ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 6 ಪು. 101-ಪು. 104 ಪ್ಯಾ. 4
  • ಸರಿಯಾದ ಅರ್ಥಒತ್ತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸರಿಯಾದ ಅರ್ಥಒತ್ತು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಶಾಸ್ತ್ರವಚನಗಳನ್ನು ಸರಿಯಾದ ಒತ್ತುನೀಡಿ ಓದುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಮಾನಸಿಕ ಒತ್ತಡ ನಿಯಂತ್ರಿಸುವುದು ಹೇಗೆ?
    ಎಚ್ಚರ!—2010
  • ಹಿತಕರ ಒತ್ತಡ, ಅಹಿತಕರ ಒತ್ತಡ
    ಎಚ್ಚರ!—1998
  • ಒತ್ತಡದಿಂದ ಹೊರ ಬರುವ ದಾರಿ
    ಎಚ್ಚರ!—2020
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 6 ಪು. 101-ಪು. 104 ಪ್ಯಾ. 4

ಅಧ್ಯಾಯ 6

ಸರಿಯಾದ ಅರ್ಥಒತ್ತು

ನೀವೇನು ಮಾಡುವ ಅಗತ್ಯವಿದೆ?

ವ್ಯಕ್ತಪಡಿಸಲ್ಪಡುತ್ತಿರುವ ವಿಚಾರಗಳ ಅರ್ಥವನ್ನು ಕೇಳುಗರು ಸುಲಭವಾಗಿ ಗ್ರಹಿಸುವಂತೆ ಮಾಡುವ ರೀತಿಯಲ್ಲಿ, ಪದಗಳನ್ನು ಮತ್ತು ಪದಗುಚ್ಛಗಳನ್ನು ಒತ್ತಿಹೇಳಿರಿ.

ಇದು ಪ್ರಾಮುಖ್ಯವೇಕೆ?

ಸರಿಯಾದ ಅರ್ಥಒತ್ತು, ಭಾಷಣಕಾರನು ತನ್ನ ಸಭಿಕರ ಗಮನವನ್ನು ಹಿಡಿದಿಟ್ಟುಕೊಳ್ಳುವಂತೆಯೂ ಅವರನ್ನು ಒಡಂಬಡಿಸುವಂತೆ ಅಥವಾ ಪ್ರಚೋದಿಸುವಂತೆಯೂ ಸಹಾಯಮಾಡುತ್ತದೆ.

ನೀವು ಗಟ್ಟಿಯಾಗಿ ಮಾತನಾಡುವಾಗ ಅಥವಾ ಓದುವಾಗ, ಒಂದೊಂದು ಪದವನ್ನು ಸರಿಯಾಗಿ ಉಚ್ಚರಿಸುವುದು ಪ್ರಾಮುಖ್ಯವಾಗಿದೆ ಮಾತ್ರವಲ್ಲ, ವಿಚಾರಗಳನ್ನು ಸ್ಪಷ್ಟವಾಗಿ ತಿಳಿಯಪಡಿಸುವಂಥ ರೀತಿಯಲ್ಲಿ ಮುಖ್ಯ ಪದಗಳನ್ನು ಮತ್ತು ಆಲೋಚನಾಭರಿತ ಅಭಿವ್ಯಕ್ತಿಗಳನ್ನು ಒತ್ತಿಹೇಳುವುದೂ ಪ್ರಾಮುಖ್ಯವಾಗಿದೆ.

ಸರಿಯಾದ ಅರ್ಥಒತ್ತಿನಲ್ಲಿ, ಕೆಲವು ಪದಗಳನ್ನು ಅಥವಾ ಅನೇಕ ಪದಗಳನ್ನು ಒತ್ತಿಹೇಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಸರಿಯಾದ ಪದಗಳನ್ನೇ ಒತ್ತಿಹೇಳಬೇಕು. ತಪ್ಪಾದ ಪದಗಳನ್ನು ಒತ್ತಿಹೇಳುವಲ್ಲಿ, ನೀವು ಏನು ಹೇಳುತ್ತೀರೋ ಅದರ ಅರ್ಥವು ನಿಮ್ಮ ಸಭಿಕರಿಗೆ ಅಸ್ಪಷ್ಟವಾಗಬಹುದು. ಆಗ ಅವರು, ತಮ್ಮ ಆಲೋಚನೆಗಳನ್ನು ಬೇರೆ ವಿಷಯಗಳ ಕಡೆಗೆ ತಿರುಗಿಸಬಹುದು. ಭಾಷಣದ ವಿಷಯಭಾಗವು ಒಳ್ಳೇದಾಗಿರಬಹುದಾದರೂ, ಅಸಮರ್ಪಕವಾದ ಹಾಗೂ ತಪ್ಪಾದ ಅರ್ಥಒತ್ತು, ಸಭಿಕರನ್ನು ಪ್ರಚೋದಿಸುವುದರಲ್ಲಿ ಕಡಿಮೆ ಪರಿಣಾಮಕಾರಿಯಾಗಿರುವುದು.

