ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 11 ಪು. 118-ಪು. 120 ಪ್ಯಾ. 5
  • ಹಾರ್ದಿಕತೆ ಮತ್ತು ಭಾವಪೂರ್ಣತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಾರ್ದಿಕತೆ ಮತ್ತು ಭಾವಪೂರ್ಣತೆ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಸ್ನೇಹಭಾವ ಮತ್ತು ಪರಚಿಂತನೆ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ನಿಮ್ಮ ಆತ್ಮ ಸಂಯಮವು ಆಸ್ತಿತ್ವದಲ್ಲಿರಲಿ ಮತ್ತು ಸಮೃದ್ಧವಾಗಲಿ
    ಕಾವಲಿನಬುರುಜು—1993
  • ಬೇರೆಯವರ ಭಾವನೆಗಳಿಗೆ ಬೆಲೆಕೊಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ನಾನು ಯಾಕೆ ಆಗಾಗ ಡಲ್‌ ಆಗ್ತೀನಿ?
    ಯುವಜನರ ಪ್ರಶ್ನೆಗಳು
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 11 ಪು. 118-ಪು. 120 ಪ್ಯಾ. 5

ಅಧ್ಯಾಯ 11

ಹಾರ್ದಿಕತೆ ಮತ್ತು ಭಾವಪೂರ್ಣತೆ

ನೀವೇನು ಮಾಡುವ ಅಗತ್ಯವಿದೆ?

ನಿಮಗಿರುವ ಭಾವಗಳನ್ನು ಪ್ರತಿಬಿಂಬಿಸುವ ಮತ್ತು ನೀವು ಏನು ಹೇಳುತ್ತಿದ್ದೀರೊ ಅದಕ್ಕೆ ಹೊಂದಿಕೊಳ್ಳುವಂಥ ರೀತಿಯಲ್ಲಿ ಮಾತಾಡಿರಿ.

ಇದು ಪ್ರಾಮುಖ್ಯವೇಕೆ?

ನೀವು ಕೇಳುಗರ ಹೃದಯಗಳನ್ನು ತಲಪಬೇಕಾದರೆ ಇದು ಅಗತ್ಯವಾಗಿದೆ.

ಭಾವಗಳು ಮಾನವ ಜೀವನದ ಮೂಲಭೂತ ಭಾಗವಾಗಿವೆ. ಒಬ್ಬನು ತನ್ನ ಭಾವಗಳನ್ನು ವ್ಯಕ್ತಪಡಿಸುವಾಗ, ಅವನ ಹೃದಯದಲ್ಲಿ ಏನಿದೆ, ಅವನು ಆಂತರ್ಯದಲ್ಲಿ ಯಾವ ರೀತಿಯ ವ್ಯಕ್ತಿಯಾಗಿದ್ದಾನೆ, ಅವನಿಗೆ ಸನ್ನಿವೇಶಗಳು ಮತ್ತು ಜನರ ಕುರಿತು ಹೇಗನಿಸುತ್ತದೆ ಎಂಬುದನ್ನು ಅವನು ತಿಳಿಯಪಡಿಸುತ್ತಾನೆ. ಅನೇಕ ಜನರು, ತಮಗೆ ಜೀವನದಲ್ಲಿ ಆಗಿರುವ ಕಹಿ ಅನುಭವಗಳಿಂದಾಗಿ ಮತ್ತು ಕೆಲವು ಸಂದರ್ಭಗಳಲ್ಲಿ ಸಾಂಸ್ಕೃತಿಕ ಪ್ರಭಾವಗಳಿಂದಾಗಿ ತಮ್ಮ ಭಾವಗಳನ್ನು ಮರೆಮಾಚುತ್ತಾರೆ. ಆದರೆ ಯೆಹೋವನು, ನಾವು ಆಂತರಿಕ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಂಡು, ಆ ಬಳಿಕ ಅಲ್ಲಿ ಏನಿದೆಯೊ ಅದನ್ನು ತಕ್ಕದಾದ ರೀತಿಯಲ್ಲಿ ವ್ಯಕ್ತಪಡಿಸುವಂತೆ ಪ್ರೋತ್ಸಾಹಿಸುತ್ತಾನೆ.—ರೋಮಾ. 12:10; 1 ಥೆಸ. 2:7, 8.

