ಬೈಬಲ್ ಪುಸ್ತಕ ನಂಬರ್ 15—ಎಜ್ರ
ಲೇಖಕ: ಎಜ್ರ
ಬರೆಯಲ್ಪಟ್ಟ ಸ್ಥಳ: ಯೆರೂಸಲೇಮ್
ಬರೆದು ಮುಗಿಸಿದ್ದು: ಸುಮಾರು ಸಾ.ಶ.ಪೂ. 460
ಆವರಿಸಲ್ಪಟ್ಟ ಕಾಲ: ಸಾ.ಶ.ಪೂ. 537-ಸುಮಾರು ಸಾ.ಶ.ಪೂ. 467
ಯೆರೂಸಲೇಮಿನ ಬಗ್ಗೆ ಪ್ರವಾದಿಸಲ್ಪಟ್ಟ 70 ವರುಷಗಳ ನಿರ್ಜನತೆಯ ಕಾಲದ ಅಂತ್ಯವು ಸಮೀಪಿಸುತ್ತಿತ್ತು. ಬಾಬೆಲ್ ತನ್ನ ಕೈದಿಗಳನ್ನು ಎಂದಿಗೂ ಬಿಡುಗಡೆ ಮಾಡದ ದೇಶವೆಂಬ ಖ್ಯಾತಿಯನ್ನು ಹೊಂದಿತ್ತೆಂಬುದು ನಿಜವಾಗಿದ್ದರೂ, ಬಾಬೆಲಿಗಿದ್ದ ಬಲಕ್ಕಿಂತ ಯೆಹೋವನ ಮಾತು ಹೆಚ್ಚು ಬಲಾಢ್ಯವೆಂಬುದು ರುಜುವಾಗಲಿಕ್ಕಿತ್ತು. ಯೆಹೋವನ ಜನರಿಗೆ ಬಿಡುಗಡೆ ಆಗುವುದರಲ್ಲಿತ್ತು. ಕೆಡವಲ್ಪಟ್ಟಿದ್ದ ಯೆಹೋವನ ಆಲಯವು ಪುನಃ ಕಟ್ಟಲ್ಪಡಲಿಕ್ಕಿತ್ತು ಮತ್ತು ಯೆಹೋವನ ಯಜ್ಞವೇದಿಯ ಮೇಲೆ ಪುನಃ ಯಜ್ಞಗಳು ಅರ್ಪಿಸಲ್ಪಡಲಿಕ್ಕಿದ್ದವು. ಯೆರೂಸಲೇಮ್ ಇನ್ನೊಮ್ಮೆ ಯೆಹೋವನ ಸತ್ಯಾರಾಧಕರ ಉದ್ಘೋಷ ಮತ್ತು ಸ್ತುತಿಯನ್ನು ಕೇಳಿಸಿಕೊಳ್ಳಲಿಕ್ಕಿತ್ತು. ನಿರ್ಜನತೆಯು ಎಷ್ಟು ದೀರ್ಘವಾಗಿರುವುದೆಂದು ಯೆರೆಮೀಯನು ಪ್ರವಾದಿಸಿದ್ದನು ಮತ್ತು ಬಂದಿಗಳು ಹೇಗೆ ಬಿಡುಗಡೆಯಾಗುವರೆಂದು ಯೆಶಾಯನು ಪ್ರವಾದಿಸಿದ್ದನು. ಬೈಬಲ್ ಇತಿಹಾಸದ ಮೂರನೆಯ ಲೋಕಶಕ್ತಿಯ ಸ್ಥಾನದಿಂದ ದುರಹಂಕಾರದ ಬಾಬೆಲನ್ನು ಕೆಡವುವವನು ಹಾಗೂ ‘ಯೆಹೋವನ ಮಂದೆ ಕಾಯುವವನು’ ಪಾರಸಿಯನಾದ ಕೋರೆಷನಾಗಿರುವನು ಎಂದು ಯೆಶಾಯನು ಅವನ ಹೆಸರನ್ನೂ ತಿಳಿಸಿದ್ದನು.—ಯೆಶಾ. 44:28; 45:1, 2; ಯೆರೆ. 25:12.