ಬೇರೆ ಬೇರೆ ರೀತಿಯಲ್ಲಿ ಒತ್ತಿಹೇಳುವಿಕೆಯನ್ನು ವ್ಯಕ್ತಪಡಿಸಸಾಧ್ಯವಿದೆ ಮತ್ತು ಹೆಚ್ಚಾಗಿ ಇದೆಲ್ಲವನ್ನು ಸಂಯೋಜಿತ ಸ್ಥಿತಿಯಲ್ಲಿ ಉಪಯೋಗಿಸಲಾಗುತ್ತದೆ: ಹೆಚ್ಚು ಗಟ್ಟಿಯಾದ ಸ್ವರ, ಗಾಢವಾದ ಭಾವನೆಯ ಮೂಲಕ, ನಿಧಾನವಾದ ಮತ್ತು ಸಾವಕಾಶವಾಗಿ ತೀರ್ಮಾನಿಸಿ ಹೇಳಿದ ಮಾತುಗಳಿಂದ, ಒಂದು ಹೇಳಿಕೆಯ ಮುಂಚೆ ಅಥವಾ ನಂತರ (ಇಲ್ಲವೆ, ಎರಡೂ ಸ್ಥಳಗಳಲ್ಲಿ) ನಿಲ್ಲಿಸುವುದರಿಂದ ಮತ್ತು ಭಾವಾಭಿನಯ ಹಾಗೂ ಮುಖಭಾವದ ಮೂಲಕ ಇದನ್ನು ವ್ಯಕ್ತಪಡಿಸಸಾಧ್ಯವಿದೆ. ಕೆಲವು ಭಾಷೆಗಳಲ್ಲಿ, ಧ್ವನಿಯನ್ನು ಕುಂದಿಸಿ ಅಥವಾ ಸ್ವರದ ಮಟ್ಟವನ್ನೇರಿಸಿ ಸಹ ಒತ್ತನ್ನು ತಿಳಿಯಪಡಿಸಬಹುದು. ಯಾವುದು ಹೆಚ್ಚು ಸೂಕ್ತವಾಗಿರುವುದು ಎಂಬುದನ್ನು ನಿರ್ಣಯಿಸಲಿಕ್ಕಾಗಿ, ಭಾಷಣದ ವಿಷಯಭಾಗವನ್ನೂ ಅದರ ಸಂದರ್ಭಗಳನ್ನೂ ಗಣನೆಗೆ ತೆಗೆದುಕೊಳ್ಳಿರಿ.

ಯಾವುದನ್ನು ಒತ್ತಿಹೇಳಬೇಕೆಂಬುದನ್ನು ನಿರ್ಧರಿಸುವಾಗ, ಈ ಕೆಳಗಿನ ಅಂಶಗಳನ್ನು ಪರಿಗಣಿಸಿ. (1) ಒಂದು ವಾಕ್ಯದಲ್ಲಿ, ಯಾವ ಪದಗಳಿಗೆ ಹೆಚ್ಚಿನ ಒತ್ತನ್ನು ಕೊಡಬೇಕು ಎಂಬುದನ್ನು, ಆ ವಾಕ್ಯದ ಉಳಿದ ಭಾಗದಿಂದ ಮಾತ್ರವಲ್ಲ ಅದರ ಪೂರ್ವಾಪರದ ಆಧಾರದ ಮೇಲೆಯೂ ನಿರ್ಧರಿಸಲಾಗುತ್ತದೆ. (2) ಒಂದು ಹೊಸ ವಿಚಾರವನ್ನು—ಅದು ಮುಖ್ಯಾಂಶವಾಗಿರಲಿ ಅಥವಾ ಕೇವಲ ತರ್ಕಸರಣಿಯಲ್ಲಿನ ಒಂದು ಬದಲಾವಣೆಯಾಗಿರಲಿ—ಒತ್ತಿಹೇಳಲಿಕ್ಕಾಗಿಯೂ ಅರ್ಥಒತ್ತನ್ನು ಉಪಯೋಗಿಸಬಹುದು. ಅದು ತರ್ಕಸರಣಿಯ ಸಮಾಪ್ತಿಗೂ ಗಮನವನ್ನು ಸೆಳೆಯಬಹುದು. (3) ಭಾಷಣಕಾರನು ಒಂದು ವಿಷಯದ ಕುರಿತಾದ ತನ್ನ ಅನಿಸಿಕೆಯನ್ನು ತೋರಿಸಲು ಅರ್ಥಒತ್ತನ್ನು ಉಪಯೋಗಿಸಬಹುದು. (4) ಭಾಷಣದ ಮುಖ್ಯಾಂಶಗಳನ್ನು ಎತ್ತಿ ತೋರಿಸಲಿಕ್ಕಾಗಿಯೂ ಸರಿಯಾದ ಅರ್ಥಒತ್ತನ್ನು ಉಪಯೋಗಿಸಸಾಧ್ಯವಿದೆ.