ನಾವು ಮಾತಾಡುವಾಗ, ನಾವು ಉಪಯೋಗಿಸುವ ಮಾತುಗಳು ಆ ಭಾವಗಳನ್ನು ಸರಿಯಾಗಿ ಗುರುತಿಸಬಹುದು. ಆದರೆ ನಮ್ಮ ಮಾತುಗಳನ್ನು ಅನುರೂಪವಾದ ಭಾವನೆಯಿಂದ ವ್ಯಕ್ತಪಡಿಸದಿರುವಲ್ಲಿ, ನಮಗೆ ಕಿವಿಗೊಡುವವರು ನಮ್ಮ ಮನಃಪೂರ್ವಕತೆಯನ್ನು ಸಂಶಯಿಸಬಹುದು. ಇನ್ನೊಂದು ಕಡೆಯಲ್ಲಿ, ನಾವು ತಕ್ಕದಾದ ಭಾವಪೂರ್ಣತೆಯೊಂದಿಗೆ ಮಾತಾಡುವಲ್ಲಿ, ನಮ್ಮ ಭಾಷಣದ ಸೊಬಗು ಮತ್ತು ಗುಣಾತಿಶಯವು ನಮಗೆ ಕಿವಿಗೊಡುತ್ತಿರುವವರ ಹೃದಯವನ್ನು ಸ್ಪರ್ಶಿಸೀತು.

ಹಾರ್ದಿಕತೆಯನ್ನು ವ್ಯಕ್ತಪಡಿಸುವುದು. ಹಾರ್ದಿಕ ಭಾವನೆಗಳನ್ನು ಆಗಿಂದಾಗ್ಗೆ ಜನರ ಕುರಿತಾದ ಯೋಚನೆಗಳೊಂದಿಗೆ ಜೊತೆಗೂಡಿಸಲಾಗುತ್ತದೆ. ಆದುದರಿಂದ, ಯೆಹೋವನನ್ನು ನಮ್ಮ ಪ್ರೀತಿಪಾತ್ರನನ್ನಾಗಿಸುವ ಗುಣಗಳ ಕುರಿತು ಮಾತಾಡುವಾಗ ಮತ್ತು ಯೆಹೋವನ ಒಳ್ಳೇತನಕ್ಕಾಗಿರುವ ನಮ್ಮ ಗಣ್ಯತೆಯನ್ನು ವ್ಯಕ್ತಪಡಿಸುವಾಗ, ನಮ್ಮ ಸ್ವರವು ಹಾರ್ದಿಕವಾಗಿರಬೇಕು. (ಯೆಶಾ. 63:7-9) ಮತ್ತು ಜೊತೆಮಾನವರೊಂದಿಗೆ ಮಾತಾಡುವಾಗ, ನಮ್ಮ ಮಾತಿನ ರೀತಿಯು ಮನಸ್ಸಿಗೆ ಹಿಡಿಸುವಂಥ ಹಾರ್ದಿಕತೆಯನ್ನು ವ್ಯಕ್ತಪಡಿಸುವಂತಿರಬೇಕು.

ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿ ಬಂದು ತನ್ನನ್ನು ವಾಸಿಮಾಡುವಂತೆ ಬೇಡಿಕೊಳ್ಳುತ್ತಾನೆ. ಯೇಸು ಅವನಿಗೆ, “ನನಗೆ ಮನಸ್ಸುಂಟು; ಶುದ್ಧವಾಗು” ಎಂದು ಹೇಳಿದಾಗ, ಅವನ ಸ್ವರ ಹೇಗಿದ್ದಿರಬಹುದೆಂಬುದನ್ನು ತುಸು ಊಹಿಸಿಕೊಳ್ಳಿ. (ಮಾರ್ಕ 1:40, 41) ಇನ್ನೊಂದು ದೃಶ್ಯವನ್ನೂ ಚಿತ್ರಿಸಿಕೊಳ್ಳಿ. 12 ವರ್ಷಗಳ ವರೆಗೆ ರಕ್ತಕುಸುಮ ರೋಗವಿದ್ದ ಸ್ತ್ರೀಯೊಬ್ಬಳು ಯೇಸುವನ್ನು ಹಿಂದಿನಿಂದ ಸಮೀಪಿಸಿ ಅವನ ಹೊರ ಅಂಗಿಯ ಗೊಂಡೆಯನ್ನು ಮುಟ್ಟುತ್ತಾಳೆ. ತಾನು ಅವನ ದೃಷ್ಟಿಯಿಂದ ತಪ್ಪಿಸಿಕೊಂಡಿಲ್ಲವೆಂಬುದನ್ನು ಗ್ರಹಿಸಿದ ಆ ಸ್ತ್ರೀ ನಡುಗುತ್ತಾ ಬಂದು, ಯೇಸುವಿಗೆ ಅಡ್ಡಬಿದ್ದು, ತಾನು ಅವನ ಅಂಗಿಯನ್ನು ಮುಟ್ಟಿದ್ದೇಕೆಂದೂ ಹೇಗೆ ತನಗೆ ವಾಸಿಯಾಯಿತೆಂದೂ ಎಲ್ಲರ ಮುಂದೆ ತಿಳಿಸುತ್ತಾಳೆ. ಆಗ ಯೇಸು ಅವಳಿಗೆ, “ಮಗಳೇ ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು” ಎಂದು ಹೇಳಿದ ರೀತಿಯ ಕುರಿತು ಸ್ವಲ್ಪ ಯೋಚಿಸಿರಿ. (ಲೂಕ 8:41ಬಿ-48) ಆ ಸಂದರ್ಭಗಳಲ್ಲಿ ಯೇಸು ತೋರಿಸಿದ ಹಾರ್ದಿಕತೆಯು ಇಂದು ಸಹ ನಮ್ಮ ಹೃದಯಗಳನ್ನು ಸ್ಪರ್ಶಿಸುತ್ತದೆ.

ಯೇಸುವಿನಂತೆ, ನಮಗೂ ಜನರ ವಿಷಯದಲ್ಲಿ ಕನಿಕರದ ಅನಿಸಿಕೆಯಾಗುವಲ್ಲಿ ಮತ್ತು ಅವರಿಗೆ ಸಹಾಯಮಾಡಲು ನಮಗೆ ನಿಜವಾಗಿಯೂ ಮನಸ್ಸಿರುವಲ್ಲಿ, ನಾವು ಅವರೊಂದಿಗೆ ಮಾತಾಡುವ ರೀತಿಯಲ್ಲಿ ಅದು ತೋರಿಬರುತ್ತದೆ. ಅಂತಹ ಹಾರ್ದಿಕತೆಯು ವಿಪರೀತವಾಗಿರುವುದಿಲ್ಲ, ಯಥಾರ್ಥವಾದುದಾಗಿರುತ್ತದೆ. ಜನರು ಹೇಗೆ ಪ್ರತಿಕ್ರಿಯಿಸುತ್ತಾರೆಂಬ ವಿಷಯದಲ್ಲಿ ನಮ್ಮ ಹಾರ್ದಿಕತೆಯು ತುಂಬ ವ್ಯತ್ಯಾಸವನ್ನು ಉಂಟುಮಾಡಬಲ್ಲದು. ನಾವು ಕ್ಷೇತ್ರ ಶುಶ್ರೂಷೆಯಲ್ಲಿ ಹೇಳುವ ಹೆಚ್ಚಿನ ವಿಷಯಗಳು, ವಿಶೇಷವಾಗಿ ನಾವು ತರ್ಕಿಸುವಾಗ, ಪ್ರೋತ್ಸಾಹಿಸುವಾಗ, ಸಲಹೆ ನೀಡುವಾಗ ಮತ್ತು ಸಹಾನುಭೂತಿಯನ್ನು ತೋರಿಸುವಾಗ, ಈ ರೀತಿಯ ಹಾರ್ದಿಕ ಮಾತಿಗೆ ಅನುಕೂಲಕರವಾಗಿರುತ್ತವೆ.