2 ಸಾ.ಶ.ಪೂ. 539ರ (ಗ್ರೆಗೋರಿಯನ್ ಕ್ಯಾಲೆಂಡರಿನ) ಅಕ್ಟೋಬರ್ 5ರ ರಾತ್ರಿಯಂದು, ಬಾಬೆಲಿನ ಅರಸ ಬೇಲ್ಶಚ್ಚರನು ಮತ್ತು ಅವನ ಕುಲೀನರು ತಮ್ಮ ದೆವ್ವದೇವತೆಗಳಿಗೆ ಸ್ವಸ್ತಿಪಾನ ಮಾಡುತ್ತಿದ್ದಾಗ ಬಾಬೆಲಿನ ಮೇಲೆ ವಿಪತ್ತು ಬಂದೆರಗಿತು. ಆ ಸಂದರ್ಭದಲ್ಲಿ ಅವರ ವಿಧರ್ಮಿ ವಿಷಯಲಂಪಟತೆಗೆ ಕೂಡಿಸಿ, ಅವರು ಯೆಹೋವನ ಆಲಯದ ಪವಿತ್ರ ಪಾತ್ರೆಗಳನ್ನು ತಮ್ಮ ಕುಡಿಕತನದ ಪಾತ್ರೆಗಳಾಗಿ ಉಪಯೋಗಿಸುತ್ತಾ ಇದ್ದರು! ಪ್ರವಾದನೆಯನ್ನು ನೆರವೇರಿಸಲು ಅದೇ ರಾತ್ರಿ ಬಾಬೆಲಿನ ಪೌಳಿಗೋಡೆಗಳ ಹೊರಗಡೆ ಕೋರೆಷನು ಹಾಜರಾಗಿದುದು ಅದೆಷ್ಟು ತಕ್ಕದ್ದಾಗಿತ್ತು!
3 ಸಾ.ಶ.ಪೂ. 539ರ ಈ ವರುಷ ಒಂದು ನಿರ್ಣಾಯಕ ತಾರೀಖಾಗಿದೆ, ಅಂದರೆ ಐಹಿಕ ಹಾಗೂ ಬೈಬಲ್ ಇತಿಹಾಸವು ಒಂದಕ್ಕೊಂದು ಹೊಂದಿಕೆಯಲ್ಲಿರುವ ಒಂದು ತಾರೀಖಾಗಿದೆ. ಕೋರೆಷನು ಬಾಬೆಲನ್ನು ಆಳಿದ ಮೊದಲನೆಯ ವರುಷದಲ್ಲಿ, ಯೆಹೋವನ ಆಲಯವನ್ನು ಪುನಃ ಕಟ್ಟುವುದಕ್ಕಾಗಿ ಯೆಹೂದ್ಯರು ಯೆರೂಸಲೇಮಿಗೆ ಹಿಂದಿರುಗುವಂತೆ ಅನುಮತಿ ನೀಡುತ್ತಾ ಇದರ ಕುರಿತಾಗಿ “ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದ” ಪ್ರಕಟಿಸಿದನು. ಈ ಆಜ್ಞೆಯನ್ನು ಪ್ರಾಯಶಃ ಸಾ.ಶ.ಪೂ. 538ರ ಅಂತ್ಯಭಾಗದಲ್ಲಿಯೋ ಇಲ್ಲವೆ ಸಾ.ಶ.ಪೂ. 537ರ ಆರಂಭದಲ್ಲಿಯೋ ಹೊರಡಿಸಲಾಯಿತು.a ನಂಬಿಗಸ್ತ ಜನಶೇಷವೊಂದು ಸಾ.ಶ.ಪೂ. 537ರಲ್ಲಿ, ಯಜ್ಞವೇದಿಯನ್ನು ಕಟ್ಟಲು ಮತ್ತು ಆ ವರುಷದ ‘ಏಳನೆಯ ತಿಂಗಳಿನಲ್ಲಿ’ (ಟಿಶ್ರೀ, ಸೆಪ್ಟೆಂಬರ್-ಅಕ್ಟೋಬರ್ಗೆ ಅನುರೂಪ) ಪ್ರಥಮ ಯಜ್ಞಗಳನ್ನು ಅರ್ಪಿಸಲು ಯೆರೂಸಲೇಮಿಗೆ ಹಿಂದೆರಳಿತು. ಇದು ನೆಬೂಕದ್ನೆಚ್ಚರನು ಯೆಹೂದ ಮತ್ತು ಯೆರೂಸಲೇಮನ್ನು ನಾಶಮಾಡಿದ ತಿಂಗಳಲ್ಲಿಯೇ, 70 ವರುಷಗಳ ತರುವಾಯ ನಡೆಯಿತು.—ಎಜ್ರ 1:1-3; 3:1-6.