ಈ ವಿಧಗಳಲ್ಲಿ ಅರ್ಥಒತ್ತನ್ನು ಉಪಯೋಗಿಸಬೇಕಾದರೆ, ಒಬ್ಬ ಭಾಷಣಕಾರನು ಅಥವಾ ಸಾರ್ವಜನಿಕ ವಾಚಕನು ತನಗೆ ನೇಮಿಸಲ್ಪಟ್ಟಿರುವ ವಿಷಯಭಾಗವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ತನ್ನ ಸಭಿಕರು ಅದನ್ನು ಮೈಗೂಡಿಸಿಕೊಳ್ಳಬೇಕೆಂದು ಶ್ರದ್ಧಾಪೂರ್ವಕವಾಗಿ ಬಯಸುವವನಾಗಿರಬೇಕು. ಎಜ್ರನ ದಿನಗಳಲ್ಲಿ ಕೊಡಲ್ಪಟ್ಟಿದ್ದ ಮಾಹಿತಿಯ ಕುರಿತಾಗಿ ನೆಹೆಮೀಯ 8:8 ಹೇಳುವುದು: “ಅವರು ದೇವರ ಧರ್ಮಶಾಸ್ತ್ರವನ್ನು ಸ್ಪಷ್ಟವಾಗಿ ಓದುತ್ತಾ ಅದರ ತಾತ್ಪರ್ಯವನ್ನು ವಿವರಿಸಲು ಜನರು ಗ್ರಹಿಸಿದರು.” ಆ ಸಂದರ್ಭದಲ್ಲಿ ದೇವರ ಧರ್ಮಶಾಸ್ತ್ರವನ್ನು ಓದಿ ಅದರ ಅರ್ಥವನ್ನು ವಿವರಿಸಿದವರು, ತಮ್ಮ ಸಭಿಕರು ಆ ವಾಚನದ ಅರ್ಥವನ್ನು ಗ್ರಹಿಸುವಂತೆ, ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ಮತ್ತು ಅದನ್ನು ಅನ್ವಯಿಸಿಕೊಳ್ಳುವಂತೆ ಅವರಿಗೆ ಸಹಾಯಮಾಡುವುದರ ಪ್ರಾಮುಖ್ಯತೆಯನ್ನು ಮನಗಂಡರೆಂಬುದು ಸುವ್ಯಕ್ತ.

ಸಮಸ್ಯೆಯನ್ನು ಉಂಟುಮಾಡಬಹುದಾದ ಸಂಗತಿ. ಹೆಚ್ಚಿನವರು ತಮ್ಮ ಸಾಮಾನ್ಯವಾದ ದೈನಂದಿನ ಸಂಭಾಷಣೆಯಲ್ಲಿ ಏನು ಹೇಳುತ್ತಾರೋ ಅದರ ಅರ್ಥವನ್ನು ಸ್ಪಷ್ಟಪಡಿಸಲು ಶಕ್ತರಾಗಿರುತ್ತಾರೆ. ಆದರೆ, ಇನ್ನೊಬ್ಬರಿಂದ ಬರೆಯಲ್ಪಟ್ಟಿರುವ ವಿಷಯವನ್ನು ಅವರು ಓದುವಾಗ, ಯಾವ ಪದಗಳನ್ನು ಅಥವಾ ಅಭಿವ್ಯಕ್ತಿಗಳನ್ನು ಒತ್ತಿಹೇಳಬೇಕೆಂಬುದನ್ನು ನಿರ್ಧರಿಸುವುದು ಅವರಿಗೆ ಸವಾಲನ್ನೊಡ್ಡಬಹುದು. ಇದಕ್ಕಿರುವ ಕೀಲಿ ಕೈ, ಆ ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದರಲ್ಲಿದೆ. ಇದು ಲಿಖಿತ ವಿಷಯವನ್ನು ಜಾಗರೂಕತೆಯಿಂದ ಅಧ್ಯಯನ ಮಾಡುವುದನ್ನು ಕೇಳಿಕೊಳ್ಳುತ್ತದೆ. ಆದುದರಿಂದ, ನೀವು ಸಭಾ ಕೂಟದಲ್ಲಿ ಏನನ್ನಾದರೂ ಓದುವಂತೆ ಕೇಳಿಕೊಳ್ಳಲ್ಪಟ್ಟಿರುವಲ್ಲಿ, ಅದನ್ನು ನೀವು ಶ್ರದ್ಧೆಯಿಂದ ತಯಾರಿಸಬೇಕು.

ಕೆಲವರು ಅರ್ಥಒತ್ತಿನ ಬದಲು “ಆವರ್ತಒತ್ತು” ಎಂದು ಕರೆಯಲ್ಪಡಬಹುದಾದ ಒತ್ತನ್ನು ಉಪಯೋಗಿಸುತ್ತಾರೆ. ಅವರು ಯಾವ ಪದಗಳಿಗೆ ಒತ್ತನ್ನು ನೀಡುತ್ತಾರೋ ಅದು ಅರ್ಥವತ್ತಾಗಿರಲಿ ಅಥವಾ ಇಲ್ಲದಿರಲಿ, ಸುಮಾರಾಗಿ ನಿರ್ದಿಷ್ಟ ಅವಧಿಗಳಲ್ಲಿ ಅವರು ಪದಗಳನ್ನು ಒತ್ತಿಹೇಳುತ್ತಿರುತ್ತಾರೆ. ಕೆಲವರು ಸಂಬಂಧಾರ್ಥಕ ಅವ್ಯಯಗಳನ್ನು ಒತ್ತಿಹೇಳುತ್ತಾರೆ, ಪ್ರಾಯಶಃ ಉಪಸರ್ಗ ಮತ್ತು ಸಮುಚ್ಚಯ ಸೂಚಕಾವ್ಯಯ ಪದಗಳ ಮೇಲೆ ವಿಪರೀತ ಒತ್ತನ್ನು ಹಾಕುತ್ತಾರೆ. ಒತ್ತಿಹೇಳುವಿಕೆಯು ವಿಷಯದ ಸ್ಪಷ್ಟತೆಗೆ ಸಹಾಯ ನೀಡದಿರುವಲ್ಲಿ, ಅದು ಅಪಕರ್ಷಿಸುವಂಥ ವಿಲಕ್ಷಣತೆಯಾಗುವುದು ಸುಲಭ.

