ಬೈಬಲ್ ಪುಸ್ತಕ ನಂಬರ್ 16—ನೆಹೆಮೀಯ
ಲೇಖಕ: ನೆಹೆಮೀಯ
ಬರೆಯಲ್ಪಟ್ಟ ಸ್ಥಳ: ಯೆರೂಸಲೇಮ್
ಬರೆದು ಮುಗಿಸಿದ್ದು: ಸಾ.ಶ.ಪೂ. 443ರ ಬಳಿಕ
ಆವರಿಸಲ್ಪಟ್ಟ ಕಾಲ: ಸಾ.ಶ.ಪೂ. 456-443ರ ಬಳಿಕ
ನೆಹೆಮೀಯನು ಪರ್ಷಿಯನ್ ಅರಸ ಅರ್ತಷಸ್ತನ (ಲಾಂಜಮೆನಸ್ನ) ಯೆಹೂದಿ ಸೇವಕನಾಗಿದ್ದನು. ಅವನ ಹೆಸರಿನ ಅರ್ಥ, “ಯಾಹು ಸಂತೈಸುತ್ತಾನೆ” ಎಂದಾಗಿತ್ತು. ಅವನು ಅರಸನ ಪಾನಸೇವಕನಾಗಿದ್ದನು. ಇದು ಮಹಾ ವಿಶ್ವಾಸದ, ಗೌರವದ ಮತ್ತು ಅಪೇಕ್ಷಣೀಯ ಕೆಲಸವಾಗಿತ್ತು, ಏಕೆಂದರೆ, ಅರಸನು ಹರ್ಷಚಿತ್ತನಾಗಿದ್ದು ಅನುಗ್ರಹ ನೀಡಲು ಮನಸ್ಸುಮಾಡುವಂಥ ಸಮಯಗಳಲ್ಲಿ ಅವನನ್ನು ಭೇಟಿಮಾಡುವ ಸಂದರ್ಭವನ್ನು ಇದು ಒದಗಿಸುತ್ತಿತ್ತು. ಆದರೆ ‘ಆನಂದಿಸಲಿಕ್ಕಾಗಿರುವ’ ಯಾವುದೇ ವೈಯಕ್ತಿಕ ಕಾರಣಕ್ಕಿಂತಲೂ ಹೆಚ್ಚಾಗಿ ಯೆರೂಸಲೇಮನ್ನು ಇಷ್ಟಪಡುತ್ತಿದ್ದ ನಂಬಿಗಸ್ತ ದೇಶಭ್ರಷ್ಟರಲ್ಲಿ ನೆಹೆಮೀಯನು ಒಬ್ಬನಾಗಿದ್ದನು. (ಕೀರ್ತ. 137:5, 6) ನೆಹೆಮೀಯನ ಮನಸ್ಸಿನಲ್ಲಿ ಪ್ರಥಮವಾಗಿದುದು ಸ್ಥಾನಮಾನ ಅಥವಾ ಪ್ರಾಪಂಚಿಕ ಐಶ್ವರ್ಯವಾಗಿರಲಿಲ್ಲ, ಬದಲಿಗೆ ಯೆಹೋವನ ಆರಾಧನೆಯ ಪುನಸ್ಸ್ಥಾಪನೆಯೇ ಆಗಿತ್ತು.
