ಜಗತ್ತನ್ನು ಗಮನಿಸುವುದು
ಜಾರ್ಜಿಯದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪುನರ್ದೃಢೀಕರಣ
ಧಾರ್ಮಿಕ ವಿಷಯಕ್ಕಾಗಿ ಯೆಹೋವನ ಸಾಕ್ಷಿಗಳ ಮೇಲೆಸಗಲಾದ ಹಿಂಸೆಯ ಕುರಿತು ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕಾಗಿ ಜಾರ್ಜಿಯ ದೇಶದ ಸರಕಾರಕ್ಕೆ ಮಾನವ ಹಕ್ಕುಗಳ ಯುರೋಪಿಯನ್ ಕೋರ್ಟ್ ಛೀಮಾರಿ ಹಾಕಿತು. ಕ್ರೈಸ್ತರೆಂದು ಗುರುತಿಸಲಾದ ಯೆಹೋವನ ಸಾಕ್ಷಿಗಳಿಗೆ ಆರಾಧನೆ ಮತ್ತು ಬೈಬಲ್ ಅಧ್ಯಯನಕ್ಕಾಗಿ ಕೂಡಿಬರಲು ಇರುವ ಹಕ್ಕನ್ನು ಕೋರ್ಟ್ ಪುನರ್ದೃಢೀಕರಿಸಿತು. ಮಾತ್ರವಲ್ಲ, ಹಿಂಸೆಗೆ ಬಲಿಯಾದವರಿಗೆ ಆದ ನಷ್ಟ ತುಂಬಿಸಿಕೊಡುವಂತೆ ಹಾಗೂ ನ್ಯಾಯಾಲಯ-ವೆಚ್ಚವನ್ನು ಹಿಂತಿರುಗಿಸುವಂತೆ ಅದು ಸರಕಾರಕ್ಕೆ ಆದೇಶ ನೀಡಿತು. ಇಸವಿ 1999 ರ ಅಕ್ಟೋಬರ್ ತಿಂಗಳಿನಿಂದ 2002 ರ ನವೆಂಬರ್ ವರಗೆ ಯೆಹೋವನ ಸಾಕ್ಷಿಗಳ ಮೇಲೆ 138 ಹಲ್ಲೆಗಳನ್ನು ಎಸಗಲಾಗಿತ್ತು. ಆ ಸಮಯಾವಧಿಯಲ್ಲಿ ಯೆಹೋವನ ಸಾಕ್ಷಿಗಳು ಜಾರ್ಜಿಯದ ಅಧಿಕಾರಿಗಳಿಗೆ 784 ದೂರುಗಳನ್ನು ಸಲ್ಲಿಸಿದ್ದರು. ಆದರೆ, ಈ ದೂರಿನ ಕುರಿತು ಯಾವ ತನಿಖೆಯನ್ನು ನಡೆಸಿರಲಿಲ್ಲ. ಪೊಲೀಸರು ಸಹ ಕೂಡಲೇ ಕ್ರಮ ಕೈಗೊಂಡು ಹಲ್ಲೆಗೊಳಗಾದವರಿಗೆ ರಕ್ಷಣೆ ಒದಗಿಸಲು ನಿರಾಕರಿಸಿದ್ದರು. 2003 ರ ನವೆಂಬರ್‌ನಿಂದ ಈ ರೀತಿಯ ಹಲ್ಲೆಗಳು ತುಂಬಾ ಕಡಿಮೆಯಾಗಿವೆ. (g 2/08)
ಸ್ತ್ರೀಯರನ್ನು ಬೇಸರಕ್ಕೀಡುಮಾಡುವ ಚಿತ್ರಗಳು
