ಅಧ್ಯಾಯ 12
ಭಾವಾಭಿನಯಗಳು ಮತ್ತು ಮುಖಭಾವಗಳು
ಕೆಲವು ಸಂಸ್ಕೃತಿಗಳ ಜನರು ಇತರ ಹಿನ್ನೆಲೆಗಳ ಜನರಿಗಿಂತ ಹೆಚ್ಚು ಮುಕ್ತವಾಗಿ ಭಾವಾಭಿನಯಗಳನ್ನು ಮಾಡುತ್ತಾರೆ. ಆದರೂ, ಕಾರ್ಯತಃ ಎಲ್ಲರೂ ಮುಖಭಾವಗಳನ್ನು ಬದಲಾಯಿಸಿ ಮಾತಾಡುತ್ತಾರೆ ಮತ್ತು ಯಾವುದಾದರೊಂದು ರೀತಿಯ ಭಾವಾಭಿನಯಗಳನ್ನು ಉಪಯೋಗಿಸುತ್ತಾರೆ. ಇದು ವೈಯಕ್ತಿಕ ಸಂಭಾಷಣೆಯಲ್ಲಿಯೂ ಸಾರ್ವಜನಿಕ ಭಾಷಣಗಳಲ್ಲಿಯೂ ಸತ್ಯವಾಗಿದೆ.
ಯೇಸುವಿಗೂ ಅವನ ಆರಂಭದ ಶಿಷ್ಯರಿಗೂ ಭಾವಾಭಿನಯಗಳು ಸ್ವಾಭಾವಿಕವಾಗಿದ್ದವು. ಒಂದು ಸಂದರ್ಭದಲ್ಲಿ, ಯಾರೊ ಬಂದು ಯೇಸುವಿನ ತಾಯಿಯೂ ಸಹೋದರರೂ ಅವನೊಂದಿಗೆ ಮಾತಾಡಬೇಕೆಂದಿದ್ದಾರೆ ಎಂದು ಹೇಳಿದರು. ಆಗ ಯೇಸು, “ನನಗೆ ತಾಯಿ ಯಾರು? ನನಗೆ ಅಣ್ಣತಮ್ಮಂದಿರು ಯಾರು?” ಎಂದು ಉತ್ತರಿಸಿದನು. ಆ ಬಳಿಕ ಬೈಬಲು ಹೇಳುವುದು: “ಶಿಷ್ಯರ ಕಡೆಗೆ ಕೈ ತೋರಿಸಿ—ಇಗೋ, ನನ್ನ ತಾಯಿ, ನನ್ನ ಅಣ್ಣತಮ್ಮಂದಿರು” ಎಂದು ಅವನು ಹೇಳಿದನು. (ಓರೆ ಅಕ್ಷರಗಳು ನಮ್ಮವು.) (ಮತ್ತಾ. 12:48, 49) ಬೇರೆ ಉಲ್ಲೇಖಗಳಲ್ಲಿ, ಅಪೊಸ್ತಲರ ಕೃತ್ಯಗಳು 12:17 ಮತ್ತು 13:16 ಒಳಗೂಡಿವೆ. ಅಲ್ಲಿ ಅಪೊಸ್ತಲರಾದ ಪೇತ್ರ ಮತ್ತು ಪೌಲರು ಸಹ ಸ್ವಾಭಾವಿಕವಾದ ಭಾವಾಭಿನಯಗಳನ್ನು ಮಾಡಿದರೆಂದು ತೋರಿಸಲ್ಪಟ್ಟಿದೆ.
