ಅಧ್ಯಾಯ 38
ಆಸಕ್ತಿಯನ್ನು ಕೆರಳಿಸುವಂಥ ಪೀಠಿಕೆ
ಯಾವುದೇ ಭಾಷಣದ ಒಂದು ಮಹತ್ವಪೂರ್ಣ ಭಾಗವು ಅದರ ಪೀಠಿಕೆಯಾಗಿದೆ. ನೀವು ನಿಜವಾಗಿಯೂ ನಿಮ್ಮ ಸಭಿಕರಲ್ಲಿ ಆಸಕ್ತಿಯನ್ನು ಕೆರಳಿಸುವಲ್ಲಿ, ಮುಂದೆ ಬರಲಿರುವ ವಿಷಯಕ್ಕೆ ತೀವ್ರಾಭಿಲಾಷೆಯಿಂದ ಕಿವಿಗೊಡಲು ಅವರಿಗೆ ಇನ್ನೂ ಹೆಚ್ಚು ಮನಸ್ಸಾಗುವುದು. ಕ್ಷೇತ್ರ ಶುಶ್ರೂಷೆಯಲ್ಲಿ ನಿಮ್ಮ ಪೀಠಿಕೆಯು ಆಸಕ್ತಿಯನ್ನು ಕೆರಳಿಸಲು ತಪ್ಪುವಲ್ಲಿ, ನಿಮ್ಮ ನಿರೂಪಣೆಯನ್ನು ಮುಂದುವರಿಸಲು ನೀವು ಶಕ್ತರಾಗಲಿಕ್ಕಿಲ್ಲ. ನೀವು ಒಂದು ರಾಜ್ಯ ಸಭಾಗೃಹದಲ್ಲಿ ಭಾಷಣವನ್ನು ಕೊಡುವಾಗ, ನೀವು ಉಪಸ್ಥಿತರಿರುವ ಜನರ ಆಸಕ್ತಿಯನ್ನು ಸೆರೆಹಿಡಿಯದಿದ್ದಲ್ಲಿ, ಸಭಿಕರು ಎದ್ದು ಹೊರಗೆ ಹೋಗದಿದ್ದರೂ, ಅವರಲ್ಲಿ ಒಬ್ಬೊಬ್ಬರು ಬೇರಾವುದೊ ಸಂಗತಿಗಳ ಕುರಿತು ಯೋಚಿಸಲಾರಂಭಿಸಬಹುದು.
ನಿಮ್ಮ ಪೀಠಿಕೆಯನ್ನು ತಯಾರಿಸುತ್ತಿರುವಾಗ, ಈ ಕೆಳಗಣ ಉದ್ದೇಶಗಳು ನಿಮ್ಮ ಮನಸ್ಸಿನಲ್ಲಿರಲಿ: (1) ನಿಮ್ಮ ಸಭಿಕರ ಗಮನವನ್ನು ಆಕರ್ಷಿಸುವುದು, (2) ನಿಮ್ಮ ಭಾಷಣದ ವಿಷಯವಸ್ತುವನ್ನು ಸ್ಪಷ್ಟವಾಗಿ ಪರಿಚಯಿಸುವುದು, ಮತ್ತು (3) ನಿಮ್ಮ ಭಾಷಣದ ವಿಷಯವಸ್ತು ಸಭಿಕರಿಗೆ ಏಕೆ ಪ್ರಾಮುಖ್ಯವೆಂಬುದನ್ನು ತೋರಿಸುವುದು. ಕೆಲವು ಸಂದರ್ಭಗಳಲ್ಲಿ, ಈ ಮೂರೂ ಉದ್ದೇಶಗಳನ್ನು ಹೆಚ್ಚುಕಡಿಮೆ ಏಕಕಾಲಿಕವಾಗಿ ಸಾಧಿಸಬಹುದು. ಆದರೆ ಕೆಲವು ಸಲ, ಅವುಗಳನ್ನು ಪ್ರತ್ಯೇಕವಾಗಿ ಚರ್ಚಿಸಬಹುದು ಮಾತ್ರವಲ್ಲ, ಅವುಗಳನ್ನು ಚರ್ಚಿಸುವ ಕ್ರಮವನ್ನೂ ಬದಲಾಯಿಸಬಹುದು.
ನಿಮ್ಮ ಸಭಿಕರ ಗಮನವನ್ನು ಸೆರೆಹಿಡಿಯುವ ವಿಧ. ಭಾಷಣವನ್ನು ಕೇಳಲು ಜನರು ನೆರೆದು ಬಂದಿದ್ದಾರೆಂಬ ವಾಸ್ತವಾಂಶವು, ಅವರು ಭಾಷಣಕ್ಕೆ ತಮ್ಮ ಅವಿಭಾಜಿತ ಗಮನವನ್ನು ಕೊಡಲು ಸಿದ್ಧರಿದ್ದಾರೆ ಎಂಬ ಅರ್ಥವನ್ನು ಕೊಡುವುದಿಲ್ಲ. ಏಕಿಲ್ಲ? ಏಕೆಂದರೆ ಅವರ ಜೀವನಗಳು ಅವರ ಗಮನವನ್ನು ತಗಾದೆಮಾಡುವಂಥ ಅನೇಕ ವಿಷಯಗಳಿಂದ ತುಂಬಿರುತ್ತವೆ. ಅವರು ಮನೆಯಲ್ಲಿನ ಒಂದು ಸಮಸ್ಯೆಯಿಂದ ಅಥವಾ ಜೀವನದ ಇನ್ನಾವುದೊ ಚಿಂತೆಯಿಂದ ಕಳವಳಗೊಂಡಿರಬಹುದು. ಆದಕಾರಣ, ಭಾಷಣಕಾರರಾಗಿರುವ ನಿಮ್ಮ ಮುಂದಿರುವ ಪಂಥಾಹ್ವಾನವು, ಸಭಿಕರ ಗಮನವನ್ನು ಸೆರೆಹಿಡಿದು, ಅದನ್ನು ಭಾಷಣದಾದ್ಯಂತ ಹಿಡಿದಿಟ್ಟುಕೊಳ್ಳುವುದೇ ಆಗಿದೆ. ಅದನ್ನು ನೀವು ಒಂದಕ್ಕಿಂತ ಹೆಚ್ಚು ವಿಧಗಳಲ್ಲಿ ಮಾಡಬಲ್ಲಿರಿ.