ಅರ್ಥಒತ್ತನ್ನು ಉಪಯೋಗಿಸುವ ಪ್ರಯತ್ನದಲ್ಲಿ, ಕೆಲವು ಭಾಷಣಕಾರರು ತಮ್ಮ ಧ್ವನಿಯನ್ನು ತುಂಬ ಏರಿಸಿ ಮಾತಾಡುತ್ತಾರೆ. ಆದರೆ ಇದು ತಮ್ಮನ್ನು ಗದರಿಸಲಾಗುತ್ತಿದೆ ಎಂದು ಸಭಿಕರು ನೆನಸುವಂತೆ ಮಾಡಬಹುದು. ಇದು ಉತ್ತಮ ಫಲಿತಾಂಶವನ್ನು ತರುವುದು ವಿರಳ ಎಂಬುದಂತೂ ನಿಶ್ಚಯ. ಅರ್ಥಒತ್ತು ಸ್ವಾಭಾವಿಕವಾಗಿಲ್ಲದಿರುವಲ್ಲಿ, ಭಾಷಣಕಾರನು ಸಭಿಕರಿಗೆ ದಬಾಯಿಸಿ ಮಾತಾಡುತ್ತಿದ್ದಾನೆಂಬ ಅಭಿಪ್ರಾಯವನ್ನು ಕೊಡಬಹುದು. ಆದುದರಿಂದ, ಪ್ರೀತಿಯ ಆಧಾರದ ಮೇಲೆ ಅವರಿಗೆ ಮನವಿಮಾಡುವುದು ಮತ್ತು ಹೇಳಲ್ಪಡುತ್ತಿರುವ ವಿಷಯವು ಶಾಸ್ತ್ರಾಧಾರಿತವೂ ನ್ಯಾಯಸಮ್ಮತವೂ ಆಗಿದೆಯೆಂಬುದನ್ನು ತಿಳಿಯಲು ಅವರಿಗೆ ಸಹಾಯಮಾಡುವುದು ಎಷ್ಟು ಉತ್ತಮವಾದದ್ದಾಗಿದೆ!

ಅಭಿವೃದ್ಧಿಮಾಡುವ ವಿಧ. ಅನೇಕವೇಳೆ, ಅರ್ಥಒತ್ತಿನ ಸಂಬಂಧದಲ್ಲಿ ಸಮಸ್ಯೆ ಇರುವಂಥ ಒಬ್ಬ ವ್ಯಕ್ತಿಗೆ ಅದರ ಅರಿವೇ ಇರುವುದಿಲ್ಲ. ಆಗ ಇನ್ನೊಬ್ಬನು ಅದನ್ನು ಅವನ ಗಮನಕ್ಕೆ ತರಬೇಕಾಗಬಹುದು. ಈ ವಿಷಯದಲ್ಲಿ ನೀವು ಅಭಿವೃದ್ಧಿಮಾಡುವ ಅಗತ್ಯವಿರುವಲ್ಲಿ, ನಿಮ್ಮ ಶಾಲಾ ಮೇಲ್ವಿಚಾರಕನು ನಿಮಗೆ ಸಹಾಯ ನೀಡುವನು. ಇದಲ್ಲದೆ, ಉತ್ತಮ ಭಾಷಣಕಾರರಾಗಿರುವ ಯಾರಿಂದಲಾದರೂ ಸಹಾಯವನ್ನು ಕೇಳಲು ಹಿಂಜರಿಯಬೇಡಿ. ನಿಮ್ಮ ವಾಚನವನ್ನು ಮತ್ತು ಭಾಷಣವನ್ನು ಅವನು ಜಾಗರೂಕತೆಯಿಂದ ಕೇಳಿಸಿಕೊಂಡು, ಅಭಿವೃದ್ಧಿಯನ್ನು ಮಾಡಲಿಕ್ಕಾಗಿ ಸಲಹೆಗಳನ್ನು ನೀಡುವಂತೆ ಅವನನ್ನು ಕೇಳಿಕೊಳ್ಳಿರಿ.

