತ್ತದೆ. ಮುಂದೆ ಏನು ಸಂಭವಿಸಲಿದೆ?
ಮುಂದಿರುವ ಹಾದಿ
ಆದಾಮಹವ್ವರು ದಂಗೆಯೆದ್ದ ಕೂಡಲೆ, ‘ಎಂದಿಗೂ ಅಳಿಯದ’ ಒಂದು ರಾಜ್ಯವನ್ನು ಸ್ಥಾಪಿಸಲು ತಾನು ಮಾಡಲಿರುವ ಏರ್ಪಾಡಿನ ಕುರಿತು ದೇವರು ಪ್ರಕಟಪಡಿಸಲು ಆರಂಭಿಸಿದನು. (ದಾನಿಯೇಲ 2:44) ಕರ್ತನ ಪ್ರಾರ್ಥನೆ ಎಂದು ಹೆಚ್ಚಾಗಿ ಕರೆಯಲ್ಪಡುವ ಪ್ರಾರ್ಥನೆಯಲ್ಲಿ ಜನರು ಇದೇ ರಾಜ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಈ ರಾಜ್ಯವು ಅಸಂಖ್ಯಾತ ಆಶೀರ್ವಾದಗಳನ್ನು ಮಾನವಕುಲಕ್ಕೆ ತರಲಿದೆ.—ಮತ್ತಾಯ 6:9, 10.
ದೇವರ ರಾಜ್ಯ ಎಂಬುದು ಮನುಷ್ಯರ ಹೃದಯದಲ್ಲಿರುವ ಯಾವುದೊ ಒಂದು ಅಸ್ಪಷ್ಟವಾದ ವಿಚಾರವಲ್ಲ. ಇದೊಂದು ನಿಜವಾದ ಸ್ವರ್ಗೀಯ ಸರಕಾರವಾಗಿದೆ ಮತ್ತು ಇದು ಭೂಮಿಯ ಮೇಲೆ ಬಹಳಷ್ಟು ಪ್ರಭಾವವನ್ನು ಬೀರಲಿದೆ. ದೇವರು ತನ್ನ ರಾಜ್ಯದ ಮೂಲಕ ಮಾನವರಿಗಾಗಿ ಏನನ್ನು ಮಾಡುವುದಾಗಿ ವಾಗ್ದಾನಿಸಿದ್ದಾನೆ ಎಂಬುದನ್ನು ಪರಿಗಣಿಸಿರಿ. ದೇವರು ‘ಲೋಕನಾಶಕರನ್ನು ನಾಶಮಾಡುವನು’ ಎಂದು ಬೈಬಲ್ ತಿಳಿಸುತ್ತದೆ. (ಪ್ರಕಟನೆ 11:18) ಆದರೆ ತನಗೆ ವಿಧೇಯತೆಯನ್ನು ತೋರಿಸುವವರಿಗೆ ಆತನು ಏನು ಮಾಡಲಿದ್ದಾನೆ? ಅವನು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ” ಎಂಬುದಾಗಿ ಆತನ ಲಿಖಿತ ವಾಕ್ಯವು ತಿಳಿಸುತ್ತದೆ. (ಪ್ರಕಟನೆ 21:4) ಮಾನವರಲ್ಲಿ ಯಾರಾದರು ಇದನ್ನು ಸಾಧಿಸಬಲ್ಲರೆ? ಮಾನವಕುಲಕ್ಕಾಗಿ ದೇವರು ಆದಿಯಲ್ಲಿ ಯಾವ ಪರಿಸ್ಥಿತಿಯನ್ನು ಉದ್ದೇಶಿಸಿದ್ದನೊ ಅದನ್ನು ಆತನು ಮಾತ್ರ ತರಬಲ್ಲನು.