2 ಸಾ.ಶ.ಪೂ. 456ರಲ್ಲಿ, ಯೆರೂಸಲೇಮಿಗೆ ಹಿಂದೆರಳಿದ್ದ ಯೆಹೂದಿ ಜನಶೇಷವು ಏಳಿಗೆ ಹೊಂದುತ್ತಿರಲಿಲ್ಲ. ಅವರು ಶೋಚನೀಯ ಸ್ಥಿತಿಯಲ್ಲಿದ್ದರು. (ನೆಹೆ. 1:3) ಯೆರೂಸಲೇಮ್ ಪಟ್ಟಣದ ಗೋಡೆಯ ಅವಶೇಷಗಳು ಮಾತ್ರ ಇದ್ದವು ಮತ್ತು ಸದಾ ಉಪಸ್ಥಿತರಿರುತ್ತಿದ್ದ ವಿರೋಧಿಗಳ ದೃಷ್ಟಿಯಲ್ಲಿ ಈ ಜನರು ನಿಂದೆಗೊಳಗಾಗಿದ್ದರು. ಇದರಿಂದಾಗಿ ನೆಹೆಮೀಯನು ದುಃಖಿತನಾಗಿದ್ದನು. ಆದರೆ ಯೆರೂಸಲೇಮಿನ ಗೋಡೆಯ ವಿಷಯದಲ್ಲಿ ಏನನ್ನಾದರೂ ಮಾಡಲು ಅದು ಯೆಹೋವನ ಸಮಯವಾಗಿತ್ತು. ವೈರಿಗಳಿರಲಿ ಇಲ್ಲದಿರಲಿ, ಮೆಸ್ಸೀಯನ ಬರೋಣದ ಕುರಿತು ಯೆಹೋವನು ದಾನಿಯೇಲನಿಗೆ ಕೊಟ್ಟಿದ್ದ ಪ್ರವಾದನೆಯ ಸಂಬಂಧದಲ್ಲಿ, ಕಾಲಸೂಚಕ ಗುರುತಿನಂತೆ ಯೆರೂಸಲೇಮನ್ನು ಅದರ ರಕ್ಷಕ ಗೋಡೆಗಳೊಂದಿಗೆ ಕಟ್ಟಲೇಬೇಕಿತ್ತು. (ದಾನಿ. 9:24-27) ಇದಕ್ಕಾಗಿ ಯೆಹೋವನು ಘಟನೆಗಳನ್ನು ನಿರ್ದೇಶಿಸುತ್ತಾ, ನಂಬಿಗಸ್ತನೂ ಹುರುಪುಳ್ಳವನೂ ಆಗಿದ್ದ ನೆಹೆಮೀಯನನ್ನು ತನ್ನ ಚಿತ್ತವನ್ನು ಸಾಧಿಸಲಿಕ್ಕಾಗಿ ಉಪಯೋಗಿಸಿದನು.
3 ತನ್ನ ಹೆಸರಿನ ಈ ಪುಸ್ತಕದ ಲೇಖಕನು ನೆಹೆಮೀಯನೆಂಬುದರಲ್ಲಿ ಸಂದೇಹವಿಲ್ಲ. “ಹಕಲ್ಯನ ಮಗನಾದ ನೆಹೆಮೀಯನ ಮಾತುಗಳು” ಎಂಬ ಆರಂಭದ ಮಾತುಗಳು ಮತ್ತು ಈ ಬರಹದಲ್ಲಿ “ನಾನು,” “ನನಗೆ” ಎಂಬಂಥ ಉತ್ತಮ ಪುರುಷದ ಬಳಕೆಯು ಇದನ್ನು ಸ್ಪಷ್ಟವಾಗಿ ರುಜುಪಡಿಸುತ್ತದೆ. (ನೆಹೆ. 1:1) ಮೊದಲಲ್ಲಿ ಎಜ್ರ ಮತ್ತು ನೆಹೆಮೀಯನ ಪುಸ್ತಕಗಳು ಎಜ್ರ ಎಂದು ಕರೆಯಲ್ಪಡುತ್ತಿದ್ದ ಒಂದೇ ಪುಸ್ತಕವಾಗಿದ್ದವು. ಆದರೆ ತದನಂತರ ಯೆಹೂದ್ಯರು ಇದನ್ನು ಒಂದು ಮತ್ತು ಎರಡನೆಯ ಎಜ್ರ ಎಂದು ವಿಭಾಗಿಸಿದರು, ಮತ್ತು ಆ ತರುವಾಯ ಎರಡನೆಯ ಎಜ್ರ ಪುಸ್ತಕವು ನೆಹೆಮೀಯನ ಪುಸ್ತಕವೆಂದು ಜ್ಞಾತವಾಯಿತು. ಎಜ್ರನ ಪುಸ್ತಕದ ಕೊನೆಯಲ್ಲಿ ತಿಳಿಸಲ್ಪಟ್ಟಿರುವ ಘಟನೆಗಳು ಮತ್ತು ನೆಹೆಮೀಯ ಪುಸ್ತಕದ ಆರಂಭದಲ್ಲಿ ತಿಳಿಸಲ್ಪಟ್ಟಿರುವ ಘಟನೆಗಳ ಮಧ್ಯೆ ಸುಮಾರು 12 ವರ್ಷಗಳ ಅಂತರವಿದೆ. ನೆಹೆಮೀಯ ಪುಸ್ತಕದಲ್ಲಿರುವ ಇತಿಹಾಸವು ಸಾ.ಶ.ಪೂ. 456ರ ಅಂತ್ಯದಿಂದ ಸಾ.ಶ.ಪೂ. 443ರ ಬಳಿಕದ ಅವಧಿಯನ್ನು ಆವರಿಸುತ್ತದೆ.—1:1; 5:14; 13:6.