ಆರಂಭದಲ್ಲಿ, ನೀವು ಪ್ರ್ಯಾಕ್ಟಿಸ್‌ ಮಾಡಲಿಕ್ಕಾಗಿ ಕಾವಲಿನಬುರುಜು ಪತ್ರಿಕೆಯ ಒಂದು ಲೇಖನವನ್ನು ಉಪಯೋಗಿಸುವಂತೆ ನಿಮ್ಮ ಸಲಹೆಗಾರನು ಸೂಚಿಸಬಹುದು. ಅರ್ಥವನ್ನು ಸುಲಭವಾಗಿ ಗ್ರಹಿಸುವಂತೆ ಮಾಡಲಿಕ್ಕಾಗಿ ಯಾವ ಪದಗಳನ್ನು ಅಥವಾ ಪದಗುಚ್ಛಗಳನ್ನು ಒತ್ತಿಹೇಳಬೇಕೆಂಬುದನ್ನು ನಿರ್ಧರಿಸಲಿಕ್ಕಾಗಿ, ಒಂದೊಂದು ವಾಕ್ಯವನ್ನೂ ವಿಶ್ಲೇಷಿಸುವಂತೆ ಅವನು ನಿಮಗೆ ಹೇಳುವನು ಎಂಬುದರಲ್ಲಿ ಸಂಶಯವೇ ಇಲ್ಲ. ಓರೆ ಅಕ್ಷರಗಳಲ್ಲಿರುವ ಪದಗಳಿಗೆ ವಿಶೇಷ ಗಮನವನ್ನು ಕೊಡುವಂತೆ ಅವನು ನಿಮಗೆ ಜ್ಞಾಪಕ ಹುಟ್ಟಿಸಬಹುದು. ಒಂದು ವಾಕ್ಯದಲ್ಲಿರುವ ಪದಗಳು ಕೂಡಿ ಕೆಲಸಮಾಡುತ್ತವೆಂಬುದು ನೆನಪಿನಲ್ಲಿರಲಿ. ಆಗಾಗ, ಒತ್ತಿಹೇಳಲ್ಪಡಬೇಕಾಗಿರುವುದು ಯಾವುದೊ ಒಂದು ಪದವನ್ನಲ್ಲ, ಬದಲಾಗಿ ಪದಗಳ ಸಮೂಹವನ್ನೇ. ಕೆಲವು ಭಾಷೆಗಳಲ್ಲಿ, ಸರಿಯಾದ ಅರ್ಥಒತ್ತಿನ ಸಂಬಂಧದಲ್ಲಿ ಉಚ್ಚಾರಣಾಚಿಹ್ನೆಗಳು ಏನನ್ನು ಸೂಚಿಸುತ್ತವೆ ಎಂಬುದಕ್ಕೆ ಹೆಚ್ಚು ಜಾಗರೂಕತೆಯ ಪರಿಗಣನೆಯನ್ನು ನೀಡುವಂತೆ ವಿದ್ಯಾರ್ಥಿಗಳು ಪ್ರೋತ್ಸಾಹಿಸಲ್ಪಡಬಹುದು.

ಯಾವುದನ್ನು ಒತ್ತಿಹೇಳಬೇಕೆಂಬುದನ್ನು ಕಲಿಯುವುದರ ಮುಂದಿನ ಹೆಜ್ಜೆಯಾಗಿ, ವಾಕ್ಯಕ್ಕಿಂತ ಹೆಚ್ಚು ವಿಶಾಲವಾಗಿರುವ ಪೂರ್ವಾಪರವನ್ನು ಪರಿಗಣಿಸುವಂತೆ ನಿಮ್ಮ ಸಲಹೆಗಾರನು ನಿಮ್ಮನ್ನು ಪ್ರೋತ್ಸಾಹಿಸಬಹುದು. ಇಡೀ ಪ್ಯಾರಗ್ರಾಫ್‌ನಲ್ಲಿ ಯಾವ ಕೇಂದ್ರೀಯ ವಿಷಯವನ್ನು ವಿಕಸಿಸಲಾಗುತ್ತಿದೆ? ಒಂದೊಂದು ವಾಕ್ಯದಲ್ಲಿ ನೀವು ಏನನ್ನು ಒತ್ತಿಹೇಳಬೇಕೆಂಬುದನ್ನು ಅದು ಹೇಗೆ ಪ್ರಭಾವಿಸಬೇಕು? ಆ ಲೇಖನದ ಶಿರೋನಾಮವನ್ನು ಮತ್ತು ನಿಮ್ಮ ವಿಷಯಭಾಗವು ಯಾವುದರ ಕೆಳಗಿದೆಯೊ ಆ ದಪ್ಪಕ್ಷರದ ಉಪಶಿರೋನಾಮವನ್ನು ನೋಡಿ. ಇವುಗಳಿಗೂ ಒತ್ತಿಹೇಳಲಿಕ್ಕಾಗಿ ನೀವು ಆರಿಸಿಕೊಂಡಿರುವ ಹೇಳಿಕೆಗಳಿಗೂ ಯಾವ ಸಂಬಂಧವಿದೆ? ಇವೆಲ್ಲವೂ ಪರಿಗಣಿಸಬೇಕಾದ ಅಂಶಗಳಾಗಿವೆ. ಆದರೆ, ತೀರ ಹೆಚ್ಚು ಪದಗಳನ್ನು ಬಲವಾಗಿ ಒತ್ತಿಹೇಳದಂತೆ ಜಾಗ್ರತೆ ವಹಿಸಿರಿ.

ನೀವು ಆಶುಭಾಷಣ ಮಾಡುತ್ತಿರಲಿ ಇಲ್ಲವೆ ಓದುತ್ತಿರಲಿ, ನಿಮ್ಮ ಅರ್ಥಒತ್ತಿನ ಉಪಯೋಗವನ್ನು ತರ್ಕಸರಣಿಯು ಪ್ರಭಾವಿಸುವಂತೆ ಬಿಡಲು ನಿಮ್ಮ ಸಲಹೆಗಾರನು ನಿಮ್ಮನ್ನು ಪ್ರೋತ್ಸಾಹಿಸಬಹುದು. ಆ ತರ್ಕಸರಣಿ ಎಲ್ಲಿ ಕೊನೆಗೊಳ್ಳುತ್ತದೆ, ಅಥವಾ ಭಾಷಣವು ಒಂದು ಪ್ರಮುಖ ವಿಚಾರದಿಂದ ಇನ್ನೊಂದು ವಿಚಾರಕ್ಕೆ ಎಲ್ಲಿ ಬದಲಾವಣೆಗೊಳ್ಳುತ್ತದೆ ಎಂಬ ಅರಿವು ನಿಮಗಿರುವ ಅಗತ್ಯವಿದೆ. ಈ ಸ್ಥಳಗಳಲ್ಲಿ ನಿಮ್ಮ ಭಾಷಣ ಶೈಲಿಯು ಸಭಿಕರನ್ನು ಎಚ್ಚರಿಸುವಲ್ಲಿ ಅವರು ಅದನ್ನು ಗಣ್ಯಮಾಡುವರು. ಇದನ್ನು ಪ್ರಥಮವಾಗಿ, ಮುಂದಕ್ಕೆ, ಅಂತಿಮವಾಗಿ, ಹೀಗೆ ಮತ್ತು ನ್ಯಾಯಸಮ್ಮತವಾಗಿ ಎಂಬ ಪದಗಳನ್ನು ಒತ್ತಿ ಉಚ್ಚರಿಸುವ ಮೂಲಕ ಮಾಡಬಹುದು.