ಇದುವರೆಗೆ ಕೊಡಲ್ಪಟ್ಟಿರುವ ಅತಿ ಪ್ರಸಿದ್ಧ ಭಾಷಣಗಳಲ್ಲಿ ಒಂದು, ಪರ್ವತ ಪ್ರಸಂಗವಾಗಿತ್ತು. ಅದು ಹೇಗೆ ಆರಂಭಿಸಲ್ಪಟ್ಟಿತು? ಲೂಕನ ವೃತ್ತಾಂತಕ್ಕನುಸಾರವಾಗಿ, ಯೇಸು ಹೇಳಿದ್ದು: ‘ಬಡವರಾದ ನೀವು ಧನ್ಯರು; ಹಸಿದಿರುವವರಾದ ನೀವು ಧನ್ಯರು; ಈಗ ಅಳುವವರಾದ ನೀವು ಧನ್ಯರು; ಜನರು ನಿಮ್ಮನ್ನು ಹಗೆಮಾಡಿದರೆ ನೀವು ಧನ್ಯರು.’ (ಲೂಕ 6:20-22) ಈ ಮಾತುಗಳು ಆಸಕ್ತಿಯನ್ನು ಕೆರಳಿಸಿದವೇಕೆ? ಏಕೆಂದರೆ ಕೆಲವೇ ಮಾತುಗಳಲ್ಲಿ, ತನ್ನ ಕೇಳುಗರು ಎದುರಿಸಬೇಕಾಗಿದ್ದ ಗಂಭೀರವಾದ ಸಮಸ್ಯೆಗಳಲ್ಲಿ ಕೆಲವನ್ನು ಯೇಸು ಗುರುತಿಸಿದನು. ಬಳಿಕ, ಆ ಸಮಸ್ಯೆಗಳನ್ನು ಕೂಲಂಕಷವಾಗಿ ಚರ್ಚಿಸುವ ಬದಲು, ಇಂತಹ ಸಮಸ್ಯೆಗಳಿದ್ದರೂ ಜನರು ಧನ್ಯರಾಗಿರಸಾಧ್ಯವಿದೆ ಎಂದು ಅವನು ತೋರಿಸಿದನು. ಮತ್ತು ಆ ಜನರು ಇನ್ನೂ ಹೆಚ್ಚಿನ ವಿಷಯಗಳನ್ನು ಕೇಳಿಸಿಕೊಳ್ಳಲು ಅಪೇಕ್ಷಿಸುವಂಥ ರೀತಿಯಲ್ಲಿ ಅವನು ಇದನ್ನು ಹೇಳಿದನು.
ಆಸಕ್ತಿಯನ್ನು ಕೆರಳಿಸಲು ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಬಹುದಾದರೂ, ಆ ಪ್ರಶ್ನೆಗಳು ಸೂಕ್ತವಾದವುಗಳಾಗಿರಬೇಕು. ಸಭಿಕರು ಈ ಹಿಂದೆ ಕೇಳಿಸಿಕೊಂಡಿರುವ ವಿಷಯಗಳ ಕುರಿತಾಗಿಯೇ ನೀವು ಮಾತಾಡಲಿದ್ದೀರಿ ಎಂಬುದನ್ನು ನಿಮ್ಮ ಪ್ರಶ್ನೆಗಳು ಸೂಚಿಸುವುದಾದರೆ, ಆಸಕ್ತಿಯು ಬೇಗನೆ ಕುಂದಿಹೋದೀತು. ನಿಮ್ಮ ಸಭಿಕರನ್ನು ಪೇಚಾಟಕ್ಕೊಳಪಡಿಸುವ ಅಥವಾ ಅವರನ್ನು ಸಂದಿಗ್ಧ ಸ್ಥಿತಿಗೆ ಒಳಪಡಿಸುವಂಥ ರೀತಿಯ ಪ್ರಶ್ನೆಗಳನ್ನು ಕೇಳಬೇಡಿರಿ. ಅದಕ್ಕೆ ಬದಲಾಗಿ, ಅವರು ಆಲೋಚಿಸುವಂತೆ ಹುರಿದುಂಬಿಸುವಂಥ ರೀತಿಯಲ್ಲಿ ನಿಮ್ಮ ಪ್ರಶ್ನೆಗಳನ್ನು ರೂಪಿಸಲು ಪ್ರಯತ್ನಿಸಿರಿ. ಪ್ರತಿಯೊಂದು ಪ್ರಶ್ನೆಯನ್ನು ಕೇಳಿದ ಬಳಿಕ ನಿಮ್ಮ ಕೇಳುಗರು ಅದಕ್ಕೆ ಮಾನಸಿಕವಾಗಿ ಉತ್ತರವನ್ನು ರೂಪಿಸಿಕೊಳ್ಳಲಿಕ್ಕಾಗಿ ತುಸು ಸಮಯಾವಕಾಶವನ್ನು ಕೊಡಿರಿ. ನಿಮ್ಮೊಂದಿಗೆ ಮಾನಸಿಕ ಸಂಭಾಷಣೆಯಲ್ಲಿ ತಾವು ತೊಡಗಿದ್ದೇವೆಂದು ಅವರಿಗೆ ಅನಿಸುವಾಗ, ಅವರು ನಿಮಗೆ ಗಮನ ಕೊಡುತ್ತಿದ್ದಾರೆಂದು ಅರ್ಥ.