4 ನೆಹೆಮೀಯನ ಪುಸ್ತಕವು, ಅದು ಯಾವುದರೊಂದಿಗೆ ಯುಕ್ತವಾಗಿಯೇ ಸೇರಿಸಲ್ಪಟ್ಟಿದೆಯೊ ಆ ಪ್ರೇರಿತ ಶಾಸ್ತ್ರಗಳ ಮಿಕ್ಕ ಭಾಗದೊಂದಿಗೆ ಹೊಂದಿಕೆಯಲ್ಲಿದೆ. ಇದರಲ್ಲಿ ಅನೇಕಸಲ ಮೋಶೆಯ ಧರ್ಮಶಾಸ್ತ್ರಕ್ಕೆ ಪರೋಕ್ಷ ಪ್ರಸ್ತಾಪವನ್ನು ಮಾಡಲಾಗಿದೆ. ಉದಾಹರಣೆಗೆ ಅದು, ವಿದೇಶೀಯರೊಂದಿಗಿನ ವಿವಾಹ ಸಂಬಂಧಗಳು (ಧರ್ಮೋ. 7:3; ನೆಹೆ. 10:30), ಸಾಲಗಳು (ಯಾಜ. 25:35-38; ಧರ್ಮೋ. 15:7-11; ನೆಹೆ. 5:2-11), ಮತ್ತು ಪರ್ಣಶಾಲೆಗಳ ಜಾತ್ರೆಗಳಿಗೆ (ಧರ್ಮೋ. 31:10-13; ನೆಹೆ. 8:14-18) ಸೂಚಿಸುತ್ತದೆ. ಇದಲ್ಲದೆ ಈ ಪುಸ್ತಕವು, ಯೆರೂಸಲೇಮ್ ಪುನಃ ಕಟ್ಟಲ್ಪಡುವುದು, ಆದರೆ ಇದು “ಬಹು ಕಷ್ಟಕಾಲ”ದಲ್ಲಿ ಅಂದರೆ ವಿರೋಧದ ಎದುರಿನಲ್ಲಿ ನಡೆಯುವುದು ಎಂಬ ದಾನಿಯೇಲನ ಪ್ರವಾದನೆಯ ನೆರವೇರಿಕೆಯ ಆರಂಭವನ್ನು ಗುರುತಿಸುತ್ತದೆ.—ದಾನಿ. 9:25.
5 ಆದರೆ, ನಗರದ ಗೋಡೆಯ ಜೀರ್ಣೋದ್ಧಾರಕ್ಕಾಗಿ ನೆಹೆಮೀಯನು ಯೆರೂಸಲೇಮಿಗೆ ಪಯಣಿಸಿದ ವರುಷವಾದ ಸಾ.ಶ.ಪೂ. 455ರ ಕುರಿತೇನು? ಗ್ರೀಕ್, ಪರ್ಷಿಯನ್ ಮತ್ತು ಬಾಬಿಲೋನ್ಯ ಮೂಲಗಳ ಭರವಸಾರ್ಹ ಐತಿಹಾಸಿಕ ರುಜುವಾತುಗಳು, ಸಾ.ಶ.ಪೂ. 475 ಅರ್ತಷಸ್ತನು ಪಟ್ಟಕ್ಕೇರಿದ ವರುಷವಾಗಿತ್ತೆಂದೂ ಸಾ.ಶ.ಪೂ. 474 ಅವನ ಆಳಿಕೆಯ ಪ್ರಥಮ ವರುಷವಾಗಿತ್ತೆಂದೂ ಸೂಚಿಸುತ್ತವೆ.a ಹೀಗಿರುವಲ್ಲಿ, ಅವನ 20ನೆಯ ವರುಷದ ಆಳ್ವಿಕೆಯು ಸಾ.