ಯಾವ ವಿಚಾರಗಳನ್ನು ನೀವು ವಿಶೇಷವಾದ ಭಾವನೆಯಿಂದ ಹೇಳಬೇಕೊ ಅವುಗಳ ಕಡೆಗೂ ನಿಮ್ಮ ಸಲಹೆಗಾರನು ನಿಮ್ಮ ಗಮನವನ್ನು ಸೆಳೆಯುವನು. ಇದನ್ನು ಮಾಡಲಿಕ್ಕಾಗಿ ನೀವು ತುಂಬ, ಸಂಪೂರ್ಣವಾಗಿ, ಖಂಡಿತವಾಗಿಯೂ ಇಲ್ಲ, ಯೋಚಿಸಲಸಾಧ್ಯ, ಪ್ರಾಮುಖ್ಯವಾಗಿ ಮತ್ತು ಯಾವಾಗಲೂ ಎಂಬಂತಹ ಪದಗಳನ್ನು ಒತ್ತಿಹೇಳಬಹುದು. ನೀವು ಹಾಗೆ ಮಾಡುವಲ್ಲಿ, ನೀವು ಏನು ಹೇಳುತ್ತಿದ್ದೀರೋ ಅದರ ಕುರಿತು ಸಭಿಕರಿಗೆ ಹೇಗನಿಸಬೇಕೆಂಬುದನ್ನು ನೀವು ಪ್ರಭಾವಿಸಬಲ್ಲಿರಿ. ಇದರ ಕುರಿತಾದ ಹೆಚ್ಚಿನ ವಿಷಯವನ್ನು, “ಹಾರ್ದಿಕತೆ ಮತ್ತು ಭಾವಪೂರ್ಣತೆ” ಎಂಬ ಮುಖ್ಯ ವಿಷಯವಿರುವ 11ನೆಯ ಪಾಠದಲ್ಲಿ ತಿಳಿಸಲಾಗುವುದು.

ನೀವು ಅರ್ಥಒತ್ತಿನ ಉಪಯೋಗದಲ್ಲಿ ಅಭಿವೃದ್ಧಿಮಾಡಲಿಕ್ಕಾಗಿ, ನಿಮ್ಮ ಸಭಿಕರು ನೆನಪಿನಲ್ಲಿಟ್ಟುಕೊಳ್ಳುವಂತೆ ನೀವು ಬಯಸುವ ಮುಖ್ಯಾಂಶಗಳನ್ನು, ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿಟ್ಟುಕೊಳ್ಳುವಂತೆಯೂ ನಿಮ್ಮನ್ನು ಪ್ರೋತ್ಸಾಹಿಸಲಾಗುವುದು. ಇದನ್ನು ಸಾರ್ವಜನಿಕ ವಾಚನದ ದೃಷ್ಟಿಯಿಂದ, “ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದು” ಎಂಬ ಮುಖ್ಯ ವಿಷಯವಿರುವ 7ನೆಯ ಪಾಠದಲ್ಲಿಯೂ, ಭಾಷಣ ನೀಡುವ ದೃಷ್ಟಿಯಿಂದ, “ಮುಖ್ಯಾಂಶಗಳನ್ನು ಎದ್ದುಕಾಣುವಂತೆ ಮಾಡುವುದು” ಎಂಬ ಮುಖ್ಯ ವಿಷಯವಿರುವ 37ನೆಯ ಪಾಠದಲ್ಲಿಯೂ ಇನ್ನೂ ಹೆಚ್ಚಾಗಿ ಪರಿಗಣಿಸಲಾಗುವುದು.