ದೇವರ ರಾಜ್ಯ ತರಲಿರುವ ಆಶೀರ್ವಾದಗಳಿಂದ ನೀವು ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಲ್ಲಿರಿ? ಯೋಹಾನ 17:3 ತಿಳಿಸುವುದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ [“ಜ್ಞಾನವನ್ನು ಪಡೆದುಕೊಳ್ಳುವುದೇ,” NW] ನಿತ್ಯಜೀವವು.” ಯೆಹೋವನ ಸಾಕ್ಷಿಗಳು ನಡೆಸುವ ಲೋಕವ್ಯಾಪಕ ಶಿಕ್ಷಣ ಕಾರ್ಯಕ್ರಮವು ಈ ಜ್ಞಾನವನ್ನು ಪಡೆದುಕೊಳ್ಳುವಂತೆ ಜನರಿಗೆ ಸಹಾಯಮಾಡುತ್ತದೆ. ಅವರ ಶುಶ್ರೂಷೆಯು ಸುಮಾರು 230 ದೇಶಗಳಲ್ಲಿ ನಡೆಸಲ್ಪಡುತ್ತಿದೆ ಮತ್ತು ಅವರ ಪ್ರಕಾಶನಗಳು 400ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ ಪ್ರಕಟಿಸಲ್ಪಡುತ್ತಿವೆ. ನೀವು ಹೆಚ್ಚಿನ ವಿಷಯಗಳನ್ನು ಕಲಿಯಲು ಬಯಸುವುದಾದರೆ, ಸ್ಥಳಿಕ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ ಇಲ್ಲವೆ ಪುಟ 5ರಲ್ಲಿ ಪಟ್ಟಿಮಾಡಿರುವ ಸೂಕ್ತವಾದ ವಿಳಾಸಕ್ಕೆ ಬರೆಯಿರಿ. (g 1/06)
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಈಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರುಷವಿದ್ದು ವ್ಯಾಪಾರವನ್ನು ಮಾಡಿ ಲಾಭವನ್ನು ಸಂಪಾದಿಸುತ್ತೇವೆ ಅನ್ನುವವರೇ ಕೇಳಿರಿ. ನಾಳೆ ಏನಾಗುವದೋ ನಿಮಗೆ ತಿಳಿಯದು.”—ಯಾಕೋಬ 4:13, 14
[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]
ಬೈಬಲ್ ನಮ್ಮ ಇತಿಹಾಸವನ್ನು ವರ್ಣಿಸುವಾಗ, ಮೊದಲ ಸ್ತ್ರೀಪುರಷರಷ್ಟು ಹಿಂದಕ್ಕೆ ಹೋಗುತ್ತದೆ. ಈ ರೀತಿಯಲ್ಲಿ, ಅದು ನಮ್ಮ ಆರಂಭವನ್ನು, ಅಂದರೆ ನಾವು ಎಲ್ಲಿಂದ ಬಂದೆವು ಎಂಬುದನ್ನು ತಿಳಿಸುತ್ತದೆ. ಮಾತ್ರವಲ್ಲದೆ, ನಾವು ಎತ್ತಸಾಗುತ್ತಿದ್ದೇವೆ ಎಂಬುದನ್ನು ಸಹ ಅದು ಸೂಚಿಸುತ್ತದೆ. ಆದರೆ ಬೈಬಲ್ ಏನನ್ನು ತಿಳಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದರೆ, ಒಂದು ನಕ್ಷೆಯನ್ನು ಪರೀಕ್ಷಿಸುವಂತೆ ನಾವು ಬೈಬಲನ್ನು ನಿಕಟವಾಗಿ ಅಧ್ಯಯನಮಾಡಬೇಕು
[ಪುಟ 7ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಪಾಪ” ಎಂಬ ಪದವನ್ನು ಒಂದು ತಪ್ಪು ಕೃತ್ಯ ಇಲ್ಲವೆ ಕೆಟ್ಟತನಕ್ಕೆ ಓಲುವ ಒಂದು ಪರಿಸ್ಥಿತಿಗೆ ಸೂಚಿಸಸಾಧ್ಯವಿದೆ. ನಾವು ಪಾಪಪೂರ್ಣ ಸ್ಥಿತಿಯಲ್ಲಿ ಹುಟ್ಟಿದ್ದೇವೆ ಮತ್ತು ಅದು ನಮ್ಮ ಪ್ರತಿಯೊಂದು ಕೃತ್ಯಗಳನ್ನು ಪ್ರಭಾವಿಸುತ್ತದೆ. “ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು ಲೋಕದಲ್ಲಿ ಇಲ್ಲವೇ ಇಲ್ಲ.”—ಪ್ರಸಂಗಿ 7:20