ನಿಮಗೆ ಇತರರ ಕಡೆಗೆ ಹಾರ್ದಿಕ ಭಾವನೆಯಿರುವುದಾದರೆ, ಅದನ್ನು ನಿಮ್ಮ ಮುಖಭಾವದಲ್ಲಿ ತೋರಿಸಿರಿ. ನೀವು ಹಾರ್ದಿಕತೆಯನ್ನು ತೋರಿಸುವಾಗ, ನಿಮ್ಮ ಸಭಿಕರು ಶೀತಲವಾದ ರಾತ್ರಿಯಲ್ಲಿ ಬೆಂಕಿಯ ಕಡೆಗೆ ಹೇಗೊ ಹಾಗೆಯೇ ನಿಮ್ಮ ಕಡೆಗೆ ಆಕರ್ಷಿಸಲ್ಪಡುವರು. ಆದರೆ ನಿಮ್ಮ ಮುಖದಲ್ಲಿ ಹಾರ್ದಿಕತೆ ಕಂಡುಬರದಿರುವಲ್ಲಿ, ನಿಮಗೆ ನಿಜವಾಗಿಯೂ ಅವರ ಕುರಿತು ಕಾಳಜಿಯಿದೆಯೆಂದು ಸಭಿಕರಿಗೆ ಮನದಟ್ಟಾಗಲಿಕ್ಕಿಲ್ಲ. ಹಾರ್ದಿಕತೆಯನ್ನು ಮೊಗವಾಡದಂತೆ ಹಾಕಿಕೊಳ್ಳಸಾಧ್ಯವಿಲ್ಲ, ಅದು ನೈಜವಾಗಿರಬೇಕು.

ಹಾರ್ದಿಕತೆಯು ನಿಮ್ಮ ಸ್ವರದಲ್ಲಿಯೂ ಕಂಡುಬರಬೇಕು. ನಿಮ್ಮ ಸ್ವರವು ಕಠಿನವಾಗಿಯೂ ಕರ್ಕಶವಾಗಿಯೂ ಇರುವಲ್ಲಿ, ನಿಮ್ಮ ಭಾಷಣದಲ್ಲಿ ಹಾರ್ದಿಕತೆಯನ್ನು ವ್ಯಕ್ತಪಡಿಸುವುದು ಕಷ್ಟಕರವಾದೀತು. ಆದರೆ ಸಮಯ ಮತ್ತು ಪ್ರಜ್ಞಾಪೂರ್ವಕವಾದ ಪ್ರಯತ್ನದ ಸಹಾಯದಿಂದ ಇದು ನಿಮಗೆ ಸಾಧ್ಯವಾದೀತು. ನಿಜವಾಗಿಯೂ ಇದರ ಪ್ರಯೋಗ ವಿಧಾನದ ದೃಷ್ಟಿಕೋನದಿಂದ ಹೇಳುವುದಾದರೆ, ಒಂದು ವಿಷಯವು ನಿಮಗೆ ಸಹಾಯಮಾಡಬಹುದು. ಅದೇನಂದರೆ, ಹ್ರಸ್ವವಾದ, ಅಕ್ಷರವನ್ನು ನುಂಗುವ ಸ್ವರಗಳು ಭಾಷಣವನ್ನು ಭಾವರಹಿತವಾಗಿ ಮಾಡುತ್ತವೆ ಎಂಬುದನ್ನು ನೆನಪಿನಲ್ಲಿಡುವುದೇ. ಪದಗಳಲ್ಲಿರುವ ಮೃದುವಾದ ಸ್ವರಗಳನ್ನು ಎಳೆದು ಮಾತಾಡಲು ಕಲಿಯಿರಿ. ಇದು ನಿಮ್ಮ ಭಾಷಣದಲ್ಲಿ ಹಾರ್ದಿಕತೆಯನ್ನು ತುಂಬಿಸಲು ನಿಮಗೆ ಸಹಾಯಮಾಡುವುದು.