ನಿಮ್ಮ ಕ್ಷೇತ್ರ ಸೇವೆಯಲ್ಲಿ ಪ್ರಗತಿಯನ್ನು ಮಾಡಲು ನೀವು ಪ್ರಯತ್ನಿಸುತ್ತಿರುವುದಾದರೆ, ನೀವು ಶಾಸ್ತ್ರವಚನಗಳನ್ನು ಹೇಗೆ ಓದುತ್ತೀರಿ ಎಂಬುದಕ್ಕೆ ವಿಶೇಷ ಗಮನವನ್ನು ಕೊಡಿರಿ. ‘ನಾನು ಈ ವಚನವನ್ನು ಏಕೆ ಓದುತ್ತಿದ್ದೇನೆ?’ ಎಂದು ಸ್ವತಃ ಕೇಳಿಕೊಳ್ಳುವುದನ್ನು ರೂಢಿಯಾಗಿ ಮಾಡಿಕೊಳ್ಳಿರಿ. ನೀವು ಬೋಧಕರಾಗಿರುವುದರಿಂದ, ಕೇವಲ ಪದಗಳನ್ನು ಸರಿಯಾಗಿ ಉಚ್ಚರಿಸುವುದಷ್ಟೇ ಯಾವಾಗಲೂ ಸಾಕಾಗಲಾರದು. ವಚನವನ್ನು ಭಾವಪೂರ್ಣವಾಗಿ ಓದುವುದು ಕೂಡ ಸಾಕಾಗಲಿಕ್ಕಿಲ್ಲ. ಒಬ್ಬನ ಪ್ರಶ್ನೆಗೆ ನೀವು ಉತ್ತರ ಕೊಡುತ್ತಿರುವುದಾದರೆ ಅಥವಾ ಮೂಲಭೂತ ಸತ್ಯವೊಂದನ್ನು ಕಲಿಸುತ್ತಿರುವುದಾದರೆ, ನೀವು ಏನನ್ನು ಚರ್ಚಿಸುತ್ತಿದ್ದೀರೊ ಅದನ್ನು ಸಮರ್ಥಿಸುವ ಪದಗಳನ್ನು ಅಥವಾ ಅಭಿವ್ಯಕ್ತಿಗಳನ್ನು ಆ ವಚನದಲ್ಲಿ ಒತ್ತಿಹೇಳುವುದು ಒಳ್ಳೇದು. ಇಲ್ಲದಿರುವಲ್ಲಿ, ನೀವು ಯಾರಿಗೆ ಓದಿಹೇಳುತ್ತಿದ್ದೀರೊ ಆ ವ್ಯಕ್ತಿಗೆ ಅದರ ಅಂಶವು ಅರ್ಥವಾಗಲಿಕ್ಕಿಲ್ಲ.

ಅರ್ಥಒತ್ತಿನಲ್ಲಿ, ಕೆಲವು ಪದಗಳಿಗೆ ಮತ್ತು ಪದಗಚ್ಛಗಳಿಗೆ ಹೆಚ್ಚು ಒತ್ತನ್ನು ನೀಡುವ ವಿಷಯವು ಒಳಗೂಡಿರುವುದರಿಂದ, ಅನನುಭವಿಯಾದ ಒಬ್ಬ ಭಾಷಣಕಾರನು ಆ ಪದಗಳನ್ನೂ ಪದಗುಚ್ಛಗಳನ್ನೂ ತೀರ ಹೆಚ್ಚು ಒತ್ತಿಹೇಳುವ ಪ್ರವೃತ್ತಿಯುಳ್ಳವನಾಗಿರುವ ಸಾಧ್ಯತೆಯಿದೆ. ಇದರ ಫಲಿತಾಂಶವು, ಸಂಗೀತೋಪಕರಣವನ್ನು ಕಲಿಯಲು ಈಗ ತಾನೇ ಆರಂಭಿಸಿರುವ ಒಬ್ಬನು ಸ್ವರಚಿಹ್ನೆಗಳನ್ನು ಒಂದೊಂದಾಗಿ ನುಡಿಸುವಂತಿರುವುದು. ಆದರೆ ಹೆಚ್ಚು ಪ್ರ್ಯಾಕ್ಟಿಸ್‌ ಮಾಡುವಲ್ಲಿ, ಆ ಒಂದೊಂದು “ಸ್ವರಚಿಹ್ನೆಗಳು” ಸೊಗಸಾಗಿ ವ್ಯಕ್ತಪಡಿಸಸಾಧ್ಯವಿರುವಂಥ “ಸಂಗೀತ”ದ ಭಾಗವಾಗಿ ಪರಿಣಮಿಸುವವು.

ನೀವು ಕೆಲವು ಮೂಲಭೂತ ವಿಷಯಗಳನ್ನು ಕಲಿತಾದ ಮೇಲೆ, ಅನುಭವಸ್ಥ ಭಾಷಣಕಾರರನ್ನು ಅವಲೋಕಿಸುವ ಮೂಲಕ ಪ್ರಯೋಜನ ಪಡೆಯುವ ಸ್ಥಾನದಲ್ಲಿರುವಿರಿ. ಆಗ ನೀವು ವಿವಿಧ ಮಟ್ಟಗಳ ಒತ್ತಿಹೇಳುವಿಕೆಯಿಂದ ಏನನ್ನು ಪೂರೈಸಸಾಧ್ಯವಿದೆ ಎಂಬುದನ್ನು ಬೇಗನೇ ಗ್ರಹಿಸುವಿರಿ. ಮತ್ತು ಏನು ಹೇಳಲ್ಪಟ್ಟಿತೋ ಆ ವಿಷಯದ ಅರ್ಥವನ್ನು ಸ್ಪಷ್ಟಪಡಿಸಲಿಕ್ಕಾಗಿ, ಒತ್ತಿಹೇಳುವುದನ್ನು ವಿವಿಧ ರೀತಿಯಲ್ಲಿ ಉಪಯೋಗಿಸುವುದರ ಮೌಲ್ಯವನ್ನು ನೀವು ಗಣ್ಯಮಾಡುವಿರಿ. ಸರಿಯಾದ ಅರ್ಥಒತ್ತನ್ನು ರೂಢಿಸಿಕೊಳ್ಳುವುದು, ನಿಮ್ಮ ಸ್ವಂತ ವಾಚನ ಮತ್ತು ಭಾಷಣಗಳ ಪರಿಣಾಮಕಾರಿತ್ವವನ್ನು ಅತಿಯಾಗಿ ವರ್ಧಿಸುವುದು.