[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]
ಕಪ್ಪು ಕಲೆಯಿರುವ ಒಂದು ಕಾಗದದ ನಕಲುಪ್ರತಿಯನ್ನು ನೀವು ತೆಗೆಯುವುದಾದರೆ, ಆ ಕಲೆಯು ಎಲ್ಲ ನಕಲುಪ್ರತಿಗಳಲ್ಲಿಯೂ ಕಂಡುಬರುತ್ತದೆ. ನಕಲುಪ್ರತಿಗಳು ಎಂಬುದಾಗಿ ಕರೆಯಬಹುದಾದ ಆದಾಮನ ಸಂತತಿಯವರಾದ ನಮ್ಮಲ್ಲಿ ಪಾಪದ ಕಲೆಯಿದೆ. ಅದು, “ಮೂಲಪ್ರತಿ”ಯಾದ ಆದಾಮನಲ್ಲಿ ಕಂಡುಬಂದ ಅದೇ ಕಲೆಯಾಗಿದೆ
[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]
ಬೈಬಲ್ ಹೇಳುವುದು: “ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಈ ಮಾತುಗಳು, ಲೋಕ ಶಾಂತಿಯನ್ನು ತರಲು ಮಾನವನು ಮಾಡುವ ಪ್ರಯತ್ನಗಳು ಏಕೆ ವಿಫಲಗೊಳ್ಳುತ್ತಿವೆ ಎಂಬುದನ್ನು ವಿವರಿಸುತ್ತವೆ. ದೇವರಿಂದ ಸ್ವತಂತ್ರನಾಗಿ ‘ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲು’ ಮಾನವನು ಸೃಷ್ಟಿಸಲ್ಪಡಲಿಲ್ಲ
[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]
ಬೈಬಲಿನ ಕೀರ್ತನೆಗಾರನು ದೇವರಿಗೆ ಹೇಳಿದ್ದು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.” (ಕೀರ್ತನೆ 119:105) ಬೈಬಲ್ ದೀಪದಂತಿದ್ದು, ನಾವು ನಿರ್ಣಯಗಳನ್ನು ಮಾಡಬೇಕಾಗಿರುವಾಗ ವಿವೇಕಯುತ ಹೆಜ್ಜೆಗಳನ್ನು ತೆಗೆದುಕೊಳ್ಳುವಂತೆ ನಮಗೆ ಸಹಾಯಮಾಡುತ್ತದೆ. ಅದು ‘ನಮ್ಮ ದಾರಿಗೆ ಬೆಳಕಿನಂತಿದ್ದು,’ ಮಾನವಕುಲಕ್ಕೆ ಭವಿಷ್ಯತ್ತಿನಲ್ಲಿ ಏನು ಕಾದಿದೆ ಎಂಬುದನ್ನು ನಾವು ಗ್ರಹಿಸಸಾಧ್ಯವಾಗುವಂತೆ ನಮ್ಮ ಮುಂದಿರುವ ಮಾರ್ಗವನ್ನು ಪ್ರಕಾಶಿಸುತ್ತದೆ
[ಪುಟ 7ರಲ್ಲಿರುವ ಚೌಕ]
ಆಶಾವಾದ ಮತ್ತು ನಿಜತ್ವ
ಇಸವಿ 2000ದ ಸೆಪ್ಟೆಂಬರ್ ತಿಂಗಳಿನಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು, 2015ರೊಳಗಾಗಿ ಸಾಧಿಸಬೇಕಾದ ಅನೇಕ ಗುರಿಗಳನ್ನು ಸರ್ವಾನುಮತದಿಂದ ಸ್ಥಾಪಿಸಿದವು. ಆ ಗುರಿಗಳಲ್ಲಿ ಇವು ಸೇರಿವೆ:
◼ ದಿನಕ್ಕೆ ಒಂದು ಡಾಲರ್‌ಗಿಂತಲೂ ಕಡಿಮೆ ಹಣದಲ್ಲಿ ಜೀವಿಸುತ್ತಿರುವ ಮತ್ತು ಆಹಾರ ಕೊರತೆಯಿಂದ ಕಷ್ಟಪಡುತ್ತಿರುವ ಜನರ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆಗೊಳಿಸುವುದು.
