ಅಧ್ಯಾಯ 16
ಸಮಚಿತ್ತತೆ
ಒಬ್ಬ ಭಾಷಣಕಾರನು ಭಾಷಣ ಕೊಡಲು ಎದ್ದು ನಿಲ್ಲುವಾಗ, ವಿಶೇಷವಾಗಿ ಅವನು ಪದೇ ಪದೇ ಭಾಷಣಕೊಡುವ ವ್ಯಕ್ತಿಯಾಗಿಲ್ಲವಾದರೆ, ಅವನಿಗೆ ಹೆದರಿಕೆಯ ಅನಿಸಿಕೆಯಾಗುವುದು ಅಸಾಮಾನ್ಯವೇನಲ್ಲ. ಒಬ್ಬ ಪ್ರಚಾರಕನು ಕ್ಷೇತ್ರ ಶುಶ್ರೂಷೆಯಲ್ಲಿ ಮೊದಲಿನ ಕೆಲವು ಭೇಟಿಗಳನ್ನು ಮಾಡುವಾಗ ತುಸು ಹೆದರಬಹುದು. ಯೆರೆಮೀಯನಿಗೆ ಪ್ರವಾದಿಯಾಗುವ ನೇಮಕವು ದೊರೆತಾಗ ಅವನು ಪ್ರತಿಕ್ರಿಯಿಸಿದ್ದು: “ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು.” (ಯೆರೆ. 1:5, 6) ಯೆಹೋವನು ಯೆರೆಮೀಯನಿಗೆ ಸಹಾಯಮಾಡಿದಂತೆ ನಿಮಗೂ ಸಹಾಯಮಾಡುವನು. ಸಕಾಲದಲ್ಲಿ, ನೀವು ಸಹ ಸಮಚಿತ್ತತೆಯನ್ನು ಬೆಳೆಸಿಕೊಳ್ಳುವಿರಿ.
ಒಬ್ಬ ಸಮಚಿತ್ತ ಭಾಷಣಕಾರನು ಪ್ರಶಾಂತ ಮನಸ್ಕನಾಗಿರುತ್ತಾನೆ. ಈ ಪ್ರಶಾಂತ ಸ್ಥಿತಿ ಅವನ ದೇಹಭಂಗಿಯಲ್ಲಿ ತೋರಿಬರುತ್ತದೆ. ಅವನ ದೇಹಭಂಗಿಯು ಸ್ವಾಭಾವಿಕವೂ ಸಂದರ್ಭಕ್ಕೆ ಸೂಕ್ತವಾದದ್ದೂ ಆಗಿರುತ್ತದೆ. ಅವನ ಕೈಚಲನೆ ಅರ್ಥವತ್ತಾಗಿರುತ್ತದೆ. ಅವನ ಸ್ವರ ಭಾವಗರ್ಭಿತವೂ ನಿಯಂತ್ರಿತವೂ ಆಗಿರುತ್ತದೆ.
ಈ ಸಮಚಿತ್ತ ವ್ಯಕ್ತಿಯ ವರ್ಣನೆಯು ನಿಮಗೆ ಅನ್ವಯಿಸುವುದಿಲ್ಲವೆಂದು ನೀವು ನೆನಸಬಹುದಾದರೂ, ನೀವು ಅಭಿವೃದ್ಧಿಯನ್ನು ಮಾಡಬಲ್ಲಿರಿ. ಹೇಗೆ? ಒಬ್ಬ ಭಾಷಣಕಾರನು ಹೆದರುವುದು ಮತ್ತು ಸಮಚಿತ್ತತೆಯನ್ನು ಕಳೆದುಕೊಳ್ಳುವುದು ಏಕೆಂಬುದನ್ನು ನಾವೀಗ ಪರಿಗಣಿಸೋಣ. ಇದರ ಕಾರಣವು ಶಾರೀರಿಕವಾಗಿರಬಹುದು.
