ಅಧ್ಯಾಯ 21
ಶಾಸ್ತ್ರವಚನಗಳನ್ನು ಸರಿಯಾದ ಒತ್ತುನೀಡಿ ಓದುವುದು
ದೇವರ ಉದ್ದೇಶಗಳ ಕುರಿತು ನೀವು ಇತರರೊಂದಿಗೆ ಖಾಸಗಿಯಾಗಿಯಾಗಲಿ ವೇದಿಕೆಯಿಂದಾಗಲಿ ಮಾತನಾಡುವಾಗ, ನಿಮ್ಮ ಚರ್ಚೆಯು ದೇವರ ವಾಕ್ಯದಲ್ಲಿ ಏನಿದೆಯೊ ಅದರ ಮೇಲೆ ಕೇಂದ್ರೀಕೃತವಾಗಿರಬೇಕು. ಇದರಲ್ಲಿ ಸಾಮಾನ್ಯವಾಗಿ ಬೈಬಲಿನಿಂದ ಶಾಸ್ತ್ರವಚನಗಳನ್ನು ಓದುವುದು ಸೇರಿರುವುದರಿಂದ, ಇದನ್ನು ಉತ್ತಮವಾಗಿ ಮಾಡಬೇಕಾಗಿದೆ.
ಸರಿಯಾದ ಒತ್ತನ್ನು ನೀಡುವುದರಲ್ಲಿ ಭಾವಪೂರ್ಣತೆಯು ಸೇರಿದೆ. ಶಾಸ್ತ್ರವಚನಗಳನ್ನು ಭಾವಪೂರ್ಣವಾಗಿ ಓದಬೇಕು. ಕೆಲವು ಉದಾಹರಣೆಗಳನ್ನು ಪರಿಗಣಿಸಿ. ನೀವು ಕೀರ್ತನೆ 37:11 ನ್ನು ಗಟ್ಟಿಯಾಗಿ ಓದುವಾಗ, ಅಲ್ಲಿ ವಾಗ್ದಾನಿಸಲ್ಪಟ್ಟಿರುವ ಮಹಾಸೌಖ್ಯದ ಹರ್ಷಕರ ನಿರೀಕ್ಷೆಯನ್ನು ನಿಮ್ಮ ಸ್ವರವು ವ್ಯಕ್ತಪಡಿಸಬೇಕು. ನೀವು ಕಷ್ಟಾನುಭವ ಮತ್ತು ಮರಣದ ಅಂತ್ಯದ ವಿಷಯದಲ್ಲಿ ಪ್ರಕಟನೆ 21:4 ನ್ನು ಓದುವಾಗ, ಅಲ್ಲಿ ಮುಂತಿಳಿಸಲಾಗಿರುವ ಅದ್ಭುತಕರವಾದ ಉಪಶಮನಕ್ಕಾಗಿ ಹೃತ್ಪೂರ್ವಕ ಕೃತಜ್ಞತೆಯನ್ನು ನಿಮ್ಮ ಸ್ವರವು ಪ್ರತಿಬಿಂಬಿಸಬೇಕು. ಪಾಪಭರಿತ “ಮಹಾ ಬಾಬೆಲ್”ನಿಂದ ಹೊರಬರುವಂತೆ ಪ್ರಕಟನೆ 18:2, 4, 5 ರಲ್ಲಿ (NW) ಇರುವ ಮನವಿಯು ತುರ್ತಿನ ಧ್ವನಿಯಿಂದ ಓದಲ್ಪಡಬೇಕು. ಹೌದು, ವ್ಯಕ್ತಪಡಿಸಲ್ಪಡುವ ಭಾವನೆಯು ಹೃತ್ಪೂರ್ವಕವಾಗಿರಬೇಕು, ಮಿತಿಮೀರಿದಂಥದ್ದಾಗಿರಬಾರದು. ಸೂಕ್ತ ಮಟ್ಟದ ಭಾವನೆಯು, ಓದಲ್ಪಡುವ ವಚನ ಹಾಗೂ ಅದು ಉಪಯೋಗಿಸಲ್ಪಡುವ ವಿಧದಿಂದ ನಿರ್ಧರಿಸಲ್ಪಡುತ್ತದೆ.