ನಿಜ ಜೀವನದ ಅನುಭವವನ್ನು ಉಪಯೋಗಿಸುವುದು, ಗಮನವನ್ನು ಸೆರೆಹಿಡಿಯಲಿಕ್ಕಾಗಿರುವ ಇನ್ನೊಂದು ಉತ್ತಮ ಮಾರ್ಗವಾಗಿದೆ. ಆದರೆ ಆ ಅನುಭವವು ಸಭಿಕರಲ್ಲಿರುವ ಯಾರಿಗಾದರೂ ಪೇಚಾಟವನ್ನುಂಟುಮಾಡುವುದಾದರೆ, ನಿಮ್ಮ ಕಥನವು ಅದರ ಉದ್ದೇಶವನ್ನು ಸಾಧಿಸಲಿಕ್ಕಿಲ್ಲ. ಅಲ್ಲದೆ, ಅವರಿಗೆ ನಿಮ್ಮ ಕಥೆಯು ಜ್ಞಾಪಕಕ್ಕೆ ಬಂದರೂ ಅದರ ಪಾಠವು ಮರೆತುಹೋಗುವಲ್ಲಿ, ನಿಮ್ಮ ಉದ್ದೇಶವು ಪೂರೈಸಲ್ಪಟ್ಟಿಲ್ಲ. ಪೀಠಿಕೆಯಲ್ಲಿ ಒಂದು ಅನುಭವವು ಉಪಯೋಗಿಸಲ್ಪಡುವಲ್ಲಿ, ಅದು ನಿಮ್ಮ ಭಾಷಣದ ಪ್ರಧಾನ ಭಾಗದ ಯಾವುದಾದರೂ ಪ್ರಾಮುಖ್ಯವಾದ ಅಂಶಕ್ಕೆ ತಳಪಾಯವನ್ನು ಹಾಕುವಂತಿರಬೇಕು. ಆ ಕಥನವು ಸಜೀವವಾಗಿರುವಂತೆ ಮಾಡಲಿಕ್ಕಾಗಿ ಕೆಲವು ವಿವರಗಳ ಅಗತ್ಯವಿರಬಹುದಾದರೂ, ಅನುಭವಗಳನ್ನು ಅನಾವಶ್ಯಕವಾಗಿ ದೀರ್ಘಗೊಳಿಸದಂತೆ ಜಾಗ್ರತೆ ವಹಿಸಿರಿ.
ಕೆಲವು ಭಾಷಣಕಾರರು, ಇತ್ತೀಚೆಗೆ ಸುದ್ದಿಯಲ್ಲಿರುವ ಒಂದು ವಾರ್ತಾ ವಿಷಯ, ಸ್ಥಳಿಕ ವಾರ್ತಾಪತ್ರದಿಂದ ತೆಗೆಯಲ್ಪಟ್ಟ ಒಂದು ಉಲ್ಲೇಖ ಅಥವಾ ಒಂದು ಅಧಿಕೃತ ಮೂಲದಿಂದ ಬಂದಿರುವ ಹೇಳಿಕೆಯ ಮೂಲಕ ಭಾಷಣವನ್ನು ಆರಂಭಿಸುತ್ತಾರೆ. ಇವು ಭಾಷಣದ ವಿಷಯವಸ್ತುವಿಗೆ ನಿಜವಾಗಿಯೂ ಸೂಕ್ತವಾಗಿರುವಲ್ಲಿ ಮತ್ತು ಸಭಿಕರಿಗೆ ತಕ್ಕವುಗಳಾಗಿರುವಲ್ಲಿ, ಅವು ಸಹ ಪರಿಣಾಮಕಾರಿಯಾಗಿರಬಲ್ಲವು.
ನಿಮ್ಮ ಭಾಷಣವು ಭಾಷಣಮಾಲೆಯ ಒಂದು ಭಾಗವಾಗಿರುವಲ್ಲಿ ಅಥವಾ ಸೇವಾ ಕೂಟದ ಭಾಗವಾಗಿರುವಲ್ಲಿ, ನಿಮ್ಮ ಪೀಠಿಕೆಯು ಸಾಮಾನ್ಯವಾಗಿ ಸಂಕ್ಷಿಪ್ತವೂ ವಿಷಯಕ್ಕೆ ನೇರವಾಗಿ ಸಂಬಂಧಿಸುವಂಥದ್ದೂ ಆಗಿರುವುದು ಉತ್ತಮ. ನೀವು ಒಂದು ಸಾರ್ವಜನಿಕ ಭಾಷಣವನ್ನು ಕೊಡುವುದಾದರೆ, ಪೀಠಿಕೆಯ ಭಾಗಕ್ಕೆ ಕೊಡಲ್ಪಟ್ಟಿರುವ ಸಮಯವನ್ನು ಮೀರಿಹೋಗಬೇಡಿರಿ. ಏಕೆಂದರೆ ನಿಮ್ಮ ಸಭಿಕರಿಗೆ ಅತಿ ಪ್ರಯೋಜನಕರವಾದ ಮಾಹಿತಿಯನ್ನು ನೀಡುವುದು ಭಾಷಣದ ಪ್ರಧಾನ ಭಾಗವೇ ಆಗಿದೆ, ಪೀಠಿಕೆಯಲ್ಲ.