ವಿಚಾರಗಳೂ ಭಾವನೆಗಳೂ ಸ್ವರದ ಮೂಲಕ ಮಾತ್ರವಲ್ಲ, ಭಾವಾಭಿನಯಗಳು ಮತ್ತು ಮುಖಭಾವಗಳ ಮೂಲಕವೂ ವ್ಯಕ್ತಪಡಿಸಲ್ಪಡುತ್ತವೆ. ಇವುಗಳನ್ನು ಚೆನ್ನಾಗಿ ಉಪಯೋಗಿಸಲು ತಪ್ಪಿಹೋಗುವುದು, ಮಾತಾಡುವವನು ಉದಾಸೀನ ಮನೋಭಾವದವನೆಂಬ ಅಭಿಪ್ರಾಯವನ್ನು ಕೊಡಬಹುದು. ಆದರೆ ಈ ಸಂವಾದ ಮಾಧ್ಯಮಗಳು ಕಲಾತ್ಮಕವಾಗಿ ಒಂದುಗೂಡಿಸಲ್ಪಡುವಾಗ, ಭಾಷಣದ ಪರಿಣಾಮಕಾರಿತ್ವವು ಮಹತ್ತರವಾಗಿ ವರ್ಧಿಸಲ್ಪಡುತ್ತದೆ. ನೀವು ಟೆಲಿಫೋನಿನಲ್ಲಿ ಮಾತಾಡುವಾಗಲೂ ತಕ್ಕದಾದ ಭಾವಾಭಿನಯಗಳನ್ನು ಮತ್ತು ಮುಖಭಾವಗಳನ್ನು ಉಪಯೋಗಿಸುವಲ್ಲಿ, ನಿಮ್ಮ ಸಂದೇಶದ ಮಹತ್ವವನ್ನು ಹಾಗೂ ನೀವು ಹೇಳುತ್ತಿರುವ ವಿಷಯದ ಕುರಿತಾದ ನಿಮ್ಮ ಸ್ವಂತ ಭಾವನೆಗಳನ್ನು ನಿಮ್ಮ ಸ್ವರವು ಹೆಚ್ಚು ಸುಲಭವಾಗಿ ತಿಳಿಯಪಡಿಸುವುದು. ಹೀಗೆ ನೀವು ಆಶುಭಾಷಣ ಮಾಡುತ್ತಿರಲಿ ಅಥವಾ ಓದುತ್ತಿರಲಿ, ನಿಮ್ಮ ಸಭಿಕರು ನಿಮ್ಮನ್ನು ನೋಡುತ್ತಿರಲಿ ಅಥವಾ ತಮ್ಮ ಸ್ವಂತ ಬೈಬಲುಗಳನ್ನು ನೋಡುತ್ತಿರಲಿ, ಭಾವಾಭಿನಯಗಳೂ ಮುಖಭಾವಗಳೂ ಆವಶ್ಯಕವಾಗಿವೆ.
ನಿಮ್ಮ ಭಾವಾಭಿನಯಗಳು ಹಾಗೂ ಮುಖಭಾವಗಳು ಒಂದು ಪುಸ್ತಕದಿಂದ ಕಲಿತಿದ್ದೀರೊ ಎಂಬಂತೆ ಕೃತಕವಾಗಿರಬಾರದು, ಬದಲಾಗಿ ಸ್ವಾಭಾವಿಕವಾಗಿರಬೇಕು. ಹೇಗೆ ನಗಾಡಬೇಕೆಂಬುದನ್ನು ಅಥವಾ ಕೋಪವನ್ನು ತೋರಿಸಬೇಕೆಂಬುದನ್ನು ನೀವು ಎಂದೂ ಕಲಿಯಬೇಕಾಗಲಿಲ್ಲ ಅಲ್ಲವೆ? ಅದೇ ರೀತಿಯಲ್ಲಿ ಭಾವಾಭಿನಯಗಳು ಸಹ ನಿಮ್ಮೊಳಗಿರುವ ಭಾವನೆಗಳನ್ನು ಹೊರತರಬೇಕು. ನಿಮ್ಮ ಭಾವಾಭಿನಯಗಳು ಎಷ್ಟು ಸ್ವಾಭಾವಿಕವಾಗಿರುತ್ತವೊ, ಅವು ಅಷ್ಟು ಉತ್ತಮವಾಗಿರುವವು.