ಆದರೆ ಇದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿರುವುದು ನಿಮ್ಮ ಆಸಕ್ತಿಯ ಕೇಂದ್ರವೇ ಆಗಿದೆ. ನಿಮ್ಮ ಆಲೋಚನೆಗಳು ನೀವು ಯಾರೊಂದಿಗೆ ಮಾತನಾಡುತ್ತೀರೊ ಅವರ ಮೇಲೆ ಮನಃಪೂರ್ವಕವಾಗಿ ಕೇಂದ್ರೀಕರಿಸಿರುವುದಾದರೆ ಮತ್ತು ಅವರಿಗೆ ಪ್ರಯೋಜನಕರವಾಗಿರುವಂಥ ವಿಷಯವನ್ನು ತಿಳಿಯಪಡಿಸುವ ಶ್ರದ್ಧಾಪೂರ್ವಕವಾದ ಬಯಕೆಯು ನಿಮಗಿರುವುದಾದರೆ, ಆ ಅನಿಸಿಕೆಯು ನೀವು ಹೇಗೆ ಮಾತಾಡುತ್ತೀರೊ ಅದರಲ್ಲಿ ಪ್ರತಿಬಿಂಬಿಸಲ್ಪಡುವುದು.

ಹುರುಪಿನಿಂದ ಕೂಡಿರುವ ಒಂದು ಭಾಷಣವು ಉತ್ತೇಜನದಾಯಕವಾಗಿರುವುದಾದರೂ, ಕೋಮಲ ಭಾವವು ಕೂಡ ಅಗತ್ಯವಾಗಿದೆ. ಏಕೆಂದರೆ ಯಾವಾಗಲೂ ಮನಸ್ಸನ್ನು ಒಡಂಬಡಿಸುವುದು ಸಾಲದು; ನಾವು ಹೃದಯವನ್ನೂ ಪ್ರಚೋದಿಸತಕ್ಕದ್ದು.

ಬೇರೆ ಭಾವನೆಗಳನ್ನು ವ್ಯಕ್ತಪಡಿಸುವುದು. ಸಂಕಟದಲ್ಲಿರುವ ಒಬ್ಬ ವ್ಯಕ್ತಿಯು ಕಳವಳ, ಭಯ ಮತ್ತು ಖಿನ್ನತೆ ಮುಂತಾದ ಭಾವಗಳನ್ನು ವ್ಯಕ್ತಪಡಿಸಬಹುದು. ಆದರೆ ಆನಂದವು ನಮ್ಮ ಜೀವನದಲ್ಲಿ ಪ್ರಧಾನವಾಗಿರಬೇಕಾದ ಒಂದು ಭಾವವಾಗಿದೆ ಮತ್ತು ಅದು ನಾವು ಇತರರೊಂದಿಗೆ ಮಾತನಾಡುವಾಗ ಸಂಕೋಚವಿಲ್ಲದೆ ವ್ಯಕ್ತವಾಗಬೇಕು. ಅದೇ ಸಮಯದಲ್ಲಿ, ಕೆಲವು ಭಾವಗಳನ್ನು ನಾವು ನಿಗ್ರಹಿಸುವ ಅಗತ್ಯವಿದೆ. ಏಕೆಂದರೆ ಅವು ಕ್ರೈಸ್ತ ವ್ಯಕ್ತಿತ್ವಕ್ಕೆ ಹೊಂದಿಕೆಯಾಗಿರುವುದಿಲ್ಲ. (ಎಫೆ. 4:31, 32; ಫಿಲಿ. 4:4) ನಾವು ಆರಿಸಿಕೊಳ್ಳುವ ಪದಗಳಲ್ಲಿ, ನಮ್ಮ ಸ್ವರದಲ್ಲಿ, ನಾವು ಮಾತಾಡುವ ತೀವ್ರತೆಯಲ್ಲಿ, ನಮ್ಮ ಮುಖಭಾವದಲ್ಲಿ ಮತ್ತು ಭಾವಾಭಿನಯಗಳಲ್ಲಿ ನಾವು ಎಲ್ಲ ರೀತಿಯ ಭಾವಾವೇಶಗಳನ್ನು ವ್ಯಕ್ತಪಡಿಸಬಲ್ಲೆವು.