ಕೆಲವು ಸಂದರ್ಭಗಳಲ್ಲಿ, ಸಂದೇಹವಾದಿಗಳಾದ ಇಲ್ಲವೆ ದ್ವೇಷವನ್ನು ಸಹ ತೋರಿಸುವ ಸಭಿಕರ ಮುಂದೆ ನಿಮಗೆ ಮಾತಾಡಬೇಕಾದೀತು. ಅವರ ಗಮನವನ್ನು ನೀವು ಹೇಗೆ ಸೆರೆಹಿಡಿಯಬಹುದು? ‘ಪವಿತ್ರಾತ್ಮಭರಿತನೂ ಜ್ಞಾನಸಂಪನ್ನನೂ’ ಆಗಿದ್ದವನೆಂದು ವರ್ಣಿಸಲಾಗಿದ್ದ ಸ್ತೆಫನನೆಂಬ ಒಬ್ಬ ಆದಿ ಕ್ರೈಸ್ತನನ್ನು, ಯೆಹೂದಿ ಹಿರೀಸಭೆಯ ಮುಂದೆ ಬಲಾತ್ಕಾರದಿಂದ ಕರೆದೊಯ್ಯಲಾಗಿತ್ತು. ಅಲ್ಲಿ ಅವನು ವಾಕ್ಚಾತುರ್ಯದಿಂದ ಕ್ರೈಸ್ತತ್ವದ ಪರವಾಗಿ ಸಮರ್ಥನೆಯನ್ನು ಮಾಡಿದನು. ಅವನು ಹೇಗೆ ಪ್ರಾರಂಭಿಸಿದನು? ಗೌರವಭಾವದಿಂದ ಮತ್ತು ಪರಸ್ಪರ ಸಮ್ಮತವಾದ ವಿಷಯವನ್ನು ಸೂಚಿಸುವ ಮೂಲಕವೇ. ಅವನಂದದ್ದು: ‘ಸಹೋದರರೇ, ತಂದೆಗಳೇ, ಕೇಳಿರಿ. ನಮ್ಮ ಮೂಲಪುರುಷನಾದ ಅಬ್ರಹಾಮನಿಗೆ ಪ್ರಭಾವಸ್ವರೂಪನಾದ ದೇವರು ಕಾಣಿಸಿಕೊಂಡನು.’ (ಅ. ಕೃ. 6:3; 7:1, 2) ಅಪೊಸ್ತಲ ಪೌಲನು ಅಥೇನೆಯ ಅರಿಯೊಪಾಗದಲ್ಲಿ ತನ್ನ ಪೀಠಿಕೆಯನ್ನು ತೀರ ಭಿನ್ನವಾದ ಸಭಿಕರಿಗೆ ಹೊಂದಿಸಿಕೊಳ್ಳುತ್ತಾ ಹೇಳಿದ್ದು: “ಅಥೇನೆಯ ಜನರೇ, ನೀವು ಎಲ್ಲಾದರಲ್ಲೂ ಅತಿ ಭಕ್ತಿವಂತರೆಂದು ನನಗೆ ತೋರುತ್ತದೆ.” (ಅ. ಕೃ. 17:22) ಇಂತಹ ಪರಿಣಾಮಕಾರಿ ಪೀಠಿಕೆಗಳ ಫಲವಾಗಿ, ಎರಡು ಸನ್ನಿವೇಶಗಳ ಸಭಿಕರೂ ಇನ್ನೂ ಹೆಚ್ಚನ್ನು ಕೇಳಿಸಿಕೊಳ್ಳಲು ಇಷ್ಟಪಟ್ಟರು.
ನೀವು ಕ್ಷೇತ್ರ ಸೇವೆಯಲ್ಲಿರುವಾಗಲೂ ಜನರ ಗಮನವನ್ನು ಸೆಳೆಯುವ ಅಗತ್ಯವಿದೆ. ಮುಂದಾಗಿಯೇ ಏರ್ಪಡಿಸಿಲ್ಲದ ಭೇಟಿ ನಿಮ್ಮದಾಗಿರುವಲ್ಲಿ, ಮನೆಯವನು ಬೇರೆ ವಿಷಯಗಳಲ್ಲಿ ಮಗ್ನನಾಗಿರಬಹುದು. ಲೋಕದ ಕೆಲವು ಭಾಗಗಳಲ್ಲಿ, ಆಮಂತ್ರಿಸಲ್ಪಟ್ಟಿರದ ಭೇಟಿಕಾರರು ತಮ್ಮ ಭೇಟಿಯ ಕಾರಣವನ್ನು ಬೇಗನೆ ಹೇಳುವಂತೆ ನಿರೀಕ್ಷಿಸಲಾಗುತ್ತದೆ. ಬೇರೆ ಕಡೆಗಳಲ್ಲಿ, ನಿಮ್ಮ ಭೇಟಿಯ ಕಾರಣವನ್ನು ತಿಳಿಸುವುದಕ್ಕೆ ಮೊದಲು ಕೆಲವೊಂದು ಔಪಚಾರಿಕ ಕ್ರಮಗಳನ್ನು ಪಾಲಿಸಬೇಕಾಗಿರುತ್ತದೆ.—ಲೂಕ 10:5.