ನಿಮ್ಮ ಮುಂದೆ ಒಂದು ಪಂಥಾಹ್ವಾನವಿರುವಾಗ ನೀವು ಅದನ್ನು ಉತ್ತಮವಾಗಿ ಎದುರಿಸಲು ಬಯಸುತ್ತೀರಿ. ಆದರೆ ಅದರ ಬಗ್ಗೆ ನಿಮಗೆ ಖಾತ್ರಿ ಇಲ್ಲದಿರುವುದರಿಂದ ನೀವು ಕಳವಳಗೊಳ್ಳುತ್ತೀರಿ. ಇದರ ಪರಿಣಾಮವಾಗಿ, ನಿಮ್ಮ ಮಿದುಳು ಶರೀರಕ್ಕೆ ಹೆಚ್ಚು ಅಡ್ರೆನಲಿನ್ ಹಾರ್ಮೋನನ್ನು ಉತ್ಪಾದಿಸಲು ಸೂಚನೆ ಕೊಡುತ್ತದೆ. ಇದರ ಪರಿಣಾಮವಾಗಿ ಉಕ್ಕೇರುವ ಭಾವೋದ್ರೇಕವು ಹೃದಯಬಡಿತವನ್ನು ಹೆಚ್ಚು ವೇಗಗೊಳಿಸಬಹುದು, ಉಸಿರಾಟದ ಪ್ರಮಾಣವನ್ನು ಬದಲಾಯಿಸಬಹುದು, ಹೆಚ್ಚು ಬೆವರುವಂತೆ ಮಾಡಬಹುದು ಅಥವಾ ಕೈಗಳು, ಮೊಣಕಾಲುಗಳು ಮತ್ತು ಸ್ವರವನ್ನು ಕಂಪಿಸುವಂತೆ ಮಾಡಬಹುದು. ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಮೂಲಕ, ಆ ಸನ್ನಿವೇಶವನ್ನು ನೀವು ನಿಭಾಯಿಸುವಂತೆ ಸಹಾಯಮಾಡಲು ನಿಮ್ಮ ಶರೀರವು ಪ್ರಯತ್ನಿಸುತ್ತದೆ. ಆಗ ನಿಮ್ಮ ಮುಂದಿರುವ ಪಂಥಾಹ್ವಾನವು, ಆ ಉಕ್ಕೇರುತ್ತಿರುವ ಶಕ್ತಿಯನ್ನು ರಚನಾತ್ಮಕ ಆಲೋಚನೆ ಮತ್ತು ಉತ್ಸಾಹಪೂರ್ಣ ಭಾಷಣ ನೀಡಿಕೆಗೆ ಹೇಗೆ ಉಪಯೋಗಿಸಸಾಧ್ಯವಿದೆ ಎಂಬುದನ್ನು ತಿಳಿದಿರುವುದೇ ಆಗಿದೆ.
ಕಳವಳವನ್ನು ಕುಗ್ಗಿಸುವ ವಿಧ. ತುಸು ಕಳವಳದ ಅನಿಸಿಕೆಯು ಸಾಮಾನ್ಯವಾದದ್ದಾಗಿದೆ ಎಂಬುದನ್ನು ನೆನಪಿನಲ್ಲಿಡಿರಿ. ಆದರೆ ಸಮಚಿತ್ತತೆಯನ್ನು ಕಾಪಾಡಿಕೊಳ್ಳಬೇಕಾದರೆ, ನೀವು ಕಳವಳದ ಮಟ್ಟವನ್ನು ಕಡಿಮೆಮಾಡಲು ಶಕ್ತರಾಗಿರಬೇಕು, ಮತ್ತು ನಿಮ್ಮ ಸನ್ನಿವೇಶವನ್ನು ಶಾಂತವೂ ಗಂಭೀರವೂ ಆದ ರೀತಿಯಲ್ಲಿ ನಿಭಾಯಿಸಬೇಕು. ಇದನ್ನು ನೀವು ಹೇಗೆ ಸಾಧಿಸಬಲ್ಲಿರಿ?