4 ಪುನಸ್ಸ್ಥಾಪನೆ! ಇದೇ ಎಜ್ರನ ಪುಸ್ತಕಕ್ಕೆ ಹಿನ್ನೆಲೆಯನ್ನು ಒದಗಿಸುತ್ತದೆ. ಈ ಕಥನದಲ್ಲಿ, 7ನೆಯ ಅಧ್ಯಾಯದ 27ನೆಯ ವಚನದಿಂದ ಹಿಡಿದು 9ನೆಯ ಅಧ್ಯಾಯದ ವರೆಗೆ ಮಾಡಲ್ಪಟ್ಟಿರುವ “ನನಗೆ,” “ನಾನು” ಎಂಬಂಥ ಉತ್ತಮ ಪುರುಷದ ಉಪಯೋಗವು, ಎಜ್ರನೇ ಈ ಪುಸ್ತಕದ ಲೇಖಕನೆಂದು ತೋರಿಸುತ್ತದೆ. “ಮೋಶೆಯ ಧರ್ಮೋಪದೇಶದಲ್ಲಿ ಪಾರಂಗತನಾದ ಶಾಸ್ತ್ರಿ” ಮತ್ತು “ಯೆಹೋವಧರ್ಮಶಾಸ್ತ್ರವನ್ನು ಅಭ್ಯಾಸಿಸಿ ಅನುಸರಿಸಲಿಕ್ಕೂ ಇಸ್ರಾಯೇಲ್ಯರಿಗೆ . . . ಕಲಿಸಲಿಕ್ಕೂ” ತನ್ನ ಹೃದಯವನ್ನು ಸಿದ್ಧಮಾಡಿಕೊಂಡಿದ್ದ ಪ್ರಾಯೋಗಿಕ ನಂಬಿಕೆಯ ಪುರುಷನಾಗಿದ್ದ ಎಜ್ರನು, ಪೂರ್ವಕಾಲವೃತ್ತಾಂತಗಳನ್ನು ಬರೆದಂತೆಯೇ ಈ ಇತಿಹಾಸವನ್ನು ಸಹ ಬರೆಯಲು ಅತ್ಯರ್ಹನಾಗಿದ್ದನು. (ಎಜ್ರ 7:6, 10) ಎಜ್ರನ ಪುಸ್ತಕವು ಪೂರ್ವಕಾಲವೃತ್ತಾಂತಗಳ ಮುಂದುವರಿಕೆಯಾಗಿರುವುದರಿಂದ, ಅದನ್ನು ಪೂರ್ವಕಾಲವೃತ್ತಾಂತವನ್ನು ಬರೆದ ಕಾಲದಲ್ಲಿಯೇ ಅಂದರೆ ಸುಮಾರು ಸಾ.ಶ.ಪೂ. 460ರಲ್ಲಿ ಬರೆಯಲಾಯಿತೆಂದು ಸಾಮಾನ್ಯವಾಗಿ ನಂಬಲಾಗುತ್ತದೆ. ಇದು, ಯೆಹೂದ್ಯರು ‘ಮರಣಪಾತ್ರರಾಗಿ’ ಗುರುತಿಸಲ್ಪಟ್ಟು ಒಡೆದು, ಚದರಿಹೋದ ಜನಾಂಗವಾಗಿದ್ದ ಸಮಯದಿಂದ ಹಿಡಿದು ಎಜ್ರನು ಯೆರೂಸಲೇಮಿಗೆ ಹಿಂದಿರುಗಿ ಬಂದು ಎರಡನೆಯ ದೇವಾಲಯವನ್ನು ಕಟ್ಟಿ ಮುಗಿಸಿ ಯಾಜಕತ್ವವನ್ನು ಶುದ್ಧೀಕರಿಸಿದ ಸಮಯದ ವರೆಗಿನ 70 ವರುಷಗಳ ಅವಧಿಯನ್ನು ಆವರಿಸುತ್ತದೆ.—ಎಜ್ರ 1:1; 7:7; 10:17; ಕೀರ್ತ. 102:20, NW ಪಾದಟಿಪ್ಪಣಿ.