ಬೈಬಲಿನಲ್ಲಿ ಅನೇಕ ರೀತಿಯ ಮಾನವ ಭಾವಾವೇಶಗಳ ಕುರಿತು ವರದಿಸಲಾಗಿದೆ. ಕೆಲವು ಬಾರಿ ಅದು ಭಾವಾವೇಶಗಳನ್ನು ಹೆಸರಿಸುತ್ತದೆ ಅಷ್ಟೆ. ಇನ್ನು ಕೆಲವು ಬಾರಿ, ಅದು ಘಟನೆಗಳನ್ನು ತಿಳಿಸುತ್ತದೆ ಅಥವಾ ಭಾವಾವೇಶಗಳನ್ನು ವ್ಯಕ್ತಪಡಿಸುವ ಹೇಳಿಕೆಗಳನ್ನು ಉಲ್ಲೇಖಿಸುತ್ತದೆ. ಇಂತಹ ಭಾಗಗಳನ್ನು ನೀವು ಗಟ್ಟಿಯಾಗಿ ಓದುವಾಗ, ನಿಮ್ಮ ಸ್ವರವು ಈ ಭಾವಾವೇಶಗಳನ್ನು ಪ್ರತಿಬಿಂಬಿಸುವುದಾದರೆ, ಅದು ನಿಮ್ಮ ಮೇಲೆಯೂ ಕೇಳುಗರ ಮೇಲೆಯೂ ಹೆಚ್ಚು ಮಹತ್ತರವಾದ ಪರಿಣಾಮವನ್ನು ಬೀರುವುದು. ಆದರೆ ಹಾಗೆ ಓದಲಿಕ್ಕಾಗಿ, ನೀವು ಯಾರ ಕುರಿತು ಓದುತ್ತಿದ್ದೀರೊ ಅವರ ಸ್ಥಾನದಲ್ಲಿ ನೀವು ನಿಮ್ಮನ್ನು ಇರಿಸಿಕೊಳ್ಳಬೇಕು. ಆದರೆ ಒಂದು ಭಾಷಣವು ನಾಟಕವಲ್ಲ, ಆದುದರಿಂದ ಅದನ್ನು ಅತಿರೇಕಕ್ಕೆ ಕೊಂಡೊಯ್ಯದಂತೆ ಜಾಗ್ರತೆ ವಹಿಸಬೇಕು. ಕೇಳುಗರ ಮನಸ್ಸಿನಲ್ಲಿ ಆ ಭಾಗಗಳು ಸಜೀವವಾಗುವಂತೆ ಮಾಡಿರಿ.

ವಿಷಯಭಾಗಕ್ಕೆ ಸೂಕ್ತವಾದದ್ದು. ಉತ್ಸಾಹದಂತೆಯೇ, ನೀವು ನಿಮ್ಮ ಮಾತಿನಲ್ಲಿ ಒಳಗೂಡಿಸುವ ಹಾರ್ದಿಕತೆ ಮತ್ತು ನೀವು ವ್ಯಕ್ತಪಡಿಸುವ ಇತರ ಭಾವಾವೇಶಗಳು, ಹೆಚ್ಚಾಗಿ ನೀವು ಏನು ಹೇಳುತ್ತಿದ್ದೀರೊ ಅದರ ಮೇಲೆ ಹೊಂದಿಕೊಂಡಿವೆ.

ಮತ್ತಾಯ 11:28-30 ನ್ನು ಓದಿ, ಅಲ್ಲಿ ಹೇಳಿರುವ ವಿಷಯವನ್ನು ಗಮನಿಸಿ. ಬಳಿಕ, ಮತ್ತಾಯ 23ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೇಸು ಶಾಸ್ತ್ರಿಗಳನ್ನೂ ಫರಿಸಾಯರನ್ನೂ ಖಂಡಿಸುವ ವಿಷಯವನ್ನು ಓದಿರಿ. ಯೇಸು ಈ ಖಂಡನೆಯ ಇರಿಯುವ ಮಾತುಗಳನ್ನು ನಿರಾಸಕ್ತಿಯಿಂದ, ನಿರ್ಜೀವ ರೀತಿಯಲ್ಲಿ ಹೇಳುತ್ತಿರುವುದನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.