ಭಾವಾಭಿನಯಗಳು ಎರಡು ಸಾಧಾರಣ ವರ್ಗಗಳಿಗೆ ಸೇರಿದವುಗಳಾಗಿರುತ್ತವೆ: ವರ್ಣನಾತ್ಮಕ ಭಾವಾಭಿನಯ ಮತ್ತು ಒತ್ತುನೀಡುವ ಭಾವಾಭಿನಯ. ವರ್ಣನಾತ್ಮಕ ಭಾವಾಭಿನಯಗಳು ಕ್ರಿಯೆಯನ್ನು ಅಥವಾ ಪರಿಮಾಣವನ್ನು ಮತ್ತು ಸ್ಥಾನವನ್ನು ತೋರಿಸುತ್ತವೆ. ದೇವಪ್ರಭುತ್ವಾತ್ಮಕ ಶಾಲೆಯಲ್ಲಿ ನೀವು ಭಾವಾಭಿನಯಗಳನ್ನು ಉಪಯೋಗಿಸುವ ವಿಷಯದಲ್ಲಿ ಕೆಲಸಮಾಡುತ್ತಿರುವಾಗ, ಕೇವಲ ಒಂದೊ ಎರಡೊ ಭಾವಾಭಿನಯಗಳಿಂದ ತೃಪ್ತರಾಗಬೇಡಿ. ನಿಮ್ಮ ಭಾಷಣದಾದ್ಯಂತ ಸ್ವಾಭಾವಿಕ ರೀತಿಯಲ್ಲಿ ಭಾವಾಭಿನಯಿಸಲು ಪ್ರಯತ್ನಿಸಿರಿ. ಇದನ್ನು ಮಾಡುವುದು ನಿಮಗೆ ಕಷ್ಟಕರವಾಗುವುದಾದರೆ, ದಿಕ್ಕು, ದೂರ, ಗಾತ್ರ, ಸ್ಥಳ ಅಥವಾ ಸಂಬಂಧಸೂಚಕ ಸ್ಥಾನಗಳನ್ನು ತೋರಿಸುವ ಪದಗಳನ್ನು ಹುಡುಕುವುದನ್ನು ನೀವು ಸಹಾಯಕರವಾದದ್ದಾಗಿ ಕಂಡುಕೊಳ್ಳಬಹುದು. ಆದರೆ ಅನೇಕ ಸಂದರ್ಭಗಳಲ್ಲಿ, ನಿಮ್ಮ ಭಾಷಣದಲ್ಲಿ ತಲ್ಲೀನರಾಗಿರುವುದೇ ನಿಮಗೆ ಅಗತ್ಯವಿರುವ ಸಂಗತಿಯಾಗಿದೆ; ನೀವು ಸಭಿಕರಲ್ಲಿ ನಿಮ್ಮ ಕುರಿತು ಯಾವ ಅಭಿಪ್ರಾಯವನ್ನು ಮೂಡಿಸುತ್ತಿದ್ದೀರಿ ಎಂಬುದರ ಬಗ್ಗೆ ಚಿಂತಿಸಬೇಕಾಗಿಲ್ಲ, ಬದಲಿಗೆ ನೀವು ದೈನಂದಿನ ಜೀವನದಲ್ಲಿ ಮಾಡುವಂತೆಯೇ ವಿಷಯಗಳನ್ನು ಹೇಳಿ ಮಾಡಿರಿ. ಒಬ್ಬನು ಹಾಯಾಗಿ ಇರುವಾಗ, ಭಾವಾಭಿನಯಗಳು ಸ್ವಾಭಾವಿಕವಾಗಿ ಬರುತ್ತವೆ.
ಒತ್ತುನೀಡುವ ಭಾವಾಭಿನಯಗಳು, ಭಾವನೆ ಮತ್ತು ನಿಶ್ಚಿತಾಭಿಪ್ರಾಯವನ್ನು ವ್ಯಕ್ತಪಡಿಸುತ್ತವೆ. ಅವು ವಿಚಾರಗಳಿಗೆ ಪ್ರಾಧಾನ್ಯಕೊಟ್ಟು, ಅವುಗಳನ್ನು ಉಜ್ಜೀವಿಸಿ, ಬಲಪಡಿಸುತ್ತವೆ. ಒತ್ತುನೀಡುವ ಭಾವಾಭಿನಯಗಳು ಪ್ರಾಮುಖ್ಯವಾಗಿವೆ. ಆದರೆ ಎಚ್ಚರಿಕೆ! ಒತ್ತುನೀಡುವ ಭಾವಾಭಿನಯಗಳು ಸುಲಭವಾಗಿ ವಿಲಕ್ಷಣತೆಗಳಾಗಿ ಪರಿಣಮಿಸಬಹುದು. ನೀವು ಒಂದೇ ಭಾವಾಭಿನಯವನ್ನು ಮತ್ತೆ ಮತ್ತೆ ಉಪಯೋಗಿಸುವಲ್ಲಿ, ಅದು ನಿಮ್ಮ ಭಾಷಣವನ್ನು ವರ್ಧಿಸುವ ಬದಲು ಅದರ ಕಡೆಗೇ ಗಮನವನ್ನು ಸೆಳೆಯಬಹುದು. ನಿಮಗೆ ಈ ಸಮಸ್ಯೆಯಿದೆಯೆಂದು ನಿಮ್ಮ ಶಾಲಾ ಮೇಲ್ವಿಚಾರಕನು ಹೇಳುವುದಾದರೆ, ಸ್ವಲ್ಪ ಸಮಯದ ವರೆಗೆ ಕೇವಲ ವರ್ಣನಾತ್ಮಕ ಭಾವಾಭಿನಯಗಳನ್ನು ಮಾತ್ರ ಪ್ರಯತ್ನಿಸಿ ನೋಡಿ. ಸಮಯ ಕಳೆದಾಗ, ಪುನಃ ಒತ್ತುನೀಡುವ ಭಾವಾಭಿನಯವನ್ನು ಉಪಯೋಗಿಸಲು ಆರಂಭಿಸಿ.