5 ಎಜ್ರ ಎಂಬ ಹೀಬ್ರು ಹೆಸರಿನ ಅರ್ಥ “ಸಹಾಯ” ಎಂದಾಗಿದೆ. ಎಜ್ರ ಮತ್ತು ನೆಹೆಮೀಯ ಎಂಬ ಹೆಸರುಳ್ಳ ಎರಡು ಪುಸ್ತಕಗಳು ಆದಿಯಲ್ಲಿ ಒಂದೇ ಸುರುಳಿಯಾಗಿದ್ದವು. (ನೆಹೆ. 3:32, NW ಪಾದಟಿಪ್ಪಣಿ) ಕಾಲಾನಂತರ ಯೆಹೂದ್ಯರು ಈ ಸುರುಳಿಯನ್ನು ವಿಭಾಗಿಸಿ, ಅವುಗಳನ್ನು ಒಂದು ಮತ್ತು ಎರಡನೇ ಎಜ್ರ ಎಂದು ಕರೆದರು. ಆಧುನಿಕ ಹೀಬ್ರು ಬೈಬಲ್ಗಳು ಬೇರೆ ಆಧುನಿಕ ಬೈಬಲ್ಗಳಂತೆಯೇ, ಈ ಎರಡು ಪುಸ್ತಕಗಳನ್ನು ಎಜ್ರ ಮತ್ತು ನೆಹೆಮೀಯ ಎಂದು ಕರೆಯುತ್ತವೆ. ಎಜ್ರನ ಪುಸ್ತಕದ ಕೆಲವು ಭಾಗಗಳು (4:8ರಿಂದ 6:18 ಮತ್ತು 7:12-26) ಅರಮಾಯ ಭಾಷೆಯಲ್ಲಿಯೂ ಉಳಿದ ಭಾಗಗಳು ಹೀಬ್ರುವಿನಲ್ಲಿಯೂ ಬರೆಯಲ್ಪಟ್ಟವು. ಎಜ್ರನು ಈ ಎರಡು ಭಾಷೆಗಳಲ್ಲೂ ಪಾರಂಗತನಾಗಿದ್ದನು.
6 ಇಂದು ವಿದ್ವಾಂಸರಲ್ಲಿ ಹೆಚ್ಚಿನವರು ಎಜ್ರನ ಪುಸ್ತಕದ ನಿಷ್ಕೃಷ್ಟತೆಯನ್ನು ಒಪ್ಪಿಕೊಳ್ಳುತ್ತಾರೆ. ಎಜ್ರ ಪುಸ್ತಕದ ಅಧಿಕೃತತೆಯ ಕುರಿತು ಡಬ್ಲ್ಯೂ. ಎಫ್. ಆಲ್ಬ್ರೈಟ್ರವರು, ಬೈಬಲ್—ಪ್ರಾಕ್ತನಶಾಸ್ತ್ರಕ್ಕೆ ಇಪ್ಪತ್ತು ವರುಷಗಳ ತರುವಾಯ (ಇಂಗ್ಲಿಷ್) ಎಂಬ ತನ್ನ ಪ್ರಕರಣ ಗ್ರಂಥದಲ್ಲಿ ಬರೆಯುವುದು: “ಪ್ರಾಕ್ತನಶಾಸ್ತ್ರದ ದತ್ತಾಂಶಗಳು ಹೀಗೆ ಸಂಶಯಾತೀತವಾದ ರೀತಿಯಲ್ಲಿ, ಯೆರೆಮೀಯ ಮತ್ತು ಯೆಹೆಜ್ಕೇಲ, ಎಜ್ರ ಮತ್ತು ನೆಹೆಮೀಯ ಪುಸ್ತಕಗಳ ಗಣನೀಯ ಸತ್ಯತೆಯನ್ನು ತೋರಿಸಿವೆ; ಅವು ಸಂಭವಗಳ ಸಾಂಪ್ರದಾಯಿಕ ಚಿತ್ರಣವನ್ನು ಹಾಗೂ ಅವುಗಳು ನಡೆದಿರುವ ಕ್ರಮವನ್ನು ಸಹ ದೃಢೀಕರಿಸಿವೆ.”