◼ ಎಲ್ಲ ಮಕ್ಕಳಿಗೂ ಪ್ರಾಥಮಿಕ ಶಿಕ್ಷಣವು ದೊರಕುವುದನ್ನು ಖಚಿತಪಡಿಸುವುದು.
◼ ಎಲ್ಲ ಮಟ್ಟದ ವಿದ್ಯಾಭ್ಯಾಸದಲ್ಲಿ ಲಿಂಗ ಅಸಮತೆಯನ್ನು ತೆಗೆದುಹಾಕುವುದು.
◼ ಐದು ವರುಷಕ್ಕಿಂತ ಕೆಳಗಿನ ಮಕ್ಕಳ ಮರಣದ ಸಂಖ್ಯೆಯನ್ನು ಮೂರರಲ್ಲಿ ಎರಡಂಶ ಕಡಿಮೆಗೊಳಿಸುವುದು.
◼ ಹೆರಿಗೆಯ ಸಮಯದಲ್ಲಿ ಆಗುವ ಸಾವಿನ ಸಂಖ್ಯೆಯನ್ನು 75 ಪ್ರತಿಶತದಷ್ಟು ಕಡಿಮೆಗೊಳಿಸುವುದು.
◼ ಏಚ್‌ಐವಿ/ಏಡ್ಸ್ ರೋಗದ ಹರಡುವಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಮತ್ತು ಅದರ ಹಾಗೂ ಮಲೇರಿಯದಂತಹ ಇತರ ದೊಡ್ಡ ದೊಡ್ಡ ರೋಗಗಳ ಹರಡುವಿಕೆಯನ್ನು ಕಡಿಮೆಗೊಳಿಸುವುದು.
◼ ಸುರಕ್ಷಿತ ಕುಡಿಯುವ ನೀರಿನ ಸರಬರಾಯಿ ಇಲ್ಲದ ಜನರ ಸಂಖ್ಯೆಯನ್ನು 50 ಪ್ರತಿಶತದಷ್ಟು ಕಡಿಮೆಗೊಳಿಸುವುದು.
ಈ ಎಲ್ಲ ಗುರಿಗಳನ್ನು ಸಾಧಿಸಸಾಧ್ಯವಿದೆಯೊ? ಲೋಕದ ಸುತ್ತಲಿನಿಂದ ಬಂದ ಆರೋಗ್ಯ ಅಧಿಕಾರಿಗಳ ಒಂದು ಗುಂಪು, 2004ರಲ್ಲಿ ವಿಷಯಗಳನ್ನು ಪುನಃ ತೂಗಿನೋಡಿದ ಅನಂತರ, ನಿಜವಾಗಿಯೂ ಲೋಕದಲ್ಲಿ ಏನು ಸಂಭವಿಸುತ್ತಿದೆಯೊ ಅದನ್ನು ಗಮನಿಸುವಾಗ ಆಶಾವಾದವನ್ನು ನಾವು ಮಿತವಾಗಿಡಬೇಕು ಎಂಬ ಸಮಾಪ್ತಿಗೆ ತಲಪಿದೆ. ಲೋಕದ ಸ್ಥಿತಿ 2005 (ಇಂಗ್ಲಿಷ್) ಎಂಬ ಪುಸ್ತಕದ ಮುನ್ನುಡಿಯು ಹೀಗೆ ವರದಿಸುತ್ತದೆ: “ಅನೇಕ ಕ್ಷೇತ್ರಗಳಲ್ಲಿ ಬಡತನವು ಪ್ರಗತಿಯನ್ನು ತಡೆಗಟ್ಟುತ್ತಿದೆ. ಏಚ್‌ಐವಿ/ಏಡ್ಸ್ ಮುಂತಾದ ರೋಗಗಳು ಸಾರ್ವಜನಿಕರ ಆರೋಗ್ಯಕ್ಕೆ ಭೀತಿಯನ್ನೊಡ್ಡುತ್ತಾ ದಿನೇ ದಿನೇ ಹೆಚ್ಚಾಗುತ್ತಾ ಇವೆ. ಕಳೆದ ಐದು ವರುಷಗಳಲ್ಲಿ, ತಡೆಗಟ್ಟಬಹುದಾಗಿದ್ದ ಜಲವಾಹಿತ ರೋಗದಿಂದಾಗಿ ಸುಮಾರು ಎರಡು ಕೋಟಿ ಮಕ್ಕಳು ಮೃತಪಟ್ಟರು ಮತ್ತು ಕೋಟ್ಯಂತರ ಜನರು ಈಗಲೂ ಶುದ್ಧನೀರಿನ ಹಾಗೂ ನಿರ್ಮಲೀಕರಣ ವ್ಯವಸ್ಥೆಯ ಕೊರತೆಗೆ ಸಂಬಂಧಪಟ್ಟ ದುರವಸ್ಥೆ ಮತ್ತು ದಾರಿದ್ರ್ಯವನ್ನು ದಿನನಿತ್ಯವು ಅನುಭವಿಸುತ್ತಾ ಇದ್ದಾರೆ.”