ಆದರೆ ಮೇಲಿನ ಎರಡೂ ಸನ್ನಿವೇಶಗಳಲ್ಲಿ, ನಿಜವಾದ ಸ್ನೇಹಭಾವವು ಸಂಭಾಷಣೆಯನ್ನು ನಡೆಸಲು ಸಹಾಯಮಾಡುವ ವಾತಾವರಣವನ್ನು ಸೃಷ್ಟಿಸಲು ಸಹಾಯಮಾಡಬಲ್ಲದು. ಅನೇಕವೇಳೆ, ಆ ವ್ಯಕ್ತಿಯ ಮನಸ್ಸಿನಲ್ಲಿ ಏನಿದೆಯೊ ಅದಕ್ಕೆ ನೇರವಾಗಿ ಸಂಬಂಧಿಸುವಂಥ ಒಂದು ವಿಷಯದೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸುವುದು ಪ್ರಯೋಜನಕರವಾಗಿದೆ. ಹಾಗಾದರೆ, ಯಾವ ವಿಷಯವನ್ನು ಉಪಯೋಗಿಸುವುದು ಎಂಬುದನ್ನು ನೀವು ಹೇಗೆ ನಿರ್ಧರಿಸಸಾಧ್ಯವಿದೆ? ನೀವು ಆ ವ್ಯಕ್ತಿಯನ್ನು ಸಮೀಪಿಸಿದಾಗ, ಅವನು/ಳು ಯಾವುದಾದರೊಂದು ಚಟುವಟಿಕೆಯಲ್ಲಿ ಮಗ್ನರಾಗಿದ್ದರೋ? ವ್ಯವಸಾಯ, ಮನೆಯ ಸುತ್ತಲಿನ ಕೆಲಸ, ಕಾರು ರಿಪೇರಿ, ಅಡಿಗೆ ಕೆಲಸ, ಬಟ್ಟೆ ಒಗೆಯುವುದು, ಅಥವಾ ಮಕ್ಕಳನ್ನು ನೋಡಿಕೊಳ್ಳುವಂಥ ಕೆಲಸವನ್ನು ಅವನು/ಳು ಮಾಡುತ್ತಿದ್ದರೊ? ಅವರು ಏನನ್ನಾದರೂ ಅಂದರೆ ವಾರ್ತಾಪತ್ರಿಕೆಯನ್ನೊ ರಸ್ತೆಯಲ್ಲಿ ನಡೆಯುತ್ತಿರುವ ಯಾವುದಾದರೊಂದು ಚಟುವಟಿಕೆಯನ್ನೊ ನೋಡುತ್ತಿದ್ದರೊ? ಅವರ ಸುತ್ತಮುತ್ತಲೂ ಇರುವ ಪರಿಸರವು, ಮೀನು ಹಿಡಿಯುವುದು, ಕ್ರೀಡೆ, ಸಂಗೀತ, ಸಂಚಾರ, ಕಂಪ್ಯೂಟರ್ ಸಂಬಂಧವಾದ ಅಥವಾ ಬೇರಾವುದೊ ವಿಷಯದಲ್ಲಿ ಇರುವ ವಿಶೇಷ ಆಸಕ್ತಿಯನ್ನು ಪ್ರತಿಬಿಂಬಿಸುವಂಥದ್ದಾಗಿದೆಯೊ? ತಾವು ಇತ್ತೀಚೆಗೆ ರೇಡಿಯೊದಲ್ಲಿ ಕೇಳಿಸಿಕೊಂಡಿರುವ ಅಥವಾ ಟೆಲಿವಿಷನ್‌ನಲ್ಲಿ ನೋಡಿರುವ ವಿಷಯದ ಕುರಿತು ಜನರು ಅನೇಕವೇಳೆ ಚಿಂತಿತರಾಗಿರುತ್ತಾರೆ. ಇಂತಹ ಯಾವುದೇ ವಿಷಯದ ಕುರಿತಾದ ಒಂದು ಪ್ರಶ್ನೆ ಅಥವಾ ಸಂಕ್ಷಿಪ್ತ ಹೇಳಿಕೆಯು ಒಂದು ಸ್ನೇಹಭರಿತ ಸಂಭಾಷಣೆಗೆ ನಡೆಸಬಹುದು.
ಯೇಸು ಸಮಾರ್ಯದ ಸ್ತ್ರೀಯೊಂದಿಗೆ ಸುಖರ್ ಎಂಬ ಊರಿನ ಬಾವಿಯ ಬಳಿ ಮಾತಾಡಿದ ಸಂದರ್ಭವು, ಸಾಕ್ಷಿ ನೀಡುವ ದೃಷ್ಟಿಯಿಂದ ಒಂದು ಸಂಭಾಷಣೆಯನ್ನು ಹೇಗೆ ಆರಂಭಿಸುವುದು ಎಂಬುದಕ್ಕೆ ಗಮನಾರ್ಹವಾದ ಮಾದರಿಯಾಗಿದೆ.—ಯೋಹಾ. 4:5-26.
ವಿಶೇಷವಾಗಿ ನಿಮ್ಮ ಸಭೆಯು ಅದರ ಟೆರಿಟೊರಿಯನ್ನು ಪದೇ ಪದೇ ಆವರಿಸುತ್ತಿರುವಲ್ಲಿ, ನಿಮ್ಮ ಪೀಠಿಕೆಯನ್ನು ನೀವು ಜಾಗರೂಕತೆಯಿಂದ ತಯಾರಿಸುವ ಅಗತ್ಯವಿದೆ. ಇಲ್ಲದಿದ್ದರೆ, ನೀವು ಸಾಕ್ಷಿಯನ್ನು ನೀಡಲು ಶಕ್ತರಾಗಲಿಕ್ಕಿಲ್ಲ.