ಶ.ಪೂ. 455ರ ವರುಷವಾಗುತ್ತದೆ. ಆ ವರುಷದ ವಸಂತಕಾಲದಲ್ಲಿ, ಯೆಹೂದಿ ತಿಂಗಳಾದ ನೈಸಾನ್ನಲ್ಲಿ, ರಾಜನ ಪಾನಸೇವಕನಾಗಿದ್ದ ನೆಹೆಮೀಯನು ಯೆರೂಸಲೇಮನ್ನು, ಅದರ ಗೋಡೆಯನ್ನು ಮತ್ತು ಬಾಗಿಲುಗಳನ್ನು ಜೀರ್ಣೋದ್ಧಾರಮಾಡಲು ಹಾಗೂ ಪುನರ್ನಿರ್ಮಿಸಲು ಅರಸನ ಅಪ್ಪಣೆಯನ್ನು ಪಡೆದನೆಂದು ನೆಹೆಮೀಯ 2:1-8 ಸೂಚಿಸುತ್ತದೆ. “ಯೆರೂಸಲೇಮು ಜೀರ್ಣೋದ್ಧಾರವಾಗಿ ಕಟ್ಟಲ್ಪಡಲಿ ಎಂಬ ದೈವೋಕ್ತಿಯು ಹೊರಡುವಂದಿನಿಂದ ಅಭಿಷಿಕ್ತನಾದ ಪ್ರಭುವು ಬರುವದರೊಳಗೆ” 69 ವರುಷವಾರಗಳು ಅಥವಾ 483 ವರುಷಗಳು ಕಳೆಯುವವೆಂದು ದಾನಿಯೇಲನ ಪ್ರವಾದನೆ ಮುಂತಿಳಿಸಿತ್ತು. ಈ ಪ್ರವಾದನೆಯು ಸಾ.ಶ. 29ರಲ್ಲಿ ಯೇಸು ಅಭಿಷೇಕಿಸಲ್ಪಟ್ಟಾಗ ಗಮನಾರ್ಹವಾಗಿ ನೆರವೇರಿತು. ಈ ತಾರೀಖು ಐಹಿಕ ಇತಿಹಾಸ ಮತ್ತು ಬೈಬಲಿನ ಇತಿಹಾಸ ಇವೆರಡರೊಂದಿಗೂ ಹೊಂದಿಕೆಯಲ್ಲಿದೆ.b (ದಾನಿ. 9:24-27; ಲೂಕ 3:1-3, 23) ಹೌದು, ನೆಹೆಮೀಯನ ಮತ್ತು ಲೂಕನ ಪುಸ್ತಕಗಳು, ನಿಜ ಪ್ರವಾದನೆಯ ಕರ್ತೃವೂ ನೆರವೇರಿಸುವವನೂ ಯೆಹೋವ ದೇವರಾಗಿದ್ದಾನೆಂದು ತೋರಿಸುವುದರಲ್ಲಿ ದಾನಿಯೇಲನ ಪ್ರವಾದನೆಯೊಂದಿಗೆ ಗಮನಾರ್ಹವಾಗಿ ಜೊತೆಗೂಡುತ್ತವೆ! ನೆಹೆಮೀಯನ ಪುಸ್ತಕವು ಪ್ರೇರಿತ ಶಾಸ್ತ್ರಗಳ ಒಂದು ಭಾಗವೆಂಬುದು ನಿಶ್ಚಯ.
ಪ್ರಯೋಜನಕರವೇಕೆ?