ಒತ್ತುನೀಡುವ ಭಾವಾಭಿನಯಗಳನ್ನು ಎಷ್ಟರ ಮಟ್ಟಿಗೆ ನೀವು ಉಪಯೋಗಿಸಬೇಕೆಂದು ಮತ್ತು ಯೋಗ್ಯವಾದ ಭಾವಾಭಿನಯಗಳು ಯಾವುವೆಂದು ನಿರ್ಣಯಿಸಲಿಕ್ಕಾಗಿ, ನೀವು ಯಾರೊಂದಿಗೆ ಮಾತಾಡುತ್ತೀರೊ ಅವರ ಅನಿಸಿಕೆಗಳನ್ನು ಪರಿಗಣಿಸಿರಿ. ಸಭಿಕರಿಗೆ ಕೈತೋರಿಸುವುದು ಅವರನ್ನು ಪೇಚಾಟಕ್ಕೆ ಸಿಕ್ಕಿಸಬಹುದು. ಕೆಲವು ಸಂಸ್ಕೃತಿಗಳಲ್ಲಿ ಒಬ್ಬ ಗಂಡಸು, ಆಶ್ಚರ್ಯವನ್ನು ಸೂಚಿಸಲಿಕ್ಕಾಗಿ ಬಾಯಿಯ ಮೇಲೆ ಕೈಯಿಡುವಲ್ಲಿ, ಅದು ಹೆಣ್ಣಿಗತನವಾಗಿ ಪರಿಗಣಿಸಲ್ಪಡುತ್ತದೆ. ಲೋಕದ ಕೆಲವು ಭಾಗಗಳಲ್ಲಿ, ಹೆಂಗಸರು ಸಂಕೋಚವಿಲ್ಲದೆ ಕೈಬೀಸಿ ಭಾವಾಭಿನಯ ಮಾಡುವಲ್ಲಿ ಅದು ಅನುಚಿತವಾಗಿ ಪರಿಗಣಿಸಲ್ಪಡುತ್ತದೆ. ಆದುದರಿಂದ, ಇಂತಹ ಸ್ಥಳಗಳಲ್ಲಿ ಸಹೋದರಿಯರು ವಿಶೇಷವಾಗಿ ಮುಖಭಾವಗಳನ್ನು ಸದುಪಯೋಗಿಸಿಕೊಳ್ಳುವ ಆವಶ್ಯಕತೆಯಿದೆ. ಮತ್ತು ಒಂದು ಚಿಕ್ಕ ಗುಂಪಿನೆದುರು ವಿಪರೀತವಾದ ಭಾವಾಭಿನಯಗಳನ್ನು ಮಾಡುವುದು, ಲೋಕದ ಯಾವ ಭಾಗದಲ್ಲಿಯೂ ಹಾಸ್ಯಾಸ್ಪದವಾಗಿ ಪರಿಗಣಿಸಲ್ಪಡಬಹುದು.
ನೀವು ಅನುಭವವನ್ನು ಪಡೆದು ನಿರಾಯಾಸವಾಗಿ ಮಾತಾಡುವವರಾಗುವಾಗ, ನೀವು ಉಪಯೋಗಿಸುವ ಯಾವುದೇ ಒತ್ತುನೀಡುವ ಭಾವಾಭಿನಯಗಳು ನಿಮ್ಮ ಆಂತರಿಕ ಭಾವನೆಗಳನ್ನು ಸ್ವಾಭಾವಿಕವಾಗಿಯೇ ವ್ಯಕ್ತಪಡಿಸಿ, ನಿಮ್ಮ ನಿಶ್ಚಿತಾಭಿಪ್ರಾಯವನ್ನು ಮತ್ತು ಪ್ರಾಮಾಣಿಕತೆಯನ್ನು ತೋರಿಸುವವು. ಇವು ನಿಮ್ಮ ಭಾಷಣವನ್ನು ಅರ್ಥವತ್ತಾಗಿ ಮಾಡುವವು.