ಸರಿಯಾದ ಪದಗಳಿಗೆ ಒತ್ತುನೀಡಿರಿ. ಒಂದು ನಿರ್ದಿಷ್ಟ ವಚನದ ಕುರಿತು ನೀವು ಮಾಡುವ ಹೇಳಿಕೆಗಳು ಅದರ ಒಂದು ಭಾಗಕ್ಕೆ ಮಾತ್ರ ಸಂಬಂಧಿಸುವುದಾದರೆ, ವಚನವನ್ನು ಓದುವಾಗ ನೀವು ಆ ಭಾಗವನ್ನು ಒತ್ತಿಹೇಳಬೇಕು. ಉದಾಹರಣೆಗೆ, ಮತ್ತಾಯ 6:33 ನ್ನು (NW) ಓದುವಾಗ, ‘ಮೊದಲು ದೇವರ ರಾಜ್ಯವನ್ನು ಹುಡುಕುವುದು’ ಎಂಬುದರ ಅರ್ಥವನ್ನು ವಿಶ್ಲೇಷಿಸುವುದು ನಿಮ್ಮ ಇರಾದೆಯಾಗಿರುವಲ್ಲಿ, ನೀವು “ಆತನ ನೀತಿಯನ್ನೂ” ಅಥವಾ “ಈ ಇತರ ವಿಷಯಗಳೆಲ್ಲವೂ” ಎಂಬ ಭಾಗಕ್ಕೆ ಪ್ರಧಾನ ಒತ್ತನ್ನು ಕೊಡುವುದಿಲ್ಲ.
ಸೇವಾ ಕೂಟದ ಭಾಷಣದಲ್ಲಿ ನೀವು ಮತ್ತಾಯ 28:19 ನ್ನು ಓದಲು ನಿಶ್ಚಯಿಸಬಹುದು. ಆಗ ಯಾವ ಪದಗಳನ್ನು ನೀವು ಒತ್ತಿಹೇಳಬೇಕು? ಬೈಬಲ್ ಅಧ್ಯಯನಗಳನ್ನು ಆರಂಭಿಸುವುದರಲ್ಲಿ ಶ್ರದ್ಧೆವಹಿಸುವಂತೆ ಪ್ರೋತ್ಸಾಹಿಸಲು ನೀವು ಬಯಸುವುದಾದರೆ, “ಶಿಷ್ಯರನ್ನಾಗಿ ಮಾಡಿರಿ” ಎಂಬುದನ್ನು ಒತ್ತಿಹೇಳಿ. ಆದರೆ, ವಲಸೆಗಾರರ ಗುಂಪಿನೊಂದಿಗೆ ಬೈಬಲ್ ಸತ್ಯವನ್ನು ಹಂಚಿಕೊಳ್ಳುವ ಕ್ರೈಸ್ತ ಜವಾಬ್ದಾರಿಯನ್ನು ನೀವು ಚರ್ಚಿಸಲು ಯೋಜಿಸುವುದಾದರೆ ಅಥವಾ ಕೆಲವು ಮಂದಿ ಪ್ರಚಾರಕರು ಹೆಚ್ಚು ಆವಶ್ಯಕತೆಯಿರುವ ಕ್ಷೇತ್ರಕ್ಕೆ ಹೋಗಿ ಸೇವೆಮಾಡುವಂತೆ ಪ್ರೋತ್ಸಾಹಿಸಲು ನೀವು ಬಯಸುವುದಾದರೆ, ನೀವು ‘ಎಲ್ಲಾ ದೇಶಗಳ ಜನರು’ ಎಂಬುದನ್ನು ಒತ್ತಿಹೇಳಬಹುದು.