[ಪುಟ 8, 9ರಲ್ಲಿರುವ ಚೌಕ/ಚಿತ್ರಗಳು]
“ಕಡೇ ದಿವಸಗಳ” ಕೆಲವು ವೈಶಿಷ್ಟ್ಯಗಳು
ಹಿಂದೆಂದೂ ಕಂಡಿದ್ದಿರದಂಥ ಯುದ್ಧಗಳು.—ಮತ್ತಾಯ 24:7; ಪ್ರಕಟನೆ 6:4.
ಬರಗಾಲ.—ಮತ್ತಾಯ 24:7; ಪ್ರಕಟನೆ 6:5, 6, 8.
ಅಂಟುರೋಗಗಳು.—ಲೂಕ 21:11; ಪ್ರಕಟನೆ 6:8.
ಅಧರ್ಮದ ಹೆಚ್ಚುವಿಕೆ.—ಮತ್ತಾಯ 24:12.
ಲೋಕದ ಹಾಳುಗೆಡಿಸುವಿಕೆ.—ಪ್ರಕಟನೆ 11:18.
ಮಹಾ ಭೂಕಂಪಗಳು.—ಲೂಕ 21:11.
ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳು.—2 ತಿಮೊಥೆಯ 3:1.
ವಿಪರೀತ ಹಣದಾಸೆ.—2 ತಿಮೊಥೆಯ 3:2.
ತಂದೆತಾಯಿಗಳಿಗೆ ಅವಿಧೇಯತೆ.—2 ತಿಮೊಥೆಯ 3:2.
ಮಮತೆಯಿಲ್ಲದಿರುವಿಕೆ.—2 ತಿಮೊಥೆಯ 3:3.
ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವುದು.—2 ತಿಮೊಥೆಯ 3:4.
ದಮೆಯಿಲ್ಲದಿರುವಿಕೆ ಅಥವಾ ಸ್ವನಿಯಂತ್ರಣದ ಕೊರತೆ.—2 ತಿಮೊಥೆಯ 3:3.
ಒಳ್ಳೇದನ್ನು ಪ್ರೀತಿಸದಿರುವುದು.—2 ತಿಮೊಥೆಯ 3:3.
ಮುಂದೆ ಸಂಭವಿಸಲಿರುವ ವಿಪತ್ತಿನ ಕುರಿತು ಗಮನಕೊಡದೆ ಇರುವುದು.—ಮತ್ತಾಯ 24:39.
ಕುಚೋದ್ಯಗಾರರು ಕಡೇ ದಿವಸಗಳ ರುಜುವಾತನ್ನು ತಳ್ಳಿಹಾಕುತ್ತಾರೆ.—2 ಪೇತ್ರ 3:3, 4.
ಭೌಗೋಳಿಕವಾಗಿ ದೇವರ ರಾಜ್ಯದ ಸಾರುವಿಕೆ.—ಮತ್ತಾಯ 24:14.
[ಕೃಪೆ]
© G.M.B. Akash/Panos Pictures
© Paul Lowe/Panos Pictures
[ಪುಟ 9ರಲ್ಲಿರುವ ಚಿತ್ರ]
ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಯೆಹೋವನ ಸಾಕ್ಷಿಗಳು ಹೆಸರುವಾಸಿಯಾಗಿದ್ದಾರೆ