“ಪತ್ರಿಕೆಗಳ ಮುಖಪುಟಗಳಲ್ಲಿ ಮಿಂಚುವ ತೆಳ್ಳಗಿನ ಮೋಹಕ ಚೆಲುವೆಯರ ಚಿತ್ರಗಳು ಎಲ್ಲ ರೀತಿಯ ಸ್ತ್ರೀಯರನ್ನು ಕಸಿವಿಸಿಗೊಳಿಸುತ್ತವೆ. ತಮ್ಮ ರೂಪ, ಎತ್ತರ ಮತ್ತು ಪ್ರಾಯ ಏನೇ ಆಗಿದ್ದರೂ ಹೆಂಗಳೆಯರು ಅಂಥ ಚಿತ್ರಗಳನ್ನು ನೋಡುವಾಗ ತಮ್ಮ ಶರೀರದ ಕುರಿತು ಯೋಚಿಸಿ ವ್ಯಥೆಗೀಡಾಗುತ್ತಾರೆ” ಎಂದು ಅಮೆರಿಕಾದ ಮಿಸೋರಿ-ಕೊಲಂಬಿಯ ವಿಶ್ವವಿದ್ಯಾಲಯದ ಒಂದು ವರದಿ ತಿಳಿಸುತ್ತದೆ. ಶಿಕ್ಷಣ ಮತ್ತು ಮನೋವಿಜ್ಞಾನ ಮಾರ್ಗದರ್ಶನದ ಅಸೋಸಿಯಟ್ ಪ್ರೊಫೆಸರ್ ಲಾರಿ ಮಿಂಟ್ಸ್‌ಗನುಸಾರ “ಮಾಧ್ಯಮಗಳಲ್ಲಿ ತೋರಿಬರುವ ಸುಂದರ ಮೈಕಟ್ಟಿನ ಚೆಲುವೆಯರ ಚಿತ್ರಗಳನ್ನು ನೋಡುವಾಗ ತೆಳ್ಳಗಿರುವವರಿಗಿಂತಲೂ ದಪ್ಪಗಿರುವವರು ಹೆಚ್ಚು ಬೇಸರಪಡುತ್ತಾರೆಂದು ಒಂದು ಸಮಯದಲ್ಲಿ ಭಾವಿಸಲಾಗಿತ್ತು.” ಆದರೆ, “ದಪ್ಪವಿರುವವರು ಮಾತ್ರವಲ್ಲ, ಪ್ರತಿಯೊಬ್ಬರು ಈ ಚಿತ್ರಗಳನ್ನು ನೋಡಿ ಕಸಿವಿಸಿಗೊಳ್ಳುತ್ತಾರೆ ಎಂಬುದನ್ನು ನಾವು ಕಂಡುಕೊಂಡೆವು” ಎಂದು ಮಿಂಟ್ಸ್ ಹೇಳುತ್ತಾರೆ. (g 2/08)
64 ವರ್ಷ ಕಾಡಿದ ತಲೆನೋವು
ಚೈನಿಸ್ ಮಹಿಳೆಯೊಬ್ಬಳಿಗೆ, 60 ಕ್ಕಿಂತಲೂ ಹೆಚ್ಚು ವರ್ಷ “ಕಾಡಿದ ತಲೆನೋವಿಗೆ” ಕಾರಣವೇನೆಂದು ವೈದ್ಯರು ಆಕೆಯ ತಲೆಯಿಂದ ಮೂರು ಸೆಂಟಿಮೀಟರ್ ಉದ್ದದ ಗುಂಡೊಂದನ್ನು ಹೊರತೆಗೆದಾಗಲೇ ತಿಳಿಯಿತು. 