ಅರ್ಥಒತ್ತಿನ ಕುರಿತು ತಿಳಿದುಕೊಂಡು ಅದನ್ನು ಉಪಯೋಗಿಸಲು ಸಾಕಾಗುವಷ್ಟನ್ನು ಮಾತ್ರ ಕಲಿಯಬೇಡಿರಿ. ಪರಿಣಾಮಕಾರಿಯಾಗಿ ಮಾತನಾಡುವ ಉದ್ದೇಶದಿಂದ, ಅರ್ಥಒತ್ತಿನಲ್ಲಿ ನಿಸ್ಸೀಮರಾಗುವ ತನಕ ಮತ್ತು ಬೇರೆಯವರ ಕಿವಿಗಳಿಗೆ ಇದು ಸ್ವಾಭಾವಿಕವಾದದ್ದಾಗಿ ಕೇಳಿಬರುವಂತಹ ರೀತಿಯಲ್ಲಿ ಉಪಯೋಗಿಸಸಾಧ್ಯವಾಗುವ ತನಕ ಇದನ್ನು ಅಭ್ಯಾಸ ಮಾಡುತ್ತಾ ಇರಿ.

ಇದನ್ನು ಬೆಳೆಸಿಕೊಳ್ಳುವ ವಿಧ

  • ವಾಕ್ಯಗಳಲ್ಲಿ ಮುಖ್ಯ ಪದಗಳನ್ನು ಮತ್ತು ಪದಸಮೂಹಗಳನ್ನು ಗುರುತಿಸುವುದನ್ನು ರೂಢಿಮಾಡಿಕೊಳ್ಳಿರಿ. ಪೂರ್ವಾಪರದ ಆಧಾರದ ಮೇರೆಗೆ ಇದನ್ನು ಮಾಡಲು ವಿಶೇಷವಾದ ಗಮನವನ್ನು ಕೊಡಿ.

  • (1) ವಿಚಾರದಲ್ಲಿನ ಬದಲಾವಣೆಯನ್ನು ಮತ್ತು (2) ನೀವು ಏನು ಹೇಳುತ್ತೀರೊ ಅದರ ಕುರಿತು ನಿಮಗೆ ಹೇಗನಿಸುತ್ತದೆ ಎಂಬುದನ್ನು ಸೂಚಿಸಲಿಕ್ಕಾಗಿ ಒತ್ತನ್ನು ಉಪಯೋಗಿಸಲು ಪ್ರಯತ್ನಿಸಿ.

  • ಶಾಸ್ತ್ರವಚನಗಳನ್ನು ಓದುವಾಗ, ಆ ವಚನಗಳನ್ನು ನೀವು ಯಾವ ಕಾರಣಕ್ಕಾಗಿ ಓದುತ್ತೀರೊ ಅದನ್ನು ನೇರವಾಗಿ ಸಮರ್ಥಿಸುವ ಪದಗಳನ್ನು ಒತ್ತಿಹೇಳುವುದನ್ನು ರೂಢಿಮಾಡಿಕೊಳ್ಳಿರಿ.

ಅಭ್ಯಾಸಪಾಠಗಳು: (1) ನೀವು ಕ್ಷೇತ್ರ ಶುಶ್ರೂಷೆಯಲ್ಲಿ ಪದೇ ಪದೇ ಉಪಯೋಗಿಸುವ ಎರಡು ಶಾಸ್ತ್ರವಚನಗಳನ್ನು ಆರಿಸಿಕೊಳ್ಳಿರಿ. ಪ್ರತಿಯೊಂದು ವಚನದಲ್ಲಿ ನೀವು ಏನನ್ನು ರುಜುಪಡಿಸಲು ಪ್ರಯತ್ನಿಸುತ್ತಿದ್ದೀರೆಂಬುದನ್ನು ನಿರ್ಧರಿಸಿರಿ. ಆ ಅಂಶಗಳನ್ನು ಸಮರ್ಥಿಸುವ ಪದಗಳನ್ನೊ ಪದಸಮೂಹಗಳನ್ನೊ ಒತ್ತಿಹೇಳುವ ರೀತಿಯಲ್ಲಿ ಆ ವಚನಗಳನ್ನು ಗಟ್ಟಿಯಾಗಿ ಓದಿ. (2) ಇಬ್ರಿಯ 1:1-14 ನ್ನು ಅಧ್ಯಯನ ಮಾಡಿ. ಈ ಅಧ್ಯಾಯದಲ್ಲಿರುವ ತರ್ಕಸರಣಿಯನ್ನು ಸ್ಪಷ್ಟವಾಗಿ ತಿಳಿಯಪಡಿಸುವ ಸಲುವಾಗಿ, ‘ಪ್ರವಾದಿಗಳು’ (1ನೆಯ ವಚನ), “ಮಗ” (2ನೆಯ ವಚನ), ಮತ್ತು ‘ದೇವದೂತರು’ (4, 5ನೆಯ ವಚನಗಳು) ಎಂಬ ಪದಗಳ ಮೇಲೆ ಏಕೆ ವಿಶೇಷ ಒತ್ತನ್ನು ನೀಡಬೇಕು? ಆ ಅಧ್ಯಾಯವನ್ನು, ತರ್ಕಸರಣಿಯ ಮೇಲೆ ಗಮನವು ಕೇಂದ್ರೀಕೃತವಾಗುವಂತೆ ಅರ್ಥಒತ್ತಿನೊಂದಿಗೆ ಗಟ್ಟಿಯಾಗಿ ಓದುವುದನ್ನು ಪ್ರ್ಯಾಕ್ಟಿಸ್‌ ಮಾಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