ಆಗಾಗ, ಒಂದು ಪ್ರಶ್ನೆಗೆ ಉತ್ತರವಾಗಿಯೊ, ವಿವಾದಾಸ್ಪದವೆಂದು ಇತರರು ವೀಕ್ಷಿಸುವ ವಾದಕ್ಕೆ ಬೆಂಬಲವಾಗಿಯೊ ಒಂದು ಶಾಸ್ತ್ರವಚನವನ್ನು ಸಾದರಪಡಿಸಲಾಗುತ್ತದೆ. ಆ ವಚನದಲ್ಲಿರುವ ಪ್ರತಿಯೊಂದು ವಿಚಾರಕ್ಕೆ ಒತ್ತುನೀಡುವಲ್ಲಿ, ನಿಮ್ಮ ಸಭಿಕರು ಅದಕ್ಕಿರುವ ಸಂಬಂಧವನ್ನು ಅರ್ಥಮಾಡಿಕೊಳ್ಳಲು ತಪ್ಪಿಹೋಗಬಹುದು. ಆ ಅಂಶವು ನಿಮಗೆ ಸುವ್ಯಕ್ತವಾಗಿರಬಹುದು, ಆದರೆ ಅವರಿಗೆ ಅದು ವ್ಯಕ್ತವಾಗಿರಲಿಕ್ಕಿಲ್ಲ.
ಉದಾಹರಣೆಗೆ, ಕೀರ್ತನೆ 83:18 ನ್ನು ದೇವರ ಹೆಸರಿರುವಂಥ ಒಂದು ಬೈಬಲಿನಿಂದ ಓದುತ್ತಿರುವಾಗ, “ಸರ್ವೋನ್ನತ” ಎಂಬ ಪದಕ್ಕೆ ನೀವು ಎಲ್ಲ ಒತ್ತನ್ನು ನೀಡುವುದಾದರೆ, ಮನೆಯವನು ದೇವರಿಗೆ ಸ್ವಂತ ಹೆಸರೊಂದಿದೆ ಎಂಬ ಸುಸ್ಪಷ್ಟ ವಿಷಯವನ್ನು ಗ್ರಹಿಸದೆ ಹೋಗಬಹುದು. ಆದುದರಿಂದ ನೀವು “ಯೆಹೋವ” ಎಂಬ ಹೆಸರನ್ನು ಒತ್ತಿಹೇಳಬೇಕು. ಆದರೆ, ಅದೇ ವಚನವನ್ನು ಯೆಹೋವನ ಪರಮಾಧಿಕಾರದ ವಿಷಯದ ಚರ್ಚೆಯಲ್ಲಿ ನೀವು ಉಪಯೋಗಿಸುವಾಗ, “ಸರ್ವೋನ್ನತ” ಎಂಬ ಪದಕ್ಕೆ ನೀವು ಪ್ರಧಾನ ಒತ್ತನ್ನು ನೀಡಬೇಕು. ಅದೇ ರೀತಿ, ನಂಬಿಕೆಯೊಂದಿಗೆ ಕ್ರಿಯೆಗಳಿರಬೇಕೆಂಬುದರ ಪ್ರಮುಖತೆಯನ್ನು ತೋರಿಸಲಿಕ್ಕಾಗಿ ಯಾಕೋಬ 2:24 ನ್ನು ನೀವು ಉಪಯೋಗಿಸುವಾಗ, “ಕ್ರಿಯೆ”ಯ ಬದಲಾಗಿ “ನೀತಿವಂತನೆಂದು ನಿರ್ಣಯಿಸಲ್ಪಡು” ಎಂಬ ಪದಗಳಿಗೆ ಪ್ರಧಾನ ಒತ್ತನ್ನು ನೀಡುವಲ್ಲಿ, ನಿಮಗೆ ಕಿವಿಗೊಡುವವರಲ್ಲಿ ಕೆಲವರು ಮುಖ್ಯಾಂಶವನ್ನು ತಿಳಿಯದೇ ಹೋಗಬಹುದು.