16 ನೆಹೆಮೀಯನು ತೋರಿಸಿದ ದೇವಭಕ್ತಿಯು ಸತ್ಯಾರಾಧನೆಯನ್ನು ಪ್ರೀತಿಸುವ ಸಕಲರಿಗೆ ಸ್ಫೂರ್ತಿ ಕೊಡುವ ಸಂಗತಿಯಾಗಿರಬೇಕು. ಅವನು ಯೆಹೋವನ ಜನರ ಮಧ್ಯೆ ಒಬ್ಬ ದೀನ ಮೇಲ್ವಿಚಾರಕನಾಗಲು ತನ್ನ ಅನುಕೂಲಕರ ಸ್ಥಾನವನ್ನು ತ್ಯಜಿಸಿದನು. ತನಗೆ ಯಾವುದನ್ನು ತೆಗೆದುಕೊಳ್ಳುವ ಹಕ್ಕು ಇತ್ತೊ ಆ ಪ್ರಾಪಂಚಿಕ ಸಹಾಯವನ್ನು ಸಹ ಅವನು ಬೇಡವೆಂದು ಹೇಳಿ, ಪ್ರಾಪಂಚಿಕತೆಯು ಒಂದು ಉರ್ಲಾಗಿದೆಯೆಂದು ಮುಚ್ಚುಮರೆಯಿಲ್ಲದೆ ಖಂಡಿಸಿದನು. ಇಡೀ ಜನಾಂಗವು ಯೆಹೋವನ ಆರಾಧನೆಯನ್ನು ಹುರುಪಿನಿಂದ ಬೆನ್ನಟ್ಟಬೇಕು ಮತ್ತು ಸಂರಕ್ಷಿಸಬೇಕೆಂಬುದೇ ಅವನು ಸಮರ್ಥಿಸುತ್ತಿದ್ದ ವಿಷಯವಾಗಿತ್ತು. (5:14, 15; 13:10-13) ಪೂರ್ತಿಯಾಗಿ ನಿಸ್ವಾರ್ಥಪರನು, ವಿವೇಕಿಯು, ಕಾರ್ಯನಿಷ್ಠನು, ಅಪಾಯದ ಎದುರಿನಲ್ಲಿಯೂ ನೀತಿಗಾಗಿ ನಿರ್ಭೀತನಾಗಿರುವುದರಲ್ಲಿ ನೆಹೆಮೀಯನು ನಮಗೊಂದು ಸೊಗಸಾದ ಮಾದರಿ ಆಗಿದ್ದಾನೆ. (4:14, 19, 20; 6:3, 15) ಅವನಿಗೆ ದೇವರ ಕಡೆಗೆ ಯೋಗ್ಯವಾದ ಭಯವಿತ್ತು ಮತ್ತು ತನ್ನ ಜೊತೆಸೇವಕರ ನಂಬಿಕೆಯನ್ನು ವರ್ಧಿಸುವುದರಲ್ಲಿ ಅವನು ಆಸಕ್ತನಾಗಿದ್ದನು. (13:14; 8:9) ಅವನು ಯೆಹೋವನ ಧರ್ಮಶಾಸ್ತ್ರವನ್ನು ಹುರುಪಿನಿಂದ ಕಾರ್ಯರೂಪಕ್ಕೆ ಹಾಕಿದನು. ವಿಶೇಷವಾಗಿ, ಸತ್ಯಾರಾಧನೆಯ ಸಂಬಂಧದಲ್ಲಿ ಮತ್ತು ವಿಧರ್ಮಿಗಳೊಂದಿಗೆ ವಿವಾಹ ಮಾಡಿಕೊಳ್ಳುವಂತಹ ಅನ್ಯರ ಪ್ರಭಾವಗಳನ್ನು ತಿರಸ್ಕರಿಸುವ ಸಂಬಂಧದಲ್ಲಿ ಅವನು ಹೀಗೆ ಮಾಡಿದನು.—13:8, 23-29.