ಪೂರ್ತಿಯಾಗಿ ತಯಾರಿಸಿರಿ. ನಿಮ್ಮ ಭಾಷಣದ ತಯಾರಿಗಾಗಿ ಸಾಕಷ್ಟು ಸಮಯವನ್ನು ವ್ಯಯಿಸಿರಿ. ನಿಮ್ಮ ವಿಷಯವಸ್ತು ನಿಮಗೆ ಚೆನ್ನಾಗಿ ಅರ್ಥವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಚರ್ಚಿಸಲಿಕ್ಕಿರುವ ಅಂಶಗಳನ್ನು ನೀವೇ ಆಯ್ಕೆಮಾಡುವಂಥ ಒಂದು ಭಾಷಣವು ನಿಮ್ಮದಾಗಿರುವಲ್ಲಿ, ಆ ವಿಷಯವಸ್ತುವಿನ ಕುರಿತು ನಿಮ್ಮ ಸಭಿಕರಿಗೆ ಈಗಾಗಲೇ ಏನು ತಿಳಿದಿದೆಯೆಂಬುದನ್ನೂ ನೀವೇನನ್ನು ಪೂರೈಸಲು ಬಯಸುತ್ತೀರಿ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಿರಿ. ಇದು, ಅತಿ ಪ್ರಯೋಜನಕರವಾದ ಮಾಹಿತಿಯನ್ನು ಆರಿಸಿಕೊಳ್ಳುವಂತೆ ನಿಮಗೆ ಸಹಾಯಮಾಡುವುದು. ಮೊದಲಲ್ಲಿ ಇದು ನಿಮಗೆ ಕಷ್ಟಕರವಾಗಿ ಕಂಡುಬರುವಲ್ಲಿ, ಒಬ್ಬ ಅನುಭವಸ್ಥ ಭಾಷಣಕಾರನೊಂದಿಗೆ ಈ ಸಮಸ್ಯೆಯನ್ನು ಚರ್ಚಿಸಿರಿ. ಅವನು ನಿಮ್ಮ ಭಾಷಣದ ವಿಷಯಭಾಗ ಮತ್ತು ಸಭಿಕರ ಬಗ್ಗೆ ನೀವು ರಚನಾತ್ಮಕವಾದ ವಿಶ್ಲೇಷಣೆಯನ್ನು ಮಾಡುವಂತೆ ಸಹಾಯಮಾಡಬಲ್ಲನು. ನಿಮ್ಮ ಸಭಿಕರಿಗೆ ಪ್ರಯೋಜನದಾಯಕವಾದ ಮಾಹಿತಿಯು ನಿಮ್ಮಲ್ಲಿದೆ ಮತ್ತು ಅದು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿದೆಯೆಂದು ನಿಮಗೆ ನಿಶ್ಚಯವಾದಾಗ, ಅದನ್ನು ಹಂಚಿಕೊಳ್ಳಲು ನಿಮಗಿರುವ ಬಯಕೆಯು, ನಿಮ್ಮ ಭಾಷಣ ನೀಡಿಕೆಯ ಸಂಬಂಧದಲ್ಲಿ ನಿಮಗಿರಬಹುದಾದ ಕಳವಳವನ್ನು ಮರೆಮಾಡತೊಡಗುವುದು.
ನಿಮ್ಮ ಪೀಠಿಕೆಗೆ ವಿಶೇಷ ಗಮನವನ್ನು ಕೊಡಿರಿ. ನೀವು ಹೇಗೆ ಆರಂಭಿಸಲಿದ್ದೀರಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ನಿಮ್ಮ ಭಾಷಣವು ಒಮ್ಮೆ ಆರಂಭವಾಗಿ ಮುಂದೆ ಸಾಗುವಾಗ, ನಿಮ್ಮ ಹೆದರಿಕೆಯು ಕುಗ್ಗುವುದು ಸಂಭವನೀಯ.
ಇವೇ ಮೂಲಭೂತ ಹೆಜ್ಜೆಗಳು ಕ್ಷೇತ್ರ ಶುಶ್ರೂಷೆಗೆ ತಯಾರಿಸುವಾಗಲೂ ಅನ್ವಯಿಸುತ್ತವೆ. ನೀವು ಚರ್ಚಿಸಲು ಯೋಜಿಸುವ ವಿಷಯವನ್ನು ಮಾತ್ರವಲ್ಲ, ನೀವು ಯಾರಿಗೆ ಸಾಕ್ಷಿ ನೀಡಲಿದ್ದೀರೊ ಅವರು ಯಾವ ರೀತಿಯ ಜನರು ಎಂಬುದನ್ನೂ ಪರಿಗಣಿಸಿರಿ. ನಿಮ್ಮ ಪೀಠಿಕೆಯನ್ನು ಜಾಗರೂಕತೆಯಿಂದ ಯೋಜಿಸಿರಿ. ಪ್ರೌಢ ಪ್ರಚಾರಕರ ಅನುಭವದಿಂದ ಪ್ರಯೋಜನ ಪಡೆಯಿರಿ.