ನಿಮ್ಮ ವಿಷಯವಸ್ತುವನ್ನು ಸ್ಪಷ್ಟವಾಗಿ ತಿಳಿಸಿರಿ. ಕ್ರೈಸ್ತ ಸಭೆಯಲ್ಲಿ ಸಾಮಾನ್ಯವಾಗಿ ಒಬ್ಬ ಅಧ್ಯಕ್ಷನು ಅಥವಾ ಕಾರ್ಯಕ್ರಮದಲ್ಲಿ ನಿಮಗಿಂತ ಮುಂಚೆ ಇರುವ ಒಬ್ಬ ಸಹೋದರನು, ನಿಮ್ಮ ಭಾಷಣದ ಶಿರೋನಾಮವನ್ನು ತಿಳಿಸಿ, ನಿಮ್ಮನ್ನು ಪರಿಚಯಿಸುತ್ತಾನೆ. ಆದರೂ, ನಿಮ್ಮ ಪೀಠಿಕೆಯ ಹೇಳಿಕೆಗಳಲ್ಲಿ ನಿಮ್ಮ ಭಾಷಣದ ವಿಷಯವಸ್ತುವನ್ನು ಸಭಿಕರಿಗೆ ಜ್ಞಾಪಕಹುಟ್ಟಿಸುವುದು ನಿಮಗೆ ಪ್ರಯೋಜನಕರವಾಗಿರಬಲ್ಲದು. ಇದನ್ನು ನೀವು, ನಿಮ್ಮ ಮುಖ್ಯ ವಿಷಯವನ್ನು ಇದ್ದ ಹಾಗೆಯೇ ಹೇಳುವ ಮೂಲಕ ಮಾಡಸಾಧ್ಯವಿದೆಯಾದರೂ, ಹಾಗೆಯೇ ಮಾಡಬೇಕೆಂದೇನಿಲ್ಲ. ಹೇಗಿದ್ದರೂ, ಭಾಷಣವು ಮುಂದುವರಿದಂತೆ ಮುಖ್ಯ ವಿಷಯವು ಕ್ರಮೇಣ ತಿಳಿದುಬರಬೇಕು. ಹೇಗೂ, ಯಾವ ವಿಧದಲ್ಲಾದರೂ ಪೀಠಿಕೆಯಲ್ಲಿ ನೀವು ನಿಮ್ಮ ಭಾಷಣದ ವಿಷಯವಸ್ತುವಿನ ಮೇಲೆ ಗಮನವನ್ನು ಕೇಂದ್ರೀಕರಿಸಬೇಕು.
ಯೇಸು ತನ್ನ ಶಿಷ್ಯರನ್ನು ಸುವಾರ್ತೆಯನ್ನು ಸಾರಲು ಕಳುಹಿಸಿದಾಗ, ಅವರು ಹೇಳಬೇಕಾಗಿದ್ದ ಸಂದೇಶವನ್ನು ಅವನು ಸ್ಪಷ್ಟವಾಗಿ ತಿಳಿಸುತ್ತಾ ಹೇಳಿದ್ದು: “ಪರಲೋಕರಾಜ್ಯವು ಸಮೀಪವಾಯಿತೆಂದು ಸಾರಿಹೇಳುತ್ತಾ ಹೋಗಿರಿ.” (ಮತ್ತಾ. 10:7) ಮತ್ತು ನಮ್ಮ ದಿನಗಳ ಕುರಿತು, “ಪರಲೋಕ ರಾಜ್ಯದ ಈ ಸುವಾರ್ತೆಯು . . . ಸಾರಲಾಗುವದು” ಎಂದು ಯೇಸು ಹೇಳಿದನು. (ಮತ್ತಾ. 24:14) ‘ದೇವರ ವಾಕ್ಯವನ್ನು ಸಾರುವಂತೆ,’ ಅಂದರೆ ಸಾಕ್ಷಿ ನೀಡುವಾಗ ಬೈಬಲಿಗೆ ಅಂಟಿಕೊಳ್ಳುವಂತೆ ನಮ್ಮನ್ನು ಪ್ರೋತ್ಸಾಹಿಸಲಾಗಿದೆ. (2 ತಿಮೊ. 4:2) ಆದರೆ ಬೈಬಲನ್ನು ತೆರೆಯುವ ಮುಂಚೆ ಅಥವಾ ರಾಜ್ಯದ ಕಡೆಗೆ ಗಮನವನ್ನು ನಿರ್ದೇಶಿಸುವ ಮೊದಲು, ಪ್ರಸ್ತುತವಾಗಿ ಜನರನ್ನು ಚಿಂತೆಗೊಳಪಡಿಸಿರುವ ಯಾವುದಾದರೊಂದು ವಿಷಯವನ್ನು ಗುರುತಿಸುವುದು ಅನೇಕವೇಳೆ ಆವಶ್ಯಕವಾಗಿರುತ್ತದೆ. ಪಾತಕ, ನಿರುದ್ಯೋಗ, ಅನ್ಯಾಯ, ಯುದ್ಧ, ಯುವ ಜನರಿಗೆ ಸಹಾಯಮಾಡುವ ವಿಧ, ಕಾಯಿಲೆ ಮತ್ತು ಮರಣದಂಥ ವಿಷಯಗಳ ಕುರಿತು ನೀವು ಮಾತಾಡಬಹುದು. ಆದರೆ ಅಹಿತಕರ ವಿಷಯಗಳ ಕುರಿತು ಜಾಸ್ತಿ ಮಾತಾಡಬೇಡಿರಿ; ಏಕೆಂದರೆ ನಮ್ಮ ಸಂದೇಶವು ಒಂದು ಸಕಾರಾತ್ಮಕ ಸಂದೇಶವಾಗಿದೆ. ಸಂಭಾಷಣೆಯನ್ನು ದೇವರ ವಾಕ್ಯ ಮತ್ತು ರಾಜ್ಯ ನಿರೀಕ್ಷೆಯ ಕಡೆಗೆ ನಿರ್ದೇಶಿಸಲು ಪ್ರಯತ್ನಿಸಿರಿ.