17 ಈ ಪುಸ್ತಕದಾದ್ಯಂತ, ನೆಹೆಮೀಯನಿಗೆ ಯೆಹೋವನ ಧರ್ಮಶಾಸ್ತ್ರದ ಕುರಿತು ಉತ್ತಮ ಜ್ಞಾನವಿತ್ತೆಂಬುದು ವ್ಯಕ್ತವಾಗುತ್ತದೆ ಮತ್ತು ಅವನು ಇದನ್ನು ಸದುಪಯೋಗಿಸಿದನು. ಧರ್ಮೋಪದೇಶಕಾಂಡ 30:1-4ರಲ್ಲಿರುವ ಯೆಹೋವನ ವಾಗ್ದಾನಕ್ಕನುಸಾರ ಅವನು ದೇವರ ಆಶೀರ್ವಾದಕ್ಕಾಗಿ ಮೊರೆಯಿಟ್ಟನು. ಯೆಹೋವನು ತನ್ನ ಪರವಾಗಿ ನಿಷ್ಠೆಯಿಂದ ವರ್ತಿಸುವನೆಂಬ ಪೂರ್ಣ ನಂಬಿಕೆ ಅವನಿಗಿತ್ತು. (ನೆಹೆ. 1:8, 9) ಮುಖ್ಯವಾಗಿ, ಹಿಂದೆ ಬರೆಯಲ್ಪಟ್ಟಿದ್ದ ಸಂಗತಿಗಳನ್ನು ಯೆಹೂದ್ಯರಿಗೆ ಪರಿಚಯಪಡಿಸಲಿಕ್ಕಾಗಿ ಅವನು ಅನೇಕ ಸಮ್ಮೇಳನಗಳನ್ನು ಏರ್ಪಡಿಸಿದನು. ನೆಹೆಮೀಯ ಹಾಗೂ ಎಜ್ರ ಧರ್ಮಶಾಸ್ತ್ರವನ್ನು ಓದಿಹೇಳುವಾಗ ಜನರು ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲಾಗುವಂತೆ ಮತ್ತು ತದನಂತರ ಅದನ್ನು ಅನ್ವಯಿಸಿಕೊಳ್ಳುವಂತೆ ಮಾಡಲೂ ಶ್ರದ್ಧೆವಹಿಸಿದರು.—8:8, 13-16; 13:1-3.
18 ನೆಹೆಮೀಯನು ಯೆಹೋವನ ಮೇಲೆ ಪೂರ್ತಿಯಾಗಿ ಹೊಂದಿಕೊಂಡದ್ದು ಮತ್ತು ಅವನ ದೈನ್ಯದ ಬೇಡಿಕೆಗಳು, ನಾವೂ ದೇವರ ಮೇಲೆ ಪ್ರಾರ್ಥನಾಪೂರ್ವಕವಾಗಿ ಹೊಂದಿಕೊಳ್ಳುವ ಅದೇ ರೀತಿಯ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಅವನು ಮಾಡಿದ ಪ್ರಾರ್ಥನೆಗಳು ದೇವರನ್ನು ಮಹಿಮೆಪಡಿಸಿದ ವಿಧ, ತನ್ನ ಜನರ ಪಾಪಗಳನ್ನು ಅವನು ಒಪ್ಪಿಕೊಂಡ ವಿಧ ಮತ್ತು ಯೆಹೋವನ ನಾಮವು ಪವಿತ್ರೀಕರಿಸಲ್ಪಡಬೇಕೆಂದು ಅವನು ಪ್ರಾರ್ಥಿಸಿದ ವಿಧವನ್ನು ಗಮನಿಸಿರಿ. (1:4-11; 4:14; 6:14; 13:14, 29, 31) ಈ ಹುರುಪಿನ ಮೇಲ್ವಿಚಾರಕನ ವಿವೇಕದ ಮಾರ್ಗದರ್ಶನವನ್ನು ಅನುಸರಿಸಲು ದೇವಜನರು ತೋರಿಸಿದ ಸಿದ್ಧಮನಸ್ಸು ಮತ್ತು ಅವನ ಜೊತೆಯಲ್ಲಿ ದೇವರ ಚಿತ್ತವನ್ನು ಮಾಡುವುದರಲ್ಲಿ ಅವರು ಪಡೆದುಕೊಂಡ ಸಂತೋಷದಿಂದ ಅವನು ಅವರ ಮಧ್ಯೆ ಬಲದ ಮೂಲನಾಗಿದ್ದನೆಂಬುದು ತೋರಿಬರುತ್ತದೆ. ಅವನು ಸ್ಫೂರ್ತಿ ನೀಡುವ ಮಾದರಿಯಾಗಿದ್ದನು ಎಂಬುದು ನಿಶ್ಚಯ! ಆದರೂ, ವಿವೇಕಿಯಾಗಿದ್ದ ಮೇಲ್ವಿಚಾರಕನು ಇಲ್ಲದೆ ಹೋದಾಗ ಪ್ರಾಪಂಚಿಕತೆ, ಭ್ರಷ್ಟಾಚಾರ ಮತ್ತು ಮುಚ್ಚುಮರೆಯಿಲ್ಲದ ಧರ್ಮಭ್ರಷ್ಟತೆ ಎಷ್ಟು ಬೇಗನೆ ಒಳಗೆ ನುಸುಳಿಬಂತು! ಆದಕಾರಣ, ಇಂದು ದೇವಜನರ ಮಧ್ಯದಲ್ಲಿರುವ ಎಲ್ಲ ಮೇಲ್ವಿಚಾರಕರು ತಮ್ಮ ಕ್ರೈಸ್ತ ಸಹೋದರರ ಅಭಿರುಚಿಗಳ ವಿಷಯದಲ್ಲಿ ಜಾಗೃತರು, ಎಚ್ಚರಿಕೆಯುಳ್ಳವರು, ಹುರುಪುಳ್ಳವರು ಆಗಿದ್ದು, ಸತ್ಯಾರಾಧನೆಯ ಮಾರ್ಗದಲ್ಲಿ ತಮ್ಮ ಸಹೋದರರನ್ನು ನಡೆಸುವ ವಿಷಯದಲ್ಲಿ ತಿಳಿವಳಿಕೆ ಉಳ್ಳವರೂ ಅಚಲರೂ ಆಗಿರಬೇಕೆಂಬುದನ್ನು ಇದು ಅವರಿಗೆ ಮನವರಿಕೆ ಮಾಡಿಸಬೇಕು.
19 ನೆಹೆಮೀಯನು ದೇವರ ವಾಕ್ಯದಲ್ಲಿ ತನಗಿದ್ದ ಬಲವಾದ ಭರವಸೆಯನ್ನು ತೋರಿಸಿದನು. ಅವನು ಶಾಸ್ತ್ರಗಳ ಹುರುಪಿನ ಬೋಧಕನಾಗಿದ್ದನು ಮಾತ್ರವಲ್ಲ, ದೇವರ ಪುನಸ್ಸ್ಥಾಪಿತ ಜನರ ಮಧ್ಯೆ ವಂಶಾವಳಿಗಳಿಗನುಸಾರ ಬಾಧ್ಯತೆಗಳನ್ನು ಹಾಗೂ ಯಾಜಕರ ಮತ್ತು ಲೇವಿಯರ ಸೇವೆಗಳೇನೆಂಬುದನ್ನು ಸ್ಥಾಪಿಸಲು ಸಹ ಶಾಸ್ತ್ರಗಳನ್ನು ಉಪಯೋಗಿಸಿದನು. (ನೆಹೆ. 1:8; 11:1–12:26; ಯೆಹೋ. 14:1–21:45) ಇದು ಯೆಹೂದಿ ಜನಶೇಷಕ್ಕೆ ಮಹತ್ತರವಾದ ಪ್ರೋತ್ಸಾಹನೆಯನ್ನು ಕೊಟ್ಟಿದ್ದಿರಬೇಕು. ಸ್ತ್ರೀಯ ಸಂತಾನದ ಕುರಿತು ಮತ್ತು ಅವನ ರಾಜ್ಯದಲ್ಲಿ ಆಗಲಿದ್ದ ಹೆಚ್ಚು ದೊಡ್ಡ ಪುನಸ್ಸ್ಥಾಪನೆಯ ಕುರಿತು ಈ ಹಿಂದೆ ಕೊಡಲ್ಪಟ್ಟಿದ್ದ ಭವ್ಯ ವಾಗ್ದಾನಗಳಲ್ಲಿ ಇದು ಅವರ ಭರವಸೆಯನ್ನು ಬಲಪಡಿಸಿತು. ದೇವರ ಸೇವಕರು ರಾಜ್ಯಾಭಿರುಚಿಗಳ ಪರವಾಗಿ ಹೋರಾಡಿ, ಭೂಮಿಯಲ್ಲೆಲ್ಲ ಸತ್ಯಾರಾಧನೆಯನ್ನು ವರ್ಧಿಸುವುದರಲ್ಲಿ ಕಾರ್ಯಮಗ್ನರಾಗಿರುವಂತೆ ಅವರನ್ನು ಹುರಿದುಂಬಿಸುವುದು ಈ ರಾಜ್ಯ ಪುನಸ್ಸ್ಥಾಪನೆಯ ನಿರೀಕ್ಷೆಯೇ ಆಗಿದೆ.
[ಪಾದಟಿಪ್ಪಣಿಗಳು]
a ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟಗಳು 613-16.
b ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ಸಂಪುಟ 2, ಪುಟಗಳು 899-901.