ಸಹಾಯಕರವಾದ ಇನ್ನೊಂದು ಉದಾಹರಣೆಯು ರೋಮಾಪುರ 15:7-13 ರಲ್ಲಿ ಕಂಡುಬರುತ್ತದೆ. ಇದು ಅಪೊಸ್ತಲ ಪೌಲನು ಯೆಹೂದ್ಯೇತರರೂ ಹುಟ್ಟುಯೆಹೂದ್ಯರೂ ಇದ್ದ ಒಂದು ಸಭೆಗೆ ಬರೆದ ಪತ್ರದ ಒಂದು ಭಾಗವಾಗಿದೆ. ಇಲ್ಲಿ, ಕ್ರಿಸ್ತನ ಶುಶ್ರೂಷೆಯು ಸುನ್ನತಿಹೊಂದಿದ ಯೆಹೂದ್ಯರಿಗೆ ಮಾತ್ರವಲ್ಲ, ‘ಜನಾಂಗಗಳು ಆತನ ಕಾರುಣ್ಯದ ನಿಮಿತ್ತ ದೇವರನ್ನು ಕೊಂಡಾಡಲಿಕ್ಕಾಗಿ’ ಜನಾಂಗಗಳವರಿಗೂ ಪ್ರಯೋಜನವನ್ನು ತರುತ್ತದೆಂದು ಅಪೊಸ್ತಲನು ವಾದಿಸುತ್ತಾನೆ. ಆ ಬಳಿಕ ಪೌಲನು, ಜನಾಂಗಗಳಿಗಿರುವ ಸದವಕಾಶಕ್ಕೆ ಗಮನ ಸೆಳೆಯುತ್ತ ನಾಲ್ಕು ಶಾಸ್ತ್ರವಚನಗಳನ್ನು ಉಲ್ಲೇಖಿಸುತ್ತಾನೆ. ಪೌಲನ ಮನಸ್ಸಿನಲ್ಲಿ ಏನಿತ್ತೊ ಅದನ್ನು ಒತ್ತಿಹೇಳಲಿಕ್ಕಾಗಿ ನಾವು ಆ ಉಲ್ಲೇಖಗಳನ್ನು ಹೇಗೆ ಓದಬೇಕು? ಒತ್ತುನೀಡುವ ಉದ್ದೇಶದಿಂದ ನೀವು ಅಭಿವ್ಯಕ್ತಿಗಳಿಗೆ ಗುರುತು ಹಾಕುವುದಾದರೆ, 9ನೆಯ ವಚನದಲ್ಲಿ “ಅನ್ಯಜನಗಳ,” 10ನೆಯ ವಚನದಲ್ಲಿ “ಜನಾಂಗಗಳಿರಾ,” 11ನೆಯ ವಚನದಲ್ಲಿ “ಸರ್ವಜನಾಂಗಗಳೇ” ಮತ್ತು “ಸಮಸ್ತಪ್ರಜೆಗಳೂ” ಹಾಗೂ 12ನೆಯ ವಚನದಲ್ಲಿ “ಜನಾಂಗಗಳು” ಎಂಬುದನ್ನು ಎತ್ತಿಹೇಳಬಹುದು. ಈಗ ಆ ಎಲ್ಲ ಪದಗಳಿಗೆ ಒತ್ತುನೀಡುತ್ತಾ ರೋಮಾಪುರ 15:7-13 ನ್ನು ಓದಲು ಪ್ರಯತ್ನಿಸಿರಿ. ನೀವು ಹಾಗೆ ಮಾಡುವಾಗ, ಪೌಲನ ಇಡೀ ತರ್ಕಸರಣಿಯು ಹೆಚ್ಚೆಚ್ಚು ಸ್ಪಷ್ಟವಾಗಿ ಮತ್ತು ಗ್ರಹಿಸಲು ಸುಲಭವಾಗಿ ಪರಿಣಮಿಸುವುದು.
ಒತ್ತುನೀಡುವ ವಿಧಾನಗಳು. ನೀವು ಎದ್ದುಕಾಣುವಂತೆ ಮಾಡಲು ಬಯಸುವ ವಿಚಾರವಾಹಕ ಪದಗಳಿಗೆ ಅನೇಕ ವಿಧಗಳಲ್ಲಿ ಒತ್ತುನೀಡಬಹುದು. ನೀವು ಉಪಯೋಗಿಸುವ ಮಾಧ್ಯಮವು ಶಾಸ್ತ್ರವಚನಕ್ಕೆ ಹಾಗೂ ಭಾಷಣದ ಹಿನ್ನೆಲೆಗೆ ಅನುಸಾರವಾಗಿ ಇರಬೇಕು. ಇದಕ್ಕೆ ಕೆಲವು ಸಲಹೆಗಳನ್ನು ಇಲ್ಲಿ ಕೊಡಲಾಗಿದೆ.