ನಿಮ್ಮ ವಿಷಯವಸ್ತು ನಿಮ್ಮ ಸಭಿಕರಿಗೆ ಏಕೆ ಪ್ರಾಮುಖ್ಯವೆಂಬುದನ್ನು ತೋರಿಸಿರಿ. ನೀವು ಸಭೆಯಲ್ಲಿ ಮಾತಾಡಲಿರುವುದಾದರೆ, ನಿಮ್ಮ ಸಭಿಕರು ನೀವು ಚರ್ಚಿಸುವ ವಿಷಯದಲ್ಲಿ ಸಾಮಾನ್ಯ ರೀತಿಯಲ್ಲಿ ಆಸಕ್ತರಾಗಿರುವರು ಎಂಬ ತಕ್ಕ ಮಟ್ಟಿಗಿನ ಖಾತ್ರಿ ನಿಮಗಿರಬಲ್ಲದು. ಆದರೆ ಒಬ್ಬ ವ್ಯಕ್ತಿಯು ತಾನು ನಿಶ್ಚಯವಾಗಿಯೂ ಒಳಗೂಡಿರುವ ವಿಷಯವೊಂದನ್ನು ಕಲಿಯುತ್ತಿರುವಾಗ ಹೇಗೆ ಕಿವಿಗೊಡುವನೊ ಹಾಗೆಯೇ ಈ ಸಭಿಕರೂ ಕಿವಿಗೊಟ್ಟಾರೊ? ಅವರು ಕಿವಿಗೊಡುತ್ತಿರುವ ವಿಷಯವು ಅವರ ಜೀವನ ಸನ್ನಿವೇಶಕ್ಕೆ ತಕ್ಕದ್ದಾಗಿದೆ ಮತ್ತು ಅದರ ವಿಷಯದಲ್ಲಿ ಕ್ರಮಕೈಕೊಳ್ಳುವಂತೆ ನೀವು ಅವರನ್ನು ಹುರಿದುಂಬಿಸುತ್ತಿದ್ದೀರಿ ಎಂಬುದನ್ನು ಅವರು ಗ್ರಹಿಸುವುದರಿಂದ ಅವರು ನಿಮಗೆ ಗಮನಕೊಡುವರೊ? ನಿಮ್ಮ ಭಾಷಣವನ್ನು ತಯಾರಿಸುತ್ತಿದ್ದಾಗ, ನಿಮ್ಮ ಸಭಿಕರನ್ನು ಅಂದರೆ ಅವರ ಪರಿಸ್ಥಿತಿಗಳು, ಅವರ ಚಿಂತೆಗಳು ಮತ್ತು ಅವರ ಮನೋಭಾವಗಳನ್ನು ನೀವು ಜಾಗರೂಕತೆಯಿಂದ ಪರಿಗಣಿಸಿದ್ದಲ್ಲಿ ಮಾತ್ರ ಹಾಗೆ ಆಗುವುದು. ನೀವು ಹಾಗೆ ಮಾಡಿರುವಲ್ಲಿ, ಅದನ್ನು ಸೂಚಿಸುವ ಕೆಲವು ಸಂಗತಿಗಳನ್ನು ನಿಮ್ಮ ಪೀಠಿಕೆಯಲ್ಲಿ ಒಳಗೂಡಿಸಿರಿ.
ನೀವು ವೇದಿಕೆಯ ಮೇಲಿಂದ ಮಾತಾಡುತ್ತಿರಲಿ ಇಲ್ಲವೆ ಕೇವಲ ಒಬ್ಬ ವ್ಯಕ್ತಿಗೆ ಸಾಕ್ಷಿ ನೀಡುತ್ತಿರಲಿ, ಒಂದು ವಿಷಯವಸ್ತುವಿನಲ್ಲಿ ಆಸಕ್ತಿಯನ್ನು ಕೆರಳಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದು, ನಿಮ್ಮ ಸಭಿಕರನ್ನು ಒಳಗೂಡಿಸುವುದಾಗಿದೆ. ಅವರ ಮನಸ್ಸಿನಲ್ಲಿರುವ ಸಮಸ್ಯೆಗಳು, ಆವಶ್ಯಕತೆಗಳು ಅಥವಾ ಪ್ರಶ್ನೆಗಳು, ನೀವು ಚರ್ಚಿಸುತ್ತಿರುವ ವಿಷಯವಸ್ತುವಿಗೆ ಹೇಗೆ ಸಂಬಂಧಿಸಿವೆ ಎಂಬುದನ್ನು ತೋರಿಸಿರಿ. ನೀವು ಸಾಮಾನ್ಯ ವಿಷಯಗಳಿಗಿಂತಲೂ ಹೆಚ್ಚು ಆಳಕ್ಕೆ ಹೋಗಿ, ಆ ವಿಷಯವಸ್ತುವಿನ ಕುರಿತಾದ ವಿಶಿಷ್ಟ ಅಂಶಗಳನ್ನು ಚರ್ಚಿಸಲಿದ್ದೀರಿ ಎಂಬುದನ್ನು ನೀವು ಸ್ಪಷ್ಟಪಡಿಸುವಲ್ಲಿ, ಅವರು ನಿಮಗೆ ಇನ್ನೂ ಹೆಚ್ಚು ಆಸಕ್ತಿಯಿಂದ ಕಿವಿಗೊಡುವರು. ಆದರೆ ಹಾಗೆ ಮಾಡಲು, ನೀವು ಉತ್ತಮವಾಗಿ ತಯಾರಿಸತಕ್ಕದ್ದು.
ನೀವು ಅದನ್ನು ಸಾದರಪಡಿಸುವ ವಿಧ. ನಿಮ್ಮ ಪೀಠಿಕೆಯಲ್ಲಿ ನೀವು ಏನು ಹೇಳುತ್ತೀರಿ ಎಂಬುದು ಅತಿ ಪ್ರಮುಖವಾಗಿರುವುದರೂ, ನೀವು ಅದನ್ನು ಹೇಗೆ ಹೇಳುತ್ತೀರಿ ಎಂಬುದೂ ಆಸಕ್ತಿಯನ್ನು ಕೆರಳಿಸಬಲ್ಲದು. ಈ ಕಾರಣದಿಂದ, ನಿಮ್ಮ ತಯಾರಿಯಲ್ಲಿ ನೀವು ಏನು ಹೇಳಲಿದ್ದೀರಿ ಎಂಬುದು ಮಾತ್ರವಲ್ಲ, ಅದನ್ನು ಹೇಗೆ ಹೇಳಲಿದ್ದೀರಿ ಎಂಬುದೂ ಒಳಗೂಡಿರಬೇಕು.