ನೀವು ಒಂದು ಗುಂಪಿನ ಮುಂದೆ ಭಾಷಣ ನೀಡುವಾಗ ಹಸ್ತಪ್ರತಿಯನ್ನು ಉಪಯೋಗಿಸುವುದಾದರೆ, ನೀವು ಹೆಚ್ಚು ಸಮಚಿತ್ತತೆಯನ್ನು ತೋರಿಸಬಹುದೆಂದು ನೀವು ನೆನಸಬಹುದು. ಆದರೆ, ಇದರಿಂದಾಗಿ ನೀವು ಪ್ರತಿ ಬಾರಿ ಭಾಷಣ ಕೊಡುವಾಗ ಹೆಚ್ಚು ಕಳವಳ ಉಂಟಾಗಬಹುದು. ಕೆಲವು ಭಾಷಣಕಾರರು ಸಂಕ್ಷಿಪ್ತವಾದ ಟಿಪ್ಪಣಿಯನ್ನು ಉಪಯೋಗಿಸುವಾಗ ಇತರರು ಸವಿಸ್ತಾರವಾದ ಟಿಪ್ಪಣಿಯನ್ನು ಉಪಯೋಗಿಸುತ್ತಾರೆ ನಿಜ. ಆದರೆ ನಿಮ್ಮ ಯೋಚನಾ ಧಾಟಿಯನ್ನು ಬದಲಾಯಿಸಿ, ನಿಮ್ಮ ಕಳವಳದ ಮಟ್ಟವನ್ನು ಕಡಿಮೆಮಾಡುವಂಥದ್ದು, ಕಾಗದದ ಮೇಲಿರುವ ಪದಗಳಲ್ಲ. ಬದಲಿಗೆ, ನೀವು ನಿಮ್ಮ ಸಭಿಕರಿಗಾಗಿ ತಯಾರಿಸಿರುವ ವಿಷಯವು ಅವರಿಗೆ ನಿಜವಾಗಿಯೂ ಪ್ರಯೋಜನದಾಯಕವಾಗಿದೆ ಎಂದು ನಿಮ್ಮ ಹೃದಯದಲ್ಲಿ ನಿಮಗಿರುವ ನಿಶ್ಚಿತಾಭಿಪ್ರಾಯವೇ ಆಗಿದೆ.
ನಿಮ್ಮ ಭಾಷಣವನ್ನು ಗಟ್ಟಿಯಾಗಿ ನೀಡಿ ಪ್ರ್ಯಾಕ್ಟಿಸ್ ಮಾಡಿರಿ. ಇಂತಹ ಅಭ್ಯಾಸವು ನೀವು ನಿಮ್ಮ ಯೋಚನೆಗಳನ್ನು ಶಬ್ದರೂಪಕ್ಕೆ ಹಾಕಬಲ್ಲಿರಿ ಎಂಬ ಭರವಸೆಯನ್ನು ನಿಮಗೆ ಕೊಡಬಲ್ಲದು. ನೀವು ಪ್ರ್ಯಾಕ್ಟಿಸ್ ಮಾಡುವಾಗ, ನೀವು ಸ್ಮೃತಿ ನಮೂನೆಗಳನ್ನು ಬೆಳೆಸಿಕೊಳ್ಳುತ್ತೀರಿ, ಮತ್ತು ಭಾಷಣವನ್ನು ನೀಡುವಾಗ ಇವುಗಳನ್ನು ನೀವು ಕೂಡಲೇ ಚುರುಕುಗೊಳಿಸಬಲ್ಲಿರಿ. ನೀವು ಪ್ರ್ಯಾಕ್ಟಿಸ್ ಮಾಡುವ ಕಾಲಾವಧಿಯನ್ನು ನೈಜವಾದದ್ದಾಗಿ ಮಾಡಿರಿ. ನಿಮ್ಮ ಸಭಿಕರು ನಿಮ್ಮ ಮುಂದಿರುವಂತೆ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿ. ಭಾಷಣ ಕೊಡುವಾಗ ಮಾಡುವಂತೆಯೇ, ಒಂದು ಮೇಜಿನ ಬಳಿ ಕುಳಿತುಕೊಂಡೊ ನಿಂತುಕೊಂಡೊ ಪ್ರ್ಯಾಕ್ಟಿಸ್ ಮಾಡಿರಿ.
ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸಿರಿ. ಆತನು ಅಂತಹ ಪ್ರಾರ್ಥನೆಗೆ ಉತ್ತರ ಕೊಡುವನೊ? “ನಾವು ದೇವರ ಚಿತ್ತಾನುಸಾರವಾಗಿ ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆಂಬ ಧೈರ್ಯವು ಆತನ ವಿಷಯವಾಗಿ ನಮಗುಂಟು.” (1 ಯೋಹಾ. 5:14) ದೇವರನ್ನು ಸನ್ಮಾನಿಸಿ ಆತನ ವಾಕ್ಯದಿಂದ ಜನರು ಪ್ರಯೋಜನ ಪಡೆದುಕೊಳ್ಳುವಂತೆ ಅವರಿಗೆ ಸಹಾಯಮಾಡುವುದು ನಿಮ್ಮ ಅಪೇಕ್ಷೆಯಾಗಿರುವಲ್ಲಿ, ಆತನು ಖಂಡಿತವಾಗಿಯೂ ನಿಮ್ಮ ಪ್ರಾರ್ಥನೆಗೆ ಉತ್ತರ ಕೊಡುವನು. ಆ ಆಶ್ವಾಸನೆಯು ನೀವು ನಿಮ್ಮ ನೇಮಕವನ್ನು ಪೂರೈಸುವಂತೆ ನಿಮ್ಮನ್ನು ಬಲಪಡಿಸಲು ಹೆಚ್ಚನ್ನು ಮಾಡಬಲ್ಲದು. ಅದಲ್ಲದೆ, ಆತ್ಮದ ಫಲಗಳಾದ ಪ್ರೀತಿ, ಸಂತೋಷ, ಸಮಾಧಾನ, ಸೌಮ್ಯತೆ ಮತ್ತು ಆತ್ಮನಿಯಂತ್ರಣವನ್ನು ನೀವು ಬೆಳೆಸಿಕೊಳ್ಳುವಾಗ, ಸಮಚಿತ್ತತೆಯಿಂದ ಸನ್ನಿವೇಶಗಳನ್ನು ನಿಭಾಯಿಸಲು ಬೇಕಾಗಿರುವ ಮನೋಭಾವವನ್ನು ನೀವು ವಿಕಸಿಸುವಿರಿ.—ಗಲಾ. 5:22, 23, NW.
ಅನುಭವವನ್ನು ಪಡೆದುಕೊಳ್ಳಿರಿ. ಕ್ಷೇತ್ರ ಸೇವೆಯಲ್ಲಿ ನೀವು ಹೆಚ್ಚೆಚ್ಚು ಭಾಗವಹಿಸಿದಂತೆ ನಿಮ್ಮ ಹೆದರಿಕೆಯು ಕಡಿಮೆಯಾಗುತ್ತಾ ಹೋಗುವುದು. ಸಭಾ ಕೂಟಗಳಲ್ಲಿ ನೀವು ಎಷ್ಟು ಹೆಚ್ಚು ಉತ್ತರಗಳನ್ನು ನೀಡುತ್ತೀರೊ, ಇತರರ ಮುಂದೆ ಮಾತಾಡುವುದು ನಿಮಗೆ ಅಷ್ಟೇ ಸುಲಭವಾಗುವುದು. ನೀವು ಸಭೆಯಲ್ಲಿ ಕೊಡುವ ಭಾಷಣಗಳ ಸಂಖ್ಯೆ ಹೆಚ್ಚಾದಂತೆ, ಪ್ರತಿ ಭಾಷಣದ ಮೊದಲು ನಿಮಗಾಗುವ ಕಳವಳವು ಪ್ರಾಯಶಃ ಕಡಿಮೆಯಾಗುವುದು. ನಿಮಗೆ ಭಾಷಣ ಕೊಡಲು ಇನ್ನೂ ಹೆಚ್ಚಿನ ಅವಕಾಶಗಳು ಸಿಗಬೇಕೆಂಬುದು ನಿಮ್ಮ ಇಷ್ಟವೊ? ಹಾಗಾದರೆ, ಶಾಲೆಯಲ್ಲಿ ನೇಮಕಗಳನ್ನು ಪೂರೈಸಲು ಇತರರಿಗೆ ಸಾಧ್ಯವಾಗದಿರುವಾಗ, ಬದಲಿಯಾಗಿ ನೀವೇ ಅವುಗಳನ್ನು ನೀಡಲು ಮುಂದೆ ಬನ್ನಿರಿ.
ಮೇಲೆ ಕೊಡಲ್ಪಟ್ಟಿರುವ ಹೆಜ್ಜೆಗಳನ್ನು ನೀವು ತೆಗೆದುಕೊಂಡ ಬಳಿಕ, ನಿಮ್ಮಲ್ಲಿ ಪ್ರಶಾಂತತೆಯ ಕೊರತೆಯನ್ನು ನಿಶ್ಚಯವಾಗಿಯೂ ಸೂಚಿಸುವ ಯಾವುದಾದರೂ ಲಕ್ಷಣಗಳಿವೆಯೊ ಎಂಬುದನ್ನು ಪರೀಕ್ಷಿಸುವುದು ಪ್ರಯೋಜನಕರವೆಂದು ನೀವು ಕಂಡುಕೊಳ್ಳುವಿರಿ. ಈ ಲಕ್ಷಣಗಳನ್ನು ಗುರುತಿಸಿ, ಅವುಗಳನ್ನು ನಿಭಾಯಿಸುವ ರೀತಿಯನ್ನು ಕಲಿಯುವುದು, ನೀವು ಸಮಚಿತ್ತತೆಯಿಂದ ಮಾತಾಡುವಂತೆ ನಿಮಗೆ ಸಹಾಯಮಾಡುವುದು. ಈ ಲಕ್ಷಣಗಳು ಶಾರೀರಿಕವಾಗಿರಲೂ ಬಹುದು, ಮಾತಿನದ್ದೂ ಆಗಿರಬಹುದು.