ಸ್ವರಭಾರ ಹಾಕುವುದು. ವಿಚಾರವಾಹಕ ಪದಗಳು ವಾಕ್ಯದಲ್ಲಿರುವ ಬೇರೆ ಪದಗಳಿಗಿಂತ ಹೆಚ್ಚು ಎದ್ದುಕಾಣುವಂತೆ ಮಾಡಲಿಕ್ಕಾಗಿ ಸ್ವರದಲ್ಲಿ ಮಾಡಲ್ಪಡುವ ಯಾವುದೇ ಬದಲಾವಣೆಯು ಇದರಲ್ಲಿ ಸೇರಿದೆ. ಈ ಒತ್ತನ್ನು, ಸ್ವರದ ವ್ಯಾಪ್ತಿಯನ್ನು ಹೆಚ್ಚಿಸುವ ಮೂಲಕ ಅಥವಾ ಕಡಿಮೆಮಾಡುವ ಮೂಲಕ ಸಾಧಿಸಬಹುದು. ಅನೇಕ ಭಾಷೆಗಳಲ್ಲಿ, ಸ್ವರದ ತೀವ್ರತೆಯ ಮಟ್ಟದಲ್ಲಿ ಮಾಡುವ ಬದಲಾವಣೆಯು ಒತ್ತನ್ನು ಕೂಡಿಸುತ್ತದೆ. ಆದರೆ ಕೆಲವು ಭಾಷೆಗಳಲ್ಲಿ ಅದು ಅರ್ಥವನ್ನು ಪೂರ್ತಿ ಬದಲಾಯಿಸಲೂ ಬಹುದು. ಮುಖ್ಯ ಅಭಿವ್ಯಕ್ತಿಗಳನ್ನು ಓದುವಾಗ ವೇಗವನ್ನು ಕಡಿಮೆಗೊಳಿಸುವುದು, ಅವುಗಳಿಗೆ ಮಹತ್ವವನ್ನು ಕೂಡಿಸುತ್ತದೆ. ಕೆಲವು ಪದಗಳಿಗೆ ಒತ್ತುನೀಡಲಿಕ್ಕಾಗಿ ಸ್ವರಭಾರವನ್ನು ಉಪಯೋಗಿಸಲು ಅನುಮತಿಸದಿರುವಂಥ ಭಾಷೆಗಳಲ್ಲಿ, ಅಪೇಕ್ಷಿತ ಫಲವನ್ನು ಪಡೆಯಲಿಕ್ಕಾಗಿ ಆ ಭಾಷೆಯಲ್ಲಿ ಯಾವುದು ವಾಡಿಕೆಯಾಗಿದೆಯೊ ಅದನ್ನು ಮಾಡುವುದು ಅಗತ್ಯವಾಗಿದೆ.
ನಿಲ್ಲಿಸಿ ಓದುವುದು. ಇದನ್ನು ಒಂದು ಶಾಸ್ತ್ರವಚನದ ಮುಖ್ಯ ಭಾಗವನ್ನು ಓದುವುದಕ್ಕೆ ಮೊದಲು ಅಥವಾ ಓದಿದ ನಂತರ ಇಲ್ಲವೆ ಎರಡೂ ಕಡೆಗಳಲ್ಲಿ ಮಾಡಬಹುದು. ಒಂದು ಮುಖ್ಯ ವಿಚಾರವನ್ನು ಓದುವುದಕ್ಕೆ ಮೊದಲು ತುಸು ನಿಲ್ಲಿಸುವುದು ನಿರೀಕ್ಷೆಯನ್ನು ಉಂಟುಮಾಡುತ್ತದೆ ಮತ್ತು ಅದನ್ನು ಓದಿದ ಬಳಿಕ ನಿಲ್ಲಿಸುವುದು ಮೂಡಿಸಿದ ಅಭಿಪ್ರಾಯವನ್ನು ಇನ್ನಷ್ಟು ಗಾಢಗೊಳಿಸುತ್ತದೆ. ಆದರೆ, ನಾವು ಅನೇಕಾನೇಕ ಬಾರಿ ನಿಲ್ಲಿಸಿ ಮಾತಾಡುವಲ್ಲಿ, ಯಾವುದೂ ಮಹತ್ವವುಳ್ಳದ್ದಾಗಿ ಕಾಣದು.