ನಿಮ್ಮ ಮುಖಭಾವ. ದೇಹದ ಬೇರಾವುದೇ ಅಂಗಕ್ಕಿಂತಲೂ ಹೆಚ್ಚಾಗಿ, ಅನೇಕವೇಳೆ ನಿಮ್ಮ ಮುಖವು ನಿಮಗೆ ನಿಜವಾಗಿಯೂ ಹೇಗನಿಸುತ್ತದೆ ಎಂಬುದನ್ನು ವ್ಯಕ್ತಪಡಿಸುತ್ತದೆ. ನಿಮ್ಮ ಕಣ್ಣುಗಳು, ನಿಮ್ಮ ಬಾಯಿಯ ಆಕಾರ, ನಿಮ್ಮ ತಲೆಯ ಬಾಗು—ಇವೆಲ್ಲ ಇದರಲ್ಲಿ ಪಾತ್ರ ವಹಿಸುತ್ತವೆ. ನಿಮ್ಮ ಬಾಯಿಯಿಂದ ಒಂದೇ ಒಂದು ಮಾತು ಹೊರಡದಿದ್ದರೂ, ನಿಮ್ಮ ಮುಖವು ಉದಾಸೀನತೆಯನ್ನು, ಜಿಗುಪ್ಸೆಯನ್ನು, ದಿಗ್ಭ್ರಮೆಯನ್ನು, ಆಶ್ಚರ್ಯವನ್ನು ಇಲ್ಲವೆ ಸಂತೋಷವನ್ನು ತೋರಿಸಬಲ್ಲದು. ಮತ್ತು ಇಂಥ ಮುಖಭಾವಗಳು ನೀವು ಹೇಳುವ ಮಾತನ್ನು ಜೊತೆಗೂಡುವಲ್ಲಿ, ಅವು ದೃಷ್ಟಿಗೋಚರವಾದ ಮತ್ತು ಭಾವಾತ್ಮಕ ಪರಿಣಾಮವನ್ನು ಉಂಟುಮಾಡುತ್ತವೆ. ಸೃಷ್ಟಿಕರ್ತನು ನಿಮ್ಮ ಮುಖದಲ್ಲಿ ಒಟ್ಟು 30ಕ್ಕಿಂತಲೂ ಹೆಚ್ಚು ಸ್ನಾಯುಗಳನ್ನು ಒದಗಿಸಿದ್ದಾನೆ. ನೀವು ಮುಗುಳುನಗೆ ಬೀರುವಾಗ, ಇವುಗಳಲ್ಲಿ ಸುಮಾರು ಅರ್ಧಾಂಶ ಸ್ನಾಯುಗಳು ಅದರಲ್ಲಿ ಭಾಗವಹಿಸುತ್ತವೆ.
ನೀವು ವೇದಿಕೆಯ ಮೇಲೆ ಇರಲಿ, ಇಲ್ಲವೆ ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುತ್ತಾ ಇರಲಿ, ನೀವು ಜನರೊಂದಿಗೆ ಹಿತಕರವಾದ, ಅಂದರೆ ಅವರ ಹೃದಯಗಳನ್ನು ಹರ್ಷಗೊಳಿಸುವಂತಹ ಒಂದು ಸಂದೇಶವನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ಹಾರ್ದಿಕವಾದ ಮುಗುಳುನಗೆಯು ಅದನ್ನು ದೃಢೀಕರಿಸುತ್ತದೆ. ಆದರೆ ನಿಮ್ಮ ಮುಖದಲ್ಲಿ ಯಾವುದೇ ಭಾವನೆ ಇಲ್ಲದಿರುವಲ್ಲಿ, ನೀವು ನಿಜವಾಗಿಯೂ ಅದನ್ನು ಹೃತ್ಪೂರ್ವಕವಾಗಿ ಹೇಳುತ್ತಿದ್ದೀರೊ ಎಂಬ ವಿಷಯದಲ್ಲಿ ಅದು ಪ್ರಶ್ನೆಗಳನ್ನು ಎಬ್ಬಿಸಬಹುದು.
ಇದಲ್ಲದೆ, ಮುಗುಳುನಗೆಯು ನಿಮಗೆ ಇತರರ ಕುರಿತು ದಯಾಪೂರ್ವಕ ಅನಿಸಿಕೆ ಇದೆ ಎಂಬುದನ್ನು ಅವರಿಗೆ ತಿಳಿಯಪಡಿಸುತ್ತದೆ. ಜನರು ಅನೇಕವೇಳೆ ಅಪರಿಚಿತರಿಗೆ ಭಯಪಡುವ ಈ ದಿನಗಳಲ್ಲಿ ಇದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ನಿಮ್ಮ ಮುಗುಳುನಗೆಯು ಅವರು ಹಾಯಾಗಿರುವಂತೆ ಮತ್ತು ನೀವು ಹೇಳುವ ವಿಷಯಕ್ಕೆ ಕಿವಿಗೊಡುವ ಪ್ರವೃತ್ತಿಯನ್ನು ತೋರಿಸುವಂತೆ ಜನರಿಗೆ ಸಹಾಯ ನೀಡಬಲ್ಲದು.