ಶಾರೀರಿಕ ಲಕ್ಷಣಗಳು. ನಿಮಗೆ ಸಮಚಿತ್ತತೆ ಇದೆಯೊ ಅಥವಾ ಅದರ ಕೊರತೆ ಇದೆಯೊ ಎಂಬುದು, ನಿಮ್ಮ ದೇಹಭಂಗಿಯಿಂದ ಮತ್ತು ನೀವು ನಿಮ್ಮ ಕೈಗಳನ್ನು ಉಪಯೋಗಿಸುವ ವಿಧದಿಂದ ತೋರಿಸಲ್ಪಡುತ್ತದೆ. ಪ್ರಥಮವಾಗಿ ಕೈಗಳ ಬಗ್ಗೆ ಪರಿಗಣಿಸಿರಿ. ಬೆನ್ನಿನ ಹಿಂದೆ ಕೈಕಟ್ಟುವುದು, ದೇಹದ ಪಕ್ಕಗಳಲ್ಲಿ ಕೈಗಳನ್ನು ಗಡುಸಾಗಿ ನೆಟ್ಟಗಿಡುವುದು ಅಥವಾ ಭಾಷಣಕಾರನ ಸ್ಟ್ಯಾಂಡನ್ನು ಬಿಗಿಯಾಗಿ ಹಿಡಿದುಕೊಳ್ಳುವುದು; ಕೈಗಳನ್ನು ಪದೇ ಪದೇ ಜೇಬಿಗೆ ಹಾಕಿ ತೆಗೆಯುವುದು, ಕೋಟ್‌ನ ಬಟನುಗಳನ್ನು ಹಾಕುವುದು ಮತ್ತು ಬಿಚ್ಚುವುದು, ಗಲ್ಲ, ಮೂಗು, ಕನ್ನಡಕಗಳನ್ನು ಗೊತ್ತುಗುರಿಯಿಲ್ಲದೆ ಮುಟ್ಟುತ್ತಾ ಇರುವುದು; ಒಂದು ವಾಚ್, ಪೆನ್ಸಿಲ್, ಉಂಗುರ ಅಥವಾ ಟಿಪ್ಪಣಿಯೊಂದಿಗೆ ಆಡುತ್ತಾ ಇರುವುದು, ಥಟ್ಟನೆ ಅಥವಾ ಅಪೂರ್ಣವಾಗಿ ಭಾವಾಭಿನಯಗಳನ್ನು ಮಾಡುವುದು—ಇವೆಲ್ಲ ಸಮಚಿತ್ತತೆಯ ಕೊರತೆಯನ್ನು ತೋರಿಸುತ್ತವೆ.
ಸತತವಾಗಿ ಪಾದಗಳನ್ನು ಅತ್ತಿತ್ತ ಚಲಿಸುವುದು, ಶರೀರವನ್ನು ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಓಲಿಸುವುದು, ವಿಪರೀತ ಒರಟಾದ ಭಂಗಿಯಲ್ಲಿ ನಿಲ್ಲುವುದು, ಜೋತುಕೊಂಡು ನಿಲ್ಲುವುದು, ಆಗಾಗ ತುಟಿಗಳನ್ನು ನಾಲಗೆಯಿಂದ ಒದ್ದೆಮಾಡುವುದು, ಪದೇ ಪದೇ ಉಗುಳು ನುಂಗುವುದು ಮತ್ತು ವೇಗದಿಂದ ಹಾಗೂ ಮೇಲುಮೇಲೆ ಉಸಿರಾಡುವ ಮೂಲಕ ಸಹ ಆತ್ಮವಿಶ್ವಾಸದ ಕೊರತೆಯು ತೋರಿಸಲ್ಪಡಬಹುದು.