7 ಕ್ರೈಸ್ತ ಗ್ರೀಕ್ ಶಾಸ್ತ್ರಗಳ ಬರಹಗಾರರು ಎಜ್ರನ ಪುಸ್ತಕವನ್ನು ಉದ್ಧರಿಸದಿದ್ದರೂ ಅಥವಾ ಅದಕ್ಕೆ ನೇರವಾಗಿ ಸೂಚಿಸದಿದ್ದರೂ, ಬೈಬಲಿನ ಅಂಗೀಕೃತ ಪುಸ್ತಕಗಳ ಪಟ್ಟಿಯಲ್ಲಿ ಅದಕ್ಕಿರುವ ಸ್ಥಾನವನ್ನು ಸಂದೇಹಿಸಲು ಸಾಧ್ಯವೇ ಇಲ್ಲ. ಅದು, ಯೆಹೋವನು ಯೆಹೂದ್ಯರೊಂದಿಗೆ ವ್ಯವಹರಿಸಿದ ದಾಖಲೆಯನ್ನು, ಹೀಬ್ರು ಪುಸ್ತಕಗಳ ಸೂಚಿಯು (ಕ್ಯಾಟಲಾಗ್) ಕ್ರಮದಲ್ಲಿ ಜೋಡಿಸಲ್ಪಟ್ಟ ಸಮಯದ ತನಕ ತಂದು ತಲುಪಿಸುತ್ತದೆ. ಯೆಹೂದಿ ಸಂಪ್ರದಾಯಾನುಸಾರ, ಈ ಹೀಬ್ರು ಪುಸ್ತಕಗಳ ಸೂಚಿಯನ್ನು ಕ್ರಮದಲ್ಲಿ ಜೋಡಿಸುವ ಕೆಲಸದಲ್ಲಿ ಅಧಿಕಾಂಶವನ್ನು ಸಾಧಿಸಿದವನು ಎಜ್ರನು. ಅಷ್ಟುಮಾತ್ರವಲ್ಲದೆ, ಎಜ್ರನ ಪುಸ್ತಕವು ಪುನಸ್ಸ್ಥಾಪನೆಯ ಕುರಿತ ಪ್ರವಾದನೆಗಳೆಲ್ಲವೂ ಸತ್ಯವಾದವೆಂದು ದೃಢೀಕರಿಸುತ್ತದೆ. ಹೀಗೆ, ಅದು ದೈವಿಕ ದಾಖಲೆಯ ಆವಶ್ಯಕ ಭಾಗವೆಂದು ಮತ್ತು ಆ ದಾಖಲೆಯೊಂದಿಗೆ ಪೂರ್ಣ ಹೊಂದಿಕೆಯಲ್ಲಿದೆಯೆಂದು ರುಜುಪಡಿಸುತ್ತದೆ. ಇದಕ್ಕೆ ಕೂಡಿಸಿ, ಅದು ಶುದ್ಧಾರಾಧನೆಯನ್ನು ಗೌರವಿಸುತ್ತದೆ ಮತ್ತು ಯೆಹೋವ ದೇವರ ಮಹಾನಾಮವನ್ನು ಪವಿತ್ರೀಕರಿಸುತ್ತದೆ.
ಪ್ರಯೋಜನಕರವೇಕೆ?
14 ಪ್ರಥಮವಾಗಿ, ಯೆಹೋವನ ಪ್ರವಾದನೆಗಳು ಚಾಚೂತಪ್ಪದೆ ನಿಖರವಾಗಿ ನೆರವೇರುತ್ತವೆ ಎಂದು ತೋರಿಸುವುದರಲ್ಲಿ ಎಜ್ರನ ಪುಸ್ತಕವು ಪ್ರಯೋಜನಕರವಾಗಿದೆ. ಯೆರೂಸಲೇಮ್ ನಿರ್ಜನವಾಗುವುದೆಂದು ಅತಿ ನಿಷ್ಕೃಷ್ಟವಾಗಿ ಮುಂತಿಳಿಸಿದ್ದ ಯೆರೆಮೀಯನು, 70 ವರುಷಗಳ ಬಳಿಕ ಅದರ ಪುನಸ್ಸ್ಥಾಪನೆಯಾಗುವುದೆಂದೂ ಮುಂತಿಳಿಸಿದ್ದನು. (ಯೆರೆ. 29:10) ಯೆಹೋವನು ಸರಿಯಾದ ವೇಳೆಯಲ್ಲಿ ತನ್ನ ಜನರಾಗಿದ್ದ ಆ ನಂಬಿಗಸ್ತ ಜನಶೇಷವನ್ನು, ಅವರು ಸತ್ಯಾರಾಧನೆಯನ್ನು ಮುಂದುವರಿಸುವಂತೆ ವಾಗ್ದತ್ತ ದೇಶಕ್ಕೆ ಮರಳಿಬರುವಂತೆ ಮಾಡಿ ಅವರಿಗೆ ಪ್ರೀತಿಪೂರ್ವಕ ದಯೆಯನ್ನು ತೋರಿಸಿದನು.