ಪುನರಾವರ್ತನೆ. ಒಂದು ನಿರ್ದಿಷ್ಟ ಪದ ಅಥವಾ ವಾಕ್ಸರಣಿಯನ್ನು ಓದಿ, ಬಳಿಕ ನಿಲ್ಲಿಸಿ, ಆ ಬಳಿಕ ಅದನ್ನು ಪುನಃ ಓದುವ ಮೂಲಕವೂ ನೀವು ಒತ್ತನ್ನು ನೀಡಬಲ್ಲಿರಿ. ಆದರೆ ಅನೇಕವೇಳೆ ಹೆಚ್ಚು ಅಪೇಕ್ಷಿತ ವಿಧಾನವು, ವಚನವನ್ನು ಓದಿ ಮುಗಿಸಿ ಆ ಬಳಿಕ ಮುಖ್ಯ ಅಭಿವ್ಯಕ್ತಿಯನ್ನು ಪುನರುಚ್ಚರಿಸುವುದೇ ಆಗಿದೆ.
ಭಾವಾಭಿನಯಗಳು. ಶರೀರದ ಚಲನವಲನ ಹಾಗೂ ಮುಖಭಾವವು ಅನೇಕವೇಳೆ ಒಂದು ಪದಕ್ಕೊ ಪದವಿನ್ಯಾಸಕ್ಕೊ ಭಾವಾವೇಶವನ್ನು ಕೂಡಿಸುತ್ತದೆ.
ಸ್ವರದ ನಾದ. ಕೆಲವು ಭಾಷೆಗಳಲ್ಲಿ, ಕೆಲವು ಬಾರಿ ಪದಗಳನ್ನು ಅವುಗಳ ಅರ್ಥವನ್ನು ಪ್ರಭಾವಿಸಿ, ಅವುಗಳನ್ನು ಪ್ರತ್ಯೇಕಿಸುವಂಥ ಸ್ವರದಿಂದ ಓದಬಹುದು. ಇಲ್ಲಿಯೂ, ವಿಶೇಷವಾಗಿ ವ್ಯಂಗ್ಯಮಾತುಗಳನ್ನು ಉಪಯೋಗಿಸುವಾಗ ವಿವೇಚನೆಯನ್ನು ತೋರಿಸಬೇಕು.
ಬೇರೆಯವರು ವಚನಗಳನ್ನು ಓದುವಾಗ. ಮನೆಯವನು ಒಂದು ಶಾಸ್ತ್ರವಚನವನ್ನು ಓದುವಾಗ, ಅವನು ತಪ್ಪಾದ ಪದಗಳನ್ನು ಒತ್ತಿಹೇಳಬಹುದು ಅಥವಾ ಯಾವುದನ್ನೂ ಒತ್ತಿಹೇಳದೆ ಇರಬಹುದು. ಆಗ ನೀವು ಏನು ಮಾಡಬಲ್ಲಿರಿ? ಸಾಮಾನ್ಯವಾಗಿ, ಆ ವಚನಗಳನ್ನು ನೀವು ಅನ್ವಯಿಸುವಾಗ ಅದರ ಅರ್ಥವನ್ನು ಸ್ಪಷ್ಟಗೊಳಿಸುವುದು ಅತ್ಯುತ್ತಮ. ಅದನ್ನು ಅನ್ವಯಿಸಿದ ಮೇಲೆ, ನೀವು ಬೈಬಲಿನ ಆ ಆಲೋಚನಾವಾಹಕ ಪದಗಳ ಮೇಲೆ ನೇರವಾಗಿ ಗಮನವನ್ನು ಕೇಂದ್ರೀಕರಿಸಬಹುದು.