ಪ್ರಜ್ಞಾಪೂರ್ವಕವಾದ ಪ್ರಯತ್ನದಿಂದ ಹೆದರಿಕೆಯ ಈ ಲಕ್ಷಣಗಳನ್ನು ನಿಯಂತ್ರಿಸಸಾಧ್ಯವಿದೆ. ಈ ಲಕ್ಷಣಗಳನ್ನು ಒಂದೊಂದಾಗಿ ಹೋಗಲಾಡಿಸಲು ಕಾರ್ಯನಡಿಸಿರಿ. ಸಮಸ್ಯೆಯನ್ನು ಗುರುತಿಸಿ, ಅದನ್ನು ತಡೆಯಲು ನೀವು ಏನು ಮಾಡಬೇಕಾಗಿದೆ ಎಂಬುದನ್ನು ಮುಂದಾಗಿಯೇ ಪರಿಗಣಿಸಿರಿ. ನೀವು ಆ ಪ್ರಯತ್ನವನ್ನು ಮಾಡುವಲ್ಲಿ, ನಿಮ್ಮ ದೇಹಭಂಗಿಯಲ್ಲಿ ಸಮಚಿತ್ತತೆಯ ರುಜುವಾತನ್ನು ನೀವು ಕೊಡುವಿರಿ.
ಮಾತಿನಲ್ಲಿನ ಲಕ್ಷಣಗಳು. ಮಾತಿನಲ್ಲಿ ವ್ಯಕ್ತವಾಗುವ ಹೆದರಿಕೆಯ ಲಕ್ಷಣಗಳಲ್ಲಿ, ವಿಪರೀತ ಉಚ್ಚ ಧ್ವನಿ ಅಥವಾ ಕಂಪಿಸುವ ಸ್ವರವು ಸೇರಿರಬಹುದು. ಪ್ರಾಯಶಃ ನೀವು ಆಗಾಗ ಗಂಟಲನ್ನು ಸರಿಪಡಿಸಿಕೊಳ್ಳುತ್ತೀರಿ ಅಥವಾ ತೀರ ವೇಗವಾಗಿ ಮಾತಾಡುತ್ತೀರಿ. ಸ್ವರವನ್ನು ನಿಯಂತ್ರಣಕ್ಕೆ ತರಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುವ ಮೂಲಕ ಈ ಸಮಸ್ಯೆಗಳನ್ನು ಮತ್ತು ವಿಲಕ್ಷಣಗಳನ್ನು ಜಯಿಸಸಾಧ್ಯವಿದೆ.
ನಿಮಗೆ ಹೆದರಿಕೆಯ ಅನಿಸಿಕೆಯಾಗುವಲ್ಲಿ, ನೀವು ವೇದಿಕೆಗೆ ಹೋಗುವ ಮುನ್ನ ಹಲವು ಬಾರಿ ಆಳವಾಗಿ ಉಸಿರಾಡಲು ಸ್ವಲ್ಪ ಹೊತ್ತು ನಿಲ್ಲಿರಿ. ನಿಮ್ಮ ಇಡೀ ದೇಹವನ್ನು ಹಾಯಾಗಿರಿಸಲು ಪ್ರಯತ್ನಿಸಿರಿ. ನಿಮ್ಮ ಹೆದರಿಕೆಯ ಸ್ಥಿತಿಯ ಕುರಿತು ಯೋಚಿಸುವ ಬದಲು, ನೀವು ತಯಾರಿಸಿದ ವಿಷಯಗಳನ್ನು ನೀವು ಏಕೆ ನಿಮ್ಮ ಸಭಿಕರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರಿ ಎಂಬುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿರಿ. ಮಾತನಾಡಲು ತೊಡಗುವ ಮೊದಲು, ನಿಮ್ಮ ಸಭಿಕರನ್ನು ಒಂದು ಕ್ಷಣ ನೋಡಿ, ಅವರೊಳಗೆ ಮಿತ್ರಭಾವದ ಒಂದು ಮುಖವನ್ನು ಹುಡುಕಿ, ನಸುನಗೆ ಬೀರಿರಿ. ಪೀಠಿಕೆಯನ್ನು ನಿಧಾನವಾಗಿ ಹೇಳಿರಿ. ಆ ಬಳಿಕ ನಿಮ್ಮ ಭಾಷಣದಲ್ಲಿ ತಲ್ಲೀನರಾಗಿರಿ.