15 ಪುನಸ್ಸ್ಥಾಪಿತವಾದ ದೇವಾಲಯವು ಯೆಹೋವನ ಆರಾಧನೆಯನ್ನು ಆತನ ಜನರ ಮಧ್ಯೆ ಪುನಃ ಮೇಲಕ್ಕೆತ್ತಿ, ಸತ್ಯಾರಾಧನೆಯ ಬಯಕೆಯಿಂದ ಆತನ ಕಡೆಗೆ ತಿರುಗುವವರನ್ನು ಆತನು ಆಶ್ಚರ್ಯಕರವಾಗಿಯೂ ಕರುಣೆಯಿಂದಲೂ ಆಶೀರ್ವದಿಸುತ್ತಾನೆಂಬುದಕ್ಕೆ ಸಾಕ್ಷಿಯಾಗಿ ನಿಂತಿತು. ಸೊಲೊಮೋನನ ದೇವಾಲಯಕ್ಕಿದ್ದ ಮಹಿಮೆ ಅದಕ್ಕಿರಲಿಲ್ಲವಾದರೂ, ದೈವಿಕ ಚಿತ್ತಾನುಸಾರ ಅದಕ್ಕಿದ್ದ ಉದ್ದೇಶವನ್ನು ಅದು ಪೂರೈಸಿತು. ಮೊದಲಿದ್ದ ಪ್ರಾಪಂಚಿಕ ವೈಭವ ಅದಕ್ಕಿರಲಿಲ್ಲ. ಆಧ್ಯಾತ್ಮಿಕ ನಿಧಿಗಳಲ್ಲಿಯೂ ಅದು ಕನಿಷ್ಟವಾಗಿತ್ತು. ಉದಾಹರಣೆಗೆ, ಒಡಂಬಡಿಕೆಯ ಮಂಜೂಷ ಅದರಲ್ಲಿರಲಿಲ್ಲ.b ಜೆರುಬ್ಬಾಬೆಲನ ಸಮಯದಲ್ಲಿನ ದೇವಾಲಯದ ಪ್ರತಿಷ್ಠಾಪನೆ ಸಹ ಸೊಲೊಮೋನನ ದಿನಗಳಲ್ಲಿ ನಡೆದ ದೇವಾಲಯದ ಪ್ರತಿಷ್ಠಾಪನೆಗೆ ಸಮಾನವಾಗಿರಲಿಲ್ಲ. ಸೊಲೊಮೋನನ ದೇವಾಲಯದಲ್ಲಿ ಅರ್ಪಿಸಲಾದ ಜಾನುವಾರು ಮತ್ತು ಕುರಿಗಳ ಯಜ್ಞದ ಮೊತ್ತದಲ್ಲಿ ಒಂದು ಪ್ರತಿಶತದಷ್ಟು ಯಜ್ಞಗಳೂ ಇಲ್ಲಿ ಅರ್ಪಿಸಲ್ಪಡಲಿಲ್ಲ. ಈ ಎರಡನೆಯ ದೇವಾಲಯದಲ್ಲಿ ಪ್ರಥಮ ದೇವಾಲಯದಲ್ಲಾದಂತೆ ಮೋಡದಂತಹ ತೇಜಸ್ಸು ಕವಿಯಲೂ ಇಲ್ಲ, ಸರ್ವಾಂಗಹೋಮವನ್ನು ದಹಿಸಲು ಯೆಹೋವನಿಂದ ಬೆಂಕಿ ಬರಲೂ ಇಲ್ಲ. ಆದರೂ, ಈ ಎರಡು ಆಲಯಗಳೂ, ಸತ್ಯದೇವರಾದ ಯೆಹೋವನ ಆರಾಧನೆಯನ್ನು ಮೇಲಕ್ಕೆತ್ತುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದೇನೊ ನಿಜ.