ನಿಮ್ಮ ಈ ಉದ್ದೇಶವನ್ನು ಸಾಧಿಸುವುದರಲ್ಲಿ ಸೂಕ್ತವಾದ ಪದಗಳ ಆಯ್ಕೆಯು ಪ್ರಾಮುಖ್ಯವಾಗಿರುವುದರಿಂದ, ಮೊದಲ ಎರಡೊ ಮೂರೊ ವಾಕ್ಯಗಳನ್ನು ಅತಿ ಜಾಗರೂಕತೆಯಿಂದ ತಯಾರಿಸುವುದು ನಿಮಗೆ ಪ್ರಯೋಜನಕರವಾಗಿರಬಹುದು. ಸಾಮಾನ್ಯವಾಗಿ, ಚಿಕ್ಕದಾದ, ಸರಳ ವಾಕ್ಯಗಳು ಅತ್ಯುತ್ತಮವಾಗಿರುತ್ತವೆ. ಸಭೆಯಲ್ಲಿ ಭಾಷಣವನ್ನು ಕೊಡಲಿರುವಾಗ, ನೀವು ಅವುಗಳನ್ನು ನಿಮ್ಮ ಟಿಪ್ಪಣಿಯಲ್ಲಿ ಬರೆದಿಡಲು ಬಯಸಬಹುದು ಅಥವಾ ನಿಮ್ಮ ಆರಂಭದ ಮಾತುಗಳು ಆವಶ್ಯಕವಾಗಿರುವ ಪ್ರಭಾವವನ್ನು ಬೀರುವಂತೆ ನೀವು ಅವುಗಳನ್ನು ಬಾಯಿಪಾಠ ಮಾಡುವ ಆಯ್ಕೆಯನ್ನು ಮಾಡಬಹುದು. ಪರಿಣಾಮಕಾರಿಯಾದ ಪೀಠಿಕೆಯನ್ನು ನಿಧಾನಗತಿಯಲ್ಲಿ ಕೊಡುವುದು, ನಿಮ್ಮ ಭಾಷಣದ ಉಳಿದ ಭಾಗವನ್ನು ಕೊಡಲು ಬೇಕಾದ ಪ್ರಶಾಂತತೆಯನ್ನು ನೀವು ಪಡೆದುಕೊಳ್ಳುವಂತೆ ನಿಮಗೆ ಸಹಾಯಮಾಡುವುದು.
ಪೀಠಿಕೆಯನ್ನು ತಯಾರಿಸುವ ಸಮಯ. ಈ ವಿಷಯದಲ್ಲಿ ವಿವಿಧ ಅಭಿಪ್ರಾಯಗಳಿವೆ. ಭಾಷಣವನ್ನು ತಯಾರಿಸುವಾಗ ಮೊದಲಾಗಿ ಪೀಠಿಕೆಯನ್ನು ತಯಾರಿಸಬೇಕೆಂದು ಕೆಲವು ಅನುಭವಸ್ಥ ಭಾಷಣಕಾರರು ನಂಬುತ್ತಾರೆ. ಭಾಷಣದ ಪ್ರಧಾನ ಭಾಗವನ್ನು ತಯಾರಿಸಿ ಮುಗಿಸಿದ ಬಳಿಕ ಪೀಠಿಕೆಯನ್ನು ತಯಾರಿಸಬೇಕೆಂದು ಇತರರು ಅಭಿಪ್ರಯಿಸುತ್ತಾರೆ.
ನೀವು ಯೋಗ್ಯವಾದ ಪೀಠಿಕೆಯ ವಿವರಗಳನ್ನು ತಯಾರಿಸುವುದಕ್ಕೆ ಮೊದಲು, ನಿಮ್ಮ ಭಾಷಣದ ವಿಷಯವಸ್ತು ಯಾವುದು ಮತ್ತು ನೀವು ಯಾವ ಮುಖ್ಯಾಂಶಗಳನ್ನು ವಿಕಸಿಸಲು ಯೋಜಿಸುತ್ತೀರಿ ಎಂಬುದನ್ನು ತಿಳಿದಿರಬೇಕೆಂಬುದು ನಿಶ್ಚಯ. ಆದರೆ ಒಂದು ಪ್ರಕಾಶಿತ ಹೊರಮೇರೆಯಿಂದ ನೀವು ನಿಮ್ಮ ಭಾಷಣವನ್ನು ತಯಾರಿಸುತ್ತಿರುವಲ್ಲಿ ಆಗೇನು? ಹೊರಮೇರೆಯನ್ನು ಓದಿದ ಬಳಿಕ, ಪೀಠಿಕೆಗಾಗಿ ಒಂದು ವಿಚಾರವು ನಿಮ್ಮ ಮನಸ್ಸಿಗೆ ಹೊಳೆಯುವಲ್ಲಿ, ಅದನ್ನು ಬರೆದಿಡುವುದರಲ್ಲಿ ಹಾನಿಯಿಲ್ಲ. ನಿಮ್ಮ ಪೀಠಿಕೆಯು ಪರಿಣಾಮಕಾರಿಯಾಗಿರಬೇಕಾದರೆ, ನೀವು ನಿಮ್ಮ ಸಭಿಕರನ್ನೂ ಹೊರಮೇರೆಯಲ್ಲಿರುವ ವಿಷಯಭಾಗವನ್ನೂ ಪರಿಗಣಿಸಬೇಕೆಂಬುದನ್ನು ಸಹ ಜ್ಞಾಪಕದಲ್ಲಿಡಿರಿ.