ನಿರೀಕ್ಷಿಸಬಹುದಾದ ಸಂಗತಿ. ಹೆದರಿಕೆಯ ಸಕಲ ಲಕ್ಷಣಗಳು ಮಾಯವಾಗಿ ಹೋಗುವವೆಂದು ನೆನಸಬೇಡಿ. ವೇದಿಕೆಯ ಮೇಲೆ ಅನೇಕ ವರ್ಷಗಳ ಅನುಭವವಿರುವ ಅನೇಕ ಭಾಷಣಕಾರರಿಗೂ, ಸಭಿಕರ ಮುಂದೆ ಹೋಗುವ ಮೊದಲು ಹೆದರಿಕೆಯ ಅನಿಸಿಕೆಯಾಗುತ್ತದೆ. ಆದರೆ ಅವರು ತಮ್ಮ ಹೆದರಿಕೆಯ ಸ್ಥಿತಿಯನ್ನು ನಿಯಂತ್ರಿಸಿಕೊಳ್ಳಲು ಕಲಿತಿದ್ದಾರೆ. ಅಂತಹ ಒಬ್ಬ ಭಾಷಣಕಾರರು ಹೇಳಿದ್ದು: “ನನ್ನ ಹೊಟ್ಟೆಯಲ್ಲಿ ಇನ್ನೂ ಪತಂಗಗಳು (ನಡುಕಗಳು) ಇವೆಯಾದರೂ, ಅವು ಈಗ ಕ್ರಮಬದ್ಧವಾಗಿ ಹಾರಾಡುತ್ತವೆ (ಅವನ್ನು ನಾನು ನಿಯಂತ್ರಿಸಬಲ್ಲೆ).”
ಹೆದರಿಕೆಯ ಬಾಹ್ಯ ತೋರಿಕೆಗಳನ್ನು ನಿವಾರಿಸಲು ನೀವು ಮನಃಪೂರ್ವಕವಾದ ಪ್ರಯತ್ನವನ್ನು ಮಾಡುವುದಾದರೆ, ನೀವೊಬ್ಬ ಸಮಚಿತ್ತದ ಭಾಷಣಕಾರರೆಂದು ಸಭಿಕರು ನಿಮ್ಮನ್ನು ಪರಿಗಣಿಸುವರು. ನಿಮಗೆ ಈಗಲೂ ಹೆದರಿಕೆಯ ಅನಿಸಿಕೆಗಳಿರಬಹುದು, ಆದರೆ ಅದು ಅವರಿಗೆ ಎಂದಿಗೂ ತಿಳಿಯದು.
ಅಡ್ರೆನಲಿನ್ ಹಾರ್ಮೋನಿನ ಉಕ್ಕಿಬರುವಿಕೆಯು ಹೆದರಿಕೆಯ ಲಕ್ಷಣಗಳನ್ನು ಉಂಟುಮಾಡುತ್ತದಾದರೂ, ಅದು ವರ್ಧಿಸಿದ ಶಕ್ತಿಯನ್ನೂ ತರುತ್ತದೆಂಬುದು ನೆನಪಿನಲ್ಲಿರಲಿ. ಭಾವಪೂರ್ಣರಾಗಿ ಮಾತನಾಡಲು ಇದನ್ನು ಉಪಯೋಗಿಸಿರಿ.
ಈ ಎಲ್ಲ ವಿಷಯಗಳನ್ನು ಅಭ್ಯಾಸ ಮಾಡಲಿಕ್ಕಾಗಿ ನೀವು ಭಾಷಣಕ್ಕಾಗಿ ವೇದಿಕೆಯ ಮೇಲೆ ಹೋಗುವ ತನಕ ಕಾಯಬೇಕೆಂದಿರುವುದಿಲ್ಲ. ನಿಮ್ಮ ದಿನನಿತ್ಯದ ಜೀವಿತದಲ್ಲಿ ಸಮಚಿತ್ತರೂ ನಿಯಂತ್ರಿತರೂ ಆಗಿದ್ದು, ಸೂಕ್ತವಾದ ಭಾವನೆಯಿಂದ ಮಾತಾಡಲು ಕಲಿಯಿರಿ. ನೀವು ಹೀಗೆ ಮಾಡುವುದು, ಎಲ್ಲಿ ಇದು ಅತ್ಯಗತ್ಯವೊ ಅಂತಹ ಸಂದರ್ಭಗಳಲ್ಲಿ, ಅಂದರೆ ವೇದಿಕೆಯ ಮೇಲೆ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ನಿಮಗೆ ಆತ್ಮವಿಶ್ವಾಸವನ್ನು ಒದಗಿಸಲು ಬಹಳಷ್ಟು ನೆರವನ್ನು ನೀಡುವುದು.