16 ಜೆರುಬ್ಬಾಬೆಲನು ಕಟ್ಟಿಸಿದ ಆಲಯ, ಮೋಶೆಯು ರಚಿಸಿದ ದೇವದರ್ಶನಗುಡಾರ ಮತ್ತು ಸೊಲೊಮೋನ ಹಾಗೂ ಹೆರೋದ ಕಟ್ಟಿಸಿದ ಆಲಯಗಳು ಮತ್ತು ಅವುಗಳ ವಿವಿಧ ವೈಶಿಷ್ಟ್ಯಗಳು ಸಾಂಕೇತಿಕ ಅಥವಾ ಚಿತ್ರಾತ್ಮಕವಾಗಿದ್ದವು. ಅವು ಯೆಹೋವನೇ ‘ಹಾಕಿದ ನಿಜವಾದ ದೇವದರ್ಶನಗುಡಾರವನ್ನು’ ಪ್ರತಿನಿಧಿಸಿದವು. (ಇಬ್ರಿ. 8:2) ಈ ಆಧ್ಯಾತ್ಮಿಕ ಆಲಯವು, ಕ್ರಿಸ್ತನ ಪ್ರಾಯಶ್ಚಿತ್ತಾರ್ಥಕ ಯಜ್ಞದ ಮೇಲೆ ಆಧರಿತವಾದ ಆರಾಧನೆಯಲ್ಲಿ ಯೆಹೋವನನ್ನು ಸಮೀಪಿಸುವ ಏರ್ಪಾಡಾಗಿದೆ. (ಇಬ್ರಿ. 9:2-10, 23) ಯೆಹೋವನ ಮಹಾ ಆಧ್ಯಾತ್ಮಿಕಾಲಯವು ಮಹಿಮೆಯಲ್ಲಿ ಅತ್ಯುತ್ಕೃಷ್ಟವೂ ರಮ್ಯತೆ ಮತ್ತು ಅಪೇಕ್ಷಣೀಯತೆಯಲ್ಲಿ ಹೋಲಿಕೆಯಿಲ್ಲದ್ದೂ ಆಗಿದೆ; ಅದರ ಉಜ್ವಲತೆ ಮಾಸಿಹೋಗದಂಥದ್ದಾಗಿದ್ದು, ಯಾವುದೇ ಭೌತಿಕ ಕಟ್ಟಡಕ್ಕಿಂತ ಮಿಗಿಲಾದದ್ದಾಗಿದೆ.
17 ಇಂದಿನ ಕ್ರೈಸ್ತರಿಗೆ ಎಜ್ರನ ಪುಸ್ತಕದಲ್ಲಿ ಅತಿ ಶ್ರೇಷ್ಠ ಮೌಲ್ಯವುಳ್ಳ ಪಾಠಗಳು ಅಡಕವಾಗಿವೆ. ಯೆಹೋವನ ಜನರು ಆತನ ಕೆಲಸಕ್ಕಾಗಿ ಸಿದ್ಧಮನಸ್ಸಿನಿಂದ ಕಾಣಿಕೆ ನೀಡುವುದರ ಕುರಿತು ನಾವು ಈ ಪುಸ್ತಕದಲ್ಲಿ ಓದುತ್ತೇವೆ. (ಎಜ್ರ 2:68; 2 ಕೊರಿಂ. 9:7) ಯೆಹೋವನನ್ನು ಸ್ತುತಿಸಲು ನೆರೆದು ಬರುವ ಸಂದರ್ಭಗಳಿಗಾಗಿ ಆತನು ಮಾಡಿರುವ ನಿರಂತರವಾದ ಒದಗಿಸುವಿಕೆ ಮತ್ತು ಅದರ ಮೇಲೆ ಆತನ ಆಶೀರ್ವಾದವಿದೆಯೆಂದು ತಿಳಿದುಕೊಳ್ಳುವಾಗ ನಮಗೆ ಪ್ರೋತ್ಸಾಹನೆ ದೊರೆಯುತ್ತದೆ. (ಎಜ್ರ 6:16, 22) ದೇವಸ್ಥಾನದಾಸರು (ನೆತಿನಿಮರು) ಮತ್ತು ವಿಶ್ವಾಸಿಗಳಾಗಿದ್ದ ಅನ್ಯಜನಾಂಗದವರು ಯೆಹೋವನ ಆರಾಧನೆಗೆ ಪೂರ್ಣಹೃದಯದ ಬೆಂಬಲ ನೀಡಲು ಇಸ್ರಾಯೇಲಿನ ಜನಶೇಷದೊಂದಿಗೆ ಜೊತೆಗೂಡಿ ಹೋದುದು ನಮಗೊಂದು ಉತ್ತಮ ಮಾದರಿಯಾಗಿದೆ. (2:43, 