1943 ರ ಸೆಪ್ಟೆಂಬರ್‌ನಲ್ಲಿ ಸಿನ್ಯೀ ಪ್ರಾಂತ್ಯದ ಹಳ್ಳಿಯೊಂದನ್ನು ಜಪಾನೀಯರು ಆಕ್ರಮಣಮಾಡುತ್ತಿದ್ದಾಗ ಆಕೆಯ ತಲೆಗೆ ಪೆಟ್ಟಾಗಿತ್ತು. ಆಗ ಆಕೆಗೆ 13 ವರ್ಷವಾಗಿತ್ತಷ್ಟೇ. ಗುಂಡೊಂದು ತಲೆನೋವಿಗೆ ಕಾರಣವಾಗಿರಬಹುದೆಂದು ಯಾರು ಸಹ ನೆನಸಿರಲಿಲ್ಲ. ತಲೆನೋವು ಜಾಸ್ತಿಯಾಗಿ ಎಕ್ಸ್-ರೇ ತೆಗೆದಾಗಲಷ್ಟೇ ಗುಂಡಿರುವ ವಿಷಯ ಬಯಲಾಯಿತು ಎಂದು ಷಿನ್ಹ್‌ವಾ ವಾರ್ತಾ ಏಜನ್ಸಿಯು ತಿಳಿಸುತ್ತದೆ. ಈಗ 77 ವರ್ಷದ ಆ ಸ್ತ್ರೀಯ ಆರೋಗ್ಯ “ಸುಸ್ಥಿತಿಯಲ್ಲಿದೆ” ಎಂದು ವರದಿ ತಿಳಿಸುತ್ತದೆ. (g 3/08)
ದಿರ್ಘಾಯಸ್ಸಿನ ತಿಮಿಂಗಲ
ಅಲಾಸ್ಕದ ಸ್ಥಳೀಯ ಬೇಟೆಗಾರರು 2007 ರಲ್ಲಿ ಬೋಹೆಡ್ ತಿಮಿಂಗಲವೊಂದನ್ನು ಕೊಂದರು. ಹಳೆಯ ಈಟಿಗಾಳದ ಚೂಪಾದ ಮೊನೆ ಹಾಗೂ ಇತರ ಚೂರುಗಳು ಅದಕ್ಕೆ ಚುಚ್ಚಿಕೊಂಡಿರುವುದನ್ನು ಅವರು ಪತ್ತೆಹಚ್ಚಿದರು. “ಇವು, 1800 ರ ಅಂತ್ಯದಲ್ಲಿ, ನ್ಯೂ ಬೆಡ್‌ಫೋರ್ಡ್ ಪಟ್ಟಣದಲ್ಲಿ [ಮ್ಯಾಸಚೂಸೆಟ್ಸ್, ಯು. ಎಸ್. ಎ.] ತಯಾರಿಸಲಾದ ಸ್ಫೋಟಿಸುವ ಈಟಿಯಂಥ ಕ್ಷಿಪಣಿಯ ಭಾಗಗಳಾಗಿವೆ” ಎಂದು ದ ಬಾಸ್ಟನ್ ಗ್ಲೋಬ್ ವಾರ್ತಾಪತ್ರಿಕೆ ತಿಳಿಸುತ್ತದೆ. ಇಂಥ ಈಟಿ ಕ್ಷಿಪಣಿಗಳ ಬಳಕೆ ಕ್ರಮೇಣ ನಿಂತುಹೋಯಿತು. ಆದುದರಿಂದ, ಈ ತಿಮಿಂಗಲಕ್ಕೆ “1885 ಮತ್ತು 1895 ರ ಮಧ್ಯಭಾಗದಲ್ಲಿ” ಈಟಿಗಾಳದಿಂದ ಹೊಡೆಯಲಾಗಿತ್ತು ಎಂಬ ತೀರ್ಮಾನಕ್ಕೆ ನ್ಯೂ ಬೆಡ್‌ಫೋರ್ಡ್‌ನ ತಿಮಿಂಗಲ ಮ್ಯೂಸಿಯಂನ ಇತಿಹಾಸಗಾರರು ಬಂದಿದ್ದಾರೆ. ಹಾಗಾದರೆ, ಇದು ಸತ್ತಾಗ ಕಡಿಮೆಯೆಂದರೆ 115 ವರ್ಷ ಪ್ರಾಯವಾಗಿದ್ದಿರಬೇಕು. ಈ ಹಳೆಯ ಈಟಿಗಾಳದ ಚೂರನ್ನು ಪತ್ತೆಹಚ್ಚಿದ್ದು, “ಭೂಮಿಯಲ್ಲಿ ಅತ್ಯಂತ ದೀರ್ಘಕಾಲ ಬದುಕುವ ಸಸ್ತನಿಗಳಲ್ಲಿ ಬೋಹೆಡ್ ತಿಮಿಂಗಲ ಒಂದಾಗಿದೆ ಮತ್ತು ಅದು ಸುಮಾರು 150 ವರ್ಷಕಾಲ ಬದುಕುಳಿಯಬಲ್ಲದು ಎಂಬ ಬಹು ಸಮಯದ ವಾದಕ್ಕೆ ಇನ್ನಷ್ಟು ಇಂಬುಕೂಡುತ್ತದೆ” ಎಂದು ಗ್ಲೋಬ್ ತಿಳಿಸುತ್ತದೆ. (g 3/08)
[ಪುಟ 31ರಲ್ಲಿರುವ ಚಿತ್ರವಿವರಣೆ]
◼ “ಭೌಗೋಳಿಕ ಕಾವೇರುವಿಕೆಯಿಂದಲೋ ಬೇರೆ ಕಾರಣದಿಂದಲೋ ಹವಾಮಾನ ಸಂಬಂಧಿತ ವಿನಾಶಗಳು 1970 ರಿಂದ ಹಿಡಿದು 1990 ರ ದಶಕದ ವರೆಗೆ ಮೂರುಪಟ್ಟು ಹೆಚ್ಚಿವೆ.”—ದಿ ಎಕಾನಾಮಿಸ್ಟ್, ಬ್ರಿಟನ್. (g 2/08)
◼ 10 ತಿಂಗಳ ಗಂಡು ಮಗುವಿಗೆ ಗನ್ ಇಟ್ಟುಕೊಳ್ಳಲು ಅಮೆರಿಕಾದ ಇಲಿನ್ವಾಯ್ ಸರಕಾರ ಅನುಮತಿ ನೀಡಿದೆ. ಮಗುವಿನ ಪರವಾಗಿ ತಂದೆ ಸಲ್ಲಿಸಿದ ಅರ್ಜಿಯ ಪ್ರಕಾರ ಆ ಮಗುವಿನ ಎತ್ತರ ಎರಡು ಅಡಿ ಮೂರು ಇಂಚು. ತೂಕ ಸುಮಾರು ಒಂಬತ್ತು ಕಿಲೋ. ಅರ್ಜಿದಾರರ ವಯೋಮಿತಿ ಇಂತಿಷ್ಟೆ ಇರಬೇಕೆಂಬ ಯಾವುದೇ ನಿರ್ಬಂಧ ಅಲ್ಲಿಲ್ಲ.—ಕೇಬಲ್ ನ್ಯೂಸ್ ನೆಟ್‌ವರ್ಕ್, ಯು. ಎಸ್. ಎ. (g 2/08)
◼ ಗ್ರೀಸ್ ದೇಶದಲ್ಲಿ, “16 ವರ್ಷಕ್ಕಿಂತಲೂ ಕಡಿಮೆ ಪ್ರಾಯದ ಮಕ್ಕಳಲ್ಲಿ ಶೇಖಡ 62 ಮಂದಿ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಅಶ್ಲೀಲ ವಿಷಯಗಳನ್ನು ಅಳವಡಿಸಿಕೊಂಡರೆಂದು ಒಪ್ಪಿಕೊಂಡಿದ್ದಾರೆ.”—ಎಲೆಫ್‌ಥ್ರೊಟಿಪ್ಯಾ, ಗ್ರೀಸ್. (g 3/08)
◼ “ಧರ್ಮವೇ, ಭೇದಭಾವ ಮತ್ತು ಮಾನಸಿಕ ಒತ್ತಡಕ್ಕೆ ಕಾರಣ” ಎಂದು ಬ್ರಿಟನಿನ ಶೇಖಡ 82 ಜನರು ನಂಬುತ್ತಾರೆ.—ದ ಗಾರ್ಡಿಯನ್, ಬ್ರಿಟನ್. (g 3/08)