ಆದಿಕಾಂಡ 44ನೆಯ ಅಧ್ಯಾಯದಲ್ಲಿ ಯೆಹೂದನು ತನ್ನ ತಮ್ಮನಾಗಿದ್ದ ಬೆನ್ಯಾಮೀನನ ಪರವಾಗಿ ಮಾಡಿದ ಬೇಡಿಕೆಯ ಕುರಿತಾದಂಥ ವೃತ್ತಾಂತವನ್ನು ಹೇಳಲು ಯಾವ ರೀತಿಯ ಭಾವನೆಯ ಅಗತ್ಯವಿದೆಯೆಂದು ನೀವು ನೆನಸುತ್ತೀರಿ? 13ನೆಯ ವಚನದಲ್ಲಿ ತೋರಿಬರುವ ಭಾವಾವೇಶವನ್ನು ಗಮನಿಸಿರಿ, 16ನೆಯ ವಚನದಲ್ಲಿ ಈ ವಿಪತ್ತಿನ ಕಾರಣದ ಕುರಿತು ಯೆಹೂದನಿಗೆ ಹೇಗನಿಸಿತೆಂಬುದನ್ನು ತಿಳಿದುಕೊಳ್ಳಿರಿ, ಮತ್ತು ಆದಿಕಾಂಡ 45:1 ರಲ್ಲಿ ತಿಳಿಸಿರುವಂತೆ ಯೋಸೇಫನು ತಾನೇ ಹೇಗೆ ಪ್ರತಿವರ್ತಿಸಿದನೆಂಬುದನ್ನು ಗಮನಿಸಿರಿ.

ಹೀಗೆ, ನಾವು ಓದುತ್ತಿರಲಿ ಮಾತಾಡುತ್ತಿರಲಿ, ಅದನ್ನು ಪರಿಣಾಮಕಾರಿಯಾಗಿ ಮಾಡಬೇಕಾದರೆ, ನಾವು ಮಾತುಗಳನ್ನು ಮತ್ತು ವಿಚಾರಗಳನ್ನು ಮಾತ್ರವಲ್ಲ, ಅವುಗಳ ಜೊತೆಗೆ ವ್ಯಕ್ತಪಡಿಸಬೇಕಾಗಿರುವ ಭಾವನೆಗಳನ್ನೂ ಪರಿಗಣಿಸಬೇಕು.

ಇದನ್ನು ವ್ಯಕ್ತಪಡಿಸುವ ವಿಧ

  • ನೀವು ಉಪಯೋಗಿಸುವ ಪದಗಳ ಕುರಿತು ವಿಪರೀತವಾಗಿ ಚಿಂತಿಸುವ ಬದಲು, ನಿಮ್ಮ ಕೇಳುಗರಿಗೆ ಸಹಾಯಮಾಡುವ ನಿಮ್ಮ ಬಯಕೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿರಿ.

  • ನಿಮ್ಮ ವಿಷಯಭಾಗಕ್ಕೆ ಸೂಕ್ತವಾದ ಭಾವಾವೇಶವನ್ನು ನಿಮ್ಮ ಸ್ವರ ಮತ್ತು ನಿಮ್ಮ ಮುಖಭಾವವು ಪ್ರತಿಬಿಂಬಿಸಬೇಕು.

  • ಭಾವಗರ್ಭಿತವಾಗಿ ಮಾತಾಡುವ ಇತರರನ್ನು ಜಾಗರೂಕತೆಯಿಂದ ಅವಲೋಕಿಸುವ ಮೂಲಕ ಕಲಿಯಿರಿ.

ಅಭ್ಯಾಸಪಾಠ: ಇಲ್ಲಿ ಕೊಡಲ್ಪಟ್ಟಿರುವ ಶಾಸ್ತ್ರವಚನದ ಭಾಗಗಳನ್ನು, ಅದರಲ್ಲಿರುವ ಆ ವಿಷಯಕ್ಕೆ ಸೂಕ್ತವಾಗಿರುವ ಭಾವನೆಗಳೊಂದಿಗೆ ಗಟ್ಟಿಯಾಗಿ ಓದಿರಿ: ಮತ್ತಾಯ 20:29-34; ಲೂಕ 15:11-32.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