55) ವಿಧರ್ಮಿ ನೆರೆಯವರೊಂದಿಗೆ ವಿವಾಹಮಾಡಿಕೊಳ್ಳುವ ಮೂಲಕ ಜನರು ಮಾಡಿದ ತಪ್ಪಿನ ಕುರಿತು ಹೇಳಲ್ಪಟ್ಟಾಗ ಅವರು ತೋರಿಸಿದ ದೀನಭಾವದ ಪಶ್ಚಾತ್ತಾಪವನ್ನೂ ಪರಿಗಣಿಸಿರಿ. (10:2-4) ದುಸ್ಸಹವಾಸವು ದೇವರ ಅಸಮ್ಮತಿಗೆ ನಡೆಸಿತು. (9:14, 15) ಆದರೆ ಆತನ ಕೆಲಸಕ್ಕಾಗಿ ತೋರಿಸಲಾದ ಹರ್ಷಕರವಾದ ಹುರುಪು ಆತನ ಮೆಚ್ಚಿಕೆಯನ್ನೂ ಆಶೀರ್ವಾದವನ್ನೂ ತಂದಿತು.—6:14, 21, 22.
18 ಯೆರೂಸಲೇಮಿನಲ್ಲಿ ಯೆಹೋವನ ಸಿಂಹಾಸನದ ಮೇಲೆ ಆಗ ಒಬ್ಬ ಅರಸನು ಇರಲಿಲ್ಲವಾದರೂ, ಈ ಪುನಸ್ಸ್ಥಾಪನೆಯು, ಯೆಹೋವನು ತಕ್ಕ ಸಮಯದಲ್ಲಿ ದಾವೀದನ ವಂಶದಲ್ಲಿ ತನ್ನ ವಾಗ್ದತ್ತ ಅರಸನನ್ನು ತರುವನೆಂಬುದರ ನಿರೀಕ್ಷಣೆಯನ್ನು ಚಿಗುರಿಸಿತು. ಆ ಜನಾಂಗವು ಪುನಸ್ಸ್ಥಾಪಿಸಲ್ಪಟ್ಟದ್ದರಿಂದ ಈಗ ಅದು, ಮೆಸ್ಸೀಯನು ಪ್ರತ್ಯಕ್ಷನಾಗುವ ಕಾಲದ ತನಕ ಪವಿತ್ರ ಪ್ರಕಟನೆಗಳನ್ನು ಮತ್ತು ದೇವಾರಾಧನೆಯನ್ನು ಸಂರಕ್ಷಿಸುವ ಸ್ಥಾನದಲ್ಲಿತ್ತು. ತಮ್ಮ ಸ್ವದೇಶಕ್ಕೆ ಹಿಂದೆರಳುವ ವಿಷಯದಲ್ಲಿ ಈ ಜನಶೇಷವು ನಂಬಿಕೆಯಿಂದ ಪ್ರತಿಕ್ರಿಯೆಯನ್ನು ತೋರಿಸದೆ ಇರುತ್ತಿದ್ದಲ್ಲಿ ಮೆಸ್ಸೀಯನು ಯಾರ ಬಳಿಗೆ ಬರುತ್ತಿದ್ದನು? ಹೌದು, ಎಜ್ರನ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ಸಂಭವಗಳು ಮೆಸ್ಸೀಯ ಅರಸನ ತೋರಿಬರುವಿಕೆಗೆ ನಡೆಸುವ ಇತಿಹಾಸದ ಪ್ರಮುಖ ಭಾಗವಾಗಿದೆಯೆಂಬುದು ನಿಶ್ಚಯ! ಅದೆಲ್ಲವೂ ನಮ್ಮ ಇಂದಿನ ಅಧ್ಯಯನಕ್ಕೆ ಅತಿ ಪ್ರಯೋಜನಕರವಾದ ವಿಷಯವಾಗಿದೆ.
[ಪಾದಟಿಪ್ಪಣಿಗಳು]
a ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 1, ಪುಟಗಳು 452-4, 458.